23 December 2010

ಆದಿಕವಿ ಪಂಪ -ಹಾದಿಕವಿ ಚಂಪಾ

ಅರಿವುಗೇಡಿಯೊಬ್ಬನ ಐಲು-ಪೈಲು...

ಸದುದ್ದೇಶದಿಂದ ಕೂಡಿದ ಸಂಗತಿಯೊಂದು ಕುಹಕಿಯೊಬ್ಬನ ಕೈಚಳಕಕ್ಕೆ ಬಲಿಯಾಗಿ ಗಟಾರ ಸೇರುವುದನ್ನು ಆಗಾಗ ಕೇಳಿ ಅರಿಯುತ್ತಿದ್ದೆ.ಆದರೆ "ವಿಜಯ ಕರ್ನಾಟಕ"ದಂತಹ ಜನಮೆಚ್ಚಿದ ಉತ್ಕೃಷ್ಟ ದಿನಪತ್ರಿಕೆಯ ಸದಾಲೋಚನೆಯೊಂದನ್ನು ಹಳ್ಳ ಹಿಡಿಸಿದ ಘನಂದಾರಿ ಸಾಹಿತಿ ಚಂದ್ರಶೇಖರ ಪಾಟೀಲರ ವರಸೆಯಿಂದ ಅದರ ಖುದ್ದು ಅನುಭವವೂ ಆದಂತಾಯಿತು.ನವಂಬರ್ ಕನ್ನಡಿಗರ ತೀರದ ಹಾವಳಿಯೇ ಎಲ್ಲೆಲ್ಲೂ ವ್ಯಾಪಿಸಿರುವ ಈ ಕಾಲದಲ್ಲಿ (ಮಾನ್ಯ ಪಾಟೀಲರ ಮಟ್ಟವೂ ಅಷ್ಟೆ ಎಂದು ವಿಷಾದದಿಂದಲೇ ಹೇಳಬೇಕಿದೆ!) ನಮ್ಮ ನಿತ್ಯ ಬದುಕಿನಲ್ಲಿ ನಮಗರಿವಿಲ್ಲದೆ ನಾವು ಬಳಸುತ್ತಾ ನಮ್ಮೊಳಗೆ ಹಾಸು ಹೊಕ್ಕಾಗಿರುವ ಅನೇಕ ಪರಭಾಷಿಕ ಪದಗಳಿಗೆ ಕಸ್ತೂರಿ ಕನ್ನಡದಲ್ಲಿಯೆ ಬಳಕೆ ಕಡಿಮೆಯಾಗಿ ತೆರೆಮರೆ ಸರಿದಿರುವ ಅನೇಕ ಸಂವಾದಿಗಳನ್ನು ಹುಡುಕಿಸಿ ಬಳಕೆಗೆ ತರುವ ವಿನೂತನ ಪ್ರಯೋಗವಾಗಿತ್ತು "ವಿಜಯ ಕರ್ನಾಟಕ" ಆರಂಭಿಸಿದ್ದ 'ಪದಕಟ್ಟಿ'.


ಮಾತೃ ಭಾಷೆಯ ಬಗ್ಗೆ ಇದ್ದ ಅಪರಿಮಿತ ಅಭಿಮಾನ,ಅನಗತ್ಯವಾಗಿ ಹರಡಿರುವ ಪರಭಾಷಾ ಹಾವಳಿಯ ಬಗ್ಗೆ ನನ್ನೊಳಗೆ ಹುದುಗಿದ್ದ ಸುಪ್ತ ಅಸಹನೆ,ನವ ಸರಂಜಾಮು ಅಥವಾ ನಾಗರೀಕ ಸೇವೆಗಳಿಗೆ ಸೂಚಿಸುವ ಪದಗಳು ಪರ್ಯಾಯವಾಗಿ ಚಾಲ್ತಿಗೆ ಬರಲಿ ಎಂಬ ಒಳ ಆಸೆ ಇವೆಲ್ಲವೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ನನ್ನನ್ನು ಪ್ರಚೋದಿಸಿದವು,ಅಲ್ಲದೆ ಕಳೆದ ೨೦೦೨ಅಲ್ಲಿ ನಾನು ಹಾಗು ನನ್ನ ಆತ್ಮಸಖ ರುದ್ರಪ್ರಸಾದ ಶಿರಂಗಾಲ ಮೊದಲಿಗೆ ನಾವು ಮಾಡಿಸಿದ್ದ ನಮ್ಮ ಸ್ವ-ವಿಳಾಸ ಬಿಲ್ಲೆ (ವಿಸಿಟಿಂಗ್ ಕಾರ್ಡ್) ಯಲ್ಲಿ landlineಗೆ 'ಸ್ಥಿರ'ವೆಂತಲೂ,mobileಗೆ 'ಸ್ಥಾಯಿ' ಅಂತಲೂ emailಗೆ 'ಮಿಂಚಂಚೆ'ಯಂತಲೂ ಛಾಪಿಸಿಕೊಂಡು ಆ ಮೂರು ಪರ್ಯಾಯ ಪದಗಳನ್ನ ಅಧಿಕೃತವಾಗಿ ಚಾಲ್ತಿಗೆ ತಂದಿದ್ದೆವು.ಇಂದು ಅದರ ಮೂಲ ಅರಿಯದವರೂ ಅವನ್ನು ವ್ಯಾಪಕವಾಗಿ ಬಳಸುತ್ತಿರುವುದು ನಮ್ಮಿಬ್ಬರಿಗೂ ಅತೀವ ಸಂತಸದ ಹಾಗು ಹೆಮ್ಮೆಯ ವಿಚಾರ.ಈ ಹಿನ್ನೆಲೆಯಲ್ಲಿ ಆಸ್ಥೆವಹಿಸಿ 'ಪದಕಟ್ಟಿ'ಯಲ್ಲಿ ಭಾಗವಹಿಸಿದ್ದೆ.ಇಲ್ಲಿ ಬಹುಮಾನದ ಅಮಿಷಕ್ಕಿಂತಲೂ ಭಾಷೆ ಬೆಳೆಯಲಿ ಎಂಬ ಪ್ರಾಮಾಣಿಕ ಕಾಳಜಿಯಷ್ಟೇ ಇತ್ತು.


ಅದೃಷ್ಟಕ್ಕೆ ಕಳೆದ ಮಾಸಾರಂಭದಲ್ಲಿ ಪ್ರಕಟಿತ ಫಲಿತಾಂಶಗಳಲ್ಲಿ ನಾನು ಸೂಚಿಸಿದ್ದ ಪದಗಳು ಮೊದಲಸುತ್ತಿನಲ್ಲಿ ಜಯಿಸಿ ಆಯ್ಕೆ ಸುತ್ತಿಗೆ ಸೇರಿದ್ದು ಕಂಡು ಉಲ್ಲಸಿತನೂ ಆಗಿದ್ದೆ.ಮೊನ್ನೆ ಸೋಮವಾರ ಅಂದರೆ ೨೦ ದಶಂಬರ ೨೦೧೦ ರಂದು ವಿಪಿಎಲ್ ಬಳಗದ ಕಡೆಯಿಂದ ಬಂದ ದೂರವಾಣಿಕರೆ ವಿಜೇತರಲ್ಲಿ ನಾನೂ ಒಬ್ಬನೆಂದು ತಿಳಿಸಿದಾಗ ಸಹಜವಾಗಿ ಸಂತಸಗೊಂಡೆ.ಆದರೆ ಆಯ್ಕೆ ಪ್ರಕ್ರಿಯೆಯಲ್ಲಿ ತೀರ್ಪುಗಾರರಾದ ಮಾನ್ಯ ಚಂದ್ರಶೇಖರ ಪಾಟೀಲರು ಅನುಸರಿಸಿದ ಮಾನದಂಡಗಳನ್ನು ಬುಧವಾರ ಹಾಗು ಗುರುವಾರ ಅನುಕ್ರಮವಾಗಿ 'ಲವಲvk'ಯಲ್ಲಿ ಓದುತ್ತಿದ್ದಂತೆ ಆ ಸಂತಸದ ಬಲೂನಿಗೆ ಮುಳ್ಳು ಸೋಕಿಸಿದಂತಾಗಿ ಈಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕಾಗಿ ಪಶ್ಚಾತಾಪ ಪಡುತ್ತಿದ್ದೇನೆ.ಘನ ವಿದ್ವಾಂಸ ಪಾಟೀಲರ ಘನತೆಗೆ (ಯೋಗ್ಯತೆಗೆ!) ತಕ್ಕಂತೆ ಪರನಿಂದೆಗಳು,ವಿಷಯ ವ್ಯಾಪ್ತಿ ಹೊರತಾದ ವಸ್ತುನಿಷ್ಟತೆಯಿಲ್ಲದ ಸವಕಲು ಅಳತೆಗೋಲುಗಳು ಅಲ್ಲಿ ಕಂಡು ಕಂಗಾಲಾಗಿ ಕಡೆಗೆ ನನಗೆ ನಾನು ಇಷ್ಟನ್ನು ಮಾತ್ರ ಹೇಳಿಕೊಂಡೆ "ಒಂದುವೇಳೆ ಚಂದ್ರಶೇಖರ ಪಾಟೀಲರಂತಹ 'ವೃತ್ತಿ'ಕನ್ನಡ 'ಓ'ರಾಟಗಾರ ಈ ಸ್ಪರ್ಧೆಗೆ ತೀರ್ಪುಗಾರರಾಗಿರೋದು ಮೊದಲೆ ಅರಿವಿದ್ದಿದ್ದರೆ ಖಂಡಿತಕ್ಕೂ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ!" ಈಗಲೂ ಅಷ್ಟೆ ನಾನು ಸ್ಪರ್ಧೆಯಿಂದ ಹಿಂತೆಗೆದು ಕೊಳ್ಳುತ್ತಿದ್ದೇನೆ.ಹಾಗು ನೀವು ಬೆನ್ನುತಟ್ಟಿ ಕೊಡಮಾಡಿರುವ ಬಹುಮಾನವನ್ನ ನಮ್ರತೆಯಿಂದ ಹಿಂದಿರುಗಿಸ ಬಯಸುತ್ತೇನೆ.

ಈ ನಿರ್ಧಾರದ ಕಾರಣಗಳನ್ನು ಸಾದರ ಪಡಿಸಲು ಇಚ್ಛಿಸುತ್ತೇನೆ.ಮೊದಲನೆಯದಾಗಿ ಇದು ಕನ್ನಡ ಕಟ್ಟುವ ಕೆಲಸ ,ಆದರೆ ಅದರ ಮೂಲಭೂತ ಆಶಯಕ್ಕೆ ಪಾಟೀಲರು ಮಸಿ ಬಳಿದಿದ್ದಾರೆ.ಅವರ ತೀರ್ಪಿನ ಪ್ರಕಾರ 'ಲಿಫ್ಟು' 'ಬಸ್ಸು' 'ಕ್ರಿಕೆಟ್ಟು' 'ಬ್ಯಾಂಕು' 'ಫ್ಯಾಷನ್ನು' 'ಸೈಕಲ್ಲು' 'ಹ್ಯಾಂಡ್ಸ್ ಫ್ರೀ' 'ಬ್ಲಾಕ್ ಮೇಲ್' 'ಪ್ಲಾಸ್ಟಿಕ್' 'ಕಾಫಿ 'ಗ್ಯಾರೇಜ್' 'ರಾಕೆಟ್' 'ಸ್ಟೆತಾಸ್ಕೋಪ್' 'ಟರ್ನ್ ಕಿ' 'ಫೋಟೋಜೆನಿಕ್' 'ಫ್ಯಾಕ್ಸು' 'ಶೂ' 'ಬಲ್ಬು' ಇವೆಲ್ಲ ಇರಬೇಕಂತೆ! "ಸ್ವಾಮಿ ಪಾಟೀಲರೆ! ಇದಕ್ಕೆ ಪರ್ಯಾಯ ಸೂಚಿತವಾದವುಗಳನ್ನ ನೋಡಿ ಹೆಚ್ಚು ಸೂಕ್ತವಾದುದನ್ನು ಆಯ್ಕೆ ಮಾಡುವುದು ನಿಮ್ಮ ಹೊಣೆಯಾಗಿತ್ತೆ ಹೊರತು ನಿಮ್ಮ ಸ್ವ-ಅಭಿಪ್ರಾಯದ 'ಫಾತ್ವಾ'ವನ್ನ ಸ್ಪರ್ಧಾರ್ಥಿಗಳ ಮೇಲೆ ಹೇರೋದಲ್ಲ."ಆ ಸಾಹಿತಿ 'ವಿಧಾನಸೌಧಕ್ಕೆ' ಸೈಕಲ್ ಹೊಡೆದ!" ಎಂಬ ನಿಮ್ಮದೇ ವ್ಯಂಗ್ಯ ಧಾಟಿಯ ಉದಾಹಾರಣೆ ಬೇರೆ ಕೊಡ್ತೀರ! ನಿಮ್ಮ ವಯಸ್ಸಿಗೆ ( ವಯಸ್ಸಿಗೆ ಮಾತ್ರ!) ಕೊಡುತ್ತಿದ್ದ ಈವರೆಗಿನ ಮರ್ಯಾದೆಯನ್ನೂ ಮರೆತು ಹೇಳಬೇಕೆಂದಿದ್ದರೆ 'ಅದು ನಿಮ್ಮ ಸ್ವ-ಅನುಭವದ ಸ್ವಗತವ?'. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ದ್ವಿತಿಯ ಅವಧಿಗಾಗಿ ಹಾಗು ಕನ್ನಡ ಸಾಹಿತ್ಯ ಪರಿಷತ್ತಿನ ಗಾದಿಗಾಗಿ ನೀವು ಹೊಡೆದ ನಿಮ್ಮದೆ 'ಸೈಕಲ್ಲು' ಹಾಗು ಪರಿಷತ್ತಿನ ಚುನಾವಣೆಗಳಲ್ಲಿ ಅಧ್ಯಕ್ಷ ಪದವಿಗಾಗಿ ನೀವು ಮಾಡಿದ ಜಾತಿಯ 'ಬ್ಲಾಕ್ ಮೇಲ್'ಗಳಲ್ಲೆಲ್ಲ ನಮ್ಮಂತ ಹುಲುಮಾನವರ ಕಣ್ಣಿಗೆ ಕಾಣುತ್ತಿದ್ದುದು ಇದೇ ಸ್ವಾಮಿ.



ಇನ್ನು ಘನತೆವೆತ್ತ ಹಿರಿಯ,ವಯೋ ಹಾಗು ಜ್ಞಾನ ವೃದ್ಧ ಚಿದಾನಂದಮೂರ್ತಿಗಳ ವಿರುದ್ಧ ನೀವು ವ್ಯಥಾ ಬೀಸಿದ ವ್ಯಂಗ್ಯದ ಗದೆ. 'ಅಲ್ರಿ ಪಾಟೀಲರೆ! ಅವು ಈ ಸ್ಪರ್ಧೆಗೆ ಹೇಗೆ ಸಂಬಂಧಿಸಿವೆ? ಅವರು ಸ್ಥಿರವಾಣಿ ಹಾಗು ಚರವಾಣಿಗಳೆಂಬ ಪರ್ಯಾಯ ಪದಗಳನ್ನ ಸೂಚಿಸಿದರೆ ಕೈ ಎಟುಕದ ಕಡೆ ನಿಮಗ್ಯಾಕೆ ತುರಿಕೆ ಏಳುತ್ತದೆ? ಅಷ್ಟಕ್ಕೂ ಸ್ಪರ್ಧೆಯ ನೆಪದಲ್ಲಿ ನಾವೆಲ್ಲ ಸ್ಪರ್ಧಿಗಳು ಸೂಚಿಸಿರುವ ಉಳಿದೆಲ್ಲ ಪದಗಳಿಗಿಂತ ಅವೆ ಹೆಚ್ಚು ಸೂಕ್ತವೆಂಬ ಸತ್ಯ ಗೋಚರಿಸದಷ್ಟು ಹೊಟ್ಟೆಕಿಚ್ಚಿನ ಕುರುಡೆ ನಿಮ್ಮದು? ನಿಮ್ಮ ಚಿಲ್ಲರೆ ಸಾಹಿತ್ಯಿಕ ಜಗಳಗಳನ್ನೆಲ್ಲ (ವಾಸ್ತವವಾಗಿ ಅದು ಸಾಹಿತ್ಯಿಕವಾಗಿ ಕಡಿಮೆ,ನಿಮ್ಮ ವಯಕ್ತಿಕ ತೆವಲುಗಳೆ ನಿಮ್ಮೆಲ್ಲ ಜಗಳಗಳ ಮೂಲ) ಎಳೆದು ತಂದು ಸ್ಪರ್ಧೆಯ ಆಶಯಕ್ಕೆ ಮಸಿ ಬಳಿಯುವ ವಿಕೃತ ಮನಸೇಕೆ ಸ್ವಾಮಿ ನಿಮಗೆ?'

ಇಲ್ಲಿ ಕಳೆದೆರಡು ದಿನಗಳಿಂದ ಚೀರುವಯ್ಯನಾಗಿ ಚೀರುತ್ತಾ-ಸಾರುವಯ್ಯನಾಗಿ ಸಾರುತ್ತಾ ಮುಲ್ಲಾನಂತೆ 'ಫತ್ವಾ' ಹೊರಡಿಸಿದ್ದು ತಾವೆ ಹೊರತು ಇನ್ಯ್ಯಾರೂ ಅಲ್ಲ.ತನ್ನ ಸುಟ್ಟ ಸುಡುಗಾಡು ಜಾತಿಗಷ್ಟೆ 'ಜಗದ್ಗುರು'ವಾಗಿ ಮೆರೆಯುವ ಮೂರು ಕಾಸಿನ ಮಠಾಧಿಪತಿಗೂ ನಿಮಗೂ ಜಾಯಮಾನದಲ್ಲಿ ಚೂರೂ ವ್ಯತ್ಯಾಸವಿಲ್ಲ ಎಂಬುದು ಪುನಃ ಜಾಹೀರಾಗಿದೆಯಷ್ಟೆ. ಇನ್ನೊಂದು ವಿಷಯ :ನಾನಂತೂ ನಿಮ್ಮಂತೆ ಪೂರ್ವಾಗ್ರಹಪೀಡಿತನಲ್ಲ,ಹಾಗು ಕನ್ನಡ ನನಗೆ ಅವಕಾಶವಾದದ ಅಥವಾ ಅಧಿಕಾರದ ಅಥವಾ ಗೂಟದ ಕಾರಿನ ಸಂಪಾದನೆಯ ಸರಕೂ ಅಲ್ಲ.ಮತ್ತೊಂದು ಸಂಗತಿ ಸದಾ ನೆನಪಿನಲ್ಲಿಡಿ ವ್ಯಂಗ್ಯದ ಮದ್ದು ನಿಮಗೆ ಕಹಿ ಎಂದೆನಿಸುವಂತಿದ್ದರೆ ಬೇರೆಯವರಿಗೂ ಅದು ಹಾಗೆಯೆ ಇರುತ್ತದೆ.'ನಾಯಿ ಬಾಲ ಸದಾ ಡೊಂಕು' ಎಂಬ ಗಾದೆಯ ಸಂಪೂರ್ಣ ಅರಿವಿದ್ದರೂ ನಿಮಗೆ ಈ ಸಲಹೆ ಕೊಟ್ಟೆ.ಸ್ವೀಕರಿಸಿ ಬಿಡಿ ನನಗೇನೂ ಚಿಂತೆಯಿಲ್ಲ.ಕೊನೆಯದಾಗಿ,ಈ ಲೇಖನದಲ್ಲಿ ಬಳಸಿದ ಅಷ್ಟೂ ವ್ಯಂಗ್ಯ ಕೇವಲ ಪ್ರಾಸಂಗಿಕ ಹಾಗು ನಿಮ್ಮದೆ ರೀತಿಯಲ್ಲಿ ನಿಮಗೆ ತಿವಿದು ತೋರಿಸುವ ವಿಧಾನ.

No comments: