15 October 2011

ಮರಳುಗಾಡಿನ ಮರ್ಮರ...(ಭಾಗ -2)

ಆರನೆ ಶತಮಾನದಲ್ಲಿ ಅರೇಬಿಯಾದ ನೂರಾರು ಬುಡಕಟ್ಟುಗಳ ಜನರು ಬದುಕಿನ ಬಹುತೇಕ ಆಸರೆ ಕಳೆದುಕೊಂಡು ಅಲೆಮಾರಿಗಳಾಗಿ,ಅಸಂಸ್ಕೃತರಾಗಿ ದೇಶವನ್ನ ಸುತ್ತುವುದು ಸಾಮಾನ್ಯವಾಗಿತ್ತು.ಅವರೆಲ್ಲರೂ ತಮ್ಮತಮ್ಮ ಬುಡಕಟ್ಟುಗಳ ಸಂಸ್ಕೃತಿಗೆ ಬಲವಾಗಿ ಅಂಟಿಕೊಂಡಿದ್ದು ಅಸಹನೆ,ಕೋಪ-ತಾಪ,ನಿಷ್ಠೂರತೆ ಮುಂತಾದ ಗುಣಧರ್ಮಗಳನ್ನು ವಿಪರೀತವಾಗಿ ಬೆಳೆಸಿಕೊಂಡಿದ್ದರು.ಯಾರ ಹಿಡಿತಕ್ಕೂ ಸಿಗದೆ ನಿರ್ಭೀತರಾಗಿ-ಸ್ವತಂತ್ರ ಮನೋಭಾವನೆ ಬೆಳೆಸಿಕೊಂಡಿದ್ದ ಇವರು ಒಂದು ಕಾನೂನಿನ ಪ್ರಕಾರ ನಡೆದುಕೊಳ್ಳುತ್ತಿರಲಿಲ್ಲ.ಪ್ರತಿ ಬುಡಕಟ್ಟಿಗೆ 'ಶೇಖ್' ಎಂಬ ನೇತಾರನಿದ್ದರೂ ಅವನಿಂದಲೂ ಗುಂಪಿನ ಎಲ್ಲರನ್ನು ಬಯಸಿದಾಗ ನಿಯಂತ್ರಿಸೋದು ಕಷ್ಟವಾಗುತ್ತಿತ್ತು.ಒಂದು ವಿಚಿತ್ರ ರೀತಿಯ ಅರಬ್ಬರ ವ್ಯಕ್ತಿತ್ವದಲ್ಲಿ ಎದ್ದು ಕಾಣುವಂತಹ ವಿರೋಧಾಭಾಸಗಳು ಕಂಡು ಬರುತ್ತಿದ್ದವು ಎನ್ನುತ್ತಾನೆ ವಿಲ್ ಡ್ಯೂರಾಂಟ್.

ಒಂದುಕಡೆ ಅಸಂಖ್ಯಾತ ಉಪ ಬುಡಕಟ್ಟುಗಳ ಜನರು ಒಂದೆ ಭಾಷೆ,ನಡೆ-ನುಡಿ,ನ್ಯಾಯ ಸೂತ್ರಗಳನ್ನ ಒಪ್ಪಿಕೊಂಡಿದ್ದರೂ ಸಹ ಆಂತರಿಕವಾಗಿ 'ಸ್ವತಂತ್ರ ಮನೋಭಾವ'ವನ್ನೆ ಬೆಳೆಸಿಕೊಂಡು ಸಮಯ ಬಂದಾಗ ಯಾವುದೆ ನೈತಿಕ ನ್ಯಾಯ ಸೂತ್ರಗಳಿಗೆ ಕವಡೆ ಕಿಮ್ಮತ್ತನ್ನೂ ಕೊಡದೆ ಸದಾ ಚಡಪಡಿಸುತ್ತಾ ತಮ್ಮ ತಮ್ಮಲ್ಲೆ ಹೊಡೆದಾಡುತ್ತಿದ್ದು,ಸಣ್ಣಪುಟ್ಟ ಕ್ಷುದ್ರ ಕಾರಣಗಳಿಗೂ ಭೀಕರ ಮಾರಾಮಾರಿ-ಕದನ-ನೆತ್ತರ ಚೆಲ್ಲಾಟ ಸಾಮಾನ್ಯವೆಂಬಂತೆ ನಡೆಯುತ್ತಿದ್ದವು.ರಕ್ತ ಸಂಬಂಧ ಹಾಗೂ ಇನ್ನಿತರ ಯಾವುದೆ ಆಪ್ತ ಸಂಬಂಧಗಳ ಬೇಲಿಯೂ ಆ ಕ್ಷಣ ಅವರೊಳಗಿನ ಪಶು ವರ್ತನೆಯನ್ನು ತಡೆಯುತ್ತಿರಲಿಲ್ಲ.ಯಾವ ರಾಜನ ಚಕ್ರಾಧಿಪತ್ಯಕ್ಕೂ ಒಪ್ಪದೆ,ತಮ್ಮೊಳಗಿನ ನಾಯಕನ ಮುಂದಾಳತ್ವಕ್ಕೂ ಕಿಮ್ಮತ್ತು ಕೊಡದೆ ತಮಗೆ ಬೇಕಾದಂತೆ ಇರೋದು ಅವರ ರೂಢಿಯಾಗಿತ್ತು.ಐಕ್ಯತೆಯಲ್ಲಿ ನಂಬಿಕೆಯಿಡದೆ ಅನೈಕ್ಯತೆಯ ಅನಿಷ್ಟಗಳನ್ನ ಧಾರಾಳವಾಗಿ ಅನುಭವಿಸುತ್ತಿದ್ದ ಅರಬ್ಬರು ವಿರೋಧಾಭಾಸಪೂರಿತ ಜೀವನ ಶೈಲಿಯನ್ನು ಹೊಂದಿದ್ದದು ಸ್ಪಷ್ಟವಾಗಿತ್ತು.ಯಾವುದೆ ನಸರ್ಗಿಕ ತಡೆಗಳಿಲ್ಲದಿದ್ದರೂ ಅರಬ್ಬರ ಸ್ವಾತಂತ್ರ ಕಾಪಾಡಿದ್ದು ಇದೆ ವಿರೋಧಾಭಾಸ ಅನ್ನುವುದು ಇತಿಹಾಸಕಾರರ ಖಚಿತ ಅಭಿಪ್ರಾಯ.ಇಲ್ಲಿನ ಪ್ರತಿಯೊಂದು ಬುಡಕಟ್ಟು ಕೂಡ ಒಬ್ಬ ಪೂರ್ವಿಕನ ಹೆಸರಿನಿಂದ ಗುರುತಿಸಲ್ಪಡುತ್ತಿತ್ತು.ಉದಾಹಾರಣೆಗೆ 'ಬಾನ್ ಫಾಸನ್' ಬುಡಕಟ್ಟಿನವರು ತಾವು 'ಫಾಸನ್' ಎಂಬ ಸಂತತಿಗೆ ಸೇರಿದವರು ಎಂದು ಸಾರಿಕೊಳ್ಳುತ್ತಿದ್ದರು.ಹೀಗೆ ತಮ್ಮ ಬುಡಕಟ್ಟಿನ ಸಂಸ್ಕೃತಿ ಹಾಗೂ ಅಂತಸ್ತಿನ ಬಗ್ಗೆ ಅವರಲ್ಲಿ ಅತೀವ ಹೆಮ್ಮೆಯಿದ್ದು ತಮಗಿಂತ ಕೆಳ ಅಂತಸ್ತಿನ ಪಂಗಡದ ಜೊತೆ ಸಂಬಂಧ ಬೆಳೆಸುವುದರ ಬಗ್ಗೆ ವಿರೋಧ ವ್ಯಕ್ತವಾಗುತ್ತಿತ್ತು.

ಅಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಐದನೆ ಮೂರು ಭಾಗದಷ್ಟು ಮಂದಿ ಅಲೆಮಾರಿ ಬಿದೊವಿನ್ (bedowin) ಪಂಗಡದವರಾಗಿದ್ದು ತಮ್ಮ ಜಾನುವಾರುಗಳೊಂದಿಗೆ ಜಲವಸತಿ ಹುಡುಕಿಕೊಂಡು ಅಲೆದಾಡುವ ಪರಿಪಾಠ ಅವರದ್ದಾಗಿತ್ತು.ಕುದುರೆಗಳನ್ನ ಸಾಕಿ ಬೆಳೆಸುವುದು ಅವರ ಅನ್ನಕ್ಕೆ ದಾರಿಯಾಗಿದ್ದರೂ ಒಂಟೆಗಳು ಅವರ ಸರ್ವಸ್ವವಾಗಿದ್ದವು.ಅವರ ಜೀವನದ ಅಂಗವಾಗಿದ್ದ ಒಂಟೆ ಅವರೊಂದಿಗೆ ಹುಟ್ಟಿ ಮರುಭೂಮಿಯ ವೈಪರೇತ್ಯಗಳನ್ನೆಲ್ಲ ಸಹಿಸಿಕೊಂಡು ಸಾವಿನಲ್ಲೂ ಉಪಕಾರಿಯಾಗಿಯೆ ಸಾಯುತ್ತಿತ್ತು.ಉರಿ ಬೇಸಿಗೆಯಲ್ಲಿ ಐದು ದಿನಗಳವರೆಗೆ ನೀರಿಲ್ಲದೆ ಬದುಕುವ ಒಂಟೆ ಚಳಿಗಾಲದಲ್ಲಿ ನೀರಿಲ್ಲದೆ ಇಪ್ಪತೈದು ದಿನ ಸವೆಸಬಲ್ಲದು.ಪೌಷ್ಟಿಕತೆ ಹೆಚ್ಚಿಸುವ ಅದರ ಹಾಲು,ಬೆರಣಿಯಾಗಿ ಇಂಧನವಾಗುವ ಅದರ ಸಗಣಿ,ಸತ್ತರೆ ಆಹಾರವಾಗಬಹುದಾದ ಅದರ ಮಾಂಸ,ಗುಡಾರ-ಉಡುಪು ಇನ್ನಿತರ ನಿತ್ಯೋಪಯೋಗಿ ವಸ್ತುಗಳಾಗುವ ಅದರ ಚರ್ಮ ಹೀಗೆ ಅವರ ಸಮಸ್ತ ಅಗತ್ಯಗಳನ್ನೂ ಪೂರೈಸುವ ಒಂಟೆಯೆಂದರೆ ಅವರಿಗೆ ಅಚ್ಚುಮೆಚ್ಚು.ಅದರಷ್ಟೆ ಅವರೂ ಕಷ್ಟ ಸಹಿಷ್ಣುಗಳಾಗಿದ್ದರು.ಹೋರಾಟ-ಮೋಜು-ಪ್ರೇಮ-ಕಲಹ ಇವಷ್ಟೆ ಅವರ ಬಾಳ್ವೆಯಾಗಿತ್ತು.ಇನ್ನಿತರ ಉಪ ಬುಡಕಟ್ಟುಗಳನ್ನ ಮಣಿಸಿ ಅವರನ್ನ ದೋಚುವುದು ;ಅಂತೆಯೆ ತನ್ನ ಮೇಲೆ ಎರಗುವ ಇತರ ಬುಡಕಟ್ಟುಗಳವರಿಂದ ತನ್ನನ್ನು ಕಾಪಾಡಿಕೊಳ್ಳಲು ಹೆಣಗುವುದು.ತನಗೆ ಅದೆಂದೊ ಒದಗಿದ್ದ ಅವಮಾನಕ್ಕೆ ಪ್ರತಿಕಾರವಾಗಿ ಸೇಡು ತೀರಿಸಿಕೊಳ್ಳುವುದು ಇವೆ ಅವರ ಜೀವನದ ರೀತಿಯಾಗಿತ್ತು.'ಪವಿತ್ರ ದಿನ'ಗಳೆಂದು ಪರಿಗಣಿಸುವ ದಿನಗಳಲ್ಲಿ ಅವರು ವಿಶ್ರಾಮದಲ್ಲಿರುತ್ತಿದ್ದು ಹೋರಾಟದಿಂದ ವಿಮುಖರಾಗುತ್ತಿದ್ದರು.ತಮ್ಮ ಪ್ರದೇಶದೊಳಗೆ ಅಕ್ರಮವಾಗಿ ನುಸುಳಿವ ಇತರ ಜನಾಂಗದವರನ್ನ ಬೆದರಿಸಿ-ಲೂಟಿ ಹೊಡೆದುಕಳಿಸಲಾಗುತ್ತಿತ್ತು! ಇವರನ್ನು 'ಕರುಣಾಳು,ಕೊಲೆಗಡುಕ,ಉದಾರಿ,ದುರಾಸಾಪೂರಿತ,ನಂಬಲರ್ಹ,ನಂಬಿಕೆ ದ್ರೋಹಿ ಹಾಗೂ ಎದೆಗಾರಿಕೆಯುಳ್ಳವರು!' ಎಂದು ವಿಚಿತ್ರವಾಗಿ ವಿಲ್ ಡ್ಯೂರಾಂಟ್ ವರ್ಣಿಸಿದ್ದಾನೆ.

ರಾಜಕೀಯ ಸಂಗತಿಗಳಲ್ಲಿ ಹೊಂದಿದ್ದಷ್ಟೆ ಅನೈಕ್ಯತೆಯನ್ನ ಅರಬ್ಬರು ದೇವಾರಾಧನೆಗಳ ವಿಷಯದಲ್ಲೂ ಹೊಂದಿದ್ದರು.ಯಾವ ಸುಧಾರಣೆಗೂ ಸೊಪ್ಪು ಹಾಕದೆ,ಯಹೂದಿ ಹಾಗೂ ಕ್ರೈಸ್ತ ಏಕದೇವತಾರಾಧನೆಯನ್ನ ಒಪ್ಪದೆ ಬಹುದೇವರನ್ನ ನಂಬುತ್ತಾ ವಿಗ್ರಹಾರಾಧನೆಯಲ್ಲಿ ನಂಬಿಕೆಹೊಂದಿದ್ದರು.ಯಾವುದೆ ಬಾಹ್ಯ ಪ್ರಭಾವಗಳು ಈ ನಂಬಿಕೆಯನ್ನ ಸಡಿಲಗೊಳಿಸಿರಲಿಲ್ಲ.ದೇವರೊಂದಿಗೆ ಅವರು ದೆವ್ವಗಳನ್ನೂ ನಂಬುತ್ತಿದ್ದು ಆಗಾಗ ಬಲಿ ನೀಡುವ ಮೂಲಕ,ಕವಿತ್ವ ಪ್ರದರ್ಶನದ ಮೂಲಕ ಹಾಡಿ ನಲಿದು ದೇವರನ್ನ ಒಲಿಸಿಕೊಳ್ಳುವುದು ಅವರಿಗೆ ಅಭ್ಯಾಸವಾಗಿತ್ತು.

ಅರಬ್ಬರ ಆರಾಧನಾ ಸ್ಥಳಗಳಲ್ಲಿ ಪುರಾತನ ಕಾಲದಿಂದಲೂ ಅಸ್ತಿತ್ವದಲ್ಲಿದ್ದ ಮೆಕ್ಕಾದ ವಿಗ್ರಹಾರಾಧನೆಯ ಗುಡಿಯೂ ಒಂದಾಗಿತ್ತು.ಆಯಕಟ್ಟಿನ ಸ್ಥಳದಲ್ಲಿದ್ದರಿಂದ ಮೆಕ್ಕಾ ಕ್ರಿಸ್ತಪೂರ್ವದಿಂದಲೂ ಪ್ರಸಿದ್ಧಿ ಪಡೆದಿತ್ತು ಅನ್ನುವುದು ಇತಿಹಾಸಕಾರರ ನಂಬಿಕೆ.ಮೆಕ್ಕಾ ಒಂದು ಬರಡು ಕಣಿವೆಯಲ್ಲಿದ್ದು ಅದರ ಸುತ್ತಲೂ ಕೆಂಪುಕಲ್ಲಿನ ಪರ್ವತಗಳಿಂದ ಅದು ಸುತ್ತುವರೆದಿದೆ.ಕೆಂಪುಸಮುದ್ರ ಇಲ್ಲಿಗೆ ಕೇವಲ ಐವತ್ತು ಮೈಲಿ ದೂರದಲ್ಲಿದೆ.ಅರೇಬಿಯಾದಿಂದ ಹೊರಸಾಗುವ ಕ್ಯಾರವಾನ್'ಗಳು ಹಾಗೂ ಅರೇಬಿಯಾದ ಒಳ ಪ್ರವೇಶಿಸುವ ಕ್ಯಾರವಾನ್'ಗಳು ಇಲ್ಲಿ ಲಂಗರು ಹಾಕುತ್ತಿದ್ದವು.ಇಂತಹ ಸಾವಿರಾರು ಕ್ಯಾರವಾನ್'ಗಳು ವಿಶ್ರಮಿಸುವ ಸರ್ವಋತು ತಂಗುದಾಣಕ್ಕೆ ಒಂದು ಪೂಜಾಸ್ಥಳದ ಅಗತ್ಯ ಕಂಡುಬರೋದರಲ್ಲಿ ಅಚ್ಚರಿಯೇನಿಲ್ಲ.

ಸದಾ ವಣಿಕರಿಂದ ತುಂಬಿ ತುಳುಕುತ್ತಿದ್ದ ಈ ಸ್ಥಳದಲ್ಲಿ ತಮ್ಮ ಧಾರ್ಮಿಕ ಆಚರಣೆಗಳ ಅನುಸಾರ ಅರಬ್ಬರು ಒಂದು ಗುಡಿ ಕಟ್ಟಿಕೊಂಡಿದ್ದು ಅದನ್ನ 'ಕಾಬಾ' ಎಂದು ಕರೆದುಕೊಂಡಿದ್ದರು.ಇದೊಂದು ಚಚ್ಚೌಕದ ಕಟ್ಟಡವಾಗಿದ್ದು ಒಟ್ಟು ಹತ್ತು ಬಾರಿ ಇದನ್ನ ನಿರ್ಮಿಸಲಾಗಿದೆ ಅನ್ನುವುದು ಮುಸ್ಲೀಮರ ನಂಬಿಕೆ.ಮೊದಲನೆ ಕಟ್ಟಡ ಅನಾದಿಕಾಲದಲ್ಲಿ ದೇವದೂತರ ನಿರ್ಮಿತಿಯಾಗಿದ್ದಾರೆ ಎರಡನೆಯದನ್ನ ಬೈಬಲ್'ನಲ್ಲಿ ಬರುವ ಪ್ರವಾದಿ ಆದಂ ಕಟ್ಟಿದ ಎನ್ನಲಾಗುತ್ತದೆ.ಮೂರನೆಯದನ್ನು ಅವನ ಮಗ ಸೇಥ್,ನಾಲ್ಕನೆಯದನ್ನು ಮೊಮ್ಮಗ ಅಬ್ರಾಹಂ ಹಾಗೂ ಐದನೆಯದನ್ನು ಮರಿಮಗ ಹಗರ್ ಕಟ್ಟಿದ್ದನಂತೆ.ಆರು ಮತ್ತು ಏಳನೆಯದನ್ನು ಇಸ್ಲಾಂ ಪೂರ್ವದ ಖುರೈಷಿ ಬುಡಕಟ್ಟಿನವರು ಕಟ್ಟಿದ್ದಾರೆ ಎಂಟನೆಯದ್ದನ್ನು ಮಹಮದ್ ಕಾಲದಲ್ಲಿ ಮತ್ತವರೆ ಕಟ್ಟಿದ್ದರು.ಕ್ರಿಸ್ತಶಕ 681 ಮತ್ತು 696ರಲ್ಲಿ ಮುಸ್ಲೀಂ ಶ್ರದ್ಧಾಳುಗಳು ಒಂಬತ್ತನೆ ಹಾಗು ಹತ್ತನೆ ಕಟ್ಟಡವನ್ನು ನಿರ್ಮಿಸಿದರು ಎನ್ನಲಾಗುತ್ತದೆ.ಈಗ ಅಲ್ಲಿರುವ ಕಟ್ಟಡ ಅನಂತರದ ದಿನಗಳಲ್ಲಿ ವಿವಿಧ ಖಲೀಫರಿಂದ ನಿರ್ಮಾಣಗೊಂಡಿತು.40 ಅಡಿ ಉದ್ದ ಹಾಗೂ 50 ಅಡಿ ಎತ್ತರ ಹಾಗೂ 35 ಅಡಿ ಅಗಲದ ಚಚ್ಚೌಕದಾಕೃತಿಯ ಕಾಬಾ ತನ್ನ ದಕ್ಷಿಣ ಭಾಗದಲ್ಲಿ ನೆಲದಿಂದ ಐದು ಅಡಿ ಎತ್ತರದಲ್ಲಿ 'ಪವಿತ್ರ ಕರಿಶಿಲೆ'ಯನ್ನ ಹೊಂದಿದೆ.ಮುಸ್ಲೀಮರಿಗೆ ಈ ಕರಿಶಿಲೆ ಪರಮ ಪವಿತ್ರ.ಅದನ್ನು ಸ್ವರ್ಗದಿಂದಲೆ ಪಡೆಯಲಾಗಿದೆ ಎಂದು ನಂಬುವ ಮುಸ್ಲಿಂ ಯಾತ್ರಿಕರು ಶ್ರದ್ಧಾ ಭಕ್ತಿಯಿಂದ ಅದಕ್ಕೆ ಮುತ್ತಿಟ್ಟು ಧನ್ಯರಾಗುತ್ತಾರೆ.

'ಕಾಬಾ' ಕಟ್ಟಡ ದೊಳಗೆ ಇಸ್ಲಾಮಿನ ಉಗಮಕ್ಕೂ ಪೂರ್ವದಲ್ಲಿಯೇ ಒಟ್ಟು 361 ವಿಗ್ರಹಗಳನ್ನು ಆರಾಧಿಸುವ ಪದ್ದತಿಯಿತ್ತು.ಈ ಅನೇಕ ವಿಗ್ರಹಗಳ ಪೈಕಿ 'ಅಲ್ಲಾಹ'ನೂ ಒಬ್ಬನಾಗಿದ್ದ.ಅವನನ್ನು ಕೇವಲ ಮೆಕ್ಕಾ ಮೂಲ ನಿವಾಸಿಗಳು ಆರಾಧಿಸುತ್ತಿದ್ದರು ಅನ್ನುವ ವಿಶ್ಲೇಷಣೆ ವಿಲ್ ಡ್ಯೂರಂಟನದು.

(ಇನ್ನೂ ಇದೆ....)

No comments: