28 July 2013

ಕನಸಿಗೆ ನೂರು ಕವಲುಗಳಿವೆ....

ಹಿತ ಮೀರಿದ ಮೌನ
ಹಿಡಿತ ತಪ್ಪಿದ ಬಾಳಗಾನ....
ಸುಮಧುರವಾಗಿ ಉಳಿದಿಲ್ಲ
ಸಂಕಟದ ಸೂತಕ ಇನ್ನೂ ಕಳೆದಿಲ್ಲ,
ಇಂದಿನ ಅನುಭವ ನಾಳಿನ ನೆನಪು
ಅದರ ತೋರುಹಾದಿಯ ಬೆಳಕಿದ್ದರೇನೆ
ಬರಲಿರುವ ಬಾಳೆಲ್ಲ ಹೊಳಪು/
ಬಯಸಿದ್ದು ಕೈಗೆಟುಕಲಿಲ್ಲ
ಕೈಗೆಟುಕುವುದು ಮನಸಿಗೆ ಸಮ್ಮತವಿಲ್ಲ....
ನೆನಪಾದರೂ ಇವೆಯಲ್ಲ ಅಲ್ಪತೃಪ್ತನಿಗೆ
ಇದೇ ಸಾಕಷ್ಟಾಯಿತು,
ಚಲಿಸುವ ಕ್ಷಣಗಳ ಚಕ್ರದ ಮೇಲೆ
ಘಳಿಗೆಗಳ ಬಂಡಿ ಉರುಳಿ....
ಬೆಳಕು ಬಿರಿದಾಗ ನಿಶಾಪುಷ್ಪ
ಹಾಗೆಯೆ ಬಾಡಿ ಇನ್ನಿಲ್ಲವಾಯ್ತು.//


ಸಂಜೆಯ ಸಲುಗೆಗೆ ಇರುಳಲ್ಲಿ
ಬಾನಿತ್ತ ಮುತ್ತು ಬೆಳದಿಂಗಳು....
ಮುಂಜಾವಿನಲ್ಲಿ ನೆಲದ ಒಡಲಿಗೆ
ಮುತ್ತಿಡುತಾವೆ ನವಿರು ಕಿರಣದ ಕಣ್ಗಳು,
ಗಾಢ ಭಾವ ಅವ್ಯಕ್ತ
ಮಾತು ಪೇಲವ ಮೌನ ಮಾತ್ರ....
ಸರ್ವ ಜಂಜಡಗಳಿಂದ ಚಿರ ಮುಕ್ತ/
ಕಾಲ ಸವೆಯುತಿದೆ ಗಾಯ ಮಾಯುತ್ತಿಲ್ಲ
ನೀನಿತ್ತಿದ್ದ ಒಲವ ಸಾಲ ಇನ್ನೂ ಬಾಕಿಯುಳಿದೆ....
ಬಡ್ಡಿಯ ಹೊರತು ಬಡವ ನನ್ನಿಂದ
ಇನ್ನೇನನ್ನೂ ಕಟ್ಟಲಾಗುತ್ತಲೆ ಇಲ್ಲ,
ಹಣೆ ಬರಹ ನಿಸ್ಸಂಶಯವಾಗಿ ನನ್ನದೆ ಆಗಿತ್ತು
ಆದರೆ ಅದರ ಕೈ ಬರಹ ಮಾತ್ರ....
ಅನುಗಾಲ ನಿನ್ನದಾಗಿತ್ತು
ಕೇವಲ ನಿನ್ನದೆ ಆಗಿತ್ತು.//


ನಿನ್ನೊಂದಿಗಿನ ನನ್ನೊಲವನ್ನ
ಇನ್ಯಾರೊಂದಿಗೂ ನಾ ಹಂಚಿಕೊಂಡಿಲ್ಲ....
ಎಂದಿಗೂ ಹಂಚಿಕೊಳ್ಳುವುದೂ ಇಲ್ಲ,
ಕತ್ತಲ ಕಣ್ಗಳಲ್ಲಿ ಬೆಳದಿಂಗಳ ಹೊಳಪು
ಬೆಳಕು ಚೆಲ್ಲಿದ ಹಗಲಿನಲ್ಲಲ್ಲ....
ಕಡುಗತ್ತಲ ಇರುಳಿನಲ್ಲೆ ಕನಸಿಗೆ
ಹರಡೋದು ಆಕ್ಷಾಂಶೆಯ ಅಚ್ಚ ಬಿಳುಪು/
ಗಾನದ ಅಲೆಗಳ ಮೇಲೆ ತೇಲುವ
ಮನ ನೌಕೆಗೆ ದಿಕ್ಕಿಲ್ಲ ದೆಸೆಯಿಲ್ಲ....
ತೀರ ಮುಟ್ಟುವ ಹುಮ್ಮಸಿದ್ದರೂ
ದೂರ ದೂರದವರೆಗೆ ದಡವೂ ಕಾಣುತ್ತಿಲ್ಲ,
ಸಡಿಲ ಮಾತುಗಳಿಗಿಂತ
ಬಿಗಿ ಮೌನವೆ ಲೇಸು....
ನೋವು ಹನಿ ತೂಕ ಹೆಚ್ಚಿದ್ದರೂ
ನಿರರ್ಥಕ ನಲಿವಿಗಿಂತ ಆ ತಣ್ಣನೆ ಕ್ರೌರ್ಯವೆ ಕೊಂಚ ಸೊಗಸು.//


ಸಾಗದು ಸರಿಯಾದ ಪಥದಲ್ಲಿ ಮೋಡವೆಂದೂ
ಗಾಳಿಯ ಸಾಂಗತ್ಯದ ಹೊರತು....
ಸಾಗರದ ಗರ್ಭದಿಂದ ಹೊರಟ ನೀರ ಯವ್ವನದ ಪಯಣ
ಮತ್ತೆ ಮುಪ್ಪಾಗಿ ಕಡಲ ಒಡಲನ್ನೆ ಸೇರುವ ಮಧ್ಯೆ....
ಕಾಣುವ ನೆಲವೆಲ್ಲ ಅದರ ಪಾಲಿಗೆ ಹೊಚ್ಚ ಹೊಸದು,
ಸಹಜತೆಯ ನಿಖರ ಭಾವದಲ್ಲಿ
ನಿರಂತರ ಒಲವಿರೋದು ಖಂಡಿತ....
ಕೃತಕ ತೋರಿಕೆಯಲ್ಲೂ ಪ್ರಾಮಾಣಿಕ ಪ್ರೀತಿಯನ್ನರಸೋನು ಮಾತ್ರ
ನನ್ನಂತಹ ವಿರಾಗಿ ಮೋಹಾಂಧ ಪಂಡಿತ/
ಮೋಸದ ಮೋಡವ ನೆಲವೆಂದೂ
ಅಂಧ ಪ್ರೀತಿಯಲ್ಲಿ ನಂಬಬೇಕಿಲ್ಲ....
ಇಂದೇಕೋ ನಂಬಿಸಿ ವಂಚಿಸಿದ ಅದು ಹನಿಯಾಗಿ
ಒಲವ ಧರೆಯೆದೆಯ ಮೇಲೆ ಸುರಿಯಲೆ ಇಲ್ಲ,
ಇರುಳ ನೂಲಿನೆಳೆಯಲ್ಲಿ ಕಟ್ಟಿದ
ಕನಸಿನ ಹೂವುಗಳೆಲ್ಲ ಚದುರಿ ಬೇರೆಯಾಗಿದ್ದರೂ....
ವಾಸ್ತವದ ಕಠೋರತೆ ಅದೇಕೋ
ಜಡ್ಡುಗಟ್ಟಿದ ಮನಸಿಗೆ ಸಮ್ಮತವಾಗುತ್ತಲೆ ಇಲ್ಲ.//

27 July 2013

ನನ್ನ ಅಕಾಶ ಕಳೆದು ಹೋಗಿದೆ, ಯಾರಾದರೂ ಹುಡುಕಿಕೊಡಿ.....






ಮಲೆನಾಡಿನ ಸೆರಗಿನಡಿ, ಕರಾವಳಿಯ ಮೂಲೆಯ ಹಳ್ಳಿಯೊಂದರಲ್ಲಿ ನನ್ನ ಬಾಲ್ಯದ ಬಹು ಸಮಯ ಕಳೆದಿದ್ದರಿಂದ ಈ 'ಮಳೆ' ಅನ್ನುವ ಶಬ್ದವೆ ನನ್ನಲ್ಲಿ ಆಪ್ತತೆಯ ರೋಮಾಂಚನ ಮೂಡಿಸುತ್ತದೆ. ಕೇವಲ ಒಣ ವಿವಾರಣೆಗೆ ನಿಲುಕದ- ಬರಿ ಮಾತಿನಲ್ಲಿ ಹೇಳಿ ಮುಗಿಸಲಾಗದ ಅವ್ಯಕ್ತ ಸಂಭ್ರಮದ ನನ್ನ ಮತ್ತು ಮಳೆಯ ನಡುವಿನ ಅವಿನಾಭವ ಸಂಬಂಧವನ್ನ ಅದೇ ಗಾಢತೆಯೊಂದಿಗೆ ನನ್ನ ಬಯಲುಸೀಮೆಯ ಗೆಳೆಯರಿಗೆ ಮನದಟ್ಟು ಮಾಡಿಕೊಡಲಾರೆ. ಒಂದು ವೇಳೆ ಅಂತಹ ವ್ಯರ್ಥ ಪ್ರಯತ್ನಕ್ಕೆ ನಾನೊಮ್ಮೆ ಇಳಿದರೂ ಸಹ ಮುಂಬೈ, ಬೆಂಗಳೂರಿನಂತಹ ನಗರಗಳ ಕಪ್ಪು ಮಳೆಯನ್ನಷ್ಟೆ ನೋಡಿ ಗೊತ್ತಿರುವ ಅವರಿಗೆ ಪಶ್ಚಿಮಘಟ್ಟದ ಹಸಿರ ಮಧ್ಯದ ಸ್ಪಟಿಕದಂತಹ ಹನಿಗಳ ಆರ್ದ್ರತೆ ಬಹುಷಃ ಅರ್ಥವೂ ಆಗಲಾರದು. ಅದರೆಡಿಗಿನ ನನ್ನ ಮೋಹದ ಅರಿವೂ ಆಗಲಾರದು.


ಕೀಲುಕೊಟ್ಟ ಬೊಂಬೆಗಳಂತೆ ದಿನವಿಡಿ ದುಡಿವ ಅನಿವಾರ್ಯತೆಯಿರುವ ಈ ನಗರ ಜೀವನದಲ್ಲಿ ಆಗೊಮ್ಮೆ ಈಗೊಮ್ಮೆ ಬೀಳುವ ತುಂತುರು ಹನಿಗಳು ನನ್ನೊಳಗಿನ ಸುಶುಪ್ತ ಭಾವನೆಗಳನ್ನ ಬಡಿದೆಬ್ಬಿಸುತ್ತವೆ. ರಚ್ಚೆ ಹಿಡಿದ ಚಂಡಿ ಮಗುವಿನಂತೆ ದಿನವಿಡಿ ಪಿರಿಪಿರಿ ಸುರಿಯುತ್ತಲೆ ಇರುತ್ತಿದ್ದ ಊರ ಮಳೆ ಬೆಳಗ್ಗಿನಿಂದ ಸಂಜೆಯವರೆಗೂ ಕಣ್ಣಾಮುಚ್ಚಾಲೆ ಆಡುತ್ತಲೆ ಇರುತ್ತಿದ್ದು ಅಲ್ಲಿನ ಇನ್ನೆಲ್ಲರಂತೆ ನಾನೂ ಬಡ್ಡುಗಟ್ಟಿ ಅದಕ್ಕೆ ಒಗ್ಗಿ ಹೋಗಿದ್ದೆ. ಕೆಲವೊಮ್ಮೆ "ಶನಿಮಳೆ"ಎಂಬ ತಾತ್ಸಾರ ಹುಟ್ಟುತ್ತಿದ್ದರೂ ಸಹ ಅವೆಲ್ಲ ಆ ಕ್ಷಣದ ಪ್ರತಿಕ್ರಿಯೆಗಳಾಗಿರುತ್ತಿದ್ದು ಮರು ಘಳಿಗೆ ಅದು ಸ್ಮೃತಿ ಪಟಲದಿಂದ ಬಿದ್ದ ಅದೆ ಮಳೆಯ ಹನಿಗಳಿಗೆ ಸಿಕ್ಕು ಅಳಿಸಿ ಹೋಗಿರುತ್ತಿತ್ತು.


ಸುಖಾಸುಮ್ಮನೆ ಆಗಾಗ ಸಿಟ್ಟಿಗೆ ಪ್ರೇರೇಪಿಸುತ್ತಿದ್ದರೂ ಸಹ ಇನ್ನೊಮ್ಮೆ ಪ್ರೀತಿಯುಕ್ಕಿಸುತ್ತಿದ್ದ ಈ "Love And Hate" ಸಂಬಂಧ ಅನೇಕ ಕ್ಷುಲ್ಲಕ ಸಂಗತಿಗಳೊಂದಿಗೆ ತಳುಕು ಹಾಕಿಕೊಂಡಿದ್ದರೂ ಅದರ ಮೌಲ್ಯ ನನ್ನ ಪಾಲಿಗೆ ಬೇರಾವುದೆ ಐಶಾರಾಮಿ ಅಮಿಷಗಳಿಗಿಂತಲೂ ಮಿಗಿಲಾಗಿದೆ. ರಬ್ಬರಿನ ಹವಾಯಿ ಚಪ್ಪಲಿಗಳಿಗಿಂತ ಬೆಲೆಬಾಳುವ ಪಾದರಕ್ಷೆಗಳು ಕೇವಲ ಕನಸಾಗಿದ್ದ, ಕೆಲವೆ ಸ್ಥಿತಿವಂತ ಸಹಪಾಠಿಗಳು ಶಾಲೆಯಲ್ಲಿ ಧರಿಸಿ ಮೆರೆಯುತ್ತಿದ್ದ ಪ್ಲಾಸ್ಟಿಕ್ಕಿನ ಅಥವಾ ಚರ್ಮದ ಹೊಳೆವ ಚಪ್ಪಲಿಗಳನ್ನೆ ಆಸೆ ಕಣ್ಗಳಿಂದ ನಿರುಕಿಸುತ್ತಿದ್ದ ಬಾಲ್ಯದ ಆ ದಿನಗಳ ಮಳೆಯ ವ್ಯಾಖ್ಯೆ ಈಗಿನದ್ದಕ್ಕಿಂತ ತೀರ ಭಿನ್ನವಾಗಿತ್ತು. ವರ್ಷಕ್ಕೆ ಸರಿಸುಮಾರು ಒಂಬತ್ತು ತಿಂಗಳ ಅತಿಥಿಯಾಗಿದ್ದ, ಹತ್ತಿರ ಹತ್ತಿರ ಇನ್ನೂರಿಂಚು ವಾರ್ಷಿಕ ದಾಖಲೆಯಿರುತ್ತಿದ್ದ ಸುರಿವ ಜಡಿಮಳೆಯನ್ನ ಹೀರಿಹೀರಿ ನಮ್ಮೂರ ಗದ್ದೆಗಳೆಲ್ಲ ಕೆರೆಯಂತಾಗಿರುತ್ತಿದ್ದವು. ಒಂದೆರಡು ದಿನ ನೇಗಿಲು ಹೂಡಿ ಬೀಜ ಚಲ್ಲಿದರೆ ಸುಲಭವಾಗಿ ಭರ್ಜರಿ ಬೆಳೆ ತೆಗೆಯ ಬಹುದಾದಷ್ಟು ಫಲವತ್ತಾದ ಕೆಸರು ತುಂಬಿಕೊಂಡಿರುತ್ತಿದ್ದ ನಮ್ಮೂರಿನ ರಾಜರಸ್ತೆಗಳಲ್ಲಿ ರಬ್ಬರಿನ ಹವಾಯಿ ಚಪ್ಪಲಿ ತೊಟ್ಟು ಬೆನ್ನಿಗೆ ಚೀಲವನ್ನೇರಿಸಿ ಹೊರಟವರು ಶಾಲೆ ತಲುಪಿ ನೋಡಿಕೊಂಡರೆ ಹಡಿಗೆ ಕೆಸರು ಬೆನ್ನಿಗೆಲ್ಲ ಸಿಡಿದ್ದಿದ್ದನ್ನ ಕಂಡು ಹಾಳು ಮಳೆಯ ಈ ಮಸಲತ್ತಿನ ಬಗ್ಗೆ ಸಿಕ್ಕಾಪಟ್ಟೆ ಸಿಟ್ಟು ರುಮ್ಮನೆ ತಲೆಗೇರುತ್ತಿತ್ತು.



ಇಷ್ಟಕ್ಕೆ ಸೀಮಿತವಾಗಿರುತ್ತಿರಲಿಲ್ಲ ಕಿಡಿಗೇಡಿ ಮಳೆಯ ಇಂತಹ ಥರೇವಾರಿ ಕಿತಾಪತಿ. ನಮ್ಮ ಬೀದಿಯ ಕಪಿ ಸೈನ್ಯದ ಹಾವಳಿಗಳನ್ನೆಲ್ಲ ಕಿಂಚಿತ್ತೂ ಸಹಿಸದ ಹಿರಿಯರೆಲ್ಲ ರಜಾದಿನಗಳಲ್ಲಿ ಎಲ್ಲರನ್ನೂ ನಿರ್ದಾಕ್ಷಿಣ್ಯವಾಗಿ ಮನೆಯಿಂದ ಹೊರಗಟ್ಟಿ ಪದೆಪದೆ ಕೆಸರನ್ನ ಮನೆಯುದ್ದ ಪಸರಿಸದಂತೆ ಸದಾ ಮುಂಬಾಗಿಲನ್ನ ಜಡಿದಿರುತ್ತಿದ್ದರು. ಆದರೆ ಮಿತಿಮೀರಿದ ತಂಟೆಕೋರತನ ತೋರುತ್ತಿದ್ದ ನಾವೆಲ್ಲ ಕಣ್ಣಮುಚ್ಚಾಲೆ ಆಡುವ ನೆಪದಲ್ಲಿ ಯರ್ಯಾರದೋ ಹಿತ್ತಲು, ಇನ್ಯಾರದೋ ಉಪ್ಪರಿಗೆ, ಮತ್ಯಾರದೋ ಅಟ್ಟ, ಮತ್ತಿನ್ಯಾರದೋ ಹಟ್ಟಿಗಳಲ್ಲಿ ಭೂಗತರಾಗಿ ತಲೆ ಮರೆಸಿಕೊಂಡು - ನಮ್ಮನ್ನು ಹಿಡಿದೆ ತೀರುವ ಘನಂದಾರಿ ಉದ್ದೇಶದಿಂದ ಸರ್ಚ್ ವಾರೆಂಟ್ ಇಲ್ಲದೆಯೆ ಎಲ್ಲೆಂದರಲ್ಲಿ ನುಗ್ಗುವ ನಮ್ಮ ಸ್ಕಾಟ್ ಲ್ಯಾಂಡ್ ಯಾರ್ಡ್ ಸ್ನೇಹಿತರ ಲೂಟಿಯಿಂದ ಹಿರಿಯರ ಮುಂಜಾಗ್ರತಾ ಕ್ರಮಗಳೆಲ್ಲ ವಿಫಲವಾಗುತ್ತಿದ್ದಾಗ ಅವರ ಆಕ್ರೋಶಕ್ಕೆ ತುತ್ತಾಗಿ ಅಡಗುತಾಣಗಳ ಕೊರತೆಯಿಂದ ಪರದಾಡುತ್ತಿದ್ದಾಗ ವರದಂತೆ ಒದಗಿ ಬಂದದ್ದು ನಮ್ಮ ಮನೆ ಹತ್ತಿರವೇ ಇದ್ದ ಒಂದು ಮಳೆನೀರು ಹರಿದು ಹೋಗುವ ಚರಂಡಿಯ ಕೊರಕಲು. ಯುಪಟೋರಿಯಂ ಜಿಗ್ಗು ಬೆಳೆದು ಮರೆಯಾಗಿದ್ದ ಆ ಸ್ಥಳ ನಮಗೆಲ್ಲ ಅಂಡರ್ ಗ್ರೌಂಡಾಗಲು ಎಲ್ಲಾ ರೀತಿಯಿಂದ ಪ್ರಶಸ್ತವಾಗಿದ್ದರೂ ಎಡೆಬಿಡದ ಮಳೆಯಲ್ಲಿ ಅಲ್ಲಿ ಕೂರುವುದು ಅಸಾಧ್ಯವಾಗಿ, ಹಾಗೊಂದು ವೇಳೆ ಕಷ್ಟಪಟ್ಟು ಕೂತರೂ ಅಲ್ಲಿನ ಮೂಲ ನಿವಾಸಿಗಳಾದ ಸೊಳ್ಳೆಗಳ ಅಸಹನೆಗೆ ತುತ್ತಾಗ ಬೇಕಾಗಿರುತ್ತದಾದ್ದರಿಂದ ಕೇಡಿ ಮಳೆಗೆ ಸಹಜವಾಗಿಯೆ ಆಗೆಲ್ಲ ನೊಂದ ನಮ್ಮಂತಹ ನಿರಾಶ್ರಿತರ ಶಾಪಗಳು ಸಲ್ಲುತ್ತಿದ್ದವು. ಹೀಗೆ ಸಿಕ್ಕಿ ಹಾಕಿಕೊಂಡು ಔಟಾದ ಸಂದರ್ಭಗಳಲ್ಲೆಲ್ಲ ಮಳೆಗೆ ಮನಸ್ವಿ ಶಾಪ ಹಾಕಿ ಸಿಟ್ಟು ತಣಿಸಿಕೊಂಡರೂ ಮಳೆ ನಿಂತ ಮರುಕ್ಷಣ ಅಲ್ಲಿಯೆ ಅಡಗಿ ಆಟವನ್ನ ಬಿಟ್ಟಲ್ಲಿಂದಲೆ ಮುಂದುವರೆಸುತ್ತಿದ್ದವು!



ಮಳೆಯ ನಿತ್ಯದ ಧಾಳಿಗೆ ಸಿಲುಕಿ ಪಾಚಿಯ ಪದರ ಕಟ್ಟಿಕೊಂಡು ಜಾರುತ್ತಿದ್ದ ಮುರಕಲ್ಲಿನ ಅಂಗಳದಲ್ಲಿ ನಡೆಯಲೆಂದೆ ಹಾಸಿದ್ದ ತೆಂಗಿನ ಮಡಿಲ ಮೇಲೆ ನಡೆಯದೆ ಮಂಗಾಟ ಮಾಡಿ ಜಾರಿ ಬಿದ್ದು ಮೈ-ಕೈ ತರುಚಿದಾಗ ತುಟಿಯುಬ್ಬಿಸಿ ಅಳು ಬರಿಸಿಕೊಂಡದ್ದು, ಮಳೆಯ ಅರ್ಭಟ ಏಕಾಏಕಿ ಹೆಚ್ಚಿದಾಗ ಇನ್ನೂ ದಿನದವಧಿ ಉಳಿದಿದ್ದರೂ ನಡುವಿನಲ್ಲೆ ಶಾಲೆಗೆ ದಿನದ ರಜೆ ಘೋಷಿಸಿದ್ದಾಗ "ಹೋ...." ಎಂದು ಸಾಮೂಹಿಕವಾಗಿ ಕಿರುಚಿಕೊಂಡು ಸಂತೋಷದ ಅತಿರೇಕವನ್ನ ಆಂಗಿಕವಾಗಿಯೂ ಪ್ರಕಟಿಸುತ್ತಾ ಮನೆಯತ್ತ ಪೇರಿ ಕೀಳುತ್ತಿದ್ದುದು, ಮರಳಿ ಮನೆಗೆ ನುಗ್ಗಿದಾಗ ಮಳೆಗಾಲದ ಸಂಜೆಗಳಿಗಷ್ಟೆ ಸೀಮಿತವಾಗಿರುತ್ತಿದ್ದ ಸುಟ್ಟ ಹಲಸಿನ ಬೀಜ- ಹಪ್ಪಳ ಕಟಕರಿಸುತ್ತಿದ್ದುದು, ಆಡ್ಡ ಮಳೆಗೆ ಸೂರಿನ ಸಂದಿಗೊಂದಿಗಳಿಂದ ಸುರಿಯುತ್ತಿದ್ದ ನೀರಿನ ಪರಿಮಾಣಕ್ಕನುಗುಣವಾಗಿ ಇಟ್ಟಿರುತ್ತಿದ್ದ ಚೊಂಬು-ಬೋಗುಣಿ-ಪಾತ್ರೆಗಳಿಂದ ನೀರ ಹೊಡೆತಕ್ಕೆ ಮೂಡುತ್ತಿದ್ದ ಏಕನಾದವನ್ನೂ, ಅದರ ಸ್ವರ ಮಾಧುರ್ಯಕ್ಕೆ ಅಂಗಳದ ಮೂಲೆಯಿಂದಲೆ ಲಯಬದ್ಧವಾದ ಪಕ್ಕವಾದ್ಯದ ಸಾಥ್ ನೀಡುತ್ತಿದ್ದ ಗೋಂಕ್ರ ಕಪ್ಪೆಗಳ ಒಟಗುಡುವಿಕೆಯನ್ನ ಅಮರ ಸಂಗೀತ ಪ್ರೇಮಿಯಂತೆ ಆಸ್ವಾದಿಸುತ್ತಾ ಅರೆನಿಮೀಲಿತ ಕಣ್ಣುಗಳಲ್ಲಿ ಹಗಲು ಕನಸು ಕಾಣುವುದರಲ್ಲೆ ಮುಳುಗಿದ್ದಾಗ ಹಿರಿಯರ್ಯಾರಾದರೂ ತಲೆಗೆ ಮೊಟಕಿದಾಗಲೆ ಅನಿವಾರ್ಯವಾಗಿ ವಾಸ್ತವ ಪ್ರಜ್ಞೆಗೆ ಮರಳುತ್ತಿದ್ದುದು. ಇಂದು ಇವೆಲ್ಲ ಯಾವುದೋ ಕ್ರಿಸ್ತಪೂರ್ವದ ಶಿಲಾಯುಗದಲ್ಲಿಯೆ ಕಳೆದು ಹೋದವೇನೋ ಎಂದೆನಿಸಿ ಮನಸಿಗೆ ಪಿಚ್ಚೆನಿಸುತ್ತದೆ.


ಅಂದು ಶಾಲೆಯ ಹಾದಿಯಲ್ಲಿ ಸಿಗುತ್ತಿದ್ದ ಮಳೆನೀರಿನ ತೋಡಿನಲ್ಲಿ ಮುಗುಡು, ಹಿಂಡು ಹಿಂಡಾಗಿ ತೇಲುವ ಗೊದಮೊಟ್ಟೆಗಳನ್ನ ಹಿಡಿಯುವ ಭರದಲ್ಲಿ ಅದೇ ನೀರಿನಲ್ಲಿ ಎದ್ದೂಬಿದ್ದು ಮೈಯೆಲ್ಲ ಕೆಸರಾದರೂ ಅನುಭವಿಸುತ್ತಿದ್ದ ಆ ದಿನಗಳ ಥ್ರಿಲ್ ಇಂದು ಕೊಂಚವೂ ಇಸ್ತ್ರಿ ಕೆಡದ ಹವಾನಿಯಂತ್ರಿತ ಸ್ಟುಡಿಯೋದೊಳಗೆ ಮೈಕ್ರೋಫೋನಿನೊಂದಿಗೆ ನಡೆಸುವ ಸರಸ ಸಲ್ಲಾಪದಲ್ಲಿ ಸಿಗದೆ ಹೋಗಿ ಪರಮ ನಿರಾಶೆಯಾಗುತ್ತದೆ. ಮಳೆನೀರಿಗೆ ನೆನೆನೆನೆದು ಹುಳವಾಗಿ ಬಿಳುಚಿಕೊಂಡ ಕಾಲು ಬೆರಳ ಸಂದಿಗಳು ನೀಡುತ್ತಿದ್ದ ನವಿರು ತುರಿಕೆಯ ಹಿತ ಕಾಲುಚೀಲ ಹಾಗೂ ಶೂನೊಳಗೆ ಹುದುಗಿ ಬೆಚ್ಚಗಿರುವ ಸುಖದ ಪಾದಕ್ಕೆ ಬೇಕೆಂದರೂ ಸಿಗುತ್ತಿಲ್ಲ. ಆದರೂ ಅಪರೂಪಕ್ಕೊಮ್ಮೆ ಎರಡು ಹನಿ ಬಾನಿನೊಡಲಿಂದ ಕೆಳಗೆ ಸುರಿದಾಗ ಕಿಟಕಿಯ ಮುಂದೆ ಆರಾಮವಾಗಿ ಕುಳಿತು ಮಳೆಯನ್ನೆ ನೋಡುತ್ತಾ ಹಬೆಯಾಡುವ ಚಹದ ಕಪ್ಪನ್ನು ಸಶಬ್ದವಾಗಿ ಗುಟುಕರಿಸುವಾಗ ಹಳೆಯ ನೆನಪುಗಳಲ್ಲಿ ಮನ ಲೀನವಾಗಿ ಪ್ರಫುಲ್ಲವಾಗುತ್ತದೆ.


ಮನೆಯ ತೆರೆದ ಜಗುಲಿಯ ಅಂಚಿನಲ್ಲಿ ಕಂಭವನ್ನ ಬಳಸಿ ನಿಂತು ಮಾಡಿನಿಂದ ಸುರಿಯುತ್ತಿದ್ದ ಮುಗಿಲ ಸ್ವೇದಬಿಂದುಗಳಿಗೆ ಅಂಗೈ ಒಡ್ದುತ್ತಿದ್ದಾಗಲಿನ ಅವರ್ಚನೀಯ ಸುಖದ ಸವಿ ಇಂದು ಇಲ್ಲದಿದ್ದರೂ "ಕುರುಡುಗಣ್ಣಿಗಿಂತ ಮಳ್ಳೆಗಣ್ಣು ಲೇಸು" ಎನ್ನುವ ಅಲ್ಪತೃಪ್ತಿಗೆ ಒಗ್ಗಿ ಹೋಗಿದೆ ಮನಸು. ಹಸಿರ ಹಚ್ಚಡದ ನೆಲ, ಮೋಡದಿಂದ ತುಂಬಿದ ಆಕಾಶ ಇವನ್ನಷ್ಟೆ ನೋಡಿ ಗೊತ್ತಿದ್ದ ನನಗೆ ಆ ದಿನಗಳಲ್ಲಿ ಆನುಭವಕ್ಕೆ ಸಿಗುತ್ತಿದ್ದ ಹೊಸತನ ಈಗ ಮಹಡಿ ಮೇಲಿನ ಜರೋಕದಿಂದ ಕಾಣಸಿಗುವ ಶುಭ್ರ ಬಾನಿನಲ್ಲಿ ಕಸದಂತೆ ಅಲ್ಲಲ್ಲಿ ತೇಲುವ ಅಲ್ಪಸ್ವಲ್ಪ ಮೋಡಗಳನ್ನ ಆಸೆಬುರುಕನಂತೆ ಕಣ್ತುಂಬಿಸಿಕೊಳ್ಳುವಾಗ ಅರಿವಿಗೆ ಬರುತ್ತಿಲ್ಲ. ನನ್ನ ವಾಸದ ಸ್ಥಳದ ಪಕ್ಕದಲ್ಲಿಯೆ ಪೆಡಂಭೂತದಂತೆ ತಲೆಯೆತ್ತುತ್ತಿರುವ ಬಹು ಮಹಡಿ ಕಟ್ಟಡದ ದೆಸೆಯಿಂದ ನನ್ನ ಈ ತುಣುಕು ಆಕಾಶವೂ ಕಾಣೆಯಾಗಿ ಹೋಗಿ ಇನ್ನೇನು ಈ ಕನಿಷ್ಠ ಸುಖವೂ ಮರೀಚಿಕೆಯಾಗಲಿದೆ. ಮನಸು ಖಾಲಿ ಖಾಲಿ. ನನ್ನ ಬಾನ ನೀಲಿಯೆಲ್ಲೋ ಕರಗಿ ಹೋಗಿದೆ.



( ಈ ಲೇಖನ ಬರೆದದ್ದು ೨೦೦೪ರ ಮೊತ್ತಮೊದಲನೆಯ ದಿನದಂದು. ಇದು ಅದೇ ತಿಂಗಳು "ಕನ್ನಡಪ್ರಭ"ದ 'ಸಾಪ್ತಾಹಿಕ ಪ್ರಭ'ದಲ್ಲಿ ಆರಂಭವಾಗಿದ್ದ "ಜಗಲಿ" ಅಂಕಣದಲ್ಲಿ ಪ್ರಕಟವೂ ಆಗಿತ್ತು. ಇನ್ಯಾವುದೋ ಪ್ರಕರಣವೊಂದರ ಬಗ್ಗೆ ಪರಿಚಿತ ಅಂಕಣಕಾರರೊಬ್ಬರ ಜೊತೆ ಮಾತನಾಡುವಾಗ ನೆನಪಾಗಿ ಇಲ್ಲಿ ಏರಿದೆ. ಆಗಿನ ಆರಂಭದ ಬರವಣಿಗೆ ಈಗ ಓದುತ್ತಿದ್ದರೆ ತೀರ ಜಾಳುಜಾಳು ಎನಿಸುತ್ತಿದೆ.)

25 July 2013

ವಿಜಯದ ಸಿಹಿ ನೆನಪಿನಲ್ಲಿ ಶೋಕದ ಸೂತಕವೂ ಇದೆ.....

ಕಾರ್ಗಿಲ್‍‍ನಲ್ಲಿ ಜೀವ ತೆತ್ತು ದೇಶದ ಮಾನ ಕಾಯ್ದ ವೀರ ಯೋಧರ ಸ್ಮರಣೆಯ "ವಿಜಯ ದಿವಸ" ಇವತ್ತು. ದೇಶಕ್ಕಾಗಿ ತ್ಯಾಗ ಮಾಡಿದ ಅವರ ಆತ್ಮಗಳಿಗೆ ನಮ್ಮ ನಮ್ರ ನೆನಹುಗಳು ಸಲ್ಲುತ್ತವೆ.


ರೋಡೆ ಇಲ್ಲ!, ಇಳಿ ಅಂದ್ರೆ ರಾಧಿಕ ಇಳಿಯೋದಾದ್ರೂ ಎಲ್ಲಿಗಣ್ಣಾ?!



ಕೆರೆಗಳ ಊರಾಗಿದ್ದ ಬೆಂಗಳೂರಿಗೆ ಮತ್ತೆ ಆಳುವ ಮಂದಿಯ ಕೃಪೆಯಿಂದ ಹಳೆಯ ಕಳೆ ಬಂದೈತೆ. ಬಿದ್ದ ಹನಿ ಮಳೆಗೂ ಊರೆಲ್ಲ ಕೆರೆಗಳೆ ಲಕಲಕಿಸುತ್ತೈತೆ. ಕಾರಿನಡಿಗೆ ನಾಯಿ ಕುನ್ನಿ ಬಂದರೆ ಅಯ್ಯೋ ಅನಿಸೋದತ್ಲಾಗಿರಲಿ ಇಲ್ಲಿ ಹಡಗಿನಂತ ಕಾರೊಳಗೆ ಕೂತವನದ್ದೂ ರೋಡಿಗಿಳಿದ ಕೂಡ್ಲೆ ನಾಯಿ ಪಾಡಾಗ್ತೈತಣ್ಣೋ. ಇನ್ನು ಸುಡುಗಾಡು ಬೈಕು ಬಿಡೋರಂತೂ ಆಳುವವರನ್ನ ನಿತ್ಯ "ಮಾತೃಭಾಷೆ"ಯಿಂದಲೆ ಸಿಕ್ಕಸಿಕ್ಕ ಸಿಗ್ನಲ್ನಲ್ಲಿ ಬೈದು ಮುಂದೆ ಸಿಗುವ ಗುಂಡಿಯನ್ನ ಹಾರಕ್ಕೆ ತಮ್ಮ ತಮ್ಮ ಗುಂಡಿಗೆಯನ್ನ ಗಟ್ಟಿ ಮಾಡ್ಕೊಳ್ಳದು ಕಾಣಕ್ ಸಿಗ್ತೈತೆ.


ಇಧಾನಸೌಧದಲ್ಲಿ ರಣ್ಣ, ರಪ್ಪ, ರಯ್ಯ ಯಾರು ಬಂದು ಕುಂತ್ರೂ ನಾವು ನೀವು ದಿನನಿತ್ಯ ಗುಂಡಿಯಿಂದ ಗುಂಡಿಗೆ ಹಾರೋ ತಾಪತ್ರಯ ತಪ್ತೈತೇನಣ್ಣೋ? ಅವ್ರುಗೇನು ಬೇರೆ ಕೇಮೆ ಹೇಳಿ, ಬೇಕಾದಾಗ ಬೇಕಾದ್ ಕಡೆ ಒಂಟೋಗಕ್ಕೆ ಇನ್ನೂ ತನ್ನ ಇಮಾನದ ಡ್ರೈವರ್-ಕ್ಲೀನರ್ ಗಳಿಗೆಲ್ಲ ಸಂಬ್ಳಾ ಕೊಡಕಾಯ್ದೆ ಇದ್ರೂ ಅದೇ ಇಮಾನದ ಚಂದುಳ್ಳಿ ವೇಟರ್ ಗಳ ಜ್ಯೊತೆ ಗೋವಾ ಟ್ರಿಪ್ಪಾಕ್ಕೊಂಡು, ಅವ್ರ ಸೊಂಟ ಸವರ್ ಕೊಂಡ್ ಹೊಸವರ್ಸದ ಒಸಾ ಒಸಾ ಕ್ಯಾಲೆಂಡರ್ ಪೊಟೋ ಹೊಡ್ಸಾದ್ರಲ್ಲೆ ಸ್ಯಾನೆ ಬಿಜಿಯಾಗಿರೋ ಮಲ್ಯ ಸಾಹೆಬ್ರ ಕಂಪಿಣಿ ಬಿಟ್ಟಿರೋ ಎಲಿಕಾಪ್ಟರ್ ಐಯ್ತೆ. ಅಂಗೂ ರಸ್ತೆ ಮ್ಯಾಲೆೋಗ್ಲೇ ಬೇಕಾಯ್ತದೆ ಅನ್ನೋ ದರಿದ್ರ ಬಂದ್ರೆ ಅದ್ಯಾರೋ ಬೀದರ್ ಕಡೆಯ ಕಳ್ಳನನ್ನ "ಮಕ್ಕಳ ಪಕ್ಸ"ದ ಪಕ್ಕ ಬದ್ಮಾಸ್ ಸಾಸ್ಕಾ "ನೈಸಾ"ಗಿ ಕಾಸಿನ "ಏಣಿ" ಮೇಲೆ ನಿಂತೆ ಮಾಡಿಸ್ ಕೊಟ್ಟಿರೋ ಸಿಮೆಂಟ್ ರೋಡಯ್ತೆ. ಇಂಗಾಗಿ ಈ "ತೆನೆ ಒತ್ತ ರೈತ ಮಹಿಳೆ"ಯ ಪಕ್ಸ ಇರ್ಲಿ, ನೀರೆಲ್ಲ ಸೀದೋಗಿರೋ "ಗರಟದ ಪಕ್ಸ"ದವ್ರೆ ಬರ್ಲಿ, ಎಲ್ರೂ "ರೋಡ್ ಮಾಡ್ಕೊಡ್ರಣ್ಣೋ" ಅಂದೇಟಿಗೆ ರಸ್ತೆ ಮೇಲೆ ನಡೆಯೊ ನಮ್ಮ ನಿಂಮ್ಮಂತವ್ರ ಕಿವಿಗೆ ತಂದ್ ಮಡ್ಗಾದು "ಕಮಲ"ದ ಊವನ್ನೆಯ. ಗೆದ್ ಮೇಲೆ ಕೊಡಾದು ತಮ್ಮ ಎಡ "ಕೈ"ನೇಯ. ಎಲೆಕ್ಸನ್ ಆದ್ ಮ್ಯಾಕೆ ತಮ್ಮ ಭವ್ಯ ಭವಿಸ್ಯಕ್ಕೆ ಚೂರೆ ಚೂರು ಉಳಿತಾಯ ಮಾಡ್ಕಳಾದ್ರಲ್ಲಿ ಅವ್ರೆಲ್ಲ ಸ್ಯಾನೆ ಬಿಜಿ ಆಗವ್ರೆ.


ಇನ್ನು "ಕೈ" ಪಾರ್ಟಿ ಸರ್ಕಾರದ ನಮ್ ಸಿದ್ರಾಮಣ್ಣನೋ. ಈಗ ಮಾಡಿರೋ ರೂಪಾಯಿಗೊಂದ್ ಕೇಜಿ ಅಕ್ಕಿಯ "ಅನ್ನಭಾಗ್ಯ" ಕೊಟ್ಟು ತಿಂಗ್ಳಾ ತಿಂಗ್ಳಾ ಅಕ್ಕಿ ತಗೊಳಕ್ಕೆ ಹೋಗವ್ರಿಗೆ ಸ್ಯಾನೆ ಚಿಲ್ರೆ ಪ್ರಾಬ್ಲಂ ಆಗಿ ತಲೆ ಕೆಟ್ ಹೋಗಿ, "ಈ ಕೇಮೆನೆ ಬ್ಯಾಡ ಕಣ್ಲಾ ಬುಡತ್ಲಾಗೆ" ಅಂತ ಈಗ ರೇಸನ್ ಕಾರ್ಡ್ ಜೊತೆಗೆ ತಮ್ ತಮ್ಮ ಕ್ರೆಡಿಟ್ ಕಾರ್ಡುನ್ನೂ ಹೊತ್ಕಂಡೆ ಸೊಸೈಟಿಗೆ ಓಗೋ ಅಂಗ್ ಮಾಡೈತೆ. ಇದೂ ಸಾಲ್ದು ಅಮ್ತಾ ಆಲು ಕರ್ದು ಸೊಸೈಟಿಗೆ ಆಕೋವ್ರಿಗೆ ನಾಕ್ ನಾಕ್ ರೂಪಾಯಿ ಪ್ರೋತ್ಸಾಹ ಧನ ಕೊಟ್ಟು, ಆ ಆಸೆಗೆ ಅವ್ರು- ಅದೇ ನಂ ಅಳ್ಳಿ ರೈತ್ರು ಎರ್ರಾಬಿರ್ರಿ ದನಿನ್ ಕೆಚ್ಲು ಇಂಡಿ ಇಪ್ಪೆ ಮಾಡಿ ತಂದ್ ಸೊಸೈಟಿಲಿ ಸುರ್ಯೋ ಆಲನ್ನ ಊರ್ ತುಂಬ ಮಕ್ಳಿಗೆ ಪುಕ್ಸಟ್ಟೆ ಕುಡ್ಸೋ "ಆಲು ಭಾಗ್ಯ" ಮಾಡೆ ಬುಡ್ತೀನಿ ಅಮ್ತಾ ಟೊಂಕ ಕಟ್ಕಂಡು ನಿಂತಯ್ತೆ. ಅಂಗೆ ಅದೆ ಮಕ್ಳ ಅಲ್ಕಾ ಅಪ್ಪಂದ್ರುಗೆ ಒಂದು "ಅಲ್ಕೋ ಆಲು ಭಾಗ್ಯ"ನೂ ಮಾಡಿಸಿಕೊಟ್ರೆ ಈಯಪ್ಪನ್ ಗಂಟೇನಾದ್ರೂ ಸವೀತೈತಾ ಅಂತ!


ಅದೆಲ್ಲ ಆಳಾಗಿ ಓಗ್ಲಿ ಒಂದೀಟು ಕೇಂದ್ರ ಸರ್ಕಾರನಾರೂ ಕಣ್ ಬಿಟ್ ನೋಡ್ತೈತಾ ಅಂತ ತಿಥಿ ಮನೆ ಮುಂದೆ ಬರಗೆಟ್ಟು ಕೂತ ಕಾಗೆ ತರ ಬಾಯ್ ಬಾಯ್ ಬುಟ್ಕೊಂಡು ಕಾದ್ರೆ ಆ ಒಟ್ಟೆ ತುಂಬಿದ್ ಜನ್ಗೊಳು ದಿನಕೊಂದೀಟು ರೇಟ್ ಜಾಸ್ತಿ ಮಾಡಿ ಇದೇ "ಪೆಟ್ರೋಲು ಭಾಗ್ಯ" ಕಣ್ರಯ್ಯ ಅಂತ ನಮ್ಮೆಲ್ರ ಕಿವಿ ಮೇಲೆ ನಿತ್ಯ ಒಸಾ ಒಸಾ ಊ ಇಡ್ತವ್ರೆ. ಇತ್ಲಾಗೆ ರೋಡೂ ಇಲ್ಲ- ಅತ್ಲಾಗೆ ಇರೋಬರೋ ಕಾಸೆಲ್ಲ ಪೆಟ್ರೋಲಿಗೆ ಖರ್ಚಾಗಿ ವಾರಕ್ಕೊಂದಪ ಬಾಡೂ ಇಲ್ಲ. ನಮುಗ್ ಬಂದ ದುರ್ಗತಿ ಯಾರ್ಗೂ ಬರ್ಬಾರ್ದಪ್ಪ ಸಿವ್ನೇ. ಯಣ್ಣೋ ಸಿದ್ರಾಮಣ್ಣೊ "ಹುಂಡಿ" ಹಂಚಾದು ಆಮ್ಯಾಕೆ, ಮೊದ್ಲು "ಗುಂಡಿ" ಮುಚ್ಸಿ ಪುಣ್ಯಾ ಕಟ್ಕೊಳ್ಳಣ್ಣೊ.

24 July 2013

ಸಿದ್ಧರಾಮನ "ಹುಂಡಿ"ಗೊಂದು ಮನವಿ.....




'ಅಮೇರಿಕಾಗೆ ಅದ್ಯಾರನ್ನೋ "ಬರಾಕ್" ಬುಡಬ್ಯಾಡಿ' ಅಂತ ಅದುನ್ನೇನೋ ಜಾಗತಿಕ ಸಮಸ್ಯೆ ಅನ್ನೋ ಹಂಗೆ ಕಂಠ ಹರಕೊಂಡು ಕಿರುಚುತ್ತಾ ಅಂಗಿ ಹರಕೊಂಡು ಓಬಮ್ಮನ ಪೋಜು ಕೊಡುತ್ತಿರುವ ರಾಜಕಾರಣಿಗಳಿಗೆ ನಮ್ಮ ರಸ್ತೆಗಳಿಗೆ ಅಮರಿಕೊಂಡಿರೋ ಖಾಯಿಲೆ ಕಾಣಿಸೋದು ಯಾವಾಗ?
"ನನ್ನ ಕಾರಿನ ಚಕ್ರದಡಿಗೆ ನಾಯಿ ಕುನ್ನಿ ಬಂದ್ರೆ ಬೇಜಾರಾಗ್ದಿರ್ತದಾ?" ಅನ್ನುವ ಶ್ವಾನಪ್ರೇಮಿ ಮ್ಯಾಡಿ ಬಟ್ ನಾಟ್ ಇಂದ್ರಾ ಉರುಫ್ "ನರಿ"ಇಂದ್ರ ಇಂತಾ ರಸ್ತೆಲೆಲ್ಲಾದರೂ ಕಾರಲ್ಲಿ ಓಡ್ಯಾಡಿದ ದಾಖಲೆಗಳಿವೆಯ?

ಕಂಡ ಕಂಡವರಿಗೆ "ಕೈ" ಕೊಡುವ ಕೆಟ್ಟದಾದ ಹಳೆಯ ಚಾಳಿಯಿರುವ ಪಕ್ಸದವರ ಸರಕಾರದಲ್ಲಿ, ಪಿತೃಪಕ್ಷದ ಕಾಗೆಗಳಂತೆ ಮೇಯ್ದು ಕೊಬ್ಬಿ ಸೊಕ್ಕಿರುವ ಕೆಸರಿನ ಹೂ ಪಕ್ಸದ ಪುರಪಿತೃಗಳ ದರ್ಬಾರು ಕಾಣುತ್ತಿರೋ ಟೋಪನ್ ಕಿಸ್ನಣ್ಣನ "ಸಿಂಗಾಪುರ"ದಲ್ಲಿ ಇಲ್ಲದಿರೋ ರೋಡಿಗೆ ರೋಡು ಟ್ಯಾಕ್ಸು ಕಟ್ಟಿ ಕಟ್ಟಿ ಹೈರಾಣಾಗೋ ಕರ್ಮಕ್ಕೆ ಕೊನೆಯಾವಾಗಣ್ಣ?

"ಅನ್ನಭಾಗ್ಯ" ಕರುಣಿಸಿದ್ದಕ್ಕೆ ಸ್ಯಾನೆ ತ್ಯಾಂಕ್ಸ್ ಕಣಣ್ಣೋ, ರುಪಾಯ್ಗೆ ಸೇರು ಸಿಕ್ಕ ಅಕ್ಕಿಲಿ ಮಾಡಿ ತಿಂದ ಅನ್ನ ಅರುಗೊ ಮೊದಲೆ ಬೇಧಿಯಾಗಿ ಓಯ್ತದೆ ಇಂಥಾ ಓಂಪುರಿ ಕೆನ್ನೆ ತರಾ ಇರೋ ರಸ್ತೆಗಳ ಮ್ಯಾಲೆ ಒಂದ್ಸಲ ಓಡ್ಯಾಡಿದ್ರೆ. ಬ್ಯಾಗ ಇನ್ನದ್ರೂ "ರಸ್ತೆ ಭಾಗ್ಯ"ನೂ ಕರುಣಿಸಿ ಪುಣ್ಯ ಕಟ್ಕಳ್ಳಪ್ಪ ಅಣ್ಣಾ ಸಿದ್ರಾಮಣ್ನ...


ಸಗಣಿ ಸಾರಿಸಿದ ಹಂಗೆ ಟಾರು ಬಳಿದು ಸ"ಗಣಿ"ಯ ರುಚಿಕಂಡ ಆಳುವ ಖದೀಮರು ನಿತ್ಯ ನಮ್ಮೂರಿನ ರಾಜರಸ್ತೆಗಳ  ಮುಂಡಾಮೋಚುತ್ತಿದ್ದರೂ ಯಾರೂ ಕೇಳೋರೆ ಇಲ್ಲವಾಯ್ತಲ್ಲೋ ಸಿವನೆ.

21 July 2013

ಕೆಲವು ಭಾವಗಳು ಮಾತಿಗಿಂತ ಮೌನಗಳಲ್ಲೆ ಅತ್ಯಾಪ್ತ....

ಹೇಳಲಾಗದ ಹಲವು ಪಿಸುಮಾತುಗಳು
ಎದೆಯಾಳದ ಮೌನದಲ್ಲಿ ಹಾಗೆಯೆ ಉಳಿದು ಹೋಗಿ....
ಹಿಡಿತ ಮೀರಿದ ಕಂಬನಿಯ
ಅವ್ಯಕ್ತ ಧಾರೆಗಳಾಗಿ ಆಗಾಗ ಕಾಡುತ್ತವೆ,
ಕಣ್ಣ ಖಜಾನೆಗೆ ಬಿದ್ದ
ತುಂಬಲಾಗದ ತೂತಿನಿಂದ ಹೊರ ಸುರಿದದ್ದು....
ಕೇವಲ ನೋವಿನ ಹನಿಗಳ ಸಿರಿ ಸಂಪತ್ತು/
ಸದಾ ನೆನಪುಗಳ ಕಿರುಬೆರಳ ಆಸರೆಯಲ್ಲಿ
ಅಪರಿಚಿತ ಹಾದಿಯುದ್ದ ಹೆಜ್ಜೆ ಹಾಕುವಾಗ....
ನೀನೂ ಸಹ ಅಪ್ರತ್ಯಕ್ಷವಾಗಿ ಜೊತೆಯಾಗಿರುವಾಗ
ನನಗೆ ಅಂತ ಆತಂಕವೇನಿಲ್ಲ,
ಮತ್ತೆ ಹೊರಟಲ್ಲಿಗೆ
ಮರಳಿ ಬರುವ ಹಾದಿಯಂಚಿನಲ್ಲಿ....
ಕೈ ಬೀಸುತ್ತ ಹಾಗೆಯೆ ಹೋಗುವಾಗಿನಂತೆ
ನೀ ನಿಂತಿರಲಿ ಅನ್ನುವ ಮನದ ದುರಾಸೆಗೆ ಮದ್ದಿಲ್ಲ.//


ದಿನದ ತುಂಬಿದ ತೊರೆ
ನಿತ್ಯ ನೋವಿನ ನೆರೆ ಹೊತ್ತೆ ಸೊಕ್ಕಿ ಹರಿಯುವಾಗ....
ಹುಟ್ಟಿದ ಹೊಸ ಹಗಲಿನ ಹೆಗಲಿನ ಮೇಲೂ
ನಾಳೆಯ ದಡವನ್ನ ಮುಟ್ಟಿಸುವ ಘನ ಹೊಣೆಯಿದೆ,
ಜೋರು ಮಳೆಯ ಹಿನ್ನೆಲೆ ಸಂಗೀತದ ಜೊತೆಗೆ
ಸ್ವಪ್ನಗಳ ಸಾದೃಶ್ಯವಿಲ್ಲದಿರುತ್ತಿದ್ದರೆ
ಕಳೆದಿರುಳು ಇಷ್ಟೊಂದು ಆಪ್ತವಾಗುತ್ತಿರಲಿಲ್ಲ/
ಕಾರಣವಿಲ್ಲದೆ ಹುಟ್ಟುವ ಕನಸಿನ ಚುಂಗು ಹಿಡಿದು
ಆಶಾವಾದ ಹೊತ್ತು ಸಾಗುವ ಮನಸಿಗೆ....
ನಿರೀಕ್ಷೆಯ ಹೋಗಿ ಮುಟ್ಟುವ ಗುರಿಯಿದೆ,
ಕೂಡಿಟ್ಟ ಕನಸುಗಳನ್ನೆಲ್ಲ ಮುಕ್ತವಾಗಿಸಿ
ಮನ ಬಂಧನದಿಂದಾಚೆಗೆ ಒಂದೊಂದಾಗಿ ಹಾರಿ ಬಿಟ್ಟಾಗ....
ಅರಳೆಯ ಪುಂಜದಂತೆ ಅವು ಸ್ವಚ್ಛಂದವಾಗಿ ತೇಲುವುದನ್ನ
ಕಾಣುವುದೆ ಒಂದು ವಿಮುಕ್ತ ಸುಖ.//


ಮೌನವನ್ನೆ ಹೊದ್ದ ಭೂಮಿಯ ಮೇಲೆ
ವಾಚಾಳಿ ಮೋಡದ ಕೀಟಲೆಯ ದಾಳಿ....
ಸುರಿಯುತ್ತಿರೋ ಪ್ರತಿ ಹನಿ ಮಳೆ,
ಗಾಳಿಗಿಂತ ನೀರಿನ ತೂಕ ಜಾಸ್ತಿ
ಆದರೂ ಒಲವಲ್ಲಿ ಹೃದಯ ಹಗುರಾಗಿ ತೇಲುವಂತಾದಾಗ....
ಮೋಡದೊಳಗಿನ ಘನ ಹನಿಗಳೂ
ಆಗಿ ಹೋಗುತಾವೆ ಮರುತನೆದೆಯ ಆಸ್ತಿ/
ಕಾತರದ ಕರೆಗಾಗಿ ಆತರಿಸುವ
ಮನದ ಮೂಲೆಯಲ್ಲಿ....
ಮೌನದ ಸಾಮ್ರಾಜ್ಯ ಚಿರವಾಗಿ ಮನೆ ಮಾಡಿದೆ,
ಮೋಹಕ ಸ್ವಪ್ನಗಳಿಗೆ ರಹದಾರಿಯಾಗುವ
ಕತ್ತಲ ದಾರಿಯ ಹೊರಳಲ್ಲಿ....
ಅನಾಥ ಕನಸೊಂದು
ಯಾರೋ ಆಪ್ತರ ಹಾದಿಯನ್ನೆ ಹಗಲಿರುಳೂ ಕಾಯುತ್ತಿದೆ.//


ಗಾಳಿಗೆ ತೊನರಿ ಕಟ್ಟಕಡೆಯ ಹನಿಯನ್ನುದುರಿಸಿ
ಚಿಂತಾಮುಕ್ತವಾದ ಹಸಿರೆಲೆಯ ಹೃದಯಕ್ಕೆ....
ಆ ನೀರಹನಿಯ ತಂಪು ತುಸು ದಾಟಿದೆ,
ಕವನದ ಕಚ್ಚಾ ಸಾಲುಗಳಲ್ಲಿ
ಕಳೆದು ಹೋಗುವ ಮಧುರಭಾವಗಳಿಗೆ ಮನ ಮಿಡಿದಾಗಲೆಲ್ಲ....
ಒಂಥರಾ ಮಳೆಯಲ್ಲಿ ಬೆತ್ತಲೆ ತೋಯ್ದಂತ ಆಹ್ಲಾದ ಉಕ್ಕುತ್ತದೆ/
ನೋವಿನ ಹನಿಗಳೆಲ್ಲ
ನಯನಗಳಲ್ಲಿ ಮಡುಗಟ್ಟಿ....
ಮನಸೊಳಗೆ ಮುದುಡಿದಾಗ ಸ್ವಪ್ನ ಸುಮಗಳ ಬುಟ್ಟಿ
ಸಂಕಟ ಮಾತ್ರ ಬಾಳಿನುದ್ದ ಗಟ್ಟಿ,
ಕರಗಿ ಕರಗಿ ನೀರಾಗಿ ಮನದ ದುಗುಡವೆಲ್ಲ
ಹರಿದು ಹೋದ ಮೇಲೂ....
ನೋವಿನ ಕೊನೆ ಹನಿ ಮನ ಮರದ ಕೊಂಬೆಯಿಂದ
ಇನ್ನೂ ಎಡೆಬಿಡದೆ ತೊಟ್ಟಿಕ್ಕುತ್ತಿದೆ.//

19 July 2013

ಮನದ ಮೌನದಾಲಾಪ.....

ಎಡೆಬಿಡದೆ ಆಗಿನಿಂದ ಹನಿಯುತ್ತಿರುವ
ಮಳೆಯ ದನಿಯಲ್ಲಿ ವಿವರಿಸಲಾಗದ ಇಂಪಿದೆ....
ನೆಲವ ಮುದ್ದಿಸುವಂತೆ ಸುರಿಯುತ್ತಿರುವ
ಅದರ ಹನಿಹನಿಯಲ್ಲೂ ಬಚ್ಚಿಟ್ಟ ನಿರ್ವಾಜ್ಯ ಒಲವಿನ ತಂಪಿದೆ,
ಕರಗಿದ ಕಪ್ಪು ಮೋಡಗಳು
ಸುರಿಸಿದ್ದು ಸಂಕಟದ ಹನಿಗಳನ್ನೋ....
ಇಲ್ಲಾ ಅವು ಸಂತಸದ್ದೋ?
ಅನ್ನುವ ನಸು ಗೊಂದಲ ತುಸು ಜಾರಿಯಲ್ಲಿದೆ/
ಹೀಗೆ ನಾ ಕೂತು ಮನದ ಆಲಾಪಗಳನ್ನೆಲ್ಲ
ನನ್ನ ಪಾಡಿಗೆ ನಾನೆ....
ಯಾರ ಅನುಮತಿಗೂ ಕಾಯದೆ ಹಾಡುತ್ತಿರುತ್ತೇನೆ,
ನೀನೂ ಯಾರಿಲ್ಲದ ಸಂಜೆಗಳ ಒಂಟಿತನದಲ್ಲಿ
ಇವನ್ನ ಎದೆತುಂಬಿಕೊಳ್ಳುತ್ತಿರು.....
ಹೀಗೆ ಸಮಯ ಸುಮ್ಮನೆ ಸರಿದು ಹೋಗಲಿ.//


ನೆನಪಿನ ನಾವೆಯೇರಿ ಕುಳಿತ ಮೇಲೆ
ನೆಮ್ಮದಿಯ ತೀರವನ್ನ ಹೋಗಿ ಸೇರಿಯೇ ತೀರುವ....
ಖಚಿತ ಆಶಾವಾದ ಖಂಡಿತ ಇರೋದಿಲ್ಲ,
ಒಳಗಿನ ಗುಟ್ಟು ಬಿಟ್ಟು ಕೊಡದೆ
ಅತಿ ಸಹಜವಾಗಿ ಕೊನೆಯ ಕ್ಷಣದವರೆಗೂ....
ನೀನಿತ್ತಿದ್ದ ಒಂದಾಗಿ ನಡೆವ ಅತ್ಯದ್ಭುತ ನಟನೆಗೆ
ನಿನ್ನ ಹೊರತು ಈ ಇಡೀ ಜಗತ್ತಿನಲ್ಲಿ ಇನ್ಯಾರೂ ಸರಿಸಾಟಿಯಾಗಲಾರರು/
ಅದರ ಹನಿ ಅರಿವಿಲ್ಲದೆ ಮೂಕ ಪಶುವಿನಂತೆ
ಅನುಗಾಲ ನಿನ್ನ ನಾ ನಂಬಿದ್ದೆ....
ಈಗಲೂ ಆ ಜೊಳ್ಳು ನಂಬಿಕೆಯ ಆಸರೆಯಲ್ಲಿಯೆ
ಬಾಳು ಇನ್ನೂ ಸವೆಯುತ್ತಿದೆ,
ಕಾಗದದ ದೋಣಿಗಾದರೂ ಕೆಲಕಾಲ
ಒಲವ ಪ್ರವಾಹದಲ್ಲಿ ತೇಲುವ ಭಾಗ್ಯವಿರುತ್ತದೆ....
ಆದರೆ ಪಾಪಿ ನನ್ನದು ಅದಕ್ಕಿಂತ ತುಸು ಕಡಿಮೆ.//


ಮತ್ತರಳಿದ ಬೆಳಕಿನ ಸುಮದ ಸಂಭ್ರಮದಲ್ಲಿ
ಅದೇಕೋ ಬಯಸಿದರೂ ಭಾಗಿಯಾಗಲಾಗುತ್ತಿಲ್ಲ....
ಒಳಗಿನ ಕಾಡುವ ಸಂಕಟವೆ
ಅದಕ್ಕೆ ನೇರ ಕಾರಣ ಅಲ್ಲವಾ?,
ಅಗ್ಗದ ಅಮಿಷಗಳಿಗೆ ಬಲಿಯಾಗದಿರಲು
ಮೌನಿ ಮನಕ್ಕೆ ತನ್ನದೆ ಆದ....
ಖಾಸಾ ಕಾರಣಗಳಿವೆ/
ಕರಗಿದ ಕನಸಿನ ಕುದುರೆಯ ಬೆನ್ನೇರಿ
ಕಣ್ಣೀರಾಗುವ ಮಾಸದ ಮೌನಕ್ಕೆ....
ಸುಮ್ಮನೆ ಸರಿದ ಕಾಲದ
ಯಾವುದೇ ಪರಿವೆಯಿಲ್ಲ,
ತೊಳೆದು ಹೋದ ಕಾಡಿಗೆಯ ಕಪ್ಪು ಕಲೆಗಳು ಮಾತ್ರ
ಸ್ವಪ್ನಗಳ ಸಾವಿನ ಕುರುಹಾಗಿ....
ಕೆನ್ನೆಯ ಮೇಲೆ
ಹಾಗೆಯೆ ಉಳಿದುಕೊಂಡಿವೆ.//


ಪ್ರತಿಬಿಂಬದ ಮೂಲ ಸೆಲೆಯೇ ಮಂಕಾಗಿರುವಾಗ
ಬಾಳು ಒಂದು ಬರ್ಬರ ಕಥೆಯಷ್ಟೆ ಮತ್ತಿನ್ನೇನಿಲ್ಲ....
ಪ್ರಮಾಣಿಸಿ ನೋಡಿ ಬೇಕಾದರೆ
ಪ್ರಾಮಾಣಿಕ ಸ್ಪಂದನಕ್ಕೆ ಸಂಕಟ ಎಂದಿಗೂ ತಪ್ಪದು,
ನಿರೀಕ್ಷೆಗಳು ಅಲ್ಪವಾಗಿದ್ದಾಗಲೆ
ಅದರ ಅಸಲು ಹಕ್ಕುದಾರರಿಗೆ....
ಅದೆಂದೂ ದಕ್ಕದು/
ಕದಡಿದ ಮೌನ ಸರೋವರದಲ್ಲೆದ್ದದ್ದು
ಕೇವಲ ಈಡೇರದ ಮನಸಿನ ಆಸೆಗಳ ರಾಡಿ.....
ತಂತಿ ಹರಿದ ವೀಣೆಗೆ ಮತ್ತದನ್ನ ಸುರಿದು
ನಾದ ಹೊಮ್ಮಿಸಬಹುದು....
ತಂತಿಯೇ ಇಲ್ಲದಂತಾಗ ಮಾತ್ರ
ಕಡೆಯವರೆಗೂ ಮಿಡಿಯುವ ಭಾಗ್ಯವಿಲ್ಲ.//