15 October 2011

ಮರಳುಗಾಡಿನ ಮರ್ಮರ...(ಭಾಗ -3)

ಈ ಕಾಬಾ ಗುಡಿಯ ಸ್ಥಾಪನೆ,ಆರಾಧನೆ ಅರೇಬಿಯಾದ ಪುರಾಣ ಕಥೆಗಳಲ್ಲಿ ಬರುವ ಯಹೂದಿ ಹಾಗು ಕ್ರೈಸ್ತರ ಪ್ರವಾದಿ ಅಬ್ರಾಹಂನಿಂದ ಆಯಿತು ಎಂದು ಮುಸ್ಲೀಮರು ನಂಬುತ್ತಾರೆ.ದೇವರು ಅಬ್ರಾಹಂನನ್ನು ಭೂಮಿಗೆ ಕಳುಹಿಸಿ "ದೇವರೊಬ್ಬನೆ ಹಾಗೂ ಅಬ್ರಾಹಂ ಆತನ ಪ್ರತಿನಿಧಿ" ಎಂದು ಸಾರಲು ಆದೇಶಿಸುತ್ತಾನೆ.ಈ ಅಬ್ರಾಹಂನಾದರೋ ಸ್ವತಹ ಪ್ರವಾದಿಯಾಗಿದ್ದರೂ ಕೇವಲ ಮೂರೆ ಬಾರಿ ತನ್ನ ಜೀವನದಲ್ಲಿ ಸುಳ್ಳುಹೇಳಿರುತ್ತಾನೆ.ಎರಡು ಬಾರಿ ದೇವರ ಸಲುವಾಗಿ "ನನಗೆ ಸೌಖ್ಯವಿಲ್ಲ" ಅಂತಲೂ,"ಇಗೋ! ಇದೆ ಆ ಬೃಹತ್ ವಿಗ್ರಹ ಎಸಗಿದೆ!" ಅಂತಲೂ ಹಾಗೂ ಮೂರನೆಬಾರಿ ತನ್ನ ಮಡದಿ ಸಾರಾಳ ದೆಸೆಯಿಂದ ಸುಳ್ಳು ಹೇಳುತ್ತಾನೆ.ಆ ಸುಳ್ಳಿನ ಕಥೆ ಹೀಗಿದೆ.ಅಲೆಮಾರಿಯಾಗಿದ್ದ ಅಬ್ರಾಹಂ ಹೀಗೆ ಸುತ್ತುತ್ತಾ ಪ್ರಜಾಪೀಡಕನಾಗಿದ್ದ ರಾಜನೊಬ್ಬನ ರಾಜ್ಯಕ್ಕೆ ಬಂದಾಗ ಆ ಕಟುಕ ರಾಜ ತನ್ನ ಹೆಂಡತಿಗಾಗಿ ಹಂಬಲಿಸಿಯಾನು ಎಂದರಿತು,ಹೆಂಡತಿಗೆ 'ತಾನು ಅವಳ ಅಣ್ಣನೆಂದು...ಪತಿಯಲ್ಲವೆಂದೂ!' ಹೇಳುವಂತೆ ತಿಳಿಸುತ್ತಾನೆ.ಅವನು ನೆನೆಸಿದಂತೆ ರಾಜದೂತರು ಅವಳನ್ನು ರಾಜನ ಸನ್ನಿಧಿಗೆ ಕೊಂಡೊಯ್ಯುತ್ತಾರೆ.ಅಲ್ಲಿ ಅವಳನ್ನು ಕಂಡು ಮೋಹಿಸುವ ರಾಜ ಅವಳ ಕೈ ಹಿಡಿಯಲು ಧಾವಿಸುತ್ತಾನೆ.ದುರದೃಷ್ಟವಶಾತ್ ಆ ಕೈ ಭದ್ರವಾಗಿ ಅಲ್ಲಿಯೆ ಅಂಟಿಕೊಂಡು ಬಿಡುತ್ತದೆ! ಹೆದರಿದ ರಾಜ "ದಯವಿಟ್ಟು ಕೈ ಬಿಡುಗಡೆಯಾಗುವಂತೆ ದೇವರನ್ನು ಬೇಡಿಕೊ"ಎಂದು ಯಾಚಿಸಲು ಆಕೆ ಬೇಡಿದಾಗ ಕೈ ಬಿಡುಗಡೆಯಾಗುತ್ತದೆ.ನಿಟ್ಟುಸಿರು ಬಿಡುವ ರಾಜ ಅವಳ ದೈವಿಶಕ್ತಿಗೆ ಹೆದರಿ ಅವಳಿಗೊಬ್ಬ ಗುಲಾಮ ಹೆಣ್ಣನ್ನು ಬಳುವಳಿಯಾಗಿ ಕೊಟ್ಟು ತನ್ನ ಆಸ್ಥಾನದಿಂದ ಹೊರಗಟ್ಟುತ್ತಾನೆ.ಇತ್ತ ಪತ್ನಿಯನ್ನ ರಾಜನ ಬಳಿ ಕಳುಹಿಸಿ ದೈವದ ಮೊರೆಹೋಗಿದ್ದ ಅಬ್ರಾಹಂ ಈ ಪರಿ ಆಕೆ ಮರಳಿ ಬಂದಾಗ ಸಂತೋಷಗೊಂಡು ಕೂಡಲೆ ಇರಾಕ್ ಹಾಗು ಸಿರಿಯಾದ ದಿಕ್ಕಿಗೆ ಪ್ರಯಾಣಿಸುತ್ತಾನೆ.

ಹೀಗೆ ಸಾಗುವಾಗ ಗುಲಾಮ ಹೆಣ್ಣು ಹಾಜರಾಳೊಂದಿಗೆ ಅಬ್ರಾಹಂ ನಡೆಸುವ ದೈಹಿಕ ಸಂಬಂಧದಿಂದ 'ಇಸ್ಮಾಯಿಲ್' ಎಂಬ ಬಾಲಕನ ತಂದೆಯಾಗುತ್ತಾನೆ.ಅದರಿಂದ ಸವತಿ ಮಾತ್ಸರ್ಯಕ್ಕೆ ತುತ್ತಾಗುವ ಸಾರಾಳ ಒತ್ತಡ ತಾಳಲಾರದೆ ತಾಯಿ-ಮಗ ಇಬ್ಬರನ್ನೂ ಮೆಕ್ಕಾಗೆ ತಂದು ಬಿಡುತ್ತಾನೆ.ಇತ್ತ ಮರಳಿ ಸಾರಾಳನ್ನ ಬಂದು ಸೇರುವ ಅಬ್ರಾಹಂ ಅವಳಿಂದ ಐಸಾಕ್ ಹಾಗೂ ಜಾಕೊಬ್ ಎಂಬ ಮಕ್ಕಳನ್ನ ಪಡೆಯುತ್ತಾನೆ.

ಅಬ್ರಾಹಂ ಮೆಕ್ಕಾದ ಎತ್ತರ ಪ್ರದೇಶವೊಂದರ ಮರದಡಿ ಹಾಜರ ಮತ್ತು ಇಸ್ಮಾಯಿಲ್ ಇಬ್ಬರನ್ನೂ ಬಿಟ್ಟು ಹೋದನಲ್ಲ,ಜನವಸತಿಯಾಗಲಿ-ಜಲವಸತಿಯಾಗಲಿ ಇಲ್ಲದ ಈ ಬರಡು ಭೂಮಿಯಲ್ಲಿ ಹೀಗೆ ತ್ಯಜಿಸಿ ಹೋಗುವವನನ್ನ ಹಜರಾ ಹಿಂಬಾಲಿಸಿ ಹೋಗುತ್ತಾಳೆ.'ನಮ್ಮನ್ನು ಅನಾಥರಾಗಿ ಈ ಅಪರಿಚಿತ ಸ್ಥಳದಲ್ಲಿ ಬಿಟ್ಟು ಎಲ್ಲಿ ಹೋಗುತ್ತೀಯ?' ಎಂದವಳು ಕೇಳಿದಾಗ ಅವನಿಂದ ಉತ್ತರ ಬರುವುದಿಲ್ಲ.ಆಕೆ ಪುನಃ 'ದೇವರ ಆದೇಶದಂತೆ ನೀನು ಈ ಕೆಲಸ ಮಾಡುತ್ತಿರುವುದಾ?" ಎಂದು ಮರುಪ್ರಶ್ನಿಸಿದಾಗ ಅಬ್ರಾಹಂ "ಹೌದು!" ಎಂದೆ ಉತ್ತರಿಸುತ್ತಾನೆ. 'ಯಾರ ಆಸರೆಯಲ್ಲಿ ನಾವಿರಬೇಕು?' ಎನ್ನುತ್ತಾಳವಳು....ಇವನ ಉತ್ತರ "ದೇವರು!"."ಹೀಗಿದ್ದರೆ ನಾನಿದನ್ನು ಸ್ವೀಕರಿಸುವೆ" ಎನ್ನುವ ಆಕೆ ಹಿಂದಿರುಗುತ್ತಾಳೆ.

ಹೀಗೆ ಹಜರಾ ಮರೆಯಾದ ನಂತರ ಅಬ್ರಾಹಂ ಈಗಿರುವ ಕಾಬಾದ ಕಡೆಗೆ ಮುಖಮಾಡಿ ದೇವರನ್ನು "ನನ್ನ ಹೆಂಡತಿ ಹಜರಾ ಹಾಗು ಮಗು ಇಸ್ಮಾಯಿಲ್'ನನ್ನು ಈ ಪವಿತ್ರ ಕಣಿವೆಯ ಬಳಿ ಬಿಟ್ಟಿದ್ದೇನೆ...ಅವರಿಗೆ ಸುಖ ಸಮೃದ್ಧಿ ದೊರಕಲಿ ಎಂದು ಪ್ರಾರ್ಥಿಸುತ್ತಾನೆ.

ಇತ್ತ ಹಾಜರಾ ತನ್ನೊಂದಿಗೆ ಇದ್ದ ಚರ್ಮದ ಚೀಲದಲ್ಲಿದ್ದ ನೀರನ್ನೆಲ್ಲ ಕುಡಿದಾದ ನಂತರ ತನ್ನ ಮಗುವಿಗೆ ಹಾಲೂಡಿಸುತ್ತಾಳೆ,ಆದರೆ ಅವಳ ದಾಹ ಹೆಚ್ಚುತ್ತದೆ.ಕೂಸನ್ನು ಅಲ್ಲಿಯೆ ಬಿಟ್ಟು ನೀರಿಗಾಗಿ ಹುಡುಕುತ್ತ ಅಲೆದು ಹತ್ತಿರದ 'ಸಾಫಾ' ಗಿರಿಯನ್ನೇರುತ್ತಾಳೆ. ಶಿಖರದ ಮೇಲೇರಿ ದೂರದೂರದವರೆಗೆ ದಿಟ್ಟಿಸಿದರೂ ಜನವಸತಿ ಕಾಣದೆ ಹತಾಶಳಾಗುತ್ತ ಹತ್ತಿರದ ಇನ್ನೊಂದು ಗಿರಿ 'ಮಾರ್ವ'ವನ್ನೇರಿದಾಗ ಅವಳಿಗೊಂದು ಅಶರೀರವಾಣಿ ಕೇಳಿಸುತ್ತದೆ. "ಒಹ್! ನನಗೆ ನೀನು ಕೇಳಿಸುತ್ತಿದ್ದೀಯ! ನನಗೆ ಸಹಾಯಕವಾಗಲು ನಿನ್ನ ಬಳಿ ಏನಿದೆ?" ಎಂದಾಕೆ ದಿಗ್ಭ್ರಮೆಯಿಂದ ಕೇಳಲು ಅವಳಿಗೆ ಕಂಡದ್ದು ಒಬ್ಬ ಯಕ್ಷ.ಮೆಕ್ಕಾದ 'ಜುಮ್ ಜುಮ್' ಎಂಬಲ್ಲಿ ಆತ ತನ್ನ ಹಿಮ್ಮಡಿಯಿಂದ ನೆಲ ಅಗಿಯುತ್ತಿರುವಾಗ ಅಲ್ಲಿ ಜಲಧಾರೆ ಉಕ್ಕುತ್ತದೆ.ಆಗ ತಡ ಮಾಡದೆ ಆ ನೀರನ್ನೆಲ್ಲ ತನ್ನ ತೊಗಲಿನ ಚೀಲಕ್ಕೆ ತುಂಬಿಕೊಳ್ಳುವ ಆಕೆ ಅಲ್ಲಿಯೆ ತಂಗುತ್ತಾಳೆ.ಕಾಲಕ್ರಮೇಣ ನೀರು ಕಂಡ ಪಕ್ಷಿಗಳೂ,ಅದರ ಜಾಡು ಹಿಡಿದ ಬುಡಕಟ್ಟಿನವರೂ ಅಲ್ಲಿ ಬಂದು ತಂಗುತ್ತಾರೆ.ಹೀಗೆ ಹಾಜಿರಾ ನೆಮ್ಮದಿಯ ಬಾಳನ್ನು ಕಾಣುವಂತಾಗುತ್ತದೆ.ಕಾಲಾ ನಂತರ ಅವಳ ಮರಣವಾಗಿ,ವಯಸ್ಕನಾಗುವ ಅವಳ ಮಗನಿಗೆ ಅದೆ ಬುಡಕಟ್ಟಿನವರು ಹೆಣ್ಣುಕೊಟ್ಟು ಮದುವೆ ಮಾಡುತ್ತಾರೆ.ಹೀಗೆ ಅವನ ಸಂಸಾರ ಸಾಗುತ್ತಿರುವಾಗ ಅಬ್ರಾಹಂ ತಾನು ತೊರೆದು ಹೋದ ಕುಟುಂಬವನ್ನ ನೋಡಲು ಬರುತ್ತಾನೆ.ಆದರಾಗ ಇಸ್ಮಾಯಿಲ್ ಮನೆಯಲ್ಲಿರುವುದಿಲ್ಲ.ಅವನು ಅನ್ನ ಸಂಪಾದಿಸಲು ಹೊರಗೆ ಹೋಗಿದ್ದಾನೆನ್ನುವ ಹೆಂಡತಿಗೆ "ನಿನ್ನ ಗಂಡನಿಗೆ ನನ್ನ ವಿಜ್ಞಾಪನೆ ತಿಳಿಸು ಹಾಗೂ ಮನೆಯ ಹೊಸ್ತಿಲನ್ನ ಶೀಘ್ರ ಬದಲಿಸೋಕೆ ಹೇಳು!" ಎನ್ನುವ ಅಬ್ರಾಹಂ ಅಲ್ಲಿಂದ ನಿರ್ಗಮಿಸುತ್ತಾನೆ.ಯಾಥಾವತ್ ಮಾತುಗಳನ್ನ ಗಂಡ ಬಂದಾಗ ಆಕೆ ಅರುಹಿದಾಗ.ಒಡನೆಯೆ ಇಸ್ಮಾಯಿಲ್ " ಒಹ್! ಬಂದಿದ್ದವನು ನನ್ನ ತಂದೆ ಅವನು ನಿನ್ನನ್ನು ತ್ಯಜಿಸಲು ಹೇಳಿದ್ದಾನೆ! ಎಂದವನೆ ಆಕೆಗೆ ವಿಚ್ಚೇದನ ಕೊಟ್ಟು ಇನ್ನೊಬ್ಬಳನ್ನ ಕಟ್ಟಿಕೊಳ್ಳುತ್ತಾನೆ.ಆಕೆ ತವರಿಗೆ ಮರಳುತ್ತಾಳೆ.

ಪುನಃ ಸ್ವಲ್ಪ ಕಾಲದ ನಂತರ ಅಬ್ರಾಹಂ ಮಗನ ಮನೆಗೆ ಬರುತ್ತಾನೆ.ಆತನ ಹೊಸ ಹೆಂಡತಿಯನ್ನ ನೋಡಿ ಸಂಸಾರದ ಸ್ಥಿತಿಗತಿಯನ್ನ ವಿಚಾರಿಸಿದಾಗ ಆಕೆ "ನಾವು ಚೆನ್ನಾಗಿದ್ದೇವೆ" ಎಂದು ತಿಳಿಸುತ್ತಾಳೆ.ಸಂತುಷ್ಟನಾಗುವ ಅಬ್ರಾಹಂ "ಆತನಿಗೆ ನನ್ನ ವಿಜ್ಞಾಪನೆ ತಿಳಿಸು ಹಾಗೂ ಮನೆಯ ಹೊಸ್ತಿಲನ್ನ ಭದ್ರವಾಗಿರಿಸಿಕೊಳ್ಳಲು ತಿಳಿಸು" ಎಂದು ಹೇಳಿ ಮರೆಯಾಗುತ್ತಾನೆ.ಪತಿ ಮನೆಗೆ ಬಂದಾಗ ಅವಳು ಆತನಿಗಿದನ್ನ ತಿಳಿಸಿದಳು.ಆಗ ಇಸ್ಮಾಯಿಲ್ "ಬಂದವನು ನನ್ನ ತಂದೆ! ನಿನ್ನನ್ನ ತ್ಯಜಿಸದೆ ಇಟ್ಟುಕೊಳ್ಳಲು ನನಗೆ ಉಪದೇಶವಾಗಿದೆ" ಎಂದಂದ.ಮುಂದೊಮ್ಮೆ ಮರಳಿ ಅಬ್ರಾಹಂ ಮಗನನ್ನು ಹುಡುಕಿಕೊಂಡು ಬಂದಾಗ ಅವನಿಗೆ ಮಗನ ಸಹಾಯವೂ ಸೇರಿ ಮೊತ್ತ ಮೊದಲಿಗೆ 'ಕಾಬಾ'ದ ಗುಡಿ ಮೇಲೆದ್ದಿತು ಅನ್ನುವುದು ಐತಿಹ್ಯ.

(ಇನ್ನೂ ಇದೆ....)

ಮರಳುಗಾಡಿನ ಮರ್ಮರ...(ಭಾಗ -2)

ಆರನೆ ಶತಮಾನದಲ್ಲಿ ಅರೇಬಿಯಾದ ನೂರಾರು ಬುಡಕಟ್ಟುಗಳ ಜನರು ಬದುಕಿನ ಬಹುತೇಕ ಆಸರೆ ಕಳೆದುಕೊಂಡು ಅಲೆಮಾರಿಗಳಾಗಿ,ಅಸಂಸ್ಕೃತರಾಗಿ ದೇಶವನ್ನ ಸುತ್ತುವುದು ಸಾಮಾನ್ಯವಾಗಿತ್ತು.ಅವರೆಲ್ಲರೂ ತಮ್ಮತಮ್ಮ ಬುಡಕಟ್ಟುಗಳ ಸಂಸ್ಕೃತಿಗೆ ಬಲವಾಗಿ ಅಂಟಿಕೊಂಡಿದ್ದು ಅಸಹನೆ,ಕೋಪ-ತಾಪ,ನಿಷ್ಠೂರತೆ ಮುಂತಾದ ಗುಣಧರ್ಮಗಳನ್ನು ವಿಪರೀತವಾಗಿ ಬೆಳೆಸಿಕೊಂಡಿದ್ದರು.ಯಾರ ಹಿಡಿತಕ್ಕೂ ಸಿಗದೆ ನಿರ್ಭೀತರಾಗಿ-ಸ್ವತಂತ್ರ ಮನೋಭಾವನೆ ಬೆಳೆಸಿಕೊಂಡಿದ್ದ ಇವರು ಒಂದು ಕಾನೂನಿನ ಪ್ರಕಾರ ನಡೆದುಕೊಳ್ಳುತ್ತಿರಲಿಲ್ಲ.ಪ್ರತಿ ಬುಡಕಟ್ಟಿಗೆ 'ಶೇಖ್' ಎಂಬ ನೇತಾರನಿದ್ದರೂ ಅವನಿಂದಲೂ ಗುಂಪಿನ ಎಲ್ಲರನ್ನು ಬಯಸಿದಾಗ ನಿಯಂತ್ರಿಸೋದು ಕಷ್ಟವಾಗುತ್ತಿತ್ತು.ಒಂದು ವಿಚಿತ್ರ ರೀತಿಯ ಅರಬ್ಬರ ವ್ಯಕ್ತಿತ್ವದಲ್ಲಿ ಎದ್ದು ಕಾಣುವಂತಹ ವಿರೋಧಾಭಾಸಗಳು ಕಂಡು ಬರುತ್ತಿದ್ದವು ಎನ್ನುತ್ತಾನೆ ವಿಲ್ ಡ್ಯೂರಾಂಟ್.

ಒಂದುಕಡೆ ಅಸಂಖ್ಯಾತ ಉಪ ಬುಡಕಟ್ಟುಗಳ ಜನರು ಒಂದೆ ಭಾಷೆ,ನಡೆ-ನುಡಿ,ನ್ಯಾಯ ಸೂತ್ರಗಳನ್ನ ಒಪ್ಪಿಕೊಂಡಿದ್ದರೂ ಸಹ ಆಂತರಿಕವಾಗಿ 'ಸ್ವತಂತ್ರ ಮನೋಭಾವ'ವನ್ನೆ ಬೆಳೆಸಿಕೊಂಡು ಸಮಯ ಬಂದಾಗ ಯಾವುದೆ ನೈತಿಕ ನ್ಯಾಯ ಸೂತ್ರಗಳಿಗೆ ಕವಡೆ ಕಿಮ್ಮತ್ತನ್ನೂ ಕೊಡದೆ ಸದಾ ಚಡಪಡಿಸುತ್ತಾ ತಮ್ಮ ತಮ್ಮಲ್ಲೆ ಹೊಡೆದಾಡುತ್ತಿದ್ದು,ಸಣ್ಣಪುಟ್ಟ ಕ್ಷುದ್ರ ಕಾರಣಗಳಿಗೂ ಭೀಕರ ಮಾರಾಮಾರಿ-ಕದನ-ನೆತ್ತರ ಚೆಲ್ಲಾಟ ಸಾಮಾನ್ಯವೆಂಬಂತೆ ನಡೆಯುತ್ತಿದ್ದವು.ರಕ್ತ ಸಂಬಂಧ ಹಾಗೂ ಇನ್ನಿತರ ಯಾವುದೆ ಆಪ್ತ ಸಂಬಂಧಗಳ ಬೇಲಿಯೂ ಆ ಕ್ಷಣ ಅವರೊಳಗಿನ ಪಶು ವರ್ತನೆಯನ್ನು ತಡೆಯುತ್ತಿರಲಿಲ್ಲ.ಯಾವ ರಾಜನ ಚಕ್ರಾಧಿಪತ್ಯಕ್ಕೂ ಒಪ್ಪದೆ,ತಮ್ಮೊಳಗಿನ ನಾಯಕನ ಮುಂದಾಳತ್ವಕ್ಕೂ ಕಿಮ್ಮತ್ತು ಕೊಡದೆ ತಮಗೆ ಬೇಕಾದಂತೆ ಇರೋದು ಅವರ ರೂಢಿಯಾಗಿತ್ತು.ಐಕ್ಯತೆಯಲ್ಲಿ ನಂಬಿಕೆಯಿಡದೆ ಅನೈಕ್ಯತೆಯ ಅನಿಷ್ಟಗಳನ್ನ ಧಾರಾಳವಾಗಿ ಅನುಭವಿಸುತ್ತಿದ್ದ ಅರಬ್ಬರು ವಿರೋಧಾಭಾಸಪೂರಿತ ಜೀವನ ಶೈಲಿಯನ್ನು ಹೊಂದಿದ್ದದು ಸ್ಪಷ್ಟವಾಗಿತ್ತು.ಯಾವುದೆ ನಸರ್ಗಿಕ ತಡೆಗಳಿಲ್ಲದಿದ್ದರೂ ಅರಬ್ಬರ ಸ್ವಾತಂತ್ರ ಕಾಪಾಡಿದ್ದು ಇದೆ ವಿರೋಧಾಭಾಸ ಅನ್ನುವುದು ಇತಿಹಾಸಕಾರರ ಖಚಿತ ಅಭಿಪ್ರಾಯ.ಇಲ್ಲಿನ ಪ್ರತಿಯೊಂದು ಬುಡಕಟ್ಟು ಕೂಡ ಒಬ್ಬ ಪೂರ್ವಿಕನ ಹೆಸರಿನಿಂದ ಗುರುತಿಸಲ್ಪಡುತ್ತಿತ್ತು.ಉದಾಹಾರಣೆಗೆ 'ಬಾನ್ ಫಾಸನ್' ಬುಡಕಟ್ಟಿನವರು ತಾವು 'ಫಾಸನ್' ಎಂಬ ಸಂತತಿಗೆ ಸೇರಿದವರು ಎಂದು ಸಾರಿಕೊಳ್ಳುತ್ತಿದ್ದರು.ಹೀಗೆ ತಮ್ಮ ಬುಡಕಟ್ಟಿನ ಸಂಸ್ಕೃತಿ ಹಾಗೂ ಅಂತಸ್ತಿನ ಬಗ್ಗೆ ಅವರಲ್ಲಿ ಅತೀವ ಹೆಮ್ಮೆಯಿದ್ದು ತಮಗಿಂತ ಕೆಳ ಅಂತಸ್ತಿನ ಪಂಗಡದ ಜೊತೆ ಸಂಬಂಧ ಬೆಳೆಸುವುದರ ಬಗ್ಗೆ ವಿರೋಧ ವ್ಯಕ್ತವಾಗುತ್ತಿತ್ತು.

ಅಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಐದನೆ ಮೂರು ಭಾಗದಷ್ಟು ಮಂದಿ ಅಲೆಮಾರಿ ಬಿದೊವಿನ್ (bedowin) ಪಂಗಡದವರಾಗಿದ್ದು ತಮ್ಮ ಜಾನುವಾರುಗಳೊಂದಿಗೆ ಜಲವಸತಿ ಹುಡುಕಿಕೊಂಡು ಅಲೆದಾಡುವ ಪರಿಪಾಠ ಅವರದ್ದಾಗಿತ್ತು.ಕುದುರೆಗಳನ್ನ ಸಾಕಿ ಬೆಳೆಸುವುದು ಅವರ ಅನ್ನಕ್ಕೆ ದಾರಿಯಾಗಿದ್ದರೂ ಒಂಟೆಗಳು ಅವರ ಸರ್ವಸ್ವವಾಗಿದ್ದವು.ಅವರ ಜೀವನದ ಅಂಗವಾಗಿದ್ದ ಒಂಟೆ ಅವರೊಂದಿಗೆ ಹುಟ್ಟಿ ಮರುಭೂಮಿಯ ವೈಪರೇತ್ಯಗಳನ್ನೆಲ್ಲ ಸಹಿಸಿಕೊಂಡು ಸಾವಿನಲ್ಲೂ ಉಪಕಾರಿಯಾಗಿಯೆ ಸಾಯುತ್ತಿತ್ತು.ಉರಿ ಬೇಸಿಗೆಯಲ್ಲಿ ಐದು ದಿನಗಳವರೆಗೆ ನೀರಿಲ್ಲದೆ ಬದುಕುವ ಒಂಟೆ ಚಳಿಗಾಲದಲ್ಲಿ ನೀರಿಲ್ಲದೆ ಇಪ್ಪತೈದು ದಿನ ಸವೆಸಬಲ್ಲದು.ಪೌಷ್ಟಿಕತೆ ಹೆಚ್ಚಿಸುವ ಅದರ ಹಾಲು,ಬೆರಣಿಯಾಗಿ ಇಂಧನವಾಗುವ ಅದರ ಸಗಣಿ,ಸತ್ತರೆ ಆಹಾರವಾಗಬಹುದಾದ ಅದರ ಮಾಂಸ,ಗುಡಾರ-ಉಡುಪು ಇನ್ನಿತರ ನಿತ್ಯೋಪಯೋಗಿ ವಸ್ತುಗಳಾಗುವ ಅದರ ಚರ್ಮ ಹೀಗೆ ಅವರ ಸಮಸ್ತ ಅಗತ್ಯಗಳನ್ನೂ ಪೂರೈಸುವ ಒಂಟೆಯೆಂದರೆ ಅವರಿಗೆ ಅಚ್ಚುಮೆಚ್ಚು.ಅದರಷ್ಟೆ ಅವರೂ ಕಷ್ಟ ಸಹಿಷ್ಣುಗಳಾಗಿದ್ದರು.ಹೋರಾಟ-ಮೋಜು-ಪ್ರೇಮ-ಕಲಹ ಇವಷ್ಟೆ ಅವರ ಬಾಳ್ವೆಯಾಗಿತ್ತು.ಇನ್ನಿತರ ಉಪ ಬುಡಕಟ್ಟುಗಳನ್ನ ಮಣಿಸಿ ಅವರನ್ನ ದೋಚುವುದು ;ಅಂತೆಯೆ ತನ್ನ ಮೇಲೆ ಎರಗುವ ಇತರ ಬುಡಕಟ್ಟುಗಳವರಿಂದ ತನ್ನನ್ನು ಕಾಪಾಡಿಕೊಳ್ಳಲು ಹೆಣಗುವುದು.ತನಗೆ ಅದೆಂದೊ ಒದಗಿದ್ದ ಅವಮಾನಕ್ಕೆ ಪ್ರತಿಕಾರವಾಗಿ ಸೇಡು ತೀರಿಸಿಕೊಳ್ಳುವುದು ಇವೆ ಅವರ ಜೀವನದ ರೀತಿಯಾಗಿತ್ತು.'ಪವಿತ್ರ ದಿನ'ಗಳೆಂದು ಪರಿಗಣಿಸುವ ದಿನಗಳಲ್ಲಿ ಅವರು ವಿಶ್ರಾಮದಲ್ಲಿರುತ್ತಿದ್ದು ಹೋರಾಟದಿಂದ ವಿಮುಖರಾಗುತ್ತಿದ್ದರು.ತಮ್ಮ ಪ್ರದೇಶದೊಳಗೆ ಅಕ್ರಮವಾಗಿ ನುಸುಳಿವ ಇತರ ಜನಾಂಗದವರನ್ನ ಬೆದರಿಸಿ-ಲೂಟಿ ಹೊಡೆದುಕಳಿಸಲಾಗುತ್ತಿತ್ತು! ಇವರನ್ನು 'ಕರುಣಾಳು,ಕೊಲೆಗಡುಕ,ಉದಾರಿ,ದುರಾಸಾಪೂರಿತ,ನಂಬಲರ್ಹ,ನಂಬಿಕೆ ದ್ರೋಹಿ ಹಾಗೂ ಎದೆಗಾರಿಕೆಯುಳ್ಳವರು!' ಎಂದು ವಿಚಿತ್ರವಾಗಿ ವಿಲ್ ಡ್ಯೂರಾಂಟ್ ವರ್ಣಿಸಿದ್ದಾನೆ.

ರಾಜಕೀಯ ಸಂಗತಿಗಳಲ್ಲಿ ಹೊಂದಿದ್ದಷ್ಟೆ ಅನೈಕ್ಯತೆಯನ್ನ ಅರಬ್ಬರು ದೇವಾರಾಧನೆಗಳ ವಿಷಯದಲ್ಲೂ ಹೊಂದಿದ್ದರು.ಯಾವ ಸುಧಾರಣೆಗೂ ಸೊಪ್ಪು ಹಾಕದೆ,ಯಹೂದಿ ಹಾಗೂ ಕ್ರೈಸ್ತ ಏಕದೇವತಾರಾಧನೆಯನ್ನ ಒಪ್ಪದೆ ಬಹುದೇವರನ್ನ ನಂಬುತ್ತಾ ವಿಗ್ರಹಾರಾಧನೆಯಲ್ಲಿ ನಂಬಿಕೆಹೊಂದಿದ್ದರು.ಯಾವುದೆ ಬಾಹ್ಯ ಪ್ರಭಾವಗಳು ಈ ನಂಬಿಕೆಯನ್ನ ಸಡಿಲಗೊಳಿಸಿರಲಿಲ್ಲ.ದೇವರೊಂದಿಗೆ ಅವರು ದೆವ್ವಗಳನ್ನೂ ನಂಬುತ್ತಿದ್ದು ಆಗಾಗ ಬಲಿ ನೀಡುವ ಮೂಲಕ,ಕವಿತ್ವ ಪ್ರದರ್ಶನದ ಮೂಲಕ ಹಾಡಿ ನಲಿದು ದೇವರನ್ನ ಒಲಿಸಿಕೊಳ್ಳುವುದು ಅವರಿಗೆ ಅಭ್ಯಾಸವಾಗಿತ್ತು.

ಅರಬ್ಬರ ಆರಾಧನಾ ಸ್ಥಳಗಳಲ್ಲಿ ಪುರಾತನ ಕಾಲದಿಂದಲೂ ಅಸ್ತಿತ್ವದಲ್ಲಿದ್ದ ಮೆಕ್ಕಾದ ವಿಗ್ರಹಾರಾಧನೆಯ ಗುಡಿಯೂ ಒಂದಾಗಿತ್ತು.ಆಯಕಟ್ಟಿನ ಸ್ಥಳದಲ್ಲಿದ್ದರಿಂದ ಮೆಕ್ಕಾ ಕ್ರಿಸ್ತಪೂರ್ವದಿಂದಲೂ ಪ್ರಸಿದ್ಧಿ ಪಡೆದಿತ್ತು ಅನ್ನುವುದು ಇತಿಹಾಸಕಾರರ ನಂಬಿಕೆ.ಮೆಕ್ಕಾ ಒಂದು ಬರಡು ಕಣಿವೆಯಲ್ಲಿದ್ದು ಅದರ ಸುತ್ತಲೂ ಕೆಂಪುಕಲ್ಲಿನ ಪರ್ವತಗಳಿಂದ ಅದು ಸುತ್ತುವರೆದಿದೆ.ಕೆಂಪುಸಮುದ್ರ ಇಲ್ಲಿಗೆ ಕೇವಲ ಐವತ್ತು ಮೈಲಿ ದೂರದಲ್ಲಿದೆ.ಅರೇಬಿಯಾದಿಂದ ಹೊರಸಾಗುವ ಕ್ಯಾರವಾನ್'ಗಳು ಹಾಗೂ ಅರೇಬಿಯಾದ ಒಳ ಪ್ರವೇಶಿಸುವ ಕ್ಯಾರವಾನ್'ಗಳು ಇಲ್ಲಿ ಲಂಗರು ಹಾಕುತ್ತಿದ್ದವು.ಇಂತಹ ಸಾವಿರಾರು ಕ್ಯಾರವಾನ್'ಗಳು ವಿಶ್ರಮಿಸುವ ಸರ್ವಋತು ತಂಗುದಾಣಕ್ಕೆ ಒಂದು ಪೂಜಾಸ್ಥಳದ ಅಗತ್ಯ ಕಂಡುಬರೋದರಲ್ಲಿ ಅಚ್ಚರಿಯೇನಿಲ್ಲ.

ಸದಾ ವಣಿಕರಿಂದ ತುಂಬಿ ತುಳುಕುತ್ತಿದ್ದ ಈ ಸ್ಥಳದಲ್ಲಿ ತಮ್ಮ ಧಾರ್ಮಿಕ ಆಚರಣೆಗಳ ಅನುಸಾರ ಅರಬ್ಬರು ಒಂದು ಗುಡಿ ಕಟ್ಟಿಕೊಂಡಿದ್ದು ಅದನ್ನ 'ಕಾಬಾ' ಎಂದು ಕರೆದುಕೊಂಡಿದ್ದರು.ಇದೊಂದು ಚಚ್ಚೌಕದ ಕಟ್ಟಡವಾಗಿದ್ದು ಒಟ್ಟು ಹತ್ತು ಬಾರಿ ಇದನ್ನ ನಿರ್ಮಿಸಲಾಗಿದೆ ಅನ್ನುವುದು ಮುಸ್ಲೀಮರ ನಂಬಿಕೆ.ಮೊದಲನೆ ಕಟ್ಟಡ ಅನಾದಿಕಾಲದಲ್ಲಿ ದೇವದೂತರ ನಿರ್ಮಿತಿಯಾಗಿದ್ದಾರೆ ಎರಡನೆಯದನ್ನ ಬೈಬಲ್'ನಲ್ಲಿ ಬರುವ ಪ್ರವಾದಿ ಆದಂ ಕಟ್ಟಿದ ಎನ್ನಲಾಗುತ್ತದೆ.ಮೂರನೆಯದನ್ನು ಅವನ ಮಗ ಸೇಥ್,ನಾಲ್ಕನೆಯದನ್ನು ಮೊಮ್ಮಗ ಅಬ್ರಾಹಂ ಹಾಗೂ ಐದನೆಯದನ್ನು ಮರಿಮಗ ಹಗರ್ ಕಟ್ಟಿದ್ದನಂತೆ.ಆರು ಮತ್ತು ಏಳನೆಯದನ್ನು ಇಸ್ಲಾಂ ಪೂರ್ವದ ಖುರೈಷಿ ಬುಡಕಟ್ಟಿನವರು ಕಟ್ಟಿದ್ದಾರೆ ಎಂಟನೆಯದ್ದನ್ನು ಮಹಮದ್ ಕಾಲದಲ್ಲಿ ಮತ್ತವರೆ ಕಟ್ಟಿದ್ದರು.ಕ್ರಿಸ್ತಶಕ 681 ಮತ್ತು 696ರಲ್ಲಿ ಮುಸ್ಲೀಂ ಶ್ರದ್ಧಾಳುಗಳು ಒಂಬತ್ತನೆ ಹಾಗು ಹತ್ತನೆ ಕಟ್ಟಡವನ್ನು ನಿರ್ಮಿಸಿದರು ಎನ್ನಲಾಗುತ್ತದೆ.ಈಗ ಅಲ್ಲಿರುವ ಕಟ್ಟಡ ಅನಂತರದ ದಿನಗಳಲ್ಲಿ ವಿವಿಧ ಖಲೀಫರಿಂದ ನಿರ್ಮಾಣಗೊಂಡಿತು.40 ಅಡಿ ಉದ್ದ ಹಾಗೂ 50 ಅಡಿ ಎತ್ತರ ಹಾಗೂ 35 ಅಡಿ ಅಗಲದ ಚಚ್ಚೌಕದಾಕೃತಿಯ ಕಾಬಾ ತನ್ನ ದಕ್ಷಿಣ ಭಾಗದಲ್ಲಿ ನೆಲದಿಂದ ಐದು ಅಡಿ ಎತ್ತರದಲ್ಲಿ 'ಪವಿತ್ರ ಕರಿಶಿಲೆ'ಯನ್ನ ಹೊಂದಿದೆ.ಮುಸ್ಲೀಮರಿಗೆ ಈ ಕರಿಶಿಲೆ ಪರಮ ಪವಿತ್ರ.ಅದನ್ನು ಸ್ವರ್ಗದಿಂದಲೆ ಪಡೆಯಲಾಗಿದೆ ಎಂದು ನಂಬುವ ಮುಸ್ಲಿಂ ಯಾತ್ರಿಕರು ಶ್ರದ್ಧಾ ಭಕ್ತಿಯಿಂದ ಅದಕ್ಕೆ ಮುತ್ತಿಟ್ಟು ಧನ್ಯರಾಗುತ್ತಾರೆ.

'ಕಾಬಾ' ಕಟ್ಟಡ ದೊಳಗೆ ಇಸ್ಲಾಮಿನ ಉಗಮಕ್ಕೂ ಪೂರ್ವದಲ್ಲಿಯೇ ಒಟ್ಟು 361 ವಿಗ್ರಹಗಳನ್ನು ಆರಾಧಿಸುವ ಪದ್ದತಿಯಿತ್ತು.ಈ ಅನೇಕ ವಿಗ್ರಹಗಳ ಪೈಕಿ 'ಅಲ್ಲಾಹ'ನೂ ಒಬ್ಬನಾಗಿದ್ದ.ಅವನನ್ನು ಕೇವಲ ಮೆಕ್ಕಾ ಮೂಲ ನಿವಾಸಿಗಳು ಆರಾಧಿಸುತ್ತಿದ್ದರು ಅನ್ನುವ ವಿಶ್ಲೇಷಣೆ ವಿಲ್ ಡ್ಯೂರಂಟನದು.

(ಇನ್ನೂ ಇದೆ....)

14 October 2011

ಮರಳುಗಾಡಿನ ಮರ್ಮರ...

ಭೂಮಂಡಲದಲ್ಲಿ ಅರೇಬಿಯಾ ಭೂಭಾಗ ಬೃಹತ್ ಮರಳುಗಾಡು ವ್ಯಾಪಿಸಿರುವ ಒಣ ಪ್ರದೇಶ.ಅದರ ಪೂರ್ವದಿಕ್ಕಿನಲ್ಲಿ ಪರ್ಷಿಯನ್ ಕೊಲ್ಲಿ,ಪಶ್ಚಿಮಕ್ಕೆ ಕೆಂಪುಸಮುದ್ರ ಹಾಗೂ ದಕ್ಷಿಣಕ್ಕೆ ಅರಬ್ಬಿಸಮುದ್ರ ಆವರಿಸಿದ್ದು ಅದೊಂದು ಪರ್ಯಾಯದ್ವೀಪವಾಗಿ ಅಸ್ತಿತ್ವದಲ್ಲಿದೆ.ಈ ಪರ್ಯಾಯದ್ವೀಪದ ಪಶ್ಚಿಮ ಭಾಗದಲ್ಲಿ ಕೆಂಪುಸಮುದ್ರಕ್ಕೆ ಅಂಟಿಕೊಂಡಂತೆ ಒರಟು ಕೆಂಪುಮರಳುಗಲ್ಲಿನ ಗಿರಿಶ್ರೇಣಿಗಳು ದಕ್ಷಿಣದಿಂದ ಉತ್ತರದ ಕಡೆಗೆ ಹರಡಿವೆ.ಇದರ ಒಂದು ಭಾಗ ಸಮುದ್ರ ತೀರದಡೆಗೆ ಚಾಚಿದ್ದಾರೆ ಇನ್ನೊಂದು ಭಾಗ ಸಮುದ್ರ ಮಟ್ಟಕ್ಕಿಂತ ಸ್ವಲ್ಪ ತಗ್ಗಿನವರೆಗೂ ಒಳನಾಡಿನತ್ತ ಮೈಲಿಗಳ ದೂರ ವ್ಯಾಪಿಸಿದೆ.ಈ ಗಿರಿಶಿಖರ ಹಾಗೂ ಕೆಂಪುಸಮುದ್ರದ ಮಧ್ಯದಲ್ಲಿರುವ ಪ್ರದೇಶದಲ್ಲಿರುವುದೆ ಇತಿಹಾಸ ಪ್ರಸಿದ್ಧ ಮೆಕ್ಕಾ ಹಾಗು ಮದೀನಾ ನಗರ ಗಳು.

ಅರೇಬಿಯಾ ಒಟ್ಟಾರೆ 1400ಮೈಲಿ ಉದ್ದವಿದ್ದು, 1250ಮೈಲಿ ಅಗಲವಾಗಿದೆ.ಆದರೆ ಈ ವಿಶಾಲಪ್ರದೇಶ ಒಂದೇಒಂದು ದೊಡ್ಡ ನದಿ ಅಥವಾ ಹೊಳೆಯನ್ನ ಹೊಂದಿಲ್ಲದಿರುವುದು ವಿಸ್ಮಯ ಹುಟ್ಟಿಸುತ್ತದೆ.ಅರೇಬಿಕ್ ಭಾಷೆಯಲ್ಲಿ 'ಅರಬ' ಎಂದರೆ ಬರಡು ಎಂದರ್ಥ.ಹೆಸರಿಗೆ ತಕ್ಕಂತೆ ಈ ಪ್ರೆದೇಶ ಒಂದು ಬರಡು ಭೂಮಿಯೆ ಆಗಿದ್ದು ಈ ಎರಡು ನಗರಗಳಿರುವ ಪ್ರದೇಶದಿಂದ ಪೂರ್ವಕ್ಕೆ ಭೂಮಿ ಇಳಿಜಾರಾಗಿದ್ದು ನಡುನಡುವೆ ಕೆಲವೊಮ್ಮೆ 12000ಅಡಿ ಎತ್ತರದ ಪರ್ವತಗಳು ಏರ್ಪಟ್ಟು ಮತ್ತೆ ಕೊಲ್ಲಿಯವರೆಗೂ ಇಳಿಜಾರಾಗಿ ಒಂದು ಬಗೆಯ ವಿಲಕ್ಷಣತೆ ಹೊಂದಿರುವುದು ಒಂದು ವಿಶೇಷ.ಆದರೆ ಇಲ್ಲಿನ ನೈಋತ್ಯ ಭಾಗ ಸಣ್ಣಪುಟ್ಟ ನೀರಿನ ಒರತೆ-ಹಳ್ಳಗಳನ್ನು ಹೊಂದಿದ್ದು ಅಲ್ಲಿನ ಮಣ್ಣಿನ ಫಲವತ್ತತೆಯನ್ನ ಹೆಚ್ಚಿಸುವುದರಲ್ಲಿ ಸಹಕಾರಿಯಾಗಿದೆ.ಉಳಿದಂತೆ ಇನ್ನು ಯಾವ ಭಾಗವೂ ಆ ಭಾಗ್ಯ ಹೊಂದಿರದೆ ಬೆಂಗಾಡಾಗಿ ಕೇವಲ ಅಲ್ಲಲ್ಲಿ ಕಾಣುವ ಓಯಸಿಸ್'ಗಳಿಂದಷ್ಟೆ ನೀರುಂಡು ಕರ್ಜೂರ-ಬಾರ್ಲಿ-ಅಕೇಶಿಯ ಮುಂತಾದ ಸಸ್ಯಗಳನ್ನಷ್ಟೆ ಬೆಳೆದುಕೊಳ್ಳಲು ಶಕ್ತವಾಗಿವೆ.ಈ ಜಲವಸತಿಗಳ ಸುತ್ತ ಜನವಸತಿ ಹಬ್ಬಿದೆ.ಅನಾದಿಕಾಲದಿಂದಲೂ ಇಂತಹ ಓಯಸಿಸ್'ಗಳ ಸುತ್ತ ಏರ್ಪಟ್ಟ ಜನವಸತಿಗಳ ಬುಡಕಟ್ಟಿನ ಮಂದಿಗೆ ಇಲ್ಲಿನ ಉರಿ ಉಷ್ಣಾಂಶವೆ ಮೊದಲ ಶತ್ರು.ಹಗಲಲ್ಲಿ ತಾರಕಕ್ಕೇರುವ ಉಷ್ಣಾಂಶ ಜನರ ರಕ್ತ ಕುದಿಸಿ ಮುಖವನ್ನ ಸುಡಿಸುವಂತಿರುವುದರಿಂದ ಇಲ್ಲಿನ ನಿವಾಸಿಗಳು ಮರಳು ಮಿಶ್ರಿತ ಸುಡುಗಾಳಿಯಿಂದ ತಮ್ಮನ್ನು ಕಾಪಾಡಿಕೊಳ್ಳಲು ಮೈತುಂಬ ನಿಲುವಂಗಿ ಹಾಗೂ ತಲೆಗೆಸುತ್ತಿಕೊಳ್ಳುವ ಬಟ್ಟೆ ಧರಿಸುವುದು ವಾಡಿಕೆ.ಮಳೆ ಎನ್ನುವುದು ಕೇವಲ ನೆನಪಿನ ಮಿತ್ರನಾಗಿದ್ದು,ಉರಿಕೆಂಡದಂತಹ ಸೂರ್ಯನ ಸ್ನೇಹವಿರುವುದರಿಂದ ಆಕಾಶ ವರ್ಷಪೂರ್ತಿ ತಿಳಿಯಾಗಿದ್ದು ಬೀಸುವ ಗಾಳಿ 'ಹೊಳೆಯುವ ದ್ರಾಕ್ಷಾರಸ' (Sparkling Wine) ದಂತೆ ಅನುಭವವಾಗುತ್ತದೆ ಎಂದಿದ್ದಾನೆ ಖ್ಯಾತ ಇತಿಹಾಸಕಾರ ವಿಲ್ ಡ್ಯೂರಾಂಟ್.

ತಮ್ಮದೆ ವಿಶಿಷ್ಟ ಸಂಸ್ಕೃತಿ,ನಡೆ-ನುಡಿ,ಹವ್ಯಾಸಗಳನ್ನ ಹೊಂದಿ ಇವೆಲ್ಲದರ ಕೂಡ ಬಾಳ್ವೆ ನಡೆಸುವುದು ಇಲ್ಲಿನ ಜನರಿಗೆ ಸಾಮಾನ್ಯ ಸಂಗತಿಯಾಗಿತ್ತು.ಆದರೆ ದಿನ ಬಳಕೆಯ ದವಸಧಾನ್ಯಗಳು ಹಾಗೂ ನಿತ್ಯೋಪಯೋಗಿ ಆಹಾರ ವಸ್ತುಗಳಿಗಾಗಿ ದೂರದೇಶದವರೊಂದಿಗೆ ವ್ಯಾಪಾರ ವಾಹಿವಾಟು ಇಟ್ಟುಕೊಳ್ಳುವುದು ಅರಬ್ಬಿಗಳಿಗೆ ತೀರಾ ಅನಿವಾರ್ಯವೆ ಆಗಿತ್ತು.ಹೀಗಾಗಿ ಸಾರ್ಥ (ಕ್ಯಾರವಾನ್) ಕಟ್ಟಿಕೊಂಡು ನೂರಾರು ಮೈಲಿ ಸುತ್ತುವುದನ್ನ ಜೀವನದ ಅಂಗವಾಗಿಸಿಕೊಂಡಿದ್ದ ಅರಬ್ಬಿಗಳು ಒಂಟೆ,ಕುದುರೆಗಳ ಮೇಲೆ ಕೊಂಡ ಸಾಮಾನುಗಳನ್ನ ಹೇರಿಕೊಂಡು ಅವುಗಳ ರಕ್ಷಣೆಗಾಗಿ ಅಂಗರಕ್ಷಕರ ನೆರವಿನಿಂದ ಅಥವಾ ಸ್ವತಃ ತಾವೆ ಶಸ್ತ್ರಸಜ್ಜಿತರಾಗಿ ದಾರಿಗಳ್ಳರೊಂದಿಗೆ ರೋಷಾವೇಶದಿಂದ ಹೋರಾಡುವುದನ್ನು ರೂಢಿಸಿಕೊಂಡಿದ್ದರು ಅರೇಬಿಯಾದ ಉದ್ದಗಲಕ್ಕೂ ಇಂತಹ ಕ್ಯಾರವಾನ್'ಗಳು ಸರ್ವೆಸಾಮಾನ್ಯವಾಗಿದ್ದು,ಅದು ಅಲ್ಲಿನ ನಿವಾಸಿಗಳ ಬದುಕಲ್ಲಿ ಹಾಸು ಹೊಕ್ಕಾಗಿತ್ತು.ಅಲ್ಲಿನ ಭಯಂಕರ ದುರ್ಗಮ ಮರಳುಗಾಡಿನಲ್ಲಿ ಪ್ರಯಾಣಿಸುವುದು ಪ್ರಯಾಸಕರವಾಗಿದ್ದು ಅನಿರೀಕ್ಷಿತ ಅಪಾಯಗಳಿಗೇನೂ ಕೊರತೆಯಿರಲಿಲ್ಲ.ಹೀಗಾಗಿ ಕ್ಯಾರವಾನಿಗರು ತಮ್ಮ ಸ್ವತ್ತುಗಳ ರಕ್ಷಣೆಗಾಗಿ ಕಾಣದ ದೇವರನ್ನ ಮೊರೆ ಹೋಗುವುದು ಸ್ವಾಭಾವಿಕವೆ ಆಗಿತ್ತು.ದಾರಿಯುದ್ದ ಸಿಗುವ ವಿವಿಧ ದೇವತಾರಾಧನ ಸ್ಥಳಗಳಲ್ಲಿ ತಮ್ಮ ಬುಡಕಟ್ಟಿಗೆ ಸೇರಿದ ದೇವರನ್ನ ಶ್ರದ್ಧಾಭಕ್ತಿಯಿಂದ ಆರಾಧಿಸುವುದು,ದೈವ ಕೃಪೆಯನ್ನ ಅಪೇಕ್ಷಿಸಿ ಪ್ರಾರ್ಥಿಸುವುದು ಅವರ ಬಾಳಿನ ಒಂದು ಅವಿಭಾಜ್ಯ ನಡೆಯಾಗಿತ್ತು.


ಅರಬ್ಬಿಗಳೊಂದಿಗೆ ವ್ಯಾಪಾರ ವಾಹಿವಾಟು ಇಟ್ಟುಕೊಂಡಿದ್ದ ಪ್ರಮುಖ ವಿದೇಶಗಳಲ್ಲಿ ಸಿರಿಯಾ ಹಾಗೂ ಪ್ಯಾಲಸ್ತೈನ್ ಪ್ರಮುಖವಾಗಿದ್ದವು.ಇವುಗಳೊಂದಿಗೆ ನೆರೆಯ ಇರಾನ್.ಇರಾಕ್ ಹಾಗೂ ಭಾರತದವರೆಗೂ ಅರಬ್ಬಿ ವಣಿಕರು ಕ್ಯಾರವಾನ್ ನಡೆಸುತಿದ್ದುದೂ ಇತ್ತು.ಅರಬ್ಬರಲ್ಲಿ ಕೆಲವರು ಹೀಗೆ ವ್ಯವಹಾರ ಕೌಶಲ್ಯ ಮೆರೆದರೆ,ಇನ್ನುಳಿದವರು ಹೊರದೇಶಗಳಲ್ಲಿ ಈ ವ್ಯವಹಾರ ಕೌಶಲ್ಯ ಮೆರೆದು ಪ್ರಸಿದ್ಧರೂ ಆಗಿದ್ದರು.ಆದರೆ ಅವರ ಆರ್ಥಿಕ ನೆಮ್ಮದಿಯನ್ನ ಕಲಕಿದ್ದು ವಿದೇಶಿ ವ್ಯಾಪಾರಗಳಲ್ಲಿ ರೋಮನ್ನರ ಅಧಿಪತ್ಯ.ಕ್ರೈಸ್ತ ಮತ ರಾಜಧರ್ಮವಾಗಿ ರೋಮನ್ ಸಾಮ್ರಾಜ್ಯ ಪ್ರವರ್ಧಮಾನಕ್ಕೆ ಬಂದ ಕಾರಣ ಕ್ಯಾರವಾನ್'ಗಳ ಮೇಲೆ ರೋಮನ್ ಸುಂಕಾಧಿಕಾರಿಗಳು ಹೇರಲಾರಂಭಿಸಿದ ದುಬಾರಿ ಶುಲ್ಕ ಹಾಗೂ ವಿಪರೀತ ನಿರ್ಬಂಧಗಳ ಕಾರಣ ಕೆಂಗೆಟ್ಟ ಅನೇಕ ಅರಬ್ಬರು ಮರಳಿ ಮಾತೃಭೂಮಿಗೆ ಬಂದು ಮೆಕ್ಕಾ,ಮದೀನ ಹಾಗೂ ಸಿರಿಯಾ ಸೇರಿದಂತೆ ಮಧ್ಯ ಪ್ರಾಚ್ಯದಾದ್ಯಂತ ಹರಿದು ಹಂಚಿಹೋದರು.

ಗ್ರೀಕನ್ನರಿಂದ 'ಸೇರಾಕೆನಾಯ್' (Serakenoi) ಅಥವಾ "ಸಾರ್'ಸೆನ್ಸ್" ಎಂದು ಕರೆಸಿಕೊಂಡ ಅರೆಬಿಯಾವನ್ನ (ಅರಬ್ಬಿಯಲ್ಲಿ ಹಾಗೆಂದರೆ ಪೂರ್ವದವರು ಎಂದರ್ಥ) ಕ್ರಿಸ್ತಪೂರ್ವ 240ರಲ್ಲಿ ಮೊಗಾನ್ ಎಂಬುವವ ಆಳುತ್ತಿದ್ದ.ಅವನನ್ನು ಬೆಬಿಲೋನಿಯಾದ ರಾಜ ನರಂಸಿನ್ ಸೋಲಿಸಿದ ಬಗೆಗಿನ ಶಿಲಾಶಾಸನವೊಂದು ಲಭ್ಯವಿದೆ.ಅರೇಬಿಯಾದ ಇತರ ಶಾಸನಗಳ ಪ್ರಕಾರ ಕ್ರಿಸ್ತಪೂರ್ವ 800ರಲ್ಲಿ ಅದೆ ಮನೆತನದ ಇಪ್ಪತೈದಕ್ಕೂ ರಾಜರು ಅರೆಬಿಯಾವನ್ನ ಆಳಿದ್ದಾರೆ.

ಇತಿಹಾಸ ಪ್ರಸಿದ್ಧ ರಾಣಿ ಶೀಬಾ ದಕ್ಷಿಣ ಅರೆಬಿಯಾದಲ್ಲಿರುವ ಯಮನ್'ನ ಸಾಬಾದಿಂದ ರಾಜ್ಯಭಾರ ಮಾಡುತ್ತಿದ್ದಳು.ಆಕೆ ಅವಳ ಕಾಲದವನೆ ಆಗಿದ್ದ ರಾಜಾ ಸೋಲೋಮನ್ನನನ್ನು ಕ್ರಿಸ್ತಪೂರ್ವ 950ರಲ್ಲಿ ಭೇಟಿಮಾಡಿದ್ದಳು.ಸಾಬಾದ ರಾಜರು ಮಾರಿಬ್'ನಲ್ಲಿ ಕಾಲಾನಂತರ ರಾಜಧಾನಿಯನ್ನು ಸ್ಥಾಪಿಸಿ ಉಛ್ರಾಯ ಸ್ಥಿತಿಯನ್ನ ತಲುಪಿ,ಉತ್ತಮ ನೌಕಾಪಡೆ ಹೊಂದಿ ದೂರದ ಭಾರತದೊಂದಿಗೆ ಸಮುದ್ರಮಾರ್ಗದ ವ್ಯಾಪಾರ ನಡೆಸುತ್ತಿದ್ದರು.ಕ್ರಮೇಣ ರೋಮನ್ನರ ಪ್ರಾಬಲ್ಯ ಹೆಚ್ಚಿ ಅವರು ಅರೇಬಿಯಾದ ಪ್ರಸಿದ್ಧ ರೇವುಪಟ್ಟಣವಾಗಿರುವ ಏಡನ್'ನ್ನು ಅತಿಕ್ರಮಿಸಿ ಈಜಿಪ್ಟ್ ಹಾಗೂ ಭಾರತದ ಮೇಲಿನ ವ್ಯಾಪಾರದ ಮೇಲೆ ಹತೋಟಿ ಸಾಧಿಸಿತು.

ಏಡನ್ ಬದಲಾಗುತ್ತಿದ್ದ ಕಾಲಮಾನದಲ್ಲಿ ಅರಬ್,ರೋಮನ್ ಹಾಗು ಪರ್ಷಿಯನ್ ಚಕ್ರಾಧಿಪತ್ಯಕ್ಕೆ ಒಳಗಾಗಿದ್ದನ್ನು ಇತಿಹಾಸಕಾರರು ಗುರುತಿಸಿದ್ದಾರೆ.ಕ್ರಿಸ್ತಶಕ ಎರಡನೆ ಶತಮಾನವನ್ನೆ ಗಮನಿಸುವುದಾದರೆ ಸಮೈರಾ ನಗರದ ಸಾನಿಸ್ಸಾಡರು ರೋಮನ್ನರ ಅಧೀನದಲ್ಲಿದ್ದರೆ,ಯುಫ್ರೆಟಿಸ್ ನದಿಯ ದಡದಲ್ಲಿ ಇದ್ದ ಅಲ್-ಹಿರಾ ರಾಜ್ಯ ಪರ್ಶಿಯನ್ನರ ಪ್ರಭಾವದಲ್ಲಿತ್ತು.ಈ ಎರಡೂ ರಾಜ್ಯಗಳು ಕ್ರಿಸ್ತಮತದ ಪ್ರಭಾವಕ್ಕೆ ಒಳಪಟ್ಟಿದ್ದವು.ಕ್ರಿಸ್ತಶಕ ಏಳನೆ ಶತಮಾನದ ವೇಳೆಗೆ ಈ ಎರಡೂ ರಾಜ್ಯಗಳು ತಮ್ಮ ಅಸ್ಥಿತ್ವವನ್ನ ಕಳೆದುಕೊಂಡವು.

ರೋಮ್ ಹಾಗೂ ಪರ್ಷಿಯಾ ಚಕ್ರಾದಿಪತ್ಯಗಳು ಉನ್ನತ ಸ್ಥಿತಿಯಲ್ಲಿದ್ದಾಗ ಇತ್ತ ಅರೇಬಿಯಾ ಕತ್ತಲೆಯತ್ತ ಜಾರತೊಡಗಿತ್ತು.ಕ್ರಿಸ್ತಪೂರ್ವದಲ್ಲಿ ಅಲ್ಲಿದ್ದ ವೈಭವ ಏಳನೆ ಶತಮಾನದಲ್ಲಿ ಅಸ್ತಂಗತವಾಗಿತ್ತು.ಹೊರಪ್ರಪಂಚದ ಮಟ್ಟಿಗೆ ಅರಬ್ಬರು ಅಪ್ರಸ್ತುತರಾಗಿಬಿಟ್ಟಿದ್ದರು.ಹೀಗಾಗಿ ಕಗ್ಗತ್ತಲೆಯ ಆಫ್ರಿಕಾ ಖಂಡದಂತೆ ಅರೇಬಿಯಾ ಪರ್ಯಾಯ ದ್ವೀಪವೂ ಕಗ್ಗತ್ತಲ ದ್ವೀಪವಾಗಿ ಪರಿಣಮಿಸಿತು.

(ಇನ್ನೂ ಇದೆ....)

13 October 2011

ಈ ನೆಲದ ಇಸ್ಲಾಂ ಕುರಿತ ನನ್ನ ಅಪೇಕ್ಷೆಗಳು....

ಹೀಗೆ ಉಳಿದಿದ್ದ ಶಾಹಿ ಮನೆತನಗಳ ದಖನ್ ಹುಕೂಮತ್ತು,ಆರ್ಕಾಟಿನ ನವಾಬಗಿರಿ,ಢಾಕಾ ನವಾಬಗಿರಿ,ಜುನಾಘಡದ ನವಾಬಗಿರಿ,ಅವಧದ ನವಾಬಗಿರಿ,ಹಿಸ್ಸಾರಿನ ನವಾಬಗಿರಿ,ಭೂಪಾಲದ ನವಾಬಗಿರಿ ಹೀಗೆ ಅಲ್ಲಲ್ಲಿ ಮುಸ್ಲಿಂ ಪಾಳೆಪಟ್ಟು ಸಕ್ರಿಯವಾಗಿತ್ತು.ಅದಾಗಲಷ್ಟೆ ಯುರೋಪಿಯನ್ನರ ಕಿರುಕುಳದ ವಿರುದ್ಧ ಸೆಟೆದು ನಿಲ್ಲಲು ಆರಂಭಿಸಿದ್ದ,ಭಾರತೀಯ ಯುವಮನಸ್ಸುಗಳಲ್ಲಿ ಧರ್ಮಾತೀತವಾಗಿ ಮೂಡಿದ್ದ ರಾಷ್ಟ್ರೀಯತೆಯ ಸ್ಪಷ್ಟ ಮನೋಭಾವ ತಾತ್ಕಾಲಿಕ ಐಕ್ಯತೆಯ ಆಶಾಭಾವ ಮೂಡಿಸಿದ್ದು ಹೌದಾದರೂ.ಒಡೆದು ಆಳುವುದರಲ್ಲಿ ನಿಸ್ಸೀಮರಾದ ಬ್ರಿಟೀಷರು ಇತ್ತಂಡಗಳಲ್ಲಿ ಸುಶುಪ್ತವಾಗಿದ್ದ ಧಾರ್ಮಿಕ ಅಸಹನೆಯನ್ನ ಪ್ರಚೋದಿಸಿದ ಪರಿಣಾಮ ಭಾರತದಲ್ಲಿ ಕೋಮು ಸಮರಗಳ ಸರಣಿಯೆ ನಡೆದುಹೋದವು-ದುರಾದೃಷ್ಟವಶಾತ್ ಇಂದೂ ಎಗ್ಗುಸಿಗ್ಗಿಲ್ಲದೆ ಅದು ನಡೆಯುತ್ತಲೆ ಇವೆ.ಇದರ ದೊಡ್ಡ ಆಘಾತವೆಂದರೆ ಧರ್ಮದ ಹೆಸರಿನಲ್ಲಿ ಆದ ದೇಶದ ವಿಭಜನೆ.ಅದರ ಪಾಶ್ಚಾತ್ ಪರಿಣಾಮಗಳು ಇಂದೂ ಸಹ ದೇಶದ ನೆಮ್ಮದಿಯನ್ನ ಆಗಾಗ ಕದಡುತ್ತಲೆ ಇವೆ.

ಭಾರತೀಯ ಮುಸ್ಲೀಮರಲ್ಲಿ ಶೇಕಡಾ ಐದು ಭಾಗ ಅರಬ್ಬಿ ಬುಡಕಟ್ಟು ಮೂಲದ ಶುದ್ಧರಕ್ತದವರಾಗಿದ್ದರೆ ಉಳಿದವರೆಲ್ಲರೂ ಕಾರಣಾಂತರದಿಂದ ಮತಾಂತರವಾದ ಸನಾತನಧರ್ಮ ಮೂಲದವರೆ ಅನ್ನುವುದು ಸ್ಪಷ್ಟ.ಇದು ಆಯ್ಕೆಯ ಅವರೆಲ್ಲರ ಮತಾಂತರವಾಗಿತ್ತು ಎನ್ನುವ ಇಂದಿನ ಸೋ-ಕಾಲ್ಡ್ ಬುದ್ಧಿಜೀವಿಗಳ ಬುಡಭದ್ರವಿಲ್ಲದ ವಾದಸರಣಿ ಹಾಸ್ಯಾಸ್ಪದ.ಸಮಾಜದ ಮೇಲುವರ್ಗಗಳಲ್ಲಿ ಅಧಿಕಾರದ ಆಸೆಗಾಗಿ ವಿರಳವಾಗಿ ಇದಾಗಿರಬಹುದೇನೋ,ಆದರೆ ಕೆಳವರ್ಗದ ಮಂದಿಗೆ ಅಂತಹ ಯಾವುದೆ ಆಕರ್ಷಣೆಗಳಿರಲಿಲ್ಲ.ಅಲ್ಲದೆ ಶ್ರೇಣೀಕೃತ ವ್ಯವಸ್ಥೆಗೆ ಇತ್ತೀಚಿನವರೆಗೂ ಇದ್ದ ಸಾಮಾಜಿಕ ಸಮ್ಮತಿಯ ಹಿನ್ನೆಲೆಯಲ್ಲಿ ;ಹಿಂದೂ ಜಾತಿಭೇದ ಈ ಪರಿ ಮತಾಂತರಕ್ಕೆ ಪ್ರೋತ್ಸಾಹಿಸಿತು ಅನ್ನುವುದೂ ಕೂಡ ದುರ್ಬಲ ಪೊಳ್ಳುವಾದವೆ ಸರಿ.ಒಮ್ಮೆ ಧರ್ಮಭ್ರಷ್ಟನಾದರೆ ಸಾಕು ಅವನನ್ನ ಹೀನಾಯವಾಗಿ ಕಾಣುವ ಹಾಗೂ ಮರಳಿ ಮಾತೃಧರ್ಮಕ್ಕೆ ಪ್ರವೇಶ ನಿರಾಕರಿಸುವ ಹಿಂದೂ ಸನಾತನ ಧರ್ಮದ ವಿಲಕ್ಷಣತೆಯೆ ಅದರ ಅನೇಕ ಅನುಯಾಯಿಗಳನ್ನ ಕಾಲಕ್ರಮದಲ್ಲಿ ಇಸ್ಲಾಂ ಹಾಗೂ ಕ್ರೈಸ್ತ ಮತಗಳಿಗೆ ಶರತ್ತಿಲ್ಲದೆ ಧಾರೆ ಎರೆದು ಕೊಟ್ಟಿದೆ!


ಅಂದರೆ ಈ ನೆಲದ ಹಿಂದೂಯೇತರ ಧರ್ಮೀಯರ ಧಾರ್ಮಿಕ ಸಭ್ಯತೆ ಈ ಮೂಲಕ ಬದಲಾಗಿದೆಯೆ ಹೊರತು ಅವರ ಭಾರತೀಯ ಸಂಸ್ಕೃತಿಯಲ್ಲ.ಅವರ ಧಾರ್ಮಿಕ ಶ್ರದ್ಧೆ ಅದೇನೆ ಇದ್ದರೂ, ಅವರೂ ಸನಾತನ ಧರ್ಮೀಯರಂತೆ ಇಲ್ಲಿನ ಎಲ್ಲಾ ಹಕ್ಕು-ಭಾದ್ಯತೆಗಳಿಗೆ ಕಟ್ಟು ಬದ್ಧರಾಗಿರಲೇಬೇಕು.ಅವರ ರಕ್ತದಲ್ಲಿ-ವಂಶವಾಹಿಗಳಲ್ಲಿ ಭಾರತೀಯತೆ ಸುಶುಪ್ತವಾಗಿ ಇರುವ ತನಕ ಬಾಹ್ಯ ಭೂಷಣ-ಆಹಾರಗಳಲ್ಲಿ ಇನ್ಯಾವುದೊ ದೇಶದವರನ್ನ ಅನುಕರಿಸುವುದು ಛದ್ಮವೇಷದಂತೆ ಕಾಣಿಸುತ್ತದೆ.ಭಾರತೀಯ ಮುಸ್ಲೀಮರು ಅದನ್ನು ಅರಿತುಕೊಂಡು ಪುಂಡ ಧರ್ಮಭೋದಕರ ಹಾಗೂ ಸ್ವಾರ್ಥಿ ರಾಜಕಾರಣಿಗಳ ಹುನ್ನಾರಕ್ಕೆ ಬಲಿಯಾಗಬಾರದು.

'ಭಾರತದಲ್ಲಿ ನಮಗೆ ಅಲ್ಲಾ ಬೇಕು ;ಆದರೆ ಮುಲ್ಲಾ ಅಲ್ಲ!".ಅರಬ್ ಜಗತ್ತಿನಲ್ಲಿಲ್ಲದ ಭಾರತೀಯ ಇಸ್ಲಾಮಿನ ಕೆಟ್ಟ ಉಪಲಬ್ಡಿ ಮುಲ್ಲಾಗಳು.ಮೂಲ ಇಸ್ಲಾಮಿನ ವ್ಯಾಖ್ಯೆಯನ್ನ ತಿರುಚಿ ವಾಸ್ತವ ಜಗತ್ತಿನಿಂದ ಧರ್ಮಾನುಯಾಯಿಗಳನ್ನ ವಂಚಿಸುವ ಈ ಧರ್ಮಾಂಧರ ದೆಸೆಯಿಂದ ತಲೆಮಾರುಗಳ ಹಿಂದೆ ಧರ್ಮಾಂತರವಾದ ಭಾರತೀಯ ಮುಸ್ಲಿಂ ಮನಸ್ಸುಗಳು ಇಬ್ಬಂದಿತನದಲ್ಲಿ ಸಿಲುಕಿ ಒದ್ದಾಡುವಂತಾಗುತ್ತಿದೆ.'ದೀನ್ ಮೇ ಧಾಡಿ ಹೈ...ಪರ್ ಧಾಡಿ ಮೇ ದೀನ್ ನಹಿ!' ಎನ್ನುವುದು ಭಾರತೀಯ ಮುಸ್ಲಿಂ ಬಾಂಧವರಿಗೆ ಅರ್ಥವಾಗಬೇಕು.ಅಲ್ಲೊಬ್ಬ ಗೋಮುಖ ವ್ಯಾಘ್ರ ಕಸಾಯಿ ಎಸಿ ರೂಮಿನಲ್ಲಿ ಕುಳಿತು ಸದ್ಭಾವನೆಗಾಗಿ ಉಪಾವಾಸ ಮಾಡುವುದು ಈ ಸಮಾಜದ ಸ್ವಾಸ್ಥ್ಯಕ್ಕೆ ಎಷ್ಟು ಅಪಾಯಕಾರಿಯೊ, ಅಷ್ಟೆ ಅಪಾಯ ಕೇವಲ ಬಾಹ್ಯ ತೋರಿಕೆಯ ಧರ್ಮ ಭೋದಿಸುವ ಮುಲ್ಲಾಗಳಿಂದಲೂ ಕಟ್ಟಿಟ್ಟಿದೆ.ಅಷ್ಟಕ್ಕೂ ಮಹಮದ್ ಪೈಗಂಬರ್ ಭೋಧನೆಗಳು ಅರೇಬಿಯಾ ಮರಳುಗಾಡಿನ ಆಕಾಲದ ಖುರೈಶಿ ಬುಡಕಟ್ಟುಗಳ ಆಚರಣೆಗೆ ಅನುಸಾರವಾಗಿತ್ತು.ಅಲ್ಲಿನ ಕಟ್ಟು-ಕಟ್ಟಳೆಗಳು ಭಾರತದ ಮಟ್ಟಿಗೆ ಬಹುಪಾಲು ಅಪ್ರಸ್ತುತ.

ಜಗತ್ತಿನ ಬಹುಸಂಖ್ಯಾತ ಮುಸ್ಲಿಂ ರಾಷ್ಟ್ರವಾಗಿರುವ ಇಂಡೋನೇಷಿಯ ಈ ಮಟ್ಟಿಗೆ ಜಗತ್ತಿಗೆ ಮಾದರಿಯಾಗಿದೆ.ಒಂದಾನೊಂದು ಕಾಲದಲ್ಲಿ ಸಂಪೂರ್ಣ ಹಿಂದೂಮಯವಾಗಿದ್ದ ಆ ದೇಶ ಇಂದು ಅದಕ್ಕೆ ತದ್ವಿರುದ್ಧವಾಗಿ ಇಸ್ಲಾಮಿಕರಣಗೊಂಡಿದೆ.ಆದರೆ ಅಲ್ಲಿನ ಜನ ತಮ್ಮ ಸಂಸ್ಕೃತಿಯ ಬಗ್ಗೆ ಕುರುಡಾಗಿಲ್ಲ.ಇಂದಿಗೂ ತಮ್ಮ ಹೆಸರುಗಳಲ್ಲಿ-ನಾಗರೀಕ ಸೇವೆಗಳಲ್ಲಿ ನೆಲದ ಸಂಸ್ಕೃತಿಯ ಕುರುಹುಗಳನ್ನ ಉಳಿಸಿಕೊಂಡು ಬಂದಿದ್ದಾರೆ.ಅವರಿಗೆ ತಮ್ಮ ಪುರಾತನ ಸಂಸ್ಕೃತಿಯ ಬಗ್ಗೆ ಅತೀವ ಹೆಮ್ಮೆಯಿದೆ.ಧರ್ಮಾಚರಣೆ ವಯಕ್ತಿಕ ಮಟ್ಟದ್ದು. ಅದು ಬಹಿರಂಗವಾಗಿ ಗದ್ದಲವೆಬ್ಬಿಸುವ ಮಟ್ಟಕ್ಕೆ ಎಂದೂ ಇಳಿಯಬಾರದು.ಇಸ್ಲಾಂ ಹುಟ್ಟಿದ ಅರಬ್ ಜಗತ್ತಿನಲ್ಲಿಯೆ ನಮಾಜ್ ಕರೆಗೆ ಸೈರನ್ ಕೂಗಿಸುವ ವ್ಯವಸ್ಥೆ ಚಾಲ್ತಿಗೆ ಬಂದಿರುವಾಗ ಇನ್ನೂ ಭಾರತದಲ್ಲಿ 'ಬಾಂಗ್' ಕೂಗುವ ಹಳೆಯ ಪದ್ದತಿಗೆ ಅಂಟಿಕೊಳ್ಳುವುದು ಹೊಸತನವನ್ನು ನಿರಾಕರಿಸಿದಂತೆ.ಅದಕ್ಕೆ ಪೈಪೋಟಿಯಾಗಿ ಸನಾತನ ಅವಿವೇಕಿಗಳೂ ಸಹ ಹೊತ್ತುಗೊತ್ತಿನ ಪರಿವೆಯಿಲ್ಲದೆ "ಎದ್ದೇಳು ಮಂಜುನಾಥಾ" ಎಂದು ಗದ್ದಲವೆಬ್ಬಿಸುತ್ತ ಬೆಳಗ್ಯೆ-ಮಧ್ಯಾಹ್ನ-ಸಂಜೆ ಹೀಗೆ ಅಸಂಬದ್ಧವಾಗಿ ಮಂಜುನಾಥನನ್ನ ಮಲಗಲೂ ಬಿಡದೆ ಬಡಿದೆಬ್ಬಿಸುತ್ತಾರೆ!

ಗೋಮಾಂಸದ ಕುರಿತೂ ಇದೆ ಮಾತನ್ನ ಹೇಳಬಹುದು.ಹಿಂದೂ ಕೆಳವರ್ಗದ ಮಂದಿಯೂ ಕಡಿಮೆ ಬೆಲೆಗೆ ಸಿಗುವ ಕಾರಣ ಗೋಮಾಂಸವನ್ನ ಸೇವಿಸುತ್ತಾರೆ,ಅಂತೆಯೆ ಬಡ ಮುಸ್ಲೀಮರೂ ಸಹ.ಆದರೆ ಅದು ತಮ್ಮ ಧಾರ್ಮಿಕ ಸ್ವಾಭಿಮಾನದ ಸಂಕೇತ ಅಂತ ಮುಸ್ಲೀಮರು ಪರಿಗಣಿಸುವುದು ಕೊನೆಯಾಗಬೇಕು.ಆಹಾರ-ವಿಹಾರ ವ್ಯಕ್ತಿಯ ವಯಕ್ತಿಕ ವಿಚಾರಗಳು.ಕಡೆಯದಾಗಿ ಪರಸ್ಪರ ಅಪನಂಬಿಕೆಗೆ ಹಿಂದೂಗಳ ಕುರಿತ ಮುಸ್ಲೀಮರ ಹುಸಿ ಅಭದ್ರತೆಯ ಸಂಶಯ-ಮುಸ್ಲೀಮರ ಕುರಿತ ಹಿಂದೂಗಳ ದೇಶನಿಷ್ಠೆಯ ಸುಳ್ಳು ಸಂದೇಹ ಇವೆರಡೂ ಕಾರಣ.

ಭಾರತೀಯ ಸಂಸ್ಕೃತಿ ಶ್ರೇಷ್ಠವಾದದ್ದನ್ನೆಲ್ಲ ಸ್ತ್ರೀ ರೂಪಕ್ಕೇರಿಸಿ-ತಾಯಿಯನ್ನಾಗಿ ಆರಾಧಿಸುತ್ತೆ.ಉದಾಹಾರಣೆಗೆ ದೇಶ-ವಿದ್ಯೆ-ಅನ್ನ-ಹಣ ಇವುಗಳನ್ನು ನೋಡಬಹುದು.ಆದರೆ ಧರ್ಮನಿಷ್ಠವಾಗಿ ಇಸ್ಲಾಂ ಪ್ರಕಾರ ನಡೆದುಕೊಂಡ ಅಂದಿನ ಇಸ್ಲಾಮಿ ಆಡಳಿತಗಾರರು ಈ ಭಾವನೆಗಳನ್ನೆ ಕೆಣಕುವಂತೆ ನಡೆದು ಕೊಂಡು ಸನಾತನ ಧರ್ಮೀಯರಾಲ್ಲಿ ಕಸಿವಿಸಿ ತಂದರು.ಹಿಂದೂ ಆರಾಧನಾಕ್ಷೇತ್ರಗಳ ಮೂರ್ತಿಗಳನ್ನ ಮಸೀದಿಗಳ ನೆಲಹಾಸು,ಮೆಟ್ಟಿಲು ಮಾಡಿಕೊಂಡದ್ದು.ಕಾಶ್ಮೀರದಲ್ಲಿ (ಹಿಂದೂ ನಂಬಿಕೆಗಳ ಪ್ರಕಾರ ಅದು ಶಾರದೆಯ ಆವಾಸ...ಅವಳನ್ನ 'ಕಾಶ್ಮೀರ ಪುರವಾಸಿನಿ' ಎಂದು ಕರೆಯಲಾಗುತ್ತೆ) ಆ ನೆಲದ ಭಾಷೆಯ ಸತ್ವವನ್ನೆ ಕಸಿಯಲಾಗಿದೆ.ಕಾಶ್ಮೀರಿ ಭಾಷೆಗೆ ಸ್ವಂತ ಲಿಪಿಯಿದ್ದರೂ ಇಂದು ಅದು ಬಳಕೆಯಲ್ಲಿಲ್ಲ,ಮೊಘಲ್ ಕಾಲದ ಹೇರಿಕೆಯ ಪರಿಣಾಮ ಅರಬ್ಬಿ ಲಿಪಿಯಲ್ಲಿ ಕಾಶ್ಮೀರಿ ಬರೆಯಲಾಗುತ್ತೆ...ತನ್ನ ನಿವಾಸದಲ್ಲೆ ವಿದ್ಯಾಧಿದೇವತೆ ಅನಾಥೆ ಆದದ್ದು ಹೀಗೆ! ಅದು ಇಂದಿಗೂ ಹಾಗೆಯೆ ಮುಂದುವರೆಯ ಬೇಕಿಲ್ಲ.ಧರ್ಮಕ್ಕಿಂತ ದೇಶ ಹಾಗೂ ಭಾಷೆ ಯಾವಾಗಲು ದೊಡ್ಡದು.

ಹಿಂದೂ ಅತಿರೇಕಿಗಳಂತೆ-ಇಸ್ಲಾಂ ಮೂಲಭೂತವಾದಿಗಳಿಗೂ "ಮಾನವ ಧರ್ಮ" ಎಲ್ಲಕಿಂತ ದೊಡ್ಡದು ಎಂಬುದನ್ನು ಒತ್ತಯವಾಗಿಯಾದರೂ ಅರಿವು ಮೂಡಿಸಲೆ ಬೇಕಿರುವುದು ಇಂದಿನ ತುರ್ತು ಅಗತ್ಯ.ಈ ನಿಟ್ಟಿನಲ್ಲಿ ಇಂಡೋನೇಷ್ಯ ನಮಗೆ ಮಾದರಿಯಾಗಬೇಕು.ಈ ದೇಶ ನಮ್ಮೆಲ್ಲರದು ಹಾಗೂ ಎಲ್ಲರೂ ಸಮಾನರು ಅನ್ನುವುದು ಮೊದಲು ಜಾರಿಯಾಗಲು ಅನುವಾಗುವಂತೆ ಶರಿಯತ್ ರದ್ದಾಗಬೇಕು.ಗುರುಕುಲ ಪದ್ಧತಿಯನ್ನ ಮರೆಯಾಗಿಸಿದಂತೆ ಮದರಸಗಳಿಗೂ ಸರಕಾರಿ ರಾಜಾಶ್ರಯ ನಿಂತು ಮುಸ್ಲಿಂ ಮಕ್ಕಳು ಮುಖ್ಯವಾಹಿನಿಯ ಶಾಲೆಗಳಲ್ಲಿ ಉಳಿದೆಲ್ಲರಷ್ಟೆ ಕಲಿತು,ತನ್ನ ಸಮವಯಸ್ಕ ಅನ್ಯ ಕೋಮಿನ ಮಕ್ಕಳಿಗೆ ಪೈಪೋಟಿ ನೀಡುವಂತಾಗಬೇಕು.ಎರಡು ಕಣ್ಣಷ್ಟೇ ಗೋಚರಿಸುವ ಬುರ್ಕಾ ಜಾಹಿರಾತಿನ ವೀನೈಲ್'ಗಳು ಕರಾವಳಿಯ ಹೆದ್ದಾರಿಯ ಇಕ್ಕೆಲಗಳಲ್ಲಿ ಕಾಣುವುದು ನಿಂತಷ್ಟು ಶೀಘ್ರ ಮುಸ್ಲಿಂ ಮಹಿಳೆಯರು ನಿಟ್ಟುಸಿರು ಬಿಟ್ಟಾರು.ಕೊನೆಯ ಖಿಲಾಫತ್ ಅಸ್ತಿತ್ವದಲ್ಲಿದ್ದ ತುರ್ಕಿಯಲ್ಲಿಯೆ ಹೊಸತರದ ಇಸ್ಲಾಮನ್ನ ಜಾರಿಗೆ ತಂದಿರೋವಾಗ ನಮ್ಮಲ್ಲೇಕೆ ಹಳೆಯ ಮರಳುಗಾಡಿನ ಸಂಸ್ಕೃತಿಯ ಮೋಹ? "ಮೊದಲು ಭಾರತೀಯರಾಗೋಣ" ಆಮೇಲೆ ಇದ್ದೆ ಇದೆ ಹಿಂದೂ,ಮುಸ್ಲಿಂ,ಕ್ರೈಸ್ತ,ಸಿಖ್,ಬೌದ್ಧ,ಜೈನರಾಗೋದು.

ಇವತ್ತಿನಿಂದ ಇಸ್ಲಾಂ ಉಗಮದ ಕಥೆ ಇಲ್ಲಿ ಮೂಡಿ ಬರಲಿದೆ.ಆರಂಭದಲ್ಲಿ ಅಂದಿನ ಅರಬ್ ಜಗತ್ತಿನ ವಿಸ್ಕೃತ ಪರಿಚಯ ಮಾಡಿಸುವುದು ಅನಿವಾರ್ಯ.ಬೋರ್ ಎನಿಸಿದರೂ ಅದನ್ನ ಓದದೆ ಇರಬೇಡಿ.ಆ ಮೊದಲ ಕಂತನ್ನ ಓದದಿದ್ದರೆ ಮುಂದಿನ ಕಥೆ ಅಷ್ಟಾಗಿ ಅರ್ಥವಾಗಲಾರದು.ನನ್ನ ದೃಷ್ಟಿಯಲ್ಲಿ ಇಸ್ಲಾಂ ಇಷ್ಟೆ.ನನ್ನ ಸಹೋದರನೊಬ್ಬ ಅದಕ್ಕೆ ಮಾರುಹೊದರೆ ಹೇಗೆಯೋ ಹಾಗೆಯೆ ಇನ್ನುಳಿದ ಮುಸ್ಲೀಮರು ನನ್ನ ಪಾಲಿಗೆ.ಏಕೆಂದರೆ ನಾನವರನ್ನ ಮೊದಲು ನೋಡೋದು ಭಾರತೀಯತೆಯ ಮೋಹರಿನಿಂದ.ಅವರ ಧಾರ್ಮಿಕ ಶ್ರದ್ಧೆ ನನಗೆ ಇಲ್ಲಿಯ ತನಕ ಮುಖಯವಾಗಿಲ್ಲ,ಮುಂದೆಯೂ ಆಗುವುದಿಲ್ಲ.

( ಮುಗಿಯಿತು...)

ಇಸ್ಲಾಮಿನಡಿ ಭಾರತ....

ಜಗತ್ತಿನ ಇತಿಹಾಸದಲ್ಲಿ ಬಹುಸಂಖ್ಯಾತ ಪರಧರ್ಮೀಯರನ್ನ ಇಸ್ಲಾಂ ಅನುಯಾಯಿಗಳು ಧೀರ್ಘಾವಧಿಯವರೆಗೆ ನಿರಂಕುಶವಾಗಿ ಆಳಿದ್ದು ಬಹುಷಃ ಸ್ಪೇನ್ ಹೊರತು ಪಡಿಸಿದರೆ ಅದು ಕೇವಲ ಭಾರತದಲ್ಲಿಯೆ.ಕ್ರೈಸ್ತ ಮತಾವಲಂಬಿಗಳ ಸ್ಪೇನ್ ಕ್ರಿಸ್ತಶಕ 711ರಿಂದ ಸರಿಸುಮಾರು ಎಂಟು ಶತಮಾನಗಳ ಕಾಲ ಇಸ್ಲಾಂ ಜಗತ್ತಿನ ಭಾಗವಾಗಿತ್ತು ಅನ್ನುವುದು ಇಂದಿಗೂ ಮುಸ್ಲಿಂ ಜಗತ್ತಿಗೆ ಕಡುಹೆಮ್ಮೆಯ ವಿಚಾರ.ಆದರೆ ಕ್ರಿಸ್ತಶಕ 1492ರಲ್ಲಿ ಈ ನಿರಂಕುಶತೆಗೆ ಲಗಾಮು ಬಿದ್ದು ಸ್ಪೇನ್ ಮರಳಿ ಕ್ಯಾಥೊಲಿಕ್ ಪಂಥಾನುಯಾಯಿಗಳ ತೆಕ್ಕೆಗೆ ಜಾರಿದ್ದು ಹಾಗು ಅವರು ಇಸ್ಲಾಮಿ ಕಾಲಮಾನದ ಕರುಹು ಉಳಿಯದಂತೆ ಎಲ್ಲಾ ಪಳೆಯುಳಿಕೆಗಳನ್ನ ನಿರ್ದಾಕ್ಷಿಣ್ಯವಾಗಿ ಧರ್ಮಾಂಧತೆಯಿಂದಲೆ ಬುಡಸಹಿತ ಕಿತ್ತು ಹಾಕಿದ್ದನ್ನ ಮಾತ್ರ ಜಾಣತನದಿಂದ ನೆನಪಿಸಿಕೊಳ್ಳಲು ಮರೆಯುತ್ತಾರೆ! ಇದೇನೆ ಇದ್ದರೂ ಈ ಹೊತ್ತಲ್ಲಿ ಹಿಂದಿರುಗಿ ನೋಡಿದಾಗ ಏಳು ಶತಮಾನಗಳ ಕಾಲ ಭಾರತವನ್ನು ಆಳಿ ಅನಂತರ ಇಲ್ಲಿಯೆ ಬೀಡು ಬಿಟ್ಟ ಇಸ್ಲಾಮಿನಿಂದ ಭಾರತ ಪಡೆದುಕೊಂಡದ್ದೇನು? ಅದರ ಕೊನೆಯ ನಿಶಾನಿಯನ್ನೂ ಇನ್ನಿಲ್ಲವಾಗಿಸಿ ಸ್ಪೇನ್ ಕಳೆದು ಕೊಂಡದ್ದೇನು ಅನ್ನುವುದನ್ನ ಸುಲಭವಾಗಿ ಅಂದಾಜಿಸಬಹುದು.

ಕುತ್ಬುದ್ದೀನ್ ಐಬಕ್ಕನಿಂದ ಮೊದಲುಗೊಂಡು ಗುಲಾಮಿ ಸಂತತಿ-ಖಿಲ್ಜಿ ಸಂತತಿ-ತುಘಲಕ್ ಸಂತತಿ-ಸಯ್ಯದ್ ಸಂತತಿ-ಲೋಧಿ ಸಂತತಿ ಹಾಗೂ ಕಟ್ಟಕಡೆಯಲ್ಲಿ ಮೊಘಲರ ಸಂತತಿಯ ಕೊನೆಯ ಬಾದಶಹ ಎರಡನೆ ಬಹದ್ದೂರ್'ಷಾನ ವರೆಗೂ ಇಸ್ಲಾಂ ಭಾರತೀಯ ನೆಲದಲ್ಲಿ ನಿರಂಕುಶ ಅಟ್ಟಹಾಸವನ್ನ ಮೆರೆದದ್ದು ಅಳಿಸಿ ಹಾಕಲಾಗದ ಐತಿಹಾಸಿಕ ಸತ್ಯ.ಈ ಏಳುನೂರು ವರ್ಷಗಳಲ್ಲಿ ಭಾರತೀಯ ಉಪಖಂಡದ ಬಹುಭಾಗ ದೆಹಲಿ ಗದ್ದುಗೆಯ ನೆರಳಿನಲ್ಲಿತ್ತು.ಹಿಂದೂ ಕೃತಿ-ಸಂಸ್ಕೃತಿಗಳು ಇಸ್ಲಾಮಿ ಕ್ರಿಯಾಶೀಲತೆಯಿಂದ ಅನೇಕ ಉತ್ತಮ ಅಂಶಗಳನ್ನು ಕಡಪಡೆದುಕೊಂಡವು.ವಿಶೇಷವಾಗಿ ಭಾಷೆಯ ದೃಷ್ಟಿಯಿಂದ ಗಮನಾರ್ಹ ಹೊಸತನಗಳು ಗೋಚರಿಸಿದವು.ಸಂಗೀತದಲ್ಲಿ ಅರಬ್ ಮೂಲದ ವಿದೇಶಿ ತಂತಿವಾದ್ಯಗಳು ಇಲ್ಲಿನ ಸಾಂಪ್ರದಾಯಿಕ ವಾದ್ಯಗಳ ಜೊತೆಯಾಗಿ ಇಲ್ಲಿನ ಮೂಲ ಸಂಗೀತದ ಮೆರುಗು ಹೆಚ್ಚಿತು.ಸಾಹಿತ್ಯವೂ ಸಮೃದ್ಧವಾಗಿ ವಿಕಸಿಸಿತು.ಖವ್ವಾಲಿ-ಗಜಲ್ ಅಮದಾದರೆ ಕಥಕ್-ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅವಿಷ್ಕರಣೆಯಾಗಿ ಭಾರತೀಯ ಸಾಂಸ್ಕೃತಿಕ ಜಗತ್ತು ಹೊಸತನವನ್ನ ಹೊತ್ತುಕೊಳ್ಳುವಂತಾಯಿತು.ಸಂಗೀತ-ಸಾಹಿತ್ಯ ಮಹಮದ್ ಪೈಗಂಬರನ ಉಕ್ತ ದೈವವಾಣಿಯ ಪ್ರಕಾರ ಇಸ್ಲಾಮಿ ಅನುಯಾಯಿಗಳಿಗೆ ಹರಾಮ್ ಎಂದು ಖುರಾನ್ ಹೇಳುವುದರಿಂದ ಅರೆಬ್ಬಿಯಾದಲ್ಲಿ ಅದರ ವಿಕಸನದ ಸ್ಥಿತಿ ಅಕ್ಷರಶಃ ಕೋಮಾಸ್ಥಿತಿಯಲ್ಲಿತ್ತು.ಹೀಗಾಗಿ ಭಾರತದ ನೆಲದಲ್ಲಿ ಇಸ್ಲಾಮಿ ಕ್ರಿಯಾಶೀಲರಿಗೆ ಹೊಸಗಾಳಿ ಸಿಕ್ಕಂತಾಗಿ ತಮ್ಮ ಪ್ರತಿಭೆಯನ್ನೆಲ್ಲ ಅವರು ಇಲ್ಲಿ ಪ್ರದರ್ಶಿಸಿ ಇನ್ನೂ ಹೆಚ್ಚು ವಿಸ್ತರಿಸಿಕೊಳ್ಳಲು ಅವಕಾಶವಾಯಿತು.ಇನ್ನು ವಾಸ್ತುಶಿಲ್ಪದ ಕಥೆಯೂ ಹೆಚ್ಚು ಕಡಿಮೆ ಅಂತದ್ದೆ.ಮರಳುಗಾಡಿನ ನೆಲದಲ್ಲಿ ಪ್ರಾಕೃತಿಕ ನಿರ್ಬಂಧಕ್ಕೆ ಒಳಗಾಗಿದ್ದ ಅವರ ಸೌಂದರ್ಯಪ್ರಜ್ಞೆಗೆ ಭಾರತ ಒಂದು ತೆರೆದ ವೇದಿಕೆಯಂತಾಗಿ ತಡೆಯಿಲ್ಲದೆ ಅವರ ಪ್ರತಿಭೆ ಇಲ್ಲಿ ಪ್ರಕಾಶಿಸತೊಡಗಿತು.ಸ್ಪೇನ್'ನಲ್ಲಿನ ಇಸ್ಲಾಮಿ ವಾಸ್ತುಶಿಲ್ಪವೂ ಇದರ ಮುಂದೆ ಮಂಕು ಅನ್ನುವುದನ್ನು ನಾವು ಮರೆಯುವಂತಿಲ್ಲ.ವಾಸ್ತುಶಿಲ್ಪ ಶಾಸ್ತ್ರದಲ್ಲಿ ಹೊಸ ಇಂಡೋ-ಇಸ್ಲಾಮಿಕ್ ಶೈಲಿಯ ಕಟ್ಟಡಗಳು ತಲೆಯೆತ್ತಿ ನಿಲ್ಲುವಂತಾಯಿತು.ವಿಸ್ಮಯಕಾರಿ ಬಿಜಾಪುರದ ಗೋಲಗುಮ್ಮಟ,ಗೋಲ್ಕೊಂಡಾದ ಚಾರ್'ಮಿನಾರ್.ಲಾಹೋರಿನ ಲಾಲ್ ಮಸ್ಜಿದ್,ಗುಲಬರ್ಗಾದ ಬುಲಂದ್ ದರ್ವಾಜಾ,ದೆಹಲಿಯ ಕೆಂಪು ಕೋಟೆ,ಶ್ರೀನಗರದ ಶಾಲಿಮಾರ್ ಹೂದೋಟ ಇವೆಲ್ಲ ಇಸ್ಲಾಮಿನಿಂದ ಭಾರತೀಯತೆಗೆ ಸಂದ ವಿಶೇಷ ಕೊಡುಗೆಗಳು.ಇದಲ್ಲದರಿಂದ ಭಾರತ ಬಹಳಷ್ಟು ಪಡೆದುಕೊಂಡಿತೆ ವಿನಃ ಕಳಕೊಂಡದ್ದು ನಗಣ್ಯ.

ಅದೇಕಾಲಕ್ಕೆ ಒತ್ತಾಯದ ಸರಣಿ ಮತಾಂತರಗಳು,ಅದಕ್ಕೆ ಒಪ್ಪದ ಮೂಲಧರ್ಮೀಯರ ಮೇಲೆ ನಿರಂತರವಾಗಿ ಎಸಗಲಾದ ಜಜಿಯಾದಂತಹ ದೌರ್ಜನ್ಯ (ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಚೀಲರು ಎಂಬ ಚಿತ್ರದುರ್ಗ ಸೀಮೆಯ ಬೇಡರ ಸಾಮೂಹಿಕ ಮತಾಂತರ ಹಾಗೂ ದಕ್ಷಿಣಕನ್ನಡ ಜೆಲ್ಲೆಯಂಚಿಂದ ಹಿಡಿದು ಮಲಬಾರಿನವರೆಗೂ ನಡೆದ ಬೆಸ್ತಕುಲದ ಮರಕ್ಕಲರ ಬಲವಂತದ ಮತಾಂತರಗಳು ಅತ್ಯಂತ ಹೇಯವಾಗಿದ್ದವು).ಸನಾತನ ಧಾರ್ಮಿಕ ಶ್ರದ್ಧಾಕೇಂದ್ರಗಳ ಧ್ವಂಸ ಹಾಗು ಮಸೀದಿಗಳಾಗಿ ಅವುಗಳ ಪರಿವರ್ತನೆ (ಉದಾಹಾರಣೆಗೆ ಕಾಶಿಯ ವಿಶ್ವನಾಥ ಮಂದಿರ ಗ್ಯಾನವ್ಯಾಪಿ ಮಸೀದಿಯಾದದ್ದು-ಅವಧದ ರಾಮಲಲ್ಲಾನ ದೇವಾಲಯ ಬಾಬರಿ ಮಸೀದಿಯಾದದ್ದು-ರಾವಳಪಿಂಡಿಯ ಕಟಾಸರಾಜ ದೇಗುಲದ ನಿರ್ಮೂಲನೆ-ಆಗ್ರಾದ ತೇಜೋಮಂದಿರದ ತಾಜ್'ಮಹಲ್ ಪರಿವರ್ತನೆ-ಮಥುರೆಯ ಕೃಷ್ಣ ದೇಗುಲ ಇಸ್ಲಾಮಿ ಶ್ರದ್ಧಾಕೇಂದ್ರವಾಗಿದ್ದನ್ನು ಗಮನಿಸಬಹುದು) ಕಾಶಿ,ಮಥುರಾ,ಅಯೋಧ್ಯ,ಸೋಮನಾಥ,ಢಾಕಾ,ಗೊಲ್ಕಂಡಾ,ಕೇರಳದ ಕೊಚ್ಚಿನ್ ಪ್ರಾಂತ್ಯದ ಒಳನಾಡುಗಳಲ್ಲಿ, ಕಾಶ್ಮೀರದ ಸರ್ವಜ್ಞಪೀಠದ (ಸದ್ಯ ಪಾಕ್ ಆಕ್ರಮಿತ ಕಾಶ್ಮೀರದ ಭೂಭಾಗದಲ್ಲಿದೆ) ದೇವಾಲಯಗಳ ಮೇಲಿನ ಉದ್ದೇಶಪೂರ್ವಕ ಧಾಳಿ ಇವೆಲ್ಲ ಮತಾಂಧತೆಯ ಅತಿರೇಕಗಳಾಗಿದ್ದವು ಎನ್ನುವುದನ್ನು ಮರೆಯುವ ಹಾಗಿಲ್ಲ.

ಕ್ರಿಸ್ತಶಕ 1498ರಲ್ಲಿ ವಾಸ್ಕೋ-ಡಾ-ಗಾಮನ ನೇತೃತ್ವದಲ್ಲಿ ಭಾರತಕ್ಕೆ ಅಡಿಯಿಟ್ಟ ಯುರೋಪಿಯನ್ ವ್ಯಾಪಾರಿಗಳು ಮುಂದೆ ಇಡಿ ದೇಶವನ್ನೆ ರಾಜಕೀಯವಾಗಿ ಪ್ರಭಾವಿಸುವ ಮಟ್ಟಿಗೆ ಬೆಳೆದು,ಕಡೆಗೊಮ್ಮೆ ಕ್ರಿಸ್ತಶಕ 1622ರಲ್ಲಿ ಭಾರತ ಉಪಖಂಡ ಹೊಕ್ಕ ವಣಿಕರ ಸೋಗಿನ ಬ್ರಿಟಿಶ್ ಅತಿಕ್ರಮಣಕಾರರು ಕ್ರಮೇಣ ಬಲಿತು ಕ್ರಿಸ್ತಶಕ 1857 ರಲ್ಲಿ ಮೊಘಲರ ಕೊನೆಯ ನಾಮ್-ಕೆ-ವಾಸ್ತೆ ಬಾದಶಹನನ್ನು ಮಾಂಡಲೆಯ ಸೆರೆಮನೆಗೆ ಗಡಿಪಾರು ಮಾಡಿ ದೇಶದ ಆಡಳಿತದ ಚುಕ್ಕಾಣಿ ಹಿಡಿದುಕೊಳ್ಳುವ ಮೂಲಕ ಭಾರತೀಯ ಇಸ್ಲಾಮಿ ಸಾಮ್ರಾಜ್ಯಶಾಹಿಯ ಸೂರ್ಯ ಕೊನೆಗೂ ಮುಳುಗಿದ.ಆದರೆ ಕತ್ತಲಾದ ನಂತರವೂ ಅಲ್ಲಲ್ಲಿ ತಾರೆಗಳು ಹೊಳೆಯುವಂತೆ ಮೊಗಲ್ ಸಾಮಂತ ಸರದಾರರು ದೇಶದ ಅಲ್ಲಲ್ಲಿ ಒಂದೊ ಪ್ರಬಲ ಬ್ರಿಟಿಷರ ಸ್ನೇಹ ಸಾಧಿಸಿಯೋ ಇಲ್ಲವೆ ವೈರ ಕಟ್ಟಿಕೊಂಡೊ ಸ್ವತಂತ್ರವಾಗಿ,ತಮ್ಮ ಆಳ್ವಿಕೆಯನ್ನ ದೇಶ ರಾಜಕೀಯವಾಗಿ ಕ್ರಿಸ್ತಶಕ 1947ರಲ್ಲಿ ಬ್ರಿಟೀಷರಿಂದ ಸ್ವಾತಂತ್ರ ಪಡೆದ ಎರಡುವರ್ಷಗಳ ನಂತರದವರೆಗೂ ಉಳಿಸಿಕೊಂಡೆ ಬಂದರು.ಆಗಲೂ ಅವರಲ್ಲಿ ಕೆಲವರು ತಮ್ಮ ಧರ್ಮನಿಷ್ಠೆಗೆ ಅನುಸಾರವಾಗಿ ಸನಾತನ ಧರ್ಮಾನುಯಾಯಿಗಳ ಮೇಲೆ ಜಿದ್ದು ಸಾಧಿಸುವಂತೆ ನಡೆದುಕೊಂಡದ್ದೂ ಇತ್ತು.ಉದಾಹಾರಣೆಗೆ ಅಲ್ಪಾವಧಿಗೆ ಮೈಸೂರನ್ನು ಆಳಿದ ಟಿಪ್ಪೂ ಸುಲ್ತಾನ ಬಹಿರಂಗವಾಗಿ ಹಿಂದೂ ಶ್ರದ್ಧಾಕೇಂದ್ರವಾಗಿದ್ದ ಶೃಂಗೇರಿ ಶಾರದಾ ಪೀಠಕ್ಕೆ ಉದಾರ ದೇಣಿಗೆ ನೀಡುತ್ತಿದ್ದ ಅನ್ನುವುದು ಹೌದಾದರೂ (ಹಿಂದೂಗಳೇ ಆಗಿದ್ದ ಮರಾಠರು ಸಂಪತ್ತು ದೋಚುವ ದುರಾಸೆಯಿಂದ ಶೃಂಗೇರಿಗೆ ಧಾಳಿಯಿಟ್ಟು,ಮೂಲ ಶಾರದೆಮೂರ್ತಿಯನ್ನೆ ದ್ವಂಸ ಮಾಡಿ ಬರ್ಭರವಾಗಿ ಲೂಟಿ ಎಸಗಿದ್ದ ದಿನಗಳವು), ಅದೆ ಟಿಪ್ಪು ಮಲಬಾರ್ ಹಾಗೂ ಕೊಡಗಿನಲ್ಲಿ ಒತ್ತಾಯದಿಂದ ಕತ್ತಿಮೊನೆಯಂಚಲ್ಲಿ ಎಸಗಿದ್ದ ಮತಾಂತರಗಳನ್ನ ಮರೆಯುವುದು ಹೇಗೆ? ಅವನ ದಾನ ಬಹುಸಂಖ್ಯಾತ ಹಿಂದೂ ಪ್ರಜೆಗಳನ್ನ ಓಲೈಸಲು ಅವರ ಶ್ರದ್ಧಾಕೇಂದ್ರಗಳನ್ನ ಆತ್ಮೀಯವಾಗಿಟ್ಟುಕೊಳ್ಳುವ ಸರಳ-ಶುದ್ಧ ರಾಜಕೀಯ ನಡೆಯಾಗಿತ್ತು ಅನ್ನುವುದು ಸ್ಪಷ್ಟ.ಹಾಗೆಯೆ ಮತಾಂತರಗಳೂ ಕಟ್ಟರ್ ಇಸ್ಲಾಮಿಯಾಗಿ ಅವನ ಧರ್ಮಶ್ರದ್ಧೆ ವಿಧಿಸಿದ್ದ ಕರ್ತವ್ಯವೂ ಆಗಿತ್ತು.ನಮ್ಮ ಇಂದಿನ ಸಾಮಾಜಿಕ ಸಂಹಿತೆ ಹಾಗೂ ಕಾನೂನಿನ ಹಿನ್ನೆಲೆಯಲ್ಲಿ ಇತಿಹಾಸದ ಘಟನಾವಳಿಗಳನ್ನ ಒರೆಗೆ ಹಚ್ಚುವುದರಿಂದ ಆಗುವ ಎಡವಟ್ಟುಗಳು ಇವು ಅನ್ನೋದು ಸ್ಪಷ್ಟ.ಈಗಿನ ಜಾತ್ಯಾತೀತತೆಯ ಕಲ್ಪನೆಯೂ ಇದ್ದಿರದಿದ್ದ ಅಂದಿನ ಸಾಮಾಜಿಕ ಪರಿಸ್ಥಿತಿಗೆ ಬಹುಷಃ ಅದು ತಪ್ಪೆನಿಸುತ್ತಿರಲಿಲ್ಲವೇನೊ,ಆದರೆ ಇಂದಿನ ನಾಗರೀಕ ಕಾನೂನಿನ ಅಡಿಯಲ್ಲಿ ಅದು ಪ್ರಮಾದವಾಗಿ ಗೋಚರಿಸುತ್ತದೆ.

(ಇನ್ನೂ ಇದೆ)

12 October 2011

ಭಾರತೀಯತೆ ಮತ್ತು ಪರಕೀಯತೆ....

ಭಾರತೀಯತೆ ಮತ್ತು ಪರಕೀಯತೆ....

ಭಾರತೀಯ ನೆಲದ ಮೇಲೆ ವಿದೇಶಿ ಆಕ್ರಮಣದ ಚರಿತ್ರೆಯನ್ನ ಅಧಿಕೃತವಾಗಿ ಅವಲೋಕಿಸುವುದಾದರೆ ನಾವು ಇನ್ನೂ ಹಿಂದೆ ಕ್ರಿಸ್ತಪೂರ್ವಕ್ಕೆ ಹೋಗುವುದು ಅನಿವಾರ್ಯ.ಪ್ರಪಂಚವನ್ನೆ ಗೆಲ್ಲುವ (ಅಂದಿನ ಪ್ರಪಂಚದ ಕಲ್ಪನೆ ಗ್ರೀಕ್-ಸ್ಪೇನ್'ನ ಜನವಸತಿ,ಉತ್ತರದ ಅನಾಗರೀಕ ಯುರೋಪು-ಪೂರ್ವದ ಹಿಮಾಚ್ಛಾದಿತ ಯುರೋಪ್ ಹಾಗೂ ಉತ್ತರ ಆಫ್ರಿಕೆಯ ಕೆಲಭಾಗ ಹಾಗು ಅರೇಬಿಯಾ-ಪರ್ಶಿಯ-ಇಂಡಿಯ ಇಷ್ಟಕ್ಕೆ ಸೀಮಿತವಾಗಿತ್ತು.ಭಾರತಕ್ಕೆ ಮೊದಲು 'ಇಂಡಿಯ' ಅಂದವರು ಗ್ರೀಕರು.ಸಿಂಧೂನದಿಯನ್ನ ಇಂಡಸ್ ಎಂದು ಕರೆದ ಅವರು ಅದರ ತೀರದಲ್ಲಿ ವಾಸವಿದ್ದ ಎಲ್ಲರನ್ನೂ ಸಾರಾಸಗಟಾಗಿ ಇಂಡಿಯನ್ನರು ಎಂದು ಗುರುತಿಸಿದರು ಅನಂತರದ ದಿನಗಳಲ್ಲಿ ಯುರೂಪಿನಾದ್ಯಂತ ಅದೆ ಹೆಸರು ಖಾಯಂ ಆಯಿತು.) ವಿಶ್ವಕ್ಕೆ ನಿಜವಾದ ಅರ್ಥದಲ್ಲಿ ಸಾಮ್ರಾಟನಾಗುವ ಮಹತ್ವಾಕ್ಷಾಂಶೆ ಹೊಂದಿದ್ದ ಅಪರೂಪದ ಸಾಹಸಿ-ನಿಜವಾದ ಅರ್ಥದಲ್ಲಿ ಕನಸುಗಾರ ಅಲೆಕ್ಸಾಂಡರ್ ಮೊತ್ತಮೊದಲಿಗೆ ಇಲ್ಲಿನ ಸಂಪತ್ತು ಹಾಗೂ ಅಧಿಕಾರ ವಿಸ್ತರಣೆಯ ಉದ್ದೇಶದಿಂದ ಧಾಳಿ ಸಂಘಟಿಸಿದ್ದ.ಇಸ್ಲಾಂ ಹುಟ್ಟುವ ಸಾವಿರ ವರ್ಷದ ಹಿಂದೆಯೆ ಗ್ರೀಕರ ಈ ಸಾಹಸಿ ನೆಲಮಾರ್ಗದಿಂದಲೆ ಹೊರಟು ಪರ್ಶಿಯವನ್ನ ಗೆದ್ದು (ಇಂದಿನ ಇರಾಕ್) ಅಲ್ಲಿ ತನ್ನ ದಣಿದಿದ್ದ ಸೈನ್ಯವನ್ನ ಬಹುತೇಕ ಬರಾಕಸ್ತುಗೊಳಿಸಿ ಪರ್ಷಿಯಾದ ಉತ್ಸಾಹಿ ತರುಣರನ್ನೆ ಹೆಚ್ಚಾಗಿ ಹೊಂದಿದ್ದ ಹೊಸ ಸೈನ್ಯವನ್ನ ಕಟ್ಟಿ ಸಿಂದೂನದಿಯ ಎಲ್ಲೆ ಬಂದು ಮುಟ್ಟಿದ.

ಆಗಿನ ಭೂಪಟದ ಪ್ರಕಾರ ಪರ್ಶಿಯ ಭಾರತದ ನೆರೆದೇಶವಾಗಿತ್ತು (ಧರ್ಮಾಧರಿತವಾಗಿ ದೇಶ ವಿಭಜನೆಯಾಗುವವರೆಗೂ ಪರ್ಶಿಯ ಭಾರತದ ನೆರೆದೇಶವೆ ಆಗಿತ್ತು). ಅಲೆಕ್ಸಾಂಡರ್ ಉದ್ದೇಶ ಗಂಗೆಯನ್ನು ಮುಟ್ಟಿ ಅದರ ಪ್ರವಾಹದ ದಿಕ್ಕಿನಲ್ಲೆ ಸಾಗಿ ಅನಂತರ ಸಾಗರ ತೀರ ಸೇರಿ ಬಂದದಾರಿಯಲ್ಲೆ ಹಿಂದಿರುವುದಾಗಿತ್ತು.ಆದರೆ ಅವನ ಆತ್ಮಸ್ಥೈರ್ಯ ಕುಗ್ಗುವಂತ ಘಟನೆಗಳು ಒಂದಾದರ ಮೇಲೆ ಒಂದು ನಡೆದುದರಿಂದ ಸಾಮ್ರಾಟ ತನ್ನ ಈ ಯೋಜನೆಯನ್ನ ಬಿಟ್ಟು ಸ್ವದೇಶಕ್ಕೆ ಹಿಂದಿರುಗಲೆ ಬೇಕಾಯಿತು.ಮೊದಲನೆಯದಾಗಿ ಅವನ ಜೀವವೆ ಆಗಿದ್ದು ಗ್ರೀಸಿನಿಂದ ಪರ್ಷಿಯಾದವರೆಗೂ ಜೊತೆನೀಡಿದ್ದ ಕುದುರೆ ಭ್ಯೂಸಿಫಲಾಸ್ ಅತೀವ ಬಳಲಿಕೆಯಿಂದ ಅಸುನೀಗಿತು,ಎರಡನೆಯದಾಗಿ ಗಂಗೆಯ ಇಕ್ಕೆಡೆಗಳಲ್ಲೂ ನೆಲೆ ನಿಂತಿದ್ದ ಅನೇಕ ಭಾರತೀಯ ಬುಡಕಟ್ಟುಗಳನ್ನ ಮಣಿಸಿ ಮುಂದೆ ಸಾಗುವುದು ಸವಾಲಿನ ಕೆಲಸವಾಗಿತ್ತು,ಮೂರನೆಯದಾಗಿ ಭಾರತೀಯ ರಾಜ ಪುರೂರವನ ಸ್ವರಕ್ಷಣೆಯ ಯುದ್ದಾಹ್ವಾನ ಅಲೆಕ್ಸಾಂಡರ್ ಚಿಂತೆ ಹೆಚ್ಚಿಸಿತ್ತು ಹಾಗೂ ಕೊನೆಯದಾಗಿ ಸಾವಿರಾರು ಮೈಲಿ ಹೋರಾಡುತ್ತಾ ಬಂದು ವಿಭಿನ್ನ ಹವಾಮಾನಗಳನ್ನ ಎದುರಿಸಿ ಅವನ ಬಹುತೇಕ ಮೂಲಸೈನಿಕರು ಬಳಲಿ ನಿತ್ರಾಣರಾಗಿ ಹೋಗಿದ್ದರು.ಹೀಗಾಗಿ ಪುರೂರವನನ್ನು ಮಣಿಸಿದರೂ ಕೇವಲ ಕಪ್ಪಪಡೆದು ಸ್ವದೇಶದ ಹಾದಿ ಹಿಡಿಯಲು ಅಲೆಕ್ಸಾಂಡರ್ ನಿರ್ಧರಿಸಿ ತನ್ನ ಒಡನಾಡಿಗಳಿಗೆ ತನ್ನೊಂದಿಗೆ ಬರುವ ಅಥವಾ ಇಲ್ಲೇ ಉಳಿಯುವ ಸ್ವಾತಂತ್ರ ನೀಡಿದ.ಅನೇಕ ಗ್ರೀಕರು ಮರಳಿ ಹೋಗಲಿಕ್ಕೆ ಇಚ್ಚಿಸದೆ ಇಲ್ಲೆ ಉಳಿದು ಭಾರತೀಯ ಮುಖ್ಯವಾಹಿನಿಯಲ್ಲಿ ಬೆರೆತು ಹೋದರು.

ಇಲ್ಲಿ ಆಗಷ್ಟೆ ವೇದಕಾಲ ಮುಗಿದು ದೇವತಾರಾಧನೆ ಪ್ರಕೃತಿಪೂಜೆಯಿಂದ ವಿಗ್ರಹಾರಾಧನೆಗೆ ವಿಕಸಿಸಿತ್ತು.ಇಲ್ಲಿನ ಧಾರ್ಮಿಕತೆಯನ್ನೆ ಕ್ರಮೇಣ ಅನುಸರಿಸತೊಡಗಿದ ಇಲ್ಲುಳಿದ ಗ್ರೀಕರು ತಮ್ಮ ಮೂಲ ಆರಾಧನಾ ಕ್ರಮವನ್ನು ಕೊಂಚ ಮಾರ್ಪಡಿಸಿ ಕೊಳ್ಳಬೆಕಾಯಿತಷ್ಟೇ.ಇದು ಹೆಚ್ಚಿನ ಗೊಂದಲಕ್ಕೆ ಎಡೆ ಮಾಡಿ ಕೊಡಲಿಲ್ಲ ,ಏಕೆಂದರೆ ಕ್ರೈಸ್ತ ಧರ್ಮ ಬೆತ್ಲಹೆಮ್'ನಲ್ಲಿ ಉಗಮವಾಗಲು ಇನ್ನೂ ಮೂರೂಕಾಲು ಶತಮಾನ ಬಾಕಿಯಿದ್ದ ದಿನಗಳವು.ಅದು ಹುಟ್ಟಿ ಬೆಳೆದು ಗ್ರೀಕನ್ ಸಾಮ್ರಾಜ್ಯದ ನಂತರ ಪ್ರವರ್ಧಮಾನಕ್ಕೆ ಬಂದ ರೋಮನ್ ಸಾಮ್ರಾಜ್ಯದ ರಾಜಧರ್ಮವಾಗುವವರೆಗೂ ಯುರೋಪಿನಲ್ಲಿ ಭಾರತದಂತೆ ವಿಗ್ರಹಾರಾಧನೆ ಚಾಲ್ತಿಯಲ್ಲಿತ್ತು.ಇಲ್ಲಿಯೆ ಉಳಿದ ಗ್ರೀಕರ ಮುಂದಿನ ಸಂತತಿ "ಚಿತ್ಪಾವನ ಬ್ರಾಮ್ಹಣ" ಸಮುದಾಯವಾಗಿದೆ.ದೈಹಿಕವಾಗಿ ಅವರಲ್ಲಿ ಉಳಿದ ಕುರುಹುಗಳು ಅವರ ಮೂಲವನ್ನು ಸ್ಪಷ್ಟಪಡಿಸುತ್ತವೆ.ಮುಂದಿನ ದಿನಗಳಲ್ಲಿ ಗುಜರಾತದಿಂದ ಆರಂಭಿಸಿ ಕೇರಳದವರೆಗೂ ಕರಾವಳಿಯಲ್ಲಿ ಹರಡಿ ಕೊಂಡ ಈ ಸಮುದಾಯದ ಸದಸ್ಯರ ನೀಲಿ-ಹಸಿರು-ಬೂದು ಕಣ್ಣುಗಳು,ಹಾಲುವರ್ಣದ ಚರ್ಮ,ಕೆಂಚು ಕೂದಲು,ಎದ್ದುಕಾಣುವ ಮುಖಚರ್ಯೆ....ಇವೆಲ್ಲ ಅವರ ತಲೆಮಾರುಗಳ ಹಿಂದಿನ ಗ್ರೀಕನ್ ವಂಶವಾಹಿಗಳ ಕೊಡುಗೆಯಾಗಿ ಉಳಿದುಹೋಗಿದೆ.ಇವರೂ ಸಹ ಇಲ್ಲಿನವರನ್ನ ಮತಾಂತರಿಸದೆ ತಾವೆ ಇಲ್ಲಿನ ಮತಕ್ಕೆ ಮಾರು ಹೋಗಿ ಈಗ ನೂರಕ್ಕೆ ನೂರು ಶೇಕಡಾ ಭಾರತೀಯರೆ ಆಗಿಹೋಗಿದ್ದಾರೆ ಅನ್ನುವುದು ನಿಮ್ಮ ಗಮನಕ್ಕಿರಲಿ.

ಮತ್ತೆ ಕ್ರಿಸ್ತಶಕ 1175ರ ಇಸ್ಲಾಮಿ ದೊರೆ ಮಹಮದ್ ಘೋರಿಯ ಧಾಳಿಗೆ ಮರಳೋಣ.ಮಹಮದ್ ಬಿನ್ ಗಜನಿಯ ಕೊನೆಧಾಳಿಯ ನಂತರ ಭಾರತಕ್ಕೆ ನುಗ್ಗಿದ ಮತ್ತೊಬ್ಬ ಇಸ್ಲಾಮಿ ಅರಸು ಈತ.ಆ ಮೊದಲ ಧಾಳಿಯಲ್ಲಿ ಮುಲ್ತಾನನ್ನು ಆಕ್ರಮಿಸಿದ ಘೋರಿ ಸತತ ಏಳು ಬಾರಿ ಭಾರತದ ಉತ್ತರ ಭೂಭಾಗಗಳನ್ನ ಲೂಟಿ ಹೊಡೆದ.ಮೊದಲ ಧಾಳಿಯ ನಂತರ ಕ್ರಿಸ್ತಶಕ 1178ರಲ್ಲಿ ಗುಜರಾತಿನ ಸೋಮನಾಥ ದೇವಾಲಯದತ್ತ ನುಗ್ಗುವ ಯತ್ನದಲ್ಲಿದ್ದಾಗ ಘೋರಿ ಅಲ್ಲಿನ ದೊರೆ ಎರಡನೆ ಭೀಮದೇವನಿಂದ ತೀವ್ರ ಪ್ರತಿರೋಧ ಎದುರಿಸಿದನಾದರೂ ಸೋಲೊಪ್ಪಿಕೊಳ್ಳಲಿಲ್ಲ.ಆದರೆ ತನ್ನ ಮೂರನೆ ಧಾಳಿಯ ತರೈನ್ ಸಮರದಲ್ಲಿ ಪ್ರಥ್ವಿರಾಜ ಚೌಹಾನನ ಎದುರು ನಾಚಿಕೆಗೇಡಿನ ಸೋಲನ್ನ ಆತ ಎದುರಿಸಿ ತೀವ್ರವಾಗಿ ಗಾಯಗೊಂಡು ಕಾಬೂಲಿಗೆ ಓಡಿ ಹೋಗಬೇಕಾಯಿತು.

ಆದರೆ ಮುಂದಿನ ವರ್ಷ ನಡೆದ ಯುದ್ದದಲ್ಲಿ ಪರಿಣಾಮ ವ್ಯತಿರಿಕ್ತವಾಗಿ ಘೋರಿ ಯುದ್ಧ ಗೆದ್ದ.ಆಗ ಕನೋಜು ಪ್ರತಿಹಾರರ ಆಡಳಿತ ಕೇಂದ್ರವಾಗಿದ್ದರೂ ಇಂದಿನಂತೆ ಇಂದ್ರಪ್ರಸ್ಥದ (ಇಂದಿನ ದೆಹಲಿ) ಮೇಲಿನ ಒಡೆತನ ಭಾರತದ ಸಾಮ್ರಾಟರು ಯಾರು ಎಂಬುದನ್ನು ನಿರ್ಧರಿಸುತ್ತಿತ್ತು.ಹೀಗಾಗಿ ಘೋರಿ ಪ್ರಥ್ವಿರಾಜನನ್ನು ಮಣಿಸಿದ ನಂತರ ಇಂದ್ರಪ್ರಸ್ಥ,ಕನೋಜು,ಕಾಶಿ,ಅಜ್ಮೇರ್,ಗುಜರಾತ್,ಗೌಡ ದೇಶ (ಇಂದಿನ ಬೆಂಗಾಲ) ,ಗುಜರಾತ್ ಎಲ್ಲವನ್ನ ದೋಚಿದ.....ಮತ್ತೆ "ಕತ್ತಿ ಇಲ್ಲವೆ ಖುರಾನ್"ನ ಅನುಸಾರ ಸೆರೆ ಸಿಕ್ಕವರನ್ನ ಬಲವಂತದಿಂದ ಮತಾಂತರಕ್ಕೆ ಒಳಪಡಿಸಲಾಯಿತು.ಇಲ್ಲಿಯವರೆಗೂ ಕೇವಲ ಲೂಟಿಗೆ ಸೀಮಿತವಾಗಿದ್ದ ಇಸ್ಲಾಂ ಧಾಳಿಕೋರತನ ಘೋರಿ ತನ್ನ ತುರ್ಕಿ ಮೂಲದ ಗುಲಾಮ ಕುತ್ಬುದ್ದೀನ್ ಐಬಕ್'ನನ್ನು ತಾನು ಗೆದ್ದ ಭಾರತೀಯ ನೆಲೆಗಳ ಮೇಲೆ ಆಡಳಿತಾಧಿಕಾರಿಯನ್ನಾಗಿ ನೇಮಿಸುವ ಮೂಲಕ ಭಾರತೀಯ ನೆಲದಲ್ಲಿಯೆ ಇಸ್ಲಾಂ ಆಳ್ವಿಕೆ ಜಾರಿಗೆ ಬರುವಂತಾಗಲು ಮೂಲವಾಯಿತು.ಕ್ರಿಸ್ತಶಕ 1206ರಲ್ಲಿ ಘೋರಿ ಶಾಶ್ವತವಾಗಿ ಗೋರಿ ಹೊಕ್ಕ ನಂತರ ಕುತ್ಬುದ್ದೀನ್ ಐಬಕ್ ಸ್ವತಂತ್ರನಾದ.ಭಾರತೀಯ ನೆಲದಲ್ಲಿ ಅಧಿಕೃತವಾಗಿ ಅವನ ಗುಲಾಮಿ ಸಂತತಿಯ ಆಳ್ವಿಕೆ 'ಇಸ್ಲಾಮಿ ರಾಜಧರ್ಮ'ದೊಂದಿಗೆ ಹೀಗೆ ಆರಂಭವಾಯ್ತು.

(ಇನ್ನೂ ಇದೆ...)

11 October 2011

ಇಸ್ಲಾಂ ಧಾಳಿಕೋರತನ ಹಾಗು ಭಾರತೀಯರೊಂದಿಗಿನ ಅದರ ಆರಂಭಿಕ ಕದನ....

ದಕ್ಷಿಣದಲ್ಲಿ ಇಸ್ಲಾಂ ವ್ಯಾಣಿಜ್ಯದ ಕಾರಣಗಳ ಮೂಲಕ ಕ್ರಿಸ್ತಶಕ 646ರಲ್ಲಿ ದೇಶದೊಳಗೆ ತನ್ನ ಮೊದಲ ಹೆಜ್ಜೆಯೂರುತ್ತಿದ್ದಾಗ ಭಾರತ ಉಪಖಂಡದಲ್ಲಿದ್ದ ರಾಜಕೀಯ ಪರಿಸ್ಥಿತಿಯನ್ನ ನಾವು ಅರಿತುಕೊಳ್ಳಬೇಕು.ಕೇರಳದ ಚೇರರು ಸ್ವತಂತ್ರರಾಗಿ ಮೆರೆಯುತ್ತಿದ್ದ ಕಾಲವದು.ಇಂದಿನ ತಮಿಳುನಾಡಿನ ಬಹುಪಾಲು ಕಂಚಿಯಿಂದ ಆಳುತ್ತಿದ್ದ ಪಲ್ಲವರ ಅಧೀನದಲ್ಲಿತ್ತು.ಕೊಂಗನಾಡಿನ ಕೆಲಭಾಗಗಳೂ ಸೇರಿ ದಕ್ಷಿಣ ತಮಿಳುನಾಡು ತಂಜಾವೂರು ಕೇಂದ್ರಿತ ಚೋಳರ ಆಳ್ವಿಕೆಯಲ್ಲಿತ್ತು.ಚೋಳರು ಪಲ್ಲವರ ಸಾಮಂತರಾಗಿದ್ದರು.ಇನ್ನುಳಿದಂತೆ ಪೂರ್ವದ ಕರಾವಳಿಗಳೂ ಸೇರಿದಂತೆ ದಕ್ಷಿಣ ಹಾಗೂ ಪಶ್ಚಿಮ ಭಾರತದ ಬಹುಪಾಲು ಬಾದಾಮಿಯ ಚಾಲುಕ್ಯರ ಸಾಮ್ರಾಜ್ಯದಲ್ಲಿ ಸೇರಿಹೋಗಿದ್ದವು.ದೇಶದ ಉತ್ತರದ ಭೂಭಾಗ ಹರ್ಷ ಚಕ್ರವರ್ತಿಯ ಅಧೀನದಲ್ಲಿದ್ದು ಅವನ ಆಳ್ವಿಕೆಯ ಗುರ್ಜರ ಸಂಸ್ಥಾನ ತನ್ನ ಕೊನೆಗಾಲದ ಅಂಚಿಗೆ ಬಂದು ಮುಟ್ಟುವ ಸ್ಥಿತಿಯಲ್ಲಿತ್ತು.ಸಾಮ್ರಾಟರೆನಿಸಿದ್ದ ಗುರ್ಜರ-ಚಾಲುಕ್ಯ-ಪ್ರತಿಹಾರ-ಪಲ್ಲವರನ್ನ ಧಿಕ್ಕರಿಸಿ ಚೋಳ-ಪಾಂಡ್ಯ-ಚೇರ-ಕದಂಬ ಮುಂತಾದ ಮನೆತನಗಳು ಒಂದೊ ಹೊಸತಾಗಿ ಸಾಮ್ರಾಜ್ಯ ಕಟ್ಟಲು,ಇಲ್ಲವೆ ಅಧೀನ ಸಾಮ್ರಾಟರಿಂದ ಸ್ವತಂತ್ರ ಘೋಷಿಸಿಕೊಳ್ಳಲು ತುದಿಗಾಲ ಮೇಲೆ ನಿಂತಿದ್ದರು.

ಆರ್ಥಿಕವಾಗಿ ಭಾರತ ಭೂಮಿ ಸಮೃದ್ಧವಾಗಿತ್ತು ಹಾಗು ಇಲ್ಲಿನ ವಣಿಕ ಸಾರ್ಥಗಳು (ಕ್ಯಾರವಾನ್) ದಕ್ಷಿಣದ ಕಂಚಿಯಿಂದ ವಾಯುವ್ಯದ ಸಮರಖಂಡದವರೆಗೂ (ಇಂದಿನ ಉಜ್ಬೇಕಿಸ್ತಾನ), ನೈರುತ್ಯದ ಮುಸ್ಸೇರಿ ಪಟ್ಟಣದಿಂದ ಗಂಗಾ ಬಯಲು ದಾಟಿ ಈಶಾನ್ಯದ ಬ್ರಮ್ಮದೇಶದವರೆಗೂ ಸೊತ್ತು ಸರಂಜಾಮುಗಳನ್ನ ಹೊತ್ತು ಬಿಕರಿ ಮಾಡುತ್ತಿದ್ದವು.ಸಾಲದ್ದಕ್ಕೆ ಸಮುದ್ರ ಮಾರ್ಗಗಳ ಮೂಲಕ ಆಗ್ನೇಯ ದೇಶಗಳಿಗೂ ಹೋಗುವ ಸಾರ್ಥಗಳೂ ಅಸ್ತಿತ್ವದಲ್ಲಿದ್ದವು.ಆದರೆ ಪಶ್ಚಿಮ ಕರಾವಳಿಯಿಂದ ಯಾವುದೆ ಸರಕುಗಳನ್ನ ನೇರವಾಗಿ ಹೊತ್ತೊಯ್ದು ಮಾರಲು ಅರಬ್ಬಿಗಳ ಆಕ್ಷೇಪ ಜಾರಿಯಲ್ಲಿತ್ತು.ಆಗಷ್ಟೆ ಕಣ್ತೆರೆದಿದ್ದ ಇಸ್ಲಾಮಿಗೆ ಧರ್ಮಾಂತರವಾಗಿದ್ದ ಅರಬ್ ಜಗತ್ತಿನ ವಣಿಕರು ಭಾರತೀಯ ಸಿರಿಯ ಮೇಲೆ ಕಣ್ಣಿಡಲಾರಂಭಿಸಿದ್ದರು.ಅರಬ್ ಜಗತ್ತಿನಲ್ಲಿ ಸಿರಿಯಾದ ದಮಸ್ಕಾಸ್,ಇರಾಕಿನ ಬಾಗ್ದಾದ್,ಪರ್ಷಿಯಾದ ತೆಹರಾನ್ ರಾಜಧಾನಿಗಳಾಗಿ ಮೆರೆಯುತ್ತಿದ್ದವು.ಆದರೂ ಯಾರಿಂದಲೂ ಆಳಿಸಿಕೊಳ್ಳಲು ಇಚ್ಚಿಸದ ಹಲವಾರು ಬುಡಕಟ್ಟುಗಳು ತಮಗೆ ತೋಚಿದ ಹಾಗೆ ಕಾನೂನು ಕಟ್ಟಳೆಗಳನ್ನು ತಮ್ಮ ಸಮಾಜದೊಳಗೆ ರೂಪಿಸಿಕೊಂಡಿದ್ದವು.ಎಲ್ಲದ್ದಕ್ಕೂ ಇಸ್ಲಾಮಿನ ನೆಲೆಗಟ್ಟು ಕಡ್ಡಾಯವೆ ಆಗಿಹೋಗಿತ್ತು.

ಮೊತ್ತಮೊದಲಿಗೆ ಭಾರತೀಯ ಉಪಖಂಡವನ್ನ ಹಿಂದುಸ್ತಾನವೆಂದೂ,ಇಲ್ಲಿನ ನಿವಾಸಿಗಳನ್ನ ಸಾರಾಸಗಟಾಗಿ ಹಿಂದೂಗಳೆಂದೂ ಗುರುತಿಸಿದವರು ಅರಬ್ಬಿಗಳೆ.ಸಿಂಧೂ ನದಿಯ ಸುತ್ತಮುತ್ತಲವರೆಗೆ ಆಗಾಗ ಧಾಳಿಯಿಡುತ್ತಿದ್ದ ಅರಬ್ ಬುಡಕಟ್ಟುಗಳ ಬಾಯಲ್ಲಿ ಸಿಂಧೂ ಹಿಂದೂವಾಗಿ ಉಚ್ಚಾರಿತವಾಗಿ ಸದ್ಯ ಅದೆ ಇಲ್ಲಿನ ಮೂಲ ಧರ್ಮದ ಹೆಸರಾಗಿ ಉಳಿದು ಹೋಗಿದೆ!

ಹೀಗಿದ್ದಾಗ ಭಾರತದ ಮೇಲೆ ಆರಂಭದಲ್ಲಿ ಧಾಳಿಯಿಟ್ಟವನು ಮಹಮದ್ ಬಿನ್ ಕಾಸಿಂ.ಕ್ರಿಸ್ತಶಕ 714ರ ಅಂತ್ಯದಲ್ಲಿ ಇವನ ನೇತೃತ್ವದಲ್ಲಿ ಇಸ್ಲಾಮಿ ಧರ್ಮಾನುಯಾಯಿಗಳಿಂದ ಭಾರತದ ಮೇಲೆ ಮೊದಲ ಆಕ್ರಮಣ ನಡೆಯಿತು.ದೇವಳದಿಂದ (ಇಂದಿನ ಕರಾಚಿ) ರಾಜ್ಯಭಾರ ಮಾಡುತ್ತಿದ್ದ ದಾಹಿರ ರಾಜ ಸಾಂಪ್ರದಾಯಿಕವಲ್ಲದ ಹಾಗು ಕ್ರೌರ್ಯಕ್ಕೆ ಹೆಚ್ಚು ಒತ್ತು ಕೊಡುವ ಅರಬ್ಬೀ ಬುಡಕಟ್ಟುಗಳ ಯುದ್ದ ಶೈಲಿಯಿಂದ ನಜ್ಜುಗುಜ್ಜಾಗಿ ಹೋದ.ಮೂಲಸ್ಥಾನದಲ್ಲಿದ್ದ (ಇಂದಿನ ಮುಲ್ತಾನ್) ಕೊನಾರ್ಕದಲ್ಲಿರುವಂತಹದ್ದೆ ಸೂರ್ಯ ದೇವಾಲಯ ಇವರ ಧಾಳಿಯ ಅಂಗವಾಗಿದ್ದ ಧರ್ಮ ಶ್ರದ್ಧೆಗೆ ಬಲಿಯಾಗಿ ;ಮೂರ್ತಿ ಭಂಜನೆಗೆ ಸಿಲುಕಿ ಸರ್ವನಾಶವಾಗಿ ಹೋಯಿತು.ಕತ್ತಿಯಂಚಲ್ಲಿ ಸುಲಿಗೆಗಳು ನಡೆದವಾದರೂ ಮತಾಂತರದಂತಹ ಅತಿರೇಕ ಆಗಿನ್ನೂ ಅಡಿಯಿಟ್ಟಿರಲಿಲ್ಲ.ಆದರೆ ಧಾಳಿಗೆ ಸಿಲುಕಿದ್ದ ಇಂದಿನ ಸಿಂಧ್ ಪ್ರಾಂತ್ಯದಲ್ಲಿದ್ದ ಅನೇಕ ದೇವಾಲಯಗಳಲ್ಲಿ ವ್ಯಾಪಕ ಮೂರ್ತಿ ಭಂಜನೆಗಳು ನಡೆದವು.

ಆಂತರಿಕ ಐಕ್ಯತೆ ಇಲ್ಲದ ಭಾರತದ ಪಾಳೆಪಟ್ಟುಗಳು ಇನ್ನೊಂದು ರಾಜ್ಯದಮೇಲಾದ ಪರಧರ್ಮೀಯರ ಪೈಶಾಚಿಕ ಮಟ್ಟದ ಧಾಳಿಯನ್ನ ಕಂಡೂ ಕಾಣದ ಹಾಗೆ ಇದ್ದರು.ಇದು ಅವರ ರಾಜಕೀಯ ನಡೆಯಾಗಿತ್ತು.ಸಿಂಧ್'ನ ಸರಹದ್ದು ಮೀರಲು ಯತ್ನಿಸಿ ಮಾಳವ ರಾಜ್ಯಕ್ಕೆ ಮುಗಿಬಿದ್ದ ಆರಬ್ಬಿ ಧಾಳಿಕೋರರನ್ನ ರಾಜ ಭೋಜರಂತಹ ದೊರೆಗಳು ಹಿಮ್ಮೆಟ್ಟಿಸಿದ್ದರಿಂದ ಮುಂದಿನ ಮೂರುನೂರು ವರ್ಷ ಯಾವುದೆ ತಂಟೆ ತಕರಾರುಗಳು ಸಿಂಧೂ ನದಿಯ ಪೂರ್ವತೀರವನ್ನ ಪ್ರವೇಶಿಸಲಾಗಲಿಲ್ಲ.ಆದರೆ ಕೊರಾಸನ್'ನ ದೊರೆ ಸಬಕ್ತಗಿನ್ ಬೌದ್ಧಧರ್ಮದ ಹಿಡಿತದಲ್ಲಿದ್ದ ಕಾಬೂಲನ್ನ ಆಕ್ರಮಿಸಿ ಅಲ್ಲಿಗೆ ಇಸ್ಲಾಮನ್ನು ಒತ್ತಾಯದಿಂದ ಹೇರಿದ.ಅನಂತರ ಅವನ ಗಮನ ಭಾರತದ ಸಂಪತ್ತಿನತ್ತ ಹರಿಯಿತು.ಭಟಿಂಡದ ರಾಜ ಜಯಪಾಲ ಅದಾಗ ತಾನೆ ಅಳಿವಿನಂಚಿನಲ್ಲಿದ್ದ ಪ್ರತಿಹಾರ ಸಾಮ್ರಾಜ್ಯದ ಸಾಮ್ರಾಟ ರಾಜ್ಯಪಾಲನ ಸಹಕಾರ ಪಡೆದು ಚಾಂದೆಲರ ರಾಜ ದಂಗಣನ ಜೊತೆ ಮೈತ್ರಿ ಸಾಧಿಸಿ ಸಬಕ್ತಗೀನನ ಸೈನ್ಯವನ್ನ ಕ್ರಿಸ್ತಶಕ 991ರಲ್ಲಿ ಹಿಮ್ಮೆಟ್ಟಿಸಲು ಶತಪ್ರಯತ್ನ ಮಾಡಿದನಾದರೂ ಅದು ಫಲ ಕೊಡದೆ ಕೈಚೆಲ್ಲ ಬೇಕಾಯಿತು.

ಸಬಕ್ತಗೀನನ ಮಗ ಮಹಮದ್ ಬಿನ್ ಗಜನಿಯ ಮುಂದಿನ ಅಟ್ಟಹಾಸದ ಧಾಳಿಯ ಪರ್ವ ಆರಂಭಗೊಂಡಂತೆಯೆ ಭಾರತೀಯ ಜನಾಂಗಗಳು ಒತ್ತಾಯದ ಮತಾಂತರಕ್ಕೆ ಒಳಪಡಲು ಆರಂಭಿಸಿದವು.ಅಲ್ಲಿಯ ತನಕ ಹೇರಿಕೆಯ ಮತಾಂತರ ಭಾರತೀಯರ ಪಾಲಿಗೆ ಕೇಳಿಯೂ ಗೊತ್ತಿರದ ಹೊಸ ವಿಚಾರವಾಗಿತ್ತು.ಬೌದ್ಧ ಹಾಗೂ ಜೈನ ಧರ್ಮಾನುಸರಣೆ ಕೇವಲ ಐಚ್ಚಿಕವಾಗಿತ್ತೆ ಹೊರತು ಹೇರಿಕೆಯಲ್ಲ.
"ಕತ್ತಿ ಇಲ್ಲವೆ ಖುರಾನ್"ಎಂಬ ನೇರ ಬೆದರಿಕೆಗೆ ಮಣಿದು ಜೀವ ಉಳಿಸಿಕೊಳ್ಳಲು ಇಸ್ಲಾಂ ಅನುಸರಣೆಗೆ ಇಳಿದವರೇ ಹೆಚ್ಚು.ಕ್ರಿಸ್ತಶಕ 997ರಿಂದ ಆರಂಭವಾದ ಗಜನಿ ಮಹಮದನ ನಿರಂತರ ಆಕ್ರಮಕ ದಂಡಯಾತ್ರೆಗಳು 1027 ರವರೆಗೂ ಕಾಶ್ಮೀರ,ಪಂಜಾಬ್,ಮಾಳವಾ,ಕಂಗ್ರಾ,ತಾನೇಶ್ವರ,ಕನೂಜು,ಮಥುರೆ,ಗ್ವಾಲಿಯರ್ ಹಾಗು ಸೋಮನಾಥ ದೇವಾಲಯಗಳ ಮೇಲೆಲ್ಲಾ ನಿರಂತರ ಹದಿನೇಳು ಬಾರಿ ನಡೆದವು.ಭಾರತದೊಳಗೆ ಅಷ್ಟು ದೂರ ಸಾಗಿ ಬಂದು ಲೂಟಿ ಹೊಡೆಯುವಾಗ ಅವನು ಅನೇಕ ಹಿಂದೂ ಸಾಮ್ರಾಜ್ಯಗಳ ಸರಹದ್ದನ್ನ ದಾಟಿಕೊಂಡೆ ಬರಬೇಕಾಗಿತ್ತು ಅನ್ನೋದು ನಿಮ್ಮ ನೆನಪಿನಲ್ಲಿರಲಿ.ಅದೆ ವೇಳೆಗೆ 'ತಮ್ಮ ಮನೆ ಮಾತ್ರ ಸುರಕ್ಷಿತವಾಗಿದ್ದರಾಯ್ತು...ಅಕ್ಕಪಕ್ಕದವರು ಬೇಕಿದ್ರೆ ಹಾಳು ಬಿದ್ದು ಹೋಗಲಿ!" ಎಂಬ ಆ ರಾಜ್ಯಗಳ ರಾಜರ ಹಾಗು ಪ್ರಜೆಗಳ ಮನಸ್ಥಿತಿಯ ಹಿಂದಿರುವ ಸ್ವಾರ್ಥವನ್ನೂ ಮರೆಯದಿರಿ! ಈ ಹೊಟ್ಟೆಕಿಚ್ಚಿನ ಫಲವಾಗಿ ಕೆಲವೆ ಸಾವಿರ ರಕ್ತ ಪಿಪಾಸುಗಳ ಜೊತೆಗೂಡಿ ಭಾರತದ ಸಿರಿ ಸಂಪತ್ತನ್ನ ಲೂಟಿ ಮಾಡಿ,ಅಮಾಯಕರನ್ನ ಒತ್ತಾಯದಿಂದ ಬಲವಂತವಾಗಿ ಮತಪರಿವರ್ತನೆಗೆ ಒಳಪಡುವ ಹಾಗೆ ಹಿಂಸಿಸಿದ ಮಹಮದ್ ಬಿನ್ ಗಜನಿ ಇಷ್ಟು ಯಶಸ್ವಿ ಧಾಳಿಯನ್ನ ಸಂಘಟಿಸಲು ಸಾಧ್ಯವಾಗುತ್ತಿರಲಿಲ್ಲ ಅನ್ನುವುದಂತೂ ಸತ್ಯ.

ಇದಕ್ಕೂ ಭಾರತದಲ್ಲಿನ ಇಸ್ಲಾಮಿನ ಕಥೆಗೂ ನೇರಾನೇರ ಸಂಬಂಧವಿರುವ ಕಾರಣ ಐತಿಹಾಸಿಕ ನೆಲೆಗಟ್ಟಿನಿಂದಲೂ ಅನಿವಾರ್ಯವಾಗಿ ಭಾರತೀಯ ಇಸ್ಲಾಮನ್ನು ಅವಲೋಕಿಸಬೇಕಿದೆ.ಅದೇನೆ ಧಾಳಿ ಮಾಡಿದ್ದರೂ ಮಹಮದ್ ಬಿನ್ ಗಜನಿ ಮರಳಿ ಸ್ವದೇಶಕ್ಕೆ ಹೋಗಿ 1030ರಲ್ಲಿ ಅಲ್ಲಿಯೆ ತನ್ನ ಕೊನೆಯುಸಿರನ್ನೆಳೆದ.ಇಲ್ಲಿನ ರಾಜ್ಯವನ್ನ ಆಳುವ ಯಾವ ಅಭಿಲಾಷೆಯೂ ಅವನ ಧಾಳಿಯ ಹಿಂದೆ ಇದ್ದಿರಲಿಲ್ಲ.ಹೀಗಾಗಿ ಅಧಿಕೃತ ಇಸ್ಲಾಂ ಪ್ರಭುತ್ವದ ಆರಂಭಕ್ಕಾಗಿ ಭಾರತ ಭೂಮಿ ಇನ್ನೂ ಒಂದೂಕಾಲು ಶತಮಾನ ಕಾಯಬೇಕಾಯಿತು...ಮಹಮದ್ ಘೋರಿ ಧಾಳಿಯಿಡುವ ತನಕ.....

(ನಾಳೆಗೆ....)