ಈ ಕ್ಷಣ ನೀನು ಬಾನಂಚಲೆಲ್ಲೋ ತೇಲುತಿರಬಹುದು.ವಿಮಾನದ ಕಿಟಕಿಯಂಚಿನಿಂದ ಹೊರಗಿನುಕಿ ದೂರದ ದಿಗಂತವನ್ನೇ ದಿಟ್ಟಿಸುತ್ತಿರಬಹುದು.ನಿನ್ನ ನೋಟ ತಲುಪುವಲ್ಲಿ ಅದೇನೋ ಸಾಧಿಸಿದ ಸಂಭ್ರಮ-ತೃಪ್ತಿ ಇರೋದು ಸಹಜ.ಆದರೆ ನನ್ನೊಳಗೆ ಹಾಡಾಗಿ ಉಳಿದ ನೀನು ನನಗೆ ಹೀಗೆ ಮಾಡಬಹುದಾ? ನಿನ್ನ ಜೊತೆಯೊಂದೆ ನನ್ನ ಶಕ್ತಿ ಎಂದುಕೊಂಡಿದ್ದೆನಲ್ಲ,ಹೀಗೆ ನನ್ನ ಬಿಟ್ಟು ಇನ್ನೆಲ್ಲೋ ಹೋಗಬಹುದ? ನನ್ನ ಯೋಚನೆಯ ಲಹರಿ,ಅದರ ವಿಚಾರಗಳೇನೆ ಇರಲಿ.ನಿನ್ನ ಜೊತೆಯಿಲ್ಲದೆ ಕಳೆದ ಒಂದು ವರ್ಷ ನಾನು ಅನುಭವಿಸಿದ ಹಿಂಸೆ ನಿನಗೇನಾದರೂ ಗೊತ್ತ? ನನ್ನ ಮಾತಿನಲ್ಲಿ ಬರೇ ಕೊಂಕನ್ನೇ ಹುಡುಕುವುದೇ ಆಯಿತಲ್ಲ,ಎಂದಾದರೂ ನಾನು ಹಾಗೇಕೆ ಮಾತನಾಡುತ್ತಿದ್ದೇನೆ ಅಂತ ಯೋಚಿಸಿದ್ದೆಯ? ಬಹುಶ ನೀನು ಗಳಿಕೆಯಲ್ಲಿ ಮುಂದಿದ್ದಿ...ನನ್ನ ಗಳಿಕೆಯ ತಳಪಾಯ ಈಗಷ್ಟೇ ಗಟ್ಟಿಯಾಗುತ್ತಿದೆ...ಅಲ್ಲಿಯವರೆಗೂ ನನ್ನ ಪರದಾಟ ಇದ್ದದ್ದೇ.ಇವೆಲ್ಲ ನಿನಗೆ ಜಿಗುಪ್ಸೆ ಹುಟ್ಟಿಸಿರಬಹುದು.ಒಂದು ವೇಳೆ ನನ್ನ ಸ್ಥಿತಿಯ ಬಗ್ಗೆ ನಿನಗೆ ಜಿಗುಪ್ಸೆ ಹುಟ್ಟಿರೋದೆ ನಿಜವಾದರೆ ನಿನ್ನದು ನಿಜವಾದ ಸ್ನೇಹ ಅಂತ ಕರೆಯೋದದರೂ ಹೇಗೆ?
ಕೆರಿಯರ್ ಮುಖ್ಯ ಅದರಲ್ಲಿ ಮುಂದೆ ಬರೋದು ನಿನ್ನ ಕನಸು ಅಂತ ನನಗೆ ಗೊತ್ತು.ಈ ಹಂತದಲ್ಲಿ ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಬರಬಹುದು ಅಂತಾನೂ ಗೊತ್ತಿತ್ತು ನನಗೆ.ಅದಕ್ಕೆ ಕಳೆದೆರಡು ವರ್ಷದಿಂದ ಅತಿಯಾಗದಂತೆ ದೂರ ದೂರವೇ ಇರೋಣ ಅಂತ ನಾನು ಹೇಳುತ್ತಲೇ ಬಂದರೂ ನೀನು ನನ್ನ ಮಾತು ಕೇಳಲಿಲ್ಲ.ಸುಖಾ ಸುಮ್ಮನೆ ಇನ್ನಷ್ಟು ಹತ್ತಿರವಾದೆ,ಒಂದು ವೇಳೆ ಆಗಲೇ ನೀನು ಸಂಪರ್ಕ ಕಳೆದುಕೊಂಡಿದ್ದಾರೆ ನನಗೆ ಈಗಾಗುತ್ತಿರೋವಷ್ಟು ಸಂಕಟ ಖಂಡಿತ ಆಗುತ್ತಿರಲಿಲ್ಲ.ನಿನ್ನ ಪ್ಯಾಶನ್ಗಳನ್ನ ವಾಸ್ತವ ಎಂದೆ ಭಾವಿಸಿ ಮೂರ್ಖನಾದೆ ಎಂದೆನಿಸುತ್ತೆ ಕೆಲವೊಮ್ಮೆ.ನಾನೂ ಕಳೆದೆರಡು ವರ್ಷಗಳಿಂದ ಅಂದುಕೊಂಡಿದ್ದ-ಯೋಜಿಸಿದ್ದ ಯಾವುದೇ ವಿಷಯಗಳತ್ತ ಆಸಕ್ತಿವಹಿಸದೆ ಇರೋದಕ್ಕೆ ಕಾರಣ ಎನುಗೊತ್ತ? ನಿನ್ನ ಜೊತೆ ತಪ್ಪಿ ಹೋಗಿದ್ದು.ನೀನು ಯಾವಗಲೂ ಜೋತೆಯಾಗಿರುತ್ತಿ ಅನ್ನೋ ಭ್ರಮೆಯಲ್ಲಿ ನೀನು ಮರಳಿ ಬೆಂಗಳೂರಿಗೆ ಬರೋದನ್ನೇ ಕಾಯುತ್ತ ಕೂತಿದ್ದೆ ನಾನು,ಆದರೆ ಆ ಅವಧಿಯಲ್ಲಿ ನೀನು ಎಡಬಿಡಂಗಿಯಂತೆ ಒಂದು ಕಡೆ ನನ್ನ ನನ್ನ ಪಾಡಿಗೂ ಬಿಡದೆ,,,ಇನ್ನೊಂದು ಕಡೆ ಹೊರಳಿ ಬಂದು ಜೊತೆ ಕೈ ಸೇರಿಸದೆ ಅಕ್ಷರಶಃ ನನ್ನ ಕಾಡಿದೆ.
ಈಗ ಇನ್ನ್ಯಾವುದೋ ದೇಶ ಕಟ್ಟಲು ನಿನ್ನ ಅಳಿಲು ಸೇವೆ ಸಲ್ಲಿಸೋಕೆ ಹೋಗ್ತಿದೀಯ.ನಿನ್ನಗೆ ಅಲ್ಲಿಯೂ ಒಳ್ಳೆಯದಾಗಲಿ.ನಿನ್ನ ಕುರಿತು ನನಗೇನೂ ನಂಜಿಲ್ಲ.ಆದರೆ ದಯವಿಟ್ಟು ನನ್ನ ಬದುಕಲ್ಲಿ ಮರಳಿ ಬರಬೇಡ.ಚೂರಾದರೂ ನನ್ನ ಬಗ್ಗೆ ಕರುಣೆಯಿದ್ದರೆ ಇನ್ನೆಂದೂ ನನ್ನ ಬಾಳಿನ ಕೊಳಕ್ಕೆ ಕಲ್ಲನೆಸೆಯಬೇಡ.ನೀನಿಲ್ಲದೆ ಮಹತ್ತರವಾದ ಏನನ್ನೂ ಸಾಧಿಸುವ ಉಮೇದು ಉಳಿದಿಲ್ಲ.ಆಸಕ್ತಿ ಇಲ್ಲದೆ ಏನನ್ನೂ ಮಾಡೋದಾದರೂ ಹೇಗೆ,ಕಡೇ ಪಕ್ಷ ನೆಮ್ಮದಿಯಿಂದ ಬದುಕೋದು?
No comments:
Post a Comment