04 November 2011

ನೀ ಹೋದ ಹಾದಿಯ ಅಂಚಿನಲ್ಲಿಯೆ.......

ನಿನ್ನ ಕೆನ್ನೆಯ ಗುಳಿಗಳಲ್ಲಿ ಜಾರಿ ಬಿದ್ದ ನನ್ನ ಮನಸಿಗೆ ಈಗ
ನಿನ್ನ ಹೊರತು ಇನ್ಯಾರು ಕಾಣಿಸದಷ್ಟು ಸ್ಪಷ್ಟ ಒಮ್ಮುಖ ಕುರುಡು,
ದೂರಾಗಿ ಬಾಳೋದು...ಒಬ್ಬರನ್ನೊಬ್ಬರು ಮರೆತ ಹಾಗೆ ನಟಿಸೋದು....
ಇವೆಲ್ಲಾ ನಮ್ಮ ನಮ್ಮ ಮನಸ್ಸಮಾಧಾನಕ್ಕೆ ಮಾತ್ರ
ಒಮ್ಮೆ ಮೊಳೆತ ಮಧುರ ಭಾವಗಳನ್ನು ಶಾಶ್ವತವಾಗಿ ಗಲ್ಲಿಗೇರಿಸೋದು ಇಬ್ಬರಿಗೂ ಅಸಾಧ್ಯ/
ನಿನ್ನ ನಿರಾಕರಣೆ....ನಿನ್ನ ಮೌನ....ನಿನ್ನೆಲ್ಲ ಆರೋಪಗಳು
ನಿರಂತರವಾಗಿ ನನ್ನ ಕೊಲ್ಲುತ್ತಿವೆ....
ಹೊಳೆಯಲ್ಲಿ ಹಾಗೆ ಹರಿದು ಹೋಗುವ ನೀರನ್ನ
ವ್ಯರ್ಥ ಅನ್ನೋದು ನ್ಯಾಯಾನ?
ಕಾಣಬಾರದೆ ಅದರ ಅವೇಗದಲ್ಲಿ,
ಅಡಗಿರುವ ಸಾಗರ ಸೇರುವ ಕಾತರವನ್ನ?//


ಎದೆಯಿಂದ ಹಾಗೆ ಹೊರಹೊಮ್ಮಿದ ಕವನ
ಮೌನದೊಳಗೂ ಅವಿತ ಮಾತಿನ ಸಂಕಲನ...
ನಿನಗೆ ನಾನು ಅದು ಹೇಗೋ ನನಗರಿವಿಲ್ಲ,
ಆದರೆ ನನಗಂತೂ ಸದಾ ನಿನ್ನದೆ ಧ್ಯಾನ/
ನನ್ನಾಸೆಯ ರಂಗೋಲಿಯನ್ನು ನೀನು ತುಳಿದು ಅಳಸಿ ಹಾಕಿದರೂನೂ
ಅಲ್ಲೆ ಅಳಿಯದೆ ಉಳಿದ ಕೆಲವು ಚುಕ್ಕಿಗಳಲ್ಲಿ....
ನಿನ್ನ ವಾಪಸಾತಿನ ನಿರೀಕ್ಷೆ ಮಡುಗಟ್ಟಿದೆ,
ಅಲ್ಲಿ ಸುಳಿದು-ಇಲ್ಲಿ ಸುಳಿದು ಎಲ್ಲೆಲ್ಲೊ ಅಲೆದು
ಕೊನೆಯದಾಗಿ ನನ್ನೆಲ್ಲ ನಿರೀಕ್ಷೆಗಳು ಬಂದು.....
ಆಸೆಗಣ್ಣನು ಅರಳಿಸಿಕೊಂಡು ನಿಲ್ಲೋದು
ನೀ ಹೋದ ಹಾದಿಯ ಅಂಚಿನಲ್ಲಿಯೆ//


ನೆನ್ನಿನಿರುಳು ಮಳೆಯ ಜೋಗುಳಕ್ಕೆ
ತನ್ಮಯನಾಗಿ ಮಲಗಿದ್ದ ನನ್ನ ಎದೆಯೊಳಗೂ......
ಎಡೆಬಿಡದೆ ಸುರಿಯುತ್ತಿದ್ದುದು ನಿನ್ನ ನೆನಪುಗಳದ್ದೆ ಸುರಿಮಳೆ,
ಬಾಲ್ಯದುದ್ದಕ್ಕೂ ಮಾಡಿನಂಚಿಗೆ ಸಿಕ್ಕಿಸಿದ್ದ ತಗಡಿನ ಮೇಲೆ
ಏಕತಾನ ಮೂಡಿಸುತ್ತ ಇರುಳಿಡೀ ಕೊನೆಯಿಲ್ಲದೆ ಕೇಳಿಸುತ್ತಿದ್ದ.....
ಮಳೆಯ ಹನಿಹನಿಯ ಏಕತಾನದಂತೆ
ನನ್ನೊಳಗೆ ನಿರಂತರ ಮೊರೆಯುವ ನಿನ್ನ ನೆನಪು/
ಮನಸ್ಸೆಂದಿದ್ದರೂ ಮಗುವೆ
ಅದರ ಮುಖವರಳಿಸೋಕೆ ಮೊದಲು ಅರಳಬೇಕಿರುವುದು.....
ನಿನ್ನ ತುಟಿಯಯಂಚಲ್ಲೊಂದು ಮಾಸದ ನಗುವೆ,
ಮೌನಕ್ಕಿಂತ ಮನ ಮುಟ್ಟುವ ಮಾತಿನ್ನೊಂದಿಲ್ಲ
ನಿಶಬ್ಧಕ್ಕಿಂತ ನಿಕಟವೆನಿಸುವ ಮಾತಿನ ತರಂಗಗಳಿಲ್ಲ....
ಕಣ್ಣು ಎಲ್ಲಾ ನಿಜವನ್ನೂ ನಗುವಿನ ಹಿಂದೆ ಮರೆಮಾಚಿ
ಹಾಗೆ ಅಡಗಿಸಿಡುವ ದುಃಖಕ್ಕೆ ಸರಿಸಮ ನೋವಿನ್ನೊಂದಿಲ್ಲ//

1 comment:

ಮೌನರಾಗ said...

ಅಸಡ್ಡೆ,ಅವಮಾನಗಳನ್ನು ಒಡಲಲ್ಲಿ ಹಾಕಿಕ್ಕೊಂಡು "ಆಸೆಗಣ್ಣನು ಅರಳಿಸಿಕೊಂಡು ನಿಲ್ಲೋದು
ನೀ ಹೋದ ಹಾದಿಯ ಅಂಚಿನಲ್ಲಿಯೆ.." ಅನ್ನುವುದು ಅದೆಷ್ಟು ಕಷ್ಟದ ಮತ್ತು ನಿಸ್ವಾರ್ಥದ ಸಂಬಂಧ ಹೇಳಿ?
ನಿಮ್ಮ ಕವಿತೆಯಾ ಶೈಲಿ ತುಂಬಾ ಇಷ್ಟವಾಯ್ತು..