19 October 2014

ಪುಸ್ತಕದೊಳಗೆ - ೨೨





"ಶಕುಂತಳಾ"


ಲೇಖಕರು; ಡಾ ಗುರುಪ್ರಸಾದ್ ಕಾಗಿನೆಲೆ,

ಪ್ರಕಾಶಕರು; ಛಂದ ಪುಸ್ತಕ  ( ಮೊದಲ ಎರಡು ಮುದ್ರಣ.)

ಪ್ರಕಟಣೆ; ೨೦೦೭.


ಕ್ರಯ; ರೂಪಾಯಿ ಅರವತ್ತು.


"ಅತ್ತಿ ಒಳಗೆ ಕತ್ತಲು ಕೋಣೆಯಲ್ಲಿ ಸೊಟ್ಟಬಾಯಿ ಮಾಡಿಕೊಂಡು ಕೂತಿತ್ತು. ಅನಂತು  ಮನೆಗೆ ಬಂದವನೇ ಒಳಗೆ ಕೂತಿರುವಾಕೆಯನ್ನು ಅನಾಮತ್ತಾಗಿ ಹೊತ್ತು ತಂದು ಹೊರಗೆ ಚಾಪೆಯಲ್ಲಿ ಕೂಡಿಸಿದ.
‘ಮೆಲ್ಗ್ವೋ, ತೊಮ್ಮ...’ ಅಂತು.

ಅತ್ತಿ ಬಾಯಿ ಸೊಟ್ಟ ಕಾಣಿಸಿತು, ಅನಂತೂಗೆ. ಮಾತು ತೊದಲು ಅನ್ನಿಸಿತು.

‘ಇದ್ಯಾಕೇ, ಹೆಂಗೆಂಗೋ ಆಡ್ತೀ. ಹುಷಾರಿದೀಯೋ ಇಲ್ವೋ’ ಕೇಳಿದ.

‘ನ್ವಂಗೇನಾದ್ವದ್ವೋ’ ಅಂತು, ಅತ್ತಿ ನಗುತ್ತಾ. ಬಾಯಿ ಇನ್ನೂ ಸೊಟ್ಟ ಆಯಿತು.

ಒಳಗಿಂದ ಬಂದಳು ರುಕ್ಮಿಣಿ. ‘ನಿನ್ನೆ ರಾತ್ರಿ ಆ ಗುಲ್ಪಾವಟಿ ತಿನ್ನೋಕ ಆ...ಅ ಅಂತ ಬಾಯ್ಕಳೀತು ನೋಡ್ರಿ. ಮೊದ್ಲೇ ಕಣ್ಣೂ ಕಾಣೋ ಹಂಗಿಲ್ಲ. ಆಗಿಂದಾನೇ ಬಿಟ್ಟ್ಬಾಯಿ ಹಂಗೇ ಬಿಟ್ಕೊಂಡೇ ಕೂತಿತ್ತು.

ಮುಂಜಾನಿಂದ ಏನೂ ತಿಂದಿಲ್ಲ. ಏನಾರ ಹೇಳಿದ್ರೆ ಹಾರಾಡ್ತಾಳೇ. ನಂಗಂತು ಸಾಕಾಗ್‍ಹೋತಪಾ, ಈಕಿ ಕಾಲ್ದಾಗ. ಆಕಡೀಯಿಂದ ಈ ಕಡಿಗೀ, ಹೊತ್ತು ಹೊತ್ತು ಕೂಡ್ಸೀನಿ. ಮ್ಯಾಲ ಹೊಟ್ಟೀ ಬ್ಯಾರೆ ಸರೀ ಇಲ್ಲ. ಬೆಳಗ್ನಿಂದ ಮೂರು ಪ್ಯಾಕೀಟು ಕೊಟ್ಟಾಳ, ಕೆಳಗ ಬಟ್ಟೀ ಕಟ್ತೀನಿ ಅಂದ್ರ ಒಲ್ಲೆ ಅಂತಾಳ. ಅಲ್ಲ, ಮಾಡಣಂತೆ, ಸರಿ. ಸ್ವಲ್ಪಾದ್ರೂ ಅನ್ಸರ್ಸಬೇಕಾ ಇಲ್ಲಾ’.  ಸುಮ್ಮನೇ ಕೈಯಲ್ಲಿ ಹೂಬತ್ತಿ ಹೊಸೆಯುತ್ತಾ ಕೂತಿತ್ತು, ಅತ್ತಿ. ಬತ್ತಿಗೆ ಹಚ್ಚೋ ಬಿಳೀಪುಡಿಯಾದ ಅಕ್ಕಿಹಿಟ್ಟನ್ನ ಇನ್ನೊಂದು ಹಿತ್ತಾಳೆ ಹರಿವಾಣದಲ್ಲಿ ಪಕ್ಕಕ್ಕೆ ಇಟ್ಟುಕೊಂಡು ಕೂತಿತ್ತು.

ಈ ಮನೆಯಲ್ಲಿ ಅಕ್ಕಿಹಿಟ್ಟನ್ನು ಬಿಟ್ಟು ಬೇರೆ ಯಾವುದೇ ಬಿಳೀಪುಡಿಗಳನ್ನು ತಾನು ಬದುಕಿರುವವರೆಗೂ ತರಬಾರದೆಂದು ಹಠಹಿಡಿದಿತ್ತು. ಹೀಗಾಗಿ ಮನೆಯ ಸೋಪಿನಪುಡಿ, ಪಾತ್ರೆ ಉಜ್ಜುವ ಪುಡಿ ಎಲ್ಲವೂ ಏನಾದರೂ ಬಣ್ಣದ್ದೇ ಆಗಿರಬೇಕಿತ್ತು. ದೇವರಪಾತ್ರೆಗಳನ್ನು ಸಬೀನಾಪುಡಿ ಹಾಕಿ ತೊಳೆದರೆ ಲಕಲಕ ಹೊಳೆಯುತ್ತದೆ ಎಂದು ರುಕ್ಮಿಣಿ ಏನು ಹೇಳಿದರೂ ಅದು ನಡೆದಿರಲಿಲ್ಲ. ಈಗ ಕಳೆದ ನಾಲ್ಕು ವರ್ಷಗಳಿಂದ ಏನೇನೂ ಕಣ್ಣು ಕಾಣದಂತಾದ ಮೇಲೆ ಅನಂತೂ ಮಗಳಿಗೆ ಕುಟಿಕರ ಪೌಡರ್ ತಂದಿದ್ದ.

‘ಆಸ್ಪತ್ರೇಗೆ ಕರ್ಕೊಂಡು ಹೋಗ್ತೀರೇನು’?, ಕೇಳಿದಳು, ರುಕ್ಮಿಣಿ.

‘ಸ್ವಲ್ಪ ತಡಿ, ನೋಡಣ’ ಏನೋ ಯೋಚಿಸಿದ, ಅನಂತು.

‘ಆ ಪಂಡಿತಂಗಾರೂ ಕೊಂಚ ಮನಿಕಡಿ ಬಂದ್‍ನಡೀ ಅಂತ, ಹೇಳ್ರೀ, ಸತ್‍ಗಿತ್ತೀತು, ಮುದ್ಕೀ.’ ರುಕ್ಮಿಣಿ ಬಡಬಡಿಸಿದಳು.

‘ಇಲ್ಲ ತಗೋಳೇ, ಸಾಯೂಂತದೇನಾಗದ, ಈಗ. ಎಂತದೋ ವಾಯು ಅನ್ನಿಸ್ತದೆ. ಒಂಚೂರು ಆ ತೈಲ ಹಚ್ಲೇನೇ, ಏ ಅತ್ತೀ’ ಕೇಳಿದ, ಅನಂತು.

ಸುಮ್ಮನೆ ಧ್ವನಿ ಬಂದ ಕಡೆ ನೋಡಿತು, ಕುರುಡು ಮುದುಕಿ. ಆ ಸತ್ತ ಪಾಪೆಗಳು ತುಳಸಿಕಟ್ಟೆಯ ಕಡೆ ದೃಷ್ಟಿಸುತ್ತಿದ್ದವು. ಅಲ್ಲಿ ಅನಂತೂ ಮಗ ಆನಂದ ಒಬ್ಬನೇ ಚೆಂಡನ್ನು ನೆಲಕ್ಕೆ ಬಡೀತಿದ್ದ. ‘ನೂರ ಇಪ್ಪತ್ನಾಕು... ನೂರ ಇಪ್ಪತ್ತೈದು....’

‘ವವಗೆ... ವವಗೆ’ ಅಂತು, ಅತ್ತಿ. ಬಲಗೈ ತೋರುಬೆರಳನ್ನ ಎತ್ತಿ ತೋರಿಸಿತು. ನಿನ್ನೆ ತನಕ ಈ ಮಾತುಗಳೆಲ್ಲಾ ಅರ್ಥವಾಗುತ್ತ್ತಿದ್ದವು, ಅನ್ನಿಸಿತು, ಅನಂತೂಗೆ. ಮತ್ತೆ ಎತ್ತಿ ಒಳಗೆ ಕೋಣೆಯಲ್ಲಿ ಕೂರಿಸಿದ. ‘ ಬ್ವಾಗ್ಗ್ಲ್‍ಯು’ ಅಂತು, ಪ್ರಯಾಸಪಟ್ಟು. ಬಾಗಿಲನ್ನು ಮುಂದೆ ಮಾಡಿಕೊಂಡು ಹೋದ.

‘ಅನನ್ತ.....ಊ’ ಕೂಗಿತು, ಒಳಗಿಂದ. ಅನಂತು ಮತ್ತೆ ಕೋಣೆಯೊಳಗೆ ಹೋದ. ‘ಏನು’ ಅಂದ. ಕೈ ಮುಟ್ಟಿ ವಾಪಸ್ಸು ಕಳಿಸಿತು. ಅನಂತು ಹೊರಗೆ ಹೋಗಿ ‘ಏ ಆನಂದ, ಒಳಗ್ ಹೋಗು, ಅತ್ತಿ ಕರೀತಿಯಾಳೆ’ ಅಂದ.

‘ನೂರಾ ಎಪ್ಪತ್ತೈದು.... ನೂರಾ ಎಪ್ಪತಾರು...’ ಅನ್ನುತ್ತಾ ಒಳಗೆ ಹೋದ, ಆನಂದ. ದಿನಪತ್ರಿಕೆಯಲ್ಲಿ ಸುತ್ತಿದ್ದ ಒಂದು ಪಾಕೀಟನ್ನು ಹೊರಗೆ ತಂದು ಕಾಂಪೌಂಡಿನಾಚೆಯ ಗುಂಡಿಗೆ ಎಸೆದ. ಎಂಟಾಣೆಯನ್ನು ಜೇಬಿಗೆ ಸೇರಿಸಿದ.

ಮೂರು ವರ್ಷದ ಹಿಂದೆ ಅತ್ತಿಯ ಕಾಲಿನ ಕೀಲುಗಳೆಲ್ಲಾ ಬಿಡಿಸದಂತಾದಾಗ, ಹೀಗೆ ಪಾಕೀಟು ಕೊಡಲು ಶುರುಮಾಡಿದ್ದಳು, ದಿನ ಮುಂಜಾನೆ. ಅತ್ತಿಗೆ ಅರಳುಮರಳು ಅಂದವರಿಗೆಲ್ಲ ಈ ವಿಷಯದ ಬಗ್ಗೆ ಆಶ್ಚರ್ಯವಾಗುತ್ತಿತ್ತು. ಗಡಿಯಾರದಂತೆ ಲೆಕ್ಕ ಹಿಡಿದ ಹಾಗೆ ದಿನಾ ಒಂದು ಪಾಕೀಟು ಕೊಡುತ್ತಿದ್ದಳು. ಈಗ ನಿನ್ನೆಯಿಂದ ಜಾಸ್ತಿಯಾಗಿದೆ ಅನ್ನುವುದು ರುಕ್ಮಿಣಿ ಹೇಳಿದಮೇಲೆ ಅನಂತೂಗೆ ಗೊತ್ತಾಗಿದ್ದು. ಆನಂದ ಮೊದಲೊಂದು ದಿನ ಕುತೂಹಲಕ್ಕೆಂದು ಬಿಚ್ಚಿನೋಡಿ, ಮತ್ತೆ ಅತ್ತಿಯ ಕೋಣೆಯಕಡೆ ಹೋಗುವುದಿಲ್ಲವೆಂದು ಹಟ ಹಿಡಿದಿದ್ದ. ಅತ್ತಿ ದಿನಾ ನಾಲ್ಕಾಣೆ ಕೊಡುತ್ತಿದ್ದಳು. ಈಗ ಕಳೆದವರ್ಷದಿಂದ ಎಂಟಾಣೆ ಕೊಡುತ್ತಿದ್ದಳು.
‘ಹೋಗಿ, ಕೈಕಾಲು ತೊಳ್ಕೋ.. ಸೂಳೇಮಗನೇ’ ಅನಂತೂ ಮಗನಿಗೆ ಬೈದ. ‘ಇನ್ನೂರ ಆರು... ಇನ್ನೂರ ಏಳು’ ಅನ್ನುತ್ತಾ ಮತ್ತೆ ಕೈಯಿಂದ ಕೈಗೆ ಚೆಂಡನ್ನು ಬದಲಾಯಿಸುತ್ತಾ ಮುಂದಿನ ಅಂಗಳದಲ್ಲಿ ಕೈತೊಳೆದ, ಆನಂದ.


‘ರುಕ್ಮಿಣೀ... ಕೊಂಚ ಮುಂಬಾಗಿಲು ಹಾಕ್ಕೋ. ಅತ್ತಿ ಒಳಗದಾಳ. ನಾನ್ಕೊಂಚ ಪಂಡಿತನ್‍ಹತ್ರ ಹೋಗ್ಬರ್ತೀನಿ’ ಅಂತಂದು, ಹೊರಗೆ ಹೋದ, ಅನಂತು.

ಕೋಣೆಯ ಕತ್ತಲಿನಲ್ಲಿ ಬುಟ್ಟಿಯಲ್ಲಿಟ್ಟಿದ್ದ ಹತ್ತಿಯನ್ನು ಹಿಂಜಿ, ಹಿಂಜಿ ಹಾಕುತ್ತಿತ್ತು, ಮುದುಕಿ. ಹತ್ತಿಯ ಬೀಜಗಳು ಪಕ್ಕದ ಕುಟ್ಟಣಿಕೆಯನ್ನು ಸೇರಿದವು. ಪಟಪಟ ಕುಟ್ಟಿ, ಬಾಯಿಗೆ ಹಾಕಿಕೊಂಡಿತು. ನುಂಗಲಾಗಲಿಲ್ಲ. ಮೇಲ್ಕೆಮ್ಮು ಬಂತು. ಮತ್ತೆ ಸುತ್ತ ನೋಡಿತು. ಕಣ್ಣು ಕಿರಿದು ಮಾಡಿದಾಗ, ಏನೋ ಪೂರಾ ಕಪ್ಪು ಕೊಂಚ ಕಂದಾಯಿತು. ಪಾಪೆಗಳು ಹಿಗ್ಗಿದವು. ಸೊಟಗಾಯಿಯ ಜೊಲ್ಲನ್ನು ಒರೆಸಿಕೊಳ್ಳಲು ಕೈ ತೆಗೆದಾಗ, ತಲೆಯ ಮೇಲೆ ಹೊದ್ದಿದ್ದ ಸೀರೆ ಕೆಳಗೆ ಬಿದ್ದು, ಬೋಡು ತಲೆ, ಜೋತುಮೊಲೆ ಹೊರಬಿದ್ದವು. ಮತ್ತೆ ಹೊದ್ದಿಕೊಂಡಿತು. ‘ಇ.. ಹಿಹಿ’ ಎಂದು ಹೊರಗಿಂದ ನಗು ಕೇಳಿಸಿತು. ‘ಇನ್ನೂರ ಮೂವತ್ತಾರು... ಇನ್ನೂರಾ ಮೂವತ್ತೇಳು’ ಚೆಂಡು ಪುಟಿದೇಳುತ್ತಿತ್ತು.


‘ನಾನು ಕೊಂಚ ಗುಡೀಕಡಿ ಹೋಗ್ಬರ್ತೀನಿ. ಆ ನಂದೀ ಬಂದ್ರ ಅತ್ತೀಗ ಕೊಂಚ ಗಂಜೀ ಮಾಡಕ್ಕೆ ಹೇಳಾತ’ ರುಕ್ಮಿಣಿ ಹೇಳಿ ಹೊರಗೆ ಹೊರಟಳು.

‘ಹ್ವರಹಾಹೋ ಝಿನ, ಹ್ವರಹಾಹೋ ಝಿನ’ ಅತ್ತಿ ಕೂಗಿತು. ಕೇಳಿ ನಕ್ಕಳು, ರುಕ್ಮಿಣಿ. ಇರಲಿ ಅಂದು ಬಚ್ಚಲುಮನೆಗೆ ಹೋಗಿಬಂದಳು. ಹೊರಬಂದು, ‘ನನಗೆಂತದೇ? ಸರಿಹೋತು, ನಾನು ಕೂತರೆ, ಈ ವಯಸ್ನಾಗೆ..... ಸರಿ, ನೀ ಕಾಳಜಿ ಮಾಡ್ಬೇಡೇ ಅತ್ತಿ,’ ಅಂದಳು. ಅತ್ತಿ ಮತ್ತೆ ‘ಹ್ವರಹಾಹೋ ಝಿನ... ಹ್ವರಹಾಹೋ ಝಿನ’ ಅಂತ ಬಡಬಡಿಸಿದಾಗ ‘ಸರಿ ಬಿಡೇ. ನಂಗೆ ಇನ್ನೂ ಎರಡು ದಿನ ಅದ.’ ಅಂದಳು, ಸಮಾಧಾನಕ್ಕಾಗಿ. ಅತ್ತಿ ಸಮಾಧಾನದಿಂದ ಕೂತುಕೊಂಡಿತು.

‘ಯಾರ್ಗೆ ಹೊರಗೋ ಎಂತದೋ, ಊರವ್ರ ಹೊರಗಿನ ಲೆಕ್ಕ ಎಲ್ಲಾ ಬೇಕು, ಮುಂಜಾನೆ ತಿಂದದ್ದು ಹತ್ತಕ್ಕೆ ನೆನಪಿರಲ್ಲ. ನನ್ನ ಹತ್ತು ವರ್ಷದ ಹಿಂದಿನ ದಿನಗಳು ನೆನಪಿರ್ತಾವೆ.’ ನಗುವುದನ್ನು ಬಿಟ್ಟೂ ಬೇರೇನೂ ಮಾಡಲಾಗಲಿಲ್ಲ.

........


‘ಅತ್ತಿ, ನಿಂಗ ಅತ್ತಿ ಅಂತ ಯಾಕ ಕರೀತಾರೇ? ನೀ ಯಾರಿಗ ಅತ್ತಿ? ಅಪ್ಪಗಾ, ಅಮ್ಮಗ?’ ಆನಂದ ಕೇಳಿದ್ದ.

‘ಅಯ್ಯೋ, ಹ್ವಾಗೋ, ನಾ ನಿಮ್ಮಜ್ಜಗ ಅತ್ತಿ. ನಿಮ್ಮಪ್ಪನ ಅಪ್ಪ ನಮ್ಮಮಗ ಕಕ್ಕ ಆಗ್ಬಕು. ಎಲ್ರೂ ಹ್ವಾದ್ರೂ. ನಾ ಒಬ್ಬಾಕಿ ಉಳ್ದೀನಿ, ಇನ್ನು. ಎಲ್ಲ ತಿನ್ನ ಅನ್ನದಾಗದ, ತಿಳೀತ’ ಅತ್ತಿ ಹೂಬತ್ತಿ ಹೊಸೆಯುತ್ತ ಹೇಳಿತ್ತು.

‘ಅತ್ತಿ, ನಿಂಗ ಎಷ್ಟೇ ವಯಸ್ಸು?’

‘ಈಗೆಷ್ಟು ಇಸ್ವೀನೋ ಅಷ್ಟೇ ವಯಸ್ಸು ನೋಡು, ನಂಗ.’

‘ಅಂದ್ರೆ ನಿಂಗ ಈಗ ಮೂರು ವರ್ಷನೇನೆ? ನಾನೇ ನಿಂಗಿಂತ ಹತ್ತು ವರ್ಷ ದೊಡ್ಡಾತ ಆದ್ನಲ’

‘ಎಂತಾ ಮೂರೋ ಮಾರಾಯ? ನಂಗೀಗ ಐವತ್ತಾರಾಯ್ತು ಮೊನ್ನೆ ಶ್ರಾವಣಕ್ಕ, ನಿಮ್ಮಮ್ಮ ಅದಾಳಲ, ಶಕ್ಕು, ಆಕೀನೂ ನಾನೂ ಒಂದ ದಿನ ಹುಟ್ಟಿದಾವ. ನೋಡ್ದೋರೆಲ್ಲ ನಮ್ಮನ್ನ ಅವ್ಳೀಜವ್ಳಿ ಅಂತಿದ್ರು.’

‘ನಮ್ಮಮ್ಮ ಶಕ್ಕು ಅಲ್ಲತ್ತೀ. ರುಕ್ಮಿಣಿ.’

‘ನಿಮ್ಮಪ್ಪ ನಾರಾಯಣ ಹೌದೋ ಅಲ್ಲೋ’

‘ಅಲ್ಲ, ನಮ್ಮಪ್ಪ ಅನಂತು’

‘ಹೌದೌದು, ನಿಮ್ಮಪ್ಪ ಅನಂತ. ನಿನ್ ಹೆಸರು ಹನುಮಂತು. ನಿಂಗೀಗ ಇಪ್ಪತ್ತಾರೇ ವಯಸ್ಸು, ಹೌದೋ ಅಲ್ಲೋ’ ನಕ್ಕು ಕೇಳಿತ್ತು, ಅತ್ತಿ. ಮತ್ತೆ ಕರೆದು ಹೇಳಿತು. ‘ನಾನ್ಹೇಳ್ತೀನಿ, ಕೇಳು. ನಿಮ್ಮಪ್ಪ ನಾರಾಯಣ. ಭಾರಿ ಶೋಕಿವಾಲ. ನಿಮ್ಮಮ್ಮ ಶಕ್ಕೂಗೆ ವಯಸ್ಸಲ್ಲದ ವಯಸ್ಸಲ್ಲಿ ಬಸುರುಮಾಡಿದಾತ, ತಿಳ್ಕೋ. ನಿಮ್ಮಪ್ಪಗ ಕೇಳ್ಬೇಡ, ಆದ್ರ’  ಎಂದು ಗುಟ್ಟಿನಲ್ಲಿ ಹೇಳಿತು.

‘ನಾನು ಆನಂದ, ಅಜ್ಜಿ’

‘ನೀನು ಆನಂದಾನ ಆಗು, ಸಂತೋಷಾನಾರ ಆಗು. ಒಟ್ಟು ನೀನು ನಾರಾಯಣನ ಮಗ. ಯಾಕಂದ್ರ ಶಕ್ಕೂಗ ಐವತ್ತಾರಾದರ ನಿಂಗೆ ಹನ್ನೆರಡಾಗಬೇಕು ಹೌದೊ ಅಲ್ಲೋ’ ಅಂತ ಮತ್ತೆ ಹತ್ತಿಗೆ ಕೈ ಹಾಕಿತು. ಮತ್ತೆ ಕಣ್ಣೂ ಕಿರಿದು ಮಾಡಿ ನೋಡಿ ‘ನಿಮ್ಮಪ್ಪ ಎಲ್ಲೋ’ ಅಂತು.

‘ಅಪ್ಪ ಮನೇಲಿಲ್ಲ.’

‘ತಗಿಯೋ, ಸುಳ್ಳ ಹೇಳ್ಬೇಡ. ನಾಣಿ ಈ ಸಮಯದಾಗ ಎಲ್ಲೂ ಹೋಗಲ್ಲ. ಶಕ್ಕೂಗ ಬಹುಳದಾಗ ಸಮಯ,  ಈಗ ಮೊನ್ನೆ ನಂಗೂ ಶಕ್ಕೂಗು  ನಿಂತಿದ್ದು, ವರ್ಷದ ಕೆಳಗ. ನೀ ಹುಟ್ಟಿದಮೇಲೆ ಆಕಿ ಹೊರಗ ಕೂರ್ಲಿಲ್ಲ. ನಾ ಹೇಳಿದ್ದೆ, ಶಕ್ಕೂಗ. ಇದೇ ಕೊನೀದಂತ.’

‘ಅತ್ತೀ, ನೀ ಯಂತದ್‍ಹೇಳ್ತೀಯೇ. ನಾ ಆನಂದಾನೇ.’

‘ಹ್ವಾಗೋ, ರಂಡೀಮಗನ, ನೀ ಎಲ್ಲ ಶಕ್ಕೂ ಹಂಗ ಹರಾಮೀ.’

‘ಏ ಅತ್ತೀ... ಮನ್ಸಿಗೆ ಬಂದಹಂಗ ಮಾತಾಡ್ಬೇಡ್ವೇ........ ಅಯ್ಯಯ್ಯಾ.. ಇಸ್ಸೀ.. ಅತ್ತಿ ಇಸ್ಸಿ ಮಾಡ್ಕಂತೇ... ಅಮ್ಮ ಹೇಳಿದ್ರೆ ನಿಂಗ ಅರ್ಥ ಆಗಲ್ಲ. ನಡೀ ಬಚ್ಚಲಗ’

‘ಎಂತಾ ಇಸ್ಸೀನೋ. ಅದು ಮಡ್ನೀರೋ. ಎಲ್ಲೋ ಕೊಂಚ ತೆಳಗ್ ಬಿದ್ದದಷ್ಟೇ.’
........

‘ಪಂಡಿತ್ ಡಿಸ್ಪೆನ್ಸರಿ’ಯ ಕೆಳಗೆ ‘ಇಲ್ಲಿ  ಪೋಲಿಯೋ ಲಸಿಕೆ ಕೊಡಲಾಗುವುದು’ ಅನ್ನುವುದನ್ನೇ ನೋಡುತ್ತ ಅತ್ತಿಗೆ ಚಿಕ್ಕಂದಿನಲ್ಲಿ ಪೋಲಿಯೋ ಲಸಿಕೆ ಕೊಡಿಸಿದ್ದರೋ ಇಲ್ಲವೋ ಎಂದು ಯೋಚಿಸುತ್ತಾ ಒಳಗೆ ಹೋದ, ಅನಂತು.

‘ಬಾರಪಾ, ಬಾ, ಅನಂತು. ಏನ್ಸಮಾಚಾರ. ಎಲ್ಲಾ ಆರಾಮೇನು’ ಕೇಳಿದ, ಪಂಡಿತ.

‘ಆರಾಮಿದ್ದರ ನಿನ್‍ಬಳಿ ಯಾಕ್‍ಬರಣ, ಹೇಳಪ್ಪ. ನಾವೆಲ್ಲಾ ಆರಾಮೇ ನೋಡು. ನಮ್ಮತ್ತಿ ಅದಾಳಲ. ಆಕಿ, ನಿನ್ನಿ ರಾತ್ರಿ ಎಂತದೋ ತಿನ್ನಕ ಅಂತ ಬಾಯ್ಕಳ್ದಿದ್ದು ಹಂಗೇ ಸೊಟ್ಟಕ್ಕೇ ಮಾಡ್ಕೊಂಡು ಕೂತಿಯಾಳೆ. ಏನೂ ಅನ್ನ, ನೀರೂ ಹೋಗೋ ಹಂಗಿಲ್ಲಪ. ಮುದ್ಕೀ ಸತ್‍ಗಿತ್ತಾಳೋ ಏನಂತ. ಕೊಂಚ ಗಾಬ್ರಿ ಆತು. ಅದಕ್ಕೇ ಹಿಂಗೇ ಬಂದೆ. ಕೊಂಚ ಮನೀಕಡೀ ಬಂದು ನೋಡಕ್ಕಾಗತ್ತೇನಪ.’

‘ಸೊಲ್ಪ ಬಿಜಿಯಾಗಿದ್ನಲಪ. ಮುಂಜಾನಿಂದ ರಶ್ಶು. ಈಗ ಕೊಂಚ ಕಾಫಿ ಕುಡ್ಯಾಣ ಅಂತ ಕೂತಿದ್ದೆ. ಇರ್ಲಿ, ತಗ ಬರೂಣ. ಈ ಸೀಜನ್‍ದಾಗ ಏನ್ ಕಾಯ್ಲೇ ಬೀಳ್ತಾರಪ, ಜನ. ಈ ಬೀದೀಗ ನಾ ಡಿಸ್ಪೆನ್ಸರಿ ತೆಗ್ದಿದ್ದಕ್ಕ, ಜನ ಬಚಾವ್, ಏನಂತೀ’ ಪಂಡಿತ ತನ್ನ ಬ್ಯಾಗ್ ಹಿಡಿದ. ‘ಅಂದಹಾಗೆ, ನಂದಿನೀ ಹೆಂಗದಾಳಪ,’ ಕೇಳಿದ,

ಅನಂತೂ ‘ಪರವಾಗಿಲ್ಲಪ’ ಅಂದ.
ಹೊರಗೆ ಬರುತ್ತಾ ‘ಈ ಬೋರ್ಡ್ ನೋಡ್ದ್ಯನು, ಅನಂತೂ. ಈ ಕಡೀಂದ ನೋಡಿದ್ರ, ಂಒS ಅಂತ ಕಾಣ್ಬಕು,  ಆ ಕಡೀಂದ ನೋಡಿದ್ರ ಊಒS ಅಂತ ಕಾಣ್ಬಕು, ಹಂಗ ಬರ್ಸೀನಿ. ಎರಡೂ ಪದ್ಧತೀನ ನಂಬೋವರೂ ಬರ್ಬಕು. ಆ ಆರ್ಟಿಸ್ಟು ಚಲೋ ತಲೀ ಇರಾವ, ನೋಡು’ ಅಂದು ಮುಂದಿನ ಬಾಗಿಲನ್ನು ಎಳೆದ.

ಪಂಡಿತನ ಕ್ಲಿನಿಕ್ಕಿನ ನಾಲ್ಕು ಬೀದಿಗಳಾಚೆಯೇ ಅನಂತೂನ ಮನೆ.

‘ಏ ಹೋಗೋ, ಆನಂದ, ಹೋಗೋ ಒಳಗಿಂದ ಕೊಂಚ ಸೋಪು ತಾರೋ. ಎಂತೆಂತವ್ರನ್ನೋ ಮುಟ್ಟಿದ್ ಈ ಕೈನಾಗ ಅತ್ತೀನ ಮುಟ್ಟೋಕಾಗ್ತದನು? ಆದಷ್ಟು ಬ್ರಾಮಿನ್ಸನ ಮಾತ್ರ ನೋಡ್ಬಕು ಅಂತಲೇ ಪ್ರಯತ್ನ ಮಾಡ್ತೀನಿ. ಆದ್ರೇ ಏನ್ಮಾಡ್ತೀ ಅನಂತೂ. ಆ ಕುಂಬಾರಗೇರಿಯವ್ರು ಬಂದ್ರೆ ಇಲ್ಲ ಅಂತ ಹೇಳೂದು ಭಾಳ ಕಷ್ಟನಪ. ಈ ಕೆಲಸದ್ ಜತೀಗೂ ಧರ್ಮ ಕರ್ಮ ಉಳಿಸ್ಕೊಂಡು ಹೋಗ್ತಿದ್ದ ನಮ್ಮಪ್ಪ ಅಂದ್ರ, ಆತ ಮಹಾಜೀವ ಬಿಡು, ಏನಂತೀ’ ಕೇಳಿದ.

‘ಹೌದ್‍ಹೌದು ಬಿಡು.’ ಅನಂತು ತಲೆಯಾಡಿಸಿದ.

ಒಳಗೆ ಪಡಸಾಲೆಗೆ ಅಂಟಿಕೊಂಡಂತೇ ಇದ್ದ ಒಂದು ಸಣ್ಣ ಕೋಣೆಯಲ್ಲಿ ಅತ್ತಿ ಕೂತಿತ್ತು. ಆ ಕೋಣೆಯಲ್ಲಿ ಕಿಟಕಿಗಳು ಯಾವುದೂ ಇರಲಿಲ್ಲ. ಗೋಡೆಯ ಮೇಲೆ ಸ್ವಾದಿಮಠದ ಪಟವಿತ್ತು. ಒಂದು ಜೀರೋ ಕ್ಯಾಂಡಲ್ ಬಲ್ಬು ಉರೀತಿತ್ತು. ಒಳಗೆ ಬಂದ ಪಂಡಿತ ‘ಏನೇ ಅತ್ತಿ.. ಹೆಂಗಿದೀಯೇ... ನಾನ್ಕಣೇ ಪಂಡಿತ, ಡಾಕ್ಟ್ರು.. ನಿನ್ನ ನೋಡ್ಕೊಂಡು ಹೋಗಣ ಅಂತ ಬಂದೀನಿ. ನಿನ್ನ ಮುಟ್ಬೌದೋ ಇಲ್ಲೋ, ಹೇಳು. ನಿಂಗೆ ಬೇಜಾರಾದ್ರೆ, ಬೇಕಾರ ಮಡ್ನೀರ್ ಹಿಡ್ಸಿ ಸ್ನಾನಾ ಮಾಡೇ ನೋಡಣ. ಇಲ್ಲಾಂದ್ರ, ನಿಮ್ಮನೇಲಿ ದಾಬಳಿ ಇದ್ರ ಕೊಡ್ರೇ.. ಎಲ್ಹೋದ್ರು. ಮನಿ ಹೆಂಗಸ್ರೆಲ್ಲ.... ಏನೇ ಅತ್ತಿ, ಸ್ಮಾರ್ತ ಡಾಕ್ಟರಿಗೆ ಮನೀ ದಾಬಳಿ ಉಡಿಸ್ತೀಯೇನೇ?’ ಅಂದ. ಸುಮ್ಮನೆ ಕೂತಿದ್ದ ಅತ್ತಿಯನ್ನು ನೋಡುತ್ತ ತನ್ನ ಬ್ಯಾಗಿನಿಂದ ಇಂಜಕ್ಷನ್ ಸಿರಿಂಜು, ಸ್ಟೆಥೋಸ್ಕೋಪು ತೆಗೆದ ‘ಏನತ್ತೀ.... ನಾನು ಪಂಡಿತ... ಕಿವಿ ಕೇಳ್ತದೆ, ತಾನೇ’ ಎಂದು ಗಂಟಲು ಹರಿಯುವ ಹಾಗೆ ಕಿರುಚಿದ.


ಕಣ್ಣು ಬಿಟ್ಟು ನೋಡಿತು, ಮುದುಕಿ. ‘ಕ್ವೂಕ್ವೂಬ್ಯಾಡ್ವೋ’ ಅಂತು. ಕಟಬಾಯಲ್ಲಿ ಜೊಲ್ಲು ಸುರಿಯುತ್ತಿತ್ತು. ಬಾಯಿ ಇನ್ನೂ ಸೊಟ್ಟ ಆಯಿತು.

‘ಇದು ಸ್ಟ್ರೋಕಪ, ಅನಂತೂ’ ಅಂತಂದವನೇ ಅತ್ತಿಯನ್ನು ಮುಟ್ಟದೇ ತನ್ನ ಬ್ಯಾಗನ್ನು ಮುಚ್ಚಿದ. ‘ಸುಮ್ನೆ ಆಕೀನ ಮುಟ್ಟಿ ಮಡೀ ಯಾಕ ಹಾಳ್ಮಾಡ್ಬೇಕಪ? ಬುದ್ಧಿ ಸ್ವಾಧೀನದಾಗ ಇದೇ ಹೌದೋ ಅಲ್ಲೋ?’ ಕೇಳಿದ.

`ಮೊದಲು ಹೆಂಗಿತ್ತೋ ಅದೇ ರೀತಿ ಅದಪ್ಪ’

‘ಇದು ಖಂಡಿತಾ ಸ್ಟ್ರೋಕಪ್ಪ. ಈಗ ಮುಖಕ್ಕೆ ಮಾತ್ರ ಹೊಡೆದದೆ, ಮುಗೀತು ಕತಿ ಇನ್ನು. ಅತ್ತೀ ಹತ್ರ ಏನಾರ ಭಾರೀ ಆಸ್ತೀ ಇದ್ರ ವಿಲ್ ಬರೀಯಕ್ಕ ಹೇಳ್ಬಿಡಪ್ಪ. ಹೆಚ್ಚೂ ಅಂದ್ರ ಇನ್ನು ನಾಲ್ಕ್ದಿನ ಅಷ್ಟೇ. ನೋಡು ಬರ್ಕಾ ನಾ ಹೇಳಿದ್ದನ್ನ, ತಾರೀಖು ಹಾಕಿ. ಭಾಳ ಮಂದೀನ ನೋಡಿದೀನಪ ನಾನು. ಮದ್ಲು ಬಾಯಿಂದ ಶುರೂ ಆಗದು ಆಮೇಲೆ, ಕೈಕಾಲು, ಸೊಂಟ, .. ನಂತರ ಮುಗೀತಂಕ’

‘ಅತ್ತೀಗೆಂತದೋ ಆಸ್ತಿ ಪಂಡಿತ. ಆಕಿ ಮನೀ ಮುಂದ ಜಗಲೀ ಮುಂದ ಕೂರ್ತಿದ್ದೇ ನಮ್ಮಾಸ್ತಿ ನೋಡಪ. ದಿನಾ ಹೂಬತ್ತಿ ಮಾಡ್ತಿದ್ದೇ ಪುಕ್ಕಟೇ ಆಸ್ತಿ ಅಷ್ಟೆ. ಹಿಂದಿಲ್ಲ, ಮುಂದಿಲ್ಲ, ಆಕೀಗ. ಈ ಮನ್ಯಾಗ ಸುಮಾರು ಮೂವತ್ತುವರ್ಷದಿಂದ ಅದಾಳ’ ಮತ್ತೆ ಪಂಡಿತನತ್ತ ನೋಡಿ ‘ಕೊಂಚ ಈಚೀಕಡೀ ಬತ್ರ್ಯೇನಪ’ ಅಂತ ಕರಕೊಂಡು ಹೋದ.

‘ಏ ರುಕ್ಮಿಣೀ, ಕೊಂಚ ಕಾಫೀ ಮಾಡೇ’ ಅಂದು ಪಂಡಿತನ ಕಡೆ ತಿರುಗಿ ‘ಹಂಗಾರ, ಮುಗೀತಂತೀಯನು, ಅತ್ತೀ ಕಥಿ?’

‘ನಾ ಹೇಳಿದ್ಮೇಲೆ ಬರ್ಕೋ, ಹೇಳಿದ್ನಲ್ಲ ಆಗೇ'

‘ಹಂಗಲ್ಲಪ, ಏನಾರ ಮಾಡಕ್ಕಾಗತ್ತ ನೋಡ್ಬೇಕಿತ್ತೋ, ಪಂಡಿತ. ಏನಾರ ಕೊಂಚ ಸ್ಟ್ರಾಂಗಾಗಿರೋ ಇಂಜಕ್ಷನ್ನೋ ಏನಾರ ಕೊಟ್ನೋಡಕ್ಕಾಗ್ತದನು?’

‘ಏ ಹೋಗ್ಲೀ ಬಿಡೋ ಅನಂತೂ. ಆಕಿಗ ಎಷ್ಟೀಗ ವಯಸ್ಸು?’ ಪಂಡಿತ ಕಾಫಿ ಕುಡಿಯುತ್ತಾ ಕೇಳಿದ. ಹೊರಗಿನಿಂದ ಬಂದ ನಂದಿನಿಯನ್ನು ನೋಡಿದ ತಕ್ಷಣ ಪಂಡಿತ  ‘ಏನೇ ನಂದೂ ಹೆಂಗದೆ ನಿನ್ತುರಿಕಿ?’ ಎಂದ. ಉತ್ತರ ಕೊಡದೇ ಒಳಗೋಡಿದಳು. ನಂತರ ಅನಂತೂನ ಕಡೆ ತಿರುಗಿ ‘ನಿಮ್ ನಂದೂಗ ಗಂಡ್ಗಿಂಡು ನೋಡ್ತ್ಯೋ ಹೆಂಗೆ’ ವಿಷಯಾಂತರ ಮಾಡಲು ಪ್ರಯತ್ನಿಸಿದ.

‘ನೋಡಣೋ, ಪಂಡಿತ... ಅದಲ್ಲ ವಿಷಯ.. ಸರ್ಕಾರಿ ಪಿಂಚಣಿ ಲೆಕ್ಕದ್ ಪ್ರಕಾರ ಆಕೀಗ ಎಂಭತ್ತಾರು ವರ್ಷ. ಆಕೀಗ ಅವ್ಳಾಕಿ ಅನ್ನೋರು ಯಾರೂ ಇಲ್ಲದಿರೋದರಿಂದ ಇನ್ನೂ ಪಿಂಚಣಿ ಬರ್ತಾ ಇದ. ಆಕೀಗೆಂತ ಖರ್ಚೋ. ನಂಗೂ ರಿಟೈರಾದಮ್ಯಾಲ ಕೊಂಚ ಕೈಗ ಬಂದದಪ್ಪ. ಆಕೀ ಹೋದ್ರ ಆಕಿ ಜತಗ ಅದೂ ಹೋಗ್ತದನೋ ಅಂತ ನಂಗೆ ಅನುಮಾನ. ಯಾರ್ನಾರ ಕೇಳ್ಬಕು, ಗುಮಾಸ್ತರನ್ನ. ಮತ್ತ, ಮುದ್ಕಿ ಅದರ ಪಾಡಿಗದದ. ಈ ಮನೀ ಒಂದು ಆಕಿ ಹೆಸರಾಗ ಇತ್ತು. ಈಗ ಒಂದು ಹತ್ತು ವರ್ಷದ ತಳಗೆ ಅರಳುಮರುಳು ಜಾಸ್ತಿ ಆತಂತ ಇದ್ದಕ್ಕಿದ್ದಂಗೆ ಒಂದಿನ ನಂಗೆ ಬರ್ಕೊಡ್ತೀನಿ ಅಂದ್ಲು. ನಾ ಬೇಡ ಅನ್ಲೇನಪ. ಅಷ್ಟಾಗೂ ಈ ಮನೇ ನನ್ಹೆಸ್ರಿಗಾದ್ಮೇಲೆ ಬೇಕಾದಷ್ಟು ಕೆಲ್ಸ ಮಾಡ್ಸಿದ್ದೀನಿ. ಮತ್ತ ಆಕೀಗೇನು ಕಮ್ಮಿ ಮಾಡಿಲ್ಲ. ಈಗ ನಾಲ್ಕು ವರ್ಷದಿಂದ ಮನೇಯವರೆಲ್ರೂ ಉಚ್ಚಿ ಹೇಲು ಬಳ್ದಿದೀವಿ’  ಅಂದು ತಡವರಿಸಿ,


‘ಪಂಡಿತ, ಹಿಂಗಂತೀನಂತ ಬೇಸರ ಮಾಡ್ಕೋಬೇಡಪ. ಆಸ್ಪತ್ರೇಗೇನಾರ ಸೇರ್ಸಿದ್ರೆ ಏನಾರ ಸುಧಾರಿಸಬೌದೇನು?’

‘ರೊಕ್ಕ ಕಳೀಬೇಕಂತೀಯೇನು?’

‘ಇಲ್ಲೋ’

‘ಅನಂತೂ, ಇದು ನಿನ್ನೇ ನೀನು ಚಿಕಿತ್ಸೆ ಮಾಡ್ಕೋತಿದೀಯಪಾ. ಸುಮ್ನೆ ಅತ್ತಿ ಮನ್ಯಾಗ ಸಾಯ್ಲಿ ಬಿಡು, ಮುದ್ಕಿ. ನೀನು ಇದುವರ್ಗೂ ಏನೋ ಮಾಡಿಲ್ಲ ಅಂತ ಹೇಳಿ, ಈಗ ಎಲ್ಲ ಮಾಡಕ್ಕ ಹೋಗ್ಬೇಡಪ್ಪ. ಸಾಯೂಮುನ್ನ ಆಕೀ ನೆಮ್ದಿಯಿಂದ ಸಾಯೂಕಾರ ಬಿಡು’

‘ಹಂಗಂತೀಯ’

ಅತ್ತಿ ಒಳಗೆ ಒಂದೇ ಸಮನೆ ಹೂಬತ್ತಿ ಹೊಸೆಯುತ್ತಲೇ ಕೂತಿತ್ತು. ‘ಏ ಶಕ್ಕೂ’ ಕೂಗಿತು.

‘ಏ ಆನಂದ’ ಕೂಗಿದ, ಅನಂತು. ಪಂಡಿತನ ಕಡೆ ತಿರುಗಿ, ‘ಶಕ್ಕು, ಸುಬ್ಬಣ್ಣ, ರುಕ್ಮಿಣೀ ಎಲ್ಲರೂ ಆನಂದನೇ’ ಅಂದು ನಕ್ಕ. ಆನಂದ ಒಳಗಿಂದ ಇನ್ನೊಂದು ಪಾಕೀಟು ಹಿಡಿದು ಹೊರಗೆ ತೊಟ್ಟಿಯಲ್ಲಿ ಹಾಕಿ ಬಂದ.

‘ಈ ಶಕ್ಕೂ ಅಂದ್ರೆ ಯಾರೋ, ಮಾರಾಯ?’ ಪಂಡಿತ ಕೇಳಿದ.

‘ಆಕಿ ಅವ್ಳೀಜವ್ಳೀನೋ, ನಿಂಗೊತ್ತಿಲ್ಲನು’ ಅಂದ. ಇಬ್ಬರೂ ನಕ್ಕರು
........


‘ಏ ಅತ್ತೀ, ನಿಂಗೆಷ್ಟೇ ವಯಸ್ಸು?’

‘ನಾ ಹೇಳ್ಲಿಲ್ಲೆನೇ, ಈಗ ಎಷ್ಟು ಇಸ್ವೀನೋ ಅಷ್ಟೇ ವಯಸ್ಸು ನಂಗೆ’

‘ಹಂಗಾರ ಇನ್ನಾರು ವರ್ಷಕ್ಕೆ ನಿಂಗೆ ನೂರಾಗ್ತದೇನೆ?’

‘ಇಲ್ಲೇ ನಂಗೆ, ಅರವತ್ನಾಕು. ಆ ಶಕ್ಕು ಇದ್ಲಲ್ಲ, ನಿಮ್ಮವ್ವ. ಆಕೀನೂ ನಾನೂ ಅವ್ಳೀಜವ್ಳೀ. ಇದ್ದಕ್ಕಿದ್ದಂಗೆ ಹೋಗದು ಅಂದ್ರೇನೇ? ಋಷಿಪಂಚಮಿ ಉದ್ಯಾಪ್ನಿ ಮಾಡ್ಕಂಡು ಇನ್ನೂ ಮೂರ್ವರ್ಶ ಆಗಿತ್ತು, ನೋಡವ್ವ, ಹೋಗೇ ಬಿಟ್ಳು. ಒಳ್ಳೇ ಮುತ್ತೈದೆ. ಆ ನಾರಾಯಣಂಗೆ ಆ ನಾರಾಯಣಾನೇ ಕಾಪಾಡ್ಬಕು. ಇಷ್ಟರ ಜತೀಗ ಸಾಯೂಕಾಲಕ್ಕ ಗರತೀ ಏನೂ ಆದ್ಲು ಅನ್ನೂಹಂಗ ಈಗ ಆತಗ ಕೈಕೂಸು ಬ್ಯಾರೆ. ಆ ಭಗವಂತನೇ ಗತಿ. ನೀನೂ ದೊಡ್ಡಾಕಿ ಆಗ್ತಾ ಅದಿ. ಆ ಕೂಸನ್ನ, ನಾರಾಯಣನ್ನ ಸರೀಗ ನೋಡ್ಕಬಕು’

‘ಅತ್ತೀ, ಈ ಶಕ್ಕೂ ಯಾರೇ? ಯಾವಾಗ್ಲೂ ಹೇಳ್ತಾನೇ ಇರ್ತೀಯಲ್ಲೇ? ಅಮ್ಮಗ ಕೇಳಿದ್ರ, ಆ ಶಕ್ಕೂ ಹೋಗಿ ಮೂವತ್ತು ವರ್ಷದ ಹತ್ರ ಆತು ಅಂತಾಳ. ಆಕೀನೂ ನೋಡೀಲ್ವಂತ’

‘ಯಾರೇ ಅಮ್ಮ’

‘ನಮ್ಮಮ್ಮನೇ!’

‘ಅದೇ ಶಕ್ಕೂ’

‘ಅಲ್ವೇ ರುಕ್ಮಿಣೀ’

‘ನೀ ಹುಟ್ಟಿದ್ದು ನೆಹರೂ ಇದ್ದಾಗ, ತೊಟ್ಲಿಗೆ ಹಾಕ್ದಾಗ ಊರಾಗಿನ ಮಂದೀಗೆಲ್ಲ ಊಟಾ ಹಾಕಿದ್ದ, ನಿಮ್ಮಪ್ಪ ನಾರಾಯಣ. ಶಕ್ಕೂಗ ಹೇಳಿದ್ದೆ, ಆ ನಾರಾಯಣ ಹರಾಮಿದಾನೆ. ವಯಸ್ಸಲ್ಲದ ವಯಸ್ಸಲ್ಲಿ ಏನಾರ ಹೆಚ್ಚುಕಮ್ಮಿ ಮಾಡ್ಕೋತೀಯಂತ. ಆತ ತಲೀಗ ಹಚ್ತಿದ್ದ ಎಣ್ಣೀ ಏನು, ಹಾಕ್ತಿದ್ದ ಕೋಟು, ಮೈಸೂರಮಂದಿ ರೀತಿ ಪ್ಯಾಟ ಬ್ಯಾರೆ, ಮಹಾರಾಜ ಇದ್ದಂಗಿದ್ದ. ನಾ ಅಂದ್ಕೊಂಡ್‍ಹಂಗೇ ಆತು. ನಿನ್ನ ಹೆತ್ಲು, ಹುಚ್ಚೇ ಹಿಡೀತು. ನೋಡು ಆಕೀಗ. ನಂತರ ಆರೇ ತಿಂಗ್ಳಾಗ ಸತ್ಲು. ಎಲ್ಲಾ ಅವ್ರವ್ರ ಹಣೀಬರ. ಪಾಪ ನಾರಾಯಣ ಎತ್ಲಿದಾನೋ..... ಅದ್ಸರಿ, ನೀ ಎಂದು ಬಂದೆ, ಊರಾಗಿಂದ. ನಾರಾಯಣ ಆರಾಮಿದಾನೋ ಇಲ್ಲೋ?’

‘ಯಾವ್ ನೆಹರೂನೇ.. ನಾ ಹುಟ್ಟಿದ್ದು ನೆಹರೂ ಮಗಳ್ ಸತ್ತಾಗಂತೆ. ಅಮ್ಮ ಹೇಳ್ತಿದ್ಲು’

‘ಶಕ್ಕೂಗೇನ್ ಗೊತ್ತೇ?’

‘ಶಕ್ಕೂ ಅಲ್ಲೇ ರುಕ್ಮಿಣೀ. ಸರ್ಸರಿ.. ನಾನ್ ಹೊರಗ್ ಹೋಗ್ತೀನಿ... ನಿಂಗೇನಾರ ಬೇಕನು?’

‘ಇಲ್ಲ ನಿಮ್ಮಪ್ಪ ಅನಂತೂನ ಕರಿ... ಕೊಂಚ ಬಚ್ಚಲಿಗ ಹೋಗ್ಬೇಕು... ಹಂಗೇ ರುಕ್ಮಿಣೀಗೂ ಹೇಳು ನಂಗ ಜಳಕ ಮಾಡೂದಿದ, ಅಂತ.’

‘ಹಾ ಹಂಗೆ, ನಮ್ಮಪ್ಪ ಯಾರು?’ ಇದ್ದಕ್ಕಿದ್ದಂತೆ ಅತ್ತಿಯ ಮಾತಿನ ವರಸೆ ಸರಿಹೋಗಿದೆ ಅನ್ನಿಸಿದಾಗ ನಂದಿನಿ ಕೇಳಿದ್ದಳು.

‘ಅನಂತು’

‘ಅಮ್ಮ’

‘ರುಕ್ಮಿಣಿ, ಯಾಕೇ ನಂದು, ನನ್ನ ಪರೀಕ್ಷೆ ಮಾಡ್ತಿದೀ ಏನು? ನಾಳೆ ಪಕ್ಕಕ್ಕೊಬ್ಬ ಬರ್ಲೀ ಆಗೀ ಆಟ ಎಲ್ಲ ಮುಗೀತು, ಅಂತಿಳ್ಕ.. ನಂಗೀಗ ಹೊಟ್ಟಿ ಭಾರಿ ಹಸಿದಿದೆ... ಬಚ್ಚಲಿಗ ಇಳ್ಸಕ್ಕೆ ಅಮ್ಮಗ ಹೇಳು... ಜಳಕ ಆಗಿ ಪಾರಣೆಮಾಡ್ಬಕು.’

‘ಏ ಅತ್ತಿ... ಎಂತದೇ. ಇಂದು ಏಕಾದಶೀನೇ... ನಿಂದು ಈಗಷ್ಟೇ ಜಳಕ ಆತಲ್ಲೇ’ ಕಿಲಕಿಲ ನಕ್ಕಳು, ನಂದಿನಿ.

‘ನಗು, ನಗು, ನಿನಗೆ ಈಗ ನಗೋ ವಯಸ್ಸು ಗೊತ್ತಲ.. ಹೆಣ್ಣುಮಕ್ಕಳಿಗೆ ನಗೋ ವಯಸ್ಸು ಮುಗೀಯೋದ್ರಾಗ, ಲಗ್ನ ಆಗ್ಬಿಡ್ಬೆಕು’

‘ಹೋಗತ್ತೀ’

‘ಏ ಶಕ್ಕೂ.....’ ಮತ್ತೆ ಕೂಗಿದಳು, ಅತ್ತಿ.
.........


ಏನಾದರೂ ಆಗಲೀ, ಅತ್ತಿಯನ್ನು ಒಮ್ಮೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿಯೇ ಬಿಡುವ ಎಂದು ಅನಂತು ದೃಢನಿರ್ಧಾರ ಮಾಡಿದ್ದು, ಅತ್ತೀಗೆ ಒಂದುವಾರವಾದರೂ ಏನೂ ಗುಣವಾಗದೇ ಹೋದದ್ದಕ್ಕೆ. ಆಕೆಯ ಬಾಯಿ ಇನ್ನೂ ಸೊಟ್ಟಕ್ಕೇ ಉಳಿದಿತ್ತು. ಆದರೆ ಪಂಡಿತ ಹೇಳಿದಹಾಗೆ, ಸ್ಟ್ರೋಕು ಕೈಕಾಲುಗಳಿಗೇನೂ ಹೊಡೆಯಲಿಲ್ಲ. ಹಾಗೆಂದು ಹೋಗಿ ಪಂಡಿತನನ್ನು ಕೇಳಿದಾಗ ಆತ ‘ಆಕೀಗ ಮದ್ಲ ಕೈಕಾಲು ಸ್ವಾಧೀನ ಇದ್ದಿದ್ದ್ರಲ್ವ ಅವಕ್ಕ ಸ್ಟ್ರೋಕ್ ಹೊಡಿಯೂದು. ಕೀಲುಗಳೆಲ್ಲಾ ಗಂಟು ಹಿಡಿದು ಹೋಗ್ಯಾವಪ್ಪ. ರ್ಯುಮಾಟಿಸಮ್, ದಿನಾ ಪಾಯಕಾನಿ ಪಾಕೀಟಲ್ಲಿ ಕೊಡೂ ಅಷ್ಟು ಶಕ್ತೀ ಅದೋ ಅಲ್ಲೋ ಮುದುಕೀಗ. ಅದಕ್ಕೆ ಸಂತೋಷಪಡು.’ ಎಂದಿದ್ದ.


ಇಷ್ಟರಮಧ್ಯೆ ಹಿಂದಿನ ಬೀದಿಯ ಸೀನಣ್ಣನ ಮೊಮ್ಮಗ ಕೆಎಂಸೀಯಲ್ಲಿ ಪೀಜಿ ಮಾಡುತ್ತಿದ್ದವನು ಅಜ್ಜನ ವೈದಿಕಕ್ಕಂತ ಊರಿಗೆ ಬಂದಿದ್ದ. ಹ್ಯಾಗಾದರೂ ಆಗಲೀ, ಒಮ್ಮೆ ನೋಡಿಹೋಗು ಎಂದಿದ್ದಕ್ಕೆ, ಬಂದುನೋಡಿದ. ಆತ ಅತ್ತೀನ ನೋಡಿದವನೇ ‘ಇದು ಸ್ಟ್ರೋಕು, ಪಾಕು ಎಂತದೂ ಅಲ್ಲ. ಬಿಟ್ಟಬಾಯಿ ಬಿಟ್ಟಂಗೆ ಕೂತಿಯಾಳೆ ಅಂದ್ರೆ ದವಡೆಮೂಳೆ ಜಾರಿದೆ, ಅಂತರ್ಥ. ಅನಂತಮಾವ. ಯಾರಾರ ಮೂಳೆಡಾಕ್ಟರ ಹತ್ರ ತೋರಿಸಿದ್ರೆ ಒಮ್ಮೆಗೇ ಸರಿಮಾಡ್ತಾರೆ. ನಾನು ಬರಕೊಡ್ತಿದ್ದೆ, ಆದ್ರೆ ನಂಗೆ ಈ ಊರಲ್ಲಿ ಯಾರೂ ಗುರ್ತಿಲ್ಲ.’ ಎಂದು ಹೇಳಿಹೋಗಿದ್ದ. ಇದನ್ನು ಕೆಳಿದ ಮೇಲೆ, ಏನಿಲ್ಲದಿದ್ದರೂ ಕಡೆಯಪಕ್ಷ ಸರಕಾರಿ ಆಸ್ಪತ್ರೆಗಾದರೂ ಅತ್ತಿಯನ್ನು ಕರಕೊಂಡು ಹೋಗುವಾ ಎಂದು ನಿರ್ಧರಿಸಿದ್ದ. ಹೋಗುವ ಮುನ್ನ ಸೀನಣ್ಣನ ಮೊಮ್ಮಗ ‘ಆಕಿ, ನೋಡೋಕೇನು ಇನ್ನೂ ಸುಂದರಿಯಾಗಲ್ಲ. ಜಗಿಯೋಕೆ ಹಲ್ಲಂತೂ ಮೊದಲೇ ಇಲ್ಲ. ಮಾತೊಂದು ಸ್ಪಷ್ಟವಾಗಿ ಆಡಬಹುದೇನೋ, ಸರಿಮಾಡ್ಸಿದ್ರೆ. ಈಗ ತಿನ್ನೋಕಿಂತ ಚೆನ್ನಾಗಿ ತಿನ್ನಬಹುದು. ನಾನೇ ಮಾಡ್ತಾಇದ್ದೆ. ಆದ್ರೆ ವಯಸ್ಸಾಗಿದೆ ನೋಡಿ. ಸುಮ್ನೇ ರಿಸ್ಕಂತ. ಅದ್ಸರಿ, ಈಗ ಯಾಕ ಆಕೀನ ಸುಂದರೀ ಮಾಡಕ್ಕ ಹೊರಟೀರಿ. ಏನು ಭಾರೀ ಆಸ್ತಿ ಬಿಡ್ತಾಳನು?. ಆಸ್ತಿ ಇರ್ಲಿ, ಬಿಡ್ಲಿ. ಇದ್ರಿಂದ ಏಕ್‍ದಮ್ ಸಾಯೂದಂತೂ ಇಲ್ಲ ನೋಡಿ ಈಕಿ’ ಎಂದು ಹೇಳಿಹೋಗಿದ್ದ. ಅನಂತೂಗೆ ಪಂಡಿತ ಹೇಳಿದ್ದ ‘ನಿನಗಾ ನೀನು ಚಿಕಿತ್ಸೆ ಮಾಡ್ಕೋತಿದೀಯಪ’ ಅನ್ನೋದು ಹೆಚ್ಚು ಆಪ್ಯಾಯಮಾನವೆನಿಸಿತ್ತು.


ಏನಾದರೂ ಆಗಲಿ, ಹೋಗೇಬಿಡೋಣ ಎಂದು ನಿರ್ಧರಿಸಿದ. ಪಕ್ಕದ ಮನೆಯ ಶೆಟ್ಟರು ಕಾರು ಕಳಿಸಿಕೊಡುವುದಾಗಿ ಹೇಳಿದ್ದರು. ಅತ್ತಿಗೆ ಒಂದು ಮಾತು ಕೇಳಿಬಿಡೋಣವೆಂದು ಹಿಂದಿನ ದಿನ ಕೇಳಿದ್ದ. ಸುಮ್ಮನೇ ತಲೆಯಾಡಿಸಿತ್ತು. ಅದು ಸ್ವಾಭಾವಿಕ ನಡುಕವೋ, ಹೌದೋ, ಅಲ್ಲವೋ ಅನ್ನುವುದು ಗೊತ್ತಾಗದೇ ಸುಮ್ಮನಾಗಿದ್ದ.


ಕೆಳಗೆ ಬಟ್ಟೆಕಟ್ಟಿ, ದೊಡ್ಡ ಹದಿನೆಂಟು ಮೊಳದ ಸೀರೆ ಉಡಿಸಿ ಮೇಲೆ ಶಾಲು ಹೊದೆಸಿದಳು, ರುಕ್ಮಿಣಿ. ಬೋಳುತಲೆ ಕಾಣಿಸದಹಾಗೆ ಸೀರೆಯ ಸೆರಗು ಹೊದಿಸಿದಮೇಲೆ ನಂದಿನಿ ಬಂದು ‘ಎಷ್ಟು ಚಂದ ಕಾಣಿಸ್ತೀಯಲ್ಲೇ, ಅತ್ತಿ’ ಎಂದು ಕೆನ್ನೆ ಸವರಿ ಹೋದಳು. ಅನಂತು ಮತ್ತು ಅತನ ನೆರೆಯಾತ ನಾಣಿ ಇಬ್ಬರೂ ಸೇರಿ, ಅನಾಮತ್ತಾಗಿ ಅತ್ತಿಯನ್ನು ಎತ್ತಿ ಹಿಂದಿನ ಸೀಟಿನಲ್ಲಿ ಕೂರಿಸಿದರು. ನಾಣಿ ಬರಲಾಗದ್ದರಿಂದ, ಡ್ರೈವರನ ಜತೆ ಅನಂತೂ ಒಬ್ಬನೇ  ಅತ್ತಿಯೊಂದಿಗೆ ಆಸ್ಪತ್ರೆಗೆ ಹೋದ.


ಓಪಿಡಿಯ ಗುಮಾಸ್ತ ‘ಬಾಯಿ ಸೊಟ್ಟ ಆಗಿದೆ’ ಎಂದುದಕ್ಕೆ ಎಲುಬು ಮತ್ತು ಕೀಲು ವಿಭಾಗಕ್ಕೆ ಚೀಟಿ ಬರೆಯಲು ಒಪ್ಪಲಿಲ್ಲ. ಅತ್ತಿಯ ಮುಖವನ್ನು ನೋಡಿ ‘ಇದು ಸ್ಟ್ರೋಕೇ’ ಎಂದು ಆತನೂ ಹೇಳಿ, ‘ಮೊದಲು ಫಿಸಿಷಿಯನ್ ಹತ್ತಿರ ತೋರಿಸಿ.. ಆಮೇಲೆ ನಾವು ಬೈಸಿಕೋಬೇಕಾಗುತ್ತೆ’ ಎಂದು ಗಲಾಟೆಮಾಡಿದ. ಅನಂತೂ ನಮ್ಮನೆ ಹಿಂದಿನ ಪೀಜೀ ಡಾಕ್ಟರು ನೋಡಿ ಹೇಳಿದ್ದಾರೆ ಎಂದು ಹೇಳಿದರೂ, ಏನೂ ಉಪಯೋಗವಾಗಲಿಲ್ಲ. ಉದ್ದನೆಯ ಸಾಲಿನಲ್ಲಿ ಅತ್ತಿಯನ್ನು ಗಾಲಿಕುರ್ಚಿಯ ಮೇಲೆ ಕೂಡಿಸಿ, ತಾನೂ ಕೂತ. ಸುತ್ತಲ ಜನಗಳು, ಫಿನಾಯಿಲ್ ವಾಸನೆ ತುಂಬಿದ ಆಸ್ಪತ್ರೆಯ ಗಾಳಿ, ಕೂತಿದ್ದ ಕುರ್ಚಿ ಇವೆಲ್ಲಾ ಅತ್ತಿಯನ್ನು ಯಾವುದೋ ಹೊಸಪ್ರಪಂಚಕ್ಕೆ ಕರೆದುಕೊಂಡು ಬಂದ ಹಾಗೆ ಅನ್ನಿಸಿತ್ತು. ತನ್ನ ಕೋಣೆ ಹಾಗೂ ಜಗುಲಿಯನ್ನು ಬಿಟ್ಟು ಹೊರಗೆ ಬಂದೇ ಆಕೆ ಇಪ್ಪತ್ತು ವರ್ಷವಾಗಿತ್ತೇನೋ. ಬಾಯನ್ನು ಸೊಟ್ಟಮಾಡಿಕೊಂಡೇ ಸುತ್ತ ಆಸಕ್ತಿಯಿಂದ ನೋಡುತ್ತಿದ್ದಳು.
ಸುಮಾರು ಎರಡು ಘಂಟೆ ಕಾದ ಮೇಲೆ, ಯಾರೋ ಒಬ್ಬ ಡಾಕ್ಟರು ಅತ್ತಿಯ ಮುಖವನ್ನು ಒಂದು ಸೆಕಂಡಿಗಿಂತಲೂ ಕಡಿಮೆ ನೋಡಿ, ಕೈಯಿಂದಲೂ ಮುಟ್ಟದೇ ‘ಇದು ಜಾ ಡಿಸ್‍ಲೊಕೇಟ್ ಆಗಿದೇರಿ. ಯಾರ್ರೀ ನಿಮ್ಮನ್ನು ಇಲ್ಲಿಗೆ ಕಳಿಸಿದ್ದು?’ ಎಂದು, ಇನ್ನೊಂದು ವಿಭಾಗಕ್ಕೆ ಕಳಿಸಿದ.

ಅಲ್ಲಿ ಎಲುಬು ಕೀಲು, ವೈದ್ಯ ಅತ್ತಿಯನ್ನು ತಳ್ಳುಗಾಡಿಯಲ್ಲಿಯೇ ಕೂರಿಸಿ ಅನಂತೂ ಬಳಿ ಇನ್ನೊಂದಿಷ್ಟು ಮಾಹಿತಿ ಪಡೆಯಲು ಆರಂಭಿಸಿದ.

‘ಹೆಸರು?’

‘ಅತ್ತಿ’

‘ಅತ್ತಿ ಅಂದರೆ ಏನ್ರೀ? ನಿಜವಾದ ಹೆಸರು?’

‘ನಿಜವಾದ ಹೆಸರು ಕುಂತೀಬಾಯಿ’

‘ಅದೆಂತಾ ಹೆಸರ್ರೀ? ಇರ್ಲಿ ಬಿಡಿ. ಈಗ ನೋಡಿ, ಈ ದವಡೆಯ ಮೂಳೆ ಒಂದುಕಡೆ ಜಾರಿದೆ. ಅದನ್ನು ಸರಿ ಮಾಡ್ಬೌದು, ವಯಸ್ಸಾಗಿದೆ ನೋಡಿ, ಸ್ವಲ್ಪ ರಿಸ್ಕು. ಮೇಲಾಗಿ ಮೂಳೆಗಳು ಸವೆದಿರ್ತಾವೆ. ಆ ಪ್ರೆಶರ್ ಹಾಕಿ ಎಳೆದಾಗ, ಸಣ್ಣಕ್ಕೆ ಮುರಿದ್ರೂ ಮುರೀಬಹುದು. ಹಾಗೆ ಮುರಿದ್ರೂ ಏನ್ತೊಂದ್ರೆ ಇ¯್ಲ. ಸ್ವಲ್ಪದಿನ ನೋಯುತ್ತೆ, ಅಷ್ಟೇ. ಆದರೆ, ಕೀಲುಗಳೆಲ್ಲಾ ಸಡಿಲವಾಗಿರೋದರಿಂದ ಮತ್ತೆ ಈ ರೀತಿ ಜಾರಿಕೋಬಹುದು. ಒಂದೇ ಕಡೆ ಜಾರಿರೋದ್ರಿಂದ ಬಾಯಿ ಒಂದು ಕಡೆ ಮಾತ್ರ ಸೊಟ್ಟ ಆಗಿದೆ. ಎರಡೂ ಕಡೆ ಜಾರಿದ್ರೆ ಬಿಟ್ಟ ಬಾಯಿ ಬಿಟ್ಟ ಹಾಗೆ ಇರಬಹುದು. ಅಂದರೆ, ಬಾಯಿ ಮುಚ್ಚಕ್ಕೇ ಆಗಲ್ಲ. ಆಗ ಸರಿಮಾಡೋದು ಕಷ್ಟ. ಮಾಡಕ್ಕಾಗಲ್ಲ ಅಂತಲ್ಲ, ಆದರೆ ಸ್ವಲ್ಪ ಕಷ್ಟ. ಬರೀ ಹಂಗೇ ಬರ್ಲಿಲ್ಲ ಅಂದ್ರೆ ಸೊಲ್ಪ ಮಬ್ಬು ಬರೋಕೆ ಏನಾರ ಔಷಧೀ ಕೊಡಬೇಕಾಗುತ್ತೆ. ಆಗ ಅದರ ಕಾಂಪ್ಲಿಕೇಶನ್ಸ್ ಬೇರೆ ಇರುತ್ತೆ. ಏನಂತೀರ, ಮಾಡೋಣವಾ, ಇಲ್ಲಾ ಬೇಡ ಅಂತ ನಿಮಗನಿಸಿದ್ರೆ ಬೇಡ, ಬೇಕಾದರೆ. ಅದು ಸರಿ ಅಜ್ಜೀಗೆ ವಯಸ್ಸೆಷ್ಟು?’ ಎಂದು ಉದ್ದಕ್ಕೂ ಪ್ರವರ ಒಪ್ಪಿಸಿದಮೇಲೆ ವಯಸ್ಸು ಕೇಳಿದ.

ಅಲ್ಲಿಯವರೆಗೂ ಸುಮ್ಮನಿದ್ದ ಅತ್ತಿ ‘ವೈವತ್ತಾವು’ ಎಂದಳು.

‘ಏನು?’ ಅಂದ ಡಾಕ್ಟರು.

‘ಎಂಭತ್ತಾರೋ, ಎಂಭತ್ತೇಳೋ ಇರಬಹುದು ಅನ್ನಿಸುತ್ತೆ.’ ಅಂದ ಅನಂತು.

‘ಸರಿ ಹಾಗಾದರೆ, ನಾನು ಇನ್ನೂ ಒಂದು ಹೇಳಬೇಕು. ಇದನ್ನು ಈಗ ಹೀಗೇ ಬಿಟ್ಟರೆ ಕಾಲಕ್ರಮೇಣ ಸರಿಹೋದರೂ ಹೋಗಬಹುದು. ಏನ್ರೀ, ನೀವು ಈ ಫಾರಂಗೆ ಒಂದು ಸೈನ್ ಹಾಕ್ರಿ. ನೀವೇನು ಹೆದರಬೇಡ್ರೀ ಅಜ್ಜಿ. ನಾನು ನೋಡ್ಕೋತೀನಿ’ ಎಂದು ಅತ್ತಿಯ ಬಾಯೊಳಗೆ ಬೆರಳಿಡಲು ಹೋದ.


ಆಗ ಇದ್ದಕ್ಕಿದ್ದಂತೆ ಅತ್ತಿ ‘ಆಆಆಆಅ....’ ಎಂದು ಆಕಳಿಸಿದಹಾಗೆ ಮಾಡಿದವಳೇ ಬಾಯಿತುಂಬಾ ಆದಷ್ಟು ಸ್ಪಷ್ಟವಾಗಿ ‘ಶಕ್ಕೂ’ ಎಂದು ಜೋರಾಗಿ ಕೂಗಿದಳು. ಕೈಯೆತ್ತಿ ಕಿಟಕಿಯಿಂದಾಚೆ ಅನಂತೂಗೆ ತೋರುಬೆರಳಿನಲ್ಲಿ ಏನೋ ತೋರಿಸಿದಳು. ಏನೇನೂ ಕಾಣಿಸದ ಅಜ್ಜಿಗೆ ಏನು ಕಾಣಿಸಿರಬಹುದು ಇಲ್ಲಿ, ಎಂದು ಅನಂತೂ ಕಿಟಕಿಯ ಹೊರಗೆ ನೋಡಿದ. ಅತ್ತಿಯ ಬಾಯೊಳಗೆ ‘ಟಳ್’ ಎಂದು ಶಬ್ದವಾಯಿತು.

ಹೊರಗಡೆ ಮಧ್ಯವಯಸ್ಕ ಹೆಂಗಸೊಬ್ಬಳು ತನ್ನ ತುಂಬುಹೊಟ್ಟೆಯನ್ನು ಹೊತ್ತು ನಡೆದಿದ್ದಳು.
ಅತ್ತಿ ಸುಮ್ಮನೆ ಶೂನ್ಯದಲ್ಲಿ ನೋಡುತ್ತಾ ‘ಶಕ್ಕೂ, ಶಕ್ಕೂ’ ಎಂದು ಕೂಗಹತ್ತಿದಳು. ಅತ್ತಿಗೆ ಕಿಟಕಿಯಾಚೆಗಿನ ಬಸುರಿಹೆಂಗಸು ಕಾಣಲು ಸಾಧ್ಯವಿಲ್ಲ. ಏನು ನೋಡಿದಳೋ ಏನೋ, ಅಂದುಕೊಂಡ, ಅನಂತು.
ಡಾಕ್ಟರು ‘ನಾನು ಹೇಳಲಿಲ್ಲವ, ಕೆಲವೊಮ್ಮೆ ಅದಾಗದೇ ಸರಿಹೋಗಬಹುದು, ಎಂದು’ ಅಂದ ಅನಂತು ಕಡೆ ತಿರುಗಿ.

......


ಅತ್ತಿ ನಕ್ಕಿತು. ಬಾಯಿ ಸೊಟ್ಟವಾಗಿರಲಿಲ್ಲ. ನಂದಿನಿಯ ಬಳಿ ‘ಹೋಗಿ, ಒಂದು ಕನ್ನಡಿ ತಗಂಬಾರೇ’ ಅಂತು.
ಕನ್ನಡಿಯಲ್ಲಿ ಮುಖ ನೋಡಿಕೊಳ್ಳುತ್ತಾ ನಕ್ಕು ‘ಹ್ಯಾಗಿದ್ಯೇ ಶಕ್ಕೂ’ ಅಂತು.

ನಂದಿ ನಕ್ಕು ‘ಇದೆಂತದತ್ತೀ. ಕನ್ನಡೀಲಿ ಮುಖ ನೋಡ್ಕೊಂಡು ಶಕ್ಕೂ ಅನ್ನಕ ಶುರೂಮಾಡ್ದೀ ಈಗ’ ಅಂದಳು. ಏನೋ ಪರೀಕ್ಷೆಮಾಡುವಂತೆ ‘ಅತ್ತೀ, ಕನ್ನಡಿಯಾಗಿರೋರು ಯಾರು?’ ಅಂದಳು.

‘ಶಕ್ಕು’ ಅಂತು, ಅತ್ತಿ.

‘ಕನ್ನಡಿಯ ಹೊರ್ಗಿರೋ ಮುಖಾ ಯಾರದ್ದು’ ಅಂದಳು.

‘ನಂದೇ’

‘ಅಂದರೆ’

‘ನಾನೇ ಕುಂತೀ’

‘ಶಕ್ಕು, ಕುಂತಿ ಅವ್ಳೀಜವ್ಳೀ ಅಲ್ಲಾ’

‘ಹೌದೇ’

‘ಎಷ್ಟು ಅವ್ಳೀಜವ್ಳೀನೇ’?.

‘ಒಂದೇಜೀವ ಅನ್ನೋಷ್ಟು’. ಅಂತು, ಅತ್ತಿ. ಸತ್ತ ಕಣ್ಣುಗಳಿಂದಲೂ ನೀರು ಬರುತ್ತದೆ ಎಂದು ನಂದಿನಿಗೆ ಆಗ ಗೊತ್ತಾಯಿತು."

- ಡಾ ಗುರುಪ್ರಸಾದ್ ಕಾಗಿನೆಲೆ.



ಸದ್ಯದ ಸಮಕಾಲೀನ ಕನ್ನಡ ಕಥೆಗಾರರಲ್ಲಿ ಡಾ ಗುರುಪ್ರಸಾದ ಕಾಗಿನೆಲೆಯವರದ್ದು ಒಂದು ಪ್ರಮುಖವಾದ ಹೆಸರು.  ೨೦೦೩ರಲ್ಲಿ ಅಂಕಿತ ಪುಸ್ತಕದ ಸಹಯೋಗದಲ್ಲಿ ವಿಜಯ ಕರ್ನಾಟಕ ನಡೆಸಿದ ಕಥಾಸ್ಪರ್ಧೆಯಲ್ಲಿ ಮೆಚ್ಚುಗೆಗೆ ಪಾತ್ರವಾದ 'ಆಲ್'ಮೋಸ್ಟ್... ಒಂದು ಕಥೆ'ಯ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಗಮನ ಸೆಳೆದ ಗುರುಪ್ರಸಾದ್ ಪ್ರವೃತ್ತಿಯಿಂದ ಕಥೆಗಾರರಾದರೂ ವೃತ್ತಿಯಿಂದ ವೈದ್ಯರು. ಬಳ್ಳಾರಿಯ ಸರಕಾರಿ ವಿಜಯನಗರ ವೈದ್ಯಕೀಯ ಸಂಸ್ಥೆಯಲ್ಲಿ ತಮ್ಮ ವೈದ್ಯಕೀಯ ಪದವಿ ಹಾಗೂ ಸ್ನಾತಕ ಪದವಿಯನ್ನ ಪೂರೈಸಿದ ಅವರು ಸದ್ಯ ತುರ್ತು ಚಿಕಿತ್ಸಾ ವಿಭಾಗದ ತಜ್ಞ ವೈದ್ಯರಾಗಿ ರಾಚೆಸ್ಟರ್'ನ ನಾರ್ತ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಅವರು ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ದೂರದ ಮಿನ್ನಿಸೋಟಾದಿಂದಲೆ ಬರವಣಿಗೆಯ ಜಗತ್ತಿನ ನಂಟನ್ನ ತಮ್ಮ ಕಥೆಗಳ ಮೂಲಕ ಸಾಧಿಸಿರುವ ಅವರು ತಮ್ಮ ಪ್ರತಿ ಕಥೆಯಲ್ಲಿಯೂ ನಿತ್ಯ ಜೀವನದ ಸತ್ಯ ದರ್ಶನವನ್ನ ಮಾಡಿಸುತ್ತಲೆ ಅದಕ್ಕೊಂದು ಹೊಸ ಹೊಳಹು ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ ಎನ್ನಿಸುತ್ತದೆ.


'ಛಂದ ಪುಸ್ತಕ'ದ್ದೆ ಆದ ಪ್ರಕಟಣೆಯಾಗಿದ್ದ 'ನಿರ್ಗುಣ' ಎನ್ನುವ ತಮ್ಮ ಕಥಾ ಸಂಗ್ರಹದ ಮೂಲಕ ಅವರು ಕನ್ನಡ ಸಾರಸ್ವತ ಲೋಕದಲ್ಲಿ ಅಡಿಯಿಟ್ಟಿದ್ದರು. ಅನಂತರ ಅವರ 'ವೈದ್ಯ, ಮತ್ತೊಬ್ಬ' ಅದೆ ಪ್ರಕಾಶನದಿಂದ ೨೦೦೫ರಲ್ಲಿ ಪ್ರಕಟವಾಗಿತ್ತು. ಅದರ ನಂತರ ಅವರು ಸಂಪಾದಿಸಿದ್ದ 'ಆಚೀಚಿನ ಕಥೆಗಳು' ಬೆಳಕು ಕಂಡಿದ್ದವು. ಅನಂತರ ೨೦೦೭ರಲ್ಲಿ ಪ್ರಕಟವಾದ 'ಶಕುಂತಲ' ಅವರ ಮೂರನೆ ಕೃತಿ ಒಂದು ಕಥಾ ಸಂಕಲನ. ಇಲ್ಲಿರುವ ಹತ್ತು ಕಥೆಗಳೂ ಸಹ ಓದುಗರನ್ನ ಅಮ್ಮಸಂದ್ರದಿಂದ ಅಲಬಾಮದವರೆಗೆ ಮುಲಾಜಿಲ್ಲದೆ ಕರೆದುಕೊಂಡು ಹೋಗುತ್ತಾ 'ಹೌದಲ್ಲಾ, ನಮ್ಮ ಸುತ್ತಲೇ ನಿತ್ಯ ಘಟಿಸುವ ಇಂತಹ ಘಟನೆಗಳು ನನಗ್ಯಾಕೆ ಕಾಡಲಿಲ್ಲ?' ಅನ್ನಿಸುವಂತೆ ಮಾಡುತ್ತವೆ. ಕೆಲವು ಪ್ರಾಕ್ಟಿಕಲ್ ಹಾಸ್ಯಗಳು ಪೋಲಿ ನಗುವನ್ನೂ ತುಟಿಯಂಚಿನಲ್ಲಿ ಮೂಡಿಸುತ್ತವೆ. ಸಂಕಲನದ 'ಮೂರು ಕಥೆಗಳಿಗೆ ಈ ಗುಣವಿದೆ. 'ಅಲಾಬಾಮಾದ ಅಪಾನ ವಾಯು' 'ಬೀಜ' ಹಾಗೂ 'ಶಕುಂತಲ' ಕಥೆಗಳಿಗಳಲ್ಲಿ ಅದನ್ನ ಗಮನಿಸಬಹುದು. ಒಟ್ಟಾರೆ ಎಲ್ಲಾ ಕಥೆಗಳೂ ಒಂದೊಂದು ಬಗೆಯಲ್ಲಿ ಓದುಗರ ಮನವನ್ನ ಆವರಿಸಿಕೊಳ್ಳುತ್ತವೆ.

ಪುಸ್ತಕದ ಬೆನ್ನುಡಿಯಲ್ಲಿ ವಿವೇಕ ಶಾನುಭಾಗರು ಹೇಳುವಂತೆ "'ಶಕುಂತಳಾ' ವಸ್ತು ಮತ್ತು ರಚನೆಯಲ್ಲಿ ಸ್ಪಷ್ಟವಾಗಿ ಹೊಸತನ್ನು ಶೋಧಿಸುವ ಕಥೆ. ಅಂತೆಯೆ ಜೀವದ ಅವ್ಯಕ್ತ ಹಂಬಲಗಳು, ಕೈಮೀರಿ ಹೋದ ಭೂತಕಾಲ, ಬಿಟ್ಟು ಬಂದ ಹಾದಿಗಳು ಮತ್ತು ವರ್ತಮಾನದಲ್ಲಿ ಎಲ್ಲವನ್ನೂ ಏಕತ್ರ ಹಿಡಿಯುವ ಸಂಕಟಗಳನ್ನು ಈ ಕಥೆ ಸಮರ್ಥವಾಗಿ ಹೇಳುತ್ತದೆ. ಅವ್ಯಕ್ತತೆ ಮತ್ತು ಅಮೂರ್ತತೆಯನ್ನ ಹೇಳ್:ಅಲು ಅಗತ್ಯವಾದ ರೀತಿಯಲ್ಲಿ ಕಥೆಯ ನಿರ್ವಹಣೆ ಇದೆ. ಎಷ್ಟನ್ನು ಹೇಳಬೇಕು, ಎಷ್ಟನ್ನು ಸೂಚಿಸಬೇಕು, ಎಷ್ಟನ್ನು ಮುಚ್ಚಿಡಬೇಕು ಎನ್ನುವ ಕಲೆಗಾರಿಕೆ ಇಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ."


ಕಥೆಯಷ್ಟೆ ಅಲ್ಲದೆ 'ಬಿಳಿಯ ಛಾದರ' ಹಾಗೂ 'ಗುಣ' ಎನ್ನುವ ಕಾದಂಬರಿಯನ್ನು ಸಹ ಗುರುಪ್ರಸಾದ್ ಬರೆದಿದ್ದಾರೆ. 'ಬೇರು ಸೂರು' ಎನ್ನುವ ಕೃತಿಯನ್ನ ಇತ್ತೀಚೆಗೆ ಸಂಪಾದಿಸಿದ್ದರೆ. ಪತ್ನಿ ಪದ್ಮ ಹಾಗೂ ಮಕ್ಕಳಾದ ಪ್ರಭವ, ಪ್ರಣಿತಾ ಜೊತೆ ಅಮೇರಿಕೆಯ ವಾಸಿಯಾಗಿದ್ದರೂ ಕನ್ನಡದ ತಾಯಿಬೇರಿಗೆ ಬರಹದ ನೀರೆರೆಯುತ್ತಲೆ ಗುರುಪ್ರಸಾದ್ ಒಟ್ಟಾರೆ ಇತ್ತೀಚಿನ ಕಥೆಗಾರರಲ್ಲಿಯೆ ಗಮನಾರ್ಹರು.

No comments: