13 October 2011

ಇಸ್ಲಾಮಿನಡಿ ಭಾರತ....

ಜಗತ್ತಿನ ಇತಿಹಾಸದಲ್ಲಿ ಬಹುಸಂಖ್ಯಾತ ಪರಧರ್ಮೀಯರನ್ನ ಇಸ್ಲಾಂ ಅನುಯಾಯಿಗಳು ಧೀರ್ಘಾವಧಿಯವರೆಗೆ ನಿರಂಕುಶವಾಗಿ ಆಳಿದ್ದು ಬಹುಷಃ ಸ್ಪೇನ್ ಹೊರತು ಪಡಿಸಿದರೆ ಅದು ಕೇವಲ ಭಾರತದಲ್ಲಿಯೆ.ಕ್ರೈಸ್ತ ಮತಾವಲಂಬಿಗಳ ಸ್ಪೇನ್ ಕ್ರಿಸ್ತಶಕ 711ರಿಂದ ಸರಿಸುಮಾರು ಎಂಟು ಶತಮಾನಗಳ ಕಾಲ ಇಸ್ಲಾಂ ಜಗತ್ತಿನ ಭಾಗವಾಗಿತ್ತು ಅನ್ನುವುದು ಇಂದಿಗೂ ಮುಸ್ಲಿಂ ಜಗತ್ತಿಗೆ ಕಡುಹೆಮ್ಮೆಯ ವಿಚಾರ.ಆದರೆ ಕ್ರಿಸ್ತಶಕ 1492ರಲ್ಲಿ ಈ ನಿರಂಕುಶತೆಗೆ ಲಗಾಮು ಬಿದ್ದು ಸ್ಪೇನ್ ಮರಳಿ ಕ್ಯಾಥೊಲಿಕ್ ಪಂಥಾನುಯಾಯಿಗಳ ತೆಕ್ಕೆಗೆ ಜಾರಿದ್ದು ಹಾಗು ಅವರು ಇಸ್ಲಾಮಿ ಕಾಲಮಾನದ ಕರುಹು ಉಳಿಯದಂತೆ ಎಲ್ಲಾ ಪಳೆಯುಳಿಕೆಗಳನ್ನ ನಿರ್ದಾಕ್ಷಿಣ್ಯವಾಗಿ ಧರ್ಮಾಂಧತೆಯಿಂದಲೆ ಬುಡಸಹಿತ ಕಿತ್ತು ಹಾಕಿದ್ದನ್ನ ಮಾತ್ರ ಜಾಣತನದಿಂದ ನೆನಪಿಸಿಕೊಳ್ಳಲು ಮರೆಯುತ್ತಾರೆ! ಇದೇನೆ ಇದ್ದರೂ ಈ ಹೊತ್ತಲ್ಲಿ ಹಿಂದಿರುಗಿ ನೋಡಿದಾಗ ಏಳು ಶತಮಾನಗಳ ಕಾಲ ಭಾರತವನ್ನು ಆಳಿ ಅನಂತರ ಇಲ್ಲಿಯೆ ಬೀಡು ಬಿಟ್ಟ ಇಸ್ಲಾಮಿನಿಂದ ಭಾರತ ಪಡೆದುಕೊಂಡದ್ದೇನು? ಅದರ ಕೊನೆಯ ನಿಶಾನಿಯನ್ನೂ ಇನ್ನಿಲ್ಲವಾಗಿಸಿ ಸ್ಪೇನ್ ಕಳೆದು ಕೊಂಡದ್ದೇನು ಅನ್ನುವುದನ್ನ ಸುಲಭವಾಗಿ ಅಂದಾಜಿಸಬಹುದು.

ಕುತ್ಬುದ್ದೀನ್ ಐಬಕ್ಕನಿಂದ ಮೊದಲುಗೊಂಡು ಗುಲಾಮಿ ಸಂತತಿ-ಖಿಲ್ಜಿ ಸಂತತಿ-ತುಘಲಕ್ ಸಂತತಿ-ಸಯ್ಯದ್ ಸಂತತಿ-ಲೋಧಿ ಸಂತತಿ ಹಾಗೂ ಕಟ್ಟಕಡೆಯಲ್ಲಿ ಮೊಘಲರ ಸಂತತಿಯ ಕೊನೆಯ ಬಾದಶಹ ಎರಡನೆ ಬಹದ್ದೂರ್'ಷಾನ ವರೆಗೂ ಇಸ್ಲಾಂ ಭಾರತೀಯ ನೆಲದಲ್ಲಿ ನಿರಂಕುಶ ಅಟ್ಟಹಾಸವನ್ನ ಮೆರೆದದ್ದು ಅಳಿಸಿ ಹಾಕಲಾಗದ ಐತಿಹಾಸಿಕ ಸತ್ಯ.ಈ ಏಳುನೂರು ವರ್ಷಗಳಲ್ಲಿ ಭಾರತೀಯ ಉಪಖಂಡದ ಬಹುಭಾಗ ದೆಹಲಿ ಗದ್ದುಗೆಯ ನೆರಳಿನಲ್ಲಿತ್ತು.ಹಿಂದೂ ಕೃತಿ-ಸಂಸ್ಕೃತಿಗಳು ಇಸ್ಲಾಮಿ ಕ್ರಿಯಾಶೀಲತೆಯಿಂದ ಅನೇಕ ಉತ್ತಮ ಅಂಶಗಳನ್ನು ಕಡಪಡೆದುಕೊಂಡವು.ವಿಶೇಷವಾಗಿ ಭಾಷೆಯ ದೃಷ್ಟಿಯಿಂದ ಗಮನಾರ್ಹ ಹೊಸತನಗಳು ಗೋಚರಿಸಿದವು.ಸಂಗೀತದಲ್ಲಿ ಅರಬ್ ಮೂಲದ ವಿದೇಶಿ ತಂತಿವಾದ್ಯಗಳು ಇಲ್ಲಿನ ಸಾಂಪ್ರದಾಯಿಕ ವಾದ್ಯಗಳ ಜೊತೆಯಾಗಿ ಇಲ್ಲಿನ ಮೂಲ ಸಂಗೀತದ ಮೆರುಗು ಹೆಚ್ಚಿತು.ಸಾಹಿತ್ಯವೂ ಸಮೃದ್ಧವಾಗಿ ವಿಕಸಿಸಿತು.ಖವ್ವಾಲಿ-ಗಜಲ್ ಅಮದಾದರೆ ಕಥಕ್-ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅವಿಷ್ಕರಣೆಯಾಗಿ ಭಾರತೀಯ ಸಾಂಸ್ಕೃತಿಕ ಜಗತ್ತು ಹೊಸತನವನ್ನ ಹೊತ್ತುಕೊಳ್ಳುವಂತಾಯಿತು.ಸಂಗೀತ-ಸಾಹಿತ್ಯ ಮಹಮದ್ ಪೈಗಂಬರನ ಉಕ್ತ ದೈವವಾಣಿಯ ಪ್ರಕಾರ ಇಸ್ಲಾಮಿ ಅನುಯಾಯಿಗಳಿಗೆ ಹರಾಮ್ ಎಂದು ಖುರಾನ್ ಹೇಳುವುದರಿಂದ ಅರೆಬ್ಬಿಯಾದಲ್ಲಿ ಅದರ ವಿಕಸನದ ಸ್ಥಿತಿ ಅಕ್ಷರಶಃ ಕೋಮಾಸ್ಥಿತಿಯಲ್ಲಿತ್ತು.ಹೀಗಾಗಿ ಭಾರತದ ನೆಲದಲ್ಲಿ ಇಸ್ಲಾಮಿ ಕ್ರಿಯಾಶೀಲರಿಗೆ ಹೊಸಗಾಳಿ ಸಿಕ್ಕಂತಾಗಿ ತಮ್ಮ ಪ್ರತಿಭೆಯನ್ನೆಲ್ಲ ಅವರು ಇಲ್ಲಿ ಪ್ರದರ್ಶಿಸಿ ಇನ್ನೂ ಹೆಚ್ಚು ವಿಸ್ತರಿಸಿಕೊಳ್ಳಲು ಅವಕಾಶವಾಯಿತು.ಇನ್ನು ವಾಸ್ತುಶಿಲ್ಪದ ಕಥೆಯೂ ಹೆಚ್ಚು ಕಡಿಮೆ ಅಂತದ್ದೆ.ಮರಳುಗಾಡಿನ ನೆಲದಲ್ಲಿ ಪ್ರಾಕೃತಿಕ ನಿರ್ಬಂಧಕ್ಕೆ ಒಳಗಾಗಿದ್ದ ಅವರ ಸೌಂದರ್ಯಪ್ರಜ್ಞೆಗೆ ಭಾರತ ಒಂದು ತೆರೆದ ವೇದಿಕೆಯಂತಾಗಿ ತಡೆಯಿಲ್ಲದೆ ಅವರ ಪ್ರತಿಭೆ ಇಲ್ಲಿ ಪ್ರಕಾಶಿಸತೊಡಗಿತು.ಸ್ಪೇನ್'ನಲ್ಲಿನ ಇಸ್ಲಾಮಿ ವಾಸ್ತುಶಿಲ್ಪವೂ ಇದರ ಮುಂದೆ ಮಂಕು ಅನ್ನುವುದನ್ನು ನಾವು ಮರೆಯುವಂತಿಲ್ಲ.ವಾಸ್ತುಶಿಲ್ಪ ಶಾಸ್ತ್ರದಲ್ಲಿ ಹೊಸ ಇಂಡೋ-ಇಸ್ಲಾಮಿಕ್ ಶೈಲಿಯ ಕಟ್ಟಡಗಳು ತಲೆಯೆತ್ತಿ ನಿಲ್ಲುವಂತಾಯಿತು.ವಿಸ್ಮಯಕಾರಿ ಬಿಜಾಪುರದ ಗೋಲಗುಮ್ಮಟ,ಗೋಲ್ಕೊಂಡಾದ ಚಾರ್'ಮಿನಾರ್.ಲಾಹೋರಿನ ಲಾಲ್ ಮಸ್ಜಿದ್,ಗುಲಬರ್ಗಾದ ಬುಲಂದ್ ದರ್ವಾಜಾ,ದೆಹಲಿಯ ಕೆಂಪು ಕೋಟೆ,ಶ್ರೀನಗರದ ಶಾಲಿಮಾರ್ ಹೂದೋಟ ಇವೆಲ್ಲ ಇಸ್ಲಾಮಿನಿಂದ ಭಾರತೀಯತೆಗೆ ಸಂದ ವಿಶೇಷ ಕೊಡುಗೆಗಳು.ಇದಲ್ಲದರಿಂದ ಭಾರತ ಬಹಳಷ್ಟು ಪಡೆದುಕೊಂಡಿತೆ ವಿನಃ ಕಳಕೊಂಡದ್ದು ನಗಣ್ಯ.

ಅದೇಕಾಲಕ್ಕೆ ಒತ್ತಾಯದ ಸರಣಿ ಮತಾಂತರಗಳು,ಅದಕ್ಕೆ ಒಪ್ಪದ ಮೂಲಧರ್ಮೀಯರ ಮೇಲೆ ನಿರಂತರವಾಗಿ ಎಸಗಲಾದ ಜಜಿಯಾದಂತಹ ದೌರ್ಜನ್ಯ (ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಚೀಲರು ಎಂಬ ಚಿತ್ರದುರ್ಗ ಸೀಮೆಯ ಬೇಡರ ಸಾಮೂಹಿಕ ಮತಾಂತರ ಹಾಗೂ ದಕ್ಷಿಣಕನ್ನಡ ಜೆಲ್ಲೆಯಂಚಿಂದ ಹಿಡಿದು ಮಲಬಾರಿನವರೆಗೂ ನಡೆದ ಬೆಸ್ತಕುಲದ ಮರಕ್ಕಲರ ಬಲವಂತದ ಮತಾಂತರಗಳು ಅತ್ಯಂತ ಹೇಯವಾಗಿದ್ದವು).ಸನಾತನ ಧಾರ್ಮಿಕ ಶ್ರದ್ಧಾಕೇಂದ್ರಗಳ ಧ್ವಂಸ ಹಾಗು ಮಸೀದಿಗಳಾಗಿ ಅವುಗಳ ಪರಿವರ್ತನೆ (ಉದಾಹಾರಣೆಗೆ ಕಾಶಿಯ ವಿಶ್ವನಾಥ ಮಂದಿರ ಗ್ಯಾನವ್ಯಾಪಿ ಮಸೀದಿಯಾದದ್ದು-ಅವಧದ ರಾಮಲಲ್ಲಾನ ದೇವಾಲಯ ಬಾಬರಿ ಮಸೀದಿಯಾದದ್ದು-ರಾವಳಪಿಂಡಿಯ ಕಟಾಸರಾಜ ದೇಗುಲದ ನಿರ್ಮೂಲನೆ-ಆಗ್ರಾದ ತೇಜೋಮಂದಿರದ ತಾಜ್'ಮಹಲ್ ಪರಿವರ್ತನೆ-ಮಥುರೆಯ ಕೃಷ್ಣ ದೇಗುಲ ಇಸ್ಲಾಮಿ ಶ್ರದ್ಧಾಕೇಂದ್ರವಾಗಿದ್ದನ್ನು ಗಮನಿಸಬಹುದು) ಕಾಶಿ,ಮಥುರಾ,ಅಯೋಧ್ಯ,ಸೋಮನಾಥ,ಢಾಕಾ,ಗೊಲ್ಕಂಡಾ,ಕೇರಳದ ಕೊಚ್ಚಿನ್ ಪ್ರಾಂತ್ಯದ ಒಳನಾಡುಗಳಲ್ಲಿ, ಕಾಶ್ಮೀರದ ಸರ್ವಜ್ಞಪೀಠದ (ಸದ್ಯ ಪಾಕ್ ಆಕ್ರಮಿತ ಕಾಶ್ಮೀರದ ಭೂಭಾಗದಲ್ಲಿದೆ) ದೇವಾಲಯಗಳ ಮೇಲಿನ ಉದ್ದೇಶಪೂರ್ವಕ ಧಾಳಿ ಇವೆಲ್ಲ ಮತಾಂಧತೆಯ ಅತಿರೇಕಗಳಾಗಿದ್ದವು ಎನ್ನುವುದನ್ನು ಮರೆಯುವ ಹಾಗಿಲ್ಲ.

ಕ್ರಿಸ್ತಶಕ 1498ರಲ್ಲಿ ವಾಸ್ಕೋ-ಡಾ-ಗಾಮನ ನೇತೃತ್ವದಲ್ಲಿ ಭಾರತಕ್ಕೆ ಅಡಿಯಿಟ್ಟ ಯುರೋಪಿಯನ್ ವ್ಯಾಪಾರಿಗಳು ಮುಂದೆ ಇಡಿ ದೇಶವನ್ನೆ ರಾಜಕೀಯವಾಗಿ ಪ್ರಭಾವಿಸುವ ಮಟ್ಟಿಗೆ ಬೆಳೆದು,ಕಡೆಗೊಮ್ಮೆ ಕ್ರಿಸ್ತಶಕ 1622ರಲ್ಲಿ ಭಾರತ ಉಪಖಂಡ ಹೊಕ್ಕ ವಣಿಕರ ಸೋಗಿನ ಬ್ರಿಟಿಶ್ ಅತಿಕ್ರಮಣಕಾರರು ಕ್ರಮೇಣ ಬಲಿತು ಕ್ರಿಸ್ತಶಕ 1857 ರಲ್ಲಿ ಮೊಘಲರ ಕೊನೆಯ ನಾಮ್-ಕೆ-ವಾಸ್ತೆ ಬಾದಶಹನನ್ನು ಮಾಂಡಲೆಯ ಸೆರೆಮನೆಗೆ ಗಡಿಪಾರು ಮಾಡಿ ದೇಶದ ಆಡಳಿತದ ಚುಕ್ಕಾಣಿ ಹಿಡಿದುಕೊಳ್ಳುವ ಮೂಲಕ ಭಾರತೀಯ ಇಸ್ಲಾಮಿ ಸಾಮ್ರಾಜ್ಯಶಾಹಿಯ ಸೂರ್ಯ ಕೊನೆಗೂ ಮುಳುಗಿದ.ಆದರೆ ಕತ್ತಲಾದ ನಂತರವೂ ಅಲ್ಲಲ್ಲಿ ತಾರೆಗಳು ಹೊಳೆಯುವಂತೆ ಮೊಗಲ್ ಸಾಮಂತ ಸರದಾರರು ದೇಶದ ಅಲ್ಲಲ್ಲಿ ಒಂದೊ ಪ್ರಬಲ ಬ್ರಿಟಿಷರ ಸ್ನೇಹ ಸಾಧಿಸಿಯೋ ಇಲ್ಲವೆ ವೈರ ಕಟ್ಟಿಕೊಂಡೊ ಸ್ವತಂತ್ರವಾಗಿ,ತಮ್ಮ ಆಳ್ವಿಕೆಯನ್ನ ದೇಶ ರಾಜಕೀಯವಾಗಿ ಕ್ರಿಸ್ತಶಕ 1947ರಲ್ಲಿ ಬ್ರಿಟೀಷರಿಂದ ಸ್ವಾತಂತ್ರ ಪಡೆದ ಎರಡುವರ್ಷಗಳ ನಂತರದವರೆಗೂ ಉಳಿಸಿಕೊಂಡೆ ಬಂದರು.ಆಗಲೂ ಅವರಲ್ಲಿ ಕೆಲವರು ತಮ್ಮ ಧರ್ಮನಿಷ್ಠೆಗೆ ಅನುಸಾರವಾಗಿ ಸನಾತನ ಧರ್ಮಾನುಯಾಯಿಗಳ ಮೇಲೆ ಜಿದ್ದು ಸಾಧಿಸುವಂತೆ ನಡೆದುಕೊಂಡದ್ದೂ ಇತ್ತು.ಉದಾಹಾರಣೆಗೆ ಅಲ್ಪಾವಧಿಗೆ ಮೈಸೂರನ್ನು ಆಳಿದ ಟಿಪ್ಪೂ ಸುಲ್ತಾನ ಬಹಿರಂಗವಾಗಿ ಹಿಂದೂ ಶ್ರದ್ಧಾಕೇಂದ್ರವಾಗಿದ್ದ ಶೃಂಗೇರಿ ಶಾರದಾ ಪೀಠಕ್ಕೆ ಉದಾರ ದೇಣಿಗೆ ನೀಡುತ್ತಿದ್ದ ಅನ್ನುವುದು ಹೌದಾದರೂ (ಹಿಂದೂಗಳೇ ಆಗಿದ್ದ ಮರಾಠರು ಸಂಪತ್ತು ದೋಚುವ ದುರಾಸೆಯಿಂದ ಶೃಂಗೇರಿಗೆ ಧಾಳಿಯಿಟ್ಟು,ಮೂಲ ಶಾರದೆಮೂರ್ತಿಯನ್ನೆ ದ್ವಂಸ ಮಾಡಿ ಬರ್ಭರವಾಗಿ ಲೂಟಿ ಎಸಗಿದ್ದ ದಿನಗಳವು), ಅದೆ ಟಿಪ್ಪು ಮಲಬಾರ್ ಹಾಗೂ ಕೊಡಗಿನಲ್ಲಿ ಒತ್ತಾಯದಿಂದ ಕತ್ತಿಮೊನೆಯಂಚಲ್ಲಿ ಎಸಗಿದ್ದ ಮತಾಂತರಗಳನ್ನ ಮರೆಯುವುದು ಹೇಗೆ? ಅವನ ದಾನ ಬಹುಸಂಖ್ಯಾತ ಹಿಂದೂ ಪ್ರಜೆಗಳನ್ನ ಓಲೈಸಲು ಅವರ ಶ್ರದ್ಧಾಕೇಂದ್ರಗಳನ್ನ ಆತ್ಮೀಯವಾಗಿಟ್ಟುಕೊಳ್ಳುವ ಸರಳ-ಶುದ್ಧ ರಾಜಕೀಯ ನಡೆಯಾಗಿತ್ತು ಅನ್ನುವುದು ಸ್ಪಷ್ಟ.ಹಾಗೆಯೆ ಮತಾಂತರಗಳೂ ಕಟ್ಟರ್ ಇಸ್ಲಾಮಿಯಾಗಿ ಅವನ ಧರ್ಮಶ್ರದ್ಧೆ ವಿಧಿಸಿದ್ದ ಕರ್ತವ್ಯವೂ ಆಗಿತ್ತು.ನಮ್ಮ ಇಂದಿನ ಸಾಮಾಜಿಕ ಸಂಹಿತೆ ಹಾಗೂ ಕಾನೂನಿನ ಹಿನ್ನೆಲೆಯಲ್ಲಿ ಇತಿಹಾಸದ ಘಟನಾವಳಿಗಳನ್ನ ಒರೆಗೆ ಹಚ್ಚುವುದರಿಂದ ಆಗುವ ಎಡವಟ್ಟುಗಳು ಇವು ಅನ್ನೋದು ಸ್ಪಷ್ಟ.ಈಗಿನ ಜಾತ್ಯಾತೀತತೆಯ ಕಲ್ಪನೆಯೂ ಇದ್ದಿರದಿದ್ದ ಅಂದಿನ ಸಾಮಾಜಿಕ ಪರಿಸ್ಥಿತಿಗೆ ಬಹುಷಃ ಅದು ತಪ್ಪೆನಿಸುತ್ತಿರಲಿಲ್ಲವೇನೊ,ಆದರೆ ಇಂದಿನ ನಾಗರೀಕ ಕಾನೂನಿನ ಅಡಿಯಲ್ಲಿ ಅದು ಪ್ರಮಾದವಾಗಿ ಗೋಚರಿಸುತ್ತದೆ.

(ಇನ್ನೂ ಇದೆ)

No comments: