ದಕ್ಷಿಣದಲ್ಲಿ ಕಡಲ ತಡಿಯ ನಾಡುಗಳಲ್ಲಿ ಇಸ್ಲಾಂ ವ್ಯಾಣಿಜ್ಯದ ಕಾರಣಗಳ ಮೂಲಕ ಕ್ರಿಸ್ತಶಕ 646ರಲ್ಲಿ ದೇಶದೊಳಗೆ ತನ್ನ ಮೊದಲ ಹೆಜ್ಜೆಯೂರುತ್ತಿದ್ದಾಗ ಭಾರತ ಉಪಖಂಡದಲ್ಲಿದ್ದ ರಾಜಕೀಯ ಪರಿಸ್ಥಿತಿಯನ್ನ ನಾವು ಅರಿತುಕೊಳ್ಳಬೇಕು. ಕೇರಳದ ಚೇರರು ಸ್ವತಂತ್ರರಾಗಿ ಮೆರೆಯುತ್ತಿದ್ದ ಕಾಲವದು. ಇಂದಿನ ತಮಿಳುನಾಡಿನ ಬಹುಪಾಲು ಕಂಚಿಯಿಂದ ಆಳುತ್ತಿದ್ದ ಪಲ್ಲವರ ಅಧೀನದಲ್ಲಿತ್ತು. ಕೊಂಗನಾಡಿನ ಕೆಲಭಾಗಗಳೂ ಸೇರಿ ದಕ್ಷಿಣ ತಮಿಳುನಾಡು ತಂಜಾವೂರು ಕೇಂದ್ರಿತ ಚೋಳರ ಆಳ್ವಿಕೆಯಲ್ಲಿತ್ತು. ಚೋಳರು ಪಲ್ಲವರ ಸಾಮಂತರಾಗಿದ್ದರು. ಇನ್ನುಳಿದಂತೆ ಪೂರ್ವದ ಕರಾವಳಿಗಳೂ ಸೇರಿದಂತೆ ದಕ್ಷಿಣ ಹಾಗೂ ಪಶ್ಚಿಮ ಭಾರತದ ಬಹುಪಾಲು ಬಾದಾಮಿಯ ಚಾಲುಕ್ಯರ ಸಾಮ್ರಾಜ್ಯದಲ್ಲಿ ಸೇರಿಹೋಗಿದ್ದವು. ದೇಶದ ಉತ್ತರದ ಭೂಭಾಗ ಕನೋಜಿನ ಬೌದ್ಧ ದೊರೆ ಹರ್ಷ ಚಕ್ರವರ್ತಿಯ ಅಧೀನದಲ್ಲಿದ್ದು ಅವನ ಆಳ್ವಿಕೆಯ ಪ್ರತಿಹಾರ ಗುರ್ಜರ ಸಂಸ್ಥಾನ ತನ್ನ ಕೊನೆಗಾಲದ ಅಂಚಿಗೆ ಬಂದು ಮುಟ್ಟುವ ಸ್ಥಿತಿಯಲ್ಲಿತ್ತು. ಸಾಮ್ರಾಟರೆನಿಸಿದ್ದ ಗುರ್ಜರ- ಚಾಲುಕ್ಯ- ಪ್ರತಿಹಾರ- ಪಲ್ಲವರನ್ನ ಧಿಕ್ಕರಿಸಿ ಚೋಳ- ಪಾಂಡ್ಯ- ಚೇರ- ಕದಂಬ ಮುಂತಾದ ಮನೆತನಗಳು ಒಂದೊ ಹೊಸತಾಗಿ ಸಾಮ್ರಾಜ್ಯ ಕಟ್ಟಲು, ಇಲ್ಲವೆ ಅಧೀನ ಸಾಮ್ರಾಟರಿಂದ ಸ್ವತಂತ್ರ ಘೋಷಿಸಿಕೊಳ್ಳಲು ತುದಿಗಾಲ ಮೇಲೆ ನಿಂತಿದ್ದರು.
ಆರ್ಥಿಕವಾಗಿ ನೋಡುವಾಗ ಆ ದೃಷ್ಟಿಯಿಂದ ಭಾರತ ಭೂಮಿ ಸಮೃದ್ಧವಾಗಿತ್ತು ಹಾಗೂ ಇಲ್ಲಿನ ವಣಿಕ ಸಾರ್ಥಗಳು (ಕ್ಯಾರವಾನ್) ದಕ್ಷಿಣದ ಕಂಚಿಯಿಂದ ವಾಯುವ್ಯದ ಸಮರಖಂಡದವರೆಗೂ (ಇಂದಿನ ಉಜ್ಬೇಕಿಸ್ತಾನ), ನೈರುತ್ಯದ ಮುಸ್ಸೇರಿ ಪಟ್ಟಣದಿಂದ ಗಂಗಾ ಬಯಲು ದಾಟಿ ಈಶಾನ್ಯದ ಬ್ರಮ್ಮದೇಶದವರೆಗೂ ಸೊತ್ತು ಸರಂಜಾಮುಗಳನ್ನ ಹೊತ್ತು ಬಿಕರಿ ಮಾಡುತ್ತಿದ್ದವು. ಸಾಲದ್ದಕ್ಕೆ ಸಮುದ್ರ ಮಾರ್ಗಗಳ ಮೂಲಕ ಆಗ್ನೇಯ ದೇಶಗಳಿಗೂ ಹೋಗುವ ಸಾರ್ಥಗಳೂ ಅಸ್ತಿತ್ವದಲ್ಲಿದ್ದವು. ಆದರೆ ಪಶ್ಚಿಮ ಕರಾವಳಿಯಿಂದ ಯಾವುದೆ ಸರಕುಗಳನ್ನ ನೇರವಾಗಿ ಹೊತ್ತೊಯ್ದು ಮಾರಲು ಅರಬ್ಬಿಗಳ ಆಕ್ಷೇಪ ಜಾರಿಯಲ್ಲಿತ್ತು. ಆಗಷ್ಟೆ ಕಣ್ತೆರೆದಿದ್ದ ಇಸ್ಲಾಮಿಗೆ ಧರ್ಮಾಂತರವಾಗಿದ್ದ ಅರಬ್ ಜಗತ್ತಿನ ವಣಿಕರು ಭಾರತೀಯ ವಾಣಿಜ್ಯಿಕ ಸಿರಿಯ ಮೇಲೆ ಕಣ್ಣಿಡಲಾರಂಭಿಸಿದ್ದರು. ಅರಬ್ ಜಗತ್ತಿನಲ್ಲಿ ಸಿರಿಯಾದ ದಮಸ್ಕಾಸ್, ಇರಾಕಿನ ಬಾಗ್ದಾದ್, ಪರ್ಷಿಯಾದ ತೆಹರಾನ್ ರಾಜಧಾನಿಗಳಾಗಿ ಮೆರೆಯುತ್ತಿದ್ದವು. ಆದರೂ ಯಾರಿಂದಲೂ ಆಳಿಸಿಕೊಳ್ಳಲು ಇಚ್ಚಿಸದ ಹಲವಾರು ಬುಡಕಟ್ಟುಗಳು ತಮ್ಮ ತಮ್ಮೊಳಗೆ ಮರುಳುಗಾಡಿನ ರೀತಿ ರಿವಾಜುಗಳನ್ನ ಮುಂದುವರೆಸುತ್ತಾ ತಮಗೆ ತೋಚಿದ ಹಾಗೆ ಕಾನೂನು ಕಟ್ಟಳೆಗಳನ್ನು ತಮ್ಮ ಸಮಾಜದೊಳಗೆ ರೂಪಿಸಿಕೊಂಡಿದ್ದವು. ಆದರೆ ಇವೆಲ್ಲದಕ್ಕೂ ಇಸ್ಲಾಮಿನ ನೆಲೆಗಟ್ಟು ಕಡ್ಡಾಯವೆ ಆಗಿಹೋಗಿತ್ತು.
ಇತಿಹಾಸದಲ್ಲಿಯೇ ಮೊತ್ತಮೊದಲಿಗೆ ಭಾರತೀಯ ಉಪಖಂಡವನ್ನ ಹಿಂದುಸ್ತಾನವೆಂದೂ, ಇಲ್ಲಿನ ನಿವಾಸಿಗಳನ್ನ ಸಾರಾಸಗಟಾಗಿ ಹಿಂದೂಗಳೆಂದೂ ಗುರುತಿಸಿದವರು ಅರಬ್ಬಿಗಳೆ. ಸಿಂಧೂ ನದಿಯ ಸುತ್ತಮುತ್ತಲವರೆಗೆ ಆಗಾಗ ಧಾಳಿಯಿಡುತ್ತಿದ್ದ ಅರಬ್ ಬುಡಕಟ್ಟುಗಳ ಬಾಯಲ್ಲಿ ಸಿಂಧೂ ಹಿಂದೂವಾಗಿ ಉಚ್ಚಾರಿತವಾಗಿ ಸದ್ಯ ಅದೆ ಇಲ್ಲಿನ ಮೂಲ ಧರ್ಮದ ಹೆಸರಾಗಿ ಉಳಿದು ಹೋಗಿದೆ! ಆದರೆ ಆಗ ಧರ್ಮದ ಕಲ್ಪನೆ ಭಾರತೀಯ ಉಪಖಂಡದಲ್ಲಿ ಸಾಪೇಕ್ಷ ವಾಗಿದ್ದು ಅದೊಂದು ಬದುಕುವ ಕ್ರಮ ಹಾಗೂ ಸಾಮಾಜಿಕ ವಿಧಿ ವಿಧಾನಗಳ ರೂಪಿತ ಮಾದರಿಯಾಗಿತ್ತು. ಆದನ್ನ ಇಲ್ಲಿನ ಎಲ್ಲರೂ ಬೇಷರತ್ತಾಗಿ ಒಪ್ಪಿಯೂಕೊಂಡಿದ್ದರು. ಹೀಗಿದ್ದ ಭಾರತದ ಮೇಲೆ ಆರಂಭದಲ್ಲಿ ಇಸ್ಲಾಮಿನ ಪ್ರತಿನಿಧಿಯಾಗಿ ಧಾಳಿಯಿಟ್ಟವನು ಮಹಮದ್ ಬಿನ್ ಕಾಸಿಂ. ಕ್ರಿಸ್ತಶಕ 714ರ ಅಂತ್ಯದಲ್ಲಿ ಇವನ ನೇತೃತ್ವದಲ್ಲಿ ಇಸ್ಲಾಮಿ ಧರ್ಮಾನುಯಾಯಿಗಳಿಂದ ಭಾರತದ ಮೇಲೆ ಮೊದಲ ಆಕ್ರಮಣ ನಡೆಯಿತು. ದೇವಳದಿಂದ (ಇಂದಿನ ಕರಾಚಿ) ರಾಜ್ಯಭಾರ ಮಾಡುತ್ತಿದ್ದ ದಾಹಿರ ರಾಜ ಸಾಂಪ್ರದಾಯಿಕವಲ್ಲದ ಹಾಗು ಕ್ರೌರ್ಯಕ್ಕೆ ಹೆಚ್ಚು ಒತ್ತು ಕೊಡುವ ಅರಬ್ಬೀ ಬುಡಕಟ್ಟುಗಳ ಯುದ್ದ ಶೈಲಿಯಿಂದ ನಜ್ಜುಗುಜ್ಜಾಗಿ ಹೋದ. ಮೂಲಸ್ಥಾನದಲ್ಲಿದ್ದ (ಇಂದಿನ ಮುಲ್ತಾನ್) ಕೊನಾರ್ಕದಲ್ಲಿರುವಂತಹದ್ದೆ ಸೂರ್ಯ ದೇವಾಲಯ ಇವರ ಧಾಳಿಯ ಅಂಗವಾಗಿದ್ದ ಧರ್ಮ ಶ್ರದ್ಧೆಗೆ ಬಲಿಯಾಗಿ ; ಮೂರ್ತಿ ಭಂಜನೆಗೆ ಸಿಲುಕಿ ಸರ್ವನಾಶವಾಗಿ ಹೋಯಿತು. ಇಂದು ಅಲ್ಲಿ ಹಿಂದಿದ್ದ್ದ
ದೇವಸ್ಥಾನದ ಪಳಯುಲಿಕೆಯಿದೆ ಹಾಗೂ ಅದರ ನೆಲೆಗಟ್ಟಿನಲ್ಲಿಯೇ ಬ್ರಹತ್ ಮಸೀದಿ ಕಟ್ಟಲಾಗಿದೆ ( ಚಿತ್ರದಲ್ಲಿ ಗಮನಿಸಿ.). ಅಲ್ಲಿ ಕೆತ್ತಲಾಗಿದ್ದ ಸುಂದರ ರಥವೆರಿದ ಸೂರ್ಯನ ಪ್ರತಿಮೆಯನ್ನ ಕಾಸಿಮನ ಬರ್ಬರ ಸ್ವಭಾವದ ಅರಬ್ಬೀ ಸೈನಿಕರು ಧ್ವಂಸಗೊಳಿಸಿದ್ದೆ ಇಸ್ಲಾಮಿನಿಂದ ಹಿಂದುತ್ವಕ್ಕೆ ಸಂದ ಮೊದಲ ಆಘಾತ. ಕತ್ತಿಯಂಚಲ್ಲಿ ಗೆದ್ದ ನಾಡಿನಲ್ಲಿ ಧನ- ದ್ರವ್ಯದ ಸುಲಿಗೆಗಳು ನಡೆದವಾದರೂ ಮತಾಂತರದಂತಹ ಅತಿರೇಕ ಆಗಿನ್ನೂ ಅಡಿಯಿಟ್ಟಿರಲಿಲ್ಲ. ಆದರೆ ವಿಕೃತಿಯ ಮುಂದುವರಿಕೆಯಾಗಿ ಧಾಳಿಗೆ ಸಿಲುಕಿದ್ದ ಇಂದಿನ ಸಿಂಧ್ ಪ್ರಾಂತ್ಯದಲ್ಲಿದ್ದ ಅನೇಕ ದೇವಾಲಯಗಳಲ್ಲಿ ವ್ಯಾಪಕ ಮೂರ್ತಿ ಭಂಜನೆಗಳು ನಡೆದವು.
ಅಂದಿನ ಭಾರತೀಯ ಉಪಖಂಡದ ರಾಜಕೀಯ ಸ್ಥಿತಿಯಲ್ಲಿ ಆಂತರಿಕ ಐಕ್ಯತೆ ಇಲ್ಲದ ಭಾರತದ ಪಾಳೆಪಟ್ಟುಗಳು ಇನ್ನೊಂದು ರಾಜ್ಯದ ಮೇಲಾದ ಪರಧರ್ಮೀಯರ ಪೈಶಾಚಿಕ ಮಟ್ಟದ ಧಾಳಿಯನ್ನ ಕಂಡೂ ಕಾಣದ ಹಾಗೆ ಇದ್ದರು. ಇದು ಅವರ ರಾಜಕೀಯ ನಡೆಯಾಗಿತ್ತು. ಸಿಂಧ್'ನ ಸರಹದ್ದು ಮೀರಲು ಯತ್ನಿಸಿ ಮಾಳವ ರಾಜ್ಯಕ್ಕೆ ಮುಗಿಬಿದ್ದ ಆರಬ್ಬಿ ಧಾಳಿಕೋರರನ್ನ ರಾಜ ಭೋಜರಂತಹ ದೊರೆಗಳು ಹಿಮ್ಮೆಟ್ಟಿಸಿದ್ದರಿಂದ ಮುಂದಿನ ಮೂರುನೂರು ವರ್ಷ ಯಾವುದೆ ತಂಟೆ ತಕರಾರುಗಳು ಸಿಂಧೂ ನದಿಯ ಪೂರ್ವತೀರವನ್ನ ಪ್ರವೇಶಿಸಲಾಗಲಿಲ್ಲ. ಆದರೆ ಕೊರಾಸನ್'ನ ದೊರೆ ಸಬಕ್ತಗಿನ್ ಬೌದ್ಧಧರ್ಮದ ಹಿಡಿತದಲ್ಲಿದ್ದ ಕಾಬೂಲನ್ನ ಆಕ್ರಮಿಸಿ ಅಲ್ಲಿಗೆ ಇಸ್ಲಾಮನ್ನು ಒತ್ತಾಯದಿಂದ ಹೇರಿದ. ಅನಂತರ ಅವನ ಗಮನ ಭಾರತದ ಸಂಪತ್ತಿನತ್ತ ಹರಿಯಿತು. ಭಟಿಂಡದ ರಾಜ ಜಯಪಾಲ ಅದಾಗ ತಾನೆ ಅಳಿವಿನಂಚಿನಲ್ಲಿದ್ದ ಪ್ರತಿಹಾರ ಸಾಮ್ರಾಜ್ಯದ ಸಾಮ್ರಾಟ ರಾಜ್ಯಪಾಲನ ಸಹಕಾರ ಪಡೆದು ಚಾಂದೆಲರ ರಾಜ ದಂಗಣನ ಜೊತೆ ಮೈತ್ರಿ ಸಾಧಿಸಿ ಸಬಕ್ತಗೀನನ ಸೈನ್ಯವನ್ನ ಕ್ರಿಸ್ತಶಕ 991ರಲ್ಲಿ ಹಿಮ್ಮೆಟ್ಟಿಸಲು ಶತಪ್ರಯತ್ನ ಮಾಡಿದನಾದರೂ ಅದು ಫಲ ಕೊಡದೆ ಕೈಚೆಲ್ಲ ಬೇಕಾಯಿತು. ಸಬಕ್ತಗೀನನ ಮಗ ಮಹಮದ್ ಬಿನ್ ಗಜನಿಯ ಮುಂದಿನ ಅಟ್ಟಹಾಸದ ಧಾಳಿಯ ಪರ್ವ ಆರಂಭಗೊಂಡಂತೆಯೆ ಭಾರತೀಯ ಜನಾಂಗಗಳು ಒತ್ತಾಯದ ಮತಾಂತರಕ್ಕೆ ಒಳಪಡಲು ಆರಂಭಿಸಿದವು.
ಅಲ್ಲಿಯ ತನಕ ಹೇರಿಕೆಯ ಮತಾಂತರ ಭಾರತೀಯರ ಪಾಲಿಗೆ ಕೇಳಿಯೂ ಗೊತ್ತಿರದ ಹೊಸ ವಿಚಾರವಾಗಿತ್ತು. ಬೌದ್ಧ ಹಾಗೂ ಜೈನ ಧರ್ಮಾನುಸರಣೆ ಕೇವಲ ಐಚ್ಚಿಕವಾಗಿತ್ತೆ ಹೊರತು ವಾಣಿಜ್ಯಿಕ ಕುಟಿಲೋಪಾಯಗಳನ್ನ ಬಿಟ್ಟು ಇನ್ಯಾವುದೇ ಮಾರ್ಗದ ಮೂಲಕ ನೇರ ಹೇರಿಕೆಯಲ್ಲ. ಗಜನಿಯ ಆರ್ಭಟದಲ್ಲಿ ಸಿಲುಕಿ "ಕತ್ತಿ ಇಲ್ಲವೆ ಖುರಾನ್"ಎಂಬ ನೇರ ಬೆದರಿಕೆಗೆ ಮಣಿದು ಜೀವ ಉಳಿಸಿಕೊಳ್ಳಲು ಇಸ್ಲಾಂ ಅನುಸರಣೆಗೆ ಇಳಿದವರೇ ಹೆಚ್ಚು. ಕ್ರಿಸ್ತಶಕ 997ರಿಂದ ಆರಂಭವಾದ ಗಜನಿ ಮಹಮದನ ನಿರಂತರ ಆಕ್ರಮಕ ದಂಡಯಾತ್ರೆಗಳು 1027ರವರೆಗೂ ಕಾಶ್ಮೀರ, ಪಂಜಾಬ್, ಮಾಳವಾ, ಕಂಗ್ರಾ, ತಾನೇಶ್ವರ, ಕನೂಜು, ಮಥುರೆ, ಗ್ವಾಲಿಯರ್ ಹಾಗು ಸೋಮನಾಥ ದೇವಾಲಯಗಳ ಮೇಲೆಲ್ಲಾ ನಿರಂತರ ಹದಿನೇಳು ಬಾರಿ ನಡೆದವು.
ಭಾರತದೊಳಗೆ ಅಷ್ಟು ದೂರ ಸಾಗಿ ಬಂದು ಲೂಟಿ ಹೊಡೆಯುವಾಗ ಅವನು ಅನೇಕ ಹಿಂದೂ ಸಾಮ್ರಾಜ್ಯಗಳ ಸರಹದ್ದನ್ನ ದಾಟಿಕೊಂಡೆ ಬರಬೇಕಾಗಿತ್ತು ಅನ್ನೋದು ನಿಮ್ಮ ನೆನಪಿನಲ್ಲಿರಲಿ. ಅದೆ ವೇಳೆಗೆ 'ತಮ್ಮ ಮನೆ ಮಾತ್ರ
ಸುರಕ್ಷಿತವಾಗಿದ್ದರಾಯ್ತು...ಅಕ್ಕಪಕ್ಕದವರು ಬೇಕಿದ್ರೆ ಹಾಳು ಬಿದ್ದು ಹೋಗಲಿ!" ಎಂಬ ಆ ರಾಜ್ಯಗಳ ರಾಜರ ಹಾಗು ಪ್ರಜೆಗಳ ಮನಸ್ಥಿತಿಯ ಹಿಂದಿರುವ ಸ್ವಾರ್ಥವನ್ನೂ ಮರೆಯದಿರಿ! ಈ ಹೊಟ್ಟೆಕಿಚ್ಚಿನ ಫಲವಾಗಿ ಕೆಲವೆ ಸಾವಿರ ರಕ್ತ ಪಿಪಾಸುಗಳ ಜೊತೆಗೂಡಿ ಭಾರತದ ಸಿರಿ ಸಂಪತ್ತನ್ನ ಲೂಟಿ ಮಾಡಿ, ಅಮಾಯಕರನ್ನ ಒತ್ತಾಯದಿಂದ ಬಲವಂತವಾಗಿ ಮತಪರಿವರ್ತನೆಗೆ ಒಳಪಡುವ ಹಾಗೆ ಹಿಂಸಿಸಿದ ಮಹಮದ್ ಬಿನ್ ಗಜನಿ ಇಷ್ಟು ಯಶಸ್ವಿ ಧಾಳಿಯನ್ನ ಸಂಘಟಿಸಲು ಸಾಧ್ಯವಾಗುತ್ತಿರಲಿಲ್ಲ ಅನ್ನುವುದಂತೂ ಸತ್ಯ.
ಇದಕ್ಕೂ ಭಾರತದಲ್ಲಿನ ಇಸ್ಲಾಮಿನ ಕಥೆಗೂ ನೇರಾನೇರ ಸಂಬಂಧವಿರುವ ಕಾರಣ ಐತಿಹಾಸಿಕ ನೆಲೆಗಟ್ಟಿನಿಂದಲೂ ಅನಿವಾರ್ಯವಾಗಿ ಭಾರತೀಯ ಇಸ್ಲಾಮನ್ನು ಅವಲೋಕಿಸಬೇಕಿದೆ. ಅದೇನೆ ಧಾಳಿ ಮಾಡಿದ್ದರೂ ಮಹಮದ್ ಬಿನ್ ಗಜನಿ ಮರಳಿ ಸ್ವದೇಶಕ್ಕೆ ಹೋಗಿ 1030ರಲ್ಲಿ ಅಲ್ಲಿಯೆ ತನ್ನ ಕೊನೆಯುಸಿರನ್ನೆಳೆದ. ಇಲ್ಲಿನ ರಾಜ್ಯವನ್ನ ಆಳುವ ಯಾವ ಅಭಿಲಾಷೆಯೂ ಅವನ ಧಾಳಿಯ ಹಿಂದೆ ಇದ್ದಿರಲಿಲ್ಲ. ಹೀಗಾಗಿ ಅಧಿಕೃತ ಇಸ್ಲಾಂ ಪ್ರಭುತ್ವದ ಆರಂಭಕ್ಕಾಗಿ ಭಾರತ ಭೂಮಿ ಇನ್ನೂ ಒಂದೂಕಾಲು ಶತಮಾನ ಕಾಯಬೇಕಾಯಿತು. ಮುಂದೆ ಮತ್ತೊಬ್ಬ ಕಿರಾತಕ ಸ್ವರೂಪಿ ಅಫಗನ್ ದೊರೆ ಮಹಮದ್ ಘೋರಿ ಧಾಳಿಯಿಡುವ ತನಕ.
( ನಾಳೆಗೆ.... )
No comments:
Post a Comment