28 April 2009

ನೋಡುವ ಕಣ್ಣಿಗೆ ಮುತ್ತಿಡೋ ಚಂದ....

ನನ್ನೆದೆ ಬಡಿತ...ನಿನ್ನೆದೆ ಮಿಡಿತಕ್ಕೆ

ಹೇಳ ಬಯಸಿದ ಗುಟ್ಟನ್ನು/

ಮೋಡಗಳ ಮೂಲಕ ರವಾನಿಸಿದ್ದೇನೆ

ಸುರಿಯುವ ಮಳೆ ಸದ್ದಲ್ಲಿ ಕಿವಿಗೊಟ್ಟು ಕೇಳಿಸಿಕೋ//

ನೋಡುವವರ ಕಣ್ಣಿಗೆ ಮುತ್ತಿಡುವಂತಹ

ಧರೆಯೆಂದರೆ ಬಾನಿಗೂ ಬಲು ಅಕ್ಕರೆ/

ಸಂಜೆ ಸುರಿಸಿ ಮಳೆ....ನಸುಕು ಹರಿಸಿ ಬೆಳಕ ಹೊಳೆ

ಪರಿಪರಿಯಾಗಿ ಒಲವನ್ನು ಸುರಿಸಿದೆ//

ಹಗಲ ಹುನ್ನಾರ ಅರಿಯದೇ...

ಅಮಾಯಕ ಇರುಳು/

ಮರಾ ಮೋಸದ ಬೆಳಕಿನ ಕಿರಣಗಳ ಇರಿತಕ್ಕೆ ಬಲಿಯಾಗಿ...

ಅಸುನೀಗಿದೆ//

ಹೊಳೆವ ತಾರೆಗಳ ಸಾಕ್ಷಿಯಲಿ

ಹೊರಟ ಬೆಳದಿಂಗಳ ದಿಬ್ಬಣಕ್ಕೆ/

ಮೋಡದ ಬಾಸಿಂಗವಿರದ

ಮುಕುಟದ್ದೆ ದೊಡ್ಡ ಕೊರತೆ//

ಇರುಳ ಮಬ್ಬಲ್ಲಿ

ಬದುಕಿನೆಡೆಗೆ ಮೂಡಿದ್ದ ಕೌತುಕ/

ಹಗಲಿನ ಬೆಳಕಲಿ

ಅದೇಕೋ...ಕಳೆದೆ ಹೋಗಿದೆ//

26 April 2009

ಸೂತಕ...

ಮುದುಡುವ ಮನಸ...ಕಮರುವ ಕನಸ,

ಅರಳಿಸೋ ಮಂತ್ರ ನಿನ್ನಲ್ಲೇ ಸೇರಿ/

ಕೆಣಕುತ ನನ್ನ....ಕೆರಳಿಸೋ ಮುನ್ನ,

ನೋಡಿದರೊಮ್ಮೆ ಅದೇನು ಧನ್ಯ//

ಬರಲೇ ಇಲ್ಲ ಬಯಸಿದ ಮಳೆ,

ಇಳೆ ಮೊಗದ ತುಂಬ ದಟ್ಟ ವಿಷಾದದ ಛಾಯೆ ಕಲೆ/

ಬೆಳಕು ಕಣ್ತೆರೆದರೂ,

ಬದುಕ ಮೊಗದಲಿ ಮಂದಹಾಸವಿಲ್ಲ//

24 April 2009

ಮತ್ತೆ ಮಳೆ...

ಚುಮು ಚುಮು ಮುಂಜಾನೆಯಲ್ಲೇ

ಆಯಿತಲ್ಲ ಮೌನದ ಕೊಲೆ/

ಮೂಡಣದ ತುಂಬ

ಚಲ್ಲಿದ ನೆತ್ತರಿನದ?

ಕೆಂಪುಕಲೆ?//

ಮುಗಿಲ ಸಂಪತ್ತು ಸೂರೆಯಾಗಿ

ಉರಿ ಮಿಂಚಿನ ಸಂಚಿಗೆ/

ಕ್ಷಣದಲ್ಲೇ ಭಿಕಾರಿಯಾದ

ಬಾನಿನ ರೋಧನೆ ಈ ಮಳೆ//

23 April 2009

ಮಳೆ ಹನಿ....

ಮಳೆಯ ಹನಿ ಹನಿಯೆಂದರೆ ನೆಲಕೂ ವಿಚಿತ್ರ ಮೋಹ,

ಸುರಿವ ಪ್ರತಿ ಮಣಿಯಲ್ಲೂ ಧರೆಯಷ್ಟೇ ಇದೆ ದಾಹ/

ಒಲವೆಂದರೆ ಇದೇನಾ?//

22 April 2009

ಗೊಂದಲದ ಮಡು....

ಮತ್ತೆ ಬೇಕು ಸ್ವಲ್ಪ ಹೊಸದು
ಮತ್ತಿನ್ನೇನಾದರೂ ರೂಪಿಸೋ ಕನಸ ಹೊಸೆದು
ಕಾಣದುದರೆಡೆಗೆ ನುಗ್ಗುವ ತುಡಿತ
ಬೇಕಿದೆ ಕೊಂಚ ಬದಲಾವಣೆ


ಉರುಟುವ ಓಂಟೆಗೆ ಅದೆಷ್ಟೇ ತುರುಕಿ ನೇರ
ಮಾಡಿದರೂ ಮರಳಿ ಸೊಟ್ಟಗಾಗುವ ಈ ದರಿದ್ರ ಲೋಕಕ್ಕೆ



ಹಳತಾದ ಆಲದ ಮರಕ್ಕೆ ಜೋತುಬಿದ್ದ ಹಳೆಯ ಬಿಳಲುಗಳ
ಪುರಾತನ ನೇಣಿಗೆ ಕೊರಳೊಡ್ಡಲೇ ಬೇಕ?
ಕಣ್ಣೆದುರೇ ಕಾಣೋ ಇನ್ನೊಬ್ಬರು ಸವೆಸಿದ ಹಾದಿಯಲ್ಲಿ
ಅಡ್ಡ ಬಿದ್ದಿರುವ ಮಡ್ಡ ಕಲ್ಲಿಗೆ ತಿಳಿದೂ ತಿಳಿದೂ ಎಡವಿ ಬೀಳ ಬೇಕ?



ಇಲ್ಲಿಯವರೆಗೂ ಬದುಕಿದ್ದೇ ಸಾಧನೆ ಎಂಬ
ಹುಂಬ ಹೆಮ್ಮೆಯಲಿ
ಬಲಿತು ಓಲಾಡುವ ಹಿರಿಯ ಹೆಗ್ಗಣಗಳ ಹಲ್ಕಿರಿತಕ್ಕೆ
ಹಿಮ್ಮೇಳ ಕೂಡಿಸಿ ಹಲ್ಗಿಂಜುತ್ತಲೇ ಇರಬೇಕ?



ಗೊಂದಲದ ಮಡುವಾಗಿದೆ ಮನಸ್ಸೆಂಬ ಮರ್ಕಟ,
ಚಪ್ಪಲಿಗಳ ಸವೆದ ಅಚ್ಚಿನಲೆ ಸುಖವಾಗಿ ಪಾದ ಊರಬೇಕ?
ಇಲ್ಲಾ ಹೊಸ ಜೋಡಿನ ಜೋಡಿ ಗುದ್ದಾಡಿ
ಹೊಸದಾಗಿಯೇ ಕಾಲು ಕಚ್ಚಿಸಿ ಕೊಳ್ಳಬೇಕ?

21 April 2009

ಅಕಾಲದ ಮಳೆಗೆ ನಾಲ್ಕು ಸಾಲು...

ಸಂಜೆ ಸುರಿವ ಮಳೆಗೆ....

ಅದನು ಹೊತ್ತ ಮುಗಿಲಿಗೆ/

ತೊಯ್ದ ಧರೆಯ ಕದ್ದು ನೋಡೋ ತವಕದ,

ಹಸಿದ ಕಂಗಳ ನೇಸರನದೆ ಕುಮ್ಮಕ್ಕು//

ಉತ್ಕಟ ಒಲವಿನಾಟದಲ್ಲಿ,

ಬಾನ ಕೊರಳಿನ ಸರ ಕಳಚಿ/

ಉದುರಿದ ಬಿಡಿ ಮುತ್ತ ರಾಶಿ,

ರಾತ್ರೆ ಬಿರುಮಳೆಗೆ ಸುರಿದ ಹನಿಗಳು//

ದುಃಖ ಒತ್ತರಿಸಿಬಂದು ಬಿಕ್ಕುವ ನಭ/

ಸುರಿಸಿದ ಕಂಬನಿಗಳೆಲ್ಲ...

ಧರೆಯು ಬತ್ತಲಾಗಿರುವಲೆಲ್ಲ,

ಸಂತಸದ ಮೊಳಕೆಯೊಡೆಸಿದೆ//

ಘಮ್ಮೆನ್ನುವ ನೆಲದ ಮೈ ಗಂಧಕ್ಕೆ/

ಮನ ಸೋತ ಮುಗಿಲಿನದೆ ಸಂಚು...

ಹುಚ್ಚು ಹನಿವ ಈ ಮಳೆ//

ಕಾಯಿಸಿ ಸತಾಯಿಸಿ,

ಇನ್ನು ತಡೆಯಲಾಗದೆಂದಾಗ ತುಸು ತೋಯಿಸಿ/

ಬಳಲಿ ಶರಣಾಗುವಂತೆ....

ಬಲವಂತಕ್ಕಿಳಿಯುವ ಮುಗಿಲಿನದೆ ಹಿತವಾದ ಪಿತೂರಿ,

ಬಿತ್ತು ಮಳೆ ಹನಿಯಾಗಿ ನೆಲದೆಡೆಗೆ ಜಾರಿ//

20 April 2009

ಮಳೆ ನಾದ...

ಕರಿಮಾಯಿ ಕಗ್ಗತ್ತಲು/
ಮೋಹಕ ಮುಂಜಾವಿನಲ್ಲಿ.....
ಚೆಲುವ ರವಿಯನ್ನೇ ಹೆತ್ತಳು//



ಇರಚಲು ಮಳೆಗೆ ತೊಯ್ದ ಇಳೆಯದು/
ಈಗಷ್ಟೇ ಮೂರನೇ ನೀರೆರೆದುಕೊಂಡ,
ಸಂತೃಪ್ತ ಭಾವ//

19 April 2009

ಸಾಕು ನನಗಷ್ಟೇ ಸಾಕು...

ಕನಸಿನಲ್ಲೂ ನೀ ನನ್ನ ಕಾಣ ಬರುವುದು ಬೇಡ,

ಕರುಣೆಯ ದನಿ ಇನ್ನೂ ನಿನ್ನಲಿದ್ದರೆ/

ಬಾಳಿನ ಪಲ್ಲಕಿಯಿಂದಂತೂ ನನ್ನ ಕೆಳಗುದುರಿಸಿದೆ......ಮತ್ತೆ ಮರಳಿ ನೆನಪಾಗಿ ನಾನೆಂದಾದರೂ ಕಾಡಿದರೆ,

ಎರಡೇ ಎರಡು ಹನಿ ಕಣ್ಣ ಹನಿ ಉದುರಿಸು....ನನಗಷ್ಟೇ ಸಾಕು//

18 April 2009

ಸಂಕಟ...

ಬಿಸಿಲಿಗೆ ಬಳಲಿ ಬೆಂಡಾದ

ಹಗಲಿನ ಮೈ ನೋವಿಗೆ/

ಇರುಳು ಬಳಿಯಲು ತಯಾರು

ತಂಪು ನೋವಿನೆಣ್ಣೆ//

16 April 2009

ಮುಂಜಾವು...

ಇರುಳು ಹೊದ್ದ ಮುಸುಕು ಮಂಪರಲ್ಲೇ ಜಾರಿ /
ನಸು ಬೆಳಕಿಗೆ....
ಹಗಲ ಮಾನ ಬಟಾಬಯಲಾಗಿದೆ//



ಕತ್ತಲಲ್ಲಿ ಕರಗಿದ್ದ ಮೌನವ/
ಬೆಳಕ ಕಿರಣದ ಕೋಲು ಕಲಕಿದೆ//

13 April 2009

ಮೋಹ ಜಾಲ....

ಕವಿದ ಇಬ್ಬನಿ ತೆರೆ ಸರಿಸುವ ತವಕ,

ನೆಲ ಸೋಕಿ ಪಡೆವಾಸೆ ಇಳೆಯ ಮೃದು ಸ್ಪರ್ಶ ಸುಖ/

ಮೋಹದಲ್ಲಿ ರವಿ ಕಡು ಅಂಧ,

ಅದಕ್ಕೆ ಇಂದು...ಅವಸರದಲ್ಲಿ ಧರೆಗಿಳಿದು ಬಂದ//

12 April 2009

ನಿನಗಾಗಿ...

ಸುಟ್ಟರೂ ನಾಶವಾಗದ್ದು,

ನಾನು ಸತ್ತರೂ ಈ ದೇಹಬಿಟ್ಟು ಹೋಗದ್ದು/

ಮಿಡಿತ ಮುಗಿದ ಎದೆಯೊಳಗೆ ಅವಿತ ಪ್ರೀತಿ,

ನಿನಗಷ್ಟೆ ಅರ್ಥವಾಗುವಂತೆ...ನಿನಗಾಗಿ ಮಾತ್ರ ನುಡಿವ ಅದರ ರೀತಿ//

10 April 2009

ಉತ್ತರ ಖಂಡಿತ ಬೇಡವೇ ಬೇಡ...

ನಿನ್ನೊಂನ್ದಿಗೆ ಪ್ರೀತಿಯೂ ಉಳಿದಿಲ್ಲ,ದ್ವೇಷವೂ ನನಗಿಲ್ಲ.ಅದಕ್ಕಾಗಿಯೇ ಉತ್ತರದ ಯಾವೊಂದು ನಿರೀಕ್ಷೆಯೂ ಇಲ್ಲದಿದ್ದ ನನ್ನ ಕಡೆಯ ಪತ್ರಕ್ಕೆ ನೀ ಬರೆದ ಉತ್ತರಕ್ಕೆ ನನ್ನ ಪ್ರತಿಕ್ರಿಯೆ ಬರೆದಿರಲಿಲ್ಲ.

ಇನ್ನು ನಿನ್ನ ಮೇಲೆ ಏಕೆ ಕೋಪ ಎನ್ನುವ ನಿನ್ನ ಪ್ರಶ್ನೆಗೆ ನನಗಿಂತ ಚನ್ನಾಗಿ ನಿನಗೆ ಉತ್ತರ ಗೊತ್ತು,ನಾನದನ್ನು ವಿವರಿಸುವ ಅಗತ್ಯ ಉಳಿದಿಲ್ಲ.ನಮ್ಮ ತಿಕ್ಕಾಟಕ್ಕೆ ಗುರುಮಹಾರಾಜರ ಮಾತಿನ ಮುಲಾಮು ಹಚ್ಚ ಬೇಡ,ಗಾಯ ತುಂಬ ಆಳವಾಗಿ ಹೋಗಿದೆ ಹಾಗು ಕೊಳೆತಿದೆ ಕೂಡ.

ನಿನಗೆ ಇಲ್ಲದಿರುವಂತೆಯೇ ನನಗೂ ನಿನ್ನ ಜರೂರತ್ತಿಲ್ಲ.ಹಾಗೆಯೇ ಬಾಳುವುದನ್ನು ರೂಢಿಸಿಕೊಳ್ಳುತ್ತಿದ್ದೇನೆ."ನನಗೆ ನಿನ್ನ ಅವಶ್ಯಕತೆ ಇದೆ" ಅನ್ನೋ ಸವಕಲು ಮಾತನ್ನ ಮತ್ತೆ ಮತ್ತೆ ಹೇಳಬೇಡ...ಅದು ಇದ್ದದ್ದೇ ಆಗಿದ್ದರೆ ನೀನು ಆ ದೇಶಕ್ಕೆ ಕಾಲಿಡುತ್ತಲೇ ಇರಲಿಲ್ಲ.ಅದೇನೇ ಇರಲಿ ನಿನ್ನ ಬಾಳು ನಿನ್ನ ಆಯ್ಕೆ.ಮರಳಿ ಮತ್ತೆ ನನ್ನ ಚಿತ್ತ ಕಲಕ ಬೇಡ.ದಯೆ ನಿನ್ನಲ್ಲೂ ಇರಲಿ,ನಿನ್ನ ಗೆಳೆಯನಾಗಿದ್ದೆ ಅಂತಲ್ಲ ಒಬ್ಬ ಮನುಷ್ಯ ಅಂತ.ಎಲ್ಲಿದ್ದರೂ ನಿನಗೆ ಒಳ್ಳೆಯದೇ ಆಗಲಿ.

ನಿನ್ನದೇ ಪಿಸುದನಿ...

ಹೇಳದೆ ಕೇಳದೆ ಕಣ್ ತೊಯಿಸೋ ಕಂಬನಿ,

ಮನಸಿನ ಪುಟದಲಿ ಸಹಿ ಗೀಚಿದೆ ಇಬ್ಬನಿ/

ಯಾರಲೂ ತಿಳಿಸದ ವಿಸ್ಮಯ ಈ ವೇದನೆ...

ಹಿತವಿದೆ ನೋವಲು ನಿನ್ನೊಲವಿಗೆ ನಾ ಸೋತೆನೆ?

ಅದ್ಯಾತಕೋ ಕಾಣದ ಸಂಭ್ರಮ ಎದೆಯಲಿ,

ಮೋಹದ ಮೋಡಿಗೆ ಮರುಳಾದೆನೆ....ಹೇಳು ನೀನೆ//

ದುಂಬಿಯ ತುಟಿಯಂಚಲಿ ಅಂಟಿದ ಮಕರಂದಕೆ

ಹೂಗಳ ಪಿಸುಮಾತಲೂ ತುಸು ಪಾಲಿದೆ...

ಹಸುರಿನ ಮೋಹದ ಪರಿ ಹಕ್ಕಿಯ ಕೊರಳ ಸಿರಿ...ಹೆಚ್ಚಿಸಿ ಹುರಿದುಂಬಿಸಿ ಬಳಿ ಸೆಳೆದಿದೆ ಬಿಗಿದಪ್ಪಿದೆ/

ಹೇಳುವ ಆತುರ ಮನಸಲಿ ಕಾತರ

ತಿಳಿಯದು ಉಸುರುವ ಬಗೆ....ನಿನ್ನುಸಿರಲೇ ನನ್ನುಸಿರಿದೆ//

ಅದ್ಯಾತಕೋ ಕಾಣದ ಸಂಭ್ರಮ ಎದೆಯಲಿ,

ಮೋಹದ ಮೋಡಿಗೆ ಮರುಳಾದೆನೆ? ಹೇಳು ನೀನೆ//

ತೀರವ ಸೋಕುವ ತೆರೆ

ಉಕ್ಕಿಸಿ ಖುಷಿಯ ನೊರೆ

ಸ್ಪರ್ಶಕೆ ತುಸು ನಾಚುತ ಅನುಭವಿಸಿದೆ ರೋಮಾಂಚನ/

ಭೂಮಿಗೆ ಸಾಗರ ಮುತ್ತಿಡೋ ಸಡಗರ

ನನ್ನೆದೆ ಹಾಡಲು....ನಿನ್ನ ಸಾಲನ್ನೇ ತುಂಬಿದೆ//

ಅದ್ಯಾತಕೋ ಕಾಣದ ಸಂಭ್ರಮ ಎದೆಯಲಿ,
ಮೋಹದ ಮೋಡಿಗೆ ಮರುಳಾದೆನೆ? ಹೇಳು ನೀನೆ//

09 April 2009

ಒಡಲು ತುಂಬಲಿ..

ಮೋಹವಿದೆ ಅನುರಾಗವಿದೆ ಅಭಿಲಾಷೆಯ ಸೆಳೆತ,

ತುಂಬಿರುವ ಮುಗಿಲಿಗೆ ನೆಲವ ತುಸು ತೊಯಿಸೋ ಮಿಡಿತ/

ಹನಿದರೂ ಇಬ್ಬನಿ ಸಾಲದು ತಂಪಿಗೆ,

ಹನಿ ಹನಿ ಧಾರೆಯ ಕಾತರ ಭೂಮಿಗೆ//

05 April 2009

ಮುರಳಿ ಗಾನ..

ದೂರ ತೀರದಲ್ಲೆಲ್ಲೋ ಮೂಡಿ,
ತೇಲಿ ಬರುತಿರೋ....ಮಧುರ ಮುರಳಿ ನಾದ/
ಕೂಗಿ ಕರೆಯುತಿರೋದಾದರೂ ಯಾರನ್ನು?
ನಿನ್ನನೇ? ನಿನ್ನ ಚಲುವನೆ?//

ಮೋಹಕ ಪ್ರೀತಿಯ ಹಾಗೆ ತಾಕಿಸಿ,

ಕೇಳಿದೆ ಗಾಳಿಯು....ಇಳೆ ಮನವ ಸೋಕಿಸಿ/

ಇರುಳಲಿ ಏಕೋ ನಿದಿರೆ ಇಲ್ಲ...ಹಗಲಲೂ ಬೀಳೋ ಕನಸನೆಲ್ಲ,

ನಾ ಹೇಳಲೇ? ಉಲ್ಲಾಸ ತಂದ ನೆನಪುಗಳ//

ಸುಳಿವಿಲ್ಲ...

ಅದೆಂದೋ ಕುಂಡದಲ್ಲಿ ಹೂತು ಮರೆತಿದ್ದ ಗೆಡ್ಡೆ,
ಲಕ್ಷಣವಾಗಿ ಚಿಗುರಿ ಡೇರೆ ಹೂಗಳ ಅರಳಿಸಿ ನಗುತಿದೆ/
ಛಲ ಬಿಡದ ನನ್ನೀ ಪ್ರಯತ್ನ,
ಎಂದಾದರೊಮ್ಮೆ ನಿನ್ನ ಮನದ ಡೇರೆಯಲ್ಲೂ ಒಲವಿನ ಹೂಗಳ ಅರಳಿಸೀತ?//



ಮೋಡದ ಮರೆಯಿಂದ ಯಾವಾಗಲೂ ಹೊರಗಿಣುಕುತ್ತಿದ್ದ ಚಂದಿರ,
ಇಂದು ಅದೇಕೋ ಒಂಟಿಯಾಗಿದ್ದ/
ಮೋಡದ ಸುಳಿವಿಲ್ಲ,
ಬೆಳದಿಂಗಳ ಒಲವಿಲ್ಲ//

03 April 2009

ಮೋಡಗಳಿಲ್ಲ

ಬೆತ್ತಲೆ ಬಾನಲ್ಲಿ ಇಂದು...ಅದೇಕೋ ಒಂದೂ ಮೋಡಗಳಿಲ್ಲ/
ಅಂಬರದ ಈ ಐಶ್ವರ್ಯ ದೋಚಿದವರಾದರೂ ಯಾರು?//



ಮುತ್ತಿನ ತೋರಣ ಸರಿಸಿ,
ನಗುವಿನ ನೆಲಹಾಸಿನ ಮೇಲೆ ಕಾಲಿರಿಸಿ/
ಅಂತರಂಗಕ್ಕೆ ಮಂದ ಮಾರುತದಂತೆ ನೀ ಅಡಿಯಿದುವಾಗ.
ವ್ಯಥಾ ಕಿರುಚಿದ ದುಷ್ಟ ಅಲಾರಂ...ಮುಂಜಾನೆ ನಾ ಕಂಡ
ಸವಿ ಕನಸನ್ನು ನಿರ್ದಯಿಯಾಗಿ ಕೊಂದಿತು//

02 April 2009

ಇನ್ನು ಮರಳ ಬೇಡ...

ಮುಗಿಯದ ಮೌನ ಕಲಹ,
ದೂರ ಸುದೂರ ಸಾಗುತ್ತಿದ್ದರೂ ನಿನ್ನ ಪಯಣ/
ತಲೆ ತಪ್ಪಿಸಿ ಅಡಗಲು ನೆಲೆಯೇ ಇಲ್ಲ,
ಹೀಗೆ ಅನಾಥವಾಗಿಸಿದೆಯಲ್ಲ....ನಾನು ಮಾಡಿದ ತಪ್ಪಾದರೂ ಏನು?//


ಎಲ್ಲಿ ನಿನ್ನೊಳಗಿನ ನನ್ನ ತೋರಿಸು?
ಎಂದಾಗ ಮರು ಯೋಚಿಸದೆ...ತನ್ನೆದೆ ಬಗೆದು ತೋರಿಸಿತ್ತಂತೆ ಒಂದು ಕೋತಿ/
ಹೇಳು? ನಿನ್ನೆಡೆಗಿನ ಒಲವನ್ನು ಸಾಬೀತು ಪಡಿಸಲು...
ನಾನೂ ಮಾಡಲೇ ಬೇಕ ಇಂದು ಆ ರೀತಿ?//



ಯಾರೂ ಕರೆಯದೆ ಮೌನ ಕಿಂದರಿಯ ನಾದಕೆ ಮರುಳಾಗಿ,
ನೀನು ಸಾಗಿದ್ದಾದರೂ ಎಲ್ಲಿ?/
ನಿನ್ನೆದೆ ಹಾಡಿಗೆ ಧ್ವನಿಯಾಗುವ ಜೀವವೊಂದಿದ್ದರೂ ಇಲ್ಲೇ,
ಅದ ಕಾಣದೆ ಹೋದೆಯಲ್ಲ....ಅಲ್ಲೇ ಇರು ಇನ್ನೆಂದೂ ಮರಳ ಬೇಡ//

01 April 2009

ನಿನಗೊಂದು ಕಡೆಯ ಪತ್ರ...

ಈ ಕ್ಷಣ ನೀನು ಬಾನಂಚಲೆಲ್ಲೋ ತೇಲುತಿರಬಹುದು.ವಿಮಾನದ ಕಿಟಕಿಯಂಚಿನಿಂದ ಹೊರಗಿನುಕಿ ದೂರದ ದಿಗಂತವನ್ನೇ ದಿಟ್ಟಿಸುತ್ತಿರಬಹುದು.ನಿನ್ನ ನೋಟ ತಲುಪುವಲ್ಲಿ ಅದೇನೋ ಸಾಧಿಸಿದ ಸಂಭ್ರಮ-ತೃಪ್ತಿ ಇರೋದು ಸಹಜ.ಆದರೆ ನನ್ನೊಳಗೆ ಹಾಡಾಗಿ ಉಳಿದ ನೀನು ನನಗೆ ಹೀಗೆ ಮಾಡಬಹುದಾ? ನಿನ್ನ ಜೊತೆಯೊಂದೆ ನನ್ನ ಶಕ್ತಿ ಎಂದುಕೊಂಡಿದ್ದೆನಲ್ಲ,ಹೀಗೆ ನನ್ನ ಬಿಟ್ಟು ಇನ್ನೆಲ್ಲೋ ಹೋಗಬಹುದ? ನನ್ನ ಯೋಚನೆಯ ಲಹರಿ,ಅದರ ವಿಚಾರಗಳೇನೆ ಇರಲಿ.ನಿನ್ನ ಜೊತೆಯಿಲ್ಲದೆ ಕಳೆದ ಒಂದು ವರ್ಷ ನಾನು ಅನುಭವಿಸಿದ ಹಿಂಸೆ ನಿನಗೇನಾದರೂ ಗೊತ್ತ? ನನ್ನ ಮಾತಿನಲ್ಲಿ ಬರೇ ಕೊಂಕನ್ನೇ ಹುಡುಕುವುದೇ ಆಯಿತಲ್ಲ,ಎಂದಾದರೂ ನಾನು ಹಾಗೇಕೆ ಮಾತನಾಡುತ್ತಿದ್ದೇನೆ ಅಂತ ಯೋಚಿಸಿದ್ದೆಯ? ಬಹುಶ ನೀನು ಗಳಿಕೆಯಲ್ಲಿ ಮುಂದಿದ್ದಿ...ನನ್ನ ಗಳಿಕೆಯ ತಳಪಾಯ ಈಗಷ್ಟೇ ಗಟ್ಟಿಯಾಗುತ್ತಿದೆ...ಅಲ್ಲಿಯವರೆಗೂ ನನ್ನ ಪರದಾಟ ಇದ್ದದ್ದೇ.ಇವೆಲ್ಲ ನಿನಗೆ ಜಿಗುಪ್ಸೆ ಹುಟ್ಟಿಸಿರಬಹುದು.ಒಂದು ವೇಳೆ ನನ್ನ ಸ್ಥಿತಿಯ ಬಗ್ಗೆ ನಿನಗೆ ಜಿಗುಪ್ಸೆ ಹುಟ್ಟಿರೋದೆ ನಿಜವಾದರೆ ನಿನ್ನದು ನಿಜವಾದ ಸ್ನೇಹ ಅಂತ ಕರೆಯೋದದರೂ ಹೇಗೆ?

ಕೆರಿಯರ್ ಮುಖ್ಯ ಅದರಲ್ಲಿ ಮುಂದೆ ಬರೋದು ನಿನ್ನ ಕನಸು ಅಂತ ನನಗೆ ಗೊತ್ತು.ಈ ಹಂತದಲ್ಲಿ ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಬರಬಹುದು ಅಂತಾನೂ ಗೊತ್ತಿತ್ತು ನನಗೆ.ಅದಕ್ಕೆ ಕಳೆದೆರಡು ವರ್ಷದಿಂದ ಅತಿಯಾಗದಂತೆ ದೂರ ದೂರವೇ ಇರೋಣ ಅಂತ ನಾನು ಹೇಳುತ್ತಲೇ ಬಂದರೂ ನೀನು ನನ್ನ ಮಾತು ಕೇಳಲಿಲ್ಲ.ಸುಖಾ ಸುಮ್ಮನೆ ಇನ್ನಷ್ಟು ಹತ್ತಿರವಾದೆ,ಒಂದು ವೇಳೆ ಆಗಲೇ ನೀನು ಸಂಪರ್ಕ ಕಳೆದುಕೊಂಡಿದ್ದಾರೆ ನನಗೆ ಈಗಾಗುತ್ತಿರೋವಷ್ಟು ಸಂಕಟ ಖಂಡಿತ ಆಗುತ್ತಿರಲಿಲ್ಲ.ನಿನ್ನ ಪ್ಯಾಶನ್ಗಳನ್ನ ವಾಸ್ತವ ಎಂದೆ ಭಾವಿಸಿ ಮೂರ್ಖನಾದೆ ಎಂದೆನಿಸುತ್ತೆ ಕೆಲವೊಮ್ಮೆ.ನಾನೂ ಕಳೆದೆರಡು ವರ್ಷಗಳಿಂದ ಅಂದುಕೊಂಡಿದ್ದ-ಯೋಜಿಸಿದ್ದ ಯಾವುದೇ ವಿಷಯಗಳತ್ತ ಆಸಕ್ತಿವಹಿಸದೆ ಇರೋದಕ್ಕೆ ಕಾರಣ ಎನುಗೊತ್ತ? ನಿನ್ನ ಜೊತೆ ತಪ್ಪಿ ಹೋಗಿದ್ದು.ನೀನು ಯಾವಗಲೂ ಜೋತೆಯಾಗಿರುತ್ತಿ ಅನ್ನೋ ಭ್ರಮೆಯಲ್ಲಿ ನೀನು ಮರಳಿ ಬೆಂಗಳೂರಿಗೆ ಬರೋದನ್ನೇ ಕಾಯುತ್ತ ಕೂತಿದ್ದೆ ನಾನು,ಆದರೆ ಆ ಅವಧಿಯಲ್ಲಿ ನೀನು ಎಡಬಿಡಂಗಿಯಂತೆ ಒಂದು ಕಡೆ ನನ್ನ ನನ್ನ ಪಾಡಿಗೂ ಬಿಡದೆ,,,ಇನ್ನೊಂದು ಕಡೆ ಹೊರಳಿ ಬಂದು ಜೊತೆ ಕೈ ಸೇರಿಸದೆ ಅಕ್ಷರಶಃ ನನ್ನ ಕಾಡಿದೆ.

ಈಗ ಇನ್ನ್ಯಾವುದೋ ದೇಶ ಕಟ್ಟಲು ನಿನ್ನ ಅಳಿಲು ಸೇವೆ ಸಲ್ಲಿಸೋಕೆ ಹೋಗ್ತಿದೀಯ.ನಿನ್ನಗೆ ಅಲ್ಲಿಯೂ ಒಳ್ಳೆಯದಾಗಲಿ.ನಿನ್ನ ಕುರಿತು ನನಗೇನೂ ನಂಜಿಲ್ಲ.ಆದರೆ ದಯವಿಟ್ಟು ನನ್ನ ಬದುಕಲ್ಲಿ ಮರಳಿ ಬರಬೇಡ.ಚೂರಾದರೂ ನನ್ನ ಬಗ್ಗೆ ಕರುಣೆಯಿದ್ದರೆ ಇನ್ನೆಂದೂ ನನ್ನ ಬಾಳಿನ ಕೊಳಕ್ಕೆ ಕಲ್ಲನೆಸೆಯಬೇಡ.ನೀನಿಲ್ಲದೆ ಮಹತ್ತರವಾದ ಏನನ್ನೂ ಸಾಧಿಸುವ ಉಮೇದು ಉಳಿದಿಲ್ಲ.ಆಸಕ್ತಿ ಇಲ್ಲದೆ ಏನನ್ನೂ ಮಾಡೋದಾದರೂ ಹೇಗೆ,ಕಡೇ ಪಕ್ಷ ನೆಮ್ಮದಿಯಿಂದ ಬದುಕೋದು?