ಕ್ರಮೇಣ ಖುರಾನಿನ ಸುರಾಗಳು ಉದ್ದವಾಗುತ್ತಾ ಹೋದವು.ಅವುಗಳಲ್ಲಿ ಹೊರಹೊಮ್ಮಿದ ಉಪದೇಶಾಮೃತಗಳಲ್ಲಿ ಪರಸ್ಪರ ವಿರೋಧಾಭಾಸಗಳೂ ಗೋಚರಿಸಲಾರಂಭಿಸಿದವು.ದೈವಪ್ರೇರಣೆಯಿಂದ ಹೊರಹೊಮ್ಮಿದ ಉಪದೇಶದ ಸಾಲುಗಳೆ ಮುಂದೆ ಖಾಯಂ ದೈವವಾಣಿಗಳಾಗಿ ಅಂತಿಮವಾದುದನ್ನೂ ಗುರುತಿಸಬಹುದಾಗಿದೆ ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ.ಅಷ್ಟೆ ಅಲ್ಲದೆ ಅರೇಬಿಯಾದಲ್ಲಿ ಆಕಾಲದಲ್ಲಿ ಪ್ರಚಲಿತವಿದ್ದ ಕೆಲವು ಕವಿತೆಗಳನ್ನು ಹಾಗ್ಹಾಗೆ ಖುರಾನಿನಲ್ಲೂ ಬಳಸಿರುವುದನ್ನು ಈತ ಗುರುತಿಸಿದ್ದಾನೆ! ಇಲ್ಲಿಯವರೆಗೂ ಮಹಮದ್ ದೈವಪ್ರೇರಣೆಯ ಪ್ರಕಾರ ಹೇಳಿದ ಸುರಾಗಳು ಕೇವಲ ದೇವರ ಏಕಸಾಮ್ಯತೆ,ಮಹಮದ್ ಆತನ ಪ್ರವಾದಿ,ಮರಣ ಹೊಂದಿದವರ ಪುನರುತ್ಥಾನ,ಒಳ್ಳೆಯ ಮತ್ತು ಕೆಟ್ಟದರ ಪ್ರತಿಫಲಗಳು ಮುಂತಾದಕ್ಕೆ ಸೀಮಿತವಾಗಿದ್ದವು.ಈಗ ಅದರ ಮುಂದುವರಿಕೆಯಾಗಿ ಪ್ರಾರ್ಥನೆಗೈಯುವುದು,ದಾನ ಮಾಡುವುದು,ತೂಕ ಮತ್ತು ಅಳತೆಗಳಲ್ಲಿ ಪ್ರಾಮಾಣಿಕತೆ,ಸತ್ಯನುಡಿ,ನಡತೆಯ ಪರಿಶುದ್ಧತೆ,ಒಡಂಬಡಿಕೆಗಳ ಪ್ರಾಮಾಣಿಕ ಪರಿಪಾಲನೆ ಮುಂತಾದವುಗಳ ಕುರಿತಾಗಿಯೂ ಸುರಾಗಳು ಹೊರಬಂದವು.ವಿಗ್ರಹಾರಾಧನೆಯನ್ನು ಖಂಡತುಂಡವಾಗಿ ವಿರೋಧಿಸಿ ಮಹಮದ್ ನೀಡಿದ 109/1ರಿಂದ 6ರವರೆಗಿನ ಸುರಾವೂ ಅದೆಕಾಲದಲ್ಲಿ ಹೊರಬಂದದ್ದು ಕೂಡ ಗಮನಾರ್ಹವಾಗಿತ್ತು ಎನ್ನುತ್ತಾನೆ ಇತಿಹಾಸಕಾರ ಕ್ಲೈರ್.ಸ್ವರ್ಗ ಹಾಗೂ ನರಕಗಳ ಕುರಿತು ವಿವರಣೆ ನೀಡುವ ಸುರಾವೂ ಇದೇ ಸಮಯದಲ್ಲಿ ಹೊರಬಂದಿತ್ತು.ಸ್ವರ್ಗ-ನರಕಗಳ ಚಿತ್ರಣ,ಅಲ್ಲಿ ಸಿದ್ಧವಾಗುವ ಸುಖ ಹಾಗೂ ಕಷ್ಟಕಾರ್ಪಣ್ಯಗಳು,ಸ್ವರ್ಗದ ಕಣ್ಮನ ತಣಿಸುವ ತೋಟ-ತೋಪುಗಳು,ನೆಲತೊಳೆಯುತ್ತಾ ವರ್ಷಪೂರ್ತಿ ಹರಿಯುತ್ತಲೆ ಇರುವ ಬತ್ತದ ತೊರೆಗಳು,ಅಲ್ಲಿನ ವನ ಸಮೃದ್ಧಿ,ತೊರೆಗಳ ದಡಗಳಲ್ಲಿ ಅರಳಿ ನಲಿಯುವ ಹೂಗಿಡಗಳು,ಮರಗಳ ನೆರಳಿನಲ್ಲಿ ಎಲ್ಲೆಂದರಲ್ಲಿ ಇರಿಸಿರುವ ಹೂವಿನ ಮೆತ್ತೆ ಹಾಸಿರುವ ಸುಖತೂಲಿಕಾತಲ್ಪಗಳು,ಚಿಮ್ಮುವ ಕಾರಂಜಿಗಳಿಂದ ಉಕ್ಕುವ ಕುಡಿಯುವ ಸಿಹಿನೀರು,ಅಲ್ಲಲ್ಲಿ ಇರಿಸಿರುವ ದ್ರಾಕ್ಷಾರಸಗಳ ಬೆಳ್ಳಿಬಟ್ಟಲುಗಳು,ಎಲ್ಲೆಲ್ಲೂ ಕೈಗೆಟಕುವಂತೆ ನೇತಾಡುತ್ತಿರುವ ಸಿಹಿಫಲಗಳ ಗೊಂಚಲುಗಳು,ಜೊತೆಗೆ ಅಲ್ಲಿಗೆ ಅಡಿಯಿಡುವವರ ಸಕಲಸೇವೆಗೂ ಸದಾಸಿದ್ದವಾಗಿರುವ ಹ್ಯೂರಿ ಎಂಬ ಪಾರದರ್ಶಕ ಸುಂದರಿಯರು,ಎಲ್ಲಕ್ಕಿಂತಲೂ ಹೆಚ್ಚಾಗಿ ಬಯಸಿದಾಗ ಬರಿಸಬಹುದಾದ ಮಳೆ! ಹೀಗೆ ಮರುಭೂಮಿಯ ಒಣಭೂಮಿಯ ನಂಟನ್ನಷ್ಟೇ ಹೊಂದಿದ್ದ ಅರಬರಿಗೆ ಹೊಸತೆನಿಸುವ ಈ ಎಲ್ಲಾ ವಿವರಣೆಗಳನ್ನ ಕೊಡುವುದರ ಮೂಲಕ ಅವರಿಗೆ ಮೋಡಿ ಹಾಕುವತ್ತ ಮಹಮದ್ ಕಾರ್ಯಶೀಲನಾಗಿದ್ದ,ಸುರಾ 9/64 ಸಾಹಿ ಅಲ್ ಬುಖಾರಿ -4/3243 ಈ ಸುರಾವನ್ನ ಅವಲೋಕಿಸಿದಾಗ ಆತನ ವಿವರಣೆ ಹೆಚ್ಚು ಸ್ಪಷ್ಟವಾಗುತ್ತದೆ.ಸ್ವರ್ಗವನ್ನು ಹೀಗೆ ರಂಗುರಂಗಾಗಿ ವರ್ಣಿಸಿ ಆಕರ್ಷಣೆ ಹುಟ್ಟಿಸಿದ ಮಹಮದ್ ನರಕವನ್ನು ಬಲು ಭೀಕರವಾಗಿ ವಿವರಿಸಿದ.ಹೆಜ್ಜೆಹೆಜ್ಜೆಗೂ ಸುಡುವ ಬಿಸಿನೀರಿನ ಬುಗ್ಗೆಗಳು,ಸಿಡಿಯುವ ಬೆಂಕಿ ಹೊಗೆಗಳು ನಿರಂತರ ಹೊರಹೊಮ್ಮುವ ಅಸಹ್ಯದ ಉಸಿರುಗಟ್ಟಿಸುವ ಜಾಗಗಳು.ಸುಡುಬಿಸಿಲಿಂದ ರಕ್ಷಣೆಗೆ ನೆರಳೆ ಇಲ್ಲದ ಸುಡುನೆಲ ಇವೆಲ್ಲವನ್ನೂ ಒಳಗೊಂಡಿತ್ತು ಈತನ ನರಕದ ವಿವರಣೆ.ಇವೆಲ್ಲವನ್ನೂ ಹೆಚ್ಚು ಕಡಿಮೆ ಇಹದಲ್ಲೆ ಅಗತ್ಯಕ್ಕಿಂತ ಹೆಚ್ಚು ಕಂಡುಂಡ ಅನುಭವಿಗಳಾಗಿದ್ದ ಅರಬರಿಗೆ ಸ್ವರ್ಗದ ಸುಖಮಯ ವಿವರಣೆ ಕೇಳುವಾಗಲೆ ಸುಖಾನುಭವ ತಂದದ್ದು ಮಾತ್ರ ಸುಳ್ಳಲ್ಲ.ನರಕದ ಭೀಕರತೆಯ ವಿವರಣೆ ನೀಡುವ ಸುರಾಗಳನ್ನು 32/20/21, 40/24/71/72, 41/24/25, 44/42-49, 78/23-29 ಹಾಗೂ 37/23/2ಗಳಲ್ಲಿ ಗಮನಿಸಬಹುದು.
ಸ್ವರ್ಗ ಮತ್ತು ನರಕಗಳ ವಿವರಣೆಗಳೊಂದಿಗೆ ಮಹಮದ್ ನಿರ್ಣಾಯಕ ದಿನದಂದು ಕಾದಿರುವ ಭಯಂಕರ ತೀರ್ಪಿನ ಬಗ್ಗೆಯೂ ಅರಬರಿಗೆ ದಿಗಿಲು ಹುಟ್ಟಿಸುವ ಸಂದೇಶಗಳನ್ನು ಸಾರಿದ.ಅವನ ಈ ಸಂದೇಶವನ್ನು ಆಲಿಸಿದ ಮೆಕ್ಕಾದ ಮಂದಿ ಸಂದೇಹಗೊಂಡು ಆ ಅಂತಿಮ ದಿನದ ಗಡುವು ಎಂದು ಸಮೀಪಿಸುವುದು ಯಾವಾಗ? ಎಂದು ಪ್ರಶ್ನಿಸಿದಾಗ 'ಅದು ತನಗೆ ಗೊತ್ತಿಲ್ಲ ದೇವರಿಗೆ ಮಾತ್ರ ಗೊತ್ತು!' ಎಂದು ಸುರಾ 27/65 ರ ಮೂಲಕ ಉತ್ತರಿಸಿದ.ಹೀಗೆ ಖುರಾನಿನಲ್ಲಿ ಕಂಡು ಬರುವ ಅನೇಕ ಸಾಲುಗಳ ಬಗ್ಗೆ ಮೆಕ್ಕಾದ ಮಂದಿಯ ಮನದಲ್ಲಿ ಎದ್ದ ಅಪನಂಬಿಕೆ,ಅಸಹನೆಗಳ ಬಗ್ಗೆ ಹಾಗೂ ಸತ್ತು ಮಣ್ಣಾದವರು ಪುನರುತ್ಥಾನದ ದಿನದಂದು ಮತ್ತೆ ಎದ್ದು ಬರುತ್ತಾರೆ ಎಂಬೆಲ್ಲ ಹೇಳಿಕೆಗಳ ವಿರುದ್ಧ ಎದ್ದ ಅವರ ಅಸಹನೆಗಳನ್ನು ತನ್ನದೆ ಆದ ವಾದ,ತರ್ಕ-ವಿಮರ್ಶೆಗಳ ಮೂಲಕ ತೊಡೆದು ಹಾಕಲು ಮಹಮದ್ ಯತ್ನಿಸಿದ.ಸುರಾ 67/24-27 29/1 69ಗಳ ಮೂಲಕ ಕ್ರಮೇಣ ಈ ಬಗ್ಗೆ ಉದ್ರೇಕಕಾರಿಯಾಗಿ ಪ್ರಚೋದನೆ ನೀಡುತ್ತ ತನ್ನನ್ನು ಪ್ರವಾದಿಯೆಂದು ನಂಬಿದ ಮತಬಾಂಧವರನ್ನು ಬಡಿದೆಬ್ಬಿ ಅವರು ಕಾರ್ಯಪ್ರವರ್ತರಾಗುವಂತೆ ಮಾಡಲು ಆತ ಆರಂಭಿಸಿದ.ಇತಿಹಾಸಕಾರ ಸಿಮೊನ್ ವೆಲ್ ಹೀಗೆ ಇನ್ನೊಬ್ಬರನ್ನು ಪ್ರಚೋದನೆಗೆ ಒಳಪಡಿಸಿ ಬಡಿದೆಬ್ಬಿಸುವುದು ಒಂದು ಕಲೆ ಎನ್ನುತ್ತಾನೆ.ಮೆಕ್ಕಾದ ಖುರೈಷಿಗಳ ಕೊನೆಗಾಣದ ಮೊದಲಿಕೆ,ಅಪಹಾಸ್ಯ ಹಾಗು ಕುಚೋದ್ಯದ ನುಡಿಗಳಿಗೂ ಮಹಮದ್ ತನ್ನ ಸುರಾಗಳ ಮೂಲಕವೆ ಇದಿರೇಟು ನೀಡಲಾರಂಭಿಸಿದ.ಸುರಾ 5/57 62,29/1,69ಗಳಲ್ಲಿ ಇವನ್ನು ಧಾರಾಳವಾಗಿ ಗಮನಿಸಬಹುದು.
ವಿರೋಧಿಗಳ ಈ ಎಲ್ಲಾ ಬಿರುನುಡಿಗಳಿಗೆ ಸಹನೆ ಶಾಂತಿಯಿಂದಿರುವಂತೆ ಮಹಮದ್ ಭೋದಿಸಿದ.ನೆಜ್ರಾನ್ ಎಂಬಲ್ಲಿ ಯಹೂದಿಗಳು ಕ್ರೈಸ್ತರನ್ನು ಹಿಂದೆ ಬೆಂಕಿಯ ಹೊಂಡದಲ್ಲಿ ಹಾಕಿ ಜೀವಂತ ಸುಟ್ಟ ಸಂಗತಿಯನ್ನ ಉದಾಹರಿಸುತ್ತಾ ತನ್ನ ಹಿತವಚನಗಳನ್ನು ಅವರು ಒಪ್ಪುವಂತೆ ಸುರಾ 85/1-22 ರಲ್ಲಿ ಸಾರಿದ.'ಇಸ್ಲಾಂ' ಎಂದರೆ ದೇವರಿಗೆ ತನ್ನನ್ನು ತಾನೇ ಸಂಪೂರ್ಣ ಅರ್ಪಿಸಿಕೊಳ್ಳುವುದು ಹಾಗೆ ಮಾಡುವವನೆ ಮತಶ್ರದ್ಧೆಯುಳ್ಳವನು ಅಥವಾ 'ಮುಸ್ಲೀಂ' ಎಂದ.ಯಾರು ತಾನು ಸಾರುವ ಏಕದೈವವಾಣಿಯನ್ನು ಆಲೈಸಿಯೂ ಬಹುದೇವರನ್ನೂ ಗುಟ್ಟಾಗಿ ಆರಾಧಿಸುವರೊ ಅವರೆ 'ಮುಶಿಕೀನ್'ಗಳೆನ್ನಿಸಿಕೊಳ್ಳುವರು.ತನ್ನ ದೈವವಾಣಿಯನ್ನು ಸಾರಾಸಗಟಾಗಿ ತಿರಸ್ಕರಿಸುವ ಎಲ್ಲರೂ 'ಕಾಫಿರಿನ್'ಗಳೆಂದು ಕರೆಸಿಕೊಳ್ಳುತ್ತಾರೆ.ಈ ಕಾಫಿರಿನ್ ಹಾಗೂ ಮುಶಿಕೀನ್'ಗಳು ಯಾವ ಹಂತದಲ್ಲೂ ತನಗೆ ವಿರೋಧಿಗಳೆ ಎಂದಾತ ಸಾರಿದ.ಈ ಬಗ್ಗೆ ಪ್ರಸಿದ್ಧ ಇತಿಹಾಸಕಾರರಾದ ಅಲ್ ವಾಕಿಡಿ ಹಾಗೂ ಅಲ್ ತಬರಿ ಜೋಡಿ ಹೀಗೊಂದು ಕಥಾರೂಪದ ವಿವರಣೆ ನೀಡುತ್ತಾರೆ.ಅದರಂತೆ ಕ್ರಿಸ್ತಶಕ 615ರ ಸುಮಾರಿಗೆ ತನ್ನ ಬುಡಕಟ್ಟಿನವರ ಆತ್ಮೋದ್ಧಾರ ಮಾಡುವ ಸಲುವಾಗಿ ತಾನು ಆರಂಭಿಸಿದ ನೂತನ ಧರ್ಮದಲ್ಲಿ ಖುರೈಷಿಗಳ ಪ್ರಬಲ ವಿರೋಧದ ಕಾರಣ ಅಂದುಕೊಂಡ ಸಫಲತೆ ಕಂಡುಬಾರದೆ ಇದ್ದುದು,ತನ್ನೆಲ್ಲಾ ಪರಿಶ್ರಮದ ಹೊರತಾಗಿಯೂ ತಾನು ಕೇವಲ ನಲವತ್ತರಿಂದ ಐವತ್ತು ಮಂದಿಯ ಮನವೊಲಿಸಲು ಮಾತ್ರ ಶಕ್ತನಾಗಿದ್ದು,ಅದೆ ಪ್ರಯತ್ನದಲ್ಲಿ ಇಡಿ ಖುರೈಷಿಕುಲವನ್ನೆ ಎದುರು ಹಾಕಿಕೊಂಡದ್ದು ಇವೆಲ್ಲ ಮಹಮದನ ಮನಸ್ಸನ್ನು ತೀವೃವಾಗಿ ಘಾಸಿಗೊಳಿಸಿತು.ಇದೆ ಕಾರಣಕ್ಕೆ ಆತನ ಆತ್ಮ ನಲುಗಿ,ಭಾವನೆಗಳಿಗೆ ಬಲವಾದ ಪೆಟ್ಟುಬಿದ್ದಿತ್ತು.ಹಿಂದೊಮ್ಮೆ ಪ್ರೀತಿಪಾತ್ರರಾಗಿದ್ದ ಖುರೈಷಿ ಮುಖಂಡರ ವೈರತ್ವ ಅವನ ಹೃದಯ ಹಿಂಡಿತ್ತು.ದುಃಖಪೀಡಿತನಾದ ಮಹಮದ್ ಹೀಗಾಗಿ ಅವರೊಂದಿಗೆ ಸಂಧಾನಕ್ಕಾಗಿ ಹಾತೊರೆದ.
ಒಂದು ಮುಂಜಾನೆ ಕಾಬಾದ ಬಳಿ ಖುರೈಷಿ ಪ್ರಮುಖರು ಕೂತು ಅದೇನನ್ನೂ ಚರ್ಚಿಸುತ್ತಿರುವಾಗ ಮಹಮದ್ ಕೂಡ ಅಲ್ಲಿಗೆ ಬಂದು ಅವರ ಸನಿಹದಲ್ಲೆ ಕುಳಿತುಕೊಂಡ.ಅವನು ಅಲ್ಲಿಯೆ ಆಗಷ್ಟೆ ತನಗೆ ಪ್ರೇರಣೆಯಾದ ಹೊಸ ಸುರಾದ ಸಾಲುಗಳನ್ನ ಪಠಿಸತೊಡಗಿದ.ಈ ರೀತಿ ಅವನ ಮಣಮಣ ಸಾಗಿದ್ದಾಗ ಒಂದು ದೆವ್ವ ಅವನ ಹೃದಯವನ್ನು ಹೊಕ್ಕಿತು ಎನ್ನುತ್ತಾರೆ ಅವರಿಬ್ಬರೂ.ಆ ದೆವ್ವ ಅದಾಗಲೆ ಅವನ ಮನದಲ್ಲಿ ಮನೆ ಮಾಡಿದ್ದ ಹೊಂದಾಣಿಕೆಯ ಸೂತ್ರಗಳೂ ಸುರಾದ ಮೂಲಕವೆ ಹೊರ ಬರುವಂತೆ ಮಾಡಿತು.ಅಲ್-ಲಾಟ್ ಸುರಾ 53/52ರ ಪ್ರಕಾರ ಹೆಣ್ಣುದೇವತೆಯರನ್ನೂ ಏಕದೈವದೊಂದಿಗೆ ಆರಾಧಿಸುವಂತೆ ಹೇಳಿ ಬಹುದೇವತಾರಾಧನೆಗಳ ಬಗ್ಗೆ ಅನುಕಂಪದ ನುಡಿಯನ್ನೆ ಹೊರ ಹೊಮ್ಮಿಸಿತಂತೆ.ಉಜ್ವಲ ಸ್ತ್ರೀಯರ ಮಧ್ಯಸ್ಥಿಕೆಯ ಕುರಿತ ಒಂದು ಸಾಲೂ ಈ ಸುರಾದಲ್ಲಿ ಸೇರಿತ್ತು.ಮಹಮದನ ಈ ಹೊಸ ವಿಮರ್ಶಾವಿಧಿ ಆಲಿಸಿದ ಖುರೈಶಿಗಳಿಗೆ ನಿಜಕ್ಕೂ ಆಶ್ಚರ್ಯವಾಯಿತು.ಮಹಮದ್ ತಮ್ಮ ದೇವದೇವತೆಗಳ ಗುಣಗಳನ್ನು ಕೀರ್ತಿಸುವುದನ್ನು ಅವರಂತೂ ನಿರೀಕ್ಷಿಸಿರಲಿಲ್ಲ.ಅದನ್ನು ಕೇಳಿದ್ದೆ ಅಲ್ಲಿಯೆ ಅವರು ನೆಲಕ್ಕೆ ಬಾಗಿ ದೇವರಿಗೆ ಸ್ವಸ್ತಿ ಸಲ್ಲಿಸಿದರು.ಆಗ ಒಕ್ಕೊರಲಿನಿಂದ ಅವರೆಲ್ಲರೂ "ಜನ್ಮವನ್ನು ನೀಡಿ ಅದನ್ನು ಹಿಂತಿರುಗಿ ತೆಗೆದುಕೊಳ್ಳುವವನು ದೇವನೊಬ್ಬನೆ.ಅವನೆ ಸೃಷ್ಟಿಕರ್ತ-ಸಂರಕ್ಷಕ ಎಂಬುದೀಗ ನಮಗೆ ಅರಿವಾಗಿದೆ.ನಮ್ಮ ಸ್ತ್ರೀದೇವತೆಗಳ ಬಗ್ಗೆ ಹೇಳುವುದಾದರೆ ಅವರು ದೇವರಬಳಿ ನಮ್ಮ ಒಳಿತಿಗಾಗಿ ಬಿನ್ನಹ ಮಾಡುತ್ತಾರೆ.ನೀನು ಅವರನ್ನು ಒಪ್ಪಿಕೊಂಡಿರುವುದರಿಂದ ನಾವೂ ನಿನ್ನನ್ನು ಬೆಂಬಲಿಸಲು ಇಚ್ಚಿಸುತ್ತೇವೆ" ಎಂದರು .ಇದು ಸುರಾ 53/19-20 ರಲ್ಲಿ ನಿರೂಪಿತವಾಗಿದೆ.
ಆದರೆ ಅವರಿಂದ ಇನ್ನೇನನ್ನೋ ನಿರೀಕ್ಷಿಸಿದ್ದ ಮಹಮದನಿಗೆ ಅವರ ಈ ಮಾತುಗಳು ತೃಪ್ತಿಹುಟ್ಟಿಸಲಿಲ್ಲ ಹೀಗಾಗಿ ಖಿನ್ನನಾಗಿ ಆತ ಮನೆಗೆ ಮರಳಿದ.ಅಂದೆ ಸಂಜೆ ಯಕ್ಷ ಗೇಬ್ರಿಯಲ್'ನ ಪುನರ್'ದರ್ಶನ ಅವನಿಗೆ ದೊರೆಯಿತು.ಅವತ್ತು ದೊರಕಿದ ದೈವವಾಣಿಯನ್ನು ಮಹಮದ್ ಅವನಿಗೆ ಅರುಹಿದ,ಅದನ್ನು ಕೇಳಿದ್ದೆ ಆತಂಕಿತನಾದ ಯಕ್ಷ "ನಾನು ಹೇಳದೆ ಇರುವ ಹಾಡುಹರಟೆಗಳನ್ನೆಲ್ಲ ಜನರ ಮುಂದಿರಿಸಿದ್ದೆಯಲ್ಲ! ನಾನು ಹೇಳಿದ್ದೇನು? ನೀನು ಮಾಡಿದ್ದೇನು?" ಎಂದಾಗ ಮಹಮದ್ ಸಂಕಟದಿಂದ ನರಳಿದ.ದೇವರದಲ್ಲದ ಆ ಸಾಲುಗಳನ್ನ ತಾನು ಬಿತ್ತರಿಸಿರುವುದಕ್ಕೆ ಏನು ಕೇಡಾಗುವುದೊ ಎಂದಾತ ಹೆದರಿದ.ಆದರೆ ಗೇಬ್ರಿಯಲ್ ಆತನನ್ನು ಸಂತೈಸಿದ.ಅವನ ಭಯವನ್ನು ನಿವಾರಿಸುತ್ತಾ ಆ ಅಪ್ರಾಮಾಣಿಕ ಸುರಾಗಳನ್ನೆಲ್ಲ ಆತ ಕೂಡಲೆ ರದ್ದು ಪಡಿಸಿದ! ಮತ್ತು ಹೊಸತಾಗಿ ಸುರಾ 24/52, 35/14;39,17/26ಗಳ ಮೂಲಕ ಈಗಿರುವಂತೆ ಹೊಸ ಪದ್ಯಗಳನ್ನು ಸೃಷ್ಟಿಸಿದ.ಈ ಹೊಸ ಸಾಲುಗಳನ್ನು ಕೇಳಿದ್ದೆ ತಡ ಖುರೈಷಿಗಳ ದುಗುಡ ಮತ್ತಷ್ಟು ಹೆಚ್ಚಿತು.ನೆನ್ನೆಯಷ್ಟೆ ತಮ್ಮ ದೇವಾನುದೇವತೆಗಳ ಬಗ್ಗೆ ಸಹಾನುಭೂತಿಯ ಒಳ್ಳೆಯ ನುಡಿಗಳನ್ನಾಡಿದ್ದ ಮಹಮದ್ ಈಗ ಅದಕ್ಕೆ ಸಂಪೂರ್ಣ ವ್ಯತಿರಿಕ್ತವಾದ ಸಾಲುಗಳನ್ನೆ ಉದ್ಗರಿಸುತ್ತಿರುವುದು ಅವರನ್ನು ಇನ್ನಷ್ಟು ಕೆರಳಿಸಿತು.
ಇದೆ ಸಮಯದಲ್ಲಿ ಅಬಿಸೀನಿಯಕ್ಕೆ ವಲಸೆ ಹೋಗಿದ್ದವರು ಮೆಕ್ಕಾದ ಖುರೈಷಿಗಳು ಮಹಮದನ ನೂತನ ಧರ್ಮಕ್ಕೆ ಮತಾಂತರಿತವಾಗಿದ್ದಾರೆ ಎಂಬ ಗಾಳಿಸುದ್ದಿ ಕೇಳಿ ಹಿಂದಿರುಗಲಾರಂಭಿಸಿದ್ದರು.ಆದರೆ ಇಲ್ಲಿನ ವ್ಯತಿರಿಕ್ತ ಸ್ಥಿತಿ ಕಂಡು ಅವರಿಗೆ ಆಘಾತವಾಯಿತು.ಮಹಮದ್ ಖುರೈಶಿಗಳಿಗೆ ಪ್ರಕಟಿಸಿದ್ದ ರಿಯಾಯತಿಗಳನ್ನು ಹಿಂತೆಗೆದುಕೊಂಡಿದ್ದ.ಪುನಃಪುನಃ ವಿಗ್ರಹಾರಾಧನೆಗಳನ್ನು ಕಟುವಾಗಿ ಖಂಡಿಸಿ ಏಕದೇವತಾರಾಧನೆಗೆ ಕರೆಕೊಡಲಾರಂಭಿಸಿದ್ದ.ಖುರೈಷಿಗಳ ದೇವತೆಗಳನ್ನೆಲ್ಲ ಆತ ನಿರಾಕರಿಸಿದ್ದ.ತಮ್ಮ ಬಂಧು-ಮಿತ್ರರ ಸಹಕಾರಗಳಿಂದ ಈ ವಲಸೆಗಾರರು ಮರಳಿ ತಮ್ಮ ಹಳೆ ನಿವಾಸಗಳಲ್ಲಿ ನೆಲೆಸಲು ಪ್ರಯತ್ನಿಸಿದರೂ ಅದು ಹೆಚ್ಚುಕಾಲ ಸಾಗಲಿಲ್ಲ.ಮೊದಲಿಗಿಂತ ದುಪ್ಪಟ್ಟು ಹಿಂಸೆ,ಕಿರುಕುಳಗಳಿಂದ ಕೂಡಿದ ಖುರೈಷಿಗಳ ವೈರವನ್ನವರು ಇದೀಗ ಎದುರಿಸಬೇಕಾಯಿತು.ಈ ಪೀಡೆಯಿಂದ ಪಾರಾಗಲು ಮಹಮದ್ ಅವರನ್ನೆಲ್ಲ ಮರಳಿ ಅಬಿಸೀನಿಯಕ್ಕೆ ವಲಸೆ ಹೋಗುವಂತೆ ಪುಸಲಾಯಿಸಿ ಅದರಲ್ಲಿ ಯಶಸ್ವಿಯೂ ಆದ.ಈ ಬಾರಿ ನವ ಮತಾಂತರಿತ ಸುಮಾರು ನೂರು ಮಂದಿ ಹೀಗೆ ವಲಸೆಹೋದರು ಎನ್ನುತ್ತಾನೆ ಇತಿಹಾಸ ತಜ್ಞ ಕ್ಯಾರೆನ್ ಅರ್ಮೆಸ್ಟ್ರಾಂಗ್.
(ಇನ್ನೂ ಇದೆ....)
22 October 2011
Subscribe to:
Post Comments (Atom)
No comments:
Post a Comment