ಕೇವಲ ಮನಡದೊಳಗೆ ಆರದೆ ಉಳಿದ ಇಬ್ಬನಿ ಹನಿಯಲ್ಲ
ನೀನು ಆಡದೆ ಉಳಿದ ಮೋಹಕ ದನಿಯೂ ಅಲ್ಲ...
ನೀ ನನ್ನೊಳಗಿನ ಮೌನ,
ನಾನದರಲ್ಲೆ ತಲ್ಲೀನ/
ಬಂಧಕ್ಕಿಂತ ಮಿಗಿಲಾದ ಸಂಬಂಧ ಬೆಸೆದಿರುವಾಗ ನಿನ್ನೊಂದಿಗೆ
ಇನ್ನಿತರ ಬೆಸುಗೆಗಳ ಬಯಕೆ ನನಗಿಲ್ಲವೆ ಇಲ್ಲ...
ಪ್ರತಿ ಪದವೂ ನಿನ್ನ ಹೆಸರನ್ನೆ ಪದೆಪದೆ ಉಸುರುವಾಗ
ಈ ನನ್ನ ಉಸಿರು ಕೇವಲ ನನ್ನದಷ್ಟೆ ಹೇಗಾದೀತು?,
ಕನಸ ಚಂಬಿಸುವ ಭ್ರಮೆಗಳ
ಈಡೇರದ ಬಯಕೆಗಳದ್ದು ಅನುದಿನ ಅಕಾಲಿಕ ಮರಣ.//
ಮೋಡದಾಚೆಗೆ ಜಾರಿದ ಭಾಸ್ಕರನ
ತೆರೆಮರೆಯ ಕಣ್ಣಾಮುಚ್ಚಾಲೆಯಲ್ಲಿ ಧರೆ ಪುಳಕಗೊಳ್ಳುತ್ತಿದೆ....
ಅರಳಿದ ಮನದಾವರೆ ಮುದುಡಿ ಮೆಲ್ಲಗೆ
ಬಾಡುವ ಕ್ಷಣದಲ್ಲಿ ನಿನ್ನ ನೆನಪುಗಳ
ಕೊನೆ ಹನಿಯನ್ನ ತನ್ನೆದೆಯೊಳಗೆ ಇಳಿಸಿಕೊಂಡಿದೆ,
ನಿನ್ನ ಹೆಜ್ಜೆಗುರುತುಗಳು ಹಸಿ ಆವೆ ಆವರಿಸಿರುವ
ನನ್ನೆದೆಯಲ್ಲಿ ಆಳವಾಗಿ ಉಳಿದು ಹೋಗಿ...
ನಿನ್ನನೆ ಪದೇಪದೇ ನೆನಪಿಸುತ್ತಿದೆ/
ಕಮರಿದ ಕನಸನ್ನು ಮತ್ತರಳಿಸಿದ
ನಿನ್ನ ನೆನಪುಗಳಿಗೆ ನನ್ನ ಮನಸು ಸದಾ ಋಣಿ....
ಸ್ವಪ್ನಗಳ ಗಾಢಾಲಿಂಗನದಲ್ಲಿ ಮಗ್ನ ಮನ
ನಿನ್ನೆದೆಯ ಕಾವಲ್ಲಿ ತುಸು ಬೆಚ್ಛಗಾಗುತ್ತಿದೆ.//
ಕಡೆಯ ಕುರುಹನ್ನೂ ಉಳಿಸದೆ ನೀ
ಒರೆಸಿ ಹಾಕಿದ್ದರೂನು ನನ್ನೆಲ್ಲ ನೆನಪುಗಳನ್ನು....
ನನ್ನೆದೆಯ ಸಂದೂಕದಲ್ಲಿ ನಿನ್ನೆಲ್ಲಾ ಪಳಯುಳಿಕೆಗಳು
ಶಾಶ್ವತ ಉಳಿದಿವೆ,
ಎದೆ ಸುಡುವ ವಿರಹದ ಉರಿಗೆ...
ನೆನಪುಗಳನ್ನೂ ಕರಕಲಾಗಿಸುವ ಶಕ್ತಿ ಇಲ್ಲ/
ಸಾದ್ಯಂತ ಸಲಹುವ ನೆನಪಿನ ಅಲಗು
ಅದೆಷ್ಟೆ ಹರಿತವಾಗಿದ್ದರೂ...
ನಿತ್ಯ ನನ್ನೆದೆ ತೂರಿ ಅದು ಹೊರಬರುವಾಗ
ಮೂಡುವ ನೋವಿನಲ್ಲೂ ಒಂದು ಸುಖವಿದೆ,
ಇದು ಎಂದಿಗೂ ಸರಿ ಹೋಗದ ಹುಚ್ಚು ಮನಕ್ಕೆ
ನೀನೆಂದರೆ ಇನ್ನೂ ನೆಚ್ಚು....
ನೀ ಇನ್ನೆಲ್ಲದಕ್ಕಿಂತ ನನಗೆ ಹೆಚ್ಚು.//
ನನ್ನೆದೆ ಕುದಿ ಮೌನದ ಕುಡಿ ಮನದ ಜ್ವಾಲಾಮುಖಿಯಲ್ಲಿ
ನಿನ್ನದೆ ನೆನಪಿನ ಲಾವಾರಸ ಉಕ್ಕುತ್ತಿದೆ...
ಕಾರಣವಿಲ್ಲದೆ ಕೆಣಕುವ ಕನಸುಗಳೆ ,
ನೆಮ್ಮದಿಯ ನಿದ್ರೆ ಬರುವ ಈ ರಾತ್ರಿ
ನಿಮಗೆ ನನ್ನ ಮನಸ ಕದ ಮುಚ್ಚಲಾಗಿದೆ/
ಗಾಳಿ ಗೀಚಿದ ಮೋಡದೆದೆಯ ಮೇಲಿನ ಗಾನ
ನನ್ನ ಮನದ ಶ್ರುತಿಯನ್ನೂ ಮೀಟಿ
ಮಳೆಹನಿಗಳ ಮಧುರ ಹಾಡಾಗಿಸಿದೆ,
ಒಳಮನದ ಇಳಿಮನೆಯಲ್ಲಿ ಉಳಿದ
ನೂರು ಕನಸುಗಳು ನಿನ್ನ ದಾರಿಯನ್ನೆ.....
ಕಡೆವರೆಗೂ ಕಾಯುತ್ತವೆ.//
1 comment:
nenapugale haage snehitare ,,,bedavendaroo becchneya goodondannu katti sulidaaduttiruttave ,,,barahada bhaavane tumbane ishta aytu ,,munduvaresi ,
www.bhagyamaynormane.blogspot.in
Post a Comment