ಬರಗೆಟ್ಟ ಬಾಳಿನ ಬಯಲಲ್ಲಿ ನೆನಪಿನ ಬುಗ್ಗೆಯುಕ್ಕಿ
ಬಾಯಾರಿ ದಣಿದ ಭಾವಗಳನ್ನೆಲ್ಲ ತಣಿಸಿ ಸಂತೈಸಿದವು.....
ನೋವಿನ ಮರುಕಳಿಕೆಗೆ ನೆನಪೆ ಹೇತುವೆ?,
ಅಲ್ಲಿಂದ ಮತ್ತೆ ನಲಿವಿನೆಡೆಗೆ ಸಾಗೋಕೆ ಅವೆ ನೆನಪುಗಳೆ ತಾನೆ ತೂಗುಸೇತುವೆ/
ನೆಲಕೆ ಮುತ್ತನಿತ್ತ ಮೊದಲ ರವಿಕಿರಣದ ಜೊತೆಗೆ
ಒಂದೊಂದಾಗಿ ನೆಲವ ಚುಂಬಿಸುವ ಪಾರಿಜಾತದ ಹೂಗಳ...
ಕಣ್ಗಳಲ್ಲಿರುವ ಕಾತರ ನನ್ನೆದೆಯಲ್ಲೂ ಮತ್ಸರ ಮೂಡಿಸಿ,
ನನ್ನನೂ ನಿನ್ನ ನೆನಪುಗಳೆಡೆ ಮತ್ತೆ ಬಾಗುವಂತೆ ಮಾಡಿವೆ//
ಕಾಲದ ಬಂಡಿಯನ್ನೇರಿ ಓಡುವ ಪ್ರತಿಕ್ಷಣದ ಹಿಂದೆಯೂ
ನಿನ್ನ ನಿರೀಕ್ಷೆಯ ಕಾತರದ ಮೂಟೆಹೊತ್ತು ನಾನೂ ಬರಿಗಾಲಲ್ಲಿ....
ಓಡುತ್ತಲೇ ಗುರಿಕಾಣದೆ ಹೊರಟಿದ್ದೇನೆ,
ಹಳೆಯ ಪುಟಗಳನ್ನ ತಿರುವಿ ಹಾಕುವ ಕೈಗಳನ್ನ
ನಡುಗಿಸುವ ನಿನ್ನ ನೆನಪಿನ ಪಂಕ್ತಿಗಳೆಲ್ಲ....
ಕಣ್ಣ ಅಂಗಳದಲ್ಲಿ ಮಡುಗಟ್ಟಿದ ಹನಿಗಳಲ್ಲಿ ಕಲಸಿ ಹೋಗಿ
ಅರಿವಿಲ್ಲದೆ ಅಲ್ಲಿಂದ ನಲಿವನ್ನು ಮರೆಯಾಗಿಸಿದೆ/
ಸಣ್ಣ ಸಣ್ಣ ಖುಷಿಗಳೊಂದಿಗೂ ಬೆಸೆದುಕೊಂಡಿದ್ದ
ನಿನ್ನ ಸಾಂಗತ್ಯದ ಸವಿ...ಅವನ್ನೆಲ್ಲ ಚಿರಸ್ಮರಣೀಯವಾಗಿಸಿದೆ....
ನಿನ್ನ ನೆನಪಿನ ನೋವು ನನ್ನೆದೆಯ ಸಂತಸಗಳನ್ನೆಲ್ಲ,
ನಿರ್ದಾಕ್ಷಿಣ್ಯವಾಗಿ ದೋಚಿಸಿದೆ//
ಹಿಂಗಾರಿನ ಹನಿಯ ಕಂಪಿಗೆ ಕಣ್ಣರಳಿಸಿ
ಕಾಯುವಂತೆ ಬಾನಂಚಿನತಾರೆ.....
ಮುಂಗಾರಿನ ಹಿತವಾದ ನೆನಪಲ್ಲಿ ಸುರಿಯುವಂತೆ
ಭೂಮಿಯೆದೆಯೊಳಗೆ ಒಲವಧಾರೆ,
ನನ್ನೊಳಗೂ ನೋವಿನಲೆ ಎಬ್ಬಿಸುತಿದೆ ನಿನ್ನ ನಿರೀಕ್ಷೆಯ ಕಂಪನ/
ಸಂಕಟವನ್ನಷ್ಟೆ ಅದು ಆಗಾಗ ಹೊರಹೊಮ್ಮಿಸುತ್ತಿದ್ದರೂ
ಅದೊಂತರಾ ನನ್ನ ಪಾಲಿಗೆ ತೇಯ್ದಾಗಲೆಲ್ಲ....
ಪರಿಮಳವನ್ನಷ್ಟೆ ಹೊಮ್ಮಿಸುವ ಸಿರಿಚಂದನ//
ಮತ್ತೆಮತ್ತೆ ಕಾಡುವ ನಿನ್ನ ನೆನಪುಗಳಿಂದ
ಪೀಡಿತವಾದ ನನ್ನ ಮನಸಿಗೆ.....
ಎಂದೆಂದೂ ಗುಣಪಡಿಸಲಾಗದ ಪ್ರೇಮರೋಗ,
ನಿನ್ನಷ್ಟೆ ಸುಂದರವಾಗಿ ಎದೆಯೊಳಗೆ ಹುಟ್ಟಿ
ನನ್ನ ಒಂಟಿತನವನ್ನು ಮೋಹಕಗೊಳಿಸುವ ನಿನ್ನ ನೆನಪು....
ಕೇವಲ ನಿನಗಾಗಿಯಷ್ಟೆ ಮನಸೊಳಗೆ ಹುಟ್ಟುವ ಮನಮೋಹಕ ರಾಗ/
ನೋವಿನ ಅಲೆಗಳ ಮೇಲೆ
ನಿಂತ ನೆನಪಿನ ಹಾಯಿದೋಣಿಗೆ...
ನಿನ್ನ ಒಪ್ಪಿಗೆಯ ಚುಕ್ಕಾಣಿ ಸಿಗದೆ ದಿಕ್ಕು ತಪ್ಪಿಹೋಗಿದೆ//
ನೀ ಬಯಸಿದಂತೆ ನಿನ್ನಿಂದ ದೂರಾಗಿ
ನಿನ್ನ ಪಾಲಿಗೆ ಅನಾಮಿಕನಾಗಿ....
ಹೀಗೆಯೆ ನೋವಿನ ಬಳ್ಳಿಯ ಮನಸಲ್ಲಿ ಹಬ್ಬಿಸಿಕೊಳ್ಳುತ್ತೇನೆ
ಎದೆಯ ಒಳಗೊಳಗೆ ಉಕ್ಕುವ ನಿರೀಕ್ಷೆಯ ಚಿಗುರ ಭಾವಗಳ ಬತ್ತಿಸಿ ಕೊಲ್ಲುತ್ತೇನೆ,
ಮನದ ಮಾಡಿನಿಂದ ಸುರಿದ ಪ್ರತಿ ಹನಿಯ ಹಿಂದೆ
ನಿನ್ನದೆ ನೆನಪಿನ ಸುನಾದ ಆವರಿಸಿದೆ......
ನೋವಿನ ಅನೂಹ್ಯ ಕ್ಷಣಗಳಲ್ಲೂ
ಅದೆ ನನ್ನ ಸಾಂತ್ವಾನಗೊಳಿಸಿ ನೇವರಿಸಿದೆ/
ಮನದ ಪರಿಧಿಯಾಚೆ ಬಿದ್ದ ಪ್ರತಿಹನಿಯು
ಅಲ್ಲೆ ಮಡುಗಟ್ಟಿ ನಿಂತು....
ನಿನ್ನ ಮೊಗವನ್ನೆ ಅದರಲ್ಲಿ ಪ್ರತಿಫಲಿಸಿದೆ//
10 November 2011
Subscribe to:
Post Comments (Atom)
No comments:
Post a Comment