16 October 2014

ನೀರ ಮೇಲೆ ಅವಳ ಹೆಜ್ಜೆ........




( ಭಾಗ - ೨.)


ಬೆಂಗಳೂರು! ಅವರಿವರಿಂದ ಕೇಳಿ ಮಾತ್ರ ಅವನಿಗೆ ಗೊತ್ತಿದ್ದ ನಗರ. ಯಾವ್ಯಾವುದೋ ಚಿತ್ರಗಳಲ್ಲಿ ಮಾತ್ರ ನೋಡಿ ಗೊತ್ತಿದ್ದ ವಿಧಾನಸೌಧ-ಹೈಕೋರ್ಟಿನ ಹೊರತು, ಇನ್ಯಾವುದೋ ಕಿತ್ತು ಹೋದ ಕನ್ನಡ ಸಿನೆಮಾದಲ್ಲಿ ಕಂಡ ದೊಡ್ಡ ದೊಡ್ಡ ರಸ್ತೆಯ ಮೇಲೆ ರೌಡಿಗಳ ಹೊಡೆದಾಟದ ಹೊರತು ಅವನ ಪಾಲಿಗೆ ಬೆಂಗಳೂರು ಒಂದು ನಿಗೂಢ ನಗರಿಯಾಗಿಯೇ ಉಳಿದಿತ್ತು. ಶಂಕರ್'ನಾಗ್ ಸಿನೇಮಾವೊಂದರಲ್ಲಿ ಎಂ ಜಿ ರಸ್ತೆಯನ್ನ ಕಂಡು ಆಗೆಲ್ಲ ವಿಸ್ಮಯ ಪಟ್ಟಿದ್ದ. 'ಅಂತಹ ರಸ್ತೆಯಲ್ಲಿ ನೆಲದ ಮೇಲೆ ಅನ್ನ ಹಾಕಿಸಿಕೊಂಡು ಉಣ್ಣಬಹುದಲ್ಲ! ಅದೆಷ್ಟು ಸ್ವಚ್ಛ?!' ಎಂದು ಕೊಂಡು ಬೆರಗಾಗಿದ್ದ.


ಈಗ ಅಂತಹ ಕಾಣದ ಜನಜಾತ್ರೆಯೊಂದಕ್ಕೆ ಅನಿವಾರ್ಯವಾಗಿ ತಾನೆ ಹೊರಟು ನಿಂತಿದ್ದ. ಕಾಣದ ಊರಿನಲ್ಲಿ ಕುರುಡು ಕನಸೊಂದರ ಬೆನ್ನು ಹತ್ತಿ ಬರಿಗೈಯಲ್ಲಿ ಹೊರಟು ನಿಂತವನ ಮುಂದೆ ಇದ್ದದ್ದು 'ನಾಳೆ ಏನು?' ಎಂಬ ಉತ್ತರ ಕಾಣದ ದೊಡ್ಡ ಪ್ರಶ್ನೆ, ಅಲ್ಲಿ ಆಸರೆ ಹುಡುಕಬೇಕಾದ ಎಡೆಯೊಂದರ ವಿಳಾಸ ಬರೆದಿದ್ದ ಅದಾಗಲೆ ಬೆವರು ಕೊಳೆ ತಾಗಿ ಜೂಲಾಗಿದ್ದ ಒಂದು ಚೀಟಿ ಹಾಗೂ ಜೇಬಿನಲ್ಲಿದ್ದ ಗೆಳೆಯ ಕೊಟ್ಟಿದ್ದ ಅರವತ್ತು ರೂಪಾಯಿ ಹಣ ಮಾತ್ರ.

ಅಲ್ಲಿಯವರೆಗಿನ ಅವನ ಬಾಳ್ವೆಯಲ್ಲಿ ಹಳ್ಳಿ ಗಮಾರನಾದ ಅವ ಕಂಡು ಕಣ್ಣು ಕಣ್ಣು ಬಿಟ್ಟಿದ್ದ ಅತಿ ದೊಡ್ಡ ಊರು ಶಿವಮೊಗ್ಗ, ಅದು ಬಿಟ್ಟರೆ ವಿಸ್ಮಯದಿಂದ ಕಳೆದ ಬಾಯಿಯನ್ನ ಮರು ಮುಚ್ಚಲಿಕ್ಕೆ ಮರೆತು ನೋಡಿದ್ದು ಮಂಗಳೂರನ್ನ. ಅವನ ಕಲ್ಪನೆಯ ಸಾಮರ್ಥ್ಯಕ್ಕೆ ಅದಕ್ಕಿಂತಾ ದೊಡ್ಡ ನಗರದ ಅಗಾಧತೆ ಇನ್ನೂ ಎಟುಕಿರಲೆ ಇಲ್ಲ. ಓದುವಾಗ ಒಂದೊಮ್ಮೆ ಮಂಗಳೂರಿನಲ್ಲಿದ್ದ. ಓದಿಸಲಾಗದು ಅಂತ ಅಪ್ಪ ಹೇಳಿ ಮನೆಯಿಂದಾಚೆ ಅಟ್ಟಿದಾಗ ಕೆಲವು ತಿಂಗಳೂ ಶಿವಮೊಗ್ಗೆಯಲ್ಲಿ ಅನ್ನ ಅರಸಿ ಕಾಲ ಹಾಕಿದ್ದ. ಆಗೆಲ್ಲಾ ನಗರದ ಅತಿ ನಾಗರೀಕತೆಯ ಥಳುಕು ಅವನಿಗೆ ಕಿಂಚಿತ್ತೂ ಹಿಡಿಸಿರದಿದ್ದರೂ ಸಹ ಓದು ಹಾಗೂ ಹೊಟ್ಟೆ ಪಾಡಿನ ಅನಿವಾರ್ಯತೆ ಅವನನ್ನು ಹಲ್ಲು ಕಚ್ಚಿಕೊಂಡು ಅಲ್ಲಿನ ಕಿರಿಕಿರಿಗಳನ್ನೆಲ್ಲಾ ಸಹಿಸಿಕೊಂಡು ಕಾಲ ಹಾಕುವಂತೆ ಮಾಡಿದ್ದವು. ಆಗೇನೋ ಆಯ್ಕೆಯ ಸ್ವಾತಂತ್ರ್ಯ ಅವನಿಗಿರಲಿಲ್ಲ ಹೀಗಾಗಿ ಅಂತಲ್ಲೆಲ್ಲ ಮಸೊಪ್ಪದಿದ್ದರೂ ಇದ್ದ. ಈಗ ಅವನ ಬಾಳಿನ ಗೋಳನ್ನ ನಿವಾರಿಸಿಕೊಳ್ಳುವ ಆಶಾಕಿರಣವೊಂದು ಅಂತಹದ್ದೆ ಒಂದು ನಗರದಲ್ಲಿ ಗೋಚರಿಸುತ್ತಿದ್ದರಿಂದ ತಾನೆ ಅಲ್ಲಿಗೆ ಹೊರಟು ನಿಂತಿದ್ದ.


ಬಸ್ಸು ಅದ್ಯಾವಾಗ ಶಿವಮೊಗ್ಗ ಮುಟ್ಟಿತೋ ಅವನಿಗೆ ಅರಿವಾಗಲೆ ಇಲ್ಲ. ತನ್ನದೆ ಆಲೋಚನೆಯಲ್ಲಿ ಮುಳುಗಿ ಹೋಗಿದ್ದ ಅವನಿಗೆ ಒಂದೂವರೆ ಘಂಟೆಯ ಪಯಣ ಕ್ಷಣಾರ್ಧದಲ್ಲಿ ಕಳೆದು ಹೋದಂತೆ ಭಾಸವಾಯ್ತು. ಬಸ್ಸಿನೊಳಗಿನ ಸಹ ಪಯಣಿಗರ ಕಿರಿಕಿರಿ, ಟಿಕೇಟು ಕೊಡುವ ಗಡಿಬಿಡಿಯಲ್ಲಿ ಅಲ್ಲಿಂದಿಲ್ಲಿ ಆ ಜಂಗುಳಿಯಲ್ಲಿಯೆ ನುಗ್ಗುತ್ತಾ ನಡು ನಡುವೆ ಸುತ್ತಮುತ್ತಲಿನವರ ಕಿವಿ ತಮಟೆ ಕಿತ್ತು ಹೋಗುವಂತೆ ಸೀಟಿ ಹೊಡೆದು ನಿಂತಲ್ಲಿಂದಲೆ ಇಳಿಯುವ ಹತ್ತುವ ಮಂದಿಯ ಮಂದೆಯನ್ನ ನಿಯಂತ್ರಿಸುತ್ತಿದ್ದ ಕಂಡೆಕ್ಟರನ ಪಿರಿಪಿರಿ ಎಲ್ಲವೂ ಅವನ ಚಿತ್ತ ಪಟಲಕ್ಕೆ ಕಿಂಚಿತ್ತೂ ತಾಕಿರಲೇ ಇಲ್ಲ. ಅಷ್ಟು ತನ್ಮಯನಾಗಿ ಅವ ತನ್ನ ಕರಾಳ ಭೂತಕಾಲದಲ್ಲಿ ಕಳೆದುಹೋಗಿದ್ದ. ಶಿವಮೊಗ್ಗದಲ್ಲಿ ಒಂದಿರುಳು ಕಳೆಯಲೆ ಬೇಕಿತ್ತು. ಅಲ್ಲಿ ಕೆಲಸ ಮಾಡುವಾಗ ತಂಗಿದ್ದ ಕೊಠಡಿಯಲ್ಲಿ ಅವನ ಚೂರುಪಾರು ಬಟ್ಟೆಬರೆಗಳಿದ್ದವು. ಅಲ್ಲದೆ ಅವನ ಜೇಬಿನೊಳಗಿದ್ದ ಹಣಕ್ಕೆ ಅವನನ್ನ ಮಧ್ಯಾಹ್ನದ ರೈಲಿನಲ್ಲಿ ಮಾತ್ರ ಬೆಂಗಳೂರು ಮುಟ್ಟಿಸಲು ಸಾಲುತ್ತಿದ್ದವು.

........


ಮರು ಬೆಳಗಾದಾಗ ಅನ್ಯಮನಸ್ಕನಾಗಿಯೆ ಚಾಪೆ ಬಿಟ್ಟೆದ್ದ. ಅವನ ಬಾಳಿನ ದೊಡ್ಡ ತಿರುವಿನ ದಿನ ಅವತ್ತು. ನಿರಾಸಕ್ತನಾಗಿ ಕೋಣೆಯ ಕಿಡಕಿಯಿಂದಾಚೆ ಕಣ್ಣು ಹಾಯಿಸಿದಾಗ ಶಿವಮೊಗ್ಗದ ರಸ್ತೆಗಳ ಅನಭಿಷಿಕ್ತ ರಾಜಾ ರಾಣಿಯರಾದ ಹಂದಿಗಳು ಸಕುಟುಂಬ ಸಮೇತರಾಗಿ ಬೀದಿ ಪಕ್ಕದ ಚರಂಡಿಯನ್ನ ರಾಡಿ ಎಬ್ಬಿಸುತ್ತಿರೋದು ಕಣ್ಣಿಗೆ ಬಿದ್ದು ಹೇಸಿಗೆ ಅನ್ನಿಸಿತು. 'ಬೆಂಗಳೂರು ಇಲ್ಲಿಕ್ಕಿಂತ ನೂರು ಪಟ್ಟು ದೊಡ್ಡದಂತೆ! ಬಹುಷಃ ಅಲ್ಲಿ ಇದರ ದುಪ್ಪಟ್ಟು ಗಾತ್ರದ ವರಾಹ ಸಮೂಹ ತಮ್ಮ ದರ್ಬಾರು ನಡೆಸುತ್ತಿರಬಹುದೋ ಏನೋ!' ಅಂದುಕೊಂಡ. ಮೊದಮೊದಲಿಗೆ ಯಾರಿಗೂ ಹೇಳದೆ ಊರು ಬಿಟ್ಟು ಹೋಗಬೇಕು ಅಂತ ಅಂದುಕೊಂಡಿದ್ದ. ತಾನು ಇದ್ದರೂ ಅಷ್ಟೆ, ಸತ್ತರೂ ಅಷ್ಟೆ ಯಾರ ಗಮನಕ್ಕೂ ತನ್ನ ಅನುಪಸ್ಥಿತಿ ಬರಲಾರದು ಎಂದುಕೊಂಡಿದ್ದ. ಆದರೆ ಅದೆಷ್ಟೇ ರಹಸ್ಯವನ್ನ ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸಿದರೂ ಅದು ಅವನಿಂದ ಸಾಧ್ಯವಾಗಲಿಲ್ಲ. ಯಾರಿಗಾದರೂ ಈ ಸಂಗತಿ ತಿಳಿಸದೆ ಇಲ್ಲಿಂದ ತೊಲಗಿದರೆ ಚಂದಾಮಾಮದಲ್ಲಿನ ವಿಕ್ರಮಾರ್ಕನ ಕಥೆಯಲ್ಲಿ ಬೇತಾಳ ಬೆದರಿಸುವಂತೆ ತನ್ನ ತಲೆಯೂ ಸಿಡಿದು ಸಾವಿರ ಹೋಳಾದೀತು ಎಂದು ಬೆದರಿ ಬೆಚ್ಚಿ ಹೋದವ ಕಡೆ ಪಕ್ಷ ಸುಶ್ರುತನಿಗಾದರೂ ಹೇಳಿಯೇ ಹೋಗಬೇಕು ಅಂತ ನಿರ್ಧರಿಸಿಕೊಂಡ.

ಊರು ಬಿಡಲೇ ಬೇಕಂತ ಅಂದು ಕೊಂಡ ಎರಡು ದಿನಗಳ ಹಿಂದಿನ ಸಂಜೆ ಬಾಲ್ಯದ ಗೆಳೆಯನನ್ನ ಹುಡುಕಿಕೊಂಡು ಹೋದ. ಆ ವರ್ಷ ತಾನೆ ಕಾಲೇಜು ಮೆಟ್ಟಿಲು ಹತ್ತಿದ್ದ ಗೆಳೆಯನ ಭಾಗ್ಯ ತನಗೆ ಸಿಗಲಿಲ್ಲವಲ್ಲ ಅಂತ ಅವನ ಕೋಣೆಯುದ್ದ ಜೋಡಿಸಿಟ್ಟಿದ್ದ ಹೊಸ ಹೊಸ ಪುಸ್ತಕಗಳನ್ನ ಕಾಣುವಾಗ ಮನ ಮುಮ್ಮಲ ಮರುಗಿತು. ಏನೋ ಮಾಡಬಾರದ ಅಪರಾಧ ಮಾಡುತ್ತಿರುವಂತೆ ಆ ಪುಸ್ತಕಗಳಲ್ಲೊಂದನ್ನ ಕೈಗೆತ್ತಿಕೊಂಡು ಮೆಲ್ಲನೆ ಅದನ್ನ ನೇವರಿಸಿ ಕೆಳಗಿಟ್ಟ. ಅಳುಕುತ್ತಲೆ ತನ್ನ ಮುಂದಿನ ಯೋಜನೆಯನ್ನ ಚಡ್ಡಿದೋಸ್ತನ ಮುಂದೆ ವಿವರಿಸುವಾಗ ಅರಿವಿಲ್ಲದೆ ಅಳು ಬಂದು ಕಂಠ ಕಟ್ಟಿಕೊಂಡಿತು. ಭರವಸೆಯ ನಾಲ್ಕು ಮಾತು, ಅವನ ಉಳಿತಾಯದ ಐವತ್ತು ರೂಪಾಯಿ ಅಲ್ಲಿಂದ ಹೊರಡುವಾಗ ಇವನ ಜೊತೆಗಿದ್ದವು.


ಇದೀಗ ಬೆಂಗಳೂರಿನ ಬಂಡಿ ಹತ್ತಲಿಕ್ಕೆ ಒದಗಿ ಬರುತ್ತಿರೋದು ಅದೆ ಐವತ್ತು ರೂಪಾಯಿ! ಇದ್ದ ಐವತ್ತು ರೂಪಾಯಿಯನ್ನ ಇನಿತೂ ಖರ್ಚು ಮಾಡದೆ ಬರಿ ಹೊಟ್ಟೆಯಲ್ಲಿ ತನ್ನ ಬಟ್ಟೆಗಳ ಚೀಲ ಹೊತ್ತು ಕೊಂಡು ಪಟ್ಟಣದ ಇನ್ನೊಂದು ಭಾಗದಲ್ಲಿದ್ದ ರೈಲ್ವೆ ನಿಲ್ದಾಣವನ್ನ ಮುಟ್ಟಿದವ ಅಲ್ಲಿನ ಟಿಕೇಟಿಗಾಗಿನ ಸಾಲು ನೋಡಿ ಬೆಚ್ಚಿಬಿದ್ದ. ಅರ್ಧ ಊರೆ ಅಲ್ಲಿ ಕೌಂಟರಿನ ಮುಂದೆ ನೆರೆದಿದ್ದಂತಿತ್ತು. ತಲೆಗೊಂದು ಮಾತು, ಅಲ್ಲಲ್ಲಿ ಕೋಳಿ ಜಗಳ, ಇನ್ಯಾರದೋ ಲಲ್ಲೆ, ಮತ್ಯಾರದೋ ಅರಚುವ ಮಗುವಿನ ಸಂಭಾಳಿಕೆ ಇವನ್ನೆಲ್ಲ ಕಾಣುತ್ತಾ ತಾನೂ ಆ ಸಾಲಿನ ಕೊಟ್ಟಕೊನೆಯ ಬಾಲವಾದ. ಅಸಲಿಗೆ ಅದವನ ಜೀವದಲ್ಲೆ ಮೊತ್ತ ಮೊದಲ ರೈಲು ಪಯಣ. ಅಲ್ಲಿಯವರೆಗೆ ಕೇವಲ ಏದುಸಿರು ಬಿಡುತ್ತಾ ಇಂಜಿನಿನ ಹಿಂದೆ ಬೋಗಿಗಳು ಸರದಿಯಲ್ಲಿ ಸಾಗುವುದನ್ನ ದೂರದಿಂದ ಕಂಡಷ್ಟೆ ಅರಿತಿದ್ದನವ. ಇದೀಗ ಸಾಕ್ಷಾತ್ ಪಯಣಿಗರಲ್ಲೊಬ್ಬನಾಗುತ್ತಿರೋದಕ್ಕೆ ಕೊಂಚ ಅಳುಕು ಮನದಲ್ಲಿ ಮಿಡುಕಾಡುತ್ತಿದ್ದರೂ ಯಾರೊಬ್ಬರಿಗೂ ಅದು ಗೊತ್ತಾಗದಂತೆ ಕೆಮ್ಮಿ ಕ್ಯಾಕರಿಸಿ ತನಗೆ ತಾನೆ ಧೈರ್ಯ ತಂದುಕೊಂಡ. ಧೈರ್ಯ ಬಂತೋ ಇಲ್ಲವೋ ಕನಿಷ್ಠ ಹಾಗೆ ನಟಿಸಿದ.


ಇಷ್ಟುದ್ದದ ರೈಲು ಅದು ಹೇಗೆ ಕೇವಲ ಮೂವತ್ತೆರಡೆ ರೂಪಾಯಿಗೆ ನನ್ನನ್ನ ಅಷ್ಟು ದೂರ ಮುಟ್ಟಿಸುತ್ತೆ! ಅಂತ ಅವನಿಗೆ ಅರ್ಥವಾಗಲೆ ಇಲ್ಲ. ಇದೊಂದು ಅವನ ಪಾಲಿನ ಬಗೆ ಹರೆಯದ ಪ್ರಶ್ನೆಯಾಗಿಯೆ ಉಳಿದಿತ್ತು. ಅವನ ತರ್ಕದ ಪ್ರಕಾರ ಬಸ್ಸಿಗಿಂತ ಉದ್ದ ಹಾಗೂ ದೊಡ್ಡದಾದ ರೈಲಿನಲ್ಲಿ ಪ್ರಯಾಣದ ದರವೂ ಬಸ್ಸಿಗಿಂತ ದುಬಾರಿಯೆ ಆಗಿರಬೇಕಿತ್ತು. ಇದೊಂದೆ ಅಲ್ಲ ಅಂತಹ ಬಗೆ ಹರೆಯದ ಇನ್ನೂ ಕೆಲವು ಗೊಂದಲಗಳು ಅವನಿಗಿದ್ದವು. ಪಕ್ಕಾ ಗಮಾರನಾಗಿದ್ದ ಅವ ಮೊದಮೊದಲಿಗೆ ಟೆಲಿಫೋನನ್ನ ಕಂಡಾಗಲೂ ಅದರಲ್ಲಿ ಜನ ತಮ್ಮ ಊರಿನ ಭಾಷೆಯಲ್ಲಿಯೆ ಮಾತನಾಡುವಾಗಲೂ ಹೀಗೆ ಗೊಂದಲಕ್ಕೆ ಬಿದ್ದಿದ್ದ.

ಅವನ ಪ್ರಕಾರ ಫೋನಿನಲ್ಲಿ ಮಾತನಾಡುವವರೆಲ್ಲ ಕೇವಲ ಇಂಗ್ಲೀಷಿನಲ್ಲಿಯೇ ಅರಚಬೇಕು. ಇಲ್ಲದಿದ್ದರೆ ಆ ಕಡೆಯಿಂದ ಕಿವಿಗೊಡುತ್ತಿರುವವರಿಗೆ ಇವರ ಬಡಬಡಿಕೆಯಲ್ಲಿ ಏನೊಂದೂ ಕೇಳುವುದೇ ಇಲ್ಲ! ತನ್ನ ಊರಿನ ಮಂದಿ ತಮ್ಮದೆ ಆದ ವಿಶಿಷ್ಟ ಶೈಲಿಯ ಗ್ರಾಮ್ಯ ಕನ್ನಡದಲ್ಲಿಯೇ ಫೋನಿನಲ್ಲಿ ಮಾತನಾಡುವುದನ್ನ ಕಂಡು ಗಾಬರಿಯಾಗಿ ಅವರಿಗೆ ಬುದ್ಧಿ ಹೇಳಲು ಹೋಗಿ(?) ಮೊದಲು ಉಗಿಸಿಕೊಂಡು ಆಮೇಲೆ ಹಾಸ್ಯಾಸ್ಪದನೂ ಆಗಿಹೋಗಿದ್ದ. ಈ ತರಹದ ಕೆಲಸಕ್ಕೆ ಬಾರದ ತರ್ಕಗಳಲ್ಲಿ ತೇಜಸ್ವಿ ಕಾದಂಬರಿಯ ಯಾವುದೇ ಅತಿ ಮೂರ್ಖ ಪಾತ್ರಗಳನ್ನೂ ಮೀರಿಸುವಷ್ಟು ಅದ್ವಿತೀಯನಾಗಿದ್ದ ಇವ. ಇಂತಿರುವ ತಾನು ಮೊದಮೊದಲು ರೈಲೇರುತ್ತಿದ್ದಾನೆ ಅದೂ ಬೆಂಗಳೂರಿಗೆ. ಇವನೊಬ್ಬ ಬಾರದೆ ಪಾಪ, ಬೆಂಗಳೂರು ಬಡವಾಗಿತ್ತು!.


( ಮುಂದಿದೆ.)

15 October 2014

ಪುಸ್ತಕದೊಳಗೆ - ೨೦






"ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕಾ"

ಲೇಖಕರು; ಬಿಜಿಎಲ್ ಸ್ವಾಮಿ,
ಪ್ರಕಾಶಕರು; ಕಾವ್ಯಾಲಯ  ( ಮೊದಲ ಐದು ಮುದ್ರಣ.)

ಪ್ರಕಟಣೆ; ೧೯೬೦.


ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ ( ಹೊಸ ಆವೃತ್ತಿ ಐದು ಬಾರಿ.)


ಪ್ರಕಟಣೆ; ೨೦೦೮,

ಕ್ರಯ; ರೂಪಾಯಿ ಮೂವತ್ತೈದು.


"ನಮ್ಮ ಹೊಟ್ಟೆಯ ಚರಿತ್ರೆಗೆ ಹಿನ್ನೆಲೆ....

ನೂರಕ್ಕೆ ತೊಂಬತ್ತು ಪಾಲು ಭಾರತ ಭೂಮಾತೆ ಈಯ್ದ ಕಾಯಿಪಲ್ಯೆಗಳನ್ನೂ ಗೆಡ್ಡೆ ಗೆಣಸುಗಳನ್ನೂ ಹಣ್ಣು ಹಂಪಲುಗಳನ್ನೂ ತೃಪ್ತಿ ಪಟ್ಟುಕೊಂಡಿದ್ದ ನಮ್ಮ ಹೊಟ್ಟೆಯೊಳಕ್ಕೆ ಹದಿನಾರನೆ ಶತಮಾನದಿಂದೀಚೆಗೆ ಕಡಲಾಚೆಯಿಂದ ಕಾಲಿಟ್ಟ ಸಸ್ಯಜನ್ಯ ತಿನಿಸುಗಳು ಒದಗಿ ಬಂದವು. ಅವುಗಳಿಗೆ ನಮ್ಮ ನಾಲಗೆ ಲೊಟಗೆ ಹೊಡೆಯಿತು, ಹೊಟ್ಟೆ ತಾಳ ಹಾಕಿತು. ಹೀಗೆ ಬಂದ ಐವತ್ತು ನೂರು ವರ್ಷಗಳೊಳಗಾಗಿ ಅಮದು ಸಸ್ಯಗಳ ಫಲವೇ ನಮ್ಮ ದೈನಂದಿನ ಉಣಿಸು-ತಿನಿಸುಗಳಲ್ಲಿ ಮೇಲುಗೈಯಾಯಿತು. ಭಾರತೀಯ ಮಡಲಿನಲ್ಲಿ ಬೇರು ಬಿಟ್ಟಿತು, ಬೆಳೆಯಿತು, ಸಾಗುವಳಿಗೆ ಒಗ್ಗಿತು. ಮಡಿಲ ವಿಸ್ತಾರದ ಬಹುಭಾಗವನ್ನು ಆಕ್ರಮಿಸಿಕೊಂಡಿತು. ಅದುವರೆಗೂ ನಮ್ಮ ಹೊಟ್ಟೆಪಾಡನ್ನು ನಿರ್ವಹಿಸಿಕೊಂಡು ಬಂದಿದ್ದ ಕಾಯಿ ಪಲ್ಯ ಹಣ್ಣು ಹಂಪಲು ತೆರೆಯ ಹಿಂದೆ ಸರಿದವು. 'ಸೀಮೆ' ಆಹಾರ ವಸ್ತುಗಳು ಬಹಿರಂಗಕೆ ಇಳಿದವು.

'ಕಡಲ ಪಯಣದ ದಾರಿಗಳು'

ಮಾನವನ ಚರಿತ್ರೆಯಲ್ಲೇ ಕ್ರಿಸ್ತಶಕ ೧೫೦೦ನೆ ಇಸವಿ ಬಹು ಮುಖ್ಯವಾದ ಒಂದು ಘಟ್ಟ. ನಮ್ಮ ಹೊಟ್ಟೆಯ ಚರಿತ್ರೆಯಲ್ಲೂ ಅಷ್ಟೆ. ಕೊಲಂಬಸನು ಅಮೇರಿಕಾ ಖಂಡವನ್ನು ಕಂಡು ಹಿಡಿದ ಒಂದೆರಡು ವರ್ಷಗಳಲ್ಲೇ ವಾಸ್ಕೋ-ಡಾ-ಗಾಮಾನ ಮಹಾ ಸಾಧನೆ ಸಿದ್ಧಿ ಪಡೆಯಿತು. ೧೪೯೭ನೆ ಇಸವಿ ಜುಲೈ ಎಂಟನೆ ತಾರೀಕು ಲಿಸ್ಟನಿನ ಜನ ಸಮೂಹ ಟೇಗಸ್ ದಡದಲ್ಲಿ ಗುಂಪುಗೂಡಿತ್ತು. ನಿಲುವಂಗಿ ಧರಿಸಿದ್ದ ಪ್ರೀಸ್ಟ್'ಗಳು ಜನಸಮೂಹವನ್ನು ಭೇದಿಸಿಕೊಂಡು ಸಾಲುಸಾಲಾಗಿ ಎದುರು ವರಸೆಯಲ್ಲಿ ನಿಂತರು. ಜನರ ದೃಷ್ಟಿಯೆಲ್ಲ ಬಂದರಿನ ಕಡೆಗೆ ನಾಟಿತ್ತು. ಅಲ್ಲಿ ನಾಲ್ಕು ಹಡಗುಗಳು ಭಾರತಾಭಿಮುಖವಾಗಿ ಯಾನ ಮಾಡಲು ಹವಣಾಗಿ ಲಂಗರಿನಲ್ಲಿದ್ದವು. ಪ್ರೀಸ್ಟ್'ಗಳು ಶಾಂತಿಮಂತ್ರವನ್ನು ಘೋಷಿಸಿದರು. ಜನ ಹರ್ಷೋದ್ಗಾರ ಮಾಡಿತು. ನಾವಿಕರು ಹಡಗಿನ ಪಟಗಳನ್ನು ಬಿಚ್ಚಿದರು. ವಾಸ್ಕೋ-ಡಾ-ಗಾಮನ ನೌಕಾ ಸಮೂಹ ಚಲಿಸಿತು. ದಕ್ಷಿಣ ಆಫ್ರಿಕಾದ ಕೇಪ್ ಆಫ್ ಗುಡ್ ಹೋಪ್ ಎಂಬ ದಕ್ಷಿಣ ತುದಿಯನ್ನ ಬಳಸಿ ಹತ್ತು ತಿಂಗಳಾದ ಮೇಲೆ ದಕ್ಷಿಣ ಭಾರತದ ಪಶ್ಚಿಮ ಕರಾವಳಿಯ ಕಲ್ಲಿಕೋಟೆ (ಈಗಿನ ಕ್ಯಾಲಿಕಟ್.)ಯಲ್ಲಿ ಲಂಗರು ಬಿಟ್ಟಿತು ( ಮೇ ೨೦, ೧೪೯೮.). ಯುರೋಪಿನಿಂದ ಭಾರತಕ್ಕೆ ಸಮುದ್ರ ಮಾರ್ಗ ಸ್ಥಾಪಿತವಾಯಿತು. ಕಲ್ಲಿಕೋಟೆಯಲ್ಲಿ ಆ ವೇಳೆಗಾಗಲೆ ಅರಬ್ಬಿಯರೂ, ಮೂರ್ನಾಡಿಗರೂ ಕಡಲು ವ್ಯಾಪಾರೋದ್ಯಮವನ್ನು ನೆಲೆಯಾಗಿಸಿಕೊಂಡಿದ್ದರು. ಪೋರ್ಚುಗೀಝರ ಆಗಮನ ಅವರಿಗೆ ಹಿಡಿಸಲಿಲ್ಲ. ತಕರಾರು ಆರಂಭವಾಯಿತು. ವಾಸ್ಕೋ-ಡಾ-ಗಾಮನು ಹಿಂದಿರುಗುವಾಗ ಕಲ್ಲಿಕೋಟೆಯ ದೊರೆ ( ಜಾಮೋರಿನ್.)ಯಿಂದ ಕರಾರು ಪತ್ರವನ್ನು ಪಡೆದುಕೊಂಡ. ಅದರ ಸಾರಾಂಶ 'ನಿಮ್ಮ ನಾಡಿನ ಮಾನ್ಯ ವಾಸ್ಕೋ-ಡಾ-ಗಾಮನು ನನ್ನ ರಾಜ್ಯಕ್ಕೆ ಬಂದದ್ದು ಬಹಳ ಸಂತೋಷ. ನನ್ನ ರಾಜ್ಯದಲ್ಲಿ ದಾಲ್ಚೀನಿ, ಲವಂಗ, ಶುಂಠಿ ಮತ್ತು ಮಣಿಗಳು ಹೇರಳವಾಗಿವೆ. ನಿಮ್ಮ ಚಿನ್ನ, ಬೆಳ್ಳಿ, ಹವಳ ಮತ್ತು ಕೇಸರಿ ಬಣ್ಣದ ಬಟ್ಟೆಗಳನ್ನು ವಿನಿಮಯ ಮಾಡಿಕೊಳ್ಳಲು ಇಚ್ಛೆ ಪಡುತ್ತೇನೆ' ಈ ಸಂಧಾನದೊಡನೆ ವಾಸ್ಕೋ-ಡಾ-ಗಾಮನು ೧೪೯೯ನೆ ಇಸವಿಯ ಸೆಪ್ಟೆಂಬರಿನಲ್ಲಿ ಟೇಗಸ್ ಬಂದರಿಗೆ ವಾಪಾಸು  ಬಂದು ಸೇರಿದ.



ಇಷ್ಟು ಮಾತ್ರವೆ ಸಂಭವಿಸಿದ್ದರೆ ನಮ್ಮ ಹೊಟ್ಟೆಯ ರೀತಿನೀತಿಗಳು ಮಾರ್ಪಾಟುಗೊಳ್ಳಬೇಕಾದ ಸಂದರ್ಭವೇ ಒದಗುತ್ತಿರಲಿಲ್ಲ. ಪೋರ್ಚುಗೀಝರ ಸಮುದ್ರ ಯಾನದಲ್ಲಿ ಇನ್ನೊಂದು ಅನಿರೀಕ್ಷಿತ ಘಟನೆ ಸಂಭವಿಸಬೇಕಾಯಿತು. ಇದು ನಡೆದದ್ದು ೧೫೦೦ರಲ್ಲಿ. ವಾಸ್ಕೋ-ಡಾ-ಗಾಮನ ವಿಜಯ ಯಾತ್ರೆಯಿಂದ ಹುರುಪುಗೊಂಡ ಪೋರ್ಚುಗೀಝರು ಕ್ರಾಬೆಲ್ ಎಂಬ ಮುಖ್ಯಾಧಿಕಾರಿಯ ಮೇಲ್ವಿಚಾರಣೆಯಲ್ಲಿ ೧೫೦೦ ಯೋಧರ ಸಮೇತ ೩೮ ನಾವೆಗಳ ವ್ಯೂಹವನ್ನು ಏರ್ಪಡಿಸಿಕೊಂಡು ಭಾರತಾಭಿಮುಖವಾಗಿ ಯಾನ ಮಾಡಿದರು. ಲಿಸ್ಟನ್ನಿನಿಂದ ದಕ್ಷಿಣ ದಿಕ್ಕಿನಲ್ಲಿ ಹರಿಯುತ್ತಿದ್ದ ನೌಕಾ ವ್ಯೂಹ ಕ್ಯಾನರಿ ದ್ವೀಪಗಳನ್ನು ದಾಟಿದ ಬಳಿಕ ದಾರಿ ತಪ್ಪಿ ನೈಋತ್ಯ ದಿಕ್ಕಿನಲ್ಲಿ ಪ್ರಯಾಣವನ್ನು ಮುಂದುವರೆಸಿ ದಕ್ಷಿಣ ಅಮೇರಿಕಾದ ಬ್ರಿಝಿಲ್ ಪೂರ್ವ ತೀರವನ್ನು ತಲುಪಿತು. ಈ ಘಟನೆಯಿಂದ ಯಾನ ಮಾರ್ಗಕ್ಕೊಂದು ಸುಯೋಗ ಲಭಿಸಿತು. ಪೋರ್ಚುಗಲ್-ಭಾರತ ಸಮುದ್ರ ಮಾರ್ಗದಲ್ಲಿ ಓಯಸಿಸ್ ದೊರಕಿದಂತಾಯಿತು. ಕುಡಿಯುವ ನೀರನ್ನೂ, ಸೌದೆಯನ್ನೂ, ಆಹಾರ ಸಾಮಗ್ರಿಗಳನ್ನೂ ಶೇಖರಿಸಿಟ್ಟುಕೊಳ್ಳುವ ಕೇಂದ್ರವೊಂದು ಸ್ಥಾಪಿತವಾಯಿತು. ಹೀಗೆ ತಪ್ಪು ಹೆಜ್ಜೆಯಿಟ್ಟ ನೌಕಾವ್ಯೂಹ ಅನೇಕ ಕಷ್ಟ ನಷ್ಟಗಳಿಗೆ ಈಡಾಗಿ ಕೇವಲ ಆರು ನೌಕೆಗಳೊಡನೆ ಭಾರತ ತೀರವನ್ನು ಸೇರಿತು. ಈ ಪಯಣ ದಾರುಣಮಯವಾಗಿತ್ತಾದರೂ ಮರು ಪಯಣಗಳು ಸುಗಮವಾದವು. ಪೋರ್ಚುಗೀಝರು ದಕ್ಷಿಣ ಭಾರತದಲ್ಲಿ ವಲಸೆ ಹೂಡಲು ನಾಂದಿಯಾಯಿತು.

೧೫೦೦ರಲ್ಲಿ ಗೋವೆಯಲ್ಲಿ ಸ್ಥಾಪನೆಗೊಂಡ ಪೋರ್ಚುಗೀಝರು ಬಹು ಸ್ವಲ್ಪ ಕಾಲದಲ್ಲಿಯೇ ಆಫ್ರಿಕಾದ ತೀರ ಪ್ರದೇಶಗಳಲ್ಲಿ ಕೆಲವನ್ನೂ, ದಕ್ಷಿಣ ಭಾರತದ ಕರಾವಳಿಯ ಕೆಲವು ಪ್ರದೇಶಗಳನ್ನೂ ಸ್ವಾಧೀನ ಪಡಿಸಿಕೊಂಡರಲ್ಲದೆ, ಪೌರಾತ್ಯ ದೇಶಗಳಲ್ಲೂ ನೆಲೆ ಬಿಟ್ಟರು. ೧೫೧೧ರಲ್ಲಿ ಮಲಕಾ, ೧೫೧೨-೧೪ ರಲ್ಲಿ ಮೋಲ್ಯುಕಾ ಮತ್ತು ಸಯಾಮ್ ಪ್ರದೇಶಗಳಲ್ಲಿ ವಲಸೆ ಸ್ಥಾಪಿಸಿ ಕೆಂಪು ಸಮುದ್ರ ಹಾಗೂ ಪರ್ಷಿಯಾ ಕೊಲ್ಲಿಗಳಲ್ಲೂ ಓಡಿಯಾಡಿದರು. ೧೫೧೭ರಲ್ಲಿ ಚೈನಾ ದೇಶದ ಕಾಂಟನ್ ಪಟ್ಟಣವನ್ನು ಆಕ್ರಮಿಸಿಕೊಂಡರು. ೧೫೫೭ರಲ್ಲಿ ಮಕಾವೋವನ್ನು ಸ್ಥಾಪಿಸಿದರು. ಇಲ್ಲಿಂದ ಜಪಾನ್ ಮತ್ತು ಫಾರ್ಮೋಸಾ ದ್ವೀಪಗಳೊಡನೆ ವಾಣಿಜ್ಯ ವಿನಿಮಯಗಳನ್ನು ಏರ್ಪಡಿಸಿಕೊಂಡರು.

ಹೀಗೆ ಹವಣಗೊಂಡ ಪೋರ್ಚುಗಲ್ - ಭಾರತ ಸಮುದ್ರ ಮಾರ್ಗದ ಮೂಲಕ ಸುಮಾರು ೧೬೫ ವರ್ಷ ಕಾಲ ಅವಿಚ್ಛಿನ್ನವಾಗಿ ಹೋಗು ಬರವುಗಳು ನಡೆದವು. ಲಿಸ್ಟನ್ನಿನಿಂದ ಬ್ರಿಝಿಲಿಗೆ ಹೋಗಿ ಅಲ್ಲಿ ಆಹಾರಾದಿಗಳ ಸಂಗ್ರಹಣೆ ಮಾಡಿಕೊಂಡು ಅಲ್ಲಿಂದ ಕೇಪ್ ಆಫ್ ಗುಡ್ ಹೋಪಿನಲ್ಲಿ ತಂಗಿ ಅಲ್ಲಿಯೂ ಉಗ್ರಾಣವನ್ನು ತುಂಬಿಕೊಂಡು ಗೋವೆಯನ್ನು ಸೇರುವುದು ಪೋರ್ಚುಗೀಝರ ಸಾಧಾರಣ ಕ್ರಮವಾಯಿತು. ಗೋವೆಯಿಂದ ಪೌರಾತ್ಯ ದೇಶಗಳಿಗೆ ಸರಕು ಸಾಮಗ್ರಿಗಳನ್ನು ಕೊಂಡೊಯ್ಯುವುದು ನೆಲೆಯಾಗಿ ನಿಂತಿತು. ಹೀಗಾಗಿ ಅಲ್ಲಿಂದ ಇಲ್ಲಿಗೆ - ಇಲ್ಲಿಂದ ಅಲ್ಲಿಗೆ ವಿನಿಮಯವಾದ ಸಾಮಗ್ರಿಗಳು ಸಾಂಸ್ಕೃತಿಕ ಬಳಕೆಗಳೂ ಸುಲಭವಾಗಿ ಒಂದರೊಡನೊಂದು ಕಲೆತವು. ಯುರೋಪು ರಾಷ್ಟ್ರಗಳಿಂದ, ದಕ್ಷಿಣ ಅಮೇರಿಕೆಯಿಂದ, ಆಫ್ರಿಕಾದಿಂದ, ಚೈನಾ, ಜಪಾನ್, ಫೆಸಿಫಿಕ್ ದ್ವೀಪಗಳು ಮೊದಲಾದ ಪೂರ್ವ ರಾಷ್ಟ್ರಗಳಿಂದ ಪ್ರಯತ್ನ ಪೂರ್ವಕವಾಗಿಯೋ ಇಲ್ಲಾ ಪ್ರಾಸಂಗಿಕವಾಗಿಯೋ ಅಲ್ಲಿಯ ಸರಕುಗಳು ಭಾರತಕ್ಕೂ ಭಾರತದ ಸರಕುಗಳು ಅಲ್ಲಿಗೂ ವಿನಿಮಯವಾದವು. ಇಂತಹ ಸರಕುಗಳಲ್ಲಿ ಸಸ್ಯೋತ್ಪನ್ನಗಳೂ, ಸಸ್ಯೋತ್ಪನ್ನ ವಸ್ತುಗಳೂ ಸೇರಿವೆ.


ಅಮೇರಿಕಾದ ಇರವನ್ನೂ, ಯುರೋಪಿನಿಂದ ಭಾರತಕ್ಕೆ ಸಮುದ್ರ ಮಾರ್ಗವನ್ನೂ ಕಂಡು ಹಿಡಿದಾದ ಮೇಲೆ ಕೆಲವು ವರ್ಷಗಳಲ್ಲೇ ಇನ್ನೊಂದು ಮಹತ್ ಘಟನೆ ಸಂಭವಿಸಿತು. ೧೫೨೦ -೨೧ರಲ್ಲಿ ಮೆಗಲ್ಲನ್ ಎಂಬಾತ ಸಮುದ್ರ ಮಾರ್ಗವಾಗಿ ಭೂಮಿಯನ್ನು ಸುತ್ತುವರೆದು ಬಂದ. ಇದರಿಂದ ಕೆಲವು ಫೆಸಿಫಿಕ್ ದ್ವೀಪಗಳು ಬೆಳಕಿಗೆ ಬಂದವು. ೧೫೯೫ರಲ್ಲಿ ಸ್ಪೇಯ್ನಿಗರು ಮೆಕ್ಸಿಕೋವಿನಿಂದ ಫಿಲಿಫೈನಿನ ಚಿಬೂ ಎಂಬೆಡೆಯಲ್ಲಿ ತಮ್ಮ ವಲಸೆಯನ್ನು ಹೂಡಿದರು. ಇದಕ್ಕೆ ಐವತ್ತು ವರ್ಷಗಳ ಹಿಂದೆಯೆ ಪೋರ್ಚುಗೀಝರು ಫಿಲಿಫೈನ್ ದ್ವೀಪಾವಳಿಗೆ ದಕ್ಷಿಣದಲ್ಲಿರುವ ಮೊಲ್ಯೂಕಾದಲ್ಲಿ ವಲಸೆ ಬಿಟ್ಟಿದ್ದರು. ದಕ್ಷಿಣ ಫಿಲಿಫೈನಿನೊಂದಿಗೆ ವ್ಯಾಪಾರ ಸಂಬಂಧವನ್ನೂ ಬೆಳೆಸಿದ್ದರು. ಹೀಗಾಗಿ ದಕ್ಷಿಣ ಅಮೇರಿಕಾ ಮೆಕ್ಸಿಕೋಗಳಿಂದ ಸಸ್ಯೋತ್ಪನ್ನ ಸಾಮಗ್ರಿಗಳು ( ಅವುಗಳ ದಾತೃ ಸಸ್ಯಗಳೂ) ಫಿಲಿಫೈನಿಗೆ ಬಂದವು. ಅಲ್ಲಿಂದ ಪೋರ್ಚುಗೀಝರ ಕೈ ಸೇರಿ ಅವರ ವಲಸೆಯಿದ್ದ ಪೌರಾತ್ಯ ಪ್ರದೇಶಗಳನ್ನೂ ತಲುಪಿದವು, ಭಾರತಕ್ಕೂ ಬಂದವು. ಹೀಗೆ ನೂತನ ಖಂಡದ ಬೆಳೆಗಳು ಪ್ರಾಚೀನ ಖಂಡಕ್ಕೆ ಸಾಗಿದ ಸಂದರ್ಭವೂ ಪ್ರಾಚೀನ ಪ್ರದೇಶಗಳ ಬೆಳೆಗಳು ನೂತನ ಖಂಡಕ್ಕೆ ಆಗಮಿಸಿದ ಸಂದರ್ಭವೂ ಏರ್ಪಟ್ಟದ್ದು ಹದಿನೈದನೆಯ ಶತಮಾನದಿಂದೀಚೆಗೆ ಎಂಬುದನ್ನು ಮುಖ್ಯವಾಗಿ ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಈ ವಿನಿಮಯದಲ್ಲಿ ಪಾಲ್ಗೊಂಡವರು ಪೋರ್ಚುಗೀಝರು ಹಾಗೂ ಸ್ಪೇಯ್ನಿಗರು. ಫಿಲಿಫೈನ್ ಮತ್ತು ಪಾಲಿನೇಷಿಯಾಗಳಿಗೂ ಮಧ್ಯ ಅಮೇರಿಕಾ ಖಂಡಕ್ಕೂ ವಾಣಿಜ್ಯ ವಿನಿಮಯಗಳನ್ನು ಏರ್ಪಡಿಸಿದವರು ಸ್ಪೇಯ್ನಿಗರಾದರೆ, ಭಾರತಕ್ಕೂ ದಕ್ಷಿಣ ಅಮೇರಿಕಾಕ್ಕೂ ಸಂಬಂಧ ಕಲ್ಪಿಸಿಕೊಟ್ಟವರು ಪೋರ್ಚುಗೀಝರು.


ಸ್ಪೇಯ್ನಿಗೂ ಭಾರತಕ್ಕೂ ನೇರವಾದ ನಿಕಟವಾದ ಸಂಬಂಧ ಯಾವಾಗಲೂ ಇರಲಿಲ್ಲ. ಆದರೆ ಪೋರ್ಚುಗೀಝರಿಗೂ ಭಾರತಕ್ಕೂ (ಮುಖ್ಯವಾಗಿ ಪಶ್ಚಿಮ ಕರಾವಳಿ ಪ್ರದೇಶ.) ೧೬ನೆ ಶತಮಾನದಿಂದ ವ್ಯಾಜ್ಯದ ಮತ್ತು ವ್ಯಾಪಾರದ ನಂಟು ಗಂಟು ಬಿದ್ದಿತು. ೧೬/೧೭ನೇ ಶತಮಾನಗಳ ವೈಭವವನ್ನೂ ಮುಂದಿನ ಕಾಲದಲ್ಲಿ ಮೆರೆಯಿಸಲಿಲ್ಲವಾದರೂ ಭಾರತ ಸ್ವಾತಂತ್ರ್ಯ ಯುಗದವರೆಗೂ ಪೋರ್ಚುಗೀಝರು ಗೋವೆಯನ್ನು ಭಾರತದಲ್ಲಿ ಅಧಿಪತ್ಯ ಕೇಂದ್ರವಾಗಿಟ್ಟುಕೊಂಡು ವ್ಯಾಪಾರ ವಾಣಿಜ್ಯಗಳನ್ನು ನಿರ್ವಹಿಸುತ್ತಿದ್ದರು. ಸುಮಾರು ನಾಲ್ಕು ಶತಮಾನಗಳ ಕಾಲ ಪೋರ್ಚಗೀಝು ವ್ಯಾಪಾರ ಸಂಬಂಧ ನಮ್ಮ ಸಾಗುವಳಿ ಬೆಳೆಗಳನ್ನು ಮಾರ್ಪಡಿಸಿದ್ದಲ್ಲದೆ ನಮ್ಮ ಹೊಟ್ಟೆಯ ದಿನಚರಿಯನ್ನೂ ಮಾರ್ಪಡಿಸಿದ್ದಲ್ಲದೆ ನಮ್ಮ ಸಂಸ್ಕೃತಿಯ ಮೇಲೂ ತಕ್ಕ ಮಟ್ಟಿನ ಪ್ರಭಾವವನ್ನು ಒತ್ತಿತ್ತು.


'ಭಾರತೀಯ ಜಾಲದಲ್ಲಿ ಪೋರ್ಚುಗೀಝ್ ಎಳೆಗಳು'

ಗೋವೆ, ಕಲ್ಲಿಕೋಟೆ ಮೊದಲಾದ ಪಶ್ಚಿಮ ತೀರದ ಪ್ರದೇಶಗಳಲ್ಲಿ ನೆಲೆಸಿದ ಪೋರ್ಚುಗೀಝರು ಮೊದಮೊದಲು ಭಾರತೀಯರೊಂದಿಗೆ ಅಷ್ಟಾಗಿ ಕಲೆಯಲಿಲ್ಲ. ಕ್ರಮೇಣ ಸ್ಥಿತಿ ಬದಲಾಯಿಸಿತು. ಪೋರ್ಚಗೀಝು ಕ್ರೈಸ್ತಮತ ಸಂಸ್ಥೆಗಳು ಚರ್ಚುಗಳು ಹುಟ್ಟಿಕೊಂಡವು. ೧೫೫೫ರಲ್ಲಿ ಜೆಸುಯಿಟ್ ಪಾದ್ರಿಗಳು ಚರ್ಚಿನ ಸರ್ವಾಧಿಕಾರಿಗಳಾಗಿ ರೋಮ್ ಮಠದ ಮುಖ್ಯ ಪ್ರತಿನಿಧಿಗಳಾದರು. ಜನರಲ್ಲಿ ಕ್ರೈಸ್ತ ಮತವನ್ನು ಹರಡಿದರು. ಪೋರ್ಚುಗೀಝ್ - ಹಿಂದೂ ವಿವಾಹಗಳನ್ನು ಆಗ ಮಾಡಿಸಿದರು. ಭಾರತದಲ್ಲಿ ಪೋರ್ಚುಗೀಝ್ ರಾಯಭಾರ ನೆಲೆಗೊಳ್ಳುವುದಕ್ಕೆ ಈ ಉಪಾಯವೇ ಮುಖ್ಯವಾದ ತಳಹದಿಯಾಯಿತು.



ಗೋವೆಯ ಗವರ್ನರ್ ಆಗಿದ್ದ ಅಲ್ಬುಕರ್ಕ್'ನು ಎಳೆಯರ ವಿದ್ಯಾಭ್ಯಾಸಕ್ಕೆ ವಿಶೇಷ ಗಮನವನ್ನು ಸಲ್ಲಿಸಿದ. ಆದರೆ ಇಲ್ಲಿಯೂ ಒಂದು ಕೊಕ್ಕೆಯಿಟ್ಟ. 'ಕೊಚ್ಚಿ (ಕೊಚಿನ್.) ಯಲ್ಲಿ ಎಳೆ ಮಕ್ಕಳು ಓದುವ ಆಜ್ಞೆಗಳನ್ನು ಜಾರಿಗೆ ತಂದಿದ್ದೇನೆ. ಪೋರ್ಚುಗೀಝ್ - ಹಿಂದೂ ಮದುವೆಯಿಂದ ಹುಟ್ಟಿದ ಮಕ್ಕಳಿಗೆಲ್ಲ ಶಿಕ್ಷಣ ಕೊಡಬೇಕೆಂದು ಕಾನೂನು ಜಾರಿ ಮಾಡಿದ್ದೇನೆ'. ಅಂಟಾನಿಯೋ ಗಾರ್ಲೋ ಎಂಬುವವನು ಹುಡುಗರಿಗೆ ಕ್ರೈಸ್ತ ತತ್ವಗಳನ್ನು ಬೋಧಿಸುತ್ತಿದ್ದನಲ್ಲದೆ ಕೇವಲ ಆರು ತಿಂಗಳಲ್ಲಿ ತಮಿಳು ಓದು ಬರಹಗಳನ್ನು ಕಲಿಸುತ್ತಿದ್ದ. ಪೋರ್ಚುಗೀಝ್ ಪಾದರಿಗಳ ಉಪಯೋಗಕ್ಕಾಗಿ ತಮಿಳು ವ್ಯಾಕರಣವೊಂದನ್ನು, ಪೋರ್ತುಗೀಝ್ - ತಮಿಳು ನಿಘಂಟೊಂದನ್ನು ರಚಿಸಿದ. ಈ ಸಂಪರ್ಕಗಳಿಂದ ಪೋರ್ಚುಗೀಝ್ ಭಾಷೆಯ ನುಡಿಗಳು ತಮಿಳಿಗೆ ರೂಪಾಂತರವಾಗಿ ಬಂದವು.


ಪೋರ್ಚುಗೀಝರ ವಲಸೆ ಪಶ್ಚಿಮ ಭಾರತದಲ್ಲಿತ್ತಾದರೂ ಪೂರ್ವ ದಿಕ್ಕಿನಲ್ಲಿದ್ದ ತಮಿಳುನಾಡನ್ನು ತನ್ನ ಪ್ರಭಾವದೊಳಗೆ ಹೇಗೆ ಸೆಳೆದುಕೊಂಡಿತು ಎಂಬ ಪ್ರಶ್ನೆ ಏಳುತ್ತದೆಯಲ್ಲವೆ? ಗೋವೆ, ಕೊಚ್ಚಿಗಳಲ್ಲಿ ವಲಸೆ ಸ್ಥಿರಗೊಳಿಸಿದ ಕಾಲದಲ್ಲಿ ಸಿಲೋನಿನಲ್ಲೂ ಬಿಡದಿಗಳನ್ನು ನೆಲೆಗೊಳಿಸಿದರು ಪೋರ್ಚುಗೀಝರು. ಆಗಿನ ಸಿಂಹಳದಲ್ಲಿ ತಮಿಳರ ಸಂಖ್ಯೆ ಅಧಿಕ. ಅಲ್ಲಿಂದ ತಮ್ಮ ತಾಯ್ನಾಡಿನೊಂದಿಗೆ ನಿಕಟವಾದ ಸಂಬಂಧವನ್ನ ಇಟ್ಟುಕೊಂಡಿದ್ದರು. ಸಿಂಹಳದ ತಮಿಳಿನಲ್ಲಿ ಪೋರ್ಚಿಗೀಝ್ ಬೆರೆತುಕೊಂಡಿತು. ತಮಿಳುನಾಡಿಗೆ ಅಲ್ಲಿಂದ ಬಂದು ಸೇರಿತು.

ಗೋವೆಯನ್ನ ಆಗ ಸುತ್ತುವರೆದಿದ್ದ ಕನ್ನಡ ಪ್ರದೇಶಗಳಲ್ಲೂ ಈ ಬಗೆಯ ಸಂಭವಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲೂ, ತೀವೃತೆಯಲ್ಲೂ ನಡೆದಿರಬೇಕೆಂದು ಊಹಿಸುವುದರಲ್ಲಿ ಅನುಚಿತತೆ ಇಲ್ಲ. ಕನ್ನಡ ಭಾಷಾ ಸಂಸ್ಕೃತಿಗಳ ಬೆಳವಣಿಗೆಯಲ್ಲಿ ನಮ್ಮ ಕುತೂಹಲ ಸಾಕಷ್ಟು ಉತ್ಸಾಹದಿಂದ ಸಾಗಿಲ್ಲ. ಇದು ಕೊನರುವವರೆಗೂ ಅನ್ಯ ಭಾಷೆಗಳ, ಅನ್ಯ ಜನಾಂಗಗಳ ಒತ್ತಡವು ಕನ್ನಡತನವನ್ನು ರೂಪಿಸಿರುವ ರೂಢಿಸಿರುವ ರೀತಿನೀತಿಗಳನ್ನು ಸ್ಪಷ್ಟವಾಗಿ ತಿಳಿಯುವಂತಿಲ್ಲ.

'ಪರಂಗಿ ಪದದ ಕುರಿತು'


ಪರಂಗಿಯವರೆಂದರೆ ಇಂಗ್ಲೀಷರು ಎಂಬುದು ಇಂದಿನ ಸಾಮಾನ್ಯ ತಿಳುವಳಿಕೆ. ಚಾರಿತ್ರಿಕ ಹಿನ್ನೆಲೆಯಲ್ಲಿ ಇದರ ಬೆಳವಣಿಗೆ ಸ್ವಾರಸ್ಯವಾಗಿದೆ. ಮೊದಮೊದಲು ಪರದೇಶದಿಂದ ನಮ್ಮ ದೇಶಕ್ಕೆ ಅಧಿಕ ಸಂಖ್ಯೆಯಲ್ಲಿ ಬಂದು ನೆಲೆಸಿದ ಬಿಳಿಯ ಜನಾಂಗ ಪೋರ್ಚಗೀಝರದೆ. ಕ್ರುಸೇಡ್ ಕಾಲದಿಂದಲೂ ಫ್ರೆಂಚ್ ಜನಾಂಗಕ್ಕೆ ಫ್ರಾಂಕ್ಸ್ ಎಂಬ ಹೆಸರು ಸಂದಿತ್ತು. ಯುರೋಪಿನಲ್ಲಿ ಪಾಶ್ಚಿಮಾತ್ಯರಿಗೂ ಇದೇ ಹೆಸರು ಬಳಕೆಯಲ್ಲಿತ್ತು. ಭಾರತಕ್ಕೆ ಬಂದು ನೆಲೆಸಿದ ಪೋರ್ಚುಗೀಝರಿಗೂ ನಮ್ಮವರು ಈ ಪದದ ರೂಪಾಂತರವನ್ನೆ ಪರಂಗಿ ಎಂದು ಉಪಯೋಗಿಸಿದರು. ಪೋರ್ಚುಗೀಝ್ - ಹಿಂದೂ ವಿವಾಹಗಳ ಫಲಕ್ಕೂ ಇದೇ ಹೆಸರು ಅಂಟಿ ಕೊಂಡಿತು. ಅಂತರ್ಜಾತಿ ವಿವಾಹಗಳಿಂದ ಹುಟ್ಟಿದವರನ್ನು ಕೀಳು ಭಾವನೆಯಿಂದ ಸಂಭೋಧಿಸುವ ಪ್ರತ್ಯೇಕತೆಯನ್ನೂ ಪಡೆದುಕೊಂಡಿತು. ಕ್ರಮೇಣ ಭಾರತಕ್ಕೆ ಬಂದ ಬಿಳಿಯ ಜನಾಂಗಕ್ಕೆಲ್ಲ ಈ ಪರಿಭಾಷೆಯೆ ಅನ್ವಯವಾಯಿತು.


ಇಲ್ಲಿ ಒಂಂದು ಟೀಕೆ ಉಚಿತವಾಗಿದೆ. ಪೋರ್ಚುಗೀಝ್ - ಹಿಂದೂ ವಿವಾಹಗಳು ಎಷ್ಟೋ ಕುಲೀನ ಮನೆತನಗಳಲ್ಲಿಯೂ ನಡೆದವು. ಗಣ್ಯ ವಂಶಜರ ಪಾರಂಪರ್ಯ ಬೆಳೆಯಿತು. ಅಂತವರಿಗೆ ಪರಂಗಿ ಅಪಪ್ರಯೋಗ ಸಲ್ಲಲಿಲ್ಲ. ಸಮಾಜದ ಕೆಳ ದರ್ಜೆಯಲ್ಲಿ ಹೇಯ ನಡತೆಯಿಂದ ಜನಿತರಾದವರಿಗೆ ಈ ಪ್ರಯೋಗ ಸಂದಿತು. ಜನತೆಯ ಕೀಳು ಶ್ರೇಣಿಯಲ್ಲಿ ಈ ಬೆರಕೆಗಳಿಗೆ ಉತ್ತೇಜನ ಕೊಡುವುದು ಅಲ್ಬುಕರ್ಕನ ಯೋಜನೆಗಳಲ್ಲೊಂದಾಗಿತ್ತು. ಪರಂಗಿ ಪದಕ್ಕೆ ಆಡುಮಾತಿನ ಇನ್ನೊಂದು ದುರಾದೃಷ್ಟವೂ ಸಂಭವಿಸಿತು. ಒಂದು ಬಗೆಯ ಮೇಹ ರೋಗಕ್ಕೆ ಪೋರ್ಚುಗೀಝ್ ಭಾಷೆಯಲ್ಲಿ ಬ್ರಾಂಕೋ ಎಂಬ ಹೆಸರಿದೆ. ತಮಿಳರ ಮಾತಿನಲ್ಲಿ ಇದು ಪರಂಕಿ ಆಗಿ ಬಿಟ್ಟಿತು! ಪರಂಗಿ ರೋಗವೆಂಬ ಪದ ಹುಟ್ಟಿದ್ದು ಹೀಗೆ. ಪೋರ್ಚಗೀಝರು ಮೊದಲು ಪರಂಗಿಯವರಾದರು. ಪೋರ್ಚುಗೀಝ್ ಹಿಂದೂ ಸಂಬಂಧದಿಂದ ಹುಟ್ಟಿದವರು ಪರಂಗಿಯವರೆಂದು ದೂಷಿತರಾದರು. ಮೇಹಜಾಡ್ಯ ಪರಂಗಿ ರೋಗವಾಯಿತು. ೧೭ನೆ ಶತಮಾನದಲ್ಲಿ ಪರಂಗಿ ಎಂಬುದು ಸಾಮಾನ್ಯವಾದ ಬೈಗುಳವಾಗಿತ್ತು. ೧೬೩೯ರಲ್ಲಿ ಪಾದ್ರಿ ಮಾರ್ಚಿಂಜ್ ಎಂಬಾತ ಬರೆದಿಟ್ಟಿರುವ ಮುಕ್ತಕ ' ಕರಾವಳಿ ಪ್ರದೇಶದ ಪೋರ್ಚುಗೀಝರು ಭಾರತೀಯರ ಚಿತ್ತಕ್ಕೆ ನೋವನ್ನುಂಟು ಮಾಡಿ ತನ್ಮೂಲಕ ಅವರ ತಾತ್ಸಾರವನ್ನು ತಂದು ಕೊಂಡಿದ್ದಾರೆ'


ಆದರೆ ಪರಂಗಿ ಪದಕ್ಕೆ ಕುಹಕವಾಗಲಿ, ಹೀನಾಯವಾಗಲಿ ಸೋಕದಿದ್ದ ಸಂದರ್ಭಗಳೂ ಇದ್ದವು. ಹೊರದೇಶದಿಂದ ಅಮದಾದ ಗಿಡಮರಗಳಿಗೆ ಪರಂಗಿ ಚಕ್ಕೆ, ಪರಂಗಿ ಹಣ್ಣು, ಪರಂಗಿ ತಾಳೆ ಮೊದಲಾದ ಪದಗಳ ಉದಯವಾದದ್ದು ಇಂಥಾ ವರ್ಷಗಳಲ್ಲಿ. ಬಿಳಿಯರು ಯುದ್ಧ ಕಾಲದಲ್ಲಿ ಉಪಯೋಗಿಸುತ್ತಿದ್ದ ಕ್ಯಾನನ್ ಎಂಬ ಗುಂಡು ಶಸ್ತ್ರ ನಮಗೆ ಹೊಸತಾದರಿಂದ ಆ ಯಂತ್ರಕ್ಕೆ ಫಿರಂಗಿ ಎಂಬ ಮಾತು ಸಂದಂತೆ ಭಾಸವಾಗುತ್ತದೆ."


- ಬಿಜಿಎಲ್ ಸ್ವಾಮಿ.


ಆಡು ಭಾಷೆಯ ಸಹಜ ಕನ್ನಡದಲ್ಲಿ ವೈಜ್ಞಾನಿಕ ಬರಹಗಳು ಅತಿ ವಿರಳವಾಗಿ ಬರೆಯಲಾಗುತ್ತಿದ್ದ ದಿನಮಾನಗಳಲ್ಲಿ ಬಿಜಿಎಲ್ ಸ್ವಾಮಿಯವರು ಅದನ್ನ ಜನಪ್ರಿಯಗೊಳಿಸಿದ ಜಿ ಟಿ ನಾರಾಯಣರಾವ್, ಶಿವರಾಮ ಕಾರಂತರ ಸಾಲಿನಲ್ಲಿ ಹೆಸರಿಸಬಹುದಾದ ಲೇಖಕರಾಗಿದ್ದಾರೆ. ತಮ್ಮ ಲಘು ಹಾಸ್ಯ ಶೈಲಿಯಿಂದ ಮನರಂಜಿಸುತ್ತಲೆ ವೈಜ್ಞಾನಿಕ ಸಂಗತಿಗಳನ್ನ ನಮ್ಮೆದುರು ಬಿಡಿಸಿಡುವ ಅವರ ಲೇಖನಗಳು ಅನನ್ಯ. ಹೆಚ್ಚಾಗಿ ಜೀವ ವಿಜ್ಞಾನ, ಅದರಲ್ಲೂ ಸಸ್ಯ ಶಾಸ್ತ್ರದ ಕುರಿತೆ ಅವರು ಬರೆದು ಶ್ರೀಸಾಮಾನ್ಯ ಓದುಗರಲ್ಲೂ ವಿಜ್ಞಾನದ ಕುರಿತು ಅರಿವು ಮೂಡಿಸಿದ್ದಾರೆ.

ಕನ್ನಡ, ಇಂಗ್ಲೀಷ್ ಹಾಗೂ ತಮಿಳೂ ಹೀಗೆ ಮೂರು ಮೂರು ಭಾಷೆಗಳಲ್ಲಿ ಕೃತಿಗಳನ್ನ ರಚಿಸಿರುವ ಇವರ ಕೆಲವೆ ಕೆಲವು ಸೃಜನಶೀಲ ಕೃತಿಗಳನ್ನ ಹೊರತು ಪಡಿಸಿದರೆ ಬಹುತೇಕ ಇನ್ನುಳಿದ ಎಲ್ಲವೂ ಸಸ್ಯಶಾಸ್ತ್ರಕ್ಕೆ ಸಂಬಂಧಿಸಿದವೆ ಆಗಿವೆ. ಪಾರಿಭಾಷಿಕ ಪದಗಳ ಕಬ್ಬಿಣದ ಕಡಲೆಯನ್ನ ಓದುಗರಿಗೆ ಬಲವಂತವಾಗಿ ತಿನ್ನಿಸದೆ ಸರಳವಾದ ಸಹಜ ಹಾಸ್ಯದ ಶೈಲಿಯಲ್ಲಿ ಅವರು ಬರೆದ ಕೃತಿಗಳನ್ನ ಓದುವುದೆ ಒಂದು ಸೊಗಸು. ಕನ್ನಡದ ಖ್ಯಾತ ಸಾಹಿತಿ ಡಿ ವಿ ಗುಂಡಪ್ಪ ಬಿಜಿಎಲ್ ಸ್ವಾಮಿಯವರ ಅಪ್ಪ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪದವಿ ಮುಗಿಸಿದ ಸ್ವಾಮಿಯವರು ಸ್ನಾತಕ ಪದವಿಯನ್ನ ಮೈಸೂರು ವಿಶ್ವವಿದ್ಯಾಲಯದಲ್ಲಿ ಪಡೆದರು. ಅನಂತರ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲಿಕ್ಕಾಗಿ ಅಮೇರಿಕೆಗೆ ಹೋದವರು ತಮ್ಮ ಸಂಶೋಧನಾ ಪ್ರಬಂಧವನ್ನೂ ಅಲ್ಲಿಯೆ ಮಂಡಿಸಿ ಮರಳಿ ಬಂದರು.


ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿ ಜೀವನವನ್ನ ಆರಂಭಿಸಿದ ಅವರು ಅನಂತರ ಬರವಣಿಗೆಯಲ್ಲಿಯೂ ತಮ್ಮ ಛಾಪನ್ನ ಮೂಡಿಸಿದರು. ಅವರ 'ಕಾಲೇಜು ರಂಗ' ಕಾಲೇಜು ತರಂಗ' 'ತಮಿಳು ತಲೆಗಳ ನಡುವೆ' 'ಅಮೇರಿಕಾದಲ್ಲಿ ನಾನು' 'ಪಂಚ ಕಳಶ ಗೋಪುರ' 'ಮೈಸೂರು ಡೈರಿ' 'ಹಸಿರು ಹೊನ್ನು' ಇವೆಲ್ಲ ನನ್ನ ಮೆಚ್ಚಿನ ಕೃತಿಗಳು. ನಮ್ಮ ದೇಶದಲ್ಲದೆ ಹೊರಗಿನಿಂದ ಬಂದಿರುವಂತದ್ದಾದರೂ ಇಂದು ಅವಿಲ್ಲದೆ ನಮ್ಮ ಅಡುಗೆಯನ್ನ ಕಲ್ಪಿಸಿಕೊಳಲಿಕ್ಕೂ ಆಗದ ಹಾಗೆ ನಮ್ಮ ಮನೆಯ ಊಟದ ಮೆನುವಿನಲ್ಲಿ ಬೆರೆತು ಹೋಗಿರುವ ತರಕಾರಿಗಳ ಬಗ್ಗೆ ಅವರು ಬರೆದ ಸವಿವರವಾದ 'ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕಾ'ವೂ ಅದೆ ಸಾಲಿಗೆ ಸೇರುತ್ತದೆ. ಅವರ 'ಕಾಲೇಜು ರಂಗ' ಚಲನಚಿತ್ರವಾಗಿಯೂ ಅಪಾರ ಜನಪ್ರಿಯತೆ ಗಿಟ್ಟಿಸಿದೆ.


ಹಸಿಮೆಣಸು, ಮುಸುಕಿನ ಜೋಳ, ನೆಲ ಕಡಲೆ, ಟೊಮ್ಯಾಟೋ, ಗೆಣಸು, ಆಲೂಗೆಡ್ಡೆ, ಮರಗೆಣಸು, ಗೋಡಂಬಿ, ಬೀನ್ಸ್, ಪಪ್ಪಾಯಿ, ಅನಾನಾಸು, ಸೀತಾಫಲ, ಸಪೋಟಾ, ಪೇರಳೆ ಮುಂತಾದುವುಗಳು ನಮ್ಮ ದೇಶಕ್ಕೆ ವಲಸೆ ಬಂದವು ಅಂತ ಇಂದೇನಾದರೂ ಆಣೆ ಪ್ರಮಾಣ ಮಾಡಿ ಹೇಳಿದರೂ ಸಹ ಯಾರೂ ನಂಬಲಿಕ್ಕಿಲ್ಲ. ಮಡಿವಂತರ ಮನೆಯ ಅಡುಗೆಯಲ್ಲಿ ಇನ್ನೂ ಅಸ್ಪರ್ಶ್ಯವೆ ಆಗಿದ್ದರೂ ಸಹ ಯಕಶ್ಚಿತ್ ಈರುಳ್ಳಿ ಇಂದು ಮನಸ್ಸು ಮಾಡಿದರೆ, ಏಕಾಏಕಿ ತನ್ನ ಬೆಲೆ ಏರಿಸಿಕೊಂಡು ಆಳುವ ಸರಕಾರವನ್ನೆ ಅಲುಗಾಡಿಸಿ ಅರ್ಧರಾತ್ರಿಯಲ್ಲಿಯೂ ಕೊಡೆ ಹಿಡಿದು ಮೆರೆದಾಡುವ ಪುಢಾರಿಗಳನ್ನ ಮುಲಾಜಿಲ್ಲದೆ ಸೋಲಿಸಿ 'ಮರಳಿ ಮನೆಗೆ' ಅಟ್ಟುವಷ್ಟು ಪ್ರಬಲವಾಗಿವೆ! ಒಟ್ಟಿನಲ್ಲಿ ನಮ್ಮ ಮನೆಯ ಮೇಲೆ ಹಕ್ಕು ಸಾಧಿಸಿ ನಮ್ಮ ಹೊಟ್ಟೆಯ ಸಾಧಕ ಬಾಧಕಗಳ ಹೊಣೆ ಹೊತ್ತ ತರಕಾರಿಗಳ ಜಾತಕವನ್ನ ಸ್ವಾಮಿ ಸರಳವಾಗಿ ಕುತೂಹಲ ಹುಟ್ಟಿಸುವಂತೆ ಇಲ್ಲಿ ನಮ್ಮೆದುರು ಕಟ್ಟಿಕೊಟ್ಟಿದ್ದಾರೆ. ಅವೆ ತರಕಾರಿಗಳನ್ನ ಹೊಟ್ಟೆಗೆ ಸೇರಿಸುತ್ತಾ ಅದೆ ಹೊಟ್ಟೆ ಹುಣ್ಣಾಗುವಂತೆ ಓದಲಿಕ್ಕೆ ಹೇಳಿ ಮಾಡಿಸಿದ ಪುಸ್ತಕ ಇದು ಎಂದರೆ ತಪ್ಪಿಲ್ಲ.

14 October 2014

ನೀರ ಮೇಲೆ ಅವಳ ಹೆಜ್ಜೆ........




( ಭಾಗ - ೧.)



ಸಂಜೆಗತ್ತಲಲ್ಲಿ ಯಾವತ್ತೂ ಶಾಶ್ವತವಾಗಿ ಹುಟ್ಟಿದೂರ ಬಿಟ್ಟು ಹೊರಡಬಾರದು. ಸುತ್ತಲೂ ಆಗಷ್ಟೆ ಜಗಮಗಿಸುತ್ತಾ ಕೃತಕ ಬೆಳಕಿನ ಮಳೆಯಲ್ಲಿ ನೆನೆಯುತ್ತಾ ನಿಂತ ಇಡಿ ಊರೆ ಒಂದು ರೀತಿಯ ಹೊಸ ಸಂಭ್ರಮದಲ್ಲಿ ಮುಳುಗೇಳಲು ಕಾತರಿಸುತ್ತಿರುವಂತೆ ಕಂಡು, ಆದರೆ ತಾನೊಂದು ಜೀವ ಮಾತ್ರ ಇನ್ನುಳಿದವರ ಆ ಖುಷಿಯಲ್ಲಿ ಪಾಲ್ಗೊಳ್ಳೋಕಾಗದೆ ನೋವಿನ ಆಸರೆಯ ಮಾಡಿನ ತಾವು ಹುಡುಕಿಕೊಂಡು ಅಲೆಯುವಂತೆ ಅನ್ನಿಸುವ ಭಾವ ಆಗ ದಟ್ಟವಾಗಿ ಮನಸನ್ನ ಕಾಡಬಹುದು. ಅವನಿಗೂ ಆಗ ಹಾಗೆಯೆ ಆಗಿತ್ತು. ಇಳಿ ಸಂಜೆಯ ಮುಸುಕು ಬೆಳಕಿನಲ್ಲಿ ಊರ ಬಸ್'ಸ್ಟ್ಯಾಂಡಿನಲ್ಲಿ ಆತ ನಿಂತಿದ್ದ. ಹೇಳಿಕೊಳ್ಳಲಿಕ್ಕಾಗದ ಕಾರಣಕ್ಕೆ ಕಣ್ಣಿಗೆ ತೆಳು ಕಂಬನಿಗಳ ಪರದೆ ಬಿದ್ದಿತ್ತು. ಊರೆಲ್ಲ ಆತನ ಸಂಕಟದ ಅಲೆ ಉಕ್ಕುತ್ತಿದ್ದ ನಯನಗಳಿಗೆ ಮಂಜು ಮಂಜಾಗಿ ಕಾಣುತ್ತಿತ್ತು. ಅಂತೂ ಶಿವಮೊಗ್ಗೆಯೆಡೆಗೆ ಧಾವಿಸುವ ಬಸ್ಸು ಅತಿ ಅವಸರದಿಂದ ಅನ್ನುವಂತೆ ಅವ ನಿಂತಿದ್ದ ಕಮಾನು ಮಾಳಿಗೆಯ ತಂಗುದಾಣದೊಳಗೆ ಹೊಕ್ಕಿ ನಿಂತಾಗ ಬೆಚ್ಚಿಬಿದ್ದು ವಾಸ್ತವಕ್ಕಾತ ಮರಳಿಬಂದ.


ಕಂಡೆಕ್ಟರ್'ಗಳ ಕೂಗಾಟ, ಹಿಂದಿನ ಬಸ್ಸಿನವರ ರೇಗಾಟ, ನಡುವೆ ಹತ್ತುವ ಇಳಿವ ಪ್ರಯಾಣಿಕರ ಪರದಾಟಗಳ ಮಧ್ಯೆ ಬಲಿಪೀಠಕ್ಕೆ ಹೊರಟ ಅಸಹಾಯಕ ಕುರಿಯಂತೆ ಒಲ್ಲದ  ಮನಸ್ಸಿನಿಂದಲೇ ಬಸ್ಸನ್ನಾತ ಏರಿ ನಿಂತ. ನಿಲ್ಲಲಿಕ್ಕೆ ಎಡೆ ಸಿಕ್ಕಿದ್ದೇ ಹೆಚ್ಚು, ಬಸ್ಸು ತುಂಬಿ ತುಳುಕುತ್ತಿತ್ತು. ಮಂಗಳೂರಿನಿಂದಲೇ ತುಂಬಿ ಹೊರಟಿದ್ದ ಬಸ್ಸಿನ ಒಳಗೆಲ್ಲ ಗಾಳಿಯಾಡಲು ಸಹ ಸ್ಥಳವಿರಲಿಲ್ಲವಾಗಿ ಯಾರ್ಯಾರದೋ ಕಂಕುಳ ಬೆವರ ನಾತ, ಇನ್ಯಾರೋ ಘಾಟಿ ಹತ್ತುವಾಗ ಬಸ್ಸಿನೊಳಗೆಯೆ ಅವಸರವಸರವಾಗಿ ಮಾಡಿದ್ದಿರಬಹುದಾದ ವಾಂತಿಯ ಕಮಟು ಘಾಟು, ಪದೆ ಪದೆ ಡ್ರೈವೆರ್ ಒತ್ತಿರಬಹುದಾದ ಬ್ರೇಕಿಗೆ ಹಚ್ಚಿದ ಎಣ್ಣೆಯ ವಾಸನೆ ಮತ್ತು ಡೀಸಲ್ ಉರಿದ ಹೊಗೆಯ ಘಾಟೂ ಸೇರಿ ಒಂದು ರೀತಿಯಲ್ಲಿ ಅಲ್ಲೊಂದು ಅಸಹನೀಯ ವಾತಾವರಣವೆ ಸೃಷ್ಟಿಯಾದಂತಿತ್ತು. ಆ ಎಲ್ಲಾ ಅವಾಂತರಗಳ ನಡುವೆಯೆ ಅವನೂ ತೂರಿಕೊಂಡು ಒಂದು ಕಂಬಿ ಆಧರಿಸಿ ನಿಂತ. ಊರು ಬಿಡುವ ಹೊತ್ತಿನಲ್ಲಿ ತನ್ನ ಒಡಲೊಳಗೆ ಏಳುತ್ತಿದ್ದ ಸಂಕಟದ ಕಂಪನದ ನಡುವೆ ಈ ಎಲ್ಲಾ ಜಂಜಡಗಳು ಅವನ ಪಾಲಿಗೆ ಗೌಣವಾಗಿದ್ದವು.

ಹಾಗೆ ನೋಡಿದರೆ ಊರು ಬಿಟ್ಟು ಕಾಣದ ನಗರಕ್ಕೆ ಮುಖ ಮಾಡುವ ವಯಸ್ಸೇನೂ ಅವನಿಗೆ ಆಗಿರಲಿಲ್ಲ. ಅಸಲಿಗೆ ಹಾಗೊಂದು ಊರು ಬಿಟ್ಟು ಹೋಗಬೇಕಾದ ವಯಸ್ಸು ಅಂತೇನಾದರೂ ಇದೆಯ? ಅಂತಲೂ ಅವನಿಗೆ ಗೊತ್ತಿರಲಿಲ್ಲ. ಹಣೆಬರಹದ ಹೊಣೆ ಹೊತ್ತು ನೋವಿನ ನೆನ್ನೆಗಳನ್ನ ನಲಿವಿನ ನಾಳೆಗಳಾಗಿಸಿಕೊಳ್ಳುವ ಕ್ಷೀಣ ಆಸೆ ಹೊತ್ತು ಆತ ಅವನ ಪಾಲಿಗೇನೆ ಕಠಿಣವಾಗಿದ್ದ ಹೀಗೊಂದು ನಿರ್ಧಾರಕ್ಕೆ ಬಂದಿದ್ದ. ಹೆತ್ತವರ ಮುರುಕು ಸಂಬಂಧ, ಮುಂದೆ ಓದಿಸಲು ಒಪ್ಪದ ಅಪ್ಪ, ತನ್ನೆಲ್ಲಾ ಸ್ನೇಹಿತರು ಕಾಲೇಜು ಮೆಟ್ಟಿಲು ಹತ್ತುವುದನ್ನ ಪ್ರತಿದಿನ ಹೊಟ್ಟೆ ಪಾಡಿಗಾಗಿ ಒಂದಿಲ್ಲೊಂದು ಕೆಲಸಕ್ಕೆ ಹೋಗುತ್ತಲೇ ಕಾಣ ಬೇಕಾಗಿರುವ ಕರ್ಮ, ಅದೆಷ್ಟೆ ನಿತ್ಯದ ಸಂಪಾದನೆಯನ್ನ ಸಂಜೆ ತಂದು ಒಪ್ಪಿಸಿದರೂ ವಿನಾಕಾರಣ ರೇಗಿ ಅರಚಿ ಕೆಲವೊಮ್ಮೆ ಹೊಡೆದು ಬಡಿದು ಮನೆಯಿಂದಾಚೆ ಅಟ್ಟುವ ಅಪ್ಪನ ವಿಕೃತಿ ಇವೆಲ್ಲಾ ಅವನನ್ನು ಹೈರಾಣು ಮಾಡಿ ತಾನು ಈ ಎಲ್ಲಾ ಹಿಂಸೆಗಳಿಂದ ಪಾರಾಗಿ ಬದುಕಬೇಕೆಂದರೆ ಊರನ್ನ ಬಿಡದೆ ವಿಧಿಯೆ ಇಲ್ಲ ಎನ್ನುವ ನಿರ್ಧಾರಕ್ಕವನನ್ನ ತಂದು ಮುಟ್ಟಿಸಿದ್ದವು.

ಹೊರಡುವ ಹಿಂದಿನ ದಿನವಂತೂ ಅವನ ಮನಸ್ಸು ಪೂರ್ತಿ ಮುರಿದೆ ಹೋಗಿತ್ತು. ಆದಿನ ಆತ ಯಾರೋ ಮೇಸ್ತ್ರಿಯೊಬ್ಬನ ಜೊತೆ ಮುರಿದ ಹಳೆ ಮನೆಯ ಕೊಟ್ಟಿಗೆಯೊಂದರ ಪುಡಿ ಗಾರೆ ಕೆಲಸಕ್ಕೆ ಕೈಯಾಳಾಗಿ ಹೋಗಿದ್ದ. ಆ ಮನೆಯವರು ಕೊಟ್ಟ ತಣ್ಣಗಾಗಿದ್ದ ನೀರು ದೋಸೆಯನ್ನ ಹಟ್ಟಿಯ ಅಂಚಿನಲ್ಲಿ ಕೂತು ನೀರು ನೀರಾಗಿದ್ದ ಕಾಯಿ ಚಟ್ನಿಯಲ್ಲಿ ಅದ್ದಿಕೊಂಡು ತಿನ್ನುವಾಗ ವಿಪರೀತ ಕುಬ್ಜನಾಗಿ ಹೋದಂತೆ ಅನ್ನಿಸಿ ಕಣ್ಣಿಂದ ಉಕ್ಕಿ ಬಂದ ನೀರೆಲ್ಲ ಚಟ್ನಿಯ ಮೇಲೆ ಸುರಿದು ಅದು ಇನ್ನಷ್ಟು ನೀರಾಗಿತ್ತು. ಅವ ಹಿಂದಿನ ದಿನ ಸರಿಯಾಗಿ ಹೊಟ್ಟೆಗೆ ಏನೂ ತಿಂದಿರಲೇ ಇಲ್ಲ. ಆದರೆ ವಿನಾಕಾರಣ ಮೈತುಂಬ ಪೆಟ್ಟನ್ನ ಮಾತ್ರ ಅಪ್ಪನಿಂದ ತಿಂದು ಬಳಲಿ ಹೋಗಿದ್ದ.

ಅದಕ್ಕೂ ಹಿಂದಿನ ಸಂಜೆ ಅವನನ್ನ ಮಗುವಾಗಿದ್ದಲ್ಲಿಂದ ಎತ್ತಿ ಆಡಿಸಿದ್ದ ಮನೆಯೆದುರಿನ ಅಜ್ಜಿ ಇವನ ಅರೆಹೊಟ್ಟೆಯ ಅಸಹಾಯಕತೆ ನೋಡಲಿಕ್ಕಾಗದೆ ಕರಗಿ ತನ್ನ ಮಗ ಸೊಸೆ ಪೇಟೆಗೆ ಹೋದ ಸಮಯ ಸಾಧಿಸಿ ಮಧ್ಯಾಹ್ನದ ಉಳಿದಿದ್ದ ಅನ್ನಕ್ಕೆ ಬಸಳೆ ಸೊಪ್ಪಿನ ಸಾರು ಸುರಿದು ಕೊಟ್ಟು, ಪಾತ್ರೆಯಿಂದಲೆ ಇವ ಅದನ್ನ ಬಕಬಕ ಮುಕ್ಕುವಾಗ ಪ್ರೀತಿಯಿಂದ ತಲೆ ಸವರಿತ್ತು. ಇವನ ಹೀನ ಬಾಳಿಗೆ ಮರುಗುತ್ತಿದ್ದ ಜೀವ ಬಹುಷಃ ಅದೊಂದೆ. ಹೀಗೆ ಕದ್ದು ಮುಚ್ಚಿ ಅವಸರವಸರವಾಗಿ ನುಂಗುವ ದೊಂಬರಾಟದಲ್ಲಿ ನೆತ್ತಿಗೆ ಅನ್ನ ಹತ್ತಿ ಆತನ ಕಣ್ಣು ಮೇಲಾಗುವಂತೆ ಆದಾಗ ನೀರು ಕುಡಿಸಿ 'ಮೆಲ್ಲ ಮಗ, ಮೆಲ್ಲ ಉಣ್ಣು' ಅಂತ ಅಜ್ಜಿ ಅದೆ ಮೊದಲಿನ ಅಕ್ಕರೆಯಿಂದ ತಲೆ ತಟ್ಟಿ ಸಂತೈಸಿತ್ತು. ಉಕ್ಕಿ ಬಂದ ಅಳುವಿನಲ್ಲಿ ಆಗ ಅಜ್ಜಿಯ ಎದೆಗೆ ಒರಗಿ ಕಣ್ಣೀರಾಗಿದ್ದ ಆತ ಕಂಬನಿಯನ್ನ ತನ್ನ ಸೀರೆ ಸೆರಗಿನಿಂದಲೆ ಒರೆಸಿ ಅಜ್ಜಿ ಸಾಂತ್ವಾನದ ಮಾತುಗಳನ್ನಾಡಿತ್ತು. ಅದಕ್ಕಿಂತ ಹೆಚ್ಚಿನ ಸಹಾಯ ಮಾಡುವ ಸ್ಥಿತಿಯಲ್ಲಿ ಅಜ್ಜಿಯೂ ಇದ್ದಿರಲಿಲ್ಲ. ಹೆಚ್ಚೆಂದರೆ ಹೀಗೆ ಮನೆಯವರ ಕಣ್ಣು ತಪ್ಪಿಸಿ ಹಿಡಿ ಅನ್ನ ಹಾಕಬಹುದಿತ್ತು, ಅಕ್ಕರೆಯಿಂದ ನಾಲ್ಕು ಸಾಂತ್ವಾನದ ನುಡಿಗಳನ್ನ ಆಡಬಹುದಿತ್ತು ಅಷ್ಟೆ. ಈಗ ಇವತ್ತು ಮತ್ತೆ ಹಿಡಿ ಅನ್ನಕ್ಕಾಗಿ  ಅಯ್ಯೋ ಯಾರದೋ ಮನೆಯ ಹಿತ್ತಲಿನ ಕಡುಮಾಡಿನಡಿ ಕಾಯಬೇಕಾಗಿ ಬಂತಲ್ಲ. ಥೂ, ಇದೂ ಒಂದು ದರಿದ್ರ ಬಾಳಾ? ಎಂದಾತ ತನ್ನೊಳಗೆ ಮುಮ್ಮಲ ಮರುಗಿದ.

ಹೆತ್ತವರೆ ತನ್ನನ್ನ ಹಗೆಯನ್ನಾಗಿ ಏಕೆ ನೋಡುತ್ತಾರೆ ಅಂತ ಬಾಲ್ಯದಲ್ಲಿ ಮೊದಮೊದಲಿಗೆ ಅವನಿಗೆ ಅರ್ಥವೆ ಆಗುತ್ತಿರಲಿಲ್ಲ. ಅದನ್ನೆಲ್ಲ ಅರ್ಥ ಮಾಡಿಕೊಳ್ಳುವ ವಯಸ್ಸೂ ಸಹ ಅವನಿಗಾಗಿರಲಿಲ್ಲ. ಅಮ್ಮ ಎನ್ನುವವ ಹೆಂಗಸು ಬಾಲ್ಯದುದ್ದ ಕೂತರೆ ತಪ್ಪು ಅಂತ ಹೊಡೆದು, ನಿಂತರೆ ತಪ್ಪು ಹುಡುಕಿ ಬಡಿದು ಹಿಂಸಿಸಿ ಭಯೋತ್ಪಾದಕಿಯಾಗಿಯೆ ಕಾಡಿದಳು. ಎಳೆ ಪ್ರಾಯದ ಮಗು ಹಾಗೂ ಹೆಂಡತಿಯನ್ನ ತವರು ಮನೆಗೆ ಸಾಗ ಹಾಕಿ ಅದ್ಯಾವುದೋ ಮಾಯಾನಗರಿಯಲ್ಲಿ ಕೆಲಸ ಮಾಡಲು ಹೋಗಿದ್ದ ಅಪ್ಪನೆಂಬ ಭೂಪ ಒಂದು ರಾತ್ರೋ ರಾತ್ರಿ ಅನಿರೀಕ್ಷಿತವಾಗಿ ಇವನ ಮುಂದೆ ಅವತರಿಸಿದಾಗ ಇವನಿಗೆ ಆಗಲೆ ಐದರ ಹರೆಯ! ಬಾಲವಾಡಿಯ ಶಾಲೆಯಲ್ಲಿ, ಸುತ್ತಮುತ್ತಲ ಮನೆಯಲ್ಲಿ ಇನ್ನಿತರ ಸಹಪಾಠಿಗಳ ಅಪ್ಪಂದಿರನ್ನ ಆಗೀಗ ಕಾಣುತ್ತಿದ್ದನಾದರೂ ಈ 'ಅಪ್ಪ' ಎನ್ನುವ ಪ್ರಾಣಿಯ ಉಪಸ್ಥಿತಿ ಬಾಳಿಗೆ ಖಡ್ಡಾಯವೇನಲ್ಲ. ಅದು ಕೇವಲ ಒಂದು ಆಯ್ಕೆ ಮಾತ್ರ ಎಂದೆ ಆತನ ಮಗು ಮನಸು ಬಗೆದಿತ್ತು.


ಹಾಗೆ ಮರಳಿ ಬಂದ ಅಪ್ಪ ಮತ್ತೆ ಮರಳಿ ಮಹಾನಗರಕ್ಕೆ ಹೋಗಲೆ ಇಲ್ಲ. ಈ ಅಪ್ಪ ಅಮ್ಮನದು ಗಲಭೆಗ್ರಸ್ತ ಸಂಬಂಧದ ಸಂಸಾರ. ಅವರು ಅನ್ಯೋನ್ಯತೆಯಿಂದ ಇದ್ದದ್ದನ್ನ ಆತ ಕಂಡದ್ದೆ ಅತಿ ವಿರಳ. ಯಾವಾಗಲೂ ಅವರಿಬ್ಬರೂ ಶರಂಪರ ಕಿತ್ತಾಡುತ್ತಾ ಕೈಗೆ ಸಿಕ್ಕಿದ್ದರಲೆಲ್ಲ ಹೊಡೆದಾಡಿಕೊಂಡು ಕುಸ್ತಿಯಾಡುತ್ತಿದ್ದರೆ, ಈತ ಬಾಲ್ಯದುದ್ದ ಮೂಕ ಪ್ರೇಕ್ಷಕನಾಗಿ ಅದನ್ನ ಸಹಿಸಿಕೊಂಡಿರಬೇಕಾಗುತ್ತಿತ್ತು. ನಡು ನಡುವೆ ಖಚಿತವಾಗಿ ಇಂತಹದ್ದೆ ಕಾರಣ ಅಂತ ಗೊತ್ತಿಲ್ಲದೆಯೆ ಇವ ಧ್ವನಿ ತೆಗೆದು ಅತ್ತರೆ ಇವನಿಗೂ ಅವರಿಬ್ಬರು ತಮ್ಮಿಬ್ಬರ ಕದನದ ನಡುವೆ ಕೊಂಚ ಬಿಡುವು ಮಾಡಿಕೊಂಡು ಖರ್ಚಿಗೆರೆರಡು ಕೆನ್ನೆ ಹಾಗೂ ಬೆನ್ನಿನ ಮೇಲೆ ಕೊಟ್ಟು ತಮ್ಮ ಕಾಳಗದಲ್ಲಿ ಮರು ಮಗ್ನರಾಗುತ್ತಿದ್ದರು. ಒಟ್ಟಿನಲ್ಲಿ ಇಬ್ಬರಿಗೂ ಆತನನ್ನ ಲಾಲಿಸಿ ಪಾಲಿಸುವುದಕ್ಕಿಂತ ತಮ್ಮ ನಿತ್ಯದ ಯುದ್ಧವನ್ನ ಬಿಟ್ಟಲಿಂದ ಮುಂದುವರಿಸಿವುದರ ಬಗ್ಗೆಯೆ ಹೆಚ್ಚು ಕಾಳಜಿ ಇದ್ದಂತಿತ್ತು.


ಇದೆಲ್ಲದರ ನಡುವೆ ಅವನ ಬಾಲ್ಯ ಕಳೆದು ನಡುವೆ ಓದಿಸುವ ನೆಪದಲ್ಲಿ ಕರೆದೊಯ್ದವರ ಜೊತೆ ಆ ಊರು ಈ ಊರು ಸುತ್ತಿ ಕಡೆಗೆ ಆತ ತನ್ನ ಹುಟ್ಟೂರಿಗೆ ಮರಳುವುದಕ್ಕೂ, ಅಪ್ಪ ಅಮ್ಮನ ಎಣ್ಣೆ ಸೀಗೆಕಾಯಿ ಸಂಬಂಧದ ಅದೆಷ್ಟನೆಯದೋ ಮರು ಹೊಂದಾಣಿಕೆಯ ಪರ್ವ ಆರಂಭವಾಗುವುದಕ್ಕೂ ಸರಿ ಹೋಗಿತ್ತು. ಮೊದಲು ಅವರ ದೈಹಿಕ ಹಿಂಸೆಗೆ ಹೆದರಿ ಮುದುಡುತ್ತಿದ್ದವ ಈಗ ಅದು ಸಹನೆ ಮೀರುತ್ತಿದೆ ಅನ್ನಿಸುವಾಗ ತಿರುಗಿ ಬೀಳ ತೊಡಗಿದ. ಮೊದಲಿನ ವಿಧೇಯತೆಯ ಜಾಗದಲ್ಲಿ ಹೆಚ್ಚು ಹೆಚ್ಚು ಮೊಂಡನಾಗುವುದನ್ನ ಕಲಿತುಕೊಂಡ. ಈ ನಡುವೆ ಅಪ್ಪ ಅಮ್ಮನ ಈ ಮತ್ತೊಂದೆರಡು ಸುತ್ತಿನ 'ಅನ್ಯೋನ್ಯತೆ'ಗೆ ಇನ್ನೊಂದು ಮಗು ಬೇರೆ ಹುಟ್ಟಿ ಬಿಟ್ಟಿತ್ತು. 'ನಿತ್ಯ ನಾಯಿ ನರಿಯಂತೆ ಆಡುತ್ತಿದ್ದ ಜಗಳದ ಮಧ್ಯೆ ಅವರಿಬ್ಬರಿಗೂ 'ರೋಮಾನ್ಸ್'ಗೆ ಯಾವಾಗ ಕಾಲ ಸಿಕ್ಕಿತಪ್ಪ!' ಅಂತ ಈಗಲೂ ಆತ ವಿಸ್ಮಯ ಪಡುತ್ತಾನೆ. ಒಟ್ಟಿನಲ್ಲಿ ಪರಮ ಅನಾಗರೀಕವಾಗಿದ್ದ ಹೆಚ್ಚು ಕಡಿಮೆ ಪಶು ಮಟ್ಟದ ಸಂಬಂಧದ ಕುಣಿಕೆಯಿಂದ ಬಂಧಿತವಾದಂತೆ ಆ ಗಂಡ ಹೆಂಡಿರಿಬ್ಬರೂ ದಾಂಪತ್ಯ ನಡೆಸುತ್ತಾ ಇವನ ಬಾಲ್ಯವನ್ನೆ ನರಕವಾಗಿಸಿ ಇವನ ಮಗು ಮನಸ್ಸನ್ನ ಆಗಾಗ ಗೊತ್ತಿಲ್ಲದೆಯೆ ಮುರಿದು ಒಟ್ಟಿನಲ್ಲಿ ಬದುಕನ್ನೆ ಮೂರಾಬಟ್ಟೆಯಾಗಿಸಿದ್ದರು.


ಇಂತಹ ಹೊತ್ತಲಿ ಅವ ಊರು ಬಿಡುವ ನಿರ್ಧಾರಕ್ಕೆ ಕಡೆಗೂ ಬಂದು ಮುಟ್ಟಿದ್ದ. ಅವ ಹೊರಟಿದ್ದ ಗುರಿ ಬೆಂಗಳೂರು. ಅವ ಅಲ್ಲಿಗೆ ಹೊರಡಲಿಕ್ಕೆ ಇನ್ನೂ ಒಂದು ಪ್ರಮುಖ ಕಾರಣವೂ ಇದ್ದೇ ಇತ್ತು. ಹೌದು, ಅವಳಲ್ಲಿದ್ದಳು. ಅವನ ಮನಸನ್ನ ಕದ್ದಿದ್ದವಳು. ಅವನನ್ನ ವಿಷಾದ ಪರ್ವದ ನಡುವೆ ಆವರಿಸಿಕೊಂಡಿದ್ದವಳು ಅವಳಲ್ಲಿದ್ದಳು.

( ಮುಂದಿದೆ....)

11 October 2014

ಪ್ರಧಾನಿಯವರ ಬಡಾಯಿಯೂ, ನಮ್ಮ ನಿಮ್ಮಂತವರ ಉತ್ತಮ ನಾಳೆಗಳಿಗಾಗಿನ ನಿರಂತರ ಲಡಾಯಿಯೂ......




.

( ಗೆಳೆಯ ಗಣಪತಿ ನನ್ನ ಹಿಂದಿನ ಲೇಖನವೊಂದಕ್ಕೆ ಎತ್ತಿದ್ದ ಆಕ್ಷೇಪಗಳಿಗೆ ನನ್ನ ಗ್ರಹಿಕೆಯ ಮಿತಿಯಲ್ಲಿ ಕೊಟ್ಟ ಉತ್ತರ.)

ಗಣಪತಿ, ನಿಮ್ಮ ಪ್ರತಿಕ್ರಿಯೆಗೆ ಇಷ್ಟು ತಡವಾಗಿ ಉತ್ತರ ಹೇಳುತ್ತಿರೋದಕ್ಕೆ ಮೊದಲಿಗೆ ವಿಷಾದ ವ್ಯಕ್ತ ಪಡಿಸುತ್ತಿದ್ದೇನೆ. ನೀವು ಎತ್ತಿರುವ ಆಕ್ಷೇಪದ ಹರಿವು ವಿಶಾಲವಾಗಿ ಉತ್ತರಿಸುವಷ್ಟಿದ್ದರೂ ಸಹ ನಾನು ಆ ಗೋಜಿಗೆ ಹೋಗದೆ ನಿಮ್ಮ ಹಾಗೆ ಕ್ರಮಾಂಕಗಳಲ್ಲಿ ಕೇಳಿದಷ್ಟಕ್ಕೆ ಮಾತ್ರ ನನ್ನ ಕೈಲಾದಷ್ಟು ಚುಟುಕಾಗಿ ಉತ್ತರಿಸಲು ಪ್ರಯತ್ನಿಸಿದ್ದೇನೆ.

೧) ನೀವು ಮೊದಲೆ ಅಂದಂತೆ ನಿಮಗೆ ನನ್ನ ಬರಹದಲ್ಲಿನ ಕೆಲವು ಉಪಮೆಗಳ ಬಗ್ಗೆ ಆಕ್ಷೇಪವಿದೆ. ಒಪ್ಪಿದೆ, ಅನಗತ್ಯವಾಗಿ ಅವಹೇಳನಕಾರಿ ಪದದ ಬಳಕೆ ಶಿಷ್ಟ ಪತ್ರಿಕೋದ್ಯಮದ ಕ್ರಮವಲ್ಲ ಹಾಗೂ ಅದು ಮೂಲದಲ್ಲಿ ಪತ್ರಿಕಾ ಧರ್ಮವೂ ಅಲ್ಲ. ಆದರೆ ವಿವೇಚನೆ ಇಲ್ಲದೆ ಕೂಗುಮಾರಿಗಳಂತೆ ವರ್ತಿಸುತ್ತಾ ೨೪*೭ ಪೀಡೆಗಳಾಗಿರುವ ವಾರ್ತಾವಾಹಿನಿಗಳ ಬಗ್ಗೆ, ಅದರಲ್ಲೂ ಕನ್ನಡ ವಾರ್ತಾವಾಹಿನಿಗಳೆಂಬ ಸುದ್ದಿಯನ್ನ ಬಿಕರಿಗಿಟ್ಟಿರುವವರ ಅಡ್ಡೆಗಳ ಬಗ್ಗೆ ಅಂದು ಬರೆದಾಗ ನಿಮ್ಮ ಆಕ್ಷೇಪ ಎದ್ದಿರುವ 'ಬಿಕನಾಸಿ' ತರಹದ ಪದಗಳ ಬಳಕೆ ಮಾಡಿದ ಬಗ್ಗೆ ನನಗೂ ಬೇಸರವಿದೆ. ಏಕೆಂದರೆ ಅದಕ್ಕಿಂತ ಕೆಳ ಮಟ್ಟದ ಪದವನ್ನ ನಾನು ನ್ಯಾಯವಾಗಿ ಬಳಸಬೇಕಿತ್ತು. ಆದರೆ ಆ ಕ್ಷಣಕ್ಕೆ ನನಗೆ ಅಂತಹವ್ಯಾವುವೂ ಹೊಳೆಯಲಿಲ್ಲ ಎನ್ನುವುದಕ್ಕೆ ನಾಚಿಕೆ ಪಡುತ್ತೇನೆ! ನನ್ನ ಈ ಸಿಟ್ಟಿಗೆ ಅನೇಕ ಸಕಾರಣಗಳಿವೆ. ಅವನ್ನೆಲ್ಲಾ ಬದಿಗಿಟ್ಟು ಇತ್ತೀಚೆಗೆ ಘಟಿಸಿದ ಎರಡು ಘಟನೆಗಳು ಹಾಗೂ ಅವುಗಳನ್ನ ತೋರಿಸುವ ನೆಪದಲ್ಲಿ ವಾರ್ತಾವಾಹಿನಿಗಳೆಂಬ ಸುಟ್ಟ ಮಂದಿಯ ಜಾಲ ಅದು ಹೇಗೆ ಅಗ್ಗವಾಗಿ ವರ್ತಿಸಿತು ಎನ್ನುವ ಉದಾಹರಣೆ ಕೊಟ್ಟು ವಿವರಿಸುತ್ತೇನೆ, ಆಗ ಬಹುಷಃ ನಿಮಗೂ ಅರ್ಥವಾಗುತ್ತದೆ.

ಮೊದಲನೆಯದಾಗಿ ಮೊನ್ನೆ ಪಕ್ಕದ ನಾಡಿನ ಭ್ರಷ್ಟ ನಾಯಕಿಯೊಬ್ಬಳಿಗೆ ನಮ್ಮ ಉಚ್ಛ ನ್ಯಾಯಾಲಯ ಜಾಮೀನು ನೀಡುವ ಪ್ರಕರಣದ ಕುರಿತದ್ದು. ಅಂದು ಇನ್ನೂ ವಿಚಾರಣೆ ಮುಗಿದಿಲ್ಲದಿದ್ದರೂ, ನ್ಯಾಯಾಧೀಶರು ತಮ್ಮ ತೀರ್ಪನ್ನ ಪ್ರಕಟಿಸಲು ಸಾಕಷ್ಟು ಸಮಯ ಬಾಕಿ ಉಳಿದಿದ್ದರೂ ಸಹ ಈ ಅವಸರಕ್ಕೆ ಬಸಿರಾದವರು ಸರಕಾರಿ ಅಭಿಯುಕ್ತರ ಆಕ್ಷೇಪವೇನೂ ಜಾಮೀನಿಗೆ ಇಲ್ಲ ಎಂತಂದ ಕೂಡಲೆ ಆ ಹೆಂಗಸಿಗೆ ಜಾಮೀನು ಸಿಕ್ಕಿತು ಅಂತಲೆ ಊರೆಲ್ಲ ಬಿಡುವಿಲ್ಲದೆ ಟಾಂ ಟಾಂ ಹೊಡೆದೆ ಹೊಡೆದರು. ವಾಸ್ತವದಲ್ಲಿ ಅವರು ಹೀಗೆ ಘೋಷಿಸಿದ ಇಪ್ಪತ್ತು ನಿಮಿಷದ ನಂತರ ಜಾಮೀನು ನಿರಾಕರಣೆಯ ತೀರ್ಪು ಹೊರಬಂತು! ಒಂದು ವೇಳೆ ಜಾಮೀನು ಸಿಕ್ಕಿಯೆ ಬಿಟ್ಟಿತು ಎಂಬ ಆನಂದತಿರೇಕದಲ್ಲಿ ಓಲಾಡುತ್ತಿದ್ದ ಆ ಪುಢಾರಿಯ ಅಭಿಮಾನಿ ದೆವ್ವಗಳು ಈ ಅಘಾತಕಾರಿ ಮರು ಸುದ್ದಿ ಕೇಳಿ ಸಿಟ್ಟಿನಿಂದ ತಪ್ತರಾಗಿ ಉದ್ರಿಕ್ತರೂ ಆಗಿ ಹೋಗಿ ಸಾರ್ವಜನಿಕವಾಗಿ ದಾಂಧಲೆಗಿಳಿದಿದ್ದರೆ ಈ ಅಪದ್ಧವನ್ನ ಮೊದಲಿಗೆ ಹರಡಿದ ಈ ಸುದ್ದಿಮನೆಗಳೆ ನೇರ ಹೊಣೆಯಾಗುತ್ತಿದ್ದವು.

ಹಿಂದೆಯೂ ಇಂತಹ ಸಂದರ್ಭಗಳಲ್ಲಿ ಈ ಅಧಿನಾಯಕಿಯ ಅನು'ನಾಯಿ'ಗಳು ಹೀಗೆಯೆ ಹುಚ್ಚಂಪಟ್ಟೆ ವರ್ತಿಸಿದ ಉದಾಹರಣೆಗಳಿವೆ. ಇಂತಹದ್ದೆ ಪರಿಸ್ಥಿತಿ ತಮ್ಮ ನಾಯಕಿಗೆ ಒದಗಿ ಬಂದಿದ್ದಾಗ ಧರ್ಮಪುರಿಯಲ್ಲಿ ಅವರು ಶಾಲಾ ಬಸ್ಸೊಂದಕ್ಕೆ ಬೆಂಕಿ ಇಟ್ಟು ಮೂವರು ವಿದ್ಯಾರ್ಥಿನಿಯರನ್ನ ಸಜೀವವಾಗಿ ದಹಿಸಿದ್ದು ನಿಮಗೂ ನೆನಪಿರಬಹುದು. ಇಲ್ಲೂ ಅಂತದ್ದೇನಾದರೂ ಆಗಿದ್ದರೆ ತಾವೆ ಬೀದಿಗೆ ಹಚ್ಚಿದ ಬೆಂಕಿಯಲ್ಲಿ ದಿನವಿಡಿ ಗಳ ಹಿಡಿದು ಚಳಿ ಕಾಸಿಕೊಳ್ಳಲಿಕ್ಕೆ ಯಾವ ವಾರ್ತಾವಾಹಿನಿಗಳ ೨೪*೭ ದಂಡಪಿಂಡಗಳೂ ಕಿಂಚಿತ್ತೂ ಹೇಸುತ್ತಿರಲಿಲ್ಲ ಅನ್ನೋದು ತಮ್ಮ ಗಮನಕ್ಕೆ. ಇಂತಹ ಮುಟ್ಠಾಳರನ್ನ ಬಯ್ಯದೆ ಏನು ತಬ್ಬಿ ಮುತ್ತಿಡಬೇಕಿತ್ತ?

ಎರಡನೆಯದಾಗಿ ಮೊನ್ನೆ ಮೊನ್ನೆ ಸುರಿದ ಭಾರಿ ಮಳೆಗೆ ಎಳೆ ಪ್ರಾಯದ ಹೆಣ್ಣು ಮಗುವೊಂದು ಬನ್ನೇರುಘಟ್ಟ ರಸ್ತೆಯಲ್ಲಿ ಚರಂಡಿ ಪಾಲಾಗಿತ್ತು. ಎಡೆಬಿಡದೆ ಸುರಿಯುತ್ತಿದ್ದ ಜೋರು ಮಳೆಯ ನಡುವೆ ಅವೇಳೆಯ ಕಡುಗತ್ತಲಿನಲ್ಲಿ ರಕ್ಷಣಾ ಕಾರ್ಯಾಚರಣೆಗೆ ಧಾವಿಸಿ ಬಂದು ಸ್ಥಳದಲ್ಲಿ ತರಾತುರಿಯಿಂದ ತಮ್ಮ ಕರ್ತವ್ಯ ನಿರ್ವಹಿಸಲು ಹವಣಿಸುತ್ತಿದ್ದ ರಕ್ಷಣಾ ತಂಡವನ್ನ ಮಾಹಿತಿ ಸಂಗ್ರಹದ ನೆಪದಲ್ಲಿ ತಡೆದು ಅನಗತ್ಯವಾಗಿ

'ಮಗು ಯಾವ ಬಣ್ಣದ ಫ್ರಾಕ್ ಧರಿಸಿದ್ದಳು? ( ಅವಳ ಫ್ರಾಕಿನ ರಂಗು ಅದೇನೆ ಆಗಿದ್ದರೂ ಕೆಸರು ಮೆತ್ತಿ ಈಗ ಗುರುತಿಸಲಿಕ್ಕೆ ಖಂಡಿತಾ ಅಸಾಧ್ಯವೆಂಬ ಅರಿವಿಲ್ಲವ ಈ ಅವಿವೇಕಿಗಳಿಗೆ?.)

ಊಟ ಮಾಡಿ ಮನೆ ಬಿಟ್ಟಿದ್ದಳ? ( ಊಟ ಮಾಡಿದ್ದರೆ ತಾನೆ ಸಾವು ಸುಖಮಯವಾಗುತ್ತಿತ್ತ?.)

ನೀರಿಗೆ ಬಿದ್ದಾಗ ಆಕೆಯ ಪ್ರತಿಕ್ರಿಯೆ ಹೇಗಿತ್ತು? ( ಆಪತ್ತಿನಲ್ಲಿ ಇನ್ನು ಹೇಗಿರಲಿಕ್ಕೆ ಸಾಧ್ಯ!)

ಕಿರುಚಿ ಕೊಂಡಳಾ? ( ಕಿರುಚಿಕೊಳ್ಳದೆ ಮತ್ತೆ ಅಂತಹ ವಿಪತ್ತಿನಲ್ಲಿ ಎಸ್ಪಿಬಿ - ಎಸ್ ಜಾನಕಿಯಮ್ಮನ ಯಾವುದಾದರೂ ಮಧುರವಾದ ಜನಪ್ರಿಯ ಡ್ಯೂಯೆಟ್ ಹಾಡು ಹಾಡಿಕೊಳ್ಳಲು ಸಾಧ್ಯವೆ?)

ಕಿರುಚಿ ಕೊಂಡಿದ್ದರೆ ಅದ್ಯಾವ ಭಾಷೆಯಲ್ಲಿ ಕಿರುಚಿದಳು? ( ಅದನ್ನ ಕಟ್ಟಿಕೊಂಡು ಈಗ ಈ ಹಡಬೆಗಳಿಗೇನಾಗಬೇಕು?)

ಕಿರುಚಿದ್ದು ಕನ್ನಡದಲ್ಲ ಇಲ್ಲಾ ತಮಿಳಿನಲ್ಲ? ( ಇದೀಗ ತತಕ್ಷಣದ ಕಾರ್ಯಾಚರಣೆಗೆ ಅತಿ ಮುಖ್ಯ!.)

ಏನಂತ ಕಿರುಚಿದಳು? ( 'ಎಲ್ಲಾ ಲೈವ್ ಟಿವಿ ಖದೀಮರ ಕ್ಯಾಮರ ಬರುವವರೆಗೆ ಇಲ್ಲೆ ಕಾದಿರುತ್ತೇನೆ' ಅಂತ ಮಾತ್ರ ಕಿರುಚಿರಲಿಕ್ಕಿಲ್ಲ.)

ಈ ತರಹದ ತಲೆಹರಟೆ ಪ್ರಶ್ನೆ ಕೇಳುತ್ತಾ ತನಿಖಾ ಪತ್ರಿಕೋದ್ಯಮದ ಗೆಟಪ್ಪಿನಲ್ಲಿ ಒಟ್ಟಾರೆ ಕಾರ್ಯಾಚರಣೆಗೆ ಕಂಟಕವಾಗಿದ್ದ ವಿವಿಧ ವಾಹಿನಿಗಳ ಮೈಕಾಸುರರನ್ನ ಮೆಟ್ಟಿನಲ್ಲಿ ಹೊಡೆದು ಮೊದಲು ಅಲ್ಲಿಂದ ಆಚೆಗೆ ಅಟ್ಟುವ ವಾಸ್ತವ ಪ್ರಜ್ಞೆಯನ್ನ ಯಾರಾದರೂ ಅಲ್ಲಿ ನೆರೆದ ಪ್ರಜ್ಞಾವಂತರು ಒಂದೊಮ್ಮೆ ಮೆರೆದಿದ್ದರೆ, ಸರಾಗ ಕಾರ್ಯಾಚರಣೆ ನಡೆದು ಕಷ್ಟದಲ್ಲಾದರೂ ಬಹುಷಃ ಆ ಮಗು ಜೀವಂತ ಸಿಗುವ ಸಣ್ಣ ಸಂಭವವಾದರೂ ಇದ್ದೇ ಇತ್ತು ಅನ್ನೋದು ನನ್ನ ಅಭಿಪ್ರಾಯ.

ಇಂತಹ ನಾಲಾಯಕರನ್ನ ಅಂದು ಅಷ್ಟು ಸೌಮ್ಯ ಪದದಲ್ಲಿ ಬೈದೆನಲ್ಲ ಅನ್ನುವ ನೋವು ನನಗೆ ಖಂಡಿತ ಕಾಡಲಿಕ್ಕಿದೆ!

೨) ಎರಡನೆಯದಾಗಿ ನಿಮ್ಮ ಆಕ್ಷೇಪವಿರುವುದು ಸಕಾರಾತ್ಮಕವಾಗಿ ಪ್ರಧಾನಿಗಳು ಇರಿಸಿರುವ ಹೆಜ್ಜೆಗಳನ್ನ ಅವಜ್ಞೆಗೆ ಒಳಪಡಿಸಿ ಕೇವಲ ನಕಾರಾತ್ಮಕವಾದ ಅಂಶಗಳನ್ನೆ ಪ್ರಸ್ತಾವಿಸಲಾಗಿದೆ ಅನ್ನುವುದರ ಬಗ್ಗೆ. ನೋಡಿ ಗಣಪತಿ, ಟೀಕೆ ಸಕಾರಾತ್ಮಕವಾಗಿದ್ದರೆ ಅದು ಭೋಪರಾಕ್ ಅನ್ನಿಸಿಕೊಂಡು ಕೇವಲ ಟಿಪ್ಪಣಿಯಾಗಿ ಮಾತ್ರ ಉಳಿದು ಹೋಗುತ್ತದೆ. ಹೌದು, ಸಮಯ ಪಾಲನೆಯ ವಿಷಯದಲ್ಲಿ ಪ್ರಧಾನಿಗಳು ಅನುಕರಣೀಯರಾಗಿರೋದು ಹಾಗೂ ಆ ಸಂಗತಿಯಲ್ಲಿ ಜೋಭದ್ರರಾದ ರಾಜಧಾನಿಯ ಸರಕಾರಿ ನೌಕರರ ಚಳಿಜ್ವರವನ್ನ ಅವರು ಬಿಡಿಸಿರುವುದು ಶ್ಲಾಘನೀಯ. ಅದರ ಬಗ್ಗೆ ನನಗೂ ಮೆಚ್ಚುಗೆ ಇದೆ ಆದರೆ ದುರಾದೃಷ್ಟವಶಾತ್ ನೀವು ಪ್ರಸ್ತಾವಿಸಿದ ಇನ್ನುಳಿದ ಅಂಶಗಳೆಲ್ಲ ಕೇವಲ ಬೂಟಾಟಿಕೆ ಹಾಗೂ ಅವುಗಳಲ್ಲಿ ಹೊಸತೇನೂ ಇಲ್ಲ ಅನ್ನುವುದನ್ನ ನಿಮಗೆ ತಿಳಿಸಲು ಇಚ್ಛಿಸುತ್ತೇನೆ. ಒಂದೊಂದಾಗಿ ಅವುಗಳನ್ನ ವಿಶ್ಲೇಷಿಸುವ.

ಮೊದಲನೆಯದಾಗಿ 'ಜನ ಧನ' ಯೋಜನೆ. ಬ್ಯಾಂಕ್ ಅನ್ನುವ ಸಂಸ್ಥೆ ಸೂಟು ಬೂಟು ಹಾಕಿ ಟೈ ಕಟ್ಟಿದವರಿಗಷ್ಟೇ ಸೀಮಿತ, ಅದರ ಒಳ ಹೊಕ್ಕುವುದು ಅತ್ತಲಾಗಿರಲಿ ಆವರಣದ ಹತ್ತಿರ ಸುಳಿಯುವುದೂ ಮಹಾ ಅಪರಾಧ ಎನ್ನುವ ಭ್ರಮೆಯಲ್ಲಿದ್ದ ಶ್ರೀಸಾಮಾನ್ಯ ಭಾರತೀಯರನ್ನ ನಿರ್ಭಿಡೆಯಾಗಿ ನೇರ ವ್ಯವಸ್ಥಾಪಕರ ಕೊಠಡಿಯೊಳಗೆ ಅಳುಕಿಲ್ಲದೆ ಹೊಕ್ಕು ಸರಳ ನಿಬಂಧನೆಗಳನ್ನ ಸ್ಥಳದಲ್ಲಿಯೆ ಪೂರೈಸಿ "ಧನ"ವನ್ನ ಸಾಮಾನ್ಯ "ಜನ"ರೂ ತಮ್ಮ ಅಗತ್ಯಗಳಿಗೆ ಬಳಸುವಂತೆ ಮೊದಲು ಪ್ರೋತ್ಸಾಹಿಸಿ 'ಸಾಲಮೇಳ'ದಂತಹ ದಿಟ್ಟ ಯೋಜನೆಯೊಂದನ್ನ ಆರಂಭಿಸಿ ಇಂದಿಗೆ ಕಾಲು ಶತಮಾನಕ್ಕೆ ಹಿಂದೆಯೆ ಬಡ ಭಾರತೀಯರ ಎದೆಯಲ್ಲೂ ಕೆಚ್ಚನ್ನ ತುಂಬಿದ್ದು ನಮ್ಮದೆ ಊರಿನ ವಾಚಾಳಿ ರಾಜಕಾರಣಿ ಜನಾರ್ಧನ ಪೂಜಾರಿ. ಅವರು ಆಗ ರಕ್ತ ಮಾಂಸ ತುಂಬಿ ಜಾಗೃತಗೊಳಿಸಿದ ಜನಪ್ರಿಯ ಯೋಜನೆಗೆ ಮತ್ತೆ ಸುಣ್ಣ ಬಣ್ಣ ಹೊಡೆದು ಇಂದಿನ ಪ್ರಧಾನಿಗಳು ತಮ್ಮ ಕಿರೀಟಕ್ಕೊಂದು ಗರಿಯಂತೆ ಸಿಕ್ಕಿಸಿಕೊಳ್ಳುತ್ತಿದ್ದಾರೆ ಅನ್ನುವುದು ನಿಮ್ಮ ಗಮನಕ್ಕೆ. 'ಓಡಿ'ಯಂತಹ ಹೆಚ್ಚುವರಿ ಸೌಲಭ್ಯಗಳ ತುರಾಯಿಯನ್ನ ಹಳೆಯ ಯೋಜನೆಗಳೊಂದಿಗೆ ಅಡಕ ಮಾಡಿದ ಕ್ಷಣ ಅದು ಹೊಸತಾಗುವುದಿಲ್ಲ. ಇದರಲ್ಲಿ ನಮ್ಮ ಹಾಲಿ ಪ್ರಧಾನಿಗಳ ಹೆಚ್ಚುಗಾರಿಕೆ ಅಷ್ಟೇನೂ ಇಲ್ಲ.

ಇನ್ನು ಎರಡನೆಯದಾಗಿ 'ಮೇಕ್ ಇನ್ ಇಂಡಿಯಾ' ಅಭಿಯಾನ. ನಿಮ್ಮ ಮಾಹಿತಿಗಾಗಿ ಒಂದು ವಿಷಯವನ್ನ ನಾನು ಪ್ರಸ್ತಾವಿಸಬಯಸುತ್ತೇನೆ. ಅತಿ ಸೂಕ್ಷ್ಮ ಜೋಡಣೆಗಳಿರುವ ಎಲೆಕ್ಟ್ರಾನಿಕ್ ಉಪಕರಣಗಳ ಹೊರತು ಇಂದು ನಮ್ಮ ದೈನಂದಿನ ಅಗತ್ಯಗಳಿಗೆ ಪೂರಕವಾಗಿರುವ ಸಾಧನ ಸಲಕರಣೆಗಳನ್ನೆಲ್ಲ ನಾವೆ ನಮ್ಮ ನೆಲದಲ್ಲಿಯೆ ಉತ್ಪಾದಿಸುತ್ತಿದ್ದೇವೆ. ಇವು ಇಲ್ಲಿನ ಅಗತ್ಯಗಳಿಗೆ ತಕರಾರಿಲ್ಲದೆ ಒದಗಿ ಬರುತ್ತಿರೋದು ಸತ್ಯವೆ ಆಗಿದ್ದರೆ ಪರ ದೇಶದ ರಫ್ತಿಗೂ ಇವುಗಳು ಲಾಯಕ್ಕಾಗಿಯೆ ಇರುತ್ತವೆ. ಆಹಾರ ಹಾಗೂ ಕ್ಶೀರೋತ್ಪಾದನೆಯಲ್ಲೂ ನಾವು ಭಾರತೀಯರು ಸ್ವಾವಲಂಬಿಗಳಾಗಿದ್ದೇವೆ, ಔಷಧೋತ್ಪಾದನೆಯಲ್ಲೂ ನಾವೀಗ ಅದ್ವಿತೀಯರು. ಆರೋಗ್ಯ ಕ್ಷೇತ್ರದಲ್ಲಿ ಅಮೇರಿಕೆಯ ಗುಣ ಮಟ್ಟದ ಕ್ಲಿಷ್ಟಕರ ಚಿಕಿತ್ಸೆಗಳು ನಮ್ಮಲ್ಲಿ ಅಲ್ಲಿನ ದರದ ಹತ್ತನೆ ಒಂದು ಭಾಗಕ್ಕೆ ಇಂದು ಲಭ್ಯ. ಅಂಗಾಂಗಳ ಜೋಡಣೆಯಲ್ಲಿ ನಾವು ಪ್ರಪಂಚದ ಇನ್ಯಾವುದೆ ದೇಶದ ತಜ್ಞ ವೈದ್ಯರಿಗೂ ಸೆಡ್ಡು ಹೊಡೆಯುವ ಮಟ್ಟಕ್ಕೆ ಬೆಳೆದಿದ್ದೇವೆ. ವಾಹನ ಹಾಗೂ ಅವುಗಳ ಬಿಡಿ ಭಾಗಗಳ ಉತ್ಪಾದನೆಯಲ್ಲೂ ಕ್ಷಮತೆಯನ್ನ ಕಳೆದ ಕಾಲು ಶತಮಾನಗಳಲ್ಲಿ ನಾವು ಸಾಧಿಸಿ ತೋರಿ ಆಗಿದೆ. ಇನ್ನೆಂತಾ ಮೇಕ್ ಇನ್ ಇಂಡಿಯಾ ಸ್ವಾಮಿ?

ಇನ್ನೇನಿದ್ದರೂ 'ಮೇಕ್ ಇನ್ ಇಂಡಿಯಾ'ದ ಹೆಸರಿನಲ್ಲಿ ಅಮೇರಿಕೆಯಿಂದ ಕಡೆಗೆ ನಾಳೆ ನಾವೆ ಕೊಳ್ಳಬೇಕಿರುವ ಶಸ್ತ್ರಾಸ್ತ್ರಗಳು, ಅಲ್ಲಿ ಗುಜುರಿಗೆ ಬಿದ್ದ ಇಲ್ಲಿ ಹೊಸತಾಗಿ ಬಳಕೆಯಾಗಬಹುದಾದ ಬೋಯಿಂಗ್ ಗುಜುರಿ ವಿಮಾನಗಳ ಮರು ದುರಸ್ತಿ ಹಾಗೂ ಆಧುನಿಕ ಕೃಷಿಯ ಹೆಸರಿನಲ್ಲಿ ಕೃಷಿಗೆ ಮಾರಕವಾದ ರಾಸಾಯನಿಕ ಕೀಟ ನಾಶಕ, ಗೊಬ್ಬರ ಹಾಗೂ ತಳಿ ಸಂವರ್ಧನೆಯ ಸೋಗಿನಲ್ಲಿ Bio Modified ಆಹಾರೋತ್ಪನ್ನಗಳ ವಿಕಾರಿ ಬೀಜಗಳನ್ನ, ಈಗಾಗಲೆ ಅಲ್ಲಿನವರಿಗೆ ಬೇಡವಾದ ಒಡೆದು ಗುಜುರಿಗೆ ಹಾಕಲು ಲಾಯಕ್ಕಾದ ಹಾಳಾದ ಹಡಗುಗಳನ್ನ ನಮ್ಮಲ್ಲಿಯೆ ನೌಕಾ ಪಡೆಗೆ ಮಾರಲು ಮೇಕ್'ಅಪ್ ಮಾಡುವ ನೆಪದಲ್ಲಿ ಇಲ್ಲಿಗೆ ಸಾಗ ಹಾಕಿ 'ಮೇಕ್ ಇನ್ ಇಂಡಿಯಾ' ಮಾಡಿ ಆಯ್ತು ಅಂತ ಹಲ್ಲು ಕಿರಿಯಬಹುದು. ಇದೆ ನೆಪದಲ್ಲಿ ಹೊಸತಾದ ಈ ಕೈಗಾರಿಕೆಗಳ ಗುಮ್ಮವನ್ನೆ ತೋರಿಸಿ, ರೈತರ ಭೂಮಿಯನ್ನ ಬಲವಂತವಾಗಿ ಹೊಸ ಯೋಜನೆಗಳಿಗೆ ಹಂಚುವ ಹೆಸರಿನಲ್ಲಿ ವಶ ಪಡಿಸಿಕೊಳ್ಳಬಹುದು.

ಗಣಪತಿ, ನಿಮಗೆ ನೆನಪಿದ್ದರೆ ಒಬಾಮಾ ತನ್ನ ವ್ಯಾಪಾರಿ ನಿಯೋಗದ ಜೊತೆ ಈ ಹಿಂದೆ ಅಧಿಕೃತವಾಗಿ ಭಾರತದ ಪ್ರವಾಸ ಕೈಗೊಂಡಾಗ ದೆಹಲಿಯಲ್ಲಿ Auto Expo ನಡೆಯುತ್ತಿತ್ತು. ಅಲ್ಲಿ ವಿಶ್ವದ ಅತಿ ಅಗ್ಗದ ಕಾರು ಟಾಟಾ ನ್ಯಾನೋ ಸವಾರಿ ಮಾಡಿ ಮೆಚ್ಚುಗೆ ಹಾಗೂ ಅಚ್ಚರಿಯನ್ನ ಅಮೇರಿಕೆಯ ಅಧ್ಯಕ್ಷರು ವ್ಯಕ್ತ ಪಡಿಸಿದ್ದರು. ಆದರೆ ಅದರಿಂದ ಭಾರತದ ವಾಹನೋದ್ಯಮಕ್ಕೆ ಆದ ಲಾಭವಾದರೂ ಏನು? ಅದಾಗಿ ವರ್ಷದ ಮೇಲಾಯ್ತು ನಮ್ಮ ನಾಡಿನಲ್ಲೂ ಹೊಸ ಸರಕಾರ ಅಸ್ತಿತ್ವಕ್ಕೆ ಬಂತು. ನಮ್ಮ ಪ್ರಧಾನಿಗಳ ಸವಾರಿಯೂ ಅಲ್ಲಿಗೆ ಹೋಗಿ ಬಂತು. 'ದ್ವಿ ಪಕ್ಷೀಯ' ಒಡಂಬಡಿಕೆಯ ಬುಡಬುಡಿಕೆ ಹೊಡೆಯುವ ಅಮೇರಿಕೆಯ ರಸ್ತೆಯನ್ನ ನಮ್ಮ ಒಂದಾದರೂ ನ್ಯಾನೋ ಕಾರು ಮುಟ್ಟಿತಾ?

ಅಷ್ಟು ದೂರ ಬೇಡ, ಇಂದು ಎಲ್ಲಾ ಬಹುರಾಷ್ಟ್ರೀಯ ವಾಹನೋದ್ಯಮಗಳ ದೈತ್ಯರು ಭಾರತದ ನೆಲದಲ್ಲಿಯೆ ಉತ್ಪಾದನೆಯನ್ನ ಆರಂಭಿಸಿದ್ದಾರೆ. ನಮ್ಮ ಸ್ಥಳಿಯ ಸರಕಾರಗಳೂ ಪೂರಕ ಪ್ರೋತ್ಸಾಹವನ್ನ ಅವಕ್ಕೆ ನೀಡಿವೆ. ಆದರೆ ದುರಂತದ ಪರಮಾವಧಿ ಎಂದರೆ ನಮ್ಮ ನೆರೆಯ ನೇಪಾಳ, ಬಾಂಗ್ಲಾ, ಪಾಕ್, ಮಾಲ್ಡೀವ್ಸ್ ಹಾಗೂ ಶ್ರೀಲಂಕಾದಲ್ಲಿ ಭಾರತದಲ್ಲಿ ಉತ್ಪಾದನೆಯಾದ ವಾಹನಗಳು ಅವು ಬಹುರಾಷ್ಟ್ರೀಯ ಕಂಪನಿಗಳ ಠಸ್ಸೆ ಹೊಂದಿದ್ದರೂ ಸಹ ಕಳಪೆ ಹಾಗೂ ದ್ವಿತಿಯ ದರ್ಜೆಯದು ಎನ್ನುವ ಭಾವ ದಟ್ಟವಾಗಿದೆ. ಪಾಕ್ ಹೊರತು ಪಡಿಸಿ ಇನ್ನುಳಿದ ನೆರೆಯ ದೇಶಗಳಲ್ಲಿ ಸುತ್ತುವಾಗ ಸ್ಥಳಿಯರ ಮಾತುಗಳಲ್ಲಿ ನಾನು ಇದನ್ನ ಗ್ರಹಿಸಿದ್ದೇನೆ. ಸುತ್ತಲ ಊರು ಗೆಲ್ಲದೆ ಅಮೇರಿಕೆಯ ಮಾರು ಗೆಲ್ಲಲು ಹೊರಟಿದ್ದ ನಮ್ಮ ಪ್ರಧಾನಿಯವರು ಅಲ್ಲಿಗೆ ಹೋಗಿ 'ಮೇಕ್ ಇನ್ ಇಂಡಿಯಾ'ದ ಮಂತ್ರ ಜಪಿಸಿದ ಕೂಡಲೆ ಅಲ್ಲಿ ನಮ್ಮವರ ಹೂಡಿಕೆಯ ಮಾವಿನ ಕಾಯಿ ಉದುರಲು ಸಾಧ್ಯವಿಲ್ಲ. ಮೊದಲೆ ಹೇಳಿದಂತೆ ನಮ್ಮವರ ಅಲ್ಲಿನ ಹೂಡಿಕೆಯ ಬಗ್ಗೆ ಆಗಿರುವ ಒಪ್ಪಂದದಲ್ಲಿಯೇ ಸ್ಪಷ್ಟತೆಯಿಲ್ಲ. ಸಾಲದ್ದಕ್ಕೆ ಮೇಕ್ ಇನ್ ಇಂಡಿಯಾ ಅಲ್ಲ ಈಗ ಬೇಕಾಗಿರೋದು ಈಗಾಗಲೆ ಮೇಡ್ ಇನ್ ಇಂಡಿಯಾದ ಮೊಹರು ಹೊತ್ತ ಮಾಲುಗಳಿಗೆ ಹೋದಲ್ಲಿಯೂ ಮಾರುಕಟ್ಟೆ ಸೃಷ್ಟಿಸಬೇಕಾಗಿರುವುದು ಇಂದಿನ ಜರೂರತ್ತು. ಈ ವಿಷಯದಲ್ಲಿ ಪ್ರಧಾನಿಯವರು ಸಾಧಿಸಿದ್ದೇನಾದರೂ ನಿಮಗೆ ಗೋಚರವಾಗಿದ್ದರೆ ದಯವಿಟ್ಟು ನಮಗೂ ಅದನ್ನ ತಿಳಿಸಿ.

ನಾವು ಸಕಲೆಂಟು ಉತ್ಪನ್ನಗಳ ರಫ್ತಿಗೆ ಸಮರ್ಥರಾಗಿದ್ದರೂ ಒಪ್ಪಂದಗಳ ಹೆಸರಿನಲ್ಲಿ ನಮ್ಮ ಕೈ ಕಟ್ಟಿ ಹಾಕಲಾಗಿದೆ ಅನ್ನುವುದು ನಿಮ್ಮ ಗಮನಕ್ಕೆ. ನಮ್ಮ ಆಹಾರೋತ್ಪನ್ನಗಳನ್ನ ಅಂತರ್ರಾಷ್ಟ್ರೀಯ ಮಾನದಂಡದ ಶುದ್ಧತೆ ಹಾಗೂ ಗುಣಮಟ್ಟದ ಜರಡಿಯಲ್ಲಿ ಸೋಸಿ ತಿರಸ್ಕರಿಸಲಾಗುತ್ತದೆ. ಹೀಗಾಗಿ ಅವಕ್ಕೆ ಅಮೇರಿಕೆಯಲ್ಲಿ ಮಾರಾಟವಾಗುವ ಭಾಗ್ಯವಿಲ್ಲ. ನಮ್ಮ ತಯಾರಿಯ ವಾಹನಗಳನ್ನ ಕಳಪೆ ಗುಣಮಟ್ಟದ ಹಣೆಪಟ್ಟಿ ಹಚ್ಚಿ ರಫ್ತಿಗೆ ತಡೆಯೊಡ್ಡಲಾಗುತ್ತಿದೆ ಹಾಗೂ ಇದರೆಲ್ಲದರ ಹಿಂದೆ ಅಮೇರಿಕನ್ ವ್ಯಾಪಾರಿ ಹಿತಾಸಕ್ತಿಗಳ ಪಿತೂರಿಯಿದೆ. ಇದನ್ನೆಲ್ಲ ಅರಿತೂ ಸಹ ನೀವು ಪ್ರಧಾನಿಯವರ ನಡೆಯನ್ನ ಸಮರ್ಥಿಸುವಿರಾದರೆ ಅದು ನಿಮ್ಮ ಆಲೋಚನೆಯ ಮಿತಿ ಅಷ್ಟೆ.

೪) ಇನ್ನು ಕಡೆಯದಾಗಿ ನೀವೆ ಹೇಳಿರುವಂತೆ ಆಶಾವಾದದ ನಿರಂತರತೆಯೊಂದು ನಮ್ಮೊಳಗೂ ಇದ್ದೇ ಇದೆ. ಪ್ರತಿಯೊಬ್ಬ ಆಳುವ ನರಿಯಿಂದಲೂ ನಮ್ಮಂತಹ ಆಳಿಸಿಕೊಳ್ಳುವ ಕುರಿಗಳು ಉತ್ತಮ ನಾಳೆಗಳ ನಿರೀಕ್ಷೆಯನ್ನೆ ಇಟ್ಟುಕೊಂಡಿರುತ್ತೇವೆ. ಆದರೆ 'ಬಾಯಲ್ಲಿ ಭಗವದ್ಗೀತೆ, ಬಗಲಲ್ಲಿ ದೊಣ್ಣೆಯೂ ಐತೆ' ಅನ್ನುವ ಮಾನ್ಯ ಪ್ರಧಾನಿಗಳ ನುಣ್ಣನೆಯ ಮಾತಿನ ನಟನೆ 'ದ್ವಿ ಪಕ್ಷೀಯ' ಬಾಂಧವ್ಯದ ಹೆಸರಿನಲ್ಲಿ ಅವರ ಆಪ್ತ ವಲಯದ ಕೆಲವೆ ಕೆಲವು ಕಡು ವ್ಯಾಪಾರಿ ಸಿರಿವಂತರ ಆಸ್ತಿಯ ನೂರಾರು ಕೋಟಿಗಳನ್ನ ಸಾವಿರಾರು ಕೋಟಿಗಳಾಗಿಸಬಹುದು ಅಷ್ಟೆ. ಸಂದೇಹದ ಬೆನ್ನು ಹತ್ತಿ ಕನಿಷ್ಠ ಮುಂಬರುವ ದುರಂತದ ಅರಿವಾದಾಗಲೂ ಬಾಯಿ ಹೊಲೆದುಕೊಂಡು ಕೂತಿದ್ದರೆ ನಾವು ನಮ್ಮಂತವರು ಕೋತಿಗಳಾಗಬಹುದು. ನಮ್ಮ ನಿಮ್ಮ ಭವ್ಯ ಭವಿಷ್ಯ ಇಷ್ಟೆ.


ಮಾನ್ಯ ಪ್ರಧಾನಿಯವರ ಖಾಸಗಿಕರಣದ ಮಂತ್ರದ ದಾಳಿಗೆ ನಾವೆಲ್ಲ ತುತ್ತಾಗಲು ಹೆಚ್ಚು ಕಾಲ ಬೇಕಿಲ್ಲ. ಅದರ ದುರಂತದ ಮುನ್ಸೂಚನೆಯನ್ನಷ್ಟೆ ನಾನಿಲ್ಲಿ ಕೊಡುವ ಪ್ರಯತ್ನ ಮಾಡಿದ್ದೇನೆ. ಒಪ್ಪುವುದು ಬಿಡುವುದು ನಿಮಗೆ ಬಿಟ್ಟ ವಿಚಾರ.

05 October 2014

ಮೊದಲು KFC ಕೊಳೆತ ಕೋಳಿ ತಿನ್ನಿ, ಆಮೇಲೆ ನಾರುವ ಹೊಟ್ಟೆಯನ್ನ COKE ಹಾಕಿ ತೊಳೆಯಿರಿ. ಆಗ ಭಾರತ ಸ್ವಚ್ಛ...........








ಅದೆಂದೋ ಅಮೇರಿಕಾದಲ್ಲಿ ಕೊಳೆತ ಕೋಳಿ ಮಾಂಸ ಭಾರತದ ಬೀದಿಗಳಲ್ಲಿ ಎಗ್ಗಿಲ್ಲದೆ KFC ಖದೀಮರು ಮೇಕಪ್ ಮಾಡಿ ಮಾರುತ್ತಲೇ ಔರೆ, ಗತಿಗೆಟ್ಟ ನಮ್ಮವರು ಅವರ ಅಡ್ಡೆಗಳಿಗೆ ಎಡತಾಕಿ ಅವನ್ನ ಮುಕ್ಕಿ ಮಹದಾನಂದದಿಂದ ಜೇಬು ಹಗೂರ ಮಾಡಿ ಕೊಳ್ಳುತಾರೆ. ಇದು ಅಹಂಕಾರಿ ಅಮೇರಿಕಾದ ಜೊತೆ ನಾವು ಮಾಡಿಕೊಂಡ ದ್ವಿ ಪಕ್ಷೀಯ ಒಪ್ಪಂದದ ಚಂದ. ತಮಗೆ ಬೇಡದ ಕಸವನ್ನ ಅವರು ನಮಗೆ ಮಾರ್ತಾರೆ, ಮತಿಗೆಟ್ಟ ನಾವದನ್ನ ಕೊಳ್ತೇವೆ.

"ಸ್ವಚ್ಛ ಭಾರತ ಅಭಿಯಾನ"ದಲ್ಲಿ ಮೊದಲು ಸ್ವಚ್ಛ ಮಾಡಬೇಕಾದದ್ದು ಅಲ್ಲಿ ಹೋಗಿ ಅವರನ್ನ ತಾರಾಮಾರ ಹೊಗಳಿ ಅವರ ಜೊತೆ ಒಪ್ಪಂದ ಮಾಡಿಕೊಂಡು ತನ್ನ ಚುನಾವಣೆಯ ಖರ್ಚು ಭರಿಸಿದ ಕಾಸಪ್ಪಗಳ ತಿಜೋರಿ ತುಂಬುವ ವ್ಯವಸ್ಥೆ ಮಾಡಿ ಬಂದ ಆಳುವ ಅತಿ ಬುದ್ಧಿವಂತನ ದೇಶವನ್ನೇ ಮಾರುವ ಕೊಳೆತ ಕುತಂತ್ರಿ ಮಂಡೆಯನ್ನ.

ಇಂತವರ ಬೀದಿ ಗುಡಿಸುವ ನಾಟಕಗಳೂ, ಅವನ್ನೆಲ್ಲಾ ನಿಜ ಅಂತ ತಾವೂ ನಂಬಿ ಇತರರನ್ನೂ ನಂಬಿಸುವ ಭಂಡತನಕ್ಕೆ ಇಳಿದಿರುವ ಹೊಗಳಿ ಹಾಡುವ ಬೆರ್ಚಪ್ಪಗಳೂ. ಥೂ.... ಗಲೀಜು. ಇಂತವರ ಯೋಗ್ಯತೆಗಷ್ಟು ಬೆಂಕಿ ಹಾಕ. ಸ್ಥಳಿಯ ಉತ್ಪಾದಕರ ಕಡೆಯಿಂದ KFC ಹಾಗೂ McDonalds ಕೋಳಿ ಮಾಂಸ ಖರೀದಿಸೋದಿಲ್ಲ. ಸುಗುಣ, ವೆಂಕೋಬ್ ನಂತಹ ಸಗಟು ಉತ್ಪಾದಕರಿಂದಲೂ ಅವರು ಮಾಂಸ ಖರೀದಿಸೋದಿಲ್ಲ ಅನ್ನೋದನ್ನ ಹಿಂದೆ "ಮಂಗಳ"ಕ್ಕೆ ಈ ಕುರಿತ ಒಂದು ಲೇಖನ ಬರೆಯುವಾಗ ಸದರಿ ಕಂಪನಿಗಳ help line ಸಂಪರ್ಕಿಸಿದಾಗ ಮೊದಲಿಗೆ ಈ ವಿಷಯ ಅರಿವಿಗೆ ಬಂತು.

ನಂತರ ಈ ವಿಷಯವನ್ನ googleಲಿಸಿದಾಗ ಕೆಲವು ದಿಗಿಲು ಹುಟ್ಟಿಸುವ ವಿಷಯಗಳು ಅರಿವಿಗೆ ಬಂತು. ಆಸ್ಟ್ರೇಲಿಯನ್ ಮೂಲದ ಆದರೆ ಅಮೇರಿಕದಲ್ಲಿ ಸದೃಢ ನೆಲೆ ಹೊಂದಿರುವ KFC ಅರ್ಥಾತ್ ಕೆಂಟುಕಿ ಫ್ರೈಡ್ ಚಿಕನ್ ಇಂದು ಜಗತ್ತಿನಾದ್ಯಂತ ತನ್ನ ಕಬಂಧ ಬಾಹುಗಳನ್ನ ಚಾಚಿರುವ ದೈತ್ಯ ಸಂಸ್ಥೆ. ಕೊಳ್ಳುಬಾಕ ಸಂಸ್ಕೃತಿಯ ಪರಾಕೇಷ್ಠೆಯಲ್ಲಿರುವ ಅಮೇರಿಕಾದ caned foodಗಳಲ್ಲಿ ಎಲುಬು ರಹಿತ ಮೃದುಲ ಕೋಳಿಯ ಎದೆ ಭಾಗದ ಮಾಂಸ ಬಳಕೆ ಆಗುತ್ತದೆ. ಇನ್ನುಳಿದಂತೆ ಇತರ ಅಂಗಾಂಗಗಳು ಅಮೇರಿಕೆಯಲ್ಲಿಯೇ ಇರುವ ಈ ಎರಡೂ ಅಂಗಡಿಗಳಲ್ಲಿ ಮಾರಾಟವಾಗುತ್ತವೆ.

ಆದಾಗ್ಯೂ ಉತ್ಪಾದನೆ ಅಲ್ಲಿನ ಬೇಡಿಕೆಗಿಂತ ಹೆಚ್ಚಾಗಿರುವಾಗ ಹುಟ್ಟಾ ವ್ಯಾಪಾರಿ ಮನೋಭಾವದ ಅಮೇರಿಕನ್ ಕಂಪನಿಗಳೆರಡು ಉಳಿಕೆ ಪಳಿಕೆಯನ್ನೆಲ್ಲ ಅತಿ ಶೈತ್ಯೀಕರಿಸಿ ಹಡಗುಗಳ ಮೂಲಕ ದಕ್ಷಿಣ ಏಷ್ಯಾ ಹಾಗೂ ಆಫ್ರಿಕಾದ ಬಡ ದೇಶಗಳಲ್ಲಿರುವ ತನ್ನ ಫ್ರಾಂಚೈಸಿಗಳಿಗೆ ರವಾನಿಸಿ ಕಾಸೆಣಿಸಿ ಕೊಳ್ಳುತ್ತವೆ.

ಹೀಗೆ ಕಳಿಸಿದ ಹಳಸಲು ಮಾಂಸ ಕೆಲವೊಮ್ಮೆ ಮೂರು ನಾಲ್ಕು ವರ್ಷ ಶೈತ್ಯದಲ್ಲಿದ್ದು ಅನಂತರ ಇಲ್ಲಿನ ಗ್ರಾಹಕರ ಹೊಟ್ಟೆ ಸೇರುವುದು ಮಾಮೂಲು.

ಜನಸಂಖ್ಯೆ ವಿಪರೀತವಾಗಿರುವ ಭಾರತ, ಬಾಂಗ್ಲಾ ಹಾಗೂ ಚೀನಾದ ಯುವ ಗ್ರಾಹಕರೆ ಸಾಮಾನ್ಯವಾಗಿ ಈ ಕಂಪನಿಗಳ ಉದ್ದೇಶಿತ ಗುರಿ. ಅಪರೂಪಕ್ಕೆ ಸದರಿ ಹುಳವಾಗಿ ಮಿಜಿಗುಟ್ಟುವ ಪ್ರಕರಣಗಳು ಮೇಲಿನ ಶಾಂಘೈ ಉದಾಹರಣೆಯಂತೆ ಬೆಳಕಿಗೆ ಬರುತ್ತವೆ. ಹುರಿದ KFC ಕೋಳಿ ಕಾಲಿನ ಸುಟ್ಟ ಪದರವನ್ನ ತಿನ್ನುವ ಮೊದಲೊಮ್ಮೆ ತೆಗೆದು ನೋಡಿದರೆ ನಿತ್ಯ ನಮ್ಮಲ್ಲೂ ಇಂತಹ ನೂರು ಪ್ರಕರಣಗಳು ಬೆಳಕು ಕಂಡಾವು.

ಇದು ಕೋಳಿ ಮಾಂಸದ ಕಥೆಯಾಯಿತು. ಇನ್ನು Metro cash and carry ಹಾಗೂ Totel mallಗಳಲ್ಲಿ ಬಿಕರಿಯಾಗುವ ಮಂಜುಗಟ್ಟಿದ ಕುರಿ ಹಾಗೂ ದನದ ಮಾಂಸಗಳದ್ದೂ ಅದೇ ಕಥೆ.

ಅಮೇರಿಕಾದಲ್ಲಿ ತ್ಯಾಜ್ಯವಾದ ಅವು ಇಲ್ಲಿ ರಾಜಾರೋಷದಿಂದ ಬಿಕರಿಯಾಗುತ್ತವೆ. ಎಷ್ಟೆಂದರೂ ನಮ್ಮ ಮಂದಿಯ ಜೀವ ಅಷ್ಟೊಂದು ಅಗ್ಗ ನೋಡಿ.

ಅಂತರಂಗದ ಕಪಟವೂ ಬಾಹ್ಯದ ಬೃಹನ್ನಾಟಕವೂ.... ಹೀಗೆ ಆದರೆ ಭಾರತ ಖಂಡಿತ ಸ್ವಚ್ಛವಾಗುತ್ತದೆ ಆದರೆ ಆರ್ಥಿಕವಾಗಿ ಹಾಗೂ ವೈಚಾರಿಕವಾಗಿ!

ಯಾವುದೆ ಒಂದು ಸಂಗತಿ ಅಥವಾ ವ್ಯಕ್ತಿಯ ಬಗ್ಗೆ ಸಹಜವಾಗಿ ಮೂಡುವ ನೈಜ ಅಭಿಪ್ರಾಯ ಅಥವಾ ಅವರ ಬಗ್ಗೆ ಅಭಿಪ್ರಾಯ ರೂಪಿಸುವುದರ ನಡುವೆ ಅಗಾಧವಾದ ವ್ಯತ್ಯಾಸವಿದೆ. ಈಗ ದೃಶ್ಯ ಮಾಧ್ಯಮಗಳ ಅಟ್ಟಹಾಸ ಮಿತಿ ಮೀರಿರುವ ದಿನಮಾನದಲ್ಲಿ ನಮ್ಮ ಮಾನ್ಯ ಪ್ರಧಾನಿಗಳ ಪ್ರಭಾವಳಿಯನ್ನ ತಾರಾಮಾರ ಹೆಚ್ಚಿಸುವುದರಲ್ಲಿ 'ಕಾಸಿಗಾಗಿ ಸುದ್ದಿ ಮಾರುವ' ಬಹುತೇಕ ಟಿವಿ ವಾಹಿನಿಗಳು ನಿರತವಾಗಿರೋದು ಬಹಿರಂಗ ಸತ್ಯ. ಅವರ ಪ್ರಭಾವ ಹೆಚ್ಚಿದಷ್ಟೂ ಅದರ ಮೇಲೆ ಬಂಡವಾಳ ಹೂಡಿರುವ ಭಂಡರ ತಿಜೋರಿ ಮುಂದೆ ತುಂಬಿಯೆ ತುಂಬುತ್ತದೆ.


ಈ ನಡುವೆ ಪ್ರಧಾನಿಯ ಅಧಿಕೃತ ಪ್ರವಾಸಗಳನ್ನ ಜನತೆಗೆ ಮುಟ್ಟಿಸುವ ಮಾಧ್ಯಮಗಳ ಮಂದಿಯನ್ನ ಸರಕಾರಿ ವೆಚ್ಚದಲ್ಲಿ ನಿಗದಿತ ದೇಶಗಳಿಗೆ ಕರೆದೊಯ್ಯುವ ಪದ್ದತಿಯನ್ನ ನೂತನ ಪ್ರಧಾನಿಗಳು ಅಧಿಕಾರಕ್ಕೆ ಏರಿದ ನಂತರ ಕೇಂದ್ರ ಸರಕಾರ ಕೈ ಬಿಟ್ಟಿದೆ. ಹಾಗಂತ ಪತ್ರಕರ್ತರು ಅಲ್ಲಿಗೆ ಹೋಗಲಿಲ್ಲವ? ಹೋದರು ಬಾರಿ ಬಾರಿಗೂ ಹೋದರು. ಭೂತಾನ್ ಹಾಗೂ ನೇಪಾಳಕ್ಕೆ ಅದಾನಿ ಕಂಪನಿ ಪ್ರಾಯೋಜಿಸಿದ ವಿಮಾನ ಹಾಗೂ ವಸತಿಯ ಹಂಗಿನಲ್ಲಿ, ಬ್ರಿಕ್ಸ್, ಜಪಾನ್ ಹಾಗೂ ಅಮೇರಿಕೆಗೆ ರಿಲಯನ್ಸ್ ಕಂಪನಿಯ ಪ್ರಾಯೋಜಕತ್ವದಲ್ಲಿ! ಅವರ ಆತಿಥ್ಯ ಹಾಗೂ ಉಡುಗೊರೆಯ ಹಂಗಿನಲ್ಲಿ ಬಿದ್ದವರು ಅದಿನ್ನೆಂತಾ ವರದಿಗಾರಿಕೆ ಮಾಡಿಯಾರು ಎನ್ನುವುದು ಅವರ ವರದಿಯನ್ನ ಅನುಸರಿಸಿದವರ ಗ್ರಹಿಕೆಗೆ ಬಿಟ್ಟ ವಿಚಾರ. ಪ್ರಧಾನಿಯವರ ಯೋಚನೆ ಬಹಳ ಸರಳ ಅತ್ತ 'ನೋಡಿ ನಾವು ಸರಕಾರದ ಹಣ ಉಳಿಸಿದೆವು!' ಅಂತ ಬೀಗುವುದು. ಇತ್ತ ಅವರನ್ನ ಮೆರೆಸುತ್ತಿರುವವರ ಎಂಜಲು ತಿಂದ ಇವರು ಪತ್ರಕರ್ತರು ಎಂಬ ಆರೋಪ ಹೊತ್ತ ಬಿಕನಾಸಿಗಳು ದ್ವಿಪಕ್ಷೀಯ ಒಪ್ಪಂದದ ಹೆಸರಿನಲ್ಲಿ ಆದ ಅನಾಹುತಗಳನ್ನೆಲ್ಲ ತಿಪ್ಪೆ ಸಾರಿಸಿ ಸುಮ್ಮನಾಗುವುದು. ಒಂದೆ ಕಲ್ಲಿಗೆ ಎರಡು ಹಕ್ಕಿಯನ್ನ ಹೊಡೆದಂತಾಯ್ತು.


ಇನ್ನು ಅಮೇರಿಕಾದ ಜೊತೆಗಿನ ದ್ವಿಪಕ್ಷೀಯ ವ್ಯಾಪಾರಿ ಒಪ್ಪಂದಗಳ ಕುರಿತ ವಿಷಯದ ಬಗ್ಗೆ, ಇದು ನಿಜಾರ್ಥದಲ್ಲಿ "ದ್ವಿಪಕ್ಷೀಯ" ಹೂಡಿಕೆ ಆಗಬೇಕೆ ಹೊರತು ಈ ಕೊಡು-ಕೊಳ್ಳುವಿಕೆಯಲ್ಲಿ ಅವರು ಮಾತ್ರ ಕೊಟ್ಟು ನಾವು ಕೊಳ್ಳುವ ಈರಭದ್ರರಾಗುವ ಅಗತ್ಯವಿರಲಿಲ್ಲ. ದುರಾದೃಷ್ಟಕ್ಕೆ ಈಗ ಆಗುತ್ತಿರೋದು ಅದೆ. ಸದ್ಯದ ಅಮೇರಿಕಾ ಭೇಟಿಯಲ್ಲಿ ಪ್ರಧಾನಿ ಎಸಗಿ ಬಂದ ದೊಡ್ಡ ಪ್ರಮಾದವೊಂದರ ಬೆಲೆಯನ್ನ ಸದ್ಯದಲ್ಲಿಯೆ ಬಡ ಭಾರತೀಯರು ಹೊರಲಿದ್ದಾರೆ. ಜೆನೆರಿಕ್ ಔಷಧಿಗಳ ಅನ್ವೇಷಣೆ ಹಾಗೂ ಉತ್ಪಾದನೆಯಲ್ಲಿ ಭಾರೆತೀಯ ಪೇಟೆಂಟ್'ಗಳಿಗೆ ಈ ಒಪ್ಪಂದದ ಪ್ರಕಾರ ಇನ್ನು ಮುಂದೆ ಯಾವುದೆ ಅವಕಾಶವಿರುವುದಿಲ್ಲ. ಇದರ ಅರ್ಥ ಔಷಧಿ ಉತ್ಪಾದನೆಯ ಹಕ್ಕುಸಾಮ್ಯ ಭಾರತೀಯ ಮಾರುಕಟ್ಟೆಗಳ ಪಾಲಿಗೆ ಅಮೇರಿಕನ್ ಮರ್ಜಿಯನ್ನ ಅನುಸರಿಸಬೇಕಾಗುತ್ತದೆ. ಅನಗತ್ಯವಾದ ಈ ಬೌದ್ಧಿಕ ಗುಲಾಮಗಿರಿ ಹಾಗೂ ಕೊಳ್ಳುವ ಅವಲಂಬನೆ ಭಾರತೀಯ ಮೂಲದ ಕೆಲವೆ ಕೆಲವು ಅಮೇರಿಕನ್ ಕಂಪನಿಗಳ ತಿಜೋರಿ ತುಂಬಿಸುತ್ತವೆ. ಅಗ್ಗದ ಉತ್ಪಾದನೆಯ ಔಷಧಿಗಳನ್ನ ತನ್ನ ನೆಲದಲ್ಲಿಯೆ ಉತ್ಪಾದಿಸಲು ಅವಕಾಶವಿದ್ದರೂ ಅನ್ವೇಷಣೆಗೆ ಮೂಲದಲ್ಲಿಯೆ ಭಾರತದ ಹರಿವ ನೀರಿಗೆ ಅಮೇರಿಕನ್ ದೊಣೆ ನಾಯಕರ ಒಪ್ಪಿಗೆ ಖಡ್ಡಾಯವಾಗುವುದರಿಂದ ನಿರ್ಬಂಧ ಬೀಳುವ ಕಾರಣ ಭಾರತೀಯ ಗ್ರಾಹಕರು ಅತಿ ಹೆಚ್ಚಿನ ಬೆಲೆಗೆ ಅವನ್ನ ಖರೀದಿಸಿ ದಿವಾಳಿ ಏಳಬೇಕಾಗುತ್ತದೆ. ಇದರ ದೂರಗಾಮಿ ಪರಿಣಾಮಗಳಂತೂ ಇನ್ನೂ ಭೀಕರ.


ಇನ್ನು ಸದರಿ ಪ್ರವಾಸದಲ್ಲಿ ನಮ್ಮ ದೇಶದಲ್ಲಿ ಅಮೇರಿಕನ್ ಹೂಡಿಕೆಗಳನ್ನ ಮುಕ್ತವಾಗಿರಸಲಾಗಿದೆಯೆ ಹೊರತು ಅವರ ನೆಲದಲ್ಲಿ ನಮ್ಮ ಹೂಡಿಕೆಯ ಬಗ್ಗೆ ಯಾವುದೆ ಸುಳಿವಿಲ್ಲ. ಆದ ಒಪ್ಪಂದದ ನಿಗೂಢತೆಯನ್ನ ಪರಿಶೀಲಿಸಿದಾಗ ಇದು ಶೇಕಡ ಇಪ್ಪತ್ತನ್ನೂ ಮೀರಿಲ್ಲ ಅನ್ನುವುದೊಂದು ದುರಂತ. ನಮ್ಮ ಆಹಾರೋತ್ಪನ್ನಗಳು ( ಬಹುತೇಕ ಭಾರತೀಯ ಅಮೇರಿಕನ್ನರೆ ಅವುಗಳಿಗೆ ಅಲ್ಲಿ ಗ್ರಾಹಕರು.), ಭಾರತೀಯ ವಸ್ತ್ರಗಳು ಹಾಗೂ ಕೆಲವು ಆಯುರ್ವೇದಿಕ್ ಔಷಧಿಗಳನ್ನ ಇದು ಒಳಗೊಂಡಿದೆ ಅಷ್ಟೆ ಆದರೆ ಇದರ ರಫ್ತು ನೀತಿ ನಿಯಮಾವಳಿಗಳು ಅತ್ಯಂತ ಕಠಿಣವಾಗಿವೆ. ಈ ಒಪ್ಪಂದದ ಪ್ರಕಾರ ಬಾಕಿ ಎಂಬತ್ತರಷ್ಟು ಹೂಡಿಕೆ ಅಮೇರಿಕಾದಿಂದ ಆಗುತ್ತಿದೆ ಹಾಗೂ ಈ ಹೂಡಿಕೆಯಿಂದಾಗುವ ಅಮದಿನ ಮೇಲೆ ಯಾವುದೆ ಕಠಿಣ ನಿಯಮಗಳನ್ನ ಅನ್ವಯಿಸಿಯೆ ಇಲ್ಲ!


ಭಾರತದ ರಕ್ಷಣಾ ಕ್ಷೇತ್ರದ ಮೇಲೆ ಅಮೇರಿಕನ್ ಸಮರೋತ್ಪನ್ನಗಳ ಏಕಸಾಮ್ಯವಾಗುವಂತೆ ನಿಯಮಗಳನ್ನ ರೂಪಿಸಲಾಗಿದೆ. ಏಕ ಪಕ್ಷೀಯವಾಗಿ ಹೇರಿಕೆಯಾದಂತಿರುವ ಇದರನ್ವಯ ದೇಶೀಯವಾಗಿ ನಾವು ಇದೂವರೆಗೂ ತಯಾರಿಸುತ್ತಿದ್ದ ಅನೇಕ ಸ್ಥಳಿಯ ಆಯುಧಗಳನ್ನ ಇನ್ನು ಮುಂದೆ ಖಡ್ಡಾಯವಾಗಿ ಉತ್ಪಾದಿಸುವಂತಿಲ್ಲ! ನಮ್ಮ ಯುದ್ದೋಪಕರಣಗಳ ಬೇಡಿಕೆಯನ್ನ ಪೂರೈಸುವ ಜವಾಬ್ದಾರಿ ಅಮೇರಿಕಾ ವಹಿಸಿಕೊಂಡಾಗಿದೆ. ತಮಾಷೆ ಎಂದರೆ ಇದೆ ಅಮೇರಿಕಾ ಸೌದಿಗೆ ಇವೆ ಯುದ್ದೋಪಕರಣಗಳನ್ನ ಮಾರುತ್ತದೆ. ಪಾಕಿಸ್ತಾನಕ್ಕೆ ಹಣದ ಅನುದಾನ ಕೊಟ್ಟಂತೆ ಮಾಡಿ ಅವರು ಅದೆ ಹಣದಿಂದ ತನ್ನ ಯುದ್ದೋಪಕರಣಗಳನ್ನ ಖರೀದಿಸುವಂತೆ ಒಡಂಬಡಿಕೆ ಮಾಡಿಕೊಳ್ಳುತ್ತದೆ. ಇವೆರಡೂ ದೇಶಗಳು ಅಮೇರಿಕಾದಿಂದ ಖರೀದಿಸಿದ ಶಸ್ತ್ರಾಸ್ತ್ರಗಳು ಉಗ್ರಗಾಮಿಗಳಿಗೆ ಎಟುಕುತ್ತವೆ. ಗಡಿಯಲ್ಲಿ ಜಪ್ತಾಗುವ ಎಲ್ಲಾ ಕಲೆಶ್ನಿಕೋವ್ ಹಾಗೂ ಗ್ರನೇಡುಗಳ ಮೇಲೆ "ಇದು ಅಮೇರಿಕನ್ ಸೈನ್ಯದ ಆಸ್ತಿ!" ಎನ್ನುವ ಠಸ್ಸೆಯನ್ನ ಇದುವರೆಗೂ ನೋಡುತ್ತಾ ಇದ್ದ ನಮ್ಮ ಸೈನಿಕರು ಅವುಗಳಿಗೆ ಎದುರು ಜವಾಬು ಕೊಡುತ್ತಾ ತಮ್ಮ ಎದೆಯೊಡ್ಡುತ್ತಿದ್ದವರು, ಇನ್ನು ಮುಂದೆ ಅದೆ ಅಮೇರಿಕನ್ ಶಸ್ತ್ರಾಸ್ತ್ರಗಳನ್ನ ಹೊತ್ತು ಅವರೊಂದಿಗೆ ಕಾದಾಡಬೇಕಂತೆ!


ಇನ್ನು ಅಮೇರಿಕೆಗೆ ಸಾಗುವ ಮೊದಲೆ ಮಾನ್ಯ ಪ್ರಧಾನಿಗಳು ಮಾಡಿಕೊಂಡ ವಿದೇಶಾಂಗ ನೀತಿಯ ಎಡವಟ್ಟುಗಳು ಅನೇಕ. ಬಲಾಢ್ಯ ಚೀನಾವನ್ನ ಅನಗತ್ಯವಾಗಿ ಜಪಾನಿನಲ್ಲಿ ಕೆಣಕಿದ್ದು ಪ್ರಮಾದ. ಅವರಷ್ಟೆ ಕುತಂತ್ರದಿಂದ ಅವರನ್ನ ಎದುರಿಸಬೇಕಿತ್ತೆ ಹೊರತು ಅವರನ್ನ ಬಹಿರಂಗವಾಗಿ ಪ್ರಚೋದಿಸಿ ಅಲ್ಲ. ಅಷ್ಟಕ್ಕೂ ವಿದೇಶಾಂಗ ಸಚಿವೆಯನ್ನ ತನ್ನೊಂದಿಗೆ ಕರೆದೊಯ್ಯದೆ ತಮಗಿಂತ ಮೊದಲೆ ಅಲ್ಲಿಗೆ ಅಟ್ಟಿ ತನಗಿಂತ ಮೊದಲು ಆಕೆ ಇಲ್ಲಿಗೆ ಮರಳಿ ಬಂದು ತಮ್ಮನ್ನ ಆಹ್ವಾನಿಸುವಂತೆ ಮಾಡಿದ್ದು ಸರ್ವಾಧಿಕಾರದ ಲಕ್ಷಣ. ದೇಶದ ಆಂತರಿಕ ಹುಳುಕನ್ನ ಜಾಗತಿಕವಾಗಿ ಅಲ್ಲಿ ಪ್ರದರ್ಶಿಸಿದಂತಾದದ್ದು ಮಾತ್ರ ದುರಂತ. ಇದೆ ಚಾಳಿಯನ್ನ ಪ್ರಧಾನಿಗಳು ನೇಪಾಳ ಹಾಗೂ ಭೂತಾನಿನಲ್ಲೂ ಅನುಸರಿಸಿದ್ದರು.


ಇನ್ನು "ಸ್ವಚ್ಛ ಭಾರತ ಅಭಿಯಾನ" ಎಂಬ ಹಾಸ್ಯಾಸ್ಪದ ಪ್ರಹಸನದ ಕುರಿತು ಹೇಳುವುದೆ ವ್ಯರ್ಥ. ಇಂತಹ ಯಾವುದೆ ಕರೆ ತೋರಿಕೆಗಿಂತ ಹೆಚ್ಚು ಆತ್ಮಗತವಾಗಬೇಕು ಹಾಗೂ ಈ ಆತ್ಮ ಸಮರ್ಪಣೆ ಯಾವತ್ತೂ ಖರ್ಚಿಲ್ಲದ ಸೇವೆಯಾಗಿರ ಬೇಕಾದದ್ದು ಅಪೇಕ್ಷಣೀಯ. ಒಪ್ಪೊತ್ತಿನ ಶಾಸ್ತ್ರೀಜಿಯವರ ಕರೆ ಅಂತಹದ್ದು. ಅಲ್ಲಿ ಸರಕಾರ ನಯಾಪೈಸೆ ಖರ್ಚು ಮಾಡಿರಲಿಲ್ಲ. ಕೇವಲ ಅವರ ಬಹಿರಂಗ ಕರೆ ಮಾತ್ರ ಹೊರಟಿತ್ತು, ದೇಶ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿತ್ತು. ಆದರೆ ಇಂದಿನ ಅಭಿಯಾನಕ್ಕೆ ಘನ ಸರಕಾರ ಅಧಿಕೃತವಾಗಿಯೆ ೧೬೭ ಕೋಟಿ ರೂಪಾಯಿಗಳನ್ನ ಪ್ರಚಾರಾಂದೋಲನದ ನೆಪದಲ್ಲಿ ಸುರಿದಿದೆ! ದೇಶದಾದ್ಯಂತ ಟಿವಿ ಹಾಗೂ ಸಿನೆಮಾ ಮಂದಿರಗಳ ಸೈಡ್ ರೀಲ್'ಗಳಲ್ಲಿ ತೋರಿಸುತ್ತಿರುವ ಇದರ ಜಾಹಿರಾತಿನ ಖರ್ಚು ಪ್ರತ್ಯೇಕ ಅದರ ಅನುದಾನ ಇನ್ನಷ್ಟೆ ಅಂದಾಜಿಸಬೇಕಾಗಿದೆ!.


ಹಾಗಂತ ಈ ಕರೆ ಸಾರ್ಥಕವಾಯಿತ? ಇಲ್ಲ. ಮೂಲಭೂತ ಸಿದ್ಧತೆಗಳಾದ ಬೀದಿಗೊಂದು ಕಸದ ತೊಟ್ಟಿ ಅಳವಡಿಕೆ, ಅಗತ್ಯ ಸಂಖ್ಯೆಯ ಪೌರಕಾರ್ಮಿಕರ ನೇರ ನೇಮಕ, ಸಂಗ್ರಹಿತ ಕಸದ ಸುಧಾರಿತ ವಿಲೇವಾರಿಯ ಕುರಿತು ಯಾವುದೆ ಖಚಿತ ಯೋಜನೆಯನ್ನೆ ರೂಪಿಸದೆ ಕೇವಲ ಮೇಕಪ್ ಹಚ್ಚಿಕೊಂಡು ಹತ್ತು ನಿಮಿಷ ರಸ್ತೆ ಗುಡಿಸಿದ ನಾಟಕವಾಡಿದ ಪ್ರಧಾನಿ ಅದೇನನ್ನ ಸಾಧಿಸಿದರೋ ಮೆದುಳಿದ್ದವರಿಗೆ ಅರ್ಥವಾಗಿರಲಾರದು. ಪೂರ್ವ ಸಿದ್ಧತೆಯೆ ಇಲ್ಲದ ಈ ಅಗ್ಗದ ನಾಟಕಗಳಿಂದ, ಅದಕ್ಕೆ ಅಂಧರಂತೆ ಭೋಪರಾಕು ಹಾಕುವುದರಿಂದ ಭಾರತ ಖಂಡಿತ ಸ್ವಚ್ಛವಾಗಲಾರದು.


ನಿರಾಧಾರವಾದ 'ಆಧಾರ್ ಕಾರ್ಡ್'ನ್ನ ವಿರೋಧಿಸಿಕೊಂಡೆ ಗದ್ದುಗೆಗೇರಿದ ಎಕ್ಕಡದ ನಾಲಗೆಯ ಈ ಆಳುವ ಸರಕಾರ ಈಗ ಅದೆ ದುಷ್ಟ ಯೋಜನೆಯನ್ನ ಆಲಂಗಿಸಿ ನಮ್ಮೆಲ್ಲರ ವಯಕ್ತಿಕ ಮಾಹಿತಿಗಳನ್ನ ಅಮೇರಿಕೆಯ ಆಡಳಿತಕ್ಕೆ ಅಲ್ಲಿನ ವ್ಯಾಪಾರಿ ಹಿತಾಸಕ್ತಿಗಳಿಗೆ ಅಡ ಹಾಕ ಹೊರಟಿದೆ. ಮುಂದೆ ಇದರ ವಿಶ್ಲೇಷಣೆಗೆ ಇಳಿಯುವ ಅಲ್ಲಿನ ಸರಕಾರ ಹಾಗೂ ವ್ಯಾಪಾರಿ ಕಂಪನಿಗಳು ಹೀಗೆ ಮುಂದುವರೆದಲ್ಲಿ ನಾವು ಉಣ್ಣುವ ಊಟ, ತೊಡುವ ದಿರಿಸು ಹಾಗೂ ನೋಡುವ ನೋಟಗಳನ್ನೂ ನಿರ್ದೇಶಿಸಲಿಕ್ಕಿವೆ. ಅಲ್ಲಿಗೆ ಈಗಾಗಲೆ ಬೆಳೆಬೆಳೆಯುತ್ತಾ ಅರೆ ಅಮೇರಿಕನ್ನರಾಗಿರುವ ನಮ್ಮ ಭಾರತೀಯ ಕೂಸುಗಳು ಪೂರ್ತಿ ಅಮೇರಿಕನ್ ಗುಲಾಮಗಿರಿಗೆ ಹಂತ ಹಂತವಾಗಿ ಇಳಿಯುವುದು ನಿಸ್ಸಂಶಯ.


ಹಾಗಂತ ಪ್ರಧಾನಿಯವರು ಏನನ್ನು ಸಾಧಿಸಲೆ ಇಲ್ಲವ? ಎಂದರೆ ಉತ್ತರ ಇಲ್ಲ, ಸಾಧಿಸಿದ್ದಾರೆ. ದಶಕಗಳಿಂದ ಬೀಡು ಬಿಟ್ಟಿದ್ದ "ಅಂತರ್ರಾಷ್ಟ್ರೀಯ ಕಾಶ್ಮೀರ ಶಾಂತಿ ಪರಿಪಾಲನ ನಿಗಾ ಸಮಿತಿ" ಎಂಬ ಬಿಳಿ ಆನೆಯನ್ನ ನಿಷ್ಠುರವಾಗಿ ದೆಹಲಿಯಿಂದ ಗಂಟು ಮೂಟೆ ಕಟ್ಟಿಸಿದ್ದಾರೆ. ಪೆಟ್ರೋಲ್ ಅಮದಿಗಾಗಿ ಇದ್ದ ಕೆಲವೆ ದೇಶಗಳ ಮೇಲಿನ ಅವಲಂಬನೆಯನ್ನ ಒತ್ತಡಗಳ ನಡುವೆಯೂ ಇನ್ನಿತರ ದೇಶಗಳಿಗೆ ವರ್ಗಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ತೈಲ ಬೆಲೆಗಳು ಸಣ್ಣ ಮಟ್ಟದಲ್ಲಾದರೂ ದೇಶೀಯವಾಗಿ ತಗ್ಗಿವೆ.



01 October 2014

ಜೀವಂತವಿರುವವರ ನೋವಿಗೆ ಕಿವಿಯಾಗದೆ ಕಲ್ಲ ಪೂಜಿಸುವ ಮೂಢ ಸರಕಾರ....



ಖಾದಿ ಹಾಗೂ ಗಾಂಧಿ ತಮ್ಮ ಮನೆಯ ಸ್ವಂತ ಆಸ್ತಿ ಎನ್ನುವಂತೆ ವರ್ತಿಸುವ ಕಾಂಗ್ರೆಸ್ ಸರಕಾರ ನಾಳೆ ಕಲ್ಲು ಹೃದಯದ ಆಳುವ ಮಂದಿ ಕೂತುಕೊಂಡು ದರ್ಬಾರು ನಡೆಸುವ ವಿಧಾನ ಸೌಧ ಹಾಗೂ ವಿಕಾಸ ಸೌಧದ ನಡುವೆ ತಾವೆ ಗೋರಿ ತೋಡಿ ಹೂತ ಗಾಂಧಿ ತತ್ವಗಳಿಗೆ ಅದೆ ಮೋಹನದಾಸ ಕರಮಚಂದ ಗಾಂಧಿಯವರ ಕಲ್ಲಿನ ವಿಗ್ರಹ ಕೂರಿಸಿ ಸಮಾಧಿ ಉದ್ಘಾಟಿಸಲಿದೆ. ತಾನು ನಿತ್ಯ ಗಾಂಧಿತತ್ವವನ್ನ ಮಣ್ಣಾಗಿಸುತ್ತಿರೋದನ್ನ ಸಾಂಕೇತಿಕವಾಗಿ ಈ ಮೂಲಕ ಸರಕಾರ ಸಾರ ಹೊರಟಿದೆ.

ಅದೆ ಕಳೆದ ಇಪ್ಪತ್ತ ಐದು ದಿನಗಳಿಂದ ಬೆಂಗಳೂರು ನಗರದ ಪುರಭವನದ ಮುಂದೆ 'ಅಕ್ರಮ ಸರಕಾರಿ ಭೂ ಕಬಳಿಕೆ"ಯ ವಿರುದ್ಧ 'ಆಮ್ ಆದ್ಮಿ' ಪಕ್ಷ ಸಂಘಟಿಸುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ತಪ್ಪದೆ ನಿತ್ಯವೂ ಬೆಳಗಿನಿಂದ ಇಳಿ ಸಂಜೆಯವರೆಗೂ ಪಾಲ್ಗೊಳ್ಳುತ್ತಿರುವ ಹಿರಿಯ ಗಾಂಧಿವಾದಿ ವಯೋವೃದ್ಧ ತೊಂಬತ್ತೇಳರ ಪ್ರಾಯದ ಹೆಚ್ ಎಸ್ ದೊರೆಸ್ವಾಮಿಯವರನ್ನ 'ಏನು ನಿಮ್ಮ ಸಮಸ್ಯೆ?' ಎಂದು ಕೇಳುವ ವ್ಯವಧಾನ ಆಳುವ ಮಂದಿಗ್ಯಾರಿಗೂ ಇದ್ದ ಹಂಗಿಲ್ಲ. ಈ ನಡುವೆ ಬೆಂಗಳೂರಿನಲ್ಲಿ ಭಾರಿ ಮಳೆ ಬಿದ್ದು ರಾಡಿಯಾಗಿ ಹೋಗಿತ್ತು. ಇದೆಲ್ಲವನ್ನೂ ಲೆಕ್ಕಿಸದೆ ಈ ಹಿರಿಯ ಗಾಂಧಿವಾದಿ ಜೀವ ತಪ್ಪದೆ ಪ್ರತಿಭಟನೆಗೆ ನಿತ್ಯವೂ ಹಾಜರಾಗಿದೆ.

ರಾಜ್ಯ ರೈತ ಸಂಘದ ಪ್ರಮುಖರು, ಭೂ ಕಬಳಿಕೆಯ ವಿರುದ್ಧ ಸರಕಾರಕ್ಕೆ ವರದಿ ಕೊಟ್ಟ ಎ ಟಿ ರಾಮಸ್ವಾಮಿ ಎಲ್ಲರೂ ಅಲ್ಲಿಗೆ ಬಂದು ಹೋಗಿದ್ದಾಗಿದೆ. ಆದರೆ ಅದರ ಬಗ್ಗೆ ಪ್ಯಾನಲ್ ಚರ್ಚೆ ಮಾಡುವುದು ಅತ್ತಲಾಗಿರಲಿ ಕನಿಷ್ಠ ದಿನಕ್ಕೊಮ್ಮೆ ವರದಿ ಮಾಡುವುದಕ್ಕೂ ಕಾಸಿಗಾಗಿ ಸುದ್ದಿ ಮಾರುವ ಯಾವುದೆ 'ಒಂಬತ್ತನೆ' ನಂಬರಿನ 'ಸುವರ್ಣ'ಕ್ಕನಿಗಾಗಲಿ, ಕರುನಾಡ 'ಜನಶ್ರಿ'ಗೆ ಮೂರು ಕಾಸಿನ ಉಪಯೋಗವಾಗದ ಸುದ್ದಿಗಳನ್ನೆ 'ಕಸ್ತೂರಿ' ಕನ್ನಡದಲ್ಲಿ ನಿತ್ಯ 'ಪಬ್ಲಿಕ್ಕಾ'ಗಿ ಊಳಿಡುವ, 'ಬಿಟಿ'(ವಿ)ಯಾಗಿ ಏನೊಂದನ್ನೂ ಪ್ರಸಾರ ಮಾಡುವ ಅಭ್ಯಾಸವೆ ಇಲ್ಲದೆ 'ರಾಜ್'ಆರೋಷವಾಗಿ 'ಉದಯ'ಕಾಲದಿಂದಲೆ ವಸೂಲಿಗೆ ಇಳಿವ ಚಟಸ್ಥರೆ ವಿರಾಜಮಾನರಾಗಿರುವ ಯಾವೊಂದು 'ಸಮಯ'ಸಾಧಕ ಸುದ್ದಿವಾಹಿನಿಗಳೂ ಸಹ ಆಸಕ್ತಿ ವಹಿಸಿಲ್ಲ.

ನಾಳೆ ಖಾದಿ ಕುರ್ತಾ ಗಾಂಧಿ ಟೋಪಿ ಛದ್ಮವೇಷದಲ್ಲಿ ಕಂಗೊಳಿಸಸುವ ರಾಜಕಾರಣಿಗಳಿಗೂ, 'ನಿತ್ಯಾ' ಕಂಡವರ 'ಮೈತ್ರಿಯ' 'ಕಾರ್ತಿಕ' ಪ್ರಣಯ ಲೀಲೆಗಳನ್ನೆ ಚಪ್ಪರಿಸುವಲ್ಲಿ ವ್ಯಸ್ತವಾಗುವ ಮೂರು ಕಾಸಿನ ಸುದ್ದಿ ಶೂರರಿಗೂ ಏನು ತಾನೆ ವ್ಯತ್ಯಾಸ? ವಾಸ್ತವದಲ್ಲಿ ಗಾಂಧಿ ತತ್ವಗಳನ್ನ ಗೋರಿಗಿಳಿಸಿ ಢೋಂಗಿ ಗಾಂಧಿ ತತ್ವದ ಪ್ರದರ್ಶನಕ್ಕಷ್ಟೆ ಇವರ ದೊಂಬರಾಟಗಳು ಸೀಮಿತಗೊಳ್ಳುತ್ತವೆ ಎನ್ನುವುದಕ್ಕೆ ಈ ಪ್ರಕರಣಕ್ಕಿಂತ ಒಳ್ಳೆಯ ಉದಾಹರಣೆ ಬೇಕಿಲ್ಲ. ಇದೊಂಥರಾ ನಿಜದ ನಾಗರವ ಕೊಂದು ಕಲ್ಲು ನಾಗನಿಗೆ ಹಾಲೆರೆವ ಕೆಲಸದಂತಹದು. ಅಷ್ಟಕ್ಕೂ ಅಕ್ರಮವಾಗಿ ಸರಕಾರಿ ಭೂಮಿಗಳಿಗೆ ಬೇಲಿ ಸುತ್ತಿ ಸ್ವಂತವಾಗಿಸಿಕೊಂಡವರೆ ತಾನೆ ಇವತ್ತು ನಮ್ಮನ್ನ ಆಳುತ್ತಿರೋದು?!