ಬರೆಯುತ್ತಿರುವ ಹಳೆಯ ದಿನಗಳ ಕಥೆಯಲ್ಲಿ ನಡೆದಿರುವ ಘಟನೆಗಳೆಲ್ಲ ನನ್ನ ಬಾಳಿನ ಅಂಗಗಳೇ ಆದರೂ ಆದಷ್ಟು ನಿರ್ಲಿಪ್ತನಾಗಿ ವಸ್ತು ಸ್ಥಿತಿಯನ್ನಷ್ಟೆ ಇಲ್ಲಿ ಬಿಡಿಸಿಡಲು ಯತ್ನಿಸಿದ್ದೇನೆ. ಬಹಳಷ್ಟು ಸಂಗತಿಗಳಲ್ಲಿ ನಾನು ಪಾತ್ರಧಾರಿಯಲ್ಲ. ಅವುಗಳನ್ನೆಲ್ಲ ಒಂದೋ ಮನೆಯ ಹಿರಿಯರಿಂದ-ಇಲ್ಲವೆ ಬಲ್ಲ ಆತ್ಮೀಯರಿಂದ ಕೇಳಿ ತಿಳಿದುಕೊಂಡದ್ದು. ಅಂತಹ ಸನ್ನಿವೇಶಗಳಲ್ಲಿ ಪ್ರತ್ಯಕ್ಷ ಪಾತ್ರವಾಗಿದ್ದವರು ಬದುಕಿದ್ದ ಪಕ್ಷದಲ್ಲಿ ಅವರನ್ನು ಪತ್ರ ಮುಖೇನ ಇಲ್ಲವೆ ದೂರವಾಣಿ ಮುಖೇನ ಸಂಪರ್ಕಿಸಿ ಸನ್ನಿವೇಶಗಳ ಸತ್ಯಾಸತ್ಯತೆಗಳನ್ನು ಖಚಿತ ಪಡಿಸಿಕೊಂಡೆ ಮುಂದುವರೆದಿದ್ದೇನೆ. ಹೀಗಾಗಿ ಇಲ್ಲಿ ನಾನು ನಿರ್ಮಮ ಲಿಪಿಕಾರ ಮಾತ್ರ. ಬರವಣಿಗೆ ಕೇವಲ ನಡೆದ ಘಟನೆಗಳ ಕೈಗನ್ನಡಿಯಾಗಿರಬೇಕು, ಯಾವುದೇ ಅತಿರಂಜಿತ ಸಂಯೋಜನೆಯಲ್ಲಿ ಸತ್ಯಕ್ಕೆ ಅಪಚಾರವಾಗಬಾರದು ಎಂಬ ಕಳಕಳಿ ಇದಕ್ಕೆ ಕಾರಣ.
ಖುದ್ದು ನಾನೇ ಪಾತ್ರವಾಗಿರುವ ಸಂಗತಿಗಳನ್ನೂ ಥಿಯೇಟರ್ ನಲ್ಲಿ ಕೂತು ಇನ್ಯಾರದೋ ಸಿನೆಮ ನೋಡುವ ಮೂಡಿನಲ್ಲಿ ವಿವರಿಸಿದ್ದೇನೆ. ನನ್ನ ಪಾತ್ರದ ಮೇಲೆ ವಿಶೇಷ ಮಮಕಾರ ನನ್ನಲ್ಲಿ ಹುಟ್ಟದ ಕಾರಣ ನಾನು ಈ ಲಹರಿಯ 'ನಾಯಕ'ನೂ ಅಲ್ಲ. ಒಬ್ಬ ಪುಟ್ಟ ಹುಡುಗನಾಗಿ ನಾ ಕಂಡು ಕೇಳಿದ ಸಂಗತಿಗಳನ್ನು ನಯವಾಗಿ ಹರವಿಡುವ ಪ್ರಯತ್ನ ಮಾತ್ರ ನನ್ನದು. ವಯಕ್ತಿಕವಾಗಿ ನನಗೆ ಘಾಸಿಯನ್ನುಂಟು ಮಾಡಿದ ಘಟನೆ-ನೋವನ್ನು ಉಂಟುಮಾಡಿದ ವ್ಯಕ್ತಿಗಳ ಕುರಿತು ಬರೆಯುವಾಗಲೂ ಆದಷ್ಟು ಸಂಯಮವನ್ನ ಬರವಣಿಗೆಯಲ್ಲಿ ಸಾಧಿಸಲು ಪ್ರಯತ್ನಿಸಿದ್ದೇನೆ. ಮೊದಮೊದಲು ಇದು ಸ್ವಲ್ಪ ಕಷ್ಟ ಎಂದೆನಿಸಿದರೂ ಕ್ರಮೇಣ ಇದೆ ರೂಢಿಯಾಗತೊಡಗಿದೆ. ಈ ನನ್ನ ಆತ್ಮಗತದಲ್ಲಿ ಮುಂಬರುವ ಯಾವುದೆ ಲೇಖನಗಳು ನನ್ನ ರಕ್ತ ಸಂಬಂಧಿಗಳಿಗೂ, ಸ್ನೇಹಿತರಿಗೊ, ಕುಲ ಬಾಂಧವರಿಗೂ ಜೀರ್ಣವಾಗದಿದ್ದರೆ ಅದವರ ಖಾಸಗಿ ಸಮಸ್ಯೆಯೆ ಹೊರತು ಪ್ರತಿಯೊಬ್ಬರಿಗೂ ಜಾಪಾಳ ಮಾತ್ರೆ ನುಂಗಿಸುವ ಕೆಲಸ ನನ್ನದಲ್ಲ. ಒಟ್ಟಿನಲ್ಲಿ ನಿರೀಕ್ಷಣಾ ಜಾಮೀನಿನಂತೆ ಹೇಳ ಬಯಸೋದು ಇಷ್ಟೆ ಕೇವಲ ಒಂದೆ ಕೈಯಲ್ಲಿ ಎಣಿಸಬಹುದಾದಷ್ಟು ಮಂದಿ ಮಾತ್ರ ನನ್ನ ಸ್ವಂತ ಭಾವಲೋಕದ ಬಂಧುಗಳು. ಅವರನ್ನು ಬಿಟ್ಟು ಇನ್ಯಾರ ಮೇಲೂ ನನಗೆ ರಾಗ-ದ್ವೇಷಗಳಿಲ್ಲ. ಈ ಹತ್ತಿರದವರ ಬಿಂಬಗಳೂ ಮುಸುಕಾಗದಂತೆ ಇಲ್ಲವರ ಚಿತ್ರಣ ನನ್ನ ಬರವಣಿಗೆಯಲ್ಲಿ ಬರುತ್ತದೆ. ಮನಸಿನ ಮೇಲಿದ್ದ ನೆನಪಿನ ಭಾರವನ್ನು ಅಕ್ಷರಗಳಲ್ಲಿ ಕೆಳಗಿರಿಸಿ 'ಉಸ್ಸಪ್ಪ'ಎಂದು ಸುಧಾರಿಸಿಕೊಳ್ಳುವ ಧಾವಂತ ಹೊಸತೆ ಒಂದು ರೀತಿಯ ನೆಮ್ಮದಿಯನ್ನ ನನಗೆ ದಯಪಾಲಿಸಿದೆ ಅನ್ನೂದು ಮಾತ್ರ ಹದಿನಾರಾಣೆ ಸತ್ಯ,
ನನ್ನಜ್ಜನ ಕಾಲಕ್ಕೆ ದಕ್ಷಿಣ ಕನ್ನಡ ( ಈಗಿನ ಉಡುಪಿ) ಜಿಲ್ಲೆಯಿಂದ ಘಟ್ಟಕ್ಕೆ ವಲಸೆ ಬಂದ ಕುಟುಂಬ ನಮ್ಮದು. ನನ್ನಜ್ಜ ನಾರಾಯಣ ಹೆಗಡೆಯದು ಒಂಚೂರು ಪುಕ್ಕಲು ಸ್ವಭಾವ. ನಾಲ್ಕುಜನ ಒಡಹುಟ್ಟಿದವರಲ್ಲಿ ಮೂರನೆಯವರಾದ ಅವರ ಹುಟ್ಟೂರು ಕಾರ್ಕಳ ತಾಲೂಕಿನ ಮುನಿಯಾಲು ಬಳಿಯಿರುವ ಗುಡ್ಡೆಮನೆ. ಮನೆಯ ಯಜಮಾನನಾಗಿದ್ದ ಹಿರಿಯಣ್ಣ ಹಾವು ಕಚ್ಚಿ ಸತ್ತ ನಂತರ ಮನೆಯ ಆಡಳಿತ ಅಕ್ಕ ಚನ್ನಕ್ಕನ ಪಾಲಾಯಿತು. ಅವರ ದಬ್ಬಾಳಿಕೆಯ ಹಾಗು ನಯವಿಲ್ಲದ ಒರಟು ನಡವಳಿಕೆಯನ್ನ ಮುಲಾಜಿಲ್ಲದೆ ಧಿಕ್ಕರಿಸಿ ಅಜ್ಜನ ತಮ್ಮ ನಾಗಪ್ಪ ಹೆಗಡೆ ತನ್ನ ವಯಸ್ಸಿನ್ನೂ ಎರಡಂಕಿ ಮೀರುವ ಮೊದಲೆ ಘಟ್ಟ ಹತ್ತಿ ಕೊಪ್ಪಕ್ಕೆ ಬಂದು ಸೇರಿದರು. ಆ ಕಾಲದಲ್ಲಿ ಜನಪ್ರಿಯರಾಗಿದ್ದ ಕೊಪ್ಪದ ದ್ಯಾವೆಗೌಡರ ಮನೆಯಲ್ಲಿ ದೀಪದ ಗಾಜು ಒರೆಸುವ (ಆಗ ವಿದ್ಯುತ್ ಸಂಪರ್ಕ ಕೊಪ್ಪದಲ್ಲಿ ಇರಲಿಲ್ಲ, ಹೀಗಾಗಿ ಬಡವರಿಂದ ಸಿರಿವಂತರವರೆಗೂ ದೀಪವೆ ಬೆಳಕಿಗೆ ಮೂಲವಾಗಿತ್ತು) ಕಾಯಕದೊಂದಿಗೆ ಅಲ್ಲಿ ಅವರ ದುಡಿಮೆ ಆರಂಭ ವಾಯ್ತು.ಹೀಗೆ ಧೈರ್ಯವಾಗಿ ಮನೆಬಿಟ್ಟು ಹೋಗಿದ್ದ ತಮ್ಮನ ಮೇಲ್ಪಂಕ್ತಿ ಅನುಸರಿಸಿ ನನ್ನಜ್ಜನೂ ಎರಡು ವರ್ಷಗಳ ನಂತರ ಘಟ್ಟ ಹಟ್ಟಿ ತೀರ್ಥಹಳ್ಳಿ ಮುಟ್ಟಿ ಮೇಳಿಗೆಯ ಐತಾಳರ ಮನೆಯಲ್ಲಿ ಅಡುಗೆ ಸಹಾಯಕರಾಗಿ ನೆಲೆಕಂಡರು.
ಅನಂತರದ ಕೆಲವು ದಿನಗಳಲ್ಲಿ ಅಜ್ಜನ ತಮ್ಮ ನಾಗಪ್ಪನ ಜೊತೆಗೆ ತೀರ್ಥಹಳ್ಳಿಯ ಕೊಪ್ಪ ರಸ್ತೆಯಲ್ಲಿರುವ ತಿಪ್ಪ ಜೋಯಿಸರ ಮನೆಯ ಅಡುಗೆ ಆಳಾಗಿ ಸ್ವಾತಂತ್ರ್ಯ ದುಡಿಮೆ ಶುರುಮಾಡಿಕೊಂಡರು. ಅಜ್ಜನ ಆಗಿನ ಮೊದಲ ಸಂಬಳ ನಲವತ್ತು ರೂಪಾಯಿಗಳು. ಕ್ರಮೇಣ ಮನೆಯವರ ನಂಬಿಕೆ ಗಿಟ್ಟಿಸಿ ಕೆಲಸ ಗಟ್ಟಿಯಾದ ಮೇಲೆ ಮನೆಯ ಅಡುಗೆಯವನಾಗಿ ಬಡ್ತಿಯೂ ಸಿಕ್ಕಿತು. ಅದೆ ವೇಳೆ ತಿಪ್ಪ ಜೋಯಿಸರ ಸಂಬಂಧಿಯಾದ ಶೀರ್ನಾಳಿಯ ಐತಾಳರು ತಾಲೂಕಿಗೆ ಮೊದಲ ಕಾರು ಕೊಂಡರು. ಟರ್ಪಾಲ್ ಹೊದೆಸಿದ ಹಡಗಿನಂತ ಫೋರ್ಡ್ ಕಾರಿನ ಜೊತೆ ಅದನ್ನು ನಡೆಸಲೊಬ್ಬ ಗಡ್ಡದ ಸಾಬಿ ಬೇರೆ! ಕೆಲ ಕಾಲ ಅಲ್ಲಿದ್ದು ಡ್ರೈವಿಂಗ್ ಎಂಬ ಆ ಕಾಲದ ವಿಶೇಷ ವಿದ್ಯೆಯನ್ನು ಸ್ಥಳೀಯರೊಬ್ಬರಿಗೆ ಕಲಿಸಿ ಆತ ಅಲ್ಲಿಂದ ಹೊರಡುವ ಕರಾರಾಗಿತ್ತು. ಸೂಕ್ತ ಅಭ್ಯರ್ಥಿಯ ತಲಾಶಿನಲ್ಲಿದ್ದ ಐತಾಳರ ಕಣ್ಣಿಗೆ ಜೋಯಿಸರ ಮನೆಯಲ್ಲಿದ್ದ ನಾರಾಯಣ ಬಿದ್ದ.ಅದೂವರೆಗೂ ಸವಟು ಹಿಡಿದಿದ್ದ ಕೈಗೆ ಹೀಗೆ ಚಕ್ರ ಬಂತು ಹಾಗು ಅದೆ ಮುಂದೆ ಖಾಯಂ ಕೂಡ ಆಯ್ತು.
ನೆಟ್ಟಗೆ ರಸ್ತೆಗಳೇ ಇದ್ದಿರದಿದ್ದ ಮಲೆನಾಡಿನ ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಮೊತ್ತ ಮೊದಲಿಗೆ ಆರು ಚಕ್ರದ ಬಸ್'ಗಳನ್ನ ಓಡಿಸಿದ ಹಿರಿಮೆ ಕೊಪ್ಪದ 'ಶಂಕರ್ ಮೋಟರ್ ಸರ್ವಿಸ್' ಕಂಪನಿಯದು. ಓಂ ಪುರಿಯ ಕೆನ್ನೆಗೆ ಸವಾಲೊಡ್ಡುವಂತಿದ್ದ, ಟಾರ್ ಎಂಬ ಅತ್ಯಮೂಲ್ಯ ವಸ್ತುವಿನ ಬಗ್ಗೆ ಕೇಳಿಯೂ ಅರಿತಿರದ ಹಳ್ಳಿಯ ರಸ್ತೆಗಳಲ್ಲಿ ಈಗಿನಷ್ಟು ಖಾಸಗಿ ವಾಹನಗಳಿಲ್ಲದ ಒಂದು ಕಾಲದಲ್ಲಿ ದರ್ಬಾರು ನಡೆಸಿದ್ದ ಬಸ್ಸುಗಳದ್ದೆ ಒಂದು ರೋಚಕ ಇತಿಹಾಸ. ಟಾರು ಎಂಬ ಆಧುನಿಕ ಕ್ರಾಂತಿ ಮಲೆನಾಡನ್ನು ಮುಟ್ಟಿದ್ದು ಎಪ್ಪತ್ತರ ದಶಕದ ಮಧ್ಯಭಾಗದಲ್ಲಿ, ಅದಕ್ಕೂ ಮೊದಲು ತಾಲೂಕು ಕೇಂದ್ರಗಳ ಮುಖ್ಯರಸ್ತೆಗಳಿಗಷ್ಟೇ ಟಾರು ಕಾಣುವ ಭಾಗ್ಯವಿರುತ್ತಿತ್ತು, ಕೊಪ್ಪದಲ್ಲಿ ಪೇಟೆಯೊಳಗೆ ಲೋಕಸೇವಾನಿರತ ದ್ಯಾವೇಗೌಡರು ಅರವತ್ತರ ದಶಕದಲ್ಲೆ ಮಜಭೂತು ಕಾಂಕ್ರೀಟ್ ಮಾರ್ಗ ಮಾಡಿಸಿದ್ದರು. ಇಂದಿಗೂ ಕೊಪ್ಪದಲ್ಲಿ ಅದು ಗಟ್ಟಿಮುಟ್ಟಾಗಿರುವುದನ್ನು ಕಾಣಬಹುದು. ಉಳಿದಂತೆ ಮಣ್ಣು ಮಾರ್ಗಗಳೇ ಎಲ್ಲೆಲ್ಲೂ ಆವರಿಸಿದ್ದವು. ವರ್ಷದ ಎಂಟು ತಿಂಗಳು ಎಡೆಬಿಡದೆ ಸುರಿಯುತ್ತಿದ್ದ ಜಡಿ ಮಳೆಗೆ ಇಲ್ಲಿ ಕೆಸರಿನ ನಿರಂತರ ಸಿಂಚನವಾಗುತ್ತಿತ್ತು. ಇನ್ನುಳಿದ ನಾಲ್ಕು ತಿಂಗಳು ಹಿಟ್ಟಿನಂತೆ ಏಳುತ್ತಿದ್ದ ಧೂಳಿನಲ್ಲಿ ರಸ್ತೆಯ ಇಕ್ಕೆಲದ ಮರಗಳ ಜೊತೆ ತಾವೂ ಮಿಂದು ಪವಿತ್ರರಾಗುವ ಅವಕಾಶ ಬಸ್ ಪ್ರಯಾಣಿಕರದ್ದು. ಬಸ್ ಹೊರಟಲ್ಲಿಂದ ಬಂದು ಮುಟ್ಟುವ ಊರಿನಲ್ಲಿ ಇಳಿಯುವಾಗ ಥೇಟ್ ಕಂಚಿನ ಪ್ರತಿಮೆಗಳಂತೆ ಎಲ್ಲರೂ ಕಂಗೊಳಿಸುತ್ತಿದ್ದರು. ಒಂದು ಕಾಲದಲ್ಲಿ ಸ್ವಚ್ಚವೆ ಆಗಿದ್ದಿರಬಹುದಾದ ಅವರ ವಸ್ತ್ರಗಳು ಬಿಳಿ ಬಣ್ಣದವು ಎಂದು ಆಣೆ-ಪ್ರಮಾಣ ಮಾಡಿ ಹೇಳಿದರೂ ನಂಬಲಾರದ ಮಟ್ಟಿಗೆ ಅವುಗಳ ಮೂಲ ಬಣ್ಣ ಮರೆಯಾಗಿರುತ್ತಿತ್ತು.
ಶಿವಮೊಗ್ಗದಿಂದ ತೀರ್ಥಹಳ್ಳಿ ನಡುವಿನ ೬೦ ಕಿಲೋಮೀಟರ್ ಪ್ರಯಾಣಕ್ಕೆ ಕನಿಷ್ಠ ಎರಡೂವರೆಯಿಂದ ಮೂರು ಘಂಟೆಗಳ ಪ್ರಯಾಣವಧಿ ತಗಲುತ್ತಿತ್ತು. ಇನ್ನು ಅದೇ ಮಾರ್ಗವಾಗಿ ಮಂಗಳೂರಿಗೆ ತಲುಪುವ ಕಾರ್ಯವಂತೂ ವಿಪರೀತ ಸಾಹಸದ್ದು. ಎಪ್ಪತ್ತರ ದಶಕದ ಕೊನೆಯವರೆಗೂ 'ದೇವಂಗಿ ಮೋಟರ್ ಸರ್ವಿಸ್' ಅಥವಾ 'ಮೇಗರವಳ್ಳಿ ಮೋಟರ್ ಸರ್ವಿಸ್'ಬಸ್ಸುಗಳ ಮೂಲಕ ಆಗುಂಬೆ ಸೇರಿ ಅಲ್ಲಿಂದ ಸುಮಾರು ಕಾದ ನಂತರ ಉಬ್ಬು ಮೂತಿಯ ಟ್ಯಾಕ್ಸಿಗಳಲ್ಲಿ ಕೂತು ಸೋಮೇಶ್ವರ ಮುಟ್ಟಿ ಮತ್ತೆ ಅಲ್ಲಿ ಹೆಣ ಕಾದಂತೆ ಕಾದು ಸಿಪಿಸಿ ಬಸ್ಸಿನಲ್ಲಿ ಮಂಗಳೂರಿಗೆ ಹೋಗಬೇಕಾಗುತ್ತಿತ್ತು. ಸಮಯದ ಖಾತ್ರಿ ಯಾರಿಗೂ ಇರುತ್ತಲೇ ಇರಲಿಲ್ಲ! ಇನ್ನು ದಿನಕ್ಕೆ ಒಂದೇ ಬಾರಿ ಆಗುಂಬೆಗೆ ಬಂದು ಹೋಗುವ ಈ ಎರಡೂ ಬಸ್ಸುಗಳು ಮಾರ್ಗ ಮಧ್ಯೆ ಕೆಟ್ಟು-ಪಂಚರ್ ಆಗಿ ನಿಂತರಂತೂ ಪ್ರಯಾಣಿಕರು ಕಣ್ ಕಣ್ ಬಿಡುವುದನ್ನು ಬಿಟ್ಟು ಇನ್ನೇನನ್ನೂ ಮಾಡಲಾಗುತ್ತಿರಲಿಲ್ಲ. ಎಪ್ಪತ್ತರ ದಶಕಾಂತ್ಯದಲ್ಲಿ ನಟ ಸುದೀಪರ ತಂದೆ ಸಂಜೀವ್ ಮಾಲಕತ್ವದ 'ಸ್ವಸ್ತಿಕ್' ಮಿನಿ ಬಸ್ಸಿನ ಶಿವಮೊಗ್ಗ-ಮಂಗಳೂರು ನಡುವಿನ ನೇರ ಪ್ರಯಾಣ ಆರಂಭಗೊಂಡಾಗಲೆ ಈ ತಲೆನೋವು ಸ್ವಲ್ಪ ತಗ್ಗಿದ್ದು. ಇದಕ್ಕೂ ಮೊದಲು ನೇರ ಪ್ರಯಾಣದ ಸುಖ ಬಯಸುವವರು ಹರಿಹರದಿಂದ ತೀರ್ಥಹಳ್ಳಿ ಕುಂದಾಪುರ ಮಾರ್ಗವಾಗಿ ಹೋಗುತ್ತಿದ್ದ 'ಜಗದೀಶ್ವರ'ದಲ್ಲಿ ಹೋಗ ಬೇಕಾಗುತ್ತಿತ್ತು. ತುಂಬಾ ಸುತ್ತು ಬಳಸಿನ ಹಾದಿ ಅದಾಗಿದ್ದರಿಂದ ಬಹುತೇಕ ಯಾರೂ ಅದರತ್ತ ಆಸಕ್ತಿ ವಹಿಸುತ್ತಿರಲಿಲ್ಲ.
ಮಲೆನಾಡು ಮೊದಲ ಬಸ್ ಭಾಗ್ಯ ಕಂಡಿದ್ದೆ ಐವತ್ತರ ದಶಕದಲ್ಲಿ.ಆರಂಭದಲ್ಲಿ ಇದ್ದವು ಕಲ್ಲಿದ್ದಲು ಇಂಧನದ ಉಗಿಚಾಲಿತ ಬಸ್ ಗಳು. ಬಸ್ ಹಿಂಭಾಗದ ಹೊರ ಮೈಯಲ್ಲಿ ನೀರಿನ ಬಾಯ್ಲರ್ ಹಾಗು ಕಲ್ಲಿದ್ದಲಿನ ಒಲೆ ಹಾಗು ಚಕ್ರಾಕಾರದ ತಿದಿ ಇರುತ್ತಿದ್ದ, ಹನುಮಂತನ ಮುಸುಡಿಯಂತೆ ಉಬ್ಬಿದ ಮುಂಭಾಗಕ್ಕಷ್ಟೇ ಬಣ್ಣ ಮೆತ್ತಿರುತ್ತಿದ್ದ, ನಿರಾಭರಣ ಸುಂದರಿಯಂತಹ ಬಸ್ಸನ್ನ ಕಲ್ಪಿಸಿಕೊಳ್ಳಿ. ಎರಡೂ ಪಕ್ಕ ತೆರೆದ ಕಿಟಕಿಗಳಿದ್ದು ಅದರ ಮೇಲ್ಭಾಗ ಮಳೆ ಬಂದರೆ ಇರಲಿ ಎಂಬಂತೆ ಉದ್ದನುದ್ದ ಟರ್ಪಾಲ್ ಬಿಗಿದಿರುತ್ತಿದ್ದರು. ಮುಂಭಾಗದ ತಲೆ ಮೇಲೆ ಕಿರೀಟದಂತೆ ಬಸ್ ಪ್ರವರ ಬರೆದ ಫಲಕ-ಡ್ರೈವರ್ ಬಾಗಿಲಿನ ಮೇಲೆ ದೊಡ್ಡ ಒತ್ತು ಹಾರನ್ ಇವಿಷ್ಟು ಬಿಟ್ಟರೆ ಇನ್ನೇನೂ ವಿಶೇಷ ಅಲಂಕಾರ ಆ ವಾಹನಗಳಿಗೆ ಇರುತ್ತಿರಲಿಲ್ಲ. ಹಿಂಬದಿಯ ಬಾಯ್ಲರ್'ನಲ್ಲಿ ಸಾಕಷ್ಟು ನೀರಿರುವುದನ್ನು ಖಚಿತ ಪಡಿಸಿಕೊಂಡ ಕ್ಲೀನರ್ ಬೇಕಾದಷ್ಟು ಕಲ್ಲಿದ್ದಲು ಸುರಿದು ತಿದಿ ಒತ್ತಿದನೆಂದರೆ ಬಸ್ ಎರಡೂ ಬದಿಗಳೊಳಗೆ ಅಂತರ್ಗತವಾಗಿರುತ್ತಿದ್ದ ಸಿಲೆಂಡರ್ ಗಳಲ್ಲಿ ಉಗಿ ತುಂಬಿಕೊಂಡು ಪ್ರಯಾಣಕ್ಕೆ ಬಸ್ ಸಿದ್ಧವಾದಂತೆ.
ಗಾತ್ರ ಹಾಗು ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಅನುಸರಿಸಿ ಎರಡು ಅಥವಾ ಮೂರು ಸಿಲೆಂಡರ್ ಬಸ್ಸುಗಳು ಚಾಲ್ತಿಯಲ್ಲಿದ್ದವು. ಅರ್ಧ ದಾರಿಯಲ್ಲೋ, ಉಬ್ಬು ರಸ್ತೆಯಲ್ಲೋ ಉಗಿಯ ಒತ್ತಡ ಸಾಲದೆ ಬಸ್ ನಿಂತರೆ ಚಾಲಕನೊ, ಇಲ್ಲವೆ ಕ್ಲೀನರೋ ಕೆಳಗಿಳಿದು ಮತ್ತೆ ಕಲ್ಲಿದ್ದಲು ಸುರಿದು ತಿದಿ ಒತ್ತಿ ಉಗಿ ಹೆಚ್ಚಿಸಿದಾಗಲೆ ಬಸ್ಸಿಗೆ ಮರಳಿ ಜೀವ ಬರುತ್ತಿದ್ದುದು. ಅಲ್ಲಿಯವರೆಗಿನ ವಿರಾಮದಲ್ಲಿ ನಡೆಯುತ್ತಿದ್ದ ಈ ಪ್ರಹಸನದ ಬಗ್ಗೆ ಚೂರೂ ತಲೆ ಕೆಡಿಸಿ ಕೊಳ್ಳದ ಪ್ರಯಾಣಿಕ ಮಹಾಶಯರು ಆರಾಮವಾಗಿ ಕೆಳಗಿಳಿದು ಕೆಮ್ಮಿ ಕ್ಯಾಕರಿಸಿ-ಉಚ್ಚೆ ಹೊಯ್ದು, ಎಲೆ-ಅಡಿಕೆ ಹಾಕಿ, ಮೋಟು ಬೀಡಿ-ನಶ್ಯ ಸೇದಿ, ಊರ ರಾಜಕೀಯ-ಮನೆಯ ಕಷ್ಟ ಸುಖ ಮಾತಾಡಿ ಮುಂದಿನ ಪ್ರಯಾಣಕ್ಕೆ ಮಾನಸಿಕವಾಗಿ ಆಕಳಿಸುತ್ತಾ ಸಿದ್ಧರಾಗುತ್ತಿದ್ದರು. ಹಳೆ ಸಿನೆಮಾಗಳ ಸ್ಲೋಮೊಶನ್ ದೃಶ್ಯಾವಳಿಗಳಂತಹ ಈ ಪ್ರಹಸನಗಳು ಆಗಾಗ ಮಲೆನಾಡಿನ ಉದ್ದಗಲಕ್ಕೂ ಕಾಣಲು ಸಿಗುತ್ತಿದ್ದವು.
ಇಂತಹ ಸಂಧಿಕಾಲದಲ್ಲಿಯೇ ನಾರಾಯಣ ಡ್ರೈವಿಂಗ್ ಕಲಿತದ್ದು. ಬಂಗಾಳಿ ಸಾಬಿ ಗುರುಗಳ ನಮ್ರ ಶಿಷ್ಯನಾಗಿದ್ದು. ಚಾಲನ ವಿದ್ಯೆ ಕಲಿತ ನಾರಾಯಣ ಮೊದಲಿಗೆ ಟರ್ಪಾಲ್ ಹೊದೆಸಿದ ಫೋರ್ಡ್ ಕಾರಿನ ಚಾಲಕನಾಗಿದ್ದ. ಮುಂದೆ ಐತಾಳರು ಆ ಕಾಲದ ಅತ್ಯಾಧುನಿಕ ಅಂಬಾಸಿಡರ್ ಕೊಂಡಾಗ ಅದನ್ನು ತರಲು ಕಲ್ಕತ್ತಕ್ಕೂ ಹೋಗಿ ಬಂದ (ಆಗೆಲ್ಲ ಅಂಬಾಸಿಡರ್ ಕಲ್ಕತ್ತದಲ್ಲೇ ತಯಾರಾಗಿ ಬಿಕರಿಯಾಗುತ್ತಿತ್ತು). ಅಷ್ಟರಲ್ಲಿ ಕೊಪ್ಪದಲ್ಲಿ 'ಶಂಕರ್ ಕಂಪೆನಿ' ಯಶಸ್ವಿಯಾಗಿತ್ತು ( ದಕ್ಷಿಣ ಕನ್ನಡದಲ್ಲಿ ಅದರದ್ದೇ ಅಂಗ ಸಂಸ್ಥೆ 'ಶಂಕರ್ ವಿಟ್ಠಲ' ಅದೂವರೆಗೂ ಏಕಸಾಮ್ಯ ಮೆರೆಯುತ್ತಿದ್ದ ಸಿಪಿಸಿಯ ಮಗ್ಗುಲು ಮುರಿಯುತ್ತಿತ್ತು). ಈ ಯಶಸ್ಸಿನಿಂದ ಪ್ರೇರಿತರಾದ ಶಿವಮೊಗ್ಗದ ಸಿರಿವಂತರು ಹುಟ್ಟು ಹಾಕಿದ್ದೆ 'ನ್ಯೂ ಕಂಬೈಂಡ್ ಬುಕ್ಕಿಂಗ್ ಏಜನ್ಸಿ'.
No comments:
Post a Comment