28 June 2011

ಪ್ರತಿ ನಡುಕದಲ್ಲೂ ನನಗೆ......

ನಿಟ್ಟುಸಿರು,ಹತಾಶೆ,ಮೌನ,ಕಂಬನಿ
ಇವೆಲ್ಲ ನಿತ್ಯದ ಸಂಗಾತಿಗಳು....
ನೀನಿದ್ದಾಗ ಇವೆಲ್ಲ ಪರಮ ವೈರಿಗಳಾಗಿದ್ದವು,
ಈಗ ಅನಿವಾರ್ಯ ಸ್ನೇಹ ಬೆಳೆದಿದೆ ಅವುಗಳ ಜೊತೆ/
ಒಬ್ಬನೆ ಹೇಗೊ ಇದ್ದೆ....
ಸುಖವಿತ್ತೋ ನೆಮ್ಮದಿಯಿತ್ತೋ ಗೊತ್ತಿಲ್ಲ ಬಾಳಲ್ಲಿ,
ನೀ ಬಂದೆ-ನೀ ಹೋದೆ....
ಅನಂತರದ ತುಮುಲವನ್ನ ಹೇಗೆ ತಾನೇ ಹೇಳಲಿ?//


ಮಳೆಯ ನಿರೀಕ್ಷೆಗೂ
ನಿನ್ನ ನಿರೀಕ್ಷೆಗೂ ಒಂದು ವ್ಯತ್ಯಾಸವಿದೆ....
ಮಳೆ ಬಂದರೂ ಬರಬಹುದು,
ಆದರೆ ನಿನ್ನದು ಖಾತ್ರಿಯಿಲ್ಲ/
ಮಾರ್ದವ ಮೌನ
ನನಗೋ ಯಾವಾಗಲೂ ನಿನ್ನದೇ ಧ್ಯಾನ....
ಕಾಲದ ಪರಿವೆಯೆ ನನಗಿಲ್ಲ,
ನೆನಪಿನ ನಾವೆಯಲ್ಲಿ ಕೈ ಹುಟ್ಟಿನಲ್ಲೆ ಹೊರಟಿದ್ದೇನಲ್ಲ ಒಂಟಿಪಯಣ//



ನನ್ನ ಕನಸಿನ ಬಳುವಳಿಗಳೆಲ್ಲ
ನೀನಿತ್ತು ಹೋಗಿರುವ ನೆನಪುಗಳಿಂದ ಸಮೃದ್ಧ...
ಚಳಿಗೆ ನವಿರಾಗಿ ನಡುಗಿದ ನನ್ನ ಒಳಮನ,
ನಿನ್ನ ನೆನಪುಗಳನ್ನೇ ಬೆಚ್ಚಗೆ ಹೊದ್ದುಕೊಂಡಿದೆ/
ಪ್ರತಿ ನಡುಕದಲ್ಲೂ ನನಗೆ
ಸಂತಸದ ಎಳೆಯೊಂದು ಗೋಚರಿಸಿತು,
ಸಣ್ಣ ಸದ್ದಿಗೂ ಕಂಪಿಸುವ ಮನಸಿನ ಬೆದರಿಕೆಗೆ
ಸಾಂತ್ವಾನ ನಿನ್ನ ನೆನಪುಗಳ ಅಪ್ಪುಗೆಯಲ್ಲಿದೆ//

ನಿನ್ನದೊಂದೇ ಒಂದು ನೆನಪು....

ಪಡುವಣ ಕಡಲಿಂದ ಬೀಸುವ ಗಾಳಿಯ ತುಂಬಾ
ಮಳೆಯ ಪಿಸುದನಿ,
ಮೋಡದ ತಾಳಕ್ಕೆ...
ನಾಚಿ ನೀರಾದ ನೆಲದ ಎದೆಯೊಳಗೂ ಮಳೆಯ ಇನಿದನಿ/
ಸಣ್ಣ ಕನವರಿಕೆಗೂ ಬೆಚ್ಚಿಬೀಳುತ್ತಾ
ಕುಮಟಿ ಬೆದರಿದ ನನ್ನ ಮುಗ್ಧ ಮನಸಿಗೆ,
ನಿನ್ನ ಕನಸು ಬಂದು ತಬ್ಬಿದಾಗ ಸ್ವಲ್ಪ ನೆಮ್ಮದಿ//



ಮಳೆ ಮೂಡಿಸಿದ ಗಾನದ ಆಲೆಗಳಲ್ಲಿ
ಮಿಂದ ನನ್ನ ಮನಸು ಮೌನಕ್ಕೆ ಶರಣಾಗಿ,
ನಿನ್ನ ನೆನಪಲ್ಲಿ ತೇಲುತ್ತ....
ನನ್ನವೆರಡು ಕಣ್ಣ ಹನಿಗಳ ಆ ಧಾರೆಗೆ ಸೇರಿಸಿದೆ/
ಸಂತಸದ ಪರಿಚಯವೆ ಮರೆತು ಹೋದ
ನನ್ನವೆರಡು ಕಂಗಳಲ್ಲಿ....
ಎಂದಾದರೊಮ್ಮೆ ಅಪರೂಪಕ್ಕೆ ಚೂರು ಮಿಂಚು ತುಂಬೋದು,
ನಿನ್ನದೊಂದೇ ಒಂದು ನೆನಪು//



ಸಂಜೆ ಸುರಿದ ಸೋನೆ ಮಳೆ...
ನನ್ನ ಬರಡು ಮನಸ ಮೇಲೆ,
ನಾಲ್ಕು ಹನಿಯ ಹನಿಸಿ...
ಸವಿ ನೆನಪುಗಳ ಬೀಜಗಳನ್ನೆಲ್ಲ
ಮತ್ತೆ ಮೊಳಕೆಯೊಡೆಸಿವೆ/
ಕೊನೆಯಾಗಲಾರದ ಗುರಿಸೇರಲಾರದ
ಕಡೆಯವರೆಗೂ ಹಸುರಾಗಿಯೇ ಇರುವ...
ಮಧುರ ಒಗಟು,
ಅದೇ ನಿನ್ನೆಡೆಗಿನ ನನ್ನ ಪ್ರೀತಿ//

14 June 2011

ನಿನ್ನುಸಿರ ಪರಿಮಳವೆ ಉಳಿದು ಹೋಗಿದೆ....

ಹೊಳೆವ ತಾರೆಗಳ ಸಾಲು....
ಚಂದಿರನ ಕಿವಿಯಲ್ಲಿ ಉಸುರಿದ ಗುಟ್ಟಿನಲ್ಲಿ ತುಸು ಪಾಲು,
ನನಗೂ ಬೇಕಿದೆ.....
ನಿನ್ನೊಂದಿಗೆ ಹಂಚಿಕೊಳ್ಳಲು/
ಸಾನಿಧ್ಯ ಸನಿಹ ನಿಕಟ ಒಡನಾಟ....
ಇವೆಲ್ಲ ತೀರದ ಆಸೆಗಳೆಂಬ ವಾಸ್ತವ ನನಗೂ ಅರ್ಥವಾಗಿದೆ,
ಆದರೆ ಒಟ್ಟಿಗೆ ಕಳೆದ ಕ್ಷಣಗಳನ್ನೆಲ್ಲ ಕೂಡಿಟ್ಟಿದ್ದೇನಲ್ಲ ಅದನ್ನು ಯಾರೂ ಕದಿಯಲಾರರು....
ಸ್ವತಹ ನೀನೂ ಸಹ!//


ನೆನಪುಗಳ ಮುತ್ತಿಟ್ಟ ಕನಸಿನ ಚಾದರದಂಚಿನಲ್ಲೆಲ್ಲ...
ನಿನ್ನುಸಿರ ಪರಿಮಳವೆ ಉಳಿದು ಹೋಗಿದೆ,
ಮನದ ಪಿಸು ನುಡಿಗಳೆಲ್ಲ ಒಂದಕ್ಕೊಂದು....
ತಮ್ಮಷ್ಟಕ್ಕೆ ತಾವೆ ಪೋಣಿಸಿಕೊಂಡು ಎದೆಯಾಳದ ಹಾಡಾದವು/
ಮನಸ ಆವರಿಸಿದ ನೆನ್ನೆಗಳಿಂದ....
ನೇಯ್ದ ಮಂದರಿಯಲ್ಲಿ ನಿನ್ನ ಕನವರಿಕೆಗಳೆ ಮೈ ತಬ್ಬಿವೆ,
ಕನಸ ಬೆಚ್ಚಗಿರಿಸಿದ ನೆನಪಿನ ಎಳೆಗಳ ಕಂಬಳಿಯಲ್ಲೂ....
ನಿನ್ನೆದೆ ಮಿಡಿತಗಳೆ ಹಬ್ಬಿವೆ//



ಗಾಳಿ ಸೋಕಿದ ಮೋಡದ ಒಡಲು...
ಭೋರ್ಗೆರೆದು ತುಂಬಿ ಧರಣಿಯ ಮಡಿಲು,
ಹನಿಸಿ ತನ್ನೆಲ್ಲ ಒಲವ....
ಮತ್ತೆ ಎಲ್ಲೆಡೆ ಮಳೆಯ ಮತ್ತನ್ನಾವರಿಸಿದೆ,ನೆಲದ ತುಟಿಗೆ ತಂಪುಧಾರೆಯ ಮುತ್ತನ್ನೇವರಿಸಿದೆ/
ಮತ್ತೆ ಇರುಳು...
ಮರಳಿದ ನಿನ್ನ ನೆನಪಿನ ನೆರಳು,
ನೇವರಿಸಿ ಸಾಗುವಾಗ ನಿನ್ನ ಕನಸು ನನ್ನ ಮುಂಗುರುಳು...
ನಾನು ಸಂತೃಪ್ತ//

ಇರುಳ ಕೊಳ್ಳುವ ಕನಸುಗಳು ಬೇಕು.....

ನೂರು ಭಾವಗಳ ತಡವಿದರೂ......
ಮೂಕ ಮನಸಿನ ಆಸೆಗಳಿಗೆ ಸೂಕ್ತ ವ್ಯಕ್ತ ಭಾಷೆ ಸಿಗದೆ ತಡವರಿಸುತ್ತಿದ್ದೇನೆ,
ಇದರಲ್ಲಿ ನಿನ್ನದೇನೂ ತಪ್ಪಿಲ್ಲ....
ನನ್ನೆಲ್ಲ ನೋವಿಗೆ ನನ್ನೊಳಗಿನ ದೋಷವೆ ಮೂಲ/
ಬೆಳಕು ತೊಳೆದ ಇಳೆಯ ಒಡಲ ತುಂಬಾ....
ನಾಳಿನ ಶುಭ್ರ ಕನಸುಗಳದ್ದೆ ಎಡೆಬಿಡದ ಜಾತ್ರೆ,
ಇರುಳಿನ ಕನಸುಗಳನ್ನೆಲ್ಲ ಮನಸಿನ ಚೌಕಟ್ಟಿಗೆ ಸೇರಿಸಿ....
ನೆಮ್ಮದಿಯ ಮೊಳೆಹೊಡೆದು ಎದೆಯ ಭಿತ್ತಿಯ ಮೇಲೆ ತೊಗು ಹಾಕಿದ್ದೆನಲ್ಲ,
ಅದರ ಗಾಜಿನಲ್ಲೂ ನಿನ್ನ ಪ್ರತಿಬಿಂಬವೇ ನನ್ನ ಕಾಡೋದ?//


ಮುತ್ತು ಸುರಿವ ಮೋಡಗಳ ಅಂಚಲಿ....
ಬಾನ ಮೂಲೆಯೊಂದರಿಂದ ಸುಳಿದು ಸೆಳೆವ ಮಿಂಚಲಿ,
ನನ್ನ ಕಾತರದ ಕಣ್ಣಿಗೆ....
ಕಾಣೋದು ಬರಿ ನೀನೆ/
ಎಲ್ಲಾ ಎರಡು ಕಣ್ಣೊಳಗೆ ಅಡಗಿವೆ....
ನೀನಿಲ್ಲದ ನೋವು ;ಆಗಾಗ ವಿಷಾದ ಉಮ್ಮಳಿಸಿ ಉಕ್ಕುವ ಕಂಬನಿಯ ಕಾವು,
ಈ ಕಂಗಳಲ್ಲೇ ಅಡಗಿವೆ.....
ಜೊತೆ ನೀನಿತ್ತಿದ್ದ ಅಷ್ಟೂ ನಿಂದನೆಯ ಪ್ರತಿಧ್ವನಿ//


ಮೌನದಲ್ಲಿ ಗುನುಗುವ ಎದೆಯೊಳಗಿನ ಇಂಪಾದ ಹಾಡು....
ನಟ್ಟಿರುಳಲ್ಲಿ ಹೊಳೆಯುತ್ತ ಮಿನುಗುವ ತಾರೆಯ ಹೊತ್ತ ಬಾನ ಮಾಡು,
ನಿನ್ನೊಲವೀಗ ನನ್ನ ಪಾಲಿಗೆ...ನೀನೂ ಆಲಿಸದಿದ್ದರೆ ಹೇಗೆ?
ಅದರಲ್ಲೇ ಬಿದ್ದ ನನ್ನೆದೆಯ ಪಾಡು/
ಇರುಳ ಕೊಳ್ಳುವ ಕನಸುಗಳು ಬೇಕು.....
ವಿರಹದ ನೆರಳ ಕೊಲ್ಲುವ ನಿನ್ನ ನೆನಪಿನ ಕಿರುಬೆಳಕಾದರೂ ಬೇಕೇಬೇಕು,
ಚೂರು ನನ್ನ ಪಾಲಿಗೆ....
ಚೂರು ನನ್ನ ಬಾಳಿಗೆ//


ಮತ್ತೆ ನೀ ಮರಳಿ ಬಂದಾಗ ನನ್ನಲ್ಲಿ ಪ್ರಶ್ನೆಗಳು ಬದುಕಿರೋದಿಲ್ಲ...
ಕಾತರ ಮಾತ್ರ ಉಳಿದ ಕಣ್ಣುಗಳಲ್ಲಿ ಉಳಿದಿರೋದು ನಿರೀಕ್ಷೆ ಮಾತ್ರ,
ಕೇವಲ ನಿನ್ನೊಲವಿನ ನಿರೀಕ್ಷೆ/
ಒಂಟಿತನ ಕಾಡುವ ಕ್ಷಣಗಳಲ್ಲಿ....
ಸಾಂತ್ವಾನಕ್ಕೆ ನಿನ್ನಾಸರೆಯೂ ಸಿಗದಾಗ,
ನಾನು ನನ್ನೊಳಗೆ ಗುನುಗುವ ಹಾಡಿದು
ಕೊನೆ ಉಸಿರಿರುವ ತನಕದ ನನ್ನ ಪಾಡಿದು//



ಮೋಡ ಮರೆಸಿದ ಬಾನಿನದ್ದು ಮಳೆಯ ಬಸಿರು ಹೊತ್ತ ಸಂಭ್ರಮ...
ನಿನ್ನ ನೆನಪಿನ ಹಸಿರು ನನ್ನೆದೆ ಹೊತ್ತಂತೆ ಅದೂನು,
ಮುಗಿಲು ಹನಿಸುವ ಪ್ರತಿಹನಿ ಮಳೆಯಲ್ಲೂ ನಿನ್ನ ನೆನಪಿನ ತಂಪಿದೆ...
ನೆಲ ಸೋಕುವ ಮಳೆಯ ಇನಿದನಿಯಲ್ಲೂ ಕೂಡ ನಿನ್ನೆದೆ ಮಿಡಿತದ ಇಂಪಿದೆ/
ಮುಗಿಲಿನಂತೆ ಮನದ ಮೇಲೂ ಆವರಿಸಿದೆ ಮೋಡದ ಕರಿಛಾಯೆ....
ಕಾಡುತಿದೆ ಮತ್ತೆ ಮೂಡಲಾರದ ನಿನ್ನೊಲವು,
ಅದಿನ್ನು ನನ್ನ ಪಾಲಿಗೆ ಬರಿ ಮಾಯೆ...
ಒಂಟಿತನ ಬರ್ಬರ ;ಅನಿವಾರ್ಯ ನನಗದು
ನಾನದರ ಮೇಲೆ ನಿರ್ಭರ//

ನನ್ನ ಕಾತರದ ಕಣ್ಣಿಗೆ....ಕಾಣೋದು ಬರಿ ನೀನೆ....

ಈ ಸಂಕಟಕ್ಕೆ ಕೊನೆಯಿಲ್ಲ...
ಒಡೆದ ಮನಸುಗಳ ಚೂರುಗಳನ್ನು ಮತ್ತೆ ಅಂಟಿಸುವ ಯಾವ ಬೆಸುಗೆಯೂ ಇಲ್ಲವಲ್ಲ!/
ಮೌನದ ಚಿಪ್ಪಲ್ಲಿ ಹುದುಗಿದ್ದರೂ ಮನಸೆಲ್ಲ ಖಾಲಿ ಖಾಲಿ,
ಇಂತಹ ಒಂದು ದುರ್ದಿನದ ನಿರೀಕ್ಷೆ ಖಂಡಿತ ನನಗಿರಲಿಲ್ಲ//


ಬೀಸುವ ಗಾಳಿಯಲ್ಲಿ ನಿನ್ನ ಬಿಸಿಯುಸಿರು.....
ಸಾಗುವ ಹಾದಿಯುದ್ದ ನಿನ್ನವೆ ಹೆಜ್ಜೆಗುರುತು,
ಬಾಳ ಪಯಣವೆಲ್ಲ ನಿನ್ನದೆ ಜೊತೆಯನ್ನು....
ನೀನಿಲ್ಲದಿದ್ದರೂ ಭ್ರಮಿಸುತ್ತೀನಲ್ಲ! ನಾನೆಂತ ಮರುಳ?/
ಸರಿದ ಪರದೆ ಇನ್ನಷ್ಟು ಕಾಲ ಹಾಗೆಯೆ ಇದ್ದಿದ್ದರೆ ಚೆನ್ನಾಗಿತ್ತು...
ಹಾಗಂತಾ ನಾನೂ ಏನು ಸುಭಗನಾಗಿಯೇ ಉಳಿಯುತ್ತಿರಲಿಲ್ಲ,
ಕುಡುಕನಾಗುತ್ತಿದ್ದೆ ;ಖಂಡಿತ ನಿದ್ದೆಯನ್ನೆ ಮರೆತು ನೀರವ ರಾತ್ರಿಗಳನ್ನೆಲ್ಲ ನರಕವಾಗಿಸಿಕೊಳ್ಳುತ್ತಿದ್ದೆ......
ಆದರೆ ಇನ್ನೂ ಕೊಂಚ ತಡವಾಗಿ!//


ಸದ್ದಿರದೆ ಸಂಭವಿಸುವ ಸಂಭ್ರಮದ ಸಿಡಿಲಿನಂತೆ....
ನೋವಿನ ಕರಿಯೆಲ್ಲವ ಮರೆಮಾಚುವ ಮಿಂಚಿನಂತೆ,
ನೆನಪಾಗಿ ಕಾಡುತ್ತಿದ್ದರೂ ;ನಿನ್ನಲ್ಲೂ ಒಂದು ಸವಿಯಿದೆ....
ನೀನಿಲ್ಲದ ಕಹಿಗೆ ಇದಕ್ಕಿಂತ ಹಿತವಾದ ಮದ್ದುಬೇಕ?/
ಕನಸಲ್ಲಿ ನಿತ್ಯ ಬಂದು ಕಾಡುವ ನೀನು....
ನನಸಲ್ಲಿ ನನ್ನಿಂದ ಬಲುದೂರ,
ನಿಜದಲ್ಲಿ ನನ್ನ ತಿರಸ್ಕರಿಸುವ ನಿನ್ನ ಮನ.....
ಕಲ್ಪನೆಯಲ್ಲಿ ಮಾತ್ರ ನನ್ನತ್ತ ಎಷ್ಟೊಂದು ಉದಾರ//

09 June 2011

ನಿನ್ನೊಲವಿನ ದೀಪ.....

ಉಸಿರು ಉಸುರುವ ಎದೆಯ ಗುಟ್ಟಿಗೆಲ್ಲ....
ಮನದ ಮೌನದ ಮೂಕಸಾಕ್ಷಿ ಮುಗುಳ್ನಗುತ್ತ ಒಪ್ಪಿಗೆಯ ಠಸ್ಸೆ ಒತ್ತುವ/
ಆ ಒಂದು ಕ್ಷಣಕ್ಕಾಗಿ ಹೀಗೆ ಕಾಯುತ್ತಲೇ,
ಇರೋದಕ್ಕೆ ನಾನು ಸದಾ ತಯಾರು...//


ಕೇಳಿಸದಷ್ಟು ದೂರ ನಿನ್ನ ಕಿವಿ....
ಕರೆಯಲಾಗದಷ್ಟು ಕ್ಷೀಣ ನನ್ನ ಧ್ವನಿಯಿದ್ದರೂನೂ
ಮನದ ಪಿಸು ಮಾತಿಗೆ,
ಅದನ್ನ ನಿನ್ನ ಎದೆಗೆ ದಾಟಿಸುವ ನನ್ನ ಪ್ರೀತಿಗೆ ಅದೆಲ್ಲ ಒಂದು ಅಡ್ಡಿಯೇ?/
ಪಾರಿಜಾತ ಸೂಸುವ ಸುಗಂಧದಂತೆ....
ನಿನ್ನ ನೆನಪು ನನ್ನೊಳಗೆ,
ಮರೆಯಲಾಗದ ಪರಿಮಳವನ್ನ ಅಲ್ಲಿ ಹಾಗೆಯೆ ಉಳಿಸಿಹೋಗಿದೆ//



ನಿನ್ನೊಲವಿನ ದೀಪ ತೇಲಿ ಬಿಟ್ಟ....
ಬಾಳಿನ ನದಿಯ ಒಡಲು ಬೇಸರದ ನಟ್ಟಿರುಳಲ್ಲೂ,
ನಿರೀಕ್ಷೆಯ ಬೆಳಕಿನ ಮಾಯಜಾಲವನ್ನೇ ನನ್ನೆದೆಯ ತೀರಕ್ಕೆ ಕಾಣುವಂತೆ ಮಾಡಿದೆ/
ನನ್ನೆದೆಯರಾಗಕ್ಕೆ ಮಾಧುರ್ಯ ತುಂಬಿದ್ದು,
ಬಾಳಿನ ಗೀತೆಯನ್ನ ಇನ್ನಷ್ಟು ಮೋಹಕವಾಗಿಯೂ ಹಾಡಬಹುದು ಎಂದು ತೋರಿಸಿ ಕೊಟ್ಟದ್ದು
ನನಗೆ ನೀನು...ಈಗ ನೀನಿಲ್ಲದೆ ಹೇಳು ನಾನೊಬ್ಬನೆ ಒಲವರಾಗವನ್ನ ಹೇಗೆತಾನೆ ಒಂಟಿ ದ್ವನಿಯಲ್ಲಿ ಇಂಪಾಗಿ ಹಾಡಿಯೇನು//



ನನ್ನೆದೆ ಬಿತ್ತರಿಸಿದ ಒಲವಿನ ವಾರ್ತೆಗಳು
ನಿನ್ನ ಕಿವಿ ಮುಟ್ಟುತಿವೆಯೋ ಇಲ್ಲವೋ ನನಗಂತೂ ಗೊತ್ತಿಲ್ಲ...
ಆದರೂ ಪ್ರೀತಿಯ ಮುಖ್ಯಾಂಶಗಳನ್ನ ನಿತ್ಯ ತಪ್ಪದೆ ಓದುವುದು,
ನನಗಂತೂ ರೂಢಿಯಾಗಿಹೋಗಿದೆ/
ಅದೆಷ್ಟೇ ನಿರ್ಲಿಪ್ತತೆ ನಟಿಸಿದರೂ
ನಾನು ನಿರಂತರ ನಿನ್ನ ಮೋಹಿ....
ನಿನ್ನ ಸಾನಿಧ್ಯಕ್ಕಾಗಿ ಬರಿಗಾಲಲ್ಲಿ ನೆನಪಿನ ಸಾಗರ ದಾಟಲು ಹೊರಟ ನಿರಂತರ ವ್ಯಾಮೋಹಿ,
ಹೊಸತೇನಿಲ್ಲ ನೆನಪುಗಳಲ್ಲ ಅವೆ ಹಳತು...
ಆದರೆ ನಿತ್ಯ ನಿಶಾರಾತ್ರಿಯಲ್ಲಿ ಕಾಡುವ ಅದರ ಹೊಳಪು ಮಾತ್ರ ಹೊಚ್ಚ ಹೊಸತು//

07 June 2011

ನೀ ಜೊತೆಯಿಲ್ಲದಿದ್ದರೇನು?

ನಿನ್ನೊಂದಿಗೆ ಬಾಳುವುದು,
ನೋವಿನ ಪ್ರವಾಹವನ್ನೆ ಮೈತುಂಬಿದ ಒಂಟಿತನವನ್ನ ಮೀರಿ....
ನಿನ್ನ ಕೈ ಹಿಡಿದು ಭದ್ರವಾಗಿ ಬಾಳಬವಣೆ ದಾಟುವುದು ಕೇವಲ ಕನಸಾಗಿರಲಿಲ್ಲ ನನ್ನ ಪಾಲಿಗೆ/
ಎದೆಯ ಕರೆಗೆ ಮನದ ಭಾವಗಳು ನೀಡದ ಉತ್ತರದ,
ನಿರೀಕ್ಷೆ ಕುಡಿದೀಪವನ್ನ ಎದೆಗೂಡಿನಲ್ಲಿ ಇರಿಸಿರುವ ನಾನು...
ನಿರಾಕರಣೆಯ ಗಾಳಿಗೆ ಅದು ಆರಿಹೋಗಲಾರದು ಎನ್ನುವ ಆಶಾವಾದಿ//



ನಿನ್ನೊಲವಿನ ಬಿಳಿ ಗುಲಾಬಿಗೆ ನಿತ್ಯ ನೆತ್ತರ ಕೆಂಪನ್ನ ನೇರ ಹೃದಯದಿಂದಲೆ....
ತುಂಬುತ್ತಾ ಕಾತರಿಸುವ ಕೋಗಿಲೆ ನಾನು,
ನನ್ನ ಒಂಟಿತನವನ್ನ ಅಳಿಸುವುದು ನಿನ್ನ ನೆನಪಿನ ಹಸಿರೆ ಅಲ್ಲವೇನು?/
ನನ್ನ ಮರೆತು ನಿನಗೆ ಇರಲಾದರೂ ಹೇಗೆ ಸಾಧ್ಯ?
ನಿನ್ನ ಹೊರತು ಅರೆಕ್ಷಣವೂ ನನಗೆ ಬಾಳು ದುಃಸ್ವಪ್ನವಾಗಿರುವಾಗ?,
ನೆನಪಿಸಿಕೊಳ್ಳದೆಯೂ ನನ್ನನು ಬದುಕ ಕಟ್ಟಿಕೊಳ್ಳಲು ಮನಸಾದರೂ ಹೇಗೆ ಬಂದೀತು ನಿನಗೆ?...
ಇಲ್ಲಿ ನಿನ್ನ ನೆನಪಿಲ್ಲದ ಬಾಳಿನ ಛಾಯೆಯಿಂದಲೂ ನಾ ದೂರ ಸರಿವಾಗ?//


ಅಕ್ಕರೆ ಹೊತ್ತು ಮೇಘ ಎರೆವ ಮಳೆಯ ಋಣಕೆ
ಇಳೆಯ ಕೃತಜ್ಞತೆ ಬಹಳ ಕ್ಷೀಣ...
ಮರೆಯಲಾದೀತೆ ಮುಗಿಲ ಒಲವು,
ಊಹಿಸಲಸಾಧ್ಯ ನೆಲದೊಡಲಿಗೆ ಅದಿಳಿಯದ ಒಂದೇ ಒಂದು ಕ್ಷಣ/
ಪಡುವಣದ ಕಡಲ ಸೋಕಿ ಬೀಸಿದ ಗಾಳಿಯಲ್ಲೆಲ್ಲ,
ನಿನ್ನ ಮೈಗಂಧದ ನೆನಪು...
ಹಗಲಲ್ಲಿ ಬೆಚ್ಚಗೆ ತೋಯಿಸುವ ಬಿಸಿಲಿನಲ್ಲೂ
ನಿನ್ನೆದೆ ನೆನಪಿಸುವ ಕಾವು..//



ಬಾನಿನ ಮೋಹ ಕಳಚಿ ಭುವಿಗಿಳಿದ ಮೋಡ,
ಹೊತ್ತ ತಂದಿದೆ ಪ್ರೀತಿ ಹನಿಗಳ ತಂಪನ್ನೂ ತನ್ನ ಕೂಡ/
ನೆಲಕ್ಕೆ ಒಲವಿನಲ್ಲಿ ನೆನೆದೆದ್ದ ಖುಷಿ,
ಆವರಿಸಿದ್ದ ಸಂತಸದ ನೆನಪು ಭೂಮಿಯೆದೆಯಲ್ಲಿ ಸದಾ ಹಸಿ//


ಮನಸಿನ ಭಾವಗಳಿಗೆಲ್ಲ ತೊಡಿಸಿ ಮಾತಿನ ಚೌಕಟ್ಟು,
ನನ್ನೆದೆಯ ಭಾರವನ್ನೆಲ್ಲ ನಿನ್ನ ಹೃದಯಕ್ಕಿಳಿಸುವ ಹುನ್ನಾರವೆ...
ನನ್ನೀ ಕವನದ ಕನವರಿಕೆ/
ಆದರೂ ಬಾಳ ಹಾಡಿನ ಇಂಪಿಗೆ ಇನಿತೂ ಕೊರತೆಯಿಲ್ಲ,
ನೀ ಜೊತೆಯಿಲ್ಲದಿದ್ದರೇನು?
ಎದೆ ಶ್ರುತಿಪೆಟ್ಟಿಗೆಯಲ್ಲಿ ನಿನ್ನ ನೆನಪಿದೆಯಲ್ಲ//


ಬದುಕು ಅರಿವಿಲ್ಲದೆ ನಮಗೆ ದಕ್ಕಿದ ಒಂದು ಸುಂದರ ಹಾಡು....
ನಿನ್ನ ಸಾಂಗತ್ಯವೂ ದೊರೆತಿದ್ದರೆ ಅದರ ರಾಗವನ್ನ ವಿಸ್ತರಿಸಿ ಸಾಗಬಹುದಿತ್ತು ನಾವು,
ಮೂಡಿಸುತ್ತ ನಮ್ಮದೆ ಹೊಸ ಜಾಡು/
ಭೂಮಿಯ ಮೈಗಂಧದ ನಶೆಗೆ,
ಮೋಹಕತೆಗೆ ಮನಸೋತ ಮೋಡ ತನ್ನೊಳಗಿನ ಒಲವನ್ನೆಲ್ಲ...
ಮಳೆಯಾಗಿಸಿ ಎಡೆಬಿಡದೆ ಸುರಿದು ತಾನೆ ಮುದಗೊಂಡಿತು//


ಖಾಲಿ ಹಾಳೆಯ ಮೇಲೆ ಬರೆದ ಕೆಲವು ಪದಗಳಲ್ಲಿ,
ಮೋಡಗಳ ಮಣಿಮಾಲೆ ಕರೆದು ಸುರಿದ ಹನಿಗಳಲ್ಲಿ/
ತಂಪು ಚೆಲ್ಲಿದ ಬೆಳದಿಂಗಳಲ್ಲಿ,
ಮುಗಿಲಧಾರೆಗೆ ನೆನೆದ ಇಳೆಯೆದೆಯ ಕಂಪಲಿ....ನನಗೆ ನಿನ್ನದೆ ಕನವರಿಕೆ//

ಸ್ವಲ್ಪ ಸಾಲ,ಸ್ವಲ್ಪ ನೀಲ?!

ನಿನ್ನ ಕಂದು ಕಂಗಳೊಳಗೆ ಅಡಗಿದ್ದ ತುಂಟ ನೋಟ...
ನಿನಗಷ್ಟೆ ವಿಶೇಷವಾದ ನಿನ್ನ ನಿಲುವಿನ ಮಾಟ/
ನನ್ನೊಳಗಿನ ಅಪೇಕ್ಷೆಗಳಿಗೆ ಮಾತಿನ ಮೂರ್ತರೂಪ ಕೊಟ್ಟು,
ಈ ಎರಡು ಸಾಲುಗಳನ್ನ ನನ್ನಿಂದಗೀಚಿಸಿದೆ....ಒಳಗೊಳಗೇ ನನ್ನ ನಾಚಿಸಿದೆ//

ಕಾಲ ಕಾಯಿಸಿದ,
ನನ್ನ ಸಹನೆಯನ್ನು ಸತಾಯಿಸಿದ ಒಲವಿನ ನಿರೀಕ್ಷೆಯ ಹಾಡಿಗೆ/
ಮನಸು ಪೋಣಿಸಿದ ರಾಗ,
ವಿಷಾದವೋ-ಸಂತಸವೋ ವಿಪರೀತ ಗೊಂದಲ ಕಾಡುತ್ತಿದೆ//


ಮನಸನ್ನೂ ಹುಚ್ಚೆಬ್ಬಿಸಿ,
ಎದೆಯಂಚನೂ ಹಳೆನೆನಪುಗಳ ಕೆದಕಿ ಒದ್ದೆಯಾಗಿಸಿದ ಮೊದಲಮಳೆ/
ಇನ್ನೊಮ್ಮೆ ನಾನು ಕಳೆದುಹೋದ ಆ ಸವಿನೆನಪುಗಳ ಧಾರೆಯಲ್ಲಿ ಮೀಯಬೇಕು,
ಮನಸಾರೆ ಬಿಕ್ಕಿ ಬಿಕ್ಕಿ ಅಳಬೇಕು....ತಪ್ಪದೆ ಇಂದಿನಂತೆ ಖಂಡಿತ ಬರುತ್ತೀಯಲ್ಲ ನಾಳೆ?//


ಮೋಡ ಗೀಚಿ ಮಳೆ ಹಾಡಿದ್ದ ಹನಿಗಳ ಹಾಡಿನಲ್ಲಿ,
ನಿನ್ನ ಗುಂಗಲೆ ಸದಾ ಮಗ್ನ ನನ್ನ ಮನಸಿಗೆ/
ಕೇಳಿ ಬಂದದ್ದು....
ನನ್ನವೆರಡು ಕಿವಿಗಳ ತುಂಬಿದ್ದು,
ಕೇವಲ ನಿನ್ನೆದೆಯ ಸುನಾದ//


ಹಾಗೇನೂ ಬದುಕ ಜೊತೆ ನಾನು ಒಪ್ಪಂದ ಮಾಡಿಕೊಂಡಿರಲಿಲ್ಲ,
ನೀನಿಲ್ಲದೆ ಬಾಳುವ ಇರಾದೆಯೆ ನನಗಿರಲಿಲ್ಲ/
ನಿನ್ನೆದೆ ಆಸರೆಯಲ್ಲಿ ಹಚ್ಚಗೆ,
ನಿನ್ನ ಕನಸುಗಳ ಛಾವಣಿಯಡಿ ಬೆಚ್ಚಗೆ ಬಾಳುವ ಕನಸನಷ್ಟೆ ಎದೆಯ ತುಂಬ ಕಟ್ಟಿಕೊಂಡಿದ್ದೆ ನಾನು//