01 July 2011

ಮೌನಕ್ಕೂ ನಿಲುಕದು...ಒಲವಿದು

ಕಾಲದ ಚಕ್ರಕ್ಕೆ ತಡೆಯಿಲ್ಲ
ಅದರ ವೇಗವ ತಡೆಯೋರಿಲ್ಲ....
ಆದರೂ ನಿನ್ನೊಲವ ಕನವರಿಕೆಯಲ್ಲಿ,
ನಾನು ಕಾಲಾತೀತನಾಗಿ ಉಳಿದಿದ್ದೇನೆ!/
ಇನ್ನೆಲ್ಲೂ ಕಾಣದೆ ಹೋದ ಸಾಂತ್ವಾನ,
ನಿನ್ನ ಕಂಗಳು ಸೂಸಿದ ಕ್ಷಣ ನಾನು ನಿನ್ನೊಲವಿಗೆ ಮರುಳಾದೆ...
ಸೋಕಿದ ಉಸಿರು ನೆನಪಿದೆ
ತಾಕಿದ ಕಿರುಬೆರಳ ಸ್ಪರ್ಶವೂ ಸಹ...
ನಿನ್ನೊಂದು ಕಣ್ಣ ಸನ್ನೆಗೆ ನಾನು ಸದಾ ತಹತಹ//



ಮಾತು ಸಾಲದು
ಮೌನಕ್ಕೂ ನಿಲುಕದು...ಒಲವಿದು
ನಿನ್ನ ಹೊರತು ಇನ್ಯಾರಿಗೂ ಅರ್ಥವಾಗಲಾರದು,
ನಿನ್ನ ಕಣ್ಣು ಬಿತ್ತಿದ್ದ ಕನಸು
ನನ್ನೆದೆಯ ಬರಡು ಬಂಜರಲ್ಲೂ,
ನಿರೀಕ್ಷೆಗಳ ಹಸಿರ ಕುಡಿ ಚಿಗುರಿಸಿ....
ನನ್ನ ಬಾಳನ್ನೆಲ್ಲ ತಂಪಾಗಿಸಿದೆ/
ನಿನ್ನುಸಿರ ಗಾಳಿ ನನ್ನೆದೆಯ ಕೊಳವ ಸೋಕಿ
ನನ್ನೊಳಗಿನ ಭಾವಗಳ ತೆರೆಗಳ ತಾಕಿ,
ಸಂತಸದ ಅಲೆಗಳ ಉಂಗುರವ
ನನ್ನ ಮನದಾಳದಲ್ಲಿ ಮೂಡಿಸಿದೆ//



ಬತ್ತಿದ ಕಣ್ಣಿನ ಕಾಲುವೆಯನ್ನ
ಒಲವ ಪ್ರವಾಹದಿಂದ ಮುಳುಗಿಸಿ,
ನನ್ನನ್ನು ನಿನ್ನ ಪ್ರೀತಿಪೀಡಿತನನ್ನಾಗಿ ಆಗಾಗ ಕಾಡುತ್ತಿರು....
ನನ್ನೆದೆಯ ನದಿಯಾಗಿ ನಾದ ಹೊಮ್ಮಿಸುತ್ತ
ನಿರಂತರ ನೀನೋಡುತ್ತಿರು/
ನಿನ್ನೊಂದು ನಗುವಿಗೆ ಸೋತ
ಮನಸಿಗೆ ನಿನ್ನೊಲವಲ್ಲೆ ಗೆಲುವ ತೀರ ಸೇರುವಾಸೆ...
ಸೂಸಿದ ದ್ವೇಷವೆಲ್ಲ ಕೇವಲ ಕೃತಕ,
ನೀ ತೋರಿದ ಅನಾದರವೆಲ್ಲ ಕೇವಲ ನಾಟಕ....
ಅಷ್ಟಕ್ಕೂ ನನ್ನಿಂದ ಆದ ತಪ್ಪಾದರೂ ಏನು?//



ಸರಿವ ಕಾಲದ ಅಂಗಿಯ ಚುಂಗು ಹಿಡಿದು
ನೀ ನಡೆವ ಹಾದಿಯಲ್ಲಿ ಹೆಜ್ಜೆ ಹಾಕುವ....
ನನ್ನ ಕನಸಿಗೆ ಇನ್ನೂ ಹದಿಹರೆಯ/
ನಿತ್ಯ ನಸುಕಲ್ಲಿ ನಿನ್ನುಸಿರ ಕನವರಿಕೆ
ಇರುಳ ತುಂಬೆಲ್ಲ ನಿನ್ನ ಕನಸ ಕಾತರಕೆ...
ಕಾದು ಬಸವಳಿದ ನನ್ನ ಮನಸಿಗೆ,
ನೆನಪಿನ ನಾವೆಯಲ್ಲಿ ತೇಲೋದರಲ್ಲಿಯೇ....
ಅದೇನೂ ಅಪರಿಮಿತ ಸುಖ//


ಮೌನದ ಅನ್ವೇಷಣೆ ನಿರಂತರ ಜಾರಿಯಲ್ಲಿದೆ...
ಗದ್ದಲದ ಬಾಳ ಸಂತೆಯಲ್ಲಿ ನೆಮ್ಮದಿಯ ಹುಡುಕಾಟ
ಅವಿರತವಾಗಿದೆ/
ಬಚ್ಚಿಟ್ಟುಕೊ ನಿನ್ನ ಮನದ ಒಳಮನೆಯಲ್ಲಿ ನನ್ನ
ಮುಚ್ಚಿಟ್ಟುಕೂ....
ಎದೆಯಾಳದಲ್ಲಿ ನನ್ನೆಲ್ಲ ಕನಸುಗಳ ಕಟ್ಟಿಟ್ಟ ಕಂತೆಯನ್ನ//

No comments: