11 October 2014

ಪ್ರಧಾನಿಯವರ ಬಡಾಯಿಯೂ, ನಮ್ಮ ನಿಮ್ಮಂತವರ ಉತ್ತಮ ನಾಳೆಗಳಿಗಾಗಿನ ನಿರಂತರ ಲಡಾಯಿಯೂ......




.

( ಗೆಳೆಯ ಗಣಪತಿ ನನ್ನ ಹಿಂದಿನ ಲೇಖನವೊಂದಕ್ಕೆ ಎತ್ತಿದ್ದ ಆಕ್ಷೇಪಗಳಿಗೆ ನನ್ನ ಗ್ರಹಿಕೆಯ ಮಿತಿಯಲ್ಲಿ ಕೊಟ್ಟ ಉತ್ತರ.)

ಗಣಪತಿ, ನಿಮ್ಮ ಪ್ರತಿಕ್ರಿಯೆಗೆ ಇಷ್ಟು ತಡವಾಗಿ ಉತ್ತರ ಹೇಳುತ್ತಿರೋದಕ್ಕೆ ಮೊದಲಿಗೆ ವಿಷಾದ ವ್ಯಕ್ತ ಪಡಿಸುತ್ತಿದ್ದೇನೆ. ನೀವು ಎತ್ತಿರುವ ಆಕ್ಷೇಪದ ಹರಿವು ವಿಶಾಲವಾಗಿ ಉತ್ತರಿಸುವಷ್ಟಿದ್ದರೂ ಸಹ ನಾನು ಆ ಗೋಜಿಗೆ ಹೋಗದೆ ನಿಮ್ಮ ಹಾಗೆ ಕ್ರಮಾಂಕಗಳಲ್ಲಿ ಕೇಳಿದಷ್ಟಕ್ಕೆ ಮಾತ್ರ ನನ್ನ ಕೈಲಾದಷ್ಟು ಚುಟುಕಾಗಿ ಉತ್ತರಿಸಲು ಪ್ರಯತ್ನಿಸಿದ್ದೇನೆ.

೧) ನೀವು ಮೊದಲೆ ಅಂದಂತೆ ನಿಮಗೆ ನನ್ನ ಬರಹದಲ್ಲಿನ ಕೆಲವು ಉಪಮೆಗಳ ಬಗ್ಗೆ ಆಕ್ಷೇಪವಿದೆ. ಒಪ್ಪಿದೆ, ಅನಗತ್ಯವಾಗಿ ಅವಹೇಳನಕಾರಿ ಪದದ ಬಳಕೆ ಶಿಷ್ಟ ಪತ್ರಿಕೋದ್ಯಮದ ಕ್ರಮವಲ್ಲ ಹಾಗೂ ಅದು ಮೂಲದಲ್ಲಿ ಪತ್ರಿಕಾ ಧರ್ಮವೂ ಅಲ್ಲ. ಆದರೆ ವಿವೇಚನೆ ಇಲ್ಲದೆ ಕೂಗುಮಾರಿಗಳಂತೆ ವರ್ತಿಸುತ್ತಾ ೨೪*೭ ಪೀಡೆಗಳಾಗಿರುವ ವಾರ್ತಾವಾಹಿನಿಗಳ ಬಗ್ಗೆ, ಅದರಲ್ಲೂ ಕನ್ನಡ ವಾರ್ತಾವಾಹಿನಿಗಳೆಂಬ ಸುದ್ದಿಯನ್ನ ಬಿಕರಿಗಿಟ್ಟಿರುವವರ ಅಡ್ಡೆಗಳ ಬಗ್ಗೆ ಅಂದು ಬರೆದಾಗ ನಿಮ್ಮ ಆಕ್ಷೇಪ ಎದ್ದಿರುವ 'ಬಿಕನಾಸಿ' ತರಹದ ಪದಗಳ ಬಳಕೆ ಮಾಡಿದ ಬಗ್ಗೆ ನನಗೂ ಬೇಸರವಿದೆ. ಏಕೆಂದರೆ ಅದಕ್ಕಿಂತ ಕೆಳ ಮಟ್ಟದ ಪದವನ್ನ ನಾನು ನ್ಯಾಯವಾಗಿ ಬಳಸಬೇಕಿತ್ತು. ಆದರೆ ಆ ಕ್ಷಣಕ್ಕೆ ನನಗೆ ಅಂತಹವ್ಯಾವುವೂ ಹೊಳೆಯಲಿಲ್ಲ ಎನ್ನುವುದಕ್ಕೆ ನಾಚಿಕೆ ಪಡುತ್ತೇನೆ! ನನ್ನ ಈ ಸಿಟ್ಟಿಗೆ ಅನೇಕ ಸಕಾರಣಗಳಿವೆ. ಅವನ್ನೆಲ್ಲಾ ಬದಿಗಿಟ್ಟು ಇತ್ತೀಚೆಗೆ ಘಟಿಸಿದ ಎರಡು ಘಟನೆಗಳು ಹಾಗೂ ಅವುಗಳನ್ನ ತೋರಿಸುವ ನೆಪದಲ್ಲಿ ವಾರ್ತಾವಾಹಿನಿಗಳೆಂಬ ಸುಟ್ಟ ಮಂದಿಯ ಜಾಲ ಅದು ಹೇಗೆ ಅಗ್ಗವಾಗಿ ವರ್ತಿಸಿತು ಎನ್ನುವ ಉದಾಹರಣೆ ಕೊಟ್ಟು ವಿವರಿಸುತ್ತೇನೆ, ಆಗ ಬಹುಷಃ ನಿಮಗೂ ಅರ್ಥವಾಗುತ್ತದೆ.

ಮೊದಲನೆಯದಾಗಿ ಮೊನ್ನೆ ಪಕ್ಕದ ನಾಡಿನ ಭ್ರಷ್ಟ ನಾಯಕಿಯೊಬ್ಬಳಿಗೆ ನಮ್ಮ ಉಚ್ಛ ನ್ಯಾಯಾಲಯ ಜಾಮೀನು ನೀಡುವ ಪ್ರಕರಣದ ಕುರಿತದ್ದು. ಅಂದು ಇನ್ನೂ ವಿಚಾರಣೆ ಮುಗಿದಿಲ್ಲದಿದ್ದರೂ, ನ್ಯಾಯಾಧೀಶರು ತಮ್ಮ ತೀರ್ಪನ್ನ ಪ್ರಕಟಿಸಲು ಸಾಕಷ್ಟು ಸಮಯ ಬಾಕಿ ಉಳಿದಿದ್ದರೂ ಸಹ ಈ ಅವಸರಕ್ಕೆ ಬಸಿರಾದವರು ಸರಕಾರಿ ಅಭಿಯುಕ್ತರ ಆಕ್ಷೇಪವೇನೂ ಜಾಮೀನಿಗೆ ಇಲ್ಲ ಎಂತಂದ ಕೂಡಲೆ ಆ ಹೆಂಗಸಿಗೆ ಜಾಮೀನು ಸಿಕ್ಕಿತು ಅಂತಲೆ ಊರೆಲ್ಲ ಬಿಡುವಿಲ್ಲದೆ ಟಾಂ ಟಾಂ ಹೊಡೆದೆ ಹೊಡೆದರು. ವಾಸ್ತವದಲ್ಲಿ ಅವರು ಹೀಗೆ ಘೋಷಿಸಿದ ಇಪ್ಪತ್ತು ನಿಮಿಷದ ನಂತರ ಜಾಮೀನು ನಿರಾಕರಣೆಯ ತೀರ್ಪು ಹೊರಬಂತು! ಒಂದು ವೇಳೆ ಜಾಮೀನು ಸಿಕ್ಕಿಯೆ ಬಿಟ್ಟಿತು ಎಂಬ ಆನಂದತಿರೇಕದಲ್ಲಿ ಓಲಾಡುತ್ತಿದ್ದ ಆ ಪುಢಾರಿಯ ಅಭಿಮಾನಿ ದೆವ್ವಗಳು ಈ ಅಘಾತಕಾರಿ ಮರು ಸುದ್ದಿ ಕೇಳಿ ಸಿಟ್ಟಿನಿಂದ ತಪ್ತರಾಗಿ ಉದ್ರಿಕ್ತರೂ ಆಗಿ ಹೋಗಿ ಸಾರ್ವಜನಿಕವಾಗಿ ದಾಂಧಲೆಗಿಳಿದಿದ್ದರೆ ಈ ಅಪದ್ಧವನ್ನ ಮೊದಲಿಗೆ ಹರಡಿದ ಈ ಸುದ್ದಿಮನೆಗಳೆ ನೇರ ಹೊಣೆಯಾಗುತ್ತಿದ್ದವು.

ಹಿಂದೆಯೂ ಇಂತಹ ಸಂದರ್ಭಗಳಲ್ಲಿ ಈ ಅಧಿನಾಯಕಿಯ ಅನು'ನಾಯಿ'ಗಳು ಹೀಗೆಯೆ ಹುಚ್ಚಂಪಟ್ಟೆ ವರ್ತಿಸಿದ ಉದಾಹರಣೆಗಳಿವೆ. ಇಂತಹದ್ದೆ ಪರಿಸ್ಥಿತಿ ತಮ್ಮ ನಾಯಕಿಗೆ ಒದಗಿ ಬಂದಿದ್ದಾಗ ಧರ್ಮಪುರಿಯಲ್ಲಿ ಅವರು ಶಾಲಾ ಬಸ್ಸೊಂದಕ್ಕೆ ಬೆಂಕಿ ಇಟ್ಟು ಮೂವರು ವಿದ್ಯಾರ್ಥಿನಿಯರನ್ನ ಸಜೀವವಾಗಿ ದಹಿಸಿದ್ದು ನಿಮಗೂ ನೆನಪಿರಬಹುದು. ಇಲ್ಲೂ ಅಂತದ್ದೇನಾದರೂ ಆಗಿದ್ದರೆ ತಾವೆ ಬೀದಿಗೆ ಹಚ್ಚಿದ ಬೆಂಕಿಯಲ್ಲಿ ದಿನವಿಡಿ ಗಳ ಹಿಡಿದು ಚಳಿ ಕಾಸಿಕೊಳ್ಳಲಿಕ್ಕೆ ಯಾವ ವಾರ್ತಾವಾಹಿನಿಗಳ ೨೪*೭ ದಂಡಪಿಂಡಗಳೂ ಕಿಂಚಿತ್ತೂ ಹೇಸುತ್ತಿರಲಿಲ್ಲ ಅನ್ನೋದು ತಮ್ಮ ಗಮನಕ್ಕೆ. ಇಂತಹ ಮುಟ್ಠಾಳರನ್ನ ಬಯ್ಯದೆ ಏನು ತಬ್ಬಿ ಮುತ್ತಿಡಬೇಕಿತ್ತ?

ಎರಡನೆಯದಾಗಿ ಮೊನ್ನೆ ಮೊನ್ನೆ ಸುರಿದ ಭಾರಿ ಮಳೆಗೆ ಎಳೆ ಪ್ರಾಯದ ಹೆಣ್ಣು ಮಗುವೊಂದು ಬನ್ನೇರುಘಟ್ಟ ರಸ್ತೆಯಲ್ಲಿ ಚರಂಡಿ ಪಾಲಾಗಿತ್ತು. ಎಡೆಬಿಡದೆ ಸುರಿಯುತ್ತಿದ್ದ ಜೋರು ಮಳೆಯ ನಡುವೆ ಅವೇಳೆಯ ಕಡುಗತ್ತಲಿನಲ್ಲಿ ರಕ್ಷಣಾ ಕಾರ್ಯಾಚರಣೆಗೆ ಧಾವಿಸಿ ಬಂದು ಸ್ಥಳದಲ್ಲಿ ತರಾತುರಿಯಿಂದ ತಮ್ಮ ಕರ್ತವ್ಯ ನಿರ್ವಹಿಸಲು ಹವಣಿಸುತ್ತಿದ್ದ ರಕ್ಷಣಾ ತಂಡವನ್ನ ಮಾಹಿತಿ ಸಂಗ್ರಹದ ನೆಪದಲ್ಲಿ ತಡೆದು ಅನಗತ್ಯವಾಗಿ

'ಮಗು ಯಾವ ಬಣ್ಣದ ಫ್ರಾಕ್ ಧರಿಸಿದ್ದಳು? ( ಅವಳ ಫ್ರಾಕಿನ ರಂಗು ಅದೇನೆ ಆಗಿದ್ದರೂ ಕೆಸರು ಮೆತ್ತಿ ಈಗ ಗುರುತಿಸಲಿಕ್ಕೆ ಖಂಡಿತಾ ಅಸಾಧ್ಯವೆಂಬ ಅರಿವಿಲ್ಲವ ಈ ಅವಿವೇಕಿಗಳಿಗೆ?.)

ಊಟ ಮಾಡಿ ಮನೆ ಬಿಟ್ಟಿದ್ದಳ? ( ಊಟ ಮಾಡಿದ್ದರೆ ತಾನೆ ಸಾವು ಸುಖಮಯವಾಗುತ್ತಿತ್ತ?.)

ನೀರಿಗೆ ಬಿದ್ದಾಗ ಆಕೆಯ ಪ್ರತಿಕ್ರಿಯೆ ಹೇಗಿತ್ತು? ( ಆಪತ್ತಿನಲ್ಲಿ ಇನ್ನು ಹೇಗಿರಲಿಕ್ಕೆ ಸಾಧ್ಯ!)

ಕಿರುಚಿ ಕೊಂಡಳಾ? ( ಕಿರುಚಿಕೊಳ್ಳದೆ ಮತ್ತೆ ಅಂತಹ ವಿಪತ್ತಿನಲ್ಲಿ ಎಸ್ಪಿಬಿ - ಎಸ್ ಜಾನಕಿಯಮ್ಮನ ಯಾವುದಾದರೂ ಮಧುರವಾದ ಜನಪ್ರಿಯ ಡ್ಯೂಯೆಟ್ ಹಾಡು ಹಾಡಿಕೊಳ್ಳಲು ಸಾಧ್ಯವೆ?)

ಕಿರುಚಿ ಕೊಂಡಿದ್ದರೆ ಅದ್ಯಾವ ಭಾಷೆಯಲ್ಲಿ ಕಿರುಚಿದಳು? ( ಅದನ್ನ ಕಟ್ಟಿಕೊಂಡು ಈಗ ಈ ಹಡಬೆಗಳಿಗೇನಾಗಬೇಕು?)

ಕಿರುಚಿದ್ದು ಕನ್ನಡದಲ್ಲ ಇಲ್ಲಾ ತಮಿಳಿನಲ್ಲ? ( ಇದೀಗ ತತಕ್ಷಣದ ಕಾರ್ಯಾಚರಣೆಗೆ ಅತಿ ಮುಖ್ಯ!.)

ಏನಂತ ಕಿರುಚಿದಳು? ( 'ಎಲ್ಲಾ ಲೈವ್ ಟಿವಿ ಖದೀಮರ ಕ್ಯಾಮರ ಬರುವವರೆಗೆ ಇಲ್ಲೆ ಕಾದಿರುತ್ತೇನೆ' ಅಂತ ಮಾತ್ರ ಕಿರುಚಿರಲಿಕ್ಕಿಲ್ಲ.)

ಈ ತರಹದ ತಲೆಹರಟೆ ಪ್ರಶ್ನೆ ಕೇಳುತ್ತಾ ತನಿಖಾ ಪತ್ರಿಕೋದ್ಯಮದ ಗೆಟಪ್ಪಿನಲ್ಲಿ ಒಟ್ಟಾರೆ ಕಾರ್ಯಾಚರಣೆಗೆ ಕಂಟಕವಾಗಿದ್ದ ವಿವಿಧ ವಾಹಿನಿಗಳ ಮೈಕಾಸುರರನ್ನ ಮೆಟ್ಟಿನಲ್ಲಿ ಹೊಡೆದು ಮೊದಲು ಅಲ್ಲಿಂದ ಆಚೆಗೆ ಅಟ್ಟುವ ವಾಸ್ತವ ಪ್ರಜ್ಞೆಯನ್ನ ಯಾರಾದರೂ ಅಲ್ಲಿ ನೆರೆದ ಪ್ರಜ್ಞಾವಂತರು ಒಂದೊಮ್ಮೆ ಮೆರೆದಿದ್ದರೆ, ಸರಾಗ ಕಾರ್ಯಾಚರಣೆ ನಡೆದು ಕಷ್ಟದಲ್ಲಾದರೂ ಬಹುಷಃ ಆ ಮಗು ಜೀವಂತ ಸಿಗುವ ಸಣ್ಣ ಸಂಭವವಾದರೂ ಇದ್ದೇ ಇತ್ತು ಅನ್ನೋದು ನನ್ನ ಅಭಿಪ್ರಾಯ.

ಇಂತಹ ನಾಲಾಯಕರನ್ನ ಅಂದು ಅಷ್ಟು ಸೌಮ್ಯ ಪದದಲ್ಲಿ ಬೈದೆನಲ್ಲ ಅನ್ನುವ ನೋವು ನನಗೆ ಖಂಡಿತ ಕಾಡಲಿಕ್ಕಿದೆ!

೨) ಎರಡನೆಯದಾಗಿ ನಿಮ್ಮ ಆಕ್ಷೇಪವಿರುವುದು ಸಕಾರಾತ್ಮಕವಾಗಿ ಪ್ರಧಾನಿಗಳು ಇರಿಸಿರುವ ಹೆಜ್ಜೆಗಳನ್ನ ಅವಜ್ಞೆಗೆ ಒಳಪಡಿಸಿ ಕೇವಲ ನಕಾರಾತ್ಮಕವಾದ ಅಂಶಗಳನ್ನೆ ಪ್ರಸ್ತಾವಿಸಲಾಗಿದೆ ಅನ್ನುವುದರ ಬಗ್ಗೆ. ನೋಡಿ ಗಣಪತಿ, ಟೀಕೆ ಸಕಾರಾತ್ಮಕವಾಗಿದ್ದರೆ ಅದು ಭೋಪರಾಕ್ ಅನ್ನಿಸಿಕೊಂಡು ಕೇವಲ ಟಿಪ್ಪಣಿಯಾಗಿ ಮಾತ್ರ ಉಳಿದು ಹೋಗುತ್ತದೆ. ಹೌದು, ಸಮಯ ಪಾಲನೆಯ ವಿಷಯದಲ್ಲಿ ಪ್ರಧಾನಿಗಳು ಅನುಕರಣೀಯರಾಗಿರೋದು ಹಾಗೂ ಆ ಸಂಗತಿಯಲ್ಲಿ ಜೋಭದ್ರರಾದ ರಾಜಧಾನಿಯ ಸರಕಾರಿ ನೌಕರರ ಚಳಿಜ್ವರವನ್ನ ಅವರು ಬಿಡಿಸಿರುವುದು ಶ್ಲಾಘನೀಯ. ಅದರ ಬಗ್ಗೆ ನನಗೂ ಮೆಚ್ಚುಗೆ ಇದೆ ಆದರೆ ದುರಾದೃಷ್ಟವಶಾತ್ ನೀವು ಪ್ರಸ್ತಾವಿಸಿದ ಇನ್ನುಳಿದ ಅಂಶಗಳೆಲ್ಲ ಕೇವಲ ಬೂಟಾಟಿಕೆ ಹಾಗೂ ಅವುಗಳಲ್ಲಿ ಹೊಸತೇನೂ ಇಲ್ಲ ಅನ್ನುವುದನ್ನ ನಿಮಗೆ ತಿಳಿಸಲು ಇಚ್ಛಿಸುತ್ತೇನೆ. ಒಂದೊಂದಾಗಿ ಅವುಗಳನ್ನ ವಿಶ್ಲೇಷಿಸುವ.

ಮೊದಲನೆಯದಾಗಿ 'ಜನ ಧನ' ಯೋಜನೆ. ಬ್ಯಾಂಕ್ ಅನ್ನುವ ಸಂಸ್ಥೆ ಸೂಟು ಬೂಟು ಹಾಕಿ ಟೈ ಕಟ್ಟಿದವರಿಗಷ್ಟೇ ಸೀಮಿತ, ಅದರ ಒಳ ಹೊಕ್ಕುವುದು ಅತ್ತಲಾಗಿರಲಿ ಆವರಣದ ಹತ್ತಿರ ಸುಳಿಯುವುದೂ ಮಹಾ ಅಪರಾಧ ಎನ್ನುವ ಭ್ರಮೆಯಲ್ಲಿದ್ದ ಶ್ರೀಸಾಮಾನ್ಯ ಭಾರತೀಯರನ್ನ ನಿರ್ಭಿಡೆಯಾಗಿ ನೇರ ವ್ಯವಸ್ಥಾಪಕರ ಕೊಠಡಿಯೊಳಗೆ ಅಳುಕಿಲ್ಲದೆ ಹೊಕ್ಕು ಸರಳ ನಿಬಂಧನೆಗಳನ್ನ ಸ್ಥಳದಲ್ಲಿಯೆ ಪೂರೈಸಿ "ಧನ"ವನ್ನ ಸಾಮಾನ್ಯ "ಜನ"ರೂ ತಮ್ಮ ಅಗತ್ಯಗಳಿಗೆ ಬಳಸುವಂತೆ ಮೊದಲು ಪ್ರೋತ್ಸಾಹಿಸಿ 'ಸಾಲಮೇಳ'ದಂತಹ ದಿಟ್ಟ ಯೋಜನೆಯೊಂದನ್ನ ಆರಂಭಿಸಿ ಇಂದಿಗೆ ಕಾಲು ಶತಮಾನಕ್ಕೆ ಹಿಂದೆಯೆ ಬಡ ಭಾರತೀಯರ ಎದೆಯಲ್ಲೂ ಕೆಚ್ಚನ್ನ ತುಂಬಿದ್ದು ನಮ್ಮದೆ ಊರಿನ ವಾಚಾಳಿ ರಾಜಕಾರಣಿ ಜನಾರ್ಧನ ಪೂಜಾರಿ. ಅವರು ಆಗ ರಕ್ತ ಮಾಂಸ ತುಂಬಿ ಜಾಗೃತಗೊಳಿಸಿದ ಜನಪ್ರಿಯ ಯೋಜನೆಗೆ ಮತ್ತೆ ಸುಣ್ಣ ಬಣ್ಣ ಹೊಡೆದು ಇಂದಿನ ಪ್ರಧಾನಿಗಳು ತಮ್ಮ ಕಿರೀಟಕ್ಕೊಂದು ಗರಿಯಂತೆ ಸಿಕ್ಕಿಸಿಕೊಳ್ಳುತ್ತಿದ್ದಾರೆ ಅನ್ನುವುದು ನಿಮ್ಮ ಗಮನಕ್ಕೆ. 'ಓಡಿ'ಯಂತಹ ಹೆಚ್ಚುವರಿ ಸೌಲಭ್ಯಗಳ ತುರಾಯಿಯನ್ನ ಹಳೆಯ ಯೋಜನೆಗಳೊಂದಿಗೆ ಅಡಕ ಮಾಡಿದ ಕ್ಷಣ ಅದು ಹೊಸತಾಗುವುದಿಲ್ಲ. ಇದರಲ್ಲಿ ನಮ್ಮ ಹಾಲಿ ಪ್ರಧಾನಿಗಳ ಹೆಚ್ಚುಗಾರಿಕೆ ಅಷ್ಟೇನೂ ಇಲ್ಲ.

ಇನ್ನು ಎರಡನೆಯದಾಗಿ 'ಮೇಕ್ ಇನ್ ಇಂಡಿಯಾ' ಅಭಿಯಾನ. ನಿಮ್ಮ ಮಾಹಿತಿಗಾಗಿ ಒಂದು ವಿಷಯವನ್ನ ನಾನು ಪ್ರಸ್ತಾವಿಸಬಯಸುತ್ತೇನೆ. ಅತಿ ಸೂಕ್ಷ್ಮ ಜೋಡಣೆಗಳಿರುವ ಎಲೆಕ್ಟ್ರಾನಿಕ್ ಉಪಕರಣಗಳ ಹೊರತು ಇಂದು ನಮ್ಮ ದೈನಂದಿನ ಅಗತ್ಯಗಳಿಗೆ ಪೂರಕವಾಗಿರುವ ಸಾಧನ ಸಲಕರಣೆಗಳನ್ನೆಲ್ಲ ನಾವೆ ನಮ್ಮ ನೆಲದಲ್ಲಿಯೆ ಉತ್ಪಾದಿಸುತ್ತಿದ್ದೇವೆ. ಇವು ಇಲ್ಲಿನ ಅಗತ್ಯಗಳಿಗೆ ತಕರಾರಿಲ್ಲದೆ ಒದಗಿ ಬರುತ್ತಿರೋದು ಸತ್ಯವೆ ಆಗಿದ್ದರೆ ಪರ ದೇಶದ ರಫ್ತಿಗೂ ಇವುಗಳು ಲಾಯಕ್ಕಾಗಿಯೆ ಇರುತ್ತವೆ. ಆಹಾರ ಹಾಗೂ ಕ್ಶೀರೋತ್ಪಾದನೆಯಲ್ಲೂ ನಾವು ಭಾರತೀಯರು ಸ್ವಾವಲಂಬಿಗಳಾಗಿದ್ದೇವೆ, ಔಷಧೋತ್ಪಾದನೆಯಲ್ಲೂ ನಾವೀಗ ಅದ್ವಿತೀಯರು. ಆರೋಗ್ಯ ಕ್ಷೇತ್ರದಲ್ಲಿ ಅಮೇರಿಕೆಯ ಗುಣ ಮಟ್ಟದ ಕ್ಲಿಷ್ಟಕರ ಚಿಕಿತ್ಸೆಗಳು ನಮ್ಮಲ್ಲಿ ಅಲ್ಲಿನ ದರದ ಹತ್ತನೆ ಒಂದು ಭಾಗಕ್ಕೆ ಇಂದು ಲಭ್ಯ. ಅಂಗಾಂಗಳ ಜೋಡಣೆಯಲ್ಲಿ ನಾವು ಪ್ರಪಂಚದ ಇನ್ಯಾವುದೆ ದೇಶದ ತಜ್ಞ ವೈದ್ಯರಿಗೂ ಸೆಡ್ಡು ಹೊಡೆಯುವ ಮಟ್ಟಕ್ಕೆ ಬೆಳೆದಿದ್ದೇವೆ. ವಾಹನ ಹಾಗೂ ಅವುಗಳ ಬಿಡಿ ಭಾಗಗಳ ಉತ್ಪಾದನೆಯಲ್ಲೂ ಕ್ಷಮತೆಯನ್ನ ಕಳೆದ ಕಾಲು ಶತಮಾನಗಳಲ್ಲಿ ನಾವು ಸಾಧಿಸಿ ತೋರಿ ಆಗಿದೆ. ಇನ್ನೆಂತಾ ಮೇಕ್ ಇನ್ ಇಂಡಿಯಾ ಸ್ವಾಮಿ?

ಇನ್ನೇನಿದ್ದರೂ 'ಮೇಕ್ ಇನ್ ಇಂಡಿಯಾ'ದ ಹೆಸರಿನಲ್ಲಿ ಅಮೇರಿಕೆಯಿಂದ ಕಡೆಗೆ ನಾಳೆ ನಾವೆ ಕೊಳ್ಳಬೇಕಿರುವ ಶಸ್ತ್ರಾಸ್ತ್ರಗಳು, ಅಲ್ಲಿ ಗುಜುರಿಗೆ ಬಿದ್ದ ಇಲ್ಲಿ ಹೊಸತಾಗಿ ಬಳಕೆಯಾಗಬಹುದಾದ ಬೋಯಿಂಗ್ ಗುಜುರಿ ವಿಮಾನಗಳ ಮರು ದುರಸ್ತಿ ಹಾಗೂ ಆಧುನಿಕ ಕೃಷಿಯ ಹೆಸರಿನಲ್ಲಿ ಕೃಷಿಗೆ ಮಾರಕವಾದ ರಾಸಾಯನಿಕ ಕೀಟ ನಾಶಕ, ಗೊಬ್ಬರ ಹಾಗೂ ತಳಿ ಸಂವರ್ಧನೆಯ ಸೋಗಿನಲ್ಲಿ Bio Modified ಆಹಾರೋತ್ಪನ್ನಗಳ ವಿಕಾರಿ ಬೀಜಗಳನ್ನ, ಈಗಾಗಲೆ ಅಲ್ಲಿನವರಿಗೆ ಬೇಡವಾದ ಒಡೆದು ಗುಜುರಿಗೆ ಹಾಕಲು ಲಾಯಕ್ಕಾದ ಹಾಳಾದ ಹಡಗುಗಳನ್ನ ನಮ್ಮಲ್ಲಿಯೆ ನೌಕಾ ಪಡೆಗೆ ಮಾರಲು ಮೇಕ್'ಅಪ್ ಮಾಡುವ ನೆಪದಲ್ಲಿ ಇಲ್ಲಿಗೆ ಸಾಗ ಹಾಕಿ 'ಮೇಕ್ ಇನ್ ಇಂಡಿಯಾ' ಮಾಡಿ ಆಯ್ತು ಅಂತ ಹಲ್ಲು ಕಿರಿಯಬಹುದು. ಇದೆ ನೆಪದಲ್ಲಿ ಹೊಸತಾದ ಈ ಕೈಗಾರಿಕೆಗಳ ಗುಮ್ಮವನ್ನೆ ತೋರಿಸಿ, ರೈತರ ಭೂಮಿಯನ್ನ ಬಲವಂತವಾಗಿ ಹೊಸ ಯೋಜನೆಗಳಿಗೆ ಹಂಚುವ ಹೆಸರಿನಲ್ಲಿ ವಶ ಪಡಿಸಿಕೊಳ್ಳಬಹುದು.

ಗಣಪತಿ, ನಿಮಗೆ ನೆನಪಿದ್ದರೆ ಒಬಾಮಾ ತನ್ನ ವ್ಯಾಪಾರಿ ನಿಯೋಗದ ಜೊತೆ ಈ ಹಿಂದೆ ಅಧಿಕೃತವಾಗಿ ಭಾರತದ ಪ್ರವಾಸ ಕೈಗೊಂಡಾಗ ದೆಹಲಿಯಲ್ಲಿ Auto Expo ನಡೆಯುತ್ತಿತ್ತು. ಅಲ್ಲಿ ವಿಶ್ವದ ಅತಿ ಅಗ್ಗದ ಕಾರು ಟಾಟಾ ನ್ಯಾನೋ ಸವಾರಿ ಮಾಡಿ ಮೆಚ್ಚುಗೆ ಹಾಗೂ ಅಚ್ಚರಿಯನ್ನ ಅಮೇರಿಕೆಯ ಅಧ್ಯಕ್ಷರು ವ್ಯಕ್ತ ಪಡಿಸಿದ್ದರು. ಆದರೆ ಅದರಿಂದ ಭಾರತದ ವಾಹನೋದ್ಯಮಕ್ಕೆ ಆದ ಲಾಭವಾದರೂ ಏನು? ಅದಾಗಿ ವರ್ಷದ ಮೇಲಾಯ್ತು ನಮ್ಮ ನಾಡಿನಲ್ಲೂ ಹೊಸ ಸರಕಾರ ಅಸ್ತಿತ್ವಕ್ಕೆ ಬಂತು. ನಮ್ಮ ಪ್ರಧಾನಿಗಳ ಸವಾರಿಯೂ ಅಲ್ಲಿಗೆ ಹೋಗಿ ಬಂತು. 'ದ್ವಿ ಪಕ್ಷೀಯ' ಒಡಂಬಡಿಕೆಯ ಬುಡಬುಡಿಕೆ ಹೊಡೆಯುವ ಅಮೇರಿಕೆಯ ರಸ್ತೆಯನ್ನ ನಮ್ಮ ಒಂದಾದರೂ ನ್ಯಾನೋ ಕಾರು ಮುಟ್ಟಿತಾ?

ಅಷ್ಟು ದೂರ ಬೇಡ, ಇಂದು ಎಲ್ಲಾ ಬಹುರಾಷ್ಟ್ರೀಯ ವಾಹನೋದ್ಯಮಗಳ ದೈತ್ಯರು ಭಾರತದ ನೆಲದಲ್ಲಿಯೆ ಉತ್ಪಾದನೆಯನ್ನ ಆರಂಭಿಸಿದ್ದಾರೆ. ನಮ್ಮ ಸ್ಥಳಿಯ ಸರಕಾರಗಳೂ ಪೂರಕ ಪ್ರೋತ್ಸಾಹವನ್ನ ಅವಕ್ಕೆ ನೀಡಿವೆ. ಆದರೆ ದುರಂತದ ಪರಮಾವಧಿ ಎಂದರೆ ನಮ್ಮ ನೆರೆಯ ನೇಪಾಳ, ಬಾಂಗ್ಲಾ, ಪಾಕ್, ಮಾಲ್ಡೀವ್ಸ್ ಹಾಗೂ ಶ್ರೀಲಂಕಾದಲ್ಲಿ ಭಾರತದಲ್ಲಿ ಉತ್ಪಾದನೆಯಾದ ವಾಹನಗಳು ಅವು ಬಹುರಾಷ್ಟ್ರೀಯ ಕಂಪನಿಗಳ ಠಸ್ಸೆ ಹೊಂದಿದ್ದರೂ ಸಹ ಕಳಪೆ ಹಾಗೂ ದ್ವಿತಿಯ ದರ್ಜೆಯದು ಎನ್ನುವ ಭಾವ ದಟ್ಟವಾಗಿದೆ. ಪಾಕ್ ಹೊರತು ಪಡಿಸಿ ಇನ್ನುಳಿದ ನೆರೆಯ ದೇಶಗಳಲ್ಲಿ ಸುತ್ತುವಾಗ ಸ್ಥಳಿಯರ ಮಾತುಗಳಲ್ಲಿ ನಾನು ಇದನ್ನ ಗ್ರಹಿಸಿದ್ದೇನೆ. ಸುತ್ತಲ ಊರು ಗೆಲ್ಲದೆ ಅಮೇರಿಕೆಯ ಮಾರು ಗೆಲ್ಲಲು ಹೊರಟಿದ್ದ ನಮ್ಮ ಪ್ರಧಾನಿಯವರು ಅಲ್ಲಿಗೆ ಹೋಗಿ 'ಮೇಕ್ ಇನ್ ಇಂಡಿಯಾ'ದ ಮಂತ್ರ ಜಪಿಸಿದ ಕೂಡಲೆ ಅಲ್ಲಿ ನಮ್ಮವರ ಹೂಡಿಕೆಯ ಮಾವಿನ ಕಾಯಿ ಉದುರಲು ಸಾಧ್ಯವಿಲ್ಲ. ಮೊದಲೆ ಹೇಳಿದಂತೆ ನಮ್ಮವರ ಅಲ್ಲಿನ ಹೂಡಿಕೆಯ ಬಗ್ಗೆ ಆಗಿರುವ ಒಪ್ಪಂದದಲ್ಲಿಯೇ ಸ್ಪಷ್ಟತೆಯಿಲ್ಲ. ಸಾಲದ್ದಕ್ಕೆ ಮೇಕ್ ಇನ್ ಇಂಡಿಯಾ ಅಲ್ಲ ಈಗ ಬೇಕಾಗಿರೋದು ಈಗಾಗಲೆ ಮೇಡ್ ಇನ್ ಇಂಡಿಯಾದ ಮೊಹರು ಹೊತ್ತ ಮಾಲುಗಳಿಗೆ ಹೋದಲ್ಲಿಯೂ ಮಾರುಕಟ್ಟೆ ಸೃಷ್ಟಿಸಬೇಕಾಗಿರುವುದು ಇಂದಿನ ಜರೂರತ್ತು. ಈ ವಿಷಯದಲ್ಲಿ ಪ್ರಧಾನಿಯವರು ಸಾಧಿಸಿದ್ದೇನಾದರೂ ನಿಮಗೆ ಗೋಚರವಾಗಿದ್ದರೆ ದಯವಿಟ್ಟು ನಮಗೂ ಅದನ್ನ ತಿಳಿಸಿ.

ನಾವು ಸಕಲೆಂಟು ಉತ್ಪನ್ನಗಳ ರಫ್ತಿಗೆ ಸಮರ್ಥರಾಗಿದ್ದರೂ ಒಪ್ಪಂದಗಳ ಹೆಸರಿನಲ್ಲಿ ನಮ್ಮ ಕೈ ಕಟ್ಟಿ ಹಾಕಲಾಗಿದೆ ಅನ್ನುವುದು ನಿಮ್ಮ ಗಮನಕ್ಕೆ. ನಮ್ಮ ಆಹಾರೋತ್ಪನ್ನಗಳನ್ನ ಅಂತರ್ರಾಷ್ಟ್ರೀಯ ಮಾನದಂಡದ ಶುದ್ಧತೆ ಹಾಗೂ ಗುಣಮಟ್ಟದ ಜರಡಿಯಲ್ಲಿ ಸೋಸಿ ತಿರಸ್ಕರಿಸಲಾಗುತ್ತದೆ. ಹೀಗಾಗಿ ಅವಕ್ಕೆ ಅಮೇರಿಕೆಯಲ್ಲಿ ಮಾರಾಟವಾಗುವ ಭಾಗ್ಯವಿಲ್ಲ. ನಮ್ಮ ತಯಾರಿಯ ವಾಹನಗಳನ್ನ ಕಳಪೆ ಗುಣಮಟ್ಟದ ಹಣೆಪಟ್ಟಿ ಹಚ್ಚಿ ರಫ್ತಿಗೆ ತಡೆಯೊಡ್ಡಲಾಗುತ್ತಿದೆ ಹಾಗೂ ಇದರೆಲ್ಲದರ ಹಿಂದೆ ಅಮೇರಿಕನ್ ವ್ಯಾಪಾರಿ ಹಿತಾಸಕ್ತಿಗಳ ಪಿತೂರಿಯಿದೆ. ಇದನ್ನೆಲ್ಲ ಅರಿತೂ ಸಹ ನೀವು ಪ್ರಧಾನಿಯವರ ನಡೆಯನ್ನ ಸಮರ್ಥಿಸುವಿರಾದರೆ ಅದು ನಿಮ್ಮ ಆಲೋಚನೆಯ ಮಿತಿ ಅಷ್ಟೆ.

೪) ಇನ್ನು ಕಡೆಯದಾಗಿ ನೀವೆ ಹೇಳಿರುವಂತೆ ಆಶಾವಾದದ ನಿರಂತರತೆಯೊಂದು ನಮ್ಮೊಳಗೂ ಇದ್ದೇ ಇದೆ. ಪ್ರತಿಯೊಬ್ಬ ಆಳುವ ನರಿಯಿಂದಲೂ ನಮ್ಮಂತಹ ಆಳಿಸಿಕೊಳ್ಳುವ ಕುರಿಗಳು ಉತ್ತಮ ನಾಳೆಗಳ ನಿರೀಕ್ಷೆಯನ್ನೆ ಇಟ್ಟುಕೊಂಡಿರುತ್ತೇವೆ. ಆದರೆ 'ಬಾಯಲ್ಲಿ ಭಗವದ್ಗೀತೆ, ಬಗಲಲ್ಲಿ ದೊಣ್ಣೆಯೂ ಐತೆ' ಅನ್ನುವ ಮಾನ್ಯ ಪ್ರಧಾನಿಗಳ ನುಣ್ಣನೆಯ ಮಾತಿನ ನಟನೆ 'ದ್ವಿ ಪಕ್ಷೀಯ' ಬಾಂಧವ್ಯದ ಹೆಸರಿನಲ್ಲಿ ಅವರ ಆಪ್ತ ವಲಯದ ಕೆಲವೆ ಕೆಲವು ಕಡು ವ್ಯಾಪಾರಿ ಸಿರಿವಂತರ ಆಸ್ತಿಯ ನೂರಾರು ಕೋಟಿಗಳನ್ನ ಸಾವಿರಾರು ಕೋಟಿಗಳಾಗಿಸಬಹುದು ಅಷ್ಟೆ. ಸಂದೇಹದ ಬೆನ್ನು ಹತ್ತಿ ಕನಿಷ್ಠ ಮುಂಬರುವ ದುರಂತದ ಅರಿವಾದಾಗಲೂ ಬಾಯಿ ಹೊಲೆದುಕೊಂಡು ಕೂತಿದ್ದರೆ ನಾವು ನಮ್ಮಂತವರು ಕೋತಿಗಳಾಗಬಹುದು. ನಮ್ಮ ನಿಮ್ಮ ಭವ್ಯ ಭವಿಷ್ಯ ಇಷ್ಟೆ.


ಮಾನ್ಯ ಪ್ರಧಾನಿಯವರ ಖಾಸಗಿಕರಣದ ಮಂತ್ರದ ದಾಳಿಗೆ ನಾವೆಲ್ಲ ತುತ್ತಾಗಲು ಹೆಚ್ಚು ಕಾಲ ಬೇಕಿಲ್ಲ. ಅದರ ದುರಂತದ ಮುನ್ಸೂಚನೆಯನ್ನಷ್ಟೆ ನಾನಿಲ್ಲಿ ಕೊಡುವ ಪ್ರಯತ್ನ ಮಾಡಿದ್ದೇನೆ. ಒಪ್ಪುವುದು ಬಿಡುವುದು ನಿಮಗೆ ಬಿಟ್ಟ ವಿಚಾರ.

No comments: