13 September 2012
ಮಳೆಯ ನೆನಪಲ್ಲಿ....
ಮಳೆಯೆಂದರೆ ನನಗ್ಯಾಕಷ್ಟು ಇಷ್ಟ? ಅನ್ನುವ ಪ್ರಶ್ನೆಗೆ ನನ್ನ ಬಳಿಯೆ ಖಚಿತ ಉತ್ತರವಿಲ್ಲ. ಆದರೆ ಮನೋವೈಜ್ಞಾನಿಕ ನೆಲೆಯಲ್ಲಿ ಇದನ್ನ ವಿಶ್ಲೇಷಿಸಬಲ್ಲೆ. ನಾನು ಹುಟ್ಟಿದ್ದ ವರ್ಷ ಅತಿವೃಷ್ಟಿಯಾಗಿತ್ತು. ತುಂಗೆ ಅಪಾಯದ ಮಟ್ಟ ಮೀರಿ ಹರಿದು ತೀರ್ಥಹಳ್ಳಿಯಲ್ಲಿನ ನದಿಪಾತ್ರದಲ್ಲಿ ಸಾಕಷ್ಟು ಆಸ್ತಿ-ಜೀವ ಹಾನಿಯಾಗಿತ್ತು. ತುಂಗಾತೀರದ ಛತ್ರಕೇರಿ, ರಥಬೀದಿಗಳಲ್ಲಿನ ಜನರನ್ನ ಸ್ಥಳಾಂತರಿಸಿದ್ದರೆ ಸೇತುವೆಯಾಚೆಯ ಕುರುವಳ್ಳಿ ಹಾಗೂ ಬೊಮ್ಮರಸಯ್ಯನ ಅಗ್ರಹಾರದ ನಿವಾಸಿಗಳನ್ನೂ ಮನೆ ಬಿಡಿಸಲಾಗಿತ್ತು. ನಾನಿನ್ನೂ ತೀರ್ಥಹಳ್ಳಿಯಲ್ಲಿದ್ದಾಗಲೊಮ್ಮೆ ಅಡುಗೆ ಕೆಲಸದಲ್ಲಿ ಸಹಾಯ ಮಾಡಲು ಕಲ್ಲು ಸಾರದಾಚೆಯ ಪುತ್ತಿಗೆ ಮಠಕ್ಕೆ ಹೋಗಿದ್ದೆ. ಅಲ್ಲಿ ೧೯೮೨ರ ಅಗೊಸ್ತು ೨೬ರಂದು ದೊಡ್ಡ ನೆರೆ ಬಂದಾಗ ನೀರು ಇಲ್ಲಿಗೆ ಮುಟ್ಟಿತ್ತು ಅಂತ ನೆಲ ಮಹಡಿಯ ಸೂರಿನ ಹತ್ತಿರ ಬಾಣದ ಗುರುತು ಹಾಕಿ ಬರೆದಿದ್ದನ್ನ ಓದಿದಾಗ ಗಾಬರಿಯಾಗಿದ್ದೆ. ಏಕೆಂದರೆ ಅಂದೇ ನನ್ನ ಹುಟ್ಟಿನ ದಿನ.
ಬಹುಷಃ ಹುಟ್ಟುವ ಕ್ಷಣದಲ್ಲಿ ಧಾರಾಕಾರ ಮಳೆಯ ಇರುಳಿದ್ದಿರಬೇಕು, ಗುಡುಗಿನ ಆರ್ಭಟದ ಸದ್ದನ್ನ ಕಿವಿ ತುಂಬಿಸಿ ಕೊಂಡೆ ನಾನು ಕಷ್ಟಮಯಯೂ-ಠಕ್ಕಮಯವೂ ಆದ ಈ ಸುಂದರ ಪ್ರಪಂಚಕ್ಕೆ ಉರುಳಿ ಬಿದ್ದೆನೇನೋ. ನನ್ನ ಅಳುವಿನ ಆರ್ಭಟ ಮಳೆಯ ಆರ್ಭಟದ ಮುಂದೆ ಸೋತು ಸಪ್ಪಗಾಗಿ ಮಳೆಯ ಏಕತಾನವನ್ನ ಕೇಳುತ್ತಾ ಪ್ರಪಂಚದಲ್ಲಿ ಬಾಳುವ ಕಲೆಯ ತರಗತಿಗೆ ಭರ್ತಿಯಾದೆನೇನೋ. ಅದಕ್ಕೇನೆ ನನಗೆ ಮಳೆ ಹಾಗೂ ಕತ್ತಲೆಯೆಂದರೆ ಅಗತ್ಯಕ್ಕಿಂತ ಜಾಸ್ತಿ ಆಪ್ತತೆ ಅನ್ನಿಸುತ್ತದೆ. ಬಾಲ್ಯದುದ್ದಕ್ಕೂ ಆತ್ಮಸಖನಂತೆ ಮಳೆ ಬದುಕನ್ನ ಆವರಿಸಿತ್ತು. ಬೆಳೆಯುತ್ತಾ ಬಂದಂತೆ ಪಿರಿಪಿರಿಗುಟ್ಟುವ ಮಳೆ ಕೆಲವೊಮ್ಮೆ ರೇಜಿಗೆ ಹುಟ್ಟಿಸುತ್ತಿದ್ದುದೂ ಸುಳ್ಳಲ್ಲ. ಶಾಲೆಗೇ ಹೋಗುವಾಗ ನನ್ನ ಹತ್ತಿರ ಇದ್ದದು ಒಂದೇ ಜೊತೆ ಸಮವಸ್ತ್ರ. ವಾರವಿಡೀ ಒಂದನ್ನೇ ಒಗೆಯದೆ ಹಾಕಿಕೊಲ್ಲುವುದಂತೂ ಅಸಾಧ್ಯದ ಮಾತು ಅದನ್ನ ಒಗೆದು ಹಾಕಿದರೆ ಒಣಗಲು ಆ ತೆವದಿಂದ ಕೂಡಿದ ವಾತಾವರಣದಲ್ಲಿ ಕನಿಷ್ಠ ಮೂರ್ನಾಲ್ಕು ದಿನಗಳಾದರೂ ಬೇಕೆ ಬೇಕು. ಆದರೆ ಅದಕ್ಕೆ ಅವಕಾಶವೆಲ್ಲಿ? ಹಿಡಿದ ಮಳೆ ಕ್ಷಣವಾದರೂ ಬಿಟ್ಟರೆ ತಾನೇ ಆ ಆಲೋಚನೆ. ಹೀಗಾಗಿ ಮಳೆಯಲ್ಲಿ ಇನ್ನೂ ಒದ್ದೆಯಾಗಿಯೇ ಇರುತ್ತಿದ್ದ ಹಸಿ ಚಡ್ಡಿಗಳನ್ನ ಹಾಕಿ ಹಾಕಿ ಸೊಂಟದ ಸುಟ್ಟ ಫಂಗಸ್ ಖಾಯಮಾಗಿ ಆಗುತ್ತಿದ್ದವು. ಇದು ಸಾಲದು ಎಂಬಂತೆ ಅಂಗಿ ಬಟ್ಟೆಯ ಮೇಲೆ ನೀರ ಕಲೆ ಉಳಿದು ಕಪ್ಪುಕಪ್ಪು ಚುಕ್ಕಿಗಳಾಗಿ ಉಳಿದು ಬಿಡುತ್ತಿತ್ತು. ಆಗೆಲ್ಲಾ ವಿಪರೀತ ಸಿಟ್ಟು ಉಕ್ಕುತ್ತಿತ್ತು ಮಳೆಯ ಮೇಲೆ.
ಅಮ್ಮ ಬೆಳಗ್ಯೆ ಸಂಜೆ ಕರೆದು ಬಾಟಲುಗಳಲ್ಲಿ ಹಾಕಿಟ್ಟ ಹಾಲನ್ನ ಕೊಡೋದಕ್ಕೆ ಹೋಗಲೂ ಮಳೆಯ ಕಾಟ. ಒಂದು ಕಂಬಳಿ ಕೊಪ್ಪೆಗೆ ಹೊಂದುವ ಒಳಗೆ ಜಾಡಿ ಹಾಕಿಟ್ಟ ಪ್ಲಾಸ್ಟಿಕ್ಕಿನ ಗೊಬರೊಂದು ನನಗಾಗಿ ಮಾಡಿಟ್ಟಿದ್ದರು ಕೊಡೆ, ರೈನ್'ಕೋಟ್ ಯಾವೊಂದರ ಕಲ್ಪನೆಯೂ ಇಲ್ಲದ ದಿನಗಳವು. ನಾನು ಈ ಗೊಬರೊಳಗೆ ಅಡಗಿಕೊಂಡು ಮನೆಮನೆಗೂ ಹೋಗಿ ಹಾಲನ್ನ ತಲುಪಿಸಿ ಬರುತ್ತಿದ್ದೆ. ಹಾಕಿರುತ್ತಿದ್ದ ಹವಾಯಿ ಚಪ್ಪಲಿಯ ಕೃಪೆಯಿಂದ ಬೆನ್ನಿನ ಭಾಗದಲ್ಲಿ ಕೆಸರು ಸಿಡಿದು ರಾಡಿಯಾಗಿರುತ್ತಿತ್ತು. ಮಳೆಯೆಂದರೆ ಮನೆಯ ಸುತ್ತ ವಿಪರೀತ ಎರೆಹುಳ(ನಕ್ರು), ಮಳೆಯೆಂದರೆ ಕತ್ತಲಲ್ಲಿ ಮಲಗುವ ಹೊತ್ತಲ್ಲಿ ಗೊಂಕರು ಕಪ್ಪೆಗಳ ನಿರಂತರ ಡ್ರೊಂಕ್ ಡ್ರೊಂಕ್ ಗಾಯನ, ಮಳೆಯೆಂದರೆ ಮನೆಯ ಅಂಗಳ-ಹಿತ್ತಲಲ್ಲೆಲ್ಲ ಜಾರುವ ಪಾಚಿ ಹಾವಸೆಯ ಕಾಟ, ಮಳೆಯೆಂದರೆ ಕರೆಂಟು ಕೈಕೊಡುವ ಸಂಜೆಗಳು, ಮಳೆಯೆಂದರೆ ಸಂಜೆ ಚಾದ ಜೊತೆ ಸವಿಯಲಿಕ್ಕೆ ಹಲಸಿನ ಹಪ್ಪಳ, ಮಳೆಯೆಂದರೆ ಅಪರೂಪದ ಅರಿಶಿನದೆಲೆಯ ಕಡುಬು ಬೆಳಗಿನ ತಿಂಡಿಗೆ, ಮಳೆಯೆಂದರೆ ಬೆಚ್ಚಗೆ ಮೆಂತೆ ಗಂಜಿ ಕುಡಿಯಲಿಕ್ಕೊಂದು ಪಿಳ್ಳೆನೆವ, ಮಳೆಯೆಂದರೆ ಸುಟ್ಟ ಹಲಸಿನ ಬೋಳೆಗಳನ್ನ ಉಪ್ಪು ಸೇರಿಸಿ ಕಟುಂ-ಕುಟುಂ ತಿನ್ನುವ ಸುಖ, ಮಳೆಯೆಂದರೆ ಹೊಳೆ ಉಕ್ಕಿ ಹರಿಯುವ ನೆಪಕ್ಕೆ ಶಾಲೆಗೇ ಸಿಗುತ್ತಿದ್ದ ನಿರಾಯಾಸ ರಜೆ, ಮಳೆಯೆಂದರೆ ಊಟಕ್ಕೆ ಕಳಲೆಯ ಪಲ್ಯ, ಮಳೆಯೆಂದರೆ ಮನೆ ಸುತ್ತಲ ಹೂಗಿಡಗಳಿಗೆ ನೀರು ಹಾಕುವ ಕೆಲಸಕ್ಕೆ ಮಾಫಿ, ಮಳೆಯೆಂದರೆ ಮಾಡಿನ ಮೂಲೆಯಿಂದ ಸುರಿವ ನೀರಧಾರೆಯಲ್ಲಿ ಆಡುವ ಚಪಲ, ಮಳೆಯೆಂದರೆ ನೋಟು ಬುಕ್ಕಿನ ಹಾಳೆಗಳಲ್ಲಿ ದೋಣಿ ಮಾಡಿ ಹಳ್ಳದ ನೀರಲ್ಲಿ ಬಿಡುವ ಖುಷಿ , ದೊಡ್ಡವರ ಕಣ್ಣಿಗೆ ಅದು ಬಿದ್ದರೆ ನೋಟು ಬುಕ್ಕಿನ ಹಾಳೆಯನ್ನ ಹರಿದು ಹಾಳು ಮಾಡಿದ್ದಕ್ಕೆ ಬೆನ್ನ ಮೇಲೆ ಉಚಿತ ಬಹುಮಾನ...... ಹೀಗೆ ಮಳೆಗೆ ವಿವಿಧ ಮುಖ. ದುಃಖದೊಂದಿಗೆ ಸಮಪಾಲಿನ ಸುಖ. ಹೀಗಾಗಿ ನನ್ನದೂ ಮಳೆಯದೂ ಒಂಥರಾ ಗಂಡ-ಹೆಂಡಿರ ಸಂಬಂಧ!
ನೋವಲ್ಲಿ ಅಳುವಾಗ ಮಳೆ ಬಂದರೆ ಕಣ್ಣೀರು ಯಾರಿಗೂ ಕಾಣಿಸೋದೆ ಇಲ್ಲ, ಇದು ಆಗಾಗ ಉಪಯೋಗಕ್ಕೆ ಬಂದದ್ದೂ ಇದೆ. ಅಮ್ಮ ಹಾಗು ಮನೆಯನ್ನ ಬಿಟ್ಟು ಕಾರ್ಕಳಕ್ಕೆ ಹೋದಾಗ, ಕೊನೆಯ ಬಾರಿ ಊರನ್ನ ಶಾಶ್ವತವಾಗಿ ತೊರೆದು ಬೆಂಗಳೂರು ಪಾಲಾದಾಗ ಇತ್ತ ನನ್ನ ಕಣ್ಣು ಮಂಜಾದ ಹಾಗೆ ಅತ್ತ ಆಗಸದ ಎದೆಯೂ ಭಾರವಾಗಿ ಸುರಿದ ನೆನಪಿದೆ. ಈಗ ಊರಲ್ಲಿ ಅಷ್ಟು ಮಳೆ ಇಲ್ಲವಂತೆ. ಹಾಸ್ಟೆಲ್ಲಿನಲ್ಲಿ ಮುಸುಗು ಹೊದ್ದು ಮನೆಯ ನೆನಪಾದಾಗಲೆಲ್ಲ ಮಲಗಿಯೇ ಬಿಕ್ಕಳಿಸುವಾಗ ಹೊರಗಿನ ಜೋರು ಮಳೆಯ ಸದ್ದಿನೊಂದಿಗೆ ನನ್ನ ಅಳುವಿನ ಸದ್ದೂ ಕರಗಿ ಹೋಗಿ "ಹುಡುಗನಾಗಿಯೂ ಅಳ್ತಾನೆ" ಎನ್ನೋ ಇತರರ ಗೇಲಿಯಿಂದ ನನ್ನ ಅದೆಷ್ಟೋ ಸಾರಿ ಪಾರು ಮಾಡಿತ್ತು ಈ ಜೋರು ಮಳೆ. ಮಳೆಯ ದಿನಗಳಲ್ಲಿ ಉಕ್ಕಿ ಹರಿವ ತುಂಗೆಯ ಒಡಲನ್ನ ಹಿರಿಯರೊಂದಿಗೆ ಕಮಾನು ಸೇತುವೆ ಮೇಲೆ ನಿಂತು ದಿಟ್ಟಿಸುತಿದ್ದ ನೆನಪೆ ಒಂಥರಾ ಭಯ ಹುಟ್ಟಿಸುತ್ತಿತ್ತು. ಬೇರೆ ಕಾಲದಲ್ಲಿ ಮನೆಗೆ ಬಂದ ದೂರದೂರುಗಳ ನೆಂಟರನ್ನ ವಾಯುವಿಹಾರಕ್ಕೆ ನದಿ ತೀರಕ್ಕೆ ಕರೆದೊಯ್ದಾಗ ಏನೂ ಅರಿಯದ ಮಳ್ಳಿಯಂತೆ ಪಕ್ಕದಲ್ಲಿಯೇ ಹರಿಯುವ ತುಂಗೆ ಇವಳೇನಾ ಎನ್ನುವ ಪ್ರಶ್ನೆ ಮನಸಿನಲ್ಲೇಳುತ್ತಿತ್ತು. ಅವಳ ಅಂದಿನ ರೌದ್ರಾವತಾರಕ್ಕೆ ನಡುಕ ಹುಟ್ಟುತ್ತಿತ್ತು. ಇಂದು ತುಂಗೆಗೆ ಮೊದಲ ಬಲವಿಲ್ಲ, ಮರಗಳೆಲ್ಲ ಕಡಿವ ಪಾಪಿಗಳ ಪಾಲಾದ ಮಲೆನಾಡಿನಲ್ಲಿ ಮೊದಲಿನಷ್ಟು ಮಳೆಯೂ ಇಲ್ಲ. ಮಳೆಯೂ ಈಗ ಬರಿ ನೆನಪಷ್ಟೆ.
Subscribe to:
Post Comments (Atom)
No comments:
Post a Comment