14 October 2011

ಮರಳುಗಾಡಿನ ಮರ್ಮರ...

ಭೂಮಂಡಲದಲ್ಲಿ ಅರೇಬಿಯಾ ಭೂಭಾಗ ಬೃಹತ್ ಮರಳುಗಾಡು ವ್ಯಾಪಿಸಿರುವ ಒಣ ಪ್ರದೇಶ.ಅದರ ಪೂರ್ವದಿಕ್ಕಿನಲ್ಲಿ ಪರ್ಷಿಯನ್ ಕೊಲ್ಲಿ,ಪಶ್ಚಿಮಕ್ಕೆ ಕೆಂಪುಸಮುದ್ರ ಹಾಗೂ ದಕ್ಷಿಣಕ್ಕೆ ಅರಬ್ಬಿಸಮುದ್ರ ಆವರಿಸಿದ್ದು ಅದೊಂದು ಪರ್ಯಾಯದ್ವೀಪವಾಗಿ ಅಸ್ತಿತ್ವದಲ್ಲಿದೆ.ಈ ಪರ್ಯಾಯದ್ವೀಪದ ಪಶ್ಚಿಮ ಭಾಗದಲ್ಲಿ ಕೆಂಪುಸಮುದ್ರಕ್ಕೆ ಅಂಟಿಕೊಂಡಂತೆ ಒರಟು ಕೆಂಪುಮರಳುಗಲ್ಲಿನ ಗಿರಿಶ್ರೇಣಿಗಳು ದಕ್ಷಿಣದಿಂದ ಉತ್ತರದ ಕಡೆಗೆ ಹರಡಿವೆ.ಇದರ ಒಂದು ಭಾಗ ಸಮುದ್ರ ತೀರದಡೆಗೆ ಚಾಚಿದ್ದಾರೆ ಇನ್ನೊಂದು ಭಾಗ ಸಮುದ್ರ ಮಟ್ಟಕ್ಕಿಂತ ಸ್ವಲ್ಪ ತಗ್ಗಿನವರೆಗೂ ಒಳನಾಡಿನತ್ತ ಮೈಲಿಗಳ ದೂರ ವ್ಯಾಪಿಸಿದೆ.ಈ ಗಿರಿಶಿಖರ ಹಾಗೂ ಕೆಂಪುಸಮುದ್ರದ ಮಧ್ಯದಲ್ಲಿರುವ ಪ್ರದೇಶದಲ್ಲಿರುವುದೆ ಇತಿಹಾಸ ಪ್ರಸಿದ್ಧ ಮೆಕ್ಕಾ ಹಾಗು ಮದೀನಾ ನಗರ ಗಳು.

ಅರೇಬಿಯಾ ಒಟ್ಟಾರೆ 1400ಮೈಲಿ ಉದ್ದವಿದ್ದು, 1250ಮೈಲಿ ಅಗಲವಾಗಿದೆ.ಆದರೆ ಈ ವಿಶಾಲಪ್ರದೇಶ ಒಂದೇಒಂದು ದೊಡ್ಡ ನದಿ ಅಥವಾ ಹೊಳೆಯನ್ನ ಹೊಂದಿಲ್ಲದಿರುವುದು ವಿಸ್ಮಯ ಹುಟ್ಟಿಸುತ್ತದೆ.ಅರೇಬಿಕ್ ಭಾಷೆಯಲ್ಲಿ 'ಅರಬ' ಎಂದರೆ ಬರಡು ಎಂದರ್ಥ.ಹೆಸರಿಗೆ ತಕ್ಕಂತೆ ಈ ಪ್ರೆದೇಶ ಒಂದು ಬರಡು ಭೂಮಿಯೆ ಆಗಿದ್ದು ಈ ಎರಡು ನಗರಗಳಿರುವ ಪ್ರದೇಶದಿಂದ ಪೂರ್ವಕ್ಕೆ ಭೂಮಿ ಇಳಿಜಾರಾಗಿದ್ದು ನಡುನಡುವೆ ಕೆಲವೊಮ್ಮೆ 12000ಅಡಿ ಎತ್ತರದ ಪರ್ವತಗಳು ಏರ್ಪಟ್ಟು ಮತ್ತೆ ಕೊಲ್ಲಿಯವರೆಗೂ ಇಳಿಜಾರಾಗಿ ಒಂದು ಬಗೆಯ ವಿಲಕ್ಷಣತೆ ಹೊಂದಿರುವುದು ಒಂದು ವಿಶೇಷ.ಆದರೆ ಇಲ್ಲಿನ ನೈಋತ್ಯ ಭಾಗ ಸಣ್ಣಪುಟ್ಟ ನೀರಿನ ಒರತೆ-ಹಳ್ಳಗಳನ್ನು ಹೊಂದಿದ್ದು ಅಲ್ಲಿನ ಮಣ್ಣಿನ ಫಲವತ್ತತೆಯನ್ನ ಹೆಚ್ಚಿಸುವುದರಲ್ಲಿ ಸಹಕಾರಿಯಾಗಿದೆ.ಉಳಿದಂತೆ ಇನ್ನು ಯಾವ ಭಾಗವೂ ಆ ಭಾಗ್ಯ ಹೊಂದಿರದೆ ಬೆಂಗಾಡಾಗಿ ಕೇವಲ ಅಲ್ಲಲ್ಲಿ ಕಾಣುವ ಓಯಸಿಸ್'ಗಳಿಂದಷ್ಟೆ ನೀರುಂಡು ಕರ್ಜೂರ-ಬಾರ್ಲಿ-ಅಕೇಶಿಯ ಮುಂತಾದ ಸಸ್ಯಗಳನ್ನಷ್ಟೆ ಬೆಳೆದುಕೊಳ್ಳಲು ಶಕ್ತವಾಗಿವೆ.ಈ ಜಲವಸತಿಗಳ ಸುತ್ತ ಜನವಸತಿ ಹಬ್ಬಿದೆ.ಅನಾದಿಕಾಲದಿಂದಲೂ ಇಂತಹ ಓಯಸಿಸ್'ಗಳ ಸುತ್ತ ಏರ್ಪಟ್ಟ ಜನವಸತಿಗಳ ಬುಡಕಟ್ಟಿನ ಮಂದಿಗೆ ಇಲ್ಲಿನ ಉರಿ ಉಷ್ಣಾಂಶವೆ ಮೊದಲ ಶತ್ರು.ಹಗಲಲ್ಲಿ ತಾರಕಕ್ಕೇರುವ ಉಷ್ಣಾಂಶ ಜನರ ರಕ್ತ ಕುದಿಸಿ ಮುಖವನ್ನ ಸುಡಿಸುವಂತಿರುವುದರಿಂದ ಇಲ್ಲಿನ ನಿವಾಸಿಗಳು ಮರಳು ಮಿಶ್ರಿತ ಸುಡುಗಾಳಿಯಿಂದ ತಮ್ಮನ್ನು ಕಾಪಾಡಿಕೊಳ್ಳಲು ಮೈತುಂಬ ನಿಲುವಂಗಿ ಹಾಗೂ ತಲೆಗೆಸುತ್ತಿಕೊಳ್ಳುವ ಬಟ್ಟೆ ಧರಿಸುವುದು ವಾಡಿಕೆ.ಮಳೆ ಎನ್ನುವುದು ಕೇವಲ ನೆನಪಿನ ಮಿತ್ರನಾಗಿದ್ದು,ಉರಿಕೆಂಡದಂತಹ ಸೂರ್ಯನ ಸ್ನೇಹವಿರುವುದರಿಂದ ಆಕಾಶ ವರ್ಷಪೂರ್ತಿ ತಿಳಿಯಾಗಿದ್ದು ಬೀಸುವ ಗಾಳಿ 'ಹೊಳೆಯುವ ದ್ರಾಕ್ಷಾರಸ' (Sparkling Wine) ದಂತೆ ಅನುಭವವಾಗುತ್ತದೆ ಎಂದಿದ್ದಾನೆ ಖ್ಯಾತ ಇತಿಹಾಸಕಾರ ವಿಲ್ ಡ್ಯೂರಾಂಟ್.

ತಮ್ಮದೆ ವಿಶಿಷ್ಟ ಸಂಸ್ಕೃತಿ,ನಡೆ-ನುಡಿ,ಹವ್ಯಾಸಗಳನ್ನ ಹೊಂದಿ ಇವೆಲ್ಲದರ ಕೂಡ ಬಾಳ್ವೆ ನಡೆಸುವುದು ಇಲ್ಲಿನ ಜನರಿಗೆ ಸಾಮಾನ್ಯ ಸಂಗತಿಯಾಗಿತ್ತು.ಆದರೆ ದಿನ ಬಳಕೆಯ ದವಸಧಾನ್ಯಗಳು ಹಾಗೂ ನಿತ್ಯೋಪಯೋಗಿ ಆಹಾರ ವಸ್ತುಗಳಿಗಾಗಿ ದೂರದೇಶದವರೊಂದಿಗೆ ವ್ಯಾಪಾರ ವಾಹಿವಾಟು ಇಟ್ಟುಕೊಳ್ಳುವುದು ಅರಬ್ಬಿಗಳಿಗೆ ತೀರಾ ಅನಿವಾರ್ಯವೆ ಆಗಿತ್ತು.ಹೀಗಾಗಿ ಸಾರ್ಥ (ಕ್ಯಾರವಾನ್) ಕಟ್ಟಿಕೊಂಡು ನೂರಾರು ಮೈಲಿ ಸುತ್ತುವುದನ್ನ ಜೀವನದ ಅಂಗವಾಗಿಸಿಕೊಂಡಿದ್ದ ಅರಬ್ಬಿಗಳು ಒಂಟೆ,ಕುದುರೆಗಳ ಮೇಲೆ ಕೊಂಡ ಸಾಮಾನುಗಳನ್ನ ಹೇರಿಕೊಂಡು ಅವುಗಳ ರಕ್ಷಣೆಗಾಗಿ ಅಂಗರಕ್ಷಕರ ನೆರವಿನಿಂದ ಅಥವಾ ಸ್ವತಃ ತಾವೆ ಶಸ್ತ್ರಸಜ್ಜಿತರಾಗಿ ದಾರಿಗಳ್ಳರೊಂದಿಗೆ ರೋಷಾವೇಶದಿಂದ ಹೋರಾಡುವುದನ್ನು ರೂಢಿಸಿಕೊಂಡಿದ್ದರು ಅರೇಬಿಯಾದ ಉದ್ದಗಲಕ್ಕೂ ಇಂತಹ ಕ್ಯಾರವಾನ್'ಗಳು ಸರ್ವೆಸಾಮಾನ್ಯವಾಗಿದ್ದು,ಅದು ಅಲ್ಲಿನ ನಿವಾಸಿಗಳ ಬದುಕಲ್ಲಿ ಹಾಸು ಹೊಕ್ಕಾಗಿತ್ತು.ಅಲ್ಲಿನ ಭಯಂಕರ ದುರ್ಗಮ ಮರಳುಗಾಡಿನಲ್ಲಿ ಪ್ರಯಾಣಿಸುವುದು ಪ್ರಯಾಸಕರವಾಗಿದ್ದು ಅನಿರೀಕ್ಷಿತ ಅಪಾಯಗಳಿಗೇನೂ ಕೊರತೆಯಿರಲಿಲ್ಲ.ಹೀಗಾಗಿ ಕ್ಯಾರವಾನಿಗರು ತಮ್ಮ ಸ್ವತ್ತುಗಳ ರಕ್ಷಣೆಗಾಗಿ ಕಾಣದ ದೇವರನ್ನ ಮೊರೆ ಹೋಗುವುದು ಸ್ವಾಭಾವಿಕವೆ ಆಗಿತ್ತು.ದಾರಿಯುದ್ದ ಸಿಗುವ ವಿವಿಧ ದೇವತಾರಾಧನ ಸ್ಥಳಗಳಲ್ಲಿ ತಮ್ಮ ಬುಡಕಟ್ಟಿಗೆ ಸೇರಿದ ದೇವರನ್ನ ಶ್ರದ್ಧಾಭಕ್ತಿಯಿಂದ ಆರಾಧಿಸುವುದು,ದೈವ ಕೃಪೆಯನ್ನ ಅಪೇಕ್ಷಿಸಿ ಪ್ರಾರ್ಥಿಸುವುದು ಅವರ ಬಾಳಿನ ಒಂದು ಅವಿಭಾಜ್ಯ ನಡೆಯಾಗಿತ್ತು.


ಅರಬ್ಬಿಗಳೊಂದಿಗೆ ವ್ಯಾಪಾರ ವಾಹಿವಾಟು ಇಟ್ಟುಕೊಂಡಿದ್ದ ಪ್ರಮುಖ ವಿದೇಶಗಳಲ್ಲಿ ಸಿರಿಯಾ ಹಾಗೂ ಪ್ಯಾಲಸ್ತೈನ್ ಪ್ರಮುಖವಾಗಿದ್ದವು.ಇವುಗಳೊಂದಿಗೆ ನೆರೆಯ ಇರಾನ್.ಇರಾಕ್ ಹಾಗೂ ಭಾರತದವರೆಗೂ ಅರಬ್ಬಿ ವಣಿಕರು ಕ್ಯಾರವಾನ್ ನಡೆಸುತಿದ್ದುದೂ ಇತ್ತು.ಅರಬ್ಬರಲ್ಲಿ ಕೆಲವರು ಹೀಗೆ ವ್ಯವಹಾರ ಕೌಶಲ್ಯ ಮೆರೆದರೆ,ಇನ್ನುಳಿದವರು ಹೊರದೇಶಗಳಲ್ಲಿ ಈ ವ್ಯವಹಾರ ಕೌಶಲ್ಯ ಮೆರೆದು ಪ್ರಸಿದ್ಧರೂ ಆಗಿದ್ದರು.ಆದರೆ ಅವರ ಆರ್ಥಿಕ ನೆಮ್ಮದಿಯನ್ನ ಕಲಕಿದ್ದು ವಿದೇಶಿ ವ್ಯಾಪಾರಗಳಲ್ಲಿ ರೋಮನ್ನರ ಅಧಿಪತ್ಯ.ಕ್ರೈಸ್ತ ಮತ ರಾಜಧರ್ಮವಾಗಿ ರೋಮನ್ ಸಾಮ್ರಾಜ್ಯ ಪ್ರವರ್ಧಮಾನಕ್ಕೆ ಬಂದ ಕಾರಣ ಕ್ಯಾರವಾನ್'ಗಳ ಮೇಲೆ ರೋಮನ್ ಸುಂಕಾಧಿಕಾರಿಗಳು ಹೇರಲಾರಂಭಿಸಿದ ದುಬಾರಿ ಶುಲ್ಕ ಹಾಗೂ ವಿಪರೀತ ನಿರ್ಬಂಧಗಳ ಕಾರಣ ಕೆಂಗೆಟ್ಟ ಅನೇಕ ಅರಬ್ಬರು ಮರಳಿ ಮಾತೃಭೂಮಿಗೆ ಬಂದು ಮೆಕ್ಕಾ,ಮದೀನ ಹಾಗೂ ಸಿರಿಯಾ ಸೇರಿದಂತೆ ಮಧ್ಯ ಪ್ರಾಚ್ಯದಾದ್ಯಂತ ಹರಿದು ಹಂಚಿಹೋದರು.

ಗ್ರೀಕನ್ನರಿಂದ 'ಸೇರಾಕೆನಾಯ್' (Serakenoi) ಅಥವಾ "ಸಾರ್'ಸೆನ್ಸ್" ಎಂದು ಕರೆಸಿಕೊಂಡ ಅರೆಬಿಯಾವನ್ನ (ಅರಬ್ಬಿಯಲ್ಲಿ ಹಾಗೆಂದರೆ ಪೂರ್ವದವರು ಎಂದರ್ಥ) ಕ್ರಿಸ್ತಪೂರ್ವ 240ರಲ್ಲಿ ಮೊಗಾನ್ ಎಂಬುವವ ಆಳುತ್ತಿದ್ದ.ಅವನನ್ನು ಬೆಬಿಲೋನಿಯಾದ ರಾಜ ನರಂಸಿನ್ ಸೋಲಿಸಿದ ಬಗೆಗಿನ ಶಿಲಾಶಾಸನವೊಂದು ಲಭ್ಯವಿದೆ.ಅರೇಬಿಯಾದ ಇತರ ಶಾಸನಗಳ ಪ್ರಕಾರ ಕ್ರಿಸ್ತಪೂರ್ವ 800ರಲ್ಲಿ ಅದೆ ಮನೆತನದ ಇಪ್ಪತೈದಕ್ಕೂ ರಾಜರು ಅರೆಬಿಯಾವನ್ನ ಆಳಿದ್ದಾರೆ.

ಇತಿಹಾಸ ಪ್ರಸಿದ್ಧ ರಾಣಿ ಶೀಬಾ ದಕ್ಷಿಣ ಅರೆಬಿಯಾದಲ್ಲಿರುವ ಯಮನ್'ನ ಸಾಬಾದಿಂದ ರಾಜ್ಯಭಾರ ಮಾಡುತ್ತಿದ್ದಳು.ಆಕೆ ಅವಳ ಕಾಲದವನೆ ಆಗಿದ್ದ ರಾಜಾ ಸೋಲೋಮನ್ನನನ್ನು ಕ್ರಿಸ್ತಪೂರ್ವ 950ರಲ್ಲಿ ಭೇಟಿಮಾಡಿದ್ದಳು.ಸಾಬಾದ ರಾಜರು ಮಾರಿಬ್'ನಲ್ಲಿ ಕಾಲಾನಂತರ ರಾಜಧಾನಿಯನ್ನು ಸ್ಥಾಪಿಸಿ ಉಛ್ರಾಯ ಸ್ಥಿತಿಯನ್ನ ತಲುಪಿ,ಉತ್ತಮ ನೌಕಾಪಡೆ ಹೊಂದಿ ದೂರದ ಭಾರತದೊಂದಿಗೆ ಸಮುದ್ರಮಾರ್ಗದ ವ್ಯಾಪಾರ ನಡೆಸುತ್ತಿದ್ದರು.ಕ್ರಮೇಣ ರೋಮನ್ನರ ಪ್ರಾಬಲ್ಯ ಹೆಚ್ಚಿ ಅವರು ಅರೇಬಿಯಾದ ಪ್ರಸಿದ್ಧ ರೇವುಪಟ್ಟಣವಾಗಿರುವ ಏಡನ್'ನ್ನು ಅತಿಕ್ರಮಿಸಿ ಈಜಿಪ್ಟ್ ಹಾಗೂ ಭಾರತದ ಮೇಲಿನ ವ್ಯಾಪಾರದ ಮೇಲೆ ಹತೋಟಿ ಸಾಧಿಸಿತು.

ಏಡನ್ ಬದಲಾಗುತ್ತಿದ್ದ ಕಾಲಮಾನದಲ್ಲಿ ಅರಬ್,ರೋಮನ್ ಹಾಗು ಪರ್ಷಿಯನ್ ಚಕ್ರಾಧಿಪತ್ಯಕ್ಕೆ ಒಳಗಾಗಿದ್ದನ್ನು ಇತಿಹಾಸಕಾರರು ಗುರುತಿಸಿದ್ದಾರೆ.ಕ್ರಿಸ್ತಶಕ ಎರಡನೆ ಶತಮಾನವನ್ನೆ ಗಮನಿಸುವುದಾದರೆ ಸಮೈರಾ ನಗರದ ಸಾನಿಸ್ಸಾಡರು ರೋಮನ್ನರ ಅಧೀನದಲ್ಲಿದ್ದರೆ,ಯುಫ್ರೆಟಿಸ್ ನದಿಯ ದಡದಲ್ಲಿ ಇದ್ದ ಅಲ್-ಹಿರಾ ರಾಜ್ಯ ಪರ್ಶಿಯನ್ನರ ಪ್ರಭಾವದಲ್ಲಿತ್ತು.ಈ ಎರಡೂ ರಾಜ್ಯಗಳು ಕ್ರಿಸ್ತಮತದ ಪ್ರಭಾವಕ್ಕೆ ಒಳಪಟ್ಟಿದ್ದವು.ಕ್ರಿಸ್ತಶಕ ಏಳನೆ ಶತಮಾನದ ವೇಳೆಗೆ ಈ ಎರಡೂ ರಾಜ್ಯಗಳು ತಮ್ಮ ಅಸ್ಥಿತ್ವವನ್ನ ಕಳೆದುಕೊಂಡವು.

ರೋಮ್ ಹಾಗೂ ಪರ್ಷಿಯಾ ಚಕ್ರಾದಿಪತ್ಯಗಳು ಉನ್ನತ ಸ್ಥಿತಿಯಲ್ಲಿದ್ದಾಗ ಇತ್ತ ಅರೇಬಿಯಾ ಕತ್ತಲೆಯತ್ತ ಜಾರತೊಡಗಿತ್ತು.ಕ್ರಿಸ್ತಪೂರ್ವದಲ್ಲಿ ಅಲ್ಲಿದ್ದ ವೈಭವ ಏಳನೆ ಶತಮಾನದಲ್ಲಿ ಅಸ್ತಂಗತವಾಗಿತ್ತು.ಹೊರಪ್ರಪಂಚದ ಮಟ್ಟಿಗೆ ಅರಬ್ಬರು ಅಪ್ರಸ್ತುತರಾಗಿಬಿಟ್ಟಿದ್ದರು.ಹೀಗಾಗಿ ಕಗ್ಗತ್ತಲೆಯ ಆಫ್ರಿಕಾ ಖಂಡದಂತೆ ಅರೇಬಿಯಾ ಪರ್ಯಾಯ ದ್ವೀಪವೂ ಕಗ್ಗತ್ತಲ ದ್ವೀಪವಾಗಿ ಪರಿಣಮಿಸಿತು.

(ಇನ್ನೂ ಇದೆ....)

No comments: