ನಮ್ಮಿಬ್ಬರ ನಡುವೆ ಇರೋದನ್ನ ಏನೆನ್ನಲಿ?
ಸಂಬಂಧದ ಅದ್ಯಾವ ಹಣೆಪಟ್ಟಿ ಹಚ್ಚಲಿ?/
ಹೆಸರಿಟ್ಟ ಮಾತ್ರಕ್ಕೆ ಇದು ಹೆಚ್ಚೋದಿಲ್ಲ,ಮೌನವಾಗಿದ್ದಾರೆ ತಾನೆ ಏನು? ಮುಕ್ಕಾಗೋದೂ ಇಲ್ಲ//
ಪೌರ್ಣಮಿಯ ನವೆಯೋ ಚಂದಿರ,
ಕ್ಷಯವೇ ನಿನಗೆ? ಇಲ್ಲ ವಿರಹ?/
ಮನಸ ಕೊಟ್ಟು ಮರೆತೆಯೋ?
ಮರೆತು ಮನಸ ಕೊಟ್ಟು ಕೆಟ್ಟೆಯೋ?//
ಮುದ್ದಿಸಿದ ತುಟಿಗಳ ತಪ್ಪಲ್ಲ,
ಮತ್ತೇರಿಸಿದ ಮುತ್ತಿನದೆ ಅಪರಾಧ ಅದು/
ಒಂದಕ್ಕೆ ಅಮಲೇರಿಸಿ,
ಇನ್ನೊಂದೇ ಒಂದನ್ನು ಕೊಡದೆ ಹೋದರೆ ಹೇಗೆ?//
ಗಾಳಿಗೇನು ಗೊತ್ತು ನಿನ್ನ ಮೈ ಗಂಧ?
ಅತ್ತರಿಗೇನು ಗೊತ್ತು ನಿನ್ನ ಸ್ವೇದ ಸುಗಂಧ?/
ಮೋಸ ಹೋದೆನಾದರೂ ಹೇಗೆ ಕೃತಕ ಪರಿಮಳಕೆ? ಹೇಳು,
ನೀನೆ ನನ್ನುಸಿರಲಿ ಅವಿತಿರುವಾಗ...ನನ್ನೊಳಗೆ ಕರಗಿ ಬೆರೆತಿರುವಾಗ//
20 March 2010
Subscribe to:
Post Comments (Atom)
No comments:
Post a Comment