ಗಾಳಿ ದೋಚಿದ ಹೂಗಳ ಕನಸುಗಳಲ್ಲೂ
ಅಂಟಿರೋದು ಕೇವಲ ನೆನಪಿನದ್ದೆ ಪರಿಮಳ....
ಮೌನದ ಚಾದರದೊಳಗೆ ಹುದುಗಿದ ಮನಸಿನೊಳಗೂ
ಕೊನೆಗಾಣದ ಮಾತುಗಳದ್ದೆ ಕಲರವ,
ಸುಖದ ಕ್ಷಣಗಳ ಸುಮಗಳಿಂದಲೆ ಆಯ್ದು
ನೆನಪಿನ ಮಾಲೆಯನ್ನು ಒಂದೊಂದೆ ಪೋಣಿಸುವಾಗ.....
ಮನಸಿನ ಬೆರಳುಗಳಿಗೆ ಅಂಟಿದ ಸಂತಸದ ಸುವಾಸನೆ
ಸಂಕಟದ ಈ ಹೊತ್ತಿನಲ್ಲೂ ಅಲ್ಲಿ ಹಾಗೆ ಉಳಿದು ಹೋಗಿದೆ/
ಕರಗಿದ ಕನಸಿನ ಇಬ್ಬನಿಯ ನಿರಾಸೆಯಲ್ಲೂ
ಮತ್ತೆ ನಾಳಿನ ಇರುಳು ಸ್ವಪ್ನದ ಇಬ್ಬನಿ ಬಿದ್ದೆ ಬೀಳುತ್ತದಲ್ಲ....
ಎಂಬ ನೆಮ್ಮದಿಯಲ್ಲಿ ನನ್ನನೇ ನಾನು,
ಸಾಂತ್ವನಗೊಳಿಸಿಕೊಂಡು ತುಸು ಹಗುರಾಗುತ್ತೇನೆ//
ಪರಿಮಳದಲ್ಲೆ ಪೋಣಿಸಿದ ಪಾರಿಜಾತದ ಹೂಗಳ ಮಾಲೆ
ಕಿಟಕಿಯಾಚೆ ನಗುವಾಗ.....
ನನಗೆ ನಿನ್ನ ಮಾಸದ ಮಂದಹಾಸದ ನೆನಪು ಎಡೆಬಿಡದೆ ಕಾಡುತ್ತದೆ,
ನನ್ನದು ಪ್ರೀತಿಯ ಕನವರಿಕೆಯೊ?
ಇಲ್ಲಾ ಕೇವಲ ಹಳೆಯ ನೆನಪುಗಳ ಹಳಹಳಿಕೆಯೊ?
ಎನ್ನುವ ದ್ವಂದ್ವ ಪದೆಪದೆ ಮನದೊಳಗೆ ಕದನ ಕಾದುತ್ತವೆ/
ಗಾಳಿ ಉಸುರಿದ ಗುಟ್ಟನ್ನಾಲಿಸಿದ ಮೊಗ್ಗುಗಳೆಲ್ಲ
ಕೆಂಪುಕೆಂಪಾದ ಹೂವಾಗಿ ಅರಳಿ....
ನಾಚಿ ನೆಲ ಮುಟ್ಟುತ್ತಿದೆ,
ಚಳಿಗೆ ಅಲುಗುವ ಪ್ರತಿಯೆಲೆಯ ಎದೆಯೊಳಗೂ
ಹೂಗಳೆಡೆಗಿನ ಒಲವಿನದೆ ನಸುಕಂಪನ...
ಸುಮಗಳ ಮೋಹಕ ಪಕಳೆಗಳ ಮೇಲೆಯೆ ಇದೆ ಎಲೆಗಳೆಲ್ಲದರ ತುಂಟ ಗಮನ!//
ಮೌನದ ತುಟಿಯ ಮೇಲರಳಿದ ನಸುನಗೆಯ ಕಂಡು
ಸಂಕಟದ ಅಧರದ ಮೇಲೆ ಮಾಸುವ ಮುನ್ನ ಉಳಿದ....
ಕಿರುನಗೆಯ ಕೊನೆಹನಿಯ ಕಂಡು ನನಗನ್ನಿಸಿದ್ದಿಷ್ಟು
ಮನಸು ನಿನ್ನನಿಂದೂ ಮರೆತಿಲ್ಲ!,
ತೊಟ್ಟಿಕ್ಕುವ ನೆನಪುಗಳ ಪ್ರತಿಹನಿಯಲ್ಲೂ
ನಿನ್ನ ಅಂದಿನ ಒಲವ ತಂಪಿದೆ...
ಬೇಸರದ ಬಾಳಲೂ ನೋಡು
ನೀನಿತ್ತ ಸಂತಸದ ಚಿರ ಕಂಪಿದೆ/
ಇಲ್ಲೊಂದು ಚೂರು ಚಂದ್ರ ಮಿನುಗುತ್ತಿದ್ದಾನೆ
ನೀನಿರುವಲ್ಲೂ ಅವನ ಇನ್ನೊಂದು ಚೂರು ಮಿನುಗುತ್ತಿರಬಹುದು...
ಕನಸೂ ಕೂಡ ಇಲ್ಲಿ ಅರ್ಧ ಉಳಿದುಹೋಗಿದೆ,
ಇನ್ನರ್ಧ ನಿನ್ನ ಕಣ್ಣಲ್ಲೆ ಉಳಿದಿರಬಹುದು ಅನ್ನುವ ಸಂಶಯ ನನ್ನದು...!//
ನನಗೊಂದಿಷ್ಟೂ ಗುಟ್ಟು ಬಿಟ್ಟು ಕೊಡದೆ
ಸದ್ದಿಲ್ಲದೆ ನನ್ನಿಂದ ಸರಿದು ದೂರಾದ ನಿನ್ನದು....
ಪ್ರಾಮಾಣಿಕ ವಂಚನೆಯೊ?
ಇಲ್ಲ ನಿನ್ನ ಬಗೆಗಿನ ಈ ಆಲೋಚನೆ ನನ್ನದೆ ಆತ್ಮವಂಚನೆಯೊ/,
ನನಗಿನ್ನೂ ಗೊಂದಲ ಬಗೆ ಹರಿಯುತ್ತಿಲ್ಲ!/
ಎಲ್ಲಿಂದಲೂ ಬೀಸುವ ತಣ್ಣನೆ ಗಾಳಿಯಲ್ಲಿ
ಅಷ್ಟೆ ತಣ್ಣಗೆ ನಿನ್ನ ನೆನಪುಗಳೂ ತೇಲಿಬಂದಿವೆ....
ಕನಸಿನಲ್ಲಿಯೂ ಕೂಡ ನಾನು ಮಾಡ ಬಯಸುವ ಗುರುತರ ಆಪರಾಧ
ನಿನ್ನ ಒಲವನ್ನ ನಿನ್ನನುಮತಿಗೂ ಕಾಯದೆ ಕೊಳ್ಳೆಹೊಡೆಯೋದು,
ನಿನ್ನ ನೆನಪುಗಳ ಚಾದರವನ್ನೆ
ಎದೆ ನಡುಗಿಸುವ ಚಳಿಗೆ ಬೆಚ್ಚಗೆ ಹೊದೆಯೋದು//
15 November 2011
Subscribe to:
Post Comments (Atom)
No comments:
Post a Comment