ಮರಳಿ ಮರಳಿ ಮನಸೊಳಗೆ ಮರುಕಳಿಸುವ
ನಿನ್ನೊಂದಿಗೆ ಕಳೆದ ಎಲ್ಲಾ ಕ್ಷಣಗಳ ಮರುಎಣಿಕೆಯಲ್ಲಿ.....
ನನ್ನ ಸದ್ಯದ ಪ್ರತಿಕ್ಷಣವೂ ವ್ಯಸ್ತ ಅನವರತ,
ಋತುಗಾನಕೆ ಮರುಳಾದ ಇಳೆ ತನ್ನೊಳಗೊಳಗೆ
ಸಂತಸದಲಿ ಸುಖಿಸುವಂತೆ...
ನಾನೂನು ನಿನ್ನ ನೆನಪಲ್ಲಿ
ಕೇವಲ ಖುಷಿಗಳನ್ನಷ್ಟೆ ಜಿನುಗಿಸುವ ಅಸಾಧ್ಯ ಪ್ರಯತ್ನದಲ್ಲಿ ನಿರತ/
ಮೆಲ್ಲಗೆ ಮಗುವಿನಂತೆ ನನ್ನೊಳಗೆ
ಅಡಿಯಿಟ್ಟು ಬರುವ ನಿನ್ನ ನೆನಪುಗಳು....
ಸಹಜವಾಗಿ ಎದೆಯೊಳಗೆ ಅಕ್ಕರೆ ಉಕ್ಕುವಂತಾಗಿಸುವಾಗ,
ನಾನಾದರೂ ಹೇಗೆ ಅವನ್ನು ದೂರ ತಳ್ಳಲಿ?//
ಮರುಭೂಮಿಯಲ್ಲೂ ಹಸಿರುಕ್ಕಿಸುವ ನೀರ ಹನಿಗಳ ಸಂತಸದಲ್ಲಿ
ನೆಲಕೂ ಸಮಪಾಲಿದೆ....
ನನ್ನೆದೆಯ ಬರಡಲ್ಲೂ ಕನಸ ಚಿಗುರಿಸುವ
ನಿನ್ನ ನೆನಪುಗಳ ಮಂದಹಾಸದ ಹಂಗಲ್ಲೂ,
ನೋವಿನತ್ತ ನನ್ನ ಮನ ಕೊಂಚ ವಾಲಿದೆ!/
ಕೈಯಲ್ಲಿ ಹಿಡಿದ ಹಬೆಯಾಡುವ ಚಹಾದ ಬಟ್ಟಲು.....
ಬಾಯಿ ರುಚಿಗೊಂದಷ್ಟು ಹಲಸಿನ ಹಪ್ಪಳ,
ಜೊತೆಗೆ ಭರಪೂರ ನಿನ್ನ ನೆನಪುಗಳು....
ಚುಮುಗುಡುವ ಛಳಿಯ ಮುಂಜಾವಿನಲ್ಲಿ ಬೆಚ್ಚಗಾಗಲು
ಇನ್ನೇನು ತಾನೆ ಬೇಕು ಹೇಳು?//
ಹೊರಗೆ ಸಣ್ಣಗೆ ಸೋನೆಮಳೆ
ನಿನ್ನ ನೆನಪಲ್ಲೆ ನಟ್ಟಿರುಳಿನಲ್ಲಿ ಅಡ್ಡಾಗಿದ್ದವನಿಗೆ....
ನೀನಿದ್ದ ಕನಸೆ ಒಡೆದ ಮೇಲೆ ಇನ್ನೆಲ್ಲಿಯ ನಿದ್ದೆ?
ಹೀಗಾಗಿಯೆ ಅಕಾಲದಲ್ಲಿ ನೋಡು ನಾನೆದ್ದೆ,
ಹೊರಗೆ ನೀರಿನ ದನಿ
ನನ್ನೊಳಗೆ ನಿನ್ನ ನೆನಪಿನ ಪಸೆ.....
ಇರುಳು ಇನ್ನೇನು ಸಾಯುತ್ತದೆ,
ಆದರೆ ನನ್ನ ಕಾಡುವ ನಿನ್ನ ನೆನಪು? ಅದರ ಖಾತ್ರಿಯಿಲ್ಲ/
ಕಳೆದ ದಿನಗಳನ್ನು ಮರಳಿ ಕೇಳಿಸುವಂತಹ
ಧ್ವನಿ ಪೆಟ್ಟಿಗೆಗಳಿದ್ದಿದ್ದರೆ....
ಸಂತಸದ ಧ್ವನಿ ಮುದ್ರಿಕೆಗಳನ್ನೆಲ್ಲ
ಪುನಃಪುನಃ ಹಾಕಿ ಆಲಿಸಿ ಸುಖಿಸುತ್ತಿದ್ದೆ ನಾನು,
ಸುಂದರ ಸಂಜೆಗಳನ್ನೆಲ್ಲ ಮತ್ತೆಮತ್ತೆ ಮರುಕಳಿಸಿ ಬರಿಸಿ
ಇನ್ನಷ್ಟು ಮತ್ತನಾಗುತ್ತಿದ್ದೆ...
ಉನ್ಮತ್ತನಾಗುತ್ತಿದ್ದೆ//
ಸಂತಸದ ಸಾಂಗತ್ಯ ಸಿಗದಿದ್ದರೂ
ಸಂಕಟ ನಂಟು ನನಗೆ ಬೇಕಿರಲಿಲ್ಲ....
ನಿನ್ನ ಜೊತೆಯ ಬಾಳು ನನಸಿನಲ್ಲಿ ನಸೀಬಿನಲ್ಲಿ ಇರದಿದ್ದರೂ
ಕನಸಿನಲ್ಲಾದರೂ ಅದು ನಸೀಬಿನಲ್ಲಿರಬೇಕಿತ್ತು!,
ಕಾಡುವ ನಿನ್ನ ನೆನಪುಗಳಿಂದ ಪಾರಾಗುವ ಮಾರ್ಗವೊಂದಿದ್ದಿದ್ದರೆ
ನಿನ್ನ ನೆನಪಿನ ನೆರಳಿನಿಂದ ಈಚೆಗೆ ಬರುವ ದಾರಿಯೊಂದಿದ್ದರೆ....
ನಾನು ಈ ನಿನ್ನ ನಿರೀಕ್ಷೆಯ ಸಂಕಟದಿಂದ ಕ್ಷಣವಾದರೂ ತಪ್ಪಿಸಿಕೊಂಡು
ಮತ್ತಲ್ಲಿಗೆ ಹಿಂದಿರುಗುತ್ತಿದ್ದೆ!/
ಅರಿಯದ ಕನಸುಗಳ ಅರಸುತ್ತ ದೂರದೂರವಾದ
ನಮ್ಮಿಬ್ಬರ ಬಾಳಿನ ಪಥಗಳಲ್ಲೂ.....
ಮಾಯವಾದ ಪ್ರೀತಿಯ ಮೂಕರೋಧನೆಯಷ್ಟೆ ಉಳಿದು ಹೋಗಿದೆ,
ನಿನ್ನೆಲ್ಲ ಕಣ್ಣ ಪ್ರತಿಫಲನದಲ್ಲಿ ನನ್ನ ಬಿಂಬ ಕಾಣುವ ತವಕ
ತಿರುಕನ ಕನಸೆಂದು ತಿಳಿದರೂ....
ಅದಕ್ಕಾಗಿ ಹಂಬಲಿಸುವ ನಾನು ಅನುಗಾಲದ ಮರುಳ//
ಏಕಾಂತದಲ್ಲಿ ನಿನ್ನ ನೆನನಪು ಖುಷಿ-ನೋವು
ಎರಡನ್ನೂ ಏಕಕಾಲದಲ್ಲಿ ಉಕ್ಕಿಸಿ ನನ್ನೊಳಗಿನ ಮೌನದಲೆಗಳನ್ನು ಕಲಕುತ್ತಿವೆ....
ಸೋಲು ಎಂಬುದೆ ಇಲ್ಲ ನನ್ನ ಬಾಳಲ್ಲಿ
ಎಂಬ ಜಂಬವಿತ್ತು ನನಗೆ....
ನೀ ಬಂದು ನನ್ನ ಬದುಕನ್ನೆ ಸಂಪೂರ್ಣ ಸೋಲಿಸುವ ತನಕ!,
ಮನಸೊಂದಿದ್ದಿರೋದು ಭಾಗ್ಯ ಅಂದುಕೊಂಡಿದ್ದೆ ಅದೆಷ್ಟೊ ಬಾರಿ
ಬಾಳಿನಲ್ಲಿ ನೀ ಸಿಕ್ಕಾಗ....
ನೀನೀಗ ಕೈಜಾರಿ ಹೋದ ಮೇಲೆ
ಈ ಮನಸನ್ನೋದು ಇದ್ದಿಲ್ಲದಿದ್ದರೆ ಇನ್ನೆಷ್ಟು ಸೋಗಸಾಗಿರುತ್ತಿತ್ತಲ್ಲ ಜೀವನ ಎಂದೆನಿಸುತ್ತಿದೆ!/
ಹೊರಗೆ ಹಬ್ಬಿದ ಪಾರಿಜಾತದ ತೆರೆ ಸೋಕಿ
ಮನೆತುಂಬುವ ಕಂಪಿನ ಗಾಳಿಯಲ್ಲೆಲ್ಲ....
ನಿನ್ನ ಮೈಗಂಧದ ಪರಿಮಳವೆ ವ್ಯಾಪಿಸಿದೆ,
ಸ್ಥಿಗ್ಧ ಪುತ್ಥಳಿಯಾಗಿ ನನ್ನೆದೆಯೊಳಗೆ
ಉಳಿದು ಹೋದ ನಿನ್ನ ನೆನಪುಗಳೆಲ್ಲ....
ನನ್ನೊಲವ ನೆರಳಿನಲ್ಲಿ ತಂಪಾಗಿವೆ//
05 November 2011
Subscribe to:
Post Comments (Atom)
No comments:
Post a Comment