26 October 2010

ಹನಿಗಳು...

ಕೊಳಲಾಗಬಹುದಿತ್ತು ನಾನು ನಿನ್ನ ತುಟಿಯಾದರೂ ಆಗ ನನ್ನ ಸೋಕುತ್ತಿತ್ತು,
ವೀಣೆಯಾದರೂ ಆಗಬೇಕಿತ್ತು ಆಗಲಾದರೂ ನಿನ್ನ ಬೆರಳುಗಳು ನನ್ನ ಮೀಟುತ್ತಿತ್ತು/
ಮೃದಂಗವಾದರೂ ಸಾಕಿತ್ತು...
ಬಾರಿಸುವ ನೆಪದಲ್ಲಾದರೂ ನಿನ್ನ ಅಂಗೈ ಪದೆ ಪದೆ ನನ್ನ ತಾಕುತ್ತಿತ್ತು,
ಆದರೆ ನನ್ನ ದುರದೃಷ್ಟ ನೋಡು...
ಕೇವಲ ಮನುಷ್ಯನಾಗಿದ್ದೇನೆ,
ನಿನ್ನಿಂದ ದೂರಾಗಿರುವುದೆ ಆಗಿದೆ ನನ್ನ ಪಾಡು//


ಮನಸ ಕಪಾಟಿನ ತುಂಬ ನೆನಪಿನ ಹಳೆ ಕಾಗದದ ಕಂಪು ತುಂಬಿದ ಪುಸ್ತಕಗಳೆ ತುಂಬಿವೆ,
ಪ್ರತಿಯೊಂದರ ಪುಟಗಳಲ್ಲೂ ನಿನ್ನದೆ ಸ್ಪರ್ಶದ ಪುರಾವೆ ಬೆರಳ ಗುರುತುಗಳಿವೆ/
ಯಾವುದೊ ಹೊತ್ತಗೆಯೊಂದರ ನಡುಪುಟ ನಿನ್ನ ತುಟಿ ಮುದ್ರೆಯ ಹೊತ್ತಿದೆ,
ಅದರ ಮೇಲೆ ಕೈಯಾಡುವಾಗಲೆಲ್ಲ ನನಗೆ ಅರಿವಿಲ್ಲದೆ ತುಂಬಿಬರುವ ಕಣ್ಣೀರಲೂ...
ನಿನ್ನದೆ ಸವಿನೆನಪ ಮತ್ತಿದೆ...ಕೆಳಗಿಳಿವ ಪ್ರತಿ ಹನಿಗಳಲೂ ನಿನ್ನ ವಿರಹದ ಮುತ್ತಿದೆ//

No comments: