ಮೌನಕ್ಕೆ ಜಾರಿದ
ಮಾತುಗಳಿಲ್ಲದ ಇರುಳ ಮೋಹಕತೆಗೆ.....
ಮನಸೋತ ಮನಸಿನಾಳದಲ್ಲಿ ನಿನ್ನೊಂದಿಗೆ
ಆಡಿ ಮುಗಿಸಿರುವ ನುಡಿಗಳ ಮುತ್ತುಗಳೆ ತುಂಬಿವೆ,
ನಿನ್ನೆದೆಯ ಋಣ ನನ್ನ ಮನಸೊಳಗೆ
ಒಲವ ಕೃತಜ್ಞತೆಯನ್ನ ಉಕ್ಕಿ ಹರಿಸಿದೆ/
ಇರುಳ ಮೋಹಕತೆಗೆ ಮನಸೋತ ಮನಸು
ಹಣೆದಿದ್ದ ಕನಸುಗಳಲ್ಲೆಲ್ಲ ನಿನ್ನದೆ ಕಂಪನ್ನ ಗಾಳಿ ಬಳಿದಂತೆ
ನನ್ನೆಲ್ಲ ಭಾವಗಳು ನಿನ್ನುಸಿರ ಮಳೆಯಲ್ಲಿ ತೊಯ್ದಂತೆ...
ಭ್ರಮೆಯಲ್ಲಿ ತೇಲಿದೆ ನನ್ನೆದೆಯ ಭಾವಗಳು//
ದಾಸವಾಳದ ಹೂವ ಒಡಲು ಹೊಕ್ಕ
ಜೇನುದುಂಬಿಯ ಹಾಗಾಗಿದೆ ನನಗೆ...
ನಿನ್ನ ಎದೆಯಾಳದಲ್ಲಿ ಅದೆಷ್ಟು ಒಲವಿನ ಭಂಡಾರವಿತ್ತಲ್ಲ,
ಮನಸ ತೆರೆದು ತೋರಲಾರೆ
ಕನಸಿನಾಳಕ್ಕೆ ನಿನ್ನ ಕೈಹಿಡಿದು ಕರೆದೊಯ್ಯಲಾರೆ....
ನನ್ನೊಲವು ಎದೆಯೊಳಗೆ ಬೆಚ್ಚಗಿದೆ
ವಿವರಣೆಗೆ ಪದಗಳಿಲ್ಲದ್ದಿದ್ದರೂನೂ/
ಕಣ್ಣಕನ್ನಡಿಯಲ್ಲಿ ಪ್ರತಿ ಫಲಿಸುವ ನಿನ್ನ ಬಿಂಬಕ್ಕೆ
ಒಂದು ಕನಸಿನ ಚೌಕಟ್ಟು ಹಾಕಲಾಗುವಂತಿದ್ದರೆ!
ನನ್ನೆದೆಯ ಒಳ ಮನೆಯಲ್ಲೆ ನಿನ್ನ ಚಿತ್ರವ ಕಾಪಿಡುತ್ತಿದ್ದೆ,
ಸಂಭ್ರಮವನ್ನೆಲ್ಲ ಮಾರುವ ಸಂತೆಯೊಂದು ಇದ್ದಿದ್ದರೆ
ಅಲ್ಲೆ ಮೂಲೆಯಲ್ಲಿ ಸಂಕಟಗಳನ್ನೂ ಕೊಳ್ಳುವ ರದ್ದಿ ಅಂಗಡಿಯ ಯಾರಾದರೂ ತೆರೆದಿದ್ದರೆ,
ಯಥೇಚ್ಛವಾಗಿರುವ ನನ್ನೆಲ್ಲ ನೋವುಗಳನ್ನ ಅಲ್ಲಿ ಸಿಕ್ಕಷ್ಟು ಬೆಲೆಗೆ ಬಿಕರಿಗಿಡುತ್ತಿದ್ದೆ...
ಅದೇ ದುಡ್ಡಲ್ಲಿ ಒಂದಿಷ್ಟು ಖುಷಿಗಳ ಕೊಂಡುತಂದು ನಿನ್ನೆದುರು ಸುರಿಯುತ್ತಿದ್ದೆ//
ಮನಸ ಅರಳಿಸೋ ಹಾದಿಯ
ಮೌನ ಕರಗಿಸೊ ದಾರಿಯ....
ಕಳೆದುಕೊಂಡು ದಿಕ್ಕು ತಪ್ಪಿದ ನನಗೆ,
ನಿನ್ನ ಜೊತೆ ಕಳಚಿ ಹೋದ ನಂತರ ರೆಕ್ಕೆ ಮುರಿದ ಹಕ್ಕಿಯಂತಾಗಿದ್ದೇನೆ/
ಸಂಜೆಗಪ್ಪಿನ ಮತ್ತಲ್ಲಿ ಮನಸು
ನಿನ್ನೆದೆಯ ಜಾಡಿಗೆ ಮತ್ತೆ ಹೊರಳಿದೆ...
ನಾವಿಬ್ಬರೂ ಜೊತೆಯಾಗಿ ಕಳೆದಿದ್ದ ಕ್ಷಣಗಳ ಹಿತವಾದ ಕನವರಿಕೆಗೆ,
ಮುದುಡಿದ್ದ ನನ್ನ ತುಟಿಗಳ ಅಂಚಲೂ ಮುಗುಳ್ನಗುವರಳಿಸಿದೆ//
ನೆನಪಿನ ಕಂಬಳಿ ಹೊದ್ದ
ಬಣ್ಣದ ಕನಸುಗಳಿಗೆ ಇರುಳೆಲ್ಲ ಸವಿನಿದ್ದೆ...
ಮನಸು ಕನಸ ಕಿವಿಯಲ್ಲಿ ಉಸುರಿದ ಗುಟ್ಟನ್ನೆಲ್ಲ,
ಸನಿಹವೆ ಸುಳಿಯುತ್ತಿದ್ದ ತಣ್ಣನೆ ಗಾಳಿ ಕದ್ದು ಕೇಳಿಸಿಕೊಂಡಿತು..!/
ಹಗಲು ಹುಟ್ಟಿದ ಕ್ಷಣ
ಇರುಳು ಕಣ್ಮುಚ್ಚಿದ ಮುಂಬೆಳಕಲ್ಲಿ ಬೀಳುವ ಕನಸೆಲ್ಲ ಸಾಕಾರವಾಗುತ್ತವಂತೆ ನಿಜಾನ?
ಹಾಗಿದ್ದಲ್ಲಿ ನೀನು ಮರಳಿ ಬರಬೇಕಿತ್ತಲ್ಲ?,
ನನ್ನ ಮುಂಗುರುಳ ನೇವರಿಸಿ ಹಣೆಗೆ ಮುತ್ತಿಡಬೇಕಿತ್ತಲ್ಲ?
ನಾನು ಕನಸಲ್ಲಿ ಕಂಡದ್ದು ಇದನ್ನೆ ತಾನೇ//
10 July 2011
Subscribe to:
Post Comments (Atom)
No comments:
Post a Comment