ಹೊಸತೊಂದು ಸಂಭ್ರಮದ ಕ್ಷಣ
ಆಗಾಗ ಕಣ್ತೆರೆವಾಗ.....
ಅದರ ಆಪ್ತತೆಯನ್ನ ಹಂಚಿಕೊಳ್ಳೋಕೆ
ನನ್ನ ಮನ ಅರಸೋದು ನಿನ್ನನೆ,
ಕೇವಲ ನಿನ್ನ ಜೊತೆಯನೆ/
ಕಣ್ಣಿನ ಪ್ರತಿಕ್ಷಣದ ಕನವರಿಕೆ
ನನ್ನೆದೆಗಾಯದ ನವಿರಾದ ತುರಿಕೆ....
ನನ್ನ ಹೃದಯಾಂತರಾಳದ ಹರಕೆ
ನೀ ನನ್ನ ಮೌನ ಹಾರೈಸುವ ಏಕೈಕ ಕೋರಿಕೆ,
ಇನ್ನುಳಿದ ನನ್ನದೆಲ್ಲ ಬರೇ ತೋರಿಕೆ//
ಕನಸಿನ ಕಣ್ಣು ತೆರೆದ ಕೂಡಲೆ
ನಾನು ಕಾಣೋದು ನಿನ್ನ ಬಿಂಬ...
ನನಸಲ್ಲೂ ನೀನೆ ಆವರಿಸಿರುತ್ತೀಯ ನನ್ನ ಮನಸ ತುಂಬಾ,
ಕಣ್ಮರೆಯಾದ ಕನಸುಗಳ ನೆರಳ ನೆನಪುಗಳು
ನಿತ್ಯ ನನ್ನ ನರಳಿಸುತ್ತಿವೆ/
ಸಂಕಟದ ಗಣಿಯನ್ನ ತುಂಬಿಸಿದ
ನಿನ್ನ ನೆನಪುಗಳ ಸಿಹಿನೀರು....
ನನ್ನ ಮನಸಿನಾಳದಲ್ಲಿ ಸಂಭ್ರಮದ ಬೆಚ್ಚನೆ ಬುಗ್ಗೆಯನ್ನ ಚಿಮ್ಮಿಸಿದೆ,
ಇರುಳಲ್ಲಿ ವ್ಯಾಪಿಸಿದ್ದ ಸ್ವಪ್ನ ಭಾವ ಹಗಲಲ್ಲೂ ಹಲುವುಬಾರಿ ಮನಸನ್ನಾವರಸಿ
ಎದೆಯೊಳಗೆ ಸಾಂತ್ವಾನದ ಸವಿ ಹುಟ್ಟಿಸಿದೆ//
ಮನಸಿನ ಮುಂಗೈ ಮೇಲೆ ನೆನ್ನಿನಿರುಳು ನೀನಿತ್ತಿದ್ದ....
ಮುತ್ತಿನ ಜೊತೆಗೆ ಅಂಟಿದ್ದ ನಿನ್ನ ಎಂಜಲ ಹನಿಯ ಪರಿಮಳ
ಇನ್ನೂ ಅಲ್ಲಿಂದ ಮಾಸಿಲ್ಲ,
ಎದೆಯ ಭಿತ್ತಿಯ ಮೇಲೆ ನೀನೊತ್ತಿದ್ದ ನಿನ್ನ ಕೈಗಳ ಚಿತ್ತಾರ
ನಾನಿನ್ನೂ ಅಲ್ಲಿಂದ ಅಳಿಸಿಲ್ಲ/
ನಿನ್ನ ಸಾಮೀಪ್ಯದ ಕಲ್ಪಿತ ಭಾವದಲ್ಲಿ ಬಂಧಿತ
ನನ್ನ ಮನ ಎಂದೂ ಒಂಟಿಯಲ್ಲ,
ಕನಸುಗಳಲ್ಲಾದರೂ ಕನಿಷ್ಠ
ನೀ ಜೊತೆಯಾಗಿದ್ದೀಯಲ್ಲ//
ಮನಸಿನೊಳಗೆ ನಾ ಕಟ್ಟಿರುವ ಮೌನದ ಮಹಲಿನಲ್ಲಿ
ನಾನೆ ಹಬ್ಬಿಸಿರುವ ನಿಶಬ್ದದ ಏಕತಾನವ ಕಲಕುವ ಅನುಮತಿ....
ಕೇವಲ ನಿನ್ನ ಪಿಸುಮಾತಿಗೆ ಮಾತ್ರ ಇದೆ/
ಅಲ್ಲೇ ಬಾಗಿಲ ಮುಂದೆ ನನ್ನ ಕಣ್ಣಾಲಿಯ ಆಕ್ಷಾಂಶೆಗಳು
ಬಿಡಿಸಿರುವ ರಂಗೋಲಿಯನ್ನ ಅಂದಗೆಡಿಸುವ ಅರ್ಹತೆ
ನಿನ್ನ ಪಾದಗಳಿಗಷ್ಟೆ ಇದೆ//
06 October 2011
Subscribe to:
Post Comments (Atom)
No comments:
Post a Comment