ಹಳೆಯ ಸವಿ ನೆನಪುಗಳು ಕಣ್ಣಿಗೆ ನೀರಪರದೆ ಹಾಕುವಾಗ,
ಒಳಗೊಳಗೇ ನನಗೇಕೋ ತಳಮಳ/
ಎಲ್ಲಾದರೂ ವಿಸ್ಮಯ ಘಟಿಸಿ ನೀನೀಗಲೆ ಬಂದರೆ,
ನಿನ್ನ ಬಿಂಬವ ತುಂಬಿದ ಆಲಿಗಳು ಮರೆಮಾಚಿಯಾವೋ ಎನ್ನುವ ಕಳವಳ//
ಕಾಯುವುದರಲ್ಲಿ ಸುಖವಿದೆ ನಿಜ,
ಆದರೆ ಇನ್ನೆಷ್ಟು ಅಂತ ಕಾಯಲಿ?/
ಸಾಯುವುದರಲ್ಲಿ ನೆಮ್ಮದಿಯಿದೆ ದಿಟ,
ಅನುಕ್ಷಣ ಇನ್ನೆಷ್ಟು ಅಂತ ಸಾಯಲಿ?//
ಹಟ್ಟೆಯ ಮೇಲೆ ಮುಟ್ಟುವ ಜೇನುಗಳಂತಹ ನೆನಪುಗಳ ದಾಳಿಯಿಂದ ತಪ್ಪಿಸಿಕೊಳ್ಳಲಾರೆ,
ನಿಜದ ಅರಿವಿದ್ದರೂ ಅದನು ಒಪ್ಪಿ ಅಪ್ಪಿಕೊಳ್ಳಲಾರೆ/
ನಿನ್ನ ಹಾದಿಯ ನಿರೀಕ್ಷೆಯಲ್ಲೇ ಬಾಳಪಥ ಸಾಗಿಸುವುದರಲ್ಲಿ ಒಂದು ಸುಖವಿದೆ,
ಇನ್ಯಾವುದಕ್ಕೆ ಉಪಯೋಗವಾಗದಿದ್ದರೂ..ಉಸಿರು ನಿಂತ ಮೇಲೆ ಅದೇ ಸೊಡರೆನ್ನ ಸುಡಲಿದೆ//
ಮುತ್ತುಗದ ಎಲೆಯಂತೆ ಅರಳಿದ್ದ ಮನಸ್ಸು,
ನಾಚಿಕೆಮುಳ್ಳಿನಂತೆ ಮುದುಡಿ ಮುರುಟಿ ಹೋಗಿದೆ/
ನಿನ್ನ ಜೊತೆಯಿಲ್ಲದೆ ಅದು ಅರಳೀತಾದರೂ ಹೇಗೆ?,
ನೀನೆ ಹೇಳು?//
ಗೊತ್ತು ನೀನು ಸಾಗಿದ್ದು...ಅದು ಹಿಂದಿರುಗಿ ಬರಲಾಗದ ಏಕಮುಖ ರಸ್ತೆ,
ಆದರೂ ನನ್ನ ಭಾವುಕ ನೇತ್ರಗಳಲ್ಲಿ ತೀರದ ನಿರೀಕ್ಷೆ/
ವಾಸ್ತವದ ಅರಿವಿದ್ದರೂ ಅದನ್ನೋಪ್ಪಲು ತಯಾರಿಲ್ಲದ ಮೊಂಡ ನಾನು,
ಎಂದೆಂದಿಗೂ ನಿನ್ನ ಹಾದಿಯ ಕಾಯುತಲೇ ಇರುವೆನು//
ಹೊಂಗೆಯ ನೆರಳಿನಂತೆ ತಂಪು,
ಅರೆಬಿರಿದ ಸುರಗಿಯ ಹೂಗಳಿಗಿಂತ ಕಂಪು/
ದೂರದಿಂದೆಲ್ಲೋ ಕಾಣದಿರುವೆಡೆಯಿಂದ ಗಾಳಿಯಲಿ ತೇಲಿ ಬರುವ ಮುರಳಿಯ ನಾದಕ್ಕಿಂತ ಇಂಪು,
ನನ್ನೊಳಗಿರುವ ನೀನು...ನಿನ್ನ ನೆನಪು//
26 May 2010
Subscribe to:
Post Comments (Atom)
No comments:
Post a Comment