07 July 2011

ಕನಸಾಗಿಯೆ ಉಳಿದು ಹೋಗಿದೆ....

ನೀನೆ ನನ್ನ ಪ್ರಾರ್ಥನೆಗಳಲ್ಲಿ....
ನೀನೇನೆ ನನ್ನುಸಿರಲ್ಲಿ ಆಡುವ ಗಾಳಿಯ ಆವರ್ತನೆಗಳಲ್ಲಿ,
ನಿತ್ಯ ಕಣ್ಣಕನ್ನಡಿಯಲ್ಲಿ ಕಾಣುತ್ತ ನಿನ್ನ ಬಿಂಬ....
ನನ್ನ ವಿಳಾಸವನ್ನ ನಿನ್ನೆದೆಯಲ್ಲಿ ನವೀಕರಿಸುತ್ತಿದ್ದೇನೆ/
ಸಾಕ್ಷಿಗಳನ್ನ ಹನಿದುಂಬಿದ ನನ್ನ ಕಣ್ಣಂಚಲಿ ಹುಡುಕಬಹುದು...
ನನ್ನೆದೆಯ ನೋವುಗಳನ್ನ
ಅದರ ಮಿಡಿತದಲ್ಲಿಯೆ ಅರಿಯಬಹುದು,
ಇನ್ನೆಲ್ಲರಿಂದಲೂ ಮರೆಮಾಚಿ ಮೌನದಲ್ಲಿ...
ನಾನಡಗಿಸಿಟ್ಟ ವಿಷಾದಗಳನ್ನೆಲ್ಲ
ನೀ ನನ್ನ ನಿಟ್ಟುಸಿರುಗಳಲ್ಲಿ ಕಿವಿಗೊಡಬಹುದು//



ಮೋಡದಲ್ಲಿ ಜೊತೆಜೊತೆಯಾಗಿ ನಾಲ್ಕು ಹೆಜ್ಜೆ ಹಾಕಿ...
ಮುಂಗಾರಿನ ಮಿಂಚ ಅಂಚನ್ನ ತಾಕಿ,
ಮಳೆಯ ಮೂರೆ-ಮೂರು ಹನಿಗಳಲ್ಲಿ ನಿನ್ನೊಂದಿಗೆ ಕೈಕೈಹಿಡಿದು
ತೋಯುವ ನನ್ನ ಕನಸು....
ಕನಸಾಗಿಯೆ ಉಳಿದು ಹೋಗಿದೆ/
ಮುಂಜಾನೆಯ ಮೊಗ್ಗು ಹಗಲ ಹೂವಾಗಿ ಅರಳುವಾಗ...
ಜೊತೆಗಿಷ್ಟು ನಿನ್ನ ನಗೆ ಮಲ್ಲಿಗೆಯೂ
ಬೆರೆತಿದ್ದರೆ ಸೊಗಸಾಗಿರುತ್ತಿತ್ತು//


ಮೋಡ ಮರೆಮಾಚಿದ ನೀಲ ಬಾನು....
ಮುಂಜಾವಲ್ಲಿ ನಾಚಿ ಕೆಂಪಾಗಿತ್ತೇನು?/
ಶಶಿಯ ಚೇಷ್ಟೆಯೊ? ಇಲ್ಲ,
ರವಿಯ ರಗಳೆಯೊ?
ಅಸಲು ಅದಕ್ಕೆ ಕಾರಣವಾದರೂ ಏನು?//

No comments: