22 April 2009

ಗೊಂದಲದ ಮಡು....

ಮತ್ತೆ ಬೇಕು ಸ್ವಲ್ಪ ಹೊಸದು
ಮತ್ತಿನ್ನೇನಾದರೂ ರೂಪಿಸೋ ಕನಸ ಹೊಸೆದು
ಕಾಣದುದರೆಡೆಗೆ ನುಗ್ಗುವ ತುಡಿತ
ಬೇಕಿದೆ ಕೊಂಚ ಬದಲಾವಣೆ


ಉರುಟುವ ಓಂಟೆಗೆ ಅದೆಷ್ಟೇ ತುರುಕಿ ನೇರ
ಮಾಡಿದರೂ ಮರಳಿ ಸೊಟ್ಟಗಾಗುವ ಈ ದರಿದ್ರ ಲೋಕಕ್ಕೆ



ಹಳತಾದ ಆಲದ ಮರಕ್ಕೆ ಜೋತುಬಿದ್ದ ಹಳೆಯ ಬಿಳಲುಗಳ
ಪುರಾತನ ನೇಣಿಗೆ ಕೊರಳೊಡ್ಡಲೇ ಬೇಕ?
ಕಣ್ಣೆದುರೇ ಕಾಣೋ ಇನ್ನೊಬ್ಬರು ಸವೆಸಿದ ಹಾದಿಯಲ್ಲಿ
ಅಡ್ಡ ಬಿದ್ದಿರುವ ಮಡ್ಡ ಕಲ್ಲಿಗೆ ತಿಳಿದೂ ತಿಳಿದೂ ಎಡವಿ ಬೀಳ ಬೇಕ?



ಇಲ್ಲಿಯವರೆಗೂ ಬದುಕಿದ್ದೇ ಸಾಧನೆ ಎಂಬ
ಹುಂಬ ಹೆಮ್ಮೆಯಲಿ
ಬಲಿತು ಓಲಾಡುವ ಹಿರಿಯ ಹೆಗ್ಗಣಗಳ ಹಲ್ಕಿರಿತಕ್ಕೆ
ಹಿಮ್ಮೇಳ ಕೂಡಿಸಿ ಹಲ್ಗಿಂಜುತ್ತಲೇ ಇರಬೇಕ?



ಗೊಂದಲದ ಮಡುವಾಗಿದೆ ಮನಸ್ಸೆಂಬ ಮರ್ಕಟ,
ಚಪ್ಪಲಿಗಳ ಸವೆದ ಅಚ್ಚಿನಲೆ ಸುಖವಾಗಿ ಪಾದ ಊರಬೇಕ?
ಇಲ್ಲಾ ಹೊಸ ಜೋಡಿನ ಜೋಡಿ ಗುದ್ದಾಡಿ
ಹೊಸದಾಗಿಯೇ ಕಾಲು ಕಚ್ಚಿಸಿ ಕೊಳ್ಳಬೇಕ?

No comments: