11 October 2011

ಭಾರತದ ನೆಲದಲ್ಲಿ ಇಸ್ಲಾಂ...

ವಿದೇಶಿ ಛಾಪಿನ ಧರ್ಮಗಳಲ್ಲಿ ಮೊದಲಿಗೆ ಭಾರತದ ನೆಲದಲ್ಲಿ ನೆಲೆಯೂರಲು ಸಾಧ್ಯವಾದದ್ದು ಯಹೂದಿ ಧರ್ಮಕ್ಕೆ.ಮದ್ಯಪ್ರಾಚ್ಯದಲ್ಲಿ ಆರಂಭವಾಗಿದ್ದ ಇಸ್ಲಾಮಿ ಹಾಗೂ ಕ್ರೈಸ್ತ ಧರ್ಮ ಯುದ್ದ (ಕ್ರುಸೇಡ್)ದ ಬಲಿಪಶುಗಳಾಗಿದ್ದ ಯಹೂದ್ಯರು ಮೊದಲಿಗೆ ಒಂದೂವರೆ ಸಾವಿರ ವರ್ಷದಿಂದೀಚೆಗೆ ಭಾರತಕ್ಕೆ ಸಮುದ್ರಮಾರ್ಗವಾಗಿ ಬಂದರು,ಇಂದಿನ ಕೇರಳದ ಕರಾವಳಿಯಲ್ಲಿ ಹಾಗು ಪೂರ್ವಕರಾವಳಿಯ ಮೂಲಕ ತ್ರಿಪುರ ಹಾಗು ನಾಗಾಲ್ಯಾಂಡಿನ ಗುಡ್ಡಗಾಡುಗಳಲ್ಲಿ ಇವರು ನೆಲೆಯೂರಿದರು.ಅನಂತರದ ಸರದಿ ಜತುರಾಷ್ಠನ ಅನುಯಾಯಿಗಳಾದ ಪರ್ಶಿಯನ್ನರದ್ದು.ಅರಬ್ಬಿಯಾದ ತುಂಬಾ ತನ್ನ ತೋಳ್ಬಲದಿಂದ ನೆಲೆ ಸ್ಥಾಪಿಸಿಕೊಂಡಿದ್ದ ಇಸ್ಲಾಂ ಪರ್ಷಿಯಾದ ರಾಜಗದ್ದುಗೆಯನ್ನ ಅಲುಗಾಡಿಸಿ ಅಲ್ಲಿನ ರಾಜಧರ್ಮವಾದ ಮೇಲೆ ನಿಷ್ಟಾವಂತ ಅಗ್ನಿ ಆರಾಧಕರಾದ ಪರ್ಶಿಯನ್ನರಿಗೆ ದೇಶಭ್ರಷ್ಟರಾಗುವ ಹೊರತು ಇನ್ಯಾವುದೆ ಆಯ್ಕೆಗಳು ಉಳಿದಿರಲಿಲ್ಲ,ಹೀಗಾಗಿ ಅವರಲ್ಲಿ ಬಹುತೇಕರು ಸ್ವಧರ್ಮ ಭ್ರಷ್ಟರಾಗಲು ಇಚ್ಚಿಸದೆ ಭಾರತ ಉಪಖಂಡದ ಗುಜರಾತ್ ಹಾಗು ಮಹಾರಾಷ್ಟ್ರದ ಕರಾವಳಿಗಳಿಗೆ ರಾಜಕೀಯ ಆಶ್ರಯ ಬಯಸಿ ಗುಳೆ ಬಂದರು,ಇವೆರಡೂ ಧರ್ಮಾನುಯಾಯಿಗಳು ಕೇವಲ ಇಲ್ಲಿ ನೆಲೆ ಕಂಡುಕೊಂಡು ಮುಖ್ಯವಾಹಿನಿಯಲ್ಲಿ ಬೆರೆತುಹೋದರೆ ವಿನಃ ತಮ್ಮ ಧರ್ಮ ಪ್ರಚಾರದ ಯಾವುದೆ ಒಳ ಉದ್ದೇಶಗಳನ್ನ ಹೊಂದಿರಲಿಲ್ಲ ಅನ್ನೋದು ಗಮನಾರ್ಹ.ಇದರ ಬಗ್ಗೆ ಒಂದು ಕುತೂಹಲ ಹುಟ್ಟಿಸುವ ಕಥೆ ಚಾಲ್ತಿಯಲ್ಲಿದೆ.ಗುಜರಾತಿನ ಅಂದಿನ ಸನಾತನ ರಾಜನ ಬಳಿ ಆಶ್ರಯ ಬಯಸಿ ಬಂದ ಪರ್ಶಿಯನ್ನರ ಮುಖಂಡನಿಗೆ ರಾಜ 'ನಿಮ್ಮನ್ನ ಹೇಗೆ ನಂಬೋದು?' ಅಂದನಂತೆ.ಆವಾಗ ರಾಜನ ಪಾಕಶಾಲೆಯಿಂದ ಒಂದು ಲೋಟ ಹಾಲನ್ನು ತರಿಸಲು ಕೋರಿದ ಆ ಪರ್ಶಿಯನ್ನರ ಮುಖಂಡ ತನ್ನ ಚೀಲದಿಂದ ಚಮಚೆ ಸಕ್ಕರೆ ತೆಗೆದು ಅದಕ್ಕೆ ಬೆರೆಸಿ 'ನೋಡಿ ಹಾಲಲ್ಲಿ ಸಕ್ಕರೆ ಬೆರೆತಂತೆ ನಿಮ್ಮೊಂದಿಗೆ ಬೇರೆಯುತ್ತೇವೆ!'ಎಂದು ಉತ್ತರಿಸಿದನಂತೆ.ಹೀಗೆ ರಾಜನ ಮನಗೆದ್ದ ಪರ್ಷಿಯನ್ನರು ಕೊನೆಗೂ ತಮ್ಮ ನುಡಿಗೆ ಬದ್ಧರಾಗಿಯೆ ಉಳಿದರು.ಇಂದಿಗೂ ಗುಜರಾತಿನ ಸೂರತ್ ಹಾಗು ಮಹಾರಾಷ್ಟ್ರದ ಮುಂಬೈನ ಆರ್ಥಿಕ ಪ್ರಪಂಚದಲ್ಲಿ ಪಾರಸಿ ವ್ಯಾಪಾರಿಗಳದ್ದೆ ರಾಜ್ಯಭಾರ.ಹೀಗಿದ್ದರೂ ಅವರನ್ನ ಧರ್ಮಾಧರಿತವಾಗಿ ಗುರುತಿಸಲಾಗದಂತೆ ಸಮಾಜದ ಐಕ್ಯತೆಯಲ್ಲಿ ಆ ಸಮುದಾಯ ಲೀನವಾಗಿ ಹೋಗಿದೆ.ಉದಾಹಾರಣೆಗೆ ಟಾಟಾ ಉದ್ಯಮ ಸಮುದಾಯವನ್ನೆ ಗಮನಿಸಿ.

ಆದರೆ ಭಾರತಕ್ಕೆ ಇಸ್ಲಾಮಿನ ಆಗಮನದ ಕಥೆ ತುಸು ವಿಭಿನ್ನವಾಗಿದೆ.ಎಲ್ಲರೂ ಆದು ಬಲಪ್ರಯೋಗದ ಮೂಲಕ,ಹೆಚ್ಚಾಗಿ ಗಜನಿ ಮಹಮ್ಮದನ ಅತಿಕ್ರಮಣದದಿಂದ ಭಾರತವನ್ನ ಹೊಕ್ಕಿತು ಅಂತಲೆ ಭಾವಿಸಿದ್ದಾರೆ.ಆದರೆ ವಾಸ್ತವ ಅದಲ್ಲ.ಇಸ್ಲಾಂ ಭಾರತದ ಭೂಮಿಗೆ ಅಡಿಯಿಟ್ಟದ್ದು ನೈಋತ್ಯ ಕರಾವಳಿಯ ಮೂಲಕ.ಗಜನಿ ಮಹಮದನ ಅತಿಕ್ರಮನಕ್ಕೂ ಎರಡೂವರೆ ಶತಮಾನದ ಹಿಂದೆಯೆ ಕೇರಳದ ಕರಾವಳಿ ತೀರದಲ್ಲಿರುವ ಅಂದಿನ ಮುಸ್ಸೇರಿ ಪಟ್ಟಣ (ಇಂದಿನ ಕೊಲ್ಲಂ)ದ ಮೂಲಕ ಇಸ್ಲಾಂ ಭಾರತವನ್ನ ಪ್ರವೇಶಿಸಿತ್ತು.ಅದು ಅಂದಿನ ಕೇರಳದ ಪ್ರಮುಖ ರೇವುಪಟ್ಟಣವಾಗಿತ್ತು.ಅಂದಿನ ಕೇರಳ ಚಂದ್ರಗಿರಿಯ ದಕ್ಷಿಣಕ್ಕಿರುವ ತಂಬುರದಿಂದ ಭಾರತಭೂಮಿಯ ತುತ್ತತುದಿಗಿರುವ ಶಚೀಂದ್ರಂ (ಈಗ ತಮಿಳುನಾಡಿಗೆ ಸೇರಿದೆ) ವರೆಗೆ ವ್ಯಾಪಿಸಿದ್ದು ಐದು ಮುಖ್ಯ ರಾಜ್ಯಗಳಾಗಿ ಹಂಚಿಹೋಗಿತ್ತು.

ಆ ಎಲ್ಲಾ ಪಾಳೆಪಟ್ಟುಗಳು ನಡು ಕೇರಳದಲ್ಲಿರುವ ಕೊಡುಂಗಲ್ಲೂರು ಸ್ಥಿತ ಚೇರ ರಾಜಮನೆತನದ ಸಾಮ್ರಾಜ್ಯಕ್ಕೆ ಅಧೀನವಾಗಿದ್ದು ರಾಜಕೀಯವಾಗಿ ಅಲ್ಲಿನ ವರ್ಮನ್ ಗದ್ದುಗೆಗೆ ನಿಷ್ಠವಾಗಿದ್ದವು.ಹೀಗಿದ್ದಾಗ ಅಲ್ಲಿನ ರಾಜ ರಾಮವರ್ಮ ಕುಲಶೇಕರನಿಗೆ ಒಂದು ರಾತ್ರೆ ಆಕಾಶದಿಂದ ತಾರೆಯೊಂದು ಎರಡಾಗಿ ಒಡೆದು ಬೀಳುವ ಅಪರೂಪದ ದೃಶ್ಯ ಕಂಡುಬಂತು.ಅದನ್ನ ಅನಿಷ್ಟದ ಶಕುನವಾಗಿ ಚಿಂತಿಸಿದ ರಾಜ 'ಚೇರಮಾನ ಪೆರುಮಾಳ್" (ಶ್ರೀಸಾಮಾನ್ಯರು ಅವನನ್ನ ಕರೆಯುತ್ತಿದ್ದುದೆ ಹಾಗೆ) ಆಸ್ಥಾನದ ಜೋತಿಷಿಗಳಲ್ಲಿ ಈ ಬಗ್ಗೆ ವಿಚಾರಿಸಿದ.ಸೂಕ್ತ ಉತ್ತರ ದೊರೆಯದೆ ಖಿನ್ನನಾಗಿದ್ದ.ಆಗ ಅಲ್ಲಿಗೆ ಅರಬ್ಬಿಗಳ ವ್ಯಾಪಾರಿ ನಿಯೋಗವೊಂದು ವ್ಯಾಪಾರದ ಅನುಮತಿ ಕೋರಲು ಅವನ ಆಸ್ಥಾನಕ್ಕೆ ಬಂದಿತ್ತು.ಆ ನಿಯೋಗದ ಮುಖಂಡ ಈ ಸಮಸ್ಯೆಯನ್ನ ಮಹಮದ್ ಪೈಗಂಬರ್ ಇಸ್ಲಾಮನ್ನು ಅಲ್ಲಾಹನಿಂದ ಪ್ರೇರಿತನಾಗಿ ಭೋದಿಸ ತೊಡಗಿದ್ದಕ್ಕೆ ಸಮೀಕರಿಸಿದ.ಕಾಕತಾಳೀಯವಾಗಿ ಕನಸು ಬಿದ್ದ ಕಾಲಕ್ಕೂ ಪೈಗಂಬರನ ಪ್ರವಾದಿತನದ ಸ್ವಘೋಷಣೆಗೂ ಕಾಲದಲ್ಲಿ ಸಾಮ್ಯತೆ ಕಂಡು ಬಂತು.ಕ್ರಿಸ್ತ ಶಕ 639ಕ್ಕೆ ಕನಸು ಬಿದ್ದದ್ದು, ಪ್ರವಾದಿ ಭೋದನೆಗೆ ಆರಂಭಿಸಿದ್ದು ಕ್ರಿಸ್ತಶಕ 638ಕ್ಕೆ.ಹೀಗಾಗಿ ಆ ವಿವರಣೆ ರಾಜನಿಗೆ ಸಮಂಜಸ ಎನ್ನಿಸಿ ಅವನು ಇಸ್ಲಾಂ ಬಗ್ಗೆ ಒಲವು ತಾಳಿದ.ಮೆಕ್ಕಾ ಯಾತ್ರೆಗೆ ಮನಸನ್ನೂ ಮಾಡಿದ.

ಆದರೆ ಸಾಮಾಜಿಕ ಬಂಡಾಯವನ್ನ ಊಹಿಸಿ ಇದನ್ನ ಬಹಿರಂಗಪಡಿಸದೆ ಮೊದಲಿಗೆ ತನ್ನ ರಾಜ್ಯದ ಐದು ಭಾಗಗಳನ್ನ ಸರಿಸಮವಾಗಿ ಐವರು ಸಂಬಂಧಿಗಳಿಗೆ ಹಂಚಿ ಯಾತ್ರೆಯ ನೆಪದಲ್ಲಿ ಹಡಗಿನ ಮೂಲಕ ಚೆರಮಾನ ಪೆರುಮಾಳ್ ಮೆಕ್ಕಾಗೆ ಅದೆ ಅರಬ್ಬೀ ವ್ಯಾಪಾರಿ ತಂಡದೊಂದಿಗೆ ಹೊರಟ.ಒಂದು ಊಹೆಯ ಪ್ರಕಾರ ಅವನಿಗೆ ಪ್ರವಾದಿಗಳ ದರ್ಶನವೂ ಆಯಿತು,ಆದರೆ ಈ ಬಗ್ಗೆ ಸ್ಪಷ್ಟ ದಾಖಲೆಗಳು ಲಭ್ಯವಿಲ್ಲದ ಕಾರಣ ಇದು ಊಹಾಪೋಹವಷ್ಟೆ ಅಂದು ಕೊಳ್ಳಬೇಕಿದೆ.ಅಲ್ಲಿ ಇಸ್ಲಾಮಿಗೆ ಧರ್ಮಾಂತರಗೊಂಡ ರಾಜ ಅಲ್ಲಿಯೇ ನಾಲ್ಕು ಸಂವತ್ಸರ ಕಳೆದ ಅನಂತರ ಮರಳಿ ಪ್ರವಾದಿಯ ನೇರ ಶಿಷ್ಯ 'ಮೌಲಿಕ್ ಇಬಾನುದ್ದೀನ್' ಜೊತೆಗೂಡಿ ಭಾರತದತ್ತ ಮುಖಮಾಡಿ ಹಡಗೇರಿದ.ಆದರೆ ದುರಾದೃಷ್ಟವಶಾತ್ ಆಮಶಂಕೆಗೆ ಬಲಿಯಾಗಿ ಆತ ತೀರ ನಿತ್ರಾಣಗೊಂಡ.ತನ್ನ ಕೊನೆಯನ್ನ ಊಹಿಸಿದ ಆತ ಅಲ್ಲಿಯೆ ಹಡಗಿನಲ್ಲಿ ಚರ್ಮದ ಮೇಲೆ ಐದು ಪತ್ರಗಳನ್ನು ತನ್ನ ರಾಜಮುದ್ರೆಯೊಂದಿಗೆ ಬರೆದು ತನ್ನ ಐವರು ಉತ್ತರಾಧಿಕಾರಿಗಳಿಗೆ ತಲುಪಿಸುವಂತೆ ಮೌಲಿಕ್ ಇಬಾನುದ್ದೀನರಿಗೆ ಹೇಳಿ ಅಸುನೀಗಿದ.ಹೀಗೆ ಅಂತ್ಯವಾಯ್ತು ಪ್ರಪ್ರಥಮ ಭಾರತೀಯ ಮತಾಂತರಿತ ಮುಸ್ಲೀಮನ ಜೀವನ.ಈ ಮತಾಂತರ ಸ್ವ ಇಚ್ಛೆಯದಾಗಿತ್ತು ಹಾಗೂ ಬಲವಂತದ ಯಾವ ಕುರುಹೂ ಅಲ್ಲಿರಲಿಲ್ಲ ಅನ್ನೋದು ನೆನಪಿಡಬೇಕಾದ ಅಂಶ.

ಹೀಗೆ ಸತ್ತ ರಾಜಾ ರಾಮವರ್ಮ ಕುಲಶೇಕರನನ್ನು ಒಮನ್ನಿನ ಸಲಾಲದಲ್ಲಿ ಇಸ್ಲಾಂ ಪ್ರಕಾರ ಸಮಾಧಿಮಾಡಲಾಯಿತು.ಅವನ ಶಿಫಾರಸ್ಸು ಪತ್ರ ಹಿಡಿದು ಮುಸ್ಸೇರಿ ಪಟ್ಟಣ ಮುಟ್ಟಿದ ಮೌಲಿಕ್ ಇಬಾನುದ್ದೀನನಿಗೆ ಸತ್ತ ತಮ್ಮ ಹಿರಿಯನ ಆಶಯದಂತೆ ಅವನ ಉತ್ತರಾಧಿಕಾರಿಗಳು ಧರ್ಮಪ್ರಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟರು ಹಾಗೂ ರಾಜ್ಯದ ಐದು ಪ್ರಮುಖ ಭಗವತಿ ದೇವಾಲಯಗಳನ್ನ ಮಸೀದಿಗಾಗಿ ಬಿಟ್ಟು ಕೊಟ್ಟರು.

ಹೀಗೆ ಅಧಿಕೃತವಾಗಿ ಆರಂಭವಾದ ಭಾರತದ ಮೊತ್ತಮೊದಲ ಮಸೀದಿ 'ಚೇರಮಾನ ಪಳ್ಳಿ' ಎಂಬ ಹೆಸರಿನಲ್ಲಿ ಕೋಡಂಗಲ್ಲೂರಿನಲ್ಲಿ ಕಳೆದ ಒಂದೂವರೆ ಸಾವಿರ ವರ್ಷಗಳಿಂದ ಅಸ್ತಿತ್ವದಲ್ಲಿದೆ.ಇಲ್ಲಿನ ವಾಸ್ತು ಪಕ್ಕಾ ಕೇರಳದ ಇನ್ನಿತರ ದೇವಾಲಯಗಳಂತೆಯೆ ಇದೆ.ಮಸೀದಿಯ ಹಿಂದೆ ದೇವಾಲಯದ ಹಿಂದಿರುವಂತೆ ಕೊಳವೂ ಇದೆ.ಇಂದಿಗೂ ಅಲ್ಲಿನ ರಂಜಾನ್ ಸಹಿತ ಧಾರ್ಮಿಕ ಸಮಾರಂಭಗಳಿಗೆ ರಾಜ ಮನೆತನದವರು ಖಾಯಂ ವಿಶೇಷ ಆಹ್ವಾನಿತರು (ಅವರೇನೂ ಧರ್ಮಬದಲಿಸಿಕೊಂಡಿಲ್ಲ,ಹಿಂದೂಗಳಾಗಿಯೆ ಇದ್ದಾರೆ).ಇದರ ಹೊರತು ಕೊಲ್ಲಂ-ಕಾಸರಗೋಡು ಹಾಗು ಕನ್ಯಾಕುಮಾರಿ ಬಳಿ ಇನ್ನಿತರ ದೇವಸ್ಥಾನಗಳು ಮಸೀದಿಗಳಾಗಿ ಪರಿವರ್ತಿತವಾದವು.ಇದು ಆರಂಭದ ಕಥೆ.ಆರಂಭದಲ್ಲಿ ಸೌಮ್ಯವಾಗಿದ್ದ ಇಸ್ಲಾಂ ಪ್ರಸರಣೆ ಅನಂತರದ ದಿನಗಳಲ್ಲಿ ಮಾತ್ರ ದುಂಡಾವರ್ತಿಗೆ ಮೊರೆ ಹೋದದ್ದು ದುರದೃಷ್ಟಕರ.ಇದೆ ಮಾದರಿಯಲ್ಲಿ ಸಿರಿಯನ್ ಕ್ರಿಸ್ತರು ಕೇರಳದ ಮೂಲಕವೆ ಕ್ರೈಸ್ತ ಧರ್ಮವನ್ನೂ ಭಾರತಕ್ಕೆ ತಂದಿದ್ದರು ಆದರೆ ಅದು ಇಸ್ಲಾಮಿನ ಮೂಲಭೂತವಾದಕ್ಕೆ ಅಂಟಿಕೊಳ್ಳದೆ ಸೌಮ್ಯ ಮಾರ್ಗದಲ್ಲೆ ತನ್ನ ಜನಪ್ರಿಯತೆಯನ್ನ ಹೆಚ್ಚಿಸಿಕೊಂಡಿತ್ತು.ಪುರಾತನ ಕಾಲದಿಂದಲೂ ದೇಶದ ಸಮುದ್ರ ವ್ಯಾಪಾರದ ದ್ವಾರವಾಗಿ ವಿಶಾಲ ಕರಾವಳಿಯಲ್ಲಿ ಹರಡಿಕೊಂಡ ಕೇರಳ ವಿದೇಶಿಯರೊಂದಿಗೆ ಆರ್ಥಿಕ ನಂಟು ಹೊಂದಿದ್ದರಿಂದ ಈ ಎಲ್ಲಾ ಘಟನಾವಳಿಗಳಿಗೆ ಕೇರಳವೆ ರಂಗಸ್ಥಳವಾಗುವಂತಾಯಿತು.

(ಉಳಿದದ್ದು-ನಾಳೆಗೆ....)

No comments: