31 October 2015

ವಲಿ - ೨೦







ಮಸೀದಿಯಲ್ಲಿ ಪ್ರಾರ್ಥನೆಯ ಹೊತ್ತಿನಲ್ಲಿ ಮಹಮದ್ ತನ್ನ ಅನುಯಾಯಿಗಳನ್ನ ಉದ್ದೇಶಿಸಿ "ಆಕ್ಷೇಪಣೆ, ಪ್ರಚೋದನೆ ಹಾಗೂ ಪ್ರೋತ್ಸಾಹ"ಗಳನ್ನೊಳಗೊಂಡ ಭಾವಪೂರ್ಣ ಪ್ರವಚನಗಳನ್ನು ನೀಡುತ್ತಿದ್ದ ಎನ್ನುತ್ತಾನೆ ಇತಿಹಾಸಕಾರ ಡೋಝಿ. ತನ್ನ ಭಾವಪೂರ್ಣ ಬೋಧನಾ ಶೈಲಿಯಿಂದ ಅವರೆಲ್ಲರನ್ನೂ ಆತ ಪರವಶಗೊಳಿಸುತ್ತಿದ್ದ. ಅವರೊಳಗಿನ ಭಾವನೆಗಳೂ ಸಹ ಈ ಸತ್ವಪೂರ್ಣ ಪ್ರವಚನಗಳಿಂದ ಉದ್ರೇಕಗೊಳ್ಳುತ್ತಿತ್ತು. ನರಕದ ಭಯಂಕರ ಜ್ವಾಲೆ ಸೂಸುವ ಬಾಗಿಲ ವರ್ಣನೆಯನ್ನ ಅವನ ಬಾಯಿಂದ ಕೇಳುವಾಗಲೆ ಅನೇಕರು ಭಯಭೀತರಾಗಿ ತತ್ತರಿಸುತ್ತಿದ್ದರು. ಸ್ವರ್ಗದ ವರ್ಣನೆ ಅವರೆಲ್ಲರ ಮನಸ್ಸಿಗೆ ಶಜವಾಗಿ ಆಹ್ಲಾದವನ್ನೀಯುತ್ತಿದ್ದವು. ಹೀಗೆ ಭಾವೋದ್ರೇಕಿಸಿ ಆತ ಅನೇಕರ ಅಭಿಮಾನ ಗಳಿಸಿಕೊಳ್ಳುವುದರಲ್ಲಿ ಸಫಲನಾಗಿದ್ದ.



ಕೇವಲ ಭಾವೋದ್ರೇಕಿಸುವುದು ಮಾತ್ರವಲ್ಲ, ಇದರೊಂದಿಗೆ ತನ್ನ ನಿರಂಕುಶ ಅಧಿಕಾರ ಚಲಾವಣೆ ಹಾಗೂ ನ್ಯಾಯ ಪಾಲನೆಯಲ್ಲೂ ಆತ ಹಿಡಿತ ಸಾಧಿಸಿದ್ದ. ಇದಕ್ಕೊಂದು ಉದಾಹರಣೆಯನ್ನ ಇತಿಹಾಸಕಾರ ಅಲ್ ಮುಬಾರಖಿ ನೀಡುತ್ತಾನೆ. ಅಲ್ ಮುಜುದ್ದೀರ್ ಎನ್ನುವ ಔಸ್ ಬುಡಕಟ್ಟಿಗೆ ಸೇರಿದ್ದ ವ್ಯಕ್ತಿಯೊಬ್ಬ ತನ್ನ ಮತಾಂತರಕ್ಕೂ ಮೊದಲು ತನ್ನ ವಿರೋಧಿ ಖಜ್'ರಝ್ ಬುಡಕಟ್ಟಿಗೆ ಸೇರಿದ್ದ ಸುವೈದ್ ಎನ್ನುವ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದ. ಅರೇಬಿಯಾದ ಸಹಜ ನಾಗರೀಕ ನಡುವಳಿಕೆಯಂತೆ ಸುವೈದ್'ನ ಮಗ ಅಲ್ ಹಾರಿಥ್ ತನ್ನ ತಂದೆಯ ಸಾವಿಗೆ ತಕ್ಕ ಪ್ರತಿಕಾರ ಮಾಡಲು ಕಾತರಿಸುತ್ತಲಿದ್ದ. ಆದರೆ ಕಾಲಾಂತರದಲ್ಲಿ ಇಬ್ಬರೂ ಅನುಕ್ರಮವಾಗಿ ಇಸ್ಲಾಮನ್ನ ಸ್ವೀಕರಿಸಿದ್ದ ನಂತರ ಮುಸಲ್ಮಾನನೊಬ್ಬ ಇನ್ನೊಬ್ಬ ಮುಸಲ್ಮಾನನ ಕೊಲೆ ಮಾಡುವ ಹಾಗಿಲ್ಲ ಎನ್ನುವ ನಿಯಮಕ್ಕೆ ಇಷ್ಟವಿಲ್ಲದಿದ್ದರೂ ಬದ್ಧನಾಗುಳಿಯಬೇಕಾಯಿತು.



ಆದರೆ ದ್ವೇಷ ಎನ್ನುವ ಧಗೆ ಅವನನ್ನ ನಿತ್ಯ ಸುಡುತ್ತಿತ್ತು. ಹೀಗಾಗಿ ಅವ ಅಂತಹ ಅಪರೂಪದ ಅವಕಾಶವೊಂದಕ್ಕಾಗಿ ಪ್ರತಿಕಾರಕ್ಕಾಗಿ ಹೊಂಚು ಹಾಕಿ ಕಾದಿದ್ದ. ಅಂತಹ ಅವಕಾಶ ಅವನಿಗೆ ಸಿಕ್ಕಿತು ಕೂಡಾ. ಓಹೋದ್ ಯುದ್ಧ ಭೂಮಿಯಲ್ಲಿ ಜೊತೆಜೊತೆಯಾಗಿಯೆ ಮುಸಲ್ಮಾನ ಪಡೆಯ ಯೋಧರಾಗಿ ಅವರಿಬ್ಬರೂ ಹೋರಾಡಲು ತೆರಳಿದ್ದರು. ಅಲ್ಲಿ ಸಮಯ ಸಾಧಿಸಿ ಅಲ್ ಮಜುದ್ದಾರ್'ನನ್ನು ಹತ್ಯೆ ಮಾಡಿದ ಹಾರಿಥ್. ಆದರೆ ಅವನ ದುರಾದೃಷ್ಟಕ್ಕೆ ಇನ್ನೊಬ್ಬ ಸಹ ಯೋಧ ಅದನ್ನ ಗಮನಿಸಿ ಅದನ್ನ ಮುಂದೆ ಮಹಮದನ ಗಮನಕ್ಕೆ ತಂದ. ಹೀಗಾಗಿ ಶತ್ರು ದಾಳಿಯಿಂದ ಈ ಸಾವು ಸಹಜವಾಗಿ ಉಂಟಾಗಿದೆ ಎನ್ನುವ ಕಥೆ ಕಟ್ಟುವ ಹಾರಿಥ್ ಆಲೋಚನೆ ಹಳಿ ತಪ್ಪಿತು.


ಈ ಯುದ್ಧ ಮುಗಿಸಿ ಬರುವಾಗ ಮಹಮದ್ ಸಹ ಸೋತು ಸುಣ್ಣವಾಗಿ ದೈಹಿಕವಾಗಿಯೂ ಘಾಸಿಯಾಗಿದ್ದರಿಂದ ಈ ಬಗ್ಗೆ ವಿಚಾರಣೆ ನಡೆಸುವ ಗೋಜಿಗೆ ಹೋಗಿರಲಿಲ್ಲ. ಇನ್ನು ಮರಳಿ ಬಂಡ ನಂತರ ಹಾರಿಥ್ ಕೂಡಾ ಕೆಲಕಾಲ ಮದೀನ ಬಿಟ್ಟು ತನ್ನ ಹಳ್ಳಿಗೆ ತೆರಳಿದ್ದ. ಅಲ್ಲಿಗೆ ಹೋಗಿದ್ದವ ಮತ್ತೆ ಮರಳಿದಾಗ ತನಗೆ ವಿಪತ್ತು ಕಾದಿದೆ ಎನ್ನುವ ವಿಚಾರ ಅವನ ಅರಿವಿಗೆ ಬಂದಿತು. ಆದರೂ ಧೈರ್ಯ ಮಾಡಿ ಆತ ಮಹಮದನ ಸನ್ನಿಧಾನಕ್ಕೆ ತೆರಳಿ ತನ್ನ ಶರಣಾಗತಿಯನ್ನ ಪ್ರಕಟಿಸಿದ ಹಾಗೂ ಪ್ರಾಮಾಣಿಕವಾಗಿ ಆದ ಅಕೃತ್ಯದ ಹಿನ್ನೆಲೆ ವಿವರಿಸಿ ದೀನನಾಗಿಯೆ ಕ್ಷಮೆ ಬೇಡಿದ. ವಾಸ್ತವವಾಗಿ ಅರೇಬಿಯಾದ ಬುಡಕಟ್ಟುಗಳ ನಡುವಿನ ಗುಣ ನಡತೆಯ ನೈತಿಕತೆಯ ಮಾನದಂಡದಲ್ಲಿ ಅವನ ಈ ನಡುವಳಿಕೆಯಲ್ಲಿ ತಪ್ಪೇನೂ ಇರಲಿಲ್ಲ.



ಆದರೆ ಮಹಮದ್ ಆ ನೀತಿಯನ್ನ ಬದಲಿಸಿದ್ದ. ಹೀಗಾಗಿ ಇತ್ತ ಹಾರಿಥ್ ತಲೆ ಕಾಣುತ್ತಿದ್ದಂತೆ ಕ್ಷುದ್ರನಾದ ಆತ ಔಸ್ ಬುಡಕಟ್ಟಿನ ಮುಖಂಡ ಜಮೀಮ್'ನನ್ನು ಕಂಡು ತಕ್ಷಣ ಈ ಅಲ್ ಮುಜುದ್ದರ್ ಕೊಲೆಗಡುಕ ಅಲ್ ಹಾರಿಥ್'ನನ್ನು ಓಹೋದ್ ಯುದ್ಧದಲ್ಲಿ ಮಾಡಿದ ಕೊಲೆ ಆರೋಪದ ಕಾರಣ ಮಸೀದಿ ಬಾಗಿಲ ಬಳಿ ಕರೆದೊಯ್ದು ಇವನ ತಲೆ ಕಡೆಯಿರಿ ಎಂದು ಆಜ್ಞಾಪಿಸಿದ. ಅಲ್ ಹಾರಿಥ್ ಕ್ಷಮೆಗಾಗಿ ಪರಿಪರಿಯಾಗಿ ಯಾಚಿಸಿದ. ಇದಕ್ಕೆ ಬದಲಾಗಿ ಮಹಮದ್ ಹೂಡುವ ಯಾವುದೆ ಬೇಡಿಕೆಯನ್ನ ಪೂರೈಸಲು ತಾನು ಸಿದ್ಧನೆನ್ನುವುದನ್ನೂ ಸಹ ಆತ ಖಚಿತ ಪಡಿಸಿದ. ಆದರೆ ಮನ ಕರಗದ ಮಹಮದ್ ತನ್ನ ಮರಣದಂಡನೆಯ ಆಜ್ಞೆಯನ್ನೆ ಪುನರುಚ್ಛರಿಸಿದ. ಆತನ ಯಾವುದೆ ಯಾಚನಾಪೂರಿತ ಬೇಡಿಕೆಗಳಿಗೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡಲಿಲ್ಲ. ಅದರಂತೆ ಜಮೀಮ್ ಆತನನ್ನ ಎಳೆದೊಯ್ದು ಮಸೀದಿ ಬಳಿ ತಲೆ ಕಡಿವ ಕಾರ್ಯ ನೆರವೇರಿಸಿದ.  ಇದನ್ನ ಪ್ರತ್ಯಕ್ಷವಾಗಿ ಕಂಡ ಸಾಕ್ಷಿಗಳಾದ ಸತ್ತವನ ಮಕ್ಕಳು ಹೆದರಿ ಹೌಹಾರಿದರು. ಮಹಮದನಿಗೆ ಎದುರು ಮಾತನಾಡುವ ಧೈರ್ಯ ಅವರ್ಯಾರಿಗೂ ಉಳಿದಿರಲಿಲ್ಲ. ಹೀಗೆ ಧಾರ್ಮಿಕ ನೇತಾರನಾಗಿ ತನ್ನ ಪರಮಾಧಿಕಾರವನ್ನ ಮಹಮದ್ ಸ್ಥಾಪಿಸಿದ ಎನ್ನುತ್ತದೆ "ಆಕ್ಸ್'ಫರ್ಢ್ ಎನ್'ಸೈಕ್ಲೋಪೀಡಿಯಾ ಆಫ್ ಮಾರ್ಡರ್ನ್ ಇಸ್ಲಾಮಿಕ್ ವರ್ಡ್" ಹೊತ್ತಗೆಯ ನೂರಾ ಐವತ್ತೊಂಬತ್ತನೆಯ ಪುಟದ ವಿವರಣೆ.


ಕ್ರಮೇಣ ಮಹಮದನ ಅನೇಕ ನಡೆ ನುಡಿಗಳು ಮುಸಲ್ಮಾನರ ಜೀವನದಲ್ಲಿ ಇಂದಿಗೂ ಜಾರಿಯಲ್ಲಿರುವ ಸಾಮಾಜಿಕ ಕಟ್ಟಳೆಗಳಾಗಿ ರೂಪುಗೊಂಡವು. ಕಾಲಕಾಲದಲ್ಲಿ ಉದ್ಭವಿಸಿದ ಅನೇಕ ಸಾಮಾಜಿಕ ಸಮಸ್ಯೆಗಳ ನಿರ್ವಹಣೆಗೆ ಮಹಮದ್ ತೆಳೆದ ನಿಲುವುಗಳು ಹಾಗೂ ಗೊಂದಲಗಳ ನಿವಾರಣೆಗೆ ಆತ ರೂಪಿಸಿದ ಕಟ್ಟಳೆಗಳು ದೈವವಾಣಿಯ ಮೊಹರಿನೊಂದಿಗೆ ಚಿರ ನೀತಿಗಳಾಗಿ ಚಾಲ್ತಿಗೆ ಬಂದವು. ತನ್ನ ಮಹಮದ್ ಕೃತಿಯ ಪುಟ ಸಂಖ್ಯೆ ಇನ್ನೂರಾ ನಲವತ್ತೇಳರಲ್ಲಿ ಮೌಲಾನಾ ವಾಹಿದುದ್ದೇನ್ ಖಾನ್ ಈ ಬಗ್ಗೆ ಒಂದು ದೃಷ್ಟಾಂತ ನೀಡಿದ್ದಾರೆ.



ಓಹೋದ್ ಯುದ್ಧದಲ್ಲಿ ಹೋರಾಡಿ ಮಡಿದಿದ್ದ ಮುಸಲ್ಮಾನ ಯೋಧ ಸಾಅದ್ ಎಂಬ ಯೋಧನ ಪತ್ನಿ ಮತ್ತು ಅವಳೆರಡು ಮಕ್ಕಳು ನಿರಾಶ್ರಿತರಾಗಿದ್ದರು. ಪತಿಯ ಸಾವಿನ ನಂತರ ಅವನ ಆಸ್ತಿಯನ್ನ ಆತನ ಅಣ್ಣ ಕಬಳಿಸಿ ಇವರನ್ನ ಬೀದಿಗೆ ತಳ್ಳಿ ನಿರ್ಗತಿಕರನ್ನಾಗಿಸಿ ಬಿಟ್ಟಿದ್ದ. ಅವಳು ಇದನ್ನ ಪ್ರತಿಭಟಿಸಿ ನಿಂತಳು. ಅವಳಿಗೆ ಅದು ಅನಿವಾರ್ಯವೂ ಆಗಿತ್ತು. ಸೀದಾ ಮಹಮದನ ಎದುರು ಆಕೆ ಈ ದೂರನ್ನ ಒಯ್ದು ನ್ಯಾಯಕ್ಕಾಗಿ ಪ್ರಾರ್ಥಿಸುವಂತೆಯೂ ಇರಲಿಲ್ಲ. ಲಿಂಗಾನುಸಾರ ಆಕೆಗೆ ಆ ಅಧಿಕಾರವಿರಲಿಲ್ಲ. ಹೀಗಾಗಿ ಬುದ್ಧಿವಂತಳಾದ ಅವಳೊಂದು ಉಪಾಯ ಹೂಡಿದಳು. ಮಹಮದನಿಗೆ ಆಕೆ ಊಟದ ಆಹ್ವಾನವನ್ನ ಕಳುಹಿಸಿದಳು. ಅವಳ ಆಮಂತ್ರಣವನ್ನ ಸ್ವೀಕರಿಸಿದ ಮಹಮದ ಗೊತ್ತಾದ ದಿನ ತನ್ನ ಇಪ್ಪತ್ತು ಅನುಯಾಯಿಗಳೊಂದಿಗೆ ಆಕೆಯ ಮನೆಗೆ ಬಂದು ಬಡವಿಯಾಗಿದ್ದ ಆಕೆಯ ಆತಿಥ್ಯವನ್ನು ಸ್ವೀಕರಿಸಿದ. ತನ್ನ ಪತಿಯ ಸಾವಿನ ಶೋಕವನ್ನ ಆ ಸಂದರ್ಭ ಬಳಸಿಕೊಂಡ ಆಕೆ ಹೊರ ಹಾಕಿ ಆಕ್ರಂದಿಸಿದಳು. ಕಣ್ಣೀರು ಮಿಡಿದ ಆಕೆಯನ್ನ ಕಾಣುವಾಗ ಮಹಮದನ ಮನಸ್ಸು ಸಹ ಕರಗಿತು. ತಾನೂ ಕೊಂಛ ಶೋಕಿಸಿ ಸಂತಾಪ ಸೂಚಿಸಿದ.


ಆಗ ಆಕೆ ನಡೆದ ವಾಸ್ತವವನ್ನ ಬಿಡಿಸಿಟ್ಟಳು. ತನ್ನ ಹಕ್ಕಿನ ಆಸ್ತಿಯನ್ನ ಬಾವ ಕಬಳಿಸಿ ಮಾಡಿದ ಅನ್ಯಾಯವನ್ನ ಮನಮುಟ್ಟುವಂತೆ ಬಣ್ಣಿಸಿದಳು. ಇದನ್ನು ಆಲಿಸಿದ ಆತನ ಮನ ಮಿಡಿಯಿತು. ಅದಕ್ಕಾತ 'ದೇವರು ಆಸ್ತಿ ಹಂಚಿಕೆಯ ಬಗ್ಗೆ ನಿರ್ಧಾರ ಕೈಗೊಳ್ಳುವನು, ಆದರೆ ಈವರೆಗೆ ಅಂತಹ ಯಾವುದೆ ದೈವವಾಣಿ ನನಗೆ ದೊರಕಿಲ್ಲ" ಎಂದು ಹೇಳಿ ಆಕೆಯನ್ನ ತಪ್ಪದೆ ಮರುದಿನ ತನ್ನ ಬಿಡಾರಕ್ಕೆ ಬರುವಂತೆ ಆಹ್ವಾನಿಸಿ ಹಿಂದಿರುಗಿದ.



ಆಕೆ ಮರುದಿನ ಆತನ ಹೊಸ್ತಿಲಲ್ಲಿ ಕಾಣಿಸುವಾಗಲೆ ಆತನ ಮೈ ನಡುಗಿದಂತಾಗಿ ಆತ ಆವೇಶಭರಿತನಾದ. ಆತನ ನಾಲಗೆಯಿಂದ ಸ್ಪಷ್ಟವಾಗಿ ದೈವವಾಣಿ ಮೊಳಗತೊಡಗಿತು!. ಉದ್ವೇಗದಲ್ಲಿ ಅವನ ಹಣೆ ಬೆವರುಗಟ್ಟಿಹೋಗಿತ್ತು. ತನ್ನೆದುರು ಸಾಅದನ ಅಣ್ಣನನ್ನು ಕರೆತರಲು ಆಜ್ಞಾಪಿಸಿದ ಮಹಮದ್. ಆತ ಅಲ್ಲಿಗೆ ಬಂದೊಡನೆ "ಸಾಅದ್ ಬಿಟ್ಟು ಹೋದ ಒಟ್ಟು ಆಸ್ತಿಯ ಮೂರನೆ ಎರಡು ಭಾಗಗಳನ್ನು ಅವನ ಸಂತಾನಕ್ಕೂ, ಎಂಟನೆ ಒಂದು ಭಾಗವನ್ನು ಅವನ ವಿಧವೆಗೂ ಹಾಗೂ ಉಳಿದದ್ದು ಅದೇನೆ ಇದ್ದರೂ ಅದನ್ನ ಅವನಣ್ಣನಿಗೂ ಕೊಡ ತಕ್ಕಡ್ಡು" ಎನ್ನುವ ಅಂತಿಮ ತೀರ್ಪನ್ನ ಆತ ಹೊರಡಿಸಿದ. ಇದರಿಂದ ಸಂತೃಪ್ತಳಾದ ಆಕೆ "ತಕ್ಬೀರ್" ಅಂದರೆ ದೇವರು ದೊಡ್ಡವನು ಎಂದು ಆನಂದಭರಿತಳಾಗಿ ಕೂಗಿದಳು. ಮುಂದೆ ಆಸ್ತಿಯ ಹಂಚಿಕೆ ವಿಷಯವಾಗಿ ಮಹಮದ್ ಹೊರಡಿಸಿದ ಅನೇಕ ನಿರ್ಣಯಗಳಿಗೆ ಇದು ಮೂಲವಾಯಿತು.



ಕ್ರಿಸ್ತಶಕ ೬೨೫ರ ಏಪ್ರಿಲ್ ತಿಂಗಳಿನಲ್ಲಿ ಮಹಮದ್ ಅರಬ್ಬಿಗಳೆ ಆಗಿದ್ ಬೆನ್ ಅಸದ್ ಬುಡಕಟ್ಟಿನವರೊಂದಿಗೆ ಕಾಳಗ ಜರುಗಿಸಿದ. ಈ ಬೆನ್ ಅಸದರು ಆರ್ಥಿಕವಾಗಿ ಬಲವಾಗಿದ್ದು ಖುರೈಷಿಗಳೊಂದಿಗೆ ಸ್ನೇಹಪೂರ್ಣವಾಗಿದ್ದುದೆ ಈ ಕಾಳಗ ಶುರುವಾಗಲು ಕಾರಣವಾಗಿತ್ತು. ಅರೆಬಿಯಾದ ನಡು ಭಾಗದ ಮರುಭೂಮಿ ಅವರ ಹಿಡಿತದಲ್ಲಿತ್ತು. ಅವರೂ ಕೂಡ ಖುರೈಷಿಗಳಂತೆ ಮಹಮದ್ ಎಂದರೆ ಸಿಡಿದು ಬೀಳುತ್ತಿದ್ದರು. ಆತನ ಏಳ್ಗೆ ಅವರಲ್ಲಿ ಅಸಹನೆ ಮೂಡಿಸಿತ್ತು. ಸೂಕ್ತ ಸಮಯ ಕಾದು ಅವರೊಡನೆ ಸೇರಿ ಮದೀನವನ್ನು ಆಕ್ರಮಿಸುವ ಇರಾದೆ ಅವರಿಗಿತ್ತು. ಈ ಸಂಗತಿ ತನ್ನ ಗೂಢಚರರ ಮೂಲಕ ಮಹಮದನ ಅರಿವಿಗೆ ಬಂತು. ಹೀಗಾಗಿ ಅವರ ಮೇಲೆ ತಾನೆ ಮೊದಲು ಬೀಳಲು ನಿರ್ಧರಿಸಿದ ಮಹಮದ್ ತನ್ನ ಪಡೆಯನ್ನ ಇದಕ್ಕಾಗಿ ಸಜ್ಜುಗೊಳಿಸಿದ.

ಅಬು ಸೆಲಂ ನೇತೃತ್ವದಲ್ಲಿ ಮಹಮದ್ ನೂರಾ ಐವತ್ತು ಯೋಧರ ಪಡೆಯನ್ನ ಬೆನ್ ಅಸಾದರ ಮೇಲೆ ಬೀಳಲು ಕಳುಹಿಸಿದ. ಈ ಧಾಳಿಯ ವಿಷಯವನ್ನ ಗುಪ್ತವಾಗಿಡಲಾಗಿತ್ತು. ಆದರೆ ಅವರ ದುರಾದೃಷ್ಟಕ್ಕೆ ಆಗ ಯಾವೊಬ್ಬ ಶತ್ರುವೂ ಕಾಣ ಸಿಗಲಿಲ್ಲ. ಆದರೆ ಅವರ ಒಂಟೆಗಳು ಮೇಯುತಿದ್ದವು ಇವರ ಕೈವಶವಾಯಿತು. ಆ ಒಂಟೆಗಳ ಹಿಂಡನ್ನ ಮದೀನದತ್ತ ಓಡಿಸಿಕೊಂಡು ಬಂದ ಅಬು ಸೆಲಂ ಸಂಪ್ರದಾಯದಂತೆ ಮಹಮದನಿಗೆ ದೇವರ ಹಾಗೂ ಪ್ರವಾದಿಯ ಭಾಗವಾದ ಐದನೆ ಒಂದರಷ್ಟನ್ನೊಪ್ಪಿಸಿ ಉಳಿದದ್ದನ್ನ ಎಲ್ಲರೊಂದಿಗೂ ಸರಿಸಮನಾಗಿ ಹಂಚಿಕೊಂಡ.


ಬೆನ್ ಅಸದರಂತೆಯೆ ಅಹ್ಯಾದ್ ಎನ್ನುವ ಇನ್ನೊಂದು ಅರಬ್ಬಿ ಬುಡಕಟ್ಟಿನವರೂ ಮಹಮದನ ಪಾರಮ್ಯವನ್ನ ಮುಲಾಜಿಲ್ಲದೆ ತಿರಸ್ಕರಿಸಿ ವಿರೋಧಿಸುತ್ತಿದ್ದರು. ಆವರು ಮೆಕ್ಕಾದಿಂದ ಮದೀನಾ ಹಾದಿಯಾಗಿ ಬರುವಾಗ ಎರಡು ದಿನ ಅಂತರವಾಗುವಲ್ಲಿ ತಮ್ಮ  ವಸತಿ ನಿರ್ಮಿಸಿಕೊಂಡು ಅನಾದಿ ಕಾಲದಿಂದ ವಾಸಿಸುತ್ತಿದ್ದರು. ಸುಫ್ಯಾನ್ ಇಬ್ನ್ ಖಾಲಿದ್ ಅವರ ಮುಖಂಡನಾಗಿದ್ದ. ಓಹೋದ್ ಯುದ್ಧದ ಖುರೈಷಿ ಪರ ಪಡೆಯ ಸಕ್ರಿಯ ಯೋಧನಾಗಿದ್ದ ಆತ ಮಹಮದನ ಮೇಲೆ ಮುಗಿ ಬೀಳುವ ಹಂಚಿಕೆಯೊಂದನ್ನ ಹಾಕಿದ್ದ. ಈ ಆಕ್ರಮಣದ ಯೋಜನೆಯ ಸಂಗತಿ ಪುನಃ ಗೂಢಚರರ ಮೂಲಕ ಮಹಮದನ ಅರಿವಿಗೆ ಬಂದು ಅವರಿಗಿಂತ ಮೊದಲು ತಾನೆ ಮುಗಿಬಿದ್ದು ಅಹ್ಯಾನರ ಸೊಕ್ಕಡಗಿಸಲು ಮಹಮದ್ ತೀರ್ಮಾನಿಸಿದ.



ಸುಫ್ಯಾನ್ ಇಬ್ನ್ ಖಾಲಿದ್ ಸಾಮಾಜಿಕವಾಗಿ ಅರೆಬಿಯಾದ ಆ ಕಾಲದ ಒಬ್ಬ ಬಲಿಷ್ಠ ಮುಖಂಡನಾಗಿದ್ದ. ಆತನನ್ನ ಕೊಂದು ಕೆಡವಿದರೆ ಆತನ ಬೆಂಬಲಿಗರೆಲ್ಲ ಮೆತ್ತಗಾಗಿಯೆ ಆಗುತ್ತಾರೆ ಎನ್ನುವ ಅಭಿಪ್ರಾಯ ಮಹಮದನದಾಗಿತ್ತು. ಇದಕ್ಕಾಗಿ ಆತ ತನ್ನ ನೆಚ್ಚಿನ ಬಂಟ ಅಬ್ದುಲ್ಲಾ ಇಬ್ನ್ ಓನೈಸನನ್ನು ನೇಮಿಸಿದ. ಅಬ್ದುಲ್ಲ ಮಾರುವೇಷದಲ್ಲಿ ಅಲ್ಲಿಗೆ ಸಾಗಿ ಖಾಲಿದನ ಮನೆಯಲ್ಲಿ ಆಳಾಗಿ ಕೆಲಸಕ್ಕೆ ಸೇರಿದ. ಅನಂತರ ಉಪಾಯದಿಂದ ಸಮಯ ಸಾಧಿಸಿ ಆತನ ತಲೆ ಕಡಿದು ಲಗುಬಗೆಯಿಂದ ಮದೀನದತ್ತ ದೌಡಾಯಿಸಿದ. ತನ್ನನ್ನ ಬೆನ್ನಟ್ಟಿ ಬಂದ ವಿರೋಧಿಗಳಿಂದ ಅತಿ ಚಾಣಾಕ್ಷತೆಯಿಂದ ಪಾರಾಗಿ ಸುರಕ್ಷಿತವಾಗಿ ಮುಟ್ಟಿದ.


ಅಲ್ಲಿ ಮಹ್ಮದನನ್ನು ಭೇಟಿಯಾಗಿ ತನ್ನ ಕಾರ್ಯದ ಯಶಸ್ಸನ್ನು ಅರುಹಿ ಈ ಖಾಲೀದನ ರುಂಡವನ್ನ ಸಾಕ್ಷಿಯಾಗಿ ಆತನ ಮುಂದೆ ಚೆಲ್ಲಿದ. ಆಗ ಸಂಪ್ರೀತನಾದ ಮಹಮದ್ ಓನೈಸನನ್ನು ಉದ್ದೇಶಿಸಿ "ಪುನರುತ್ಥಾನದ ದಿನ, ಇದು ನನ್ನ ಹಾಗೂ ನಿನ್ನ ನಡುವೆ ಜ್ಞಾಪಕಾರ್ತವಾಗಿ ಉಳಿಯುವುದು" ಎಂದವನನ್ನು ಕೊಂಡಾಡಿ ಆಶೀರ್ವದಿಸಿದ! ಅಬ್ದುಲ್ಲಾ ಸಹ ಆ ಖಾಲಿದನನ್ನ ಕೊಂದ ಕತ್ತಿಯನ್ನ ತನಗೆ ಸಂದ ಮೆಚ್ಚುಗೆಯ ಪದಕದಂತೆ ಕೊನೆ ತನಕ ಇಟ್ಟುಕೊಂಡಿದ್ದ. ಆತನ ಸಾವಿನ ನಂತರ ಆತನ ಅಂತಿಮ ಇಚ್ಛೆಯಂತೆ ಆತನ ಹೆಣದೊಂದಿಗೆ ಇದನ್ನೂ ಸಹ ಹೂಳಲಾಯಿತು ಎನ್ನುತ್ತಾರೆ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್.


ಹೀಗೆ ತಾನೆ ಕಳುಹಿಸಿ ಉಪಾಯವಾಗಿ ತನ್ನ ಬಂಟನ ಮೂಲಕ ಮಹಮದ್ ತನ್ನ ವೈರಿಯ ಕೊಲೆ ಮಾಡಿಸಿದ್ದು ಅರೇಬಿಯಾದ  ಯಾರೊಬ್ಬರ ವಿರೋಧವನ್ನೂ ಸಹ ಗಳಿಸದಿದ್ದುದು ಒಂದು ವಿಶೇಷ ಸಂಗತಿಯಾಗಿತ್ತು ಎನ್ನುತ್ತಾರೆ ಸರ್ ಮ್ಯೂರ್. ಆದರೆ ಬೆನ್ ಅಹ್ಯಾನರು ಮಾತ್ರ ನಿರೀಕ್ಷೆಗೆ ವಿರುದ್ಧವಾಗಿ ಸೆಟೆದು ನಿಂತರು. ಅವರಲ್ಲಿ ಪ್ರತಿಕಾರದ ಭಾವ ಕುಡಿಯೊಡೆಯಿತು. ಅವರು ಅದಕ್ಕೆ ತಕ್ಕಂತೆ ಸೇಡು ತೀರಿಸಕು ಹೊಂಚು ಹಾಕುತ್ತಿದ್ದಾಗ ಮಹಮದ್ ತನ್ನ ಆರು ಅನುಯಾಯಿಗಳನ್ನ ಮೆಕ್ಕದತ್ತ ಮತಾಂತರ ಪರಮೋದ್ದೇಶದಿಂದ ಕಳುಹಿಸಿರುವ ಸಂಗತಿ ಅವರಿಗೆ ತಿಳಿದು ಬಂತು. ಉದ್ದೇಶ ಮೆಕ್ಕಾ ಅಸುಪಾಸಿನ ಮಂದಿಯನ್ನ ಪ್ರಭಾವಿಸಿ ತನ್ನ ನೂತನ ಮತಕ್ಕೆ ಸೆಳೆಯುವುದೆ ಆಗಿದ್ದರೂ ಕೂಡ ಅವರು ಮಹಮದನ ಪರ ಬೇಹುಗಾರಿಕೆ ಮಾಡಲು ಬಂದಿರಬಹುದು ಎನ್ನುವ ಶಂಕೆಯೂ ಸಹ ಉಳಿದವರಿಗೆ ಇದ್ದೇ ಇತ್ತು.


ಹೀಗಾಗಿ ಮೆಕ್ಕಾ ಮುಟ್ಟುವ ಮುಂಚೆಯೆ ಅವರನ್ನ ಸೆರೆ ಹಿಡಿಯಲಾಯಿತು. ಯಾವ ವಿಚಾರಣೆಯೂ ಇಲ್ಲದೆ ಬರ್ಬರವಾಗಿ ಶಿಕ್ಷಿಸಿ ಅವರಲ್ಲಿ ನಾಲ್ವರನ್ನ ಸಾವಿನ ಮನೆಗೂ ದೂಡಲಾಯಿತು. ಇನ್ನುಳಿದ ಇಬ್ಬರಲ್ಲಿ ಖೊಬೈಕ್ ಹಾಗೂ ಝೈದ್ ಎನ್ನುವ ಇಬ್ಬರು ಸೇರಿದ್ದರು. ಮೆಕ್ಕಾದ ಆರಾಧನಾ ದಿವಸಗಳು ನಡೆಯುತ್ತಿದ್ದುದರಿಂದ ಅದು ಮುಗಿಯುವವರೆಗೆ ವಿನಾಯತಿ ನೀಡಿ ಅನಂತರ ಮುಲಾಜಿಲ್ಲದೆ ಅವರ ಕತ್ತನ್ನೂ ಕೂಡಾ ಕತ್ತರಿಸಿ ಹಾಕಲಾಯಿತು. ಸಾಯುವ ಮುನ್ನ ಬಡಪಾಯಿಗಳು ತಮ್ಮನ್ನ ವ್ಯಥಾ ಹಿಂಸಿಸಿ ಹತ್ಯೆ ಮಾಡಿದ ಬೆನ್ ಅಹ್ಯಾನರಿಗೆ ಹಿಡಿ ಹಿಡಿ ಶಾಪ ಹಾಕುತ್ತಲೆ ಸತ್ತರು. ಅದರಿಂದ ಭಯಬೀತರಾದ ಶಾಪಗ್ರಸ್ತರು ಮುಂದೆ ತಮ್ಮ ಮಕ್ಕಳಿಗೆ ಈ ಶಾಪದ ಪ್ರಭಾವ ತಟ್ಟಬಾರದು ಎನ್ನುವ ಉದ್ದೇಶದಿಂದ ಕುಟುಂಬದ ಕಿರಿಯರ ಕೈಗೆ ಕತ್ತಿ ನೀಡಿ ಸತ್ತವರ ದೇಹವನ್ನ ಛಿದ್ರವಾಗಿಸಿದರು ಎನ್ನುತ್ತಾರೆ ಇತಿಹಾಸಕಾರ ಮ್ಯೂರ್. ಹೀಗೆ ಮಾಡಿದರೆ ಶಾಪದ ಪ್ರಭಾವ ಇಲ್ಲವಾಗುತ್ತದೆ ಎನ್ನುವ ನಂಬಿಕೆ ಅರೆಬಿಯಾದ ಬುಡಕಟ್ಟುಗಳಲ್ಲಿತ್ತು.



ಅದೆ ತಿಂಗಳು ಇನ್ನೊಂದು ಅತಿ ಘೋರವಾದ ಘಟನೆ ಜರುಗಿತು. ನೆಝಡ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಬೆನ್ ಅಮೀರ್ ಹಾಗೂ ಬೆನ್ ಸುಲೈಮ್ ಬುಡಕಟ್ಟಿನವರಿಗೆ ಸಂಬಂಧಿಸಿದಂತೆ ಈ ಅಘಾತಕಾರಿ ಘಟನೆ ಜರುಗಿತು. ಅವರಿಗೆ ತಲೆಮಾರುಗಳಿಂದ ಮೆಕ್ಕಾದ ಖುರೈಷಿಗಳೊಂದಿಗೆ ವೈರತ್ವವಿತ್ತು. ಹೀಗಾಗಿ ಅವರು ಖುರೈಷಿಗಳ ಹೊಸ ವೈರಿಯಾಗಿದ್ದ ಮಹಮದನ ಸ್ನೇಹಕ್ಕಾಗಿ ಹಾತೊರೆದರು. ಅವರ ಮುಖಂಡರಾಗಿದ್ದ ಅಬು ಬೇರ್ ಹಾಗೂ ಅಮೀರ್ ಇಬ್ನ್ ಅಥ್ ತೋಪೈಲ್ ಸ್ನೇಹಾಪೇಕ್ಷೆಯಿಂದ ಮಹಮದನನ್ನು ಕಾಣಲು ಬಂದರು. ಜೊತೆಗೆ ಅವರು ಸ್ನೇಹದ ಕೊಡುಗೆಯಾಗಿ ಕೆಲವು ಒಂಟೆ ಹಾಗೂ ಕುದುರೆಗಳನ್ನೂ ಸಹ ತಂದಿದ್ದರು. ಆದರೆ ಅವರು ಕೊಡಮಾಡಿದ ಆ ಕೊಡುಗೆಗಳನ್ನಾತ ಸುತಾರಂ ಸ್ವೀಕರಿಸಲು ನಿರಾಕರಿಸಿದ. ಒಂದೊಮ್ಮೆ ಅವರು ಇಸ್ಲಾಂ ಸ್ವೀಕರಿಸಿದರೆ ಆ ಬಗ್ಗೆ ಯೋಚಿಸಬಹುದು ಎಂದು ಆತ ಉತ್ತರಿಸಿದ.



ಆದರೆ ಮಹಮದನ ಈ ಸೊಕ್ಕಿನ ನಡೆಯಿಂದ ರೋಷತಪ್ತರಾದ ಅವರು ಅದಕ್ಕೊಪ್ಪದ ಅವರು ತನ್ನ ಆಪ್ತರೊಂದಿಗೆ ಈ ಬಗ್ಗೆ ಚರ್ಚಿಸಿ ಅಂತಹ ಒಂದು ನಿರ್ಧಾರಕ್ಕೆ ಬರುವುದು ಸೂಕ್ತ ಎನ್ನುವ ಸಲಹೆಯನ್ನ ಆತನಿಗೆ ಕೊಟ್ಟರು. ಅವರಾದರೂ ಮಹಮದನಿಗೆ ಬುದ್ಧಿ ಹೇಳಿಯಾರು. ಆಗಲಾದರೂ ಆತ ಇದಕ್ಕೊಪ್ಪಿಯಾನು ಎನ್ನುವ ಆಶಾವದ ಅವರದ್ದಾಗಿತ್ತು. ಆದರೆ ತೀರಾ ಅನಾಗರೀಕರಾಗಿದ್ದ ಕಾಡು ಮನುಷ್ಯರಂತಹ ನಝಡ್ ವಾಸಿಗಳ ಕ್ರೂರ ನಡುವಳಿಕೆಗಳ ಬಗ್ಗೆ ಮಹಮದನಿಗೆ ಚೆನ್ನಾಗಿ ಅರಿವಿದ್ದರೂ, ಆತ ಅವರ ಕೋರಿಕೆಯಂತೆ ತನ್ನ ಆಪ್ತರಲ್ಲಿ ಕೆಲವರನ್ನ ಸಂಧಾನಕ್ಕಾಗಿ ಅವರ ಅಪೇಕ್ಷೆಯಂತೆಯೆ ಅಲ್ಲಿಗೆ ಕಳುಹಿಸಿಲು ಒಪ್ಪಿದ. ಆದರೆ ಅವರ ಸುರಕ್ಷತೆಯ ಬಗ್ಗೆ ಸಂಶಯ ವ್ಯಕ್ತ ಪಡಿಸಿದಾಗ ಅದರ ಜವಾಬ್ದಾರಿ ತನ್ನದೆಂದು ಅಬು ಬೇರ್ ಭಾಷೆ ಕೊಟ್ಟ.


ಅವನ ಮಾತು ನಂಬಿದ ಮಹಮದ್ ಅಬು ಅಮೀರನಿಗೊಂದು ಪತ್ರ ಬರೆಸಿ ತನ್ನವರಾದ ನಲವತ್ತು ಮಂದಿಯನ್ನ ಅವನಲ್ಲಿಗೆ ಕಳುಹಿಸಿದ. ಬೀರಮಾನ್ ಎನ್ನುವ ಮಾರ್ಗ ಮಧ್ಯದ ಸ್ಥಳವೊಂದರಲ್ಲಿ ಅವರ ತಂಡ ರಾತ್ರಿ ತಂಗಿತು. ತಮ್ಮಲ್ಲಿ ಒಬ್ಬನನ್ನು ದೂತನನ್ನಾಗಿಸಿ ಅಮೀರನಲ್ಲಿಗೆ ಆ ಮಹಮದನ ಪತ್ರವನ್ನು ಕಳುಹಿಸಿದರು. ಆದರೆ ಅದಾಗಲೆ ಮಹಮದನ ನಿಲುವಿನಿಂದ ಸಿಟ್ಟಿಗೆದ್ದಿದ್ದ ಅಮೀರ ಕನಿಷ್ಠ ಆ ಪತ್ರವನ್ನು ಒಡೆದು ನೋಡುವ ಗೋಜಿಗೂ ಹೋಗದೆ ಆ ದೂತನನ್ನು ವಧಿಸುವಂತೆ ಆಜ್ಞಾಪಿಸಿದ. ಜೊತೆಗೆ ಆ ಮದೀನದ ತಂಡದ ಎಲ್ಲಾ ಮುಸಲ್ಮಾನರನ್ನೂ ಕೊಂದೆಸೆಯಲು ಆಜ್ಞಾಪಿಸಿದ. ಅವನ ಆಜ್ಞೆಯಂತೆ ದೂತರನ್ನ ಕೊಂದದ್ದು ಹೌದಾದರೂ, ಆತನ ಹಿಂಬಾಲಕರು ತಮ್ಮ ನಾಯಕ ಅಬು ಬೇರನ ಭರವಸೆಯ ವಿರುದ್ಧವಾಗಿ ಇಂತಹ ಹೀನ ಕೃತ್ಯವನ್ನೆಸಗಲು ಒಪ್ಪಲಿಲ್ಲ. ಆ ಆಜ್ಞೆಯನ್ನವರು ಧಿಕ್ಕರಿಸಿದರು. ಆಗ ಅನಿವಾರ್ಯವಾಗಿ ಅಮೀರ ಅಬು ಸಲೈಮ್ ಎಂಬಾತನ ನೆರವು ಕೋರಿದ. ಆತ ಬದರ್ ಯುದ್ಧದಲ್ಲಿ ಮಹಮದನ ಯೋಧರಿಂದ ಅಪಾರ ಪ್ರಮಾಣದಲ್ಲಿ ನಷ್ಟವನ್ನುಂಡವನಾಗಿದ್ದರಿಂದ ರೋಷದಿಂದಲೆ ಇದಕ್ಕೆ ಸಮ್ಮತಿಸಿದ.



ಮಹಮದನ ನಲವತ್ತು ಬಂಟರ ಮೇಲೂ ರಾತ್ರೋ ರಾತ್ರಿ ಮುಗಿಬಿದ್ದ ಅಬು ಸಲೈಮ್ ಪ್ರಯಾಣದ ಆಯಾಸದಿಂದ ದಣಿದು ಮಲಗಿದ್ದವರಲ್ಲಿ ಕೇವಲ ಇಬ್ಬರನ್ನ ಬಿಟ್ಟು ಉಳಿದವರೆಲ್ಲರ ರುಂಡವನ್ನ ಚೆಂಡಾಡಿದ. ಈ ಹತ್ಯಾಕಾಂಡದ ವಿಷಯ ಅರಿವಾದ ಕೂಡಲೆ ಮಹಮದನ ಮನಸ್ಸು ವ್ಯಗ್ರಗೊಂಡಿತು.



( ಇನ್ನೂ ಇದೆ.)

No comments: