30 November 2008
ನೆನಪು ಚಿರಾಯು....
28 November 2008
ನಮೋ ವೆಂಕಟೇಶಾ.......
ಅಳಿದ ಊರಿಗೆ ಉಳಿದವನೆ ಗೌಡ ಅಂತನ್ನಿ ಅಥವಾ ಕರುಡರೂರಿನಲ್ಲಿ ಒಕ್ಕಣ್ಣನೆ ಹೀರೋ ಎಂತಾದರೂ ಅನ್ನಿ ಒಟ್ಟಿನಲ್ಲಿ ತೀರ್ಥಹಳ್ಳಿಯಲ್ಲಿ ವೆಂಕಟೇಶ್ವರ ಚಿತ್ರಮಂದಿರಕ್ಕೆ ಎದುರಾಳಿಗಳಂತೂ ಇರಲೇಇಲ್ಲ,ಇಪ್ಪತ್ತೆರಡು ವರ್ಷಗಳ ಹಿಂದೆ ವಿನಾಯಕ ಟಾಕೀಸು ಹುಟ್ಟುವತನಕ! ಸಗಣಿ ಸಾರಿಸಿದ ನೆಲ-ಸರ್ವರಿಗೂ ಸಮಪಾಲು ಎಂಬಂತೆ ಉದ್ದಾನುದ್ದ ಪಟ್ಟಿ ಹೊಡೆದ ಬೆಂಚುಗಳಿದ್ದ ಜೈಶಂಕರ್...ಸಿಮೆಂಟಿನ ನೆಲ-ಎರಡೆರಡು ವರ್ಗ ಜೋತೆಗೆರಡು ಬಾಲ್ಕನಿಯೆಂಬ ಡಬ್ಬಗಳನ್ನು ಹೊಂದಿದ್ದ ವೆಂಕಟೇಶ್ವರದ ಮುಂದೆ ಮಂಕೋಮಂಕು.
ಚಿತ್ರವೊಂದು ಆರಂಭವಾಗುವ ಮುನ್ನ "ನಮೋ ವೆಂಕಟೇಶ"ದ ಹಿನ್ನೆಲೆಯಲ್ಲಿ ಬೆಳ್ಳಿತೆರೆಯ ಮೇಲಿನ ಪರದೆ ಮೇಲೇರುತ್ತಿತ್ತಾದರೂ ಪರದೆ ತುದಿತಲುಪುತ್ತಲೇ ಆಹಾಡು ಪೂರ್ತಿಯಾಗುವ ಮೊದಲೇ ಬಂದಾಗಿ "ಡಿಸ್ಕೋ ಡ್ಯಾನ್ಸರ್"ನ (ಮಿಥುನ್ ಚಕ್ರವರ್ತಿಯ ಆ ಚಿತ್ರ ಆ ಕಾಲಕ್ಕೆ ಸೂಪರ್ ಹಿಟ್ ಆಗಿದ್ದು ಯುವಕರನ್ನು ಸೆಳೆದಿತ್ತು) ಜಿಮ್ಮಿ ಜಿಮ್ಮಿ ಜಿಮ್ಮಿ ಆಜಾ ಆಜಾ...ನಾಜಿಯ ಹಸನ್ ಧ್ವನಿಯಲ್ಲಿ ತೇಲಿಬರುತ್ತಿದ್ದ ಹಾಗೆ "ಧೂಮಪಾನ ಆರೋಗ್ಯಕ್ಕೆ ಹಾನಿಕರ" "ಬೀಡಿ-ಸಿಗರೇಟು-ಚುಟ್ಟ ವಗೈರೆ ಸೇದುವುದನ್ನು ಖಡ್ಡಾಯವಾಗಿ ನಿಷೇಧಿಸಲಾಗಿದೆ" (ಈ ವಗೈರೆ ಅಂದರೆ ಏನು? ಎಂದು ನಾವೆಲ್ಲ ಆಗ ತಲೆ ಕೆಡೆಸಿಕೊಳ್ಳುತ್ತಿದ್ದೆವು!) ಮುಂತಾದ ಅಣಿಮುತ್ತುಗಳ ಸ್ಲೈಡ್ ಬಂದು.....ಆನಂತರ ಮುಂಬರುವ ಚಿತ್ರಗಳ ಸ್ಲೈಡ್ ಬರುವುದನ್ನೇ ಜಾತಕಪಕ್ಷಿ ಗಳಂತೆ ಕಾತರದಿಂದ ಕಾಯುತ್ತಿದ್ದೆವು.ಆನಂತರ ಬರುತ್ತಿದ್ದುದೇ ನಾವೆಲ್ಲರೂ ಎಷ್ಟು ರೀಲ್ ಎಂದು ನೋಡಿ ಹೇಳಲು ಕಾಯುತ್ತಿದ್ದ ಸೆನ್ಸಾರ್ ಸರ್ಟಿಫಿಕೆಟ್.ಇದೆಲ್ಲ ಆಗುವಾಗಲೇ ಉರಿಯುತ್ತಿದ್ದ ಮೂರು-ಮತ್ತೊಂದು ಲೈಟುಗಳು ಕುಗುರುವವರಂತೆ ಉದಾಸೀನದಿಂದ ಕಣ್ಣು ಮುಚ್ಚುತಿದ್ದವು.ಅಲ್ಲಿಗೆ ನಮ್ಮ ಕಲ್ಪನೆ ಊಹೆ,ಮುಂಬರುವ ಚಿತ್ರಗಳ ನೋಡುವ ಭವಿಷ್ಯದ ಯೋಜನೆಯ ಮನೋವ್ಯಾಪಾರಗಳೆಲ್ಲ ಮುಗಿದು ಕನಸಿನ ಲೋಕಕ್ಕೆ ಜಾರಿಕೊಳ್ಳುತಿದ್ದೆವು.
ಇನ್ನೇನು ಚಿತ್ರದ ರೋಮಾಂಚಕಾರಿ ಸೀನ್ ಬರಬೇಕು ತಟ್ಟನೆ ಕರೆಂಟ್ ಕೈಕೊಟ್ಟು ಬಿಡುತ್ತಿತ್ತು! ಇದು ಯಾವಾಗಲೂ ಹೀಗೆ...ಎಲ್ಲರೂ ಮನಸಿಟ್ಟು ನೋಡುತ್ತಿರುವಾಗಲೇ ರೀಲ್ ಕಟ್ ಆಗೋದೋ ಇಲ್ಲ ಕರೆಂಟ್ ಕೈಕೊಡೋದೋ ಆಗಿ ಟಾಕೀಸ್ ಒಳಗೆ ಕುಳಿತ ಸಭ್ಯ ಪ್ರೇಕ್ಷಕ ಪ್ರಭುಗಳು ಫಕೀರನ ಅಮ್ಮ -ಅಕ್ಕನ್ನನ್ನೂ ಬಿಡದೆ ನಿವಾಳಿಸಿ ಕೂಗೋದು...ಅವ ಓಡಿಹೋಗಿ ಜನರೇಟರ್ ಆನ್ ಮಾಡಿ ಆ ಭೀಕರ ಹಿನ್ನೆಲೆ ಸದ್ದಿನೊಂದಿಗೆ ಮತ್ತೆ ರೀಲೋಡಿಸುವುದು...ಮತ್ತೆ ಅಲ್ಲಿಂದಲೇ ಶುರುವಾಗೋ ಸೀನಿನಲ್ಲಿ ಎಲ್ಲರೂ ತನ್ಮಯರಾಗೋದು..ಇವೆಲ್ಲ ಸಂಪ್ರದಾಯದಂತೆ ನಡೆದುಹೊಗುತಿತ್ತು.ನಿತ್ಯ ನಡೆಯುವ ಈ ಜಂಜಾಟಗಳನ್ನೆಲ್ಲ ಫಕೀರನಾಗಲೀ ಪ್ರೆಕ್ಷಕರಾಗಲೀ ಅಭ್ಯಾಸಬಲದಿಂದ ಎಂಬಂತೆ ತಲೆಕೆಡಿಸಿಕೊಳ್ಳದೆ ಅನುಭವಿಸುತ್ತಿದ್ದರು!
27 November 2008
ಒಮ್ಮೆ ನೋಡಿದರೆ ಮತ್ತೊಮ್ಮೆ..ಮತ್ತೆ ನೋಡಿದರೆ ಮಗದೊಮ್ಮೆ..
ಫಕೀರ ನಮ್ಮೂರಿನ ಏಕಾಮೆದ್ವಿತೀಯ ಶ್ರೀವೆಂಕಟೇಶ್ವರ ಚಿತ್ರಮಂದಿರದ ಗೇಟ್ ಕೀಪರ್ ಆಗಿದ್ದವ.ಸಮಯಕ್ಕೆ ತಕ್ಕಂತೆ ಟಿಕೆಟ್ ಮಾರಾಟ,ಸಿನೆಮ ಪ್ರಚಾರ,ಅಗತ್ಯಬಿದ್ದರೆ ಉದ್ದನೆಕೋಲಿನಿಂದ ಪರದೆ ಸರಿಸೋದನ್ನೂ ಮಾಡುತ್ತಾ ಒಟ್ಟಾರೆ ಆಲ್ ಇನ್ ವನ್ ಆಗಿದ್ದ.ಪುಂಗಿಯ ನಾದಕ್ಕೆ ಮನ ಸೋಲುವ ಮಿಡಿನಾಗರಗಳಂತಹ ನನ್ನಂತ ಅನೇಕ ಅಭಿಮಾನಿಗಳೂ ಅವನಿಗಿದ್ದೆವು ಎಂಬುದೂ ಸತ್ಯ.ಅವನ ಗಾಡಿ ಸಿಂಗಾರಗೊಂದು ಬೀದಿಗಿಳಿದರೆ ನಮ್ಮ ನಿರೀಕ್ಷೆ ಗರಿಗೆದರುತ್ತಿತ್ತು.ಅವನ ವಿವರಣೆ ಚಿತ್ರಗಳಲ್ಲಿ ನಟಿಸಿರೋ ನಟರ ಇಮೇಜಿಗೆ ತಕ್ಕಂತೆ ಏರಿಳಿಯುತ್ತ ಬದಲಾಗುತ್ತಿತ್ತು.ಪದ್ಮಭೂಷಣ ಡಾ,ರಾಜಕುಮಾರ್,ಸಾಹಸಸಿಂಹ ವಿಷ್ಣುವರ್ಧನ್,ರೆಬೆಲ್ ಸ್ಟಾರ್ ಅಂಬರೀಶ್,ಪ್ರಣಯರಾಜ ಶ್ರೀನಾಥ್,ಕ್ರೇಜಿಸ್ಟಾರ್ ರವಿಚಂದ್ರನ್,ಮಿನುಗುತಾರೆ ಶ್ರತಿ,ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್,ಕನಸಿನ ರಾಣಿ ಮಾಲಾಶ್ರಿ ಇವರೆಲ್ಲ ನನಗೆ ಮೊದಲಿಗೆ ಪರಿಚಿತರಾಗಿದ್ದು ಅದೇ ಫಕೀರಣ ಕ್ರಪೆಯಿಂದ!
ಅವನೊಂಥರಾ ತೀರ್ಥಹಳ್ಳಿಯ ಕಿಂದರಿಜೋಗಿ.ಹಾಗೆ ನೋಡಿದರೆ ಆಗ ನಮ್ಮೂರಿನಲ್ಲಿ ಇನ್ನೂ ಒಂದು ಟಾಕೀಸು ಎಂಬ ಕಳ್ಳ ಹೆಸರಿನ ಜೈಶಂಕರ್ ಟೆಂಟುಇತ್ತು.ಆದರೆ ಆಕರ್ಷಣೆಯ ಕೇಂದ್ರ ಮಾತ್ರ ಅವತ್ತೂ ವೆಂಕಟೇಶ್ವರನೇ-ಇವತ್ತೂ ಅವನೇ...ಏಕೆಂದರೆ ಮೂಗಿನಲ್ಲಿ ಮಾತನಾಡೋ ಫಕೀರ ಅಲ್ಲಿದ್ದ!
26 November 2008
ಹೀಗಿತ್ತು ನಮ್ಮೂರು...
ನಮ್ಮೂರಿನ ಜನ ಇನ್ಯಾವುದೇ ಭಾರತದ ಹಳ್ಳಿಗಾಡಿನವರಂತೆ ವಿಪರೀತವೆನ್ನುವಷ್ಟು ದೈವಭಕ್ತರು.ಅವರ ಭಕ್ತಿಯ ಬೆಳೆಯಲ್ಲಿ ದೇವರಿಗೆ ಕೊಟ್ಟಷ್ಟೇ ಮಹತ್ವ ಭೂತಕ್ಕೂ ಇತ್ತು,ಈಗಲೂ ಇದೆ.ಘಟ್ಟದ ಮೇಲಿನ ಊರಾಗಿದ್ಧರೂ ತೀರ್ಥಹಳ್ಳಿಯ ಬಹುಸಂಖ್ಯಾತರು ದಕ್ಷಿಣ ಕನ್ನಡ ಮೂಲದವರೇ ಆಗಿರೋದರಿಂದಲೂ ಏನೋ ಭೂತಾರಾಧನೆ ಅಲ್ಲಿ ಸಹಜವಾಗಿ ಬೇರುಬಿಟ್ಟಿತ್ತು.ತೀರ್ಥಹಳ್ಳಿ ಈಗೇನೋ ಬೆಳೆದು ದೊಡ್ಡ ಊರಾಗಿರಬಹುದು ಆದರೆ ಕೇವಲ ಇಪ್ಪತ್ತೇ-ಇಪ್ಪತ್ತು ವರ್ಷಗಳ ಹಿಂದೆ ಹೆಸರಿಗೆ ತಕ್ಕಂತೆ ದೊಡ್ಡದೊಂದು ಹಳ್ಳಿಯಾಗಿಯೇ ಇತ್ತು.
ಹೀಗಾಗಿ ಪ್ರತೀ ಬಡಾವಣೆಗಳಲ್ಲೂ ಭೂತರಾಯಸ್ವಾಮಿಯದ್ದೋ ಇಲ್ಲ ಚೌಡಿಯದ್ದೋ ಬನ ಇದ್ದೆ ಇರುತ್ತಿತ್ತು.ಆಗೆಲ್ಲ ಸಣ್ಣ ಮಕ್ಕಳು ಸಂಜೆ ಕವಿದ ಮೇಲೆ ಹೋಗಲು ಹೆದರುತ್ತಿದ್ದ ಇಂತಹ ಬನಗಳ ಸುತ್ತಮುತ್ತ ಇತ್ತೀಚಿಗೆ ಜೀವಂತ ಭೂತಗಳಂತ ಜನ ಎರಡೋ-ಮೂರೋ ಉಪ್ಪರಿಗೆಯ ಮನೆ ಕಟ್ಟಿಕೊಂಡಿರೋದು ನೋಡಿ ಬೇಜಾರಾಯಿತು.ನಾವೆಲ್ಲ ಚಿಕ್ಕವರಾಗಿದ್ಧಾಗ ಒಂತರಾ ನಿಗೂಡ ಭಯ ಹುಟ್ಟಿಸುವ ತಾಣಗಳೆಲ್ಲ ಇಂದು ಗತ ವೈಭವ ಕಳೆದುಕೊಂಡು ಪಳಯುಳಿಕೆಯಂತೆ ನಿಂತಿವೆ.ಹಿಂದೊಮ್ಮೆ ತಮಗೆ ಹೆದರುತ್ತಿದ್ದ ಹುಲುಮಾನವರಿಗೆ ಇದೀಗ ತಾವೇ ಹೆದರಿ ಸಾಯಬೇಕಾದ ದೈನೇಸಿ ಸ್ಥಿತಿ ಭೂತಗಳಿಗೆ! ಅದಕ್ಕೆ ಇರಬೇಕು ಇಂದಿನ ಮಕ್ಕಳಿಗೆ ನಮಗಿದ್ದಷ್ಟು ಕಲ್ಪನಾ ಸಾಮರ್ಥ್ಯವೂ ಇಲ್ಲ.ನಾವು ಕಂಡ ಚಂದದ ತೀರ್ಥಹಳ್ಳಿಯ ಕಾಣೋ ಭಾಗ್ಯವೂ ಅವರಿಗಿಲ್ಲ.ಒಟ್ಟಿನಲ್ಲಿ ನಾನು ಕಂಡು ಬೆಳೆದಿದ್ದ ಆ ತೀರ್ಥಹಳ್ಳಿ ಎಲ್ಲೋ ಕಳೆದೇಹೋಗಿದೆ.
ಕಣ್ಣು ಮುಚ್ಚಿಕೊಂಡು ತೀರ್ಥಹಳ್ಳಿಯನ್ನು ನೆನಪಿಸಿಕೊಂಡರೆ ಮೊದಲಿಗೆ ನೆನಪಾಗೋದು ವೆಂಕಟೇಶ್ವರ ಟಾಕೀಸು,ಆಮೇಲೆ ಸೋಮವಾರದ ಸಂತೆ,ಅದರ ನಂತರ ರಾಮೇಶ್ವರ ದೇವಸ್ಥಾನ,ಅದಾದ ಮೇಲೆ ನಮ್ಮ ಮನೆ ಕೆಳಗಿದ್ದ ನಾಗರಬನ.ಜೆ ಸೀ ಆಸ್ಪತ್ರೆ.ಕಾರಂತರ ಬಸಸ್ಟ್ಯಾಂಡ್ ಮಯೂರ ಹೋಟೆಲಿನಲ್ಲಿ ಅಜ್ಜ ಕೊಡಿಸುತ್ತಿದ್ದ ಮಸಾಲೆ ದೋಸೆ! ಹೀಗೆ ಇವೆಲ್ಲ ನನ್ನ ಸ್ಮ್ರತಿಯಲ್ಲಿ ಫ್ರೇಮ್ ಹಾಕಿದಂತೆ ಉಳಿದುಬಿಟ್ಟಿವೆ.ಬಹುಶ ನಾನೂ ಅಲ್ಲಿಯೇ ಫ್ರೀಜ್ ಆಗಿದ್ದೇನೆ!18 November 2008
ಊರು ಬಿಟ್ಟ ಆ ಕ್ಷಣ...
ನಾನು ಹುಟ್ಟಿ (ಆಗಿನ ಪದ್ದತಿಯಂತೆ ನನ್ನ ಹುಟ್ಟು ಮನೆಯಲ್ಲೇ ಆಗಿತ್ತು) ಬೆಳೆದ ಮನೆ,ಬಾಲ್ಯದಿಂದ ಚಿರಪರಿಚಿತವಾಗಿದ್ದ ನಮ್ಮ ಕೇರಿಯ ಪರಿಸರ.ಮನೆಯ ಹಟ್ಟಿ ತುಂಬಿದ್ದ ಭಾನು,ಲಕ್ಷ್ಮಿ,ಕುರುಡಿ,ಬೂಚ,ತುಂಗೆ,ನೇತ್ರ,ನಂದಿನಿ,ಮತ್ತವರ ಅಸಂಖ್ಯ ಸಂತಾನ...ಚಳಿಯ ದಿನಗಳಲ್ಲಿ ರಾತ್ರೆ ಮನೆಯೊಳಗೆ ಎಳೆಕರುಗಳನ್ನು ಗೋಣಿತಾಟಿನ ಮಲಗಿಸಿ ಕೊಳ್ಳುತ್ತಿದ್ದುದು.ಅದೆಷ್ಟೋಬಾರಿ ಅವುಗಳ ಅಭೋದ ಕಣ್ಣುಗಳಿಗೆ ಮನಸೋತು ಹಟಾಮಾಡಿ ಅವು ಮಲಗುವ ಗೋಣಿಯಲ್ಲೇ ಅವುಗಳ ತಬ್ಬಿಕೊಂಡು ಆ ಸಿನಗುವಾಸನೆಯ ಸವಿಯಲ್ಲೇ ನಿದ್ರೆಗೆ ಜಾರುತ್ತಿದ್ದುದು.ಆದರೆ ಬೆಳಗಾಗೆದ್ದು ನೋಡುವಾಗ ಮಾತ್ರ ಅದುಹೇಗೋ ಅಮ್ಮನ ಕಂಬಳಿಯಿಂದಲೇ ಹೊರಗೆ ಇಣುಕುತ್ತಿದ್ದುದು! ಈಎಲ್ಲ ಸವಿನೆನಪುಗಳ ಬಿಟ್ಟು ಬಲಿಪಶುವಿನಂತೆ ಇನ್ನೆಲ್ಲಿಗೋ ಒತ್ತಾಯಪೂರ್ವಕವಾಗಿ ಹೋಗುವಂತಿತ್ತು ನನ್ನ ಸ್ಥಿತಿ.
ಆದರೆ ಹೋಗದೆ ವಿಧಿಯಿಲ್ಲ ಹೆತ್ತವರ ನಿರ್ಲಕ್ಷ್ಯ,ಸುತ್ತಲಿನವರ ಸಸಾರಗಳ ಸಹಿಸಲಾಗದೆ ಇರುವುದಕ್ಕಾದರೂ ಊರು ಬಿಡಲೇಬೇಕಿತ್ತು.ಅದೇ ನನ್ನ ವಿಧಿ ಹೀಗಾಗಿ ನಾನು ನನ್ನ ನಾಲು ಜೊತೆ ಅಂಗಿ-ಚಡ್ಡಿಗಳ ಜೊತೆ ಬೈರಾಸು ಒಂದೆರಡು ಬಹುಮಾನವಾಗಿ ಬಂದಿದ್ದ ಪುಸ್ತಕಗಳನ್ನು ಜತನವಾಗಿ ಬಟ್ಟೆಯ ಚೀಲದಲ್ಲಿಟ್ಟುಕೊಂಡು,ಕಿತ್ತುಹೋಗಿದ್ದ ಬಾರನ್ನು ಕಳೆದ ವಾರವಷ್ಟೇ ಬದಲಿಸಿದ್ದ ನನ್ನವೇ ಹಳೆಯ ಹವಾಯಿ ಚಪ್ಪಲಿಗಳನ್ನು ಮೆಟ್ಟಿಕೊಂಡು ಅಜ್ಜನ ಬೆನ್ನು ಹಿಡಿದು ಊರು ಬಿಟ್ಟೆ.ದುರಂತವೆಂದರೆ ಎರಡುದಿನ ಹಿಂದಿನ ವರೆಗೂ ನನ್ನ ಈ ಗಡಿಪಾರಿನ ವಿಷಯ ನನಗೆ ಗೊತ್ತೇ ಇರಲಿಲ್ಲ! ಗೊತ್ತಾದ ನಂತರದ ಕಡೆಯ ಎರದುದಿನಗಳು ಮಂಕಾಗಿದ್ದೆ ಹಾಗು ಬೆಳಗ್ಗೆ ಮಲಗಿದ್ದವ ಏಳುವಾಗ ದಿಂಬು ಒದ್ದೆಯಾಗಿರುತಿತ್ತು.
15 November 2008
ಶಾಲೆಯ ಆದಿನಗಳು....
ನನ್ನ ಹೆತ್ತಮ್ಮನಿಗೆ ಅದೇನೋ ದುರಾಸೆ,ಮಗ ಒಂದು ಖಾಸಗಿ ಶಾಲೆಯಲ್ಲಿ ಕಲಿತರೆ ಮಾತ್ರ ಉತ್ತಮ ನಾಗರೀಕನಾಗಬಲ್ಲ ಎಂಬ ಗೊಡ್ಡು ಭ್ರಮೆ.ಹೀಗಾಗಿ ಊರಿನಲ್ಲಿದ್ದ ಪ್ರತಿಷ್ಠಿತ ಶಾಲೆಯೊಂದಕ್ಕೆ ಸೇರಿಸಲ್ಪಟ್ಟೆ.ಅವರೇನೋ ಪಿಗ್ಮಿ ಸಂಗ್ರಹ ಮಾಡಿ,ಹೂವಿನಂಗಡಿಗೆ ಹೂ ಕಟ್ಟಿಕೊಟ್ಟು ನಾಲ್ಕಾರು ಕಾಸು ಸಂಪಾದಿಸಿ ಶಾಲೆಗೂ ಕಳಿಸುವ ನಿರ್ಧಾರ ಮಾಡಿದ್ಧರು ನಿಜ ಆದರೆ ವಾಸ್ತವದಲ್ಲಿ ಅವರ ದುಡಿಮೆಯಲ್ಲಿ ಅವರದ್ದೇ ಆದ ಇತರ ಖರ್ಚುಗಳೆಲ್ಲ ಕಳೆದ ನಂತರ ನನ್ನ ಶಾಲೆಯ ಫೀಸಿಗೆ ಸಾಕಷ್ಟು ಹಣ ಉಳಿಯುತ್ತಿರಲಿಲ್ಲ.ಹೀಗಾಗಿ ಪ್ರತಿ ತಿಂಗಳ ಕೊನೆಯಲ್ಲಿ ನನ್ನೊಬ್ಬನ ಹೊರತು ಇನ್ನೆಲ್ಲರೂ ತಮ್ಮ ಫೀಸ್ ಕೊಟ್ಟಿರುತ್ತಿದ್ದು ನಾನೊಬ್ಬ ಮಾತ್ರ ಅಪರಾಧಿ ಪ್ರಜ್ಞೆಯಿಂದ ನರಳುತ್ತಿದ್ದೆ.ಮೇಲಾಗಿ ಡೈರಿಯಲ್ಲಿ ಅಮ್ಮನಿಗೆ ಕರೆ,ಸಕಾಲದಲ್ಲಿ ಹಣ ಸಂದಾಯವಾಗದ ಬಗ್ಗೆ ನನಗೆ ತರಗತಿಯಲ್ಲಿ ಸದಾ ಕರಕರೆ.ಹೀಗಾಗಿ ಶಿಕ್ಷಕರ ದ್ರಷ್ಟಿ ನನ್ನ ಪ್ರತಿಭೆಯನ್ನು ಗುರುತಿಸುವ ಹೊರತು ಅವರಿಗೆ ತಿಳಿಯದಂತೆ ಭರ್ತ್ಸನೆಗಳಿಂದ ಕಮರಿಸುವುದರತ್ತಲೇ ಸಾಗಿತು.ಈ ಎಲ್ಲ ಹಿಂಸೆಯಿಂದ ಮುಕ್ತಿ ದೊರಕಿದ್ದು ನಾನು ಐದನೇ ತರಗತಿಗೆ ಸೇರಲು ಚಿಕ್ಕಮ್ಮನೂರಾದ ಕಾರ್ಕಳಕ್ಕೆ ಕಾಲಿಟ್ಟಾಗ.
ಆದರೆ ಅದೊಂದು ಬೆಂಕಿಯಿಂದ ಬಾಣಲೆಗೆ ಬಿದ್ದ ಅನುಭವದಂತಾಗಿದ್ದು ಮಾತ್ರ ಬೇರೆಯದೇ ಕಥೆ. ನನ್ನ ಅಪ್ಪ ಅಮ್ಮನಲ್ಲಿದ್ದ ಸಮರಸದ ಕೊರತೆಯಿಂದ ಅವರಿಬ್ಬರೂ ಯಾವಾಗಲೂ ಒಂದಾಗಿರುತ್ತಿದ್ದುದು ಕಡಿಮೆ.ಒಂದು ವೇಳೆ ಹಿರಿಯರ ರಾಜಿ-ಕಬೂಲಿಯಿಂದ ಜೊತೆಯಾದರೂ ಆ ಅಂಕ ಆದಷ್ಟು ಬೇಗ ಸರಿದು ಮತ್ತೊಂದು ರಾಜಿಗೆ ವೇದಿಕೆ ಸಿದ್ಧವಾಗುವ ತನಕ ಬೇರೆಯಾಗಿರುತ್ತಿದ್ದರು.ಅಮ್ಮ ತವರಿನಲ್ಲೇ ಬಿಡಾರ ಹೂಡಿರುತ್ತಿದ್ದರಿಂದ ನಾನು ಅಲ್ಲೇ ಉಳಿಯಬೇಕಾಗುತ್ತಿತ್ತು.ಹೀಗಾಗಿ ನನ್ನ ಹೆತ್ತವರ ಬಗ್ಗೆ ಕುಟುಂಬದಲ್ಲಿ ಅಂತಹ ಆದರವೇನೂ ಇರಲಿಲ್ಲ.ದುರದ್ರಸ್ತಕ್ಕೆ ಅದಕ್ಕೆ ಬಲಿಯಾದವರು ಮಾತ್ರ ನಾವು ಮಕ್ಕಳು.ಅದೆಕರಣಕ್ಕೆ ಚಿಕ್ಕಮ್ಮ ಊರಿಗೆ ಕರೆಸಿಕೊಂಡರೂ ಮನೆಯಲ್ಲಿ ಇರಗೊಡದೆ ಹಾಸ್ಟೆಲ್ಳಿಗೆ ಸೇರಿಸಿ ಬಿಟ್ಟರು.ಕೂಗಳತೆಯ ದೂರದಲ್ಲಿದ್ದರೂ ಮನೆಗೆ ಬಾರದಂತ ವಾತಾವರಣ.ಬಹುಷಃ ಆಗಿನಿಂದಲೇ ಒಂಟಿತನಕ್ಕೆ ನಾನು ಹೊರಳಿಕೊಂಡೆ ದೈಹಿಕವಾಗಿಯೂ...ಮಾನಸಿಕವಾಗಿಯೂ.
12 November 2008
ಡಾ ವರ್ಗೀಸ್ ಕುರಿಯನ್ ತಮ್ಮ ಮೊಮ್ಮಗ ಸಿದ್ಧಾರ್ಥನಿಗೆ ಬರೆದ ಆತ್ಮೀಯ ಪತ್ರ.
ನಿನಗೆ ಯಾವಾಗ ನಾನು ಬರೆದದ್ದು? ಜ್ಞಾಪಿಸಿಕೊಳ್ಳುವುದು ಕೂಡ ನನಗೆ ಕಷ್ಟವಾಗುತ್ತಿದೆ! ವೇಗವಾಗಿ ಓಡುತ್ತಿರುವ ಇಂದಿನ ಪ್ರಪಂಚದಲ್ಲಿ ತಕ್ಷಣದ ಸಂಪರ್ಕಕ್ಕೆ ಮೊಬೈಲನ್ನು ನಾವು ಬಳಸುತ್ತೇವೆ. ಫೋನಿನಲ್ಲಿ ಮಾತನಾಡಿದ ತಕ್ಷಣ ಮಿಂಚಿ ಮರೆಯಾಗುವಂತ ಸಂತೋಷವೇನೋ ಸಿಗುವುದು ನಿಜ. ಆದರೆ ಬರವಣಿಗೆಯ ಛಾಪೆ ಬೇರೆ. ಬರವಣಿಗೆ ಅದು ಕೇವಲ ಪತ್ರವೆ ಇರಲಿ, ನಮ್ಮ ಇಂದಿನ ತಾಪತ್ರಯಗಳು ಹಾಗೂ ಇಂದು ನಮ್ಮ ಸುತ್ತಮುತ್ತ ನಡೆಯುತ್ತಿರುವ ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತದೆ. ಆ ಬಗ್ಗೆ ನಮ್ಮ ಅಭಿಪ್ರಾಯಗಳನ್ನು ಶೇಖರಿಸಿ ವರ್ಷಗಳುರುಳಿದಂತೆ ಓದಿ ಆನಂದಿಸುವ ಆಸ್ತಿಯಾಗುತ್ತದೆ.
ಮುಂದೆ ಬರಲಿರುವ ಅಧ್ಯಾಯಗಳು ಪತ್ರಕ್ಕಿಂತ ಹೆಚ್ಚಿನವು. ನೀನು ಇದನ್ನು ಇಡಿಯಾಗಿ ಓದ ಬಯಸದೆ ಇರಬಹುದು. ಆದರೆ ಹತ್ತಾರು ವರ್ಷ ಕಳೆದ ನಂತರ ಈ ಟಿಪ್ಪಣಿಗಳನ್ನು ಎತ್ತಿಕೊಂಡು ನೀನು ನೋಡಿದಾಗ ನಾನು ಏನು ಮಾಡಿದೆ? ಎಂಬುದರ ಅಂತರಾರ್ಥ ಹಾಗು ನಮ್ಮ ದೇಶದ ರೈತರ ಸೇವೆಗೆ ತೊಡಗಿದುದರ ಕಾರಣ ತಿಳಿಯಬಹುದು. ಇಪ್ಪತ್ತೊಂದನೆಯ ಶತಮಾನಕ್ಕೆ ಪ್ರಪಂಚ ಕಾಲಿಡುವ ಮುನ್ನ ಅಮೂಲ್ಯವಾದ ಆ ದಿನಗಳು ನಿನಗೆ ಆಗ ಗೋಚರಿಸುತ್ತವೆ. ಆವಾಗ ನನ್ನ ನೆನಪುಗಳನ್ನು ನಿನ್ನ ಪೀಳಿಗೆಯ, ಇಲ್ಲವೆ ನಿನಗಿಂತ ಕಿರಿಯರಿಗೋ ನಿನ್ನ ಅಜ್ಜಿ ಅಜ್ಜಂದಿರು ಬಾಳಿದ ಮತ್ತು ತಿಳಿದಿದ್ದ ಪ್ರಪಂಚವನ್ನು ಹಂಚಿಕೊಳ್ಳಬಹುದು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದೊಡನೆ ನಾನು ನನ್ನ ವೃತ್ತಿ ಜೀವನವನ್ನು ಆರಂಭಿಸಿದೆ. ಅಂದಿನ ದಿನಗಳಲ್ಲಿ ನಮ್ಮ ಕನಸಿನ ಭಾರತದ ಜನ ಸಾಮಾನ್ಯರು ತಲೆಯೆತ್ತಿ ಮೆರೆಯುವುದೆ ಅಲ್ಲದೆ, ನಾವು ಈ ದೇಶವನ್ನು ಕಟ್ಟಲು ಯಾವುದೆ ಮಾರ್ಗದಲ್ಲಿ ನಮ್ಮ ಕೊಡುಗೆಗಳನ್ನು ಕೊಡುವುದೆ ಶ್ರೇಷ್ಠ ಕಾರ್ಯವೆಂದು ತಿಳಿದಿದ್ದೆವು. ನಮ್ಮ ಜನ ಪರಸ್ಪರ ಗೌರವ ಮತ್ತು ಸ್ನೇಹ - ಪ್ರೇಮದಿಂದ ಬಾಳುವ ದೇಶ ನಮ್ಮದಾಗಬೇಕು. ಮುಂದುವರೆದ ರಾಷ್ಟ್ರಗಳಲ್ಲಿ ಮೊದಲ ಪಂಕ್ತಿಯಲ್ಲಿ ಪರಿಗಣಿತವಾಗಬೇಕು ಎಂಬ ಆಸೆಯಿತ್ತು. ಒಂದು ರೀತಿಯ ಬಾಳನ್ನು ಆಯ್ಕೆ ಮಾಡಿಕೊಂಡಾಗ ಇನ್ನಿತರ ಆಯ್ಕೆಗಳು ಅದೆಷ್ಟೆ ಆಕರ್ಷಕವಾಗಿದ್ದರೂ ಬದಿಗಿರಿಸುವುದು ಅನಿವಾರ್ಯ ಎಂಬ ಅರಿವಿನ ವಿನೀತ ಭಾವ ನನ್ನಲ್ಲಿ ಮೂಡಿತು. ಈ ಪರಿವರ್ತನೆ ಸಾಧ್ಯವಾದದ್ದು ಐವತ್ತು ವರ್ಷಗಳ ಹಿಂದೆ ತಮ್ಮ ಜೀವನದ ಮೇಲೆ ಹತೋಟಿ ಸಾಧಿಸಿ ಸ್ವಾವಲಂಬಿಗಳಾಗಲು ಯತ್ನಿಸುತ್ತಿದ್ದ ಹೈನುಗಾರ ರೈತರ ಒಂದು ಸಣ್ಣ ಸಹಕಾರಿ ಸಂಘಕ್ಕೆ ಕೆಲಸ ಮಾಡಲು ಒಪ್ಪಿದಾಗ.
ಪ್ರಾಮಾಣಿಕವಾಗಿ ಹೇಳುವದಾದರೆ ನನ್ನ ವೃತ್ತಿ ಬಾಳ್ವೆ ನಮ್ಮ ನಾಡಿನ ರೈತರ ಸೇವೆಗಾಗಿ ಎಂದು ನಾನು ಎಂದೂ ತೀರ್ಮಾನಿಸಿರಲಿಲ್ಲ. ಆದರೆ ಅದು ಹೇಗೊ ಘಟನೆಗಳ ಸರಮಾಲೆ ನನ್ನನ್ನು ಒಂದು ಗೊತ್ತಾದ ಸ್ಥಳಕ್ಕೆ ಸರಿಯಾದ ಸಮಯದಲ್ಲಿ ತಲುಪಿಸಿತು. ಓದಿದ್ದ ಮೆಟಲರ್ಜಿಯ ಬಲದಿಂದ ಯಾವುದಾದರೂ ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ಗಿಟ್ಟಿಸಿ ಅದರ ಸಿಇಓ ಆಗಬಹುದಿತ್ತು, ಇಲ್ಲವೇ ಸೈನ್ಯಕ್ಕೆ ಸೇರಿ ಬಹುಷಃ ಜನರಲ್ ಆಗಿ ನಿವೃತ್ತನಾಗಬಹುದಿತ್ತು. ಆದರೆ ನಾನು ಇವ್ಯಾವುದನ್ನೂ ಆಯ್ಕೆ ಮಾಡಿಕೊಳ್ಳಲಿಲ್ಲ. ಏಕೆಂದರೆ ಆಳದಲ್ಲೆಲ್ಲೋ ನಾನು ಇಲ್ಲಿ ಅಂದರೆ ಗುಜರಾತಿನ ಆನಂದ್'ನಲ್ಲಿ ಒಂದು ಅರ್ಥಪೂರ್ಣ ಕೊಡುಗೆಗಾಗಿ ದುಡಿಯುವುದು ಸಾಧ್ಯ ಎಂಬ ಅರಿವು ನನಗಿತ್ತು. ನಿನ್ನ ಅಜ್ಜಿ ಕೂಡ ಈ ನನ್ನ ಆಯ್ಕೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಳು. ಆ ದಿನಗಳಲ್ಲಿ ನಾವಿಂದು ಸಾಮಾನ್ಯ ಸೌಲಭ್ಯಗಳೆಂದು ಪರಿಗಣಿಸುವ ಸವಲತ್ತುಗಳೂ ಅಲ್ಲಿ ಅಲಭ್ಯ. ಆದರೂ ಅವಳು ಅಲ್ಲೆ ನನ್ನೊಂದಿಗೆ ವಾಸಿಸಿ, ಅಲ್ಲಿಯೆ ಬದುಕ ಕಟ್ಟುವ ನನ್ನ ಆಯ್ಕೆಯನ್ನು ಮನಸಾರೆ ಬೆಂಬಲಿಸಿದಳು. ನನ್ನ ಬೆಂಗಾವಲಾಗಿ ನಿಂತ ನಿನ್ನ ಅಜ್ಜಿಯ ಆಯ್ಕೆ ನನಗೆ ನೀಡಿದ ಮಾನಸಿಕ ಶಕ್ತಿಯಿಂದಲೇ ಎಲ್ಲ ಮಹತ್ವದ ಹೆಜ್ಜೆಗಳನ್ನು ಹಿಂಜರಿಯದೆ ಮುನ್ನಡೆಸಿತು.
ದೇಶದ ಪ್ರಗತಿಗೆ ಸಂದ ನನ್ನ ದುಡಿಮೆಯನ್ನು ಗುರುತಿಸಿ ಸನ್ಮಾನಿಸಿದಾಗಲೆಲ್ಲ ಅನೇಕ ಜನರ ಸಾಧನೆಗಳಿಗೆ ನನ್ನ ಮೂಲಕ ಸಂದ ಮನ್ನಣೆಯಿದು ಎಂಬುದನ್ನೂ ಒತ್ತಿ ಒತ್ತಿ ಹೇಳುತ್ತೇನೆ ಹಾಗೂ ನನ್ನವೆ ಆದ ಕೆಲವು ಮೂಲ ಮೌಲ್ಯಗಳೂ ಇವಕ್ಕೆ ಕಾರಣ. ನನ್ನ ತಂದೆ ತಾಯಿಗಳ - ಕುಟುಂಬದ ಹಿರಿಯರ, ಆನಂದಿನ ನನ್ನ ಮಾರ್ಗದರ್ಶಕ ತ್ರಿಭುವನದಾಸ್ ಪಟೇಲರಲ್ಲಿ ನಾನು ಕಂಡ ಮೌಲ್ಯಗಳೂ ಇದರ ಹಿಂದಿವೆ. ಒಟ್ಟಾರೆ ಹೇಳ ಬೇಕೆಂದರೆ ಪ್ರಾಮಾಣಿಕತೆ, ತನಗೆ ತಾನು ಪ್ರಾಮಾಣಿಕನಾಗಿರುವುದು. ನೀನೂ ಸದಾ ನಿನಗೆ ಪ್ರಾಮಾಣಿಕನಾಗಿದ್ದರೆ ಇತರರೊಂದಿಗೂ ಹಾಗೆಯೇ ಇರಲು ಕಷ್ಟವಾಗಲಾರದು.
ನಾನು ಅರಿತಂತೆ ಒಂದು ದಿನ ಖಂಡಿತ ನೀನೂ ಜೀವನ ಎಂಬುದೊಂದು ಸುಯೋಗ, ಇದನ್ನು ಹಾಳು ಮಾಡುವುದು ತಪ್ಪು ಎಂಬುದನ್ನೂ ಅರಿಯುವೆ. ಬಾಳು ಎಂಬ ಭಾಗ್ಯದಲ್ಲಿ ನಿನ್ನ ಜವಾಬ್ದಾರಿಯನ್ನು ನೀನು ಒಪ್ಪಿ ಅರಿತುಕೊಳ್ಳಬೇಕು. ನಿನ್ನ ಕೌಶಲ್ಯ ಹಾಗೂ ಸಾಮರ್ಥ್ಯವನ್ನು ಶ್ರೀಸಾಮಾನ್ಯನ ಒಳಿತಿಗಾಗಿ ಯಾವುದಾದರೂ ಒಂದು ರೀತಿಯಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿದಿನ ಈ ಅಗತ್ಯಗಳು ನಿನ್ನ ಮುಂದೆ ಬಂದೆ ಬರುತ್ತವೆ. ಹಾಗೆಯೇ ನೀನು ಸುತ್ತ ದೃಷ್ಟಿ ಹಾಯಿಸಿದರೆ ನಿನಗಾಗಿ ಕಾಯುತ್ತಿರುವ ಅವುಗಳನ್ನು ಕಾಣಬಹುದು. ನಿನ್ನ ಗೆಳೆಯನಿಗೆ ಸಹಾಯ ಬೇಕಿರಬಹುದು, ನಿನ್ನ ಉಪಾಧ್ಯಾಯರಿಗೆ ಸ್ವಯಂ ಸೇವಕ ಬೇಕಾಗಿರಬಹುದು ಅಥವಾ ನೀನು ಜೀವಿಸುತ್ತಿರುವ ಸಮುದಾಯಕ್ಕೆ ನಿನ್ನ ಕೊಡುಗೆಯ ಅಗತ್ಯ ಇರಲೂಬಹುದು. ಜಯದ ಪರಿವೆ ಇಲ್ಲದೆ, ಸೋಲಿನ ಹತಾಶೆಗೂ ಕುಗ್ಗದೆ ನಿನ್ನ ಉಪಯುಕ್ತ ಕೊಡುಗೆಗಳನ್ನೂ ಶ್ರಮವಹಿಸಿ ನೀಡಬಹುದು.
ನಾನು ಕಂಡಂತೆ ಯಾವ ಕ್ಷಣದಲ್ಲೂ ತಪ್ಪಾಗಬಹುದು. ಅನೇಕ ಬಾರಿ ಹಾಗೆಯೇ ಆಗುತ್ತದೆ ಜನರು ಬಾಳುತ್ತಿರುವ ಪರಿಸರ ಹಾಗೂ ಅವರೆಷ್ಟು ಸಂತೋಷವಾಗಿದ್ದರೆ ಎಂಬುದಕ್ಕೆ ತಾಳಮೇಳ ಇರುವುದಿಲ್ಲ. ನಮ್ಮ ಸಂಬಂಧಿ, ಪರಿಚಿತ ಅಥವಾ ಇನ್ಯಾರೋ ರಸ್ತೆಯಲ್ಲಿ ಹೋಗುವವನೊಂದಿಗೆ ಹೋಲಿಸಿಕೊಂಡು ಕುರುಬುತ್ತೇವೆ. ಆದರೆ ನಾವು ಗಮನವಿಟ್ಟು ಹತ್ತಿರದಿಂದ ನೋಡಿದಾಗ ಅವು ಪೂರ್ಣತೆಯ ಪ್ರತಿಬಿಂಬಗಳು ಎಂಬುದರ ಅರಿವಾಗುತ್ತವೆ. ಇಲ್ಲದಿರುವುದರ ಬಗ್ಗೆ ಚಿಂತಿಸದೆ ಇರುವುದರಲ್ಲೆ ನೆಮ್ಮದಿಯಾಗಿರಲು ಇವು ಸಹಕರಿಸುತ್ತವೆ.
೧೯೯೯ರಲ್ಲಿ ನನಗೆ ರಾಷ್ಟ್ರಾಧ್ಯಕ್ಷರು ಪ್ರಶಸ್ತಿ ನೀಡುವ ಭವ್ಯ ಸಮಾರಂಭಕ್ಕೆ ಬಂದದ್ದು ನಿನಗೆ ನೆನಪಿದೆಯೆ? ತುಂಬ ಹೆಮ್ಮೆಯಿಂದ ಪದಕವನ್ನು ಕೊರಳಿಗೆ ಹಾಕಿಕೊಂಡು ಅದನ್ನು ಅಚ್ಚರಿಯಿಂದ ನೋಡಿ ಇದನ್ನು ನಾನು ಇಟ್ಟುಕೊಳ್ಳಲೆ? ಎಂದು ಕೇಳಿದೆ. ಆಗ ನಾನು ಮತ್ತು ನಿನ್ನ ಅಜ್ಜಿ ಹೇಳಿದ್ದು ನೆನಪಿದೆಯೆ? ಈ ಪದಕ ನನ್ನದರಂತೆ ನಿನ್ನದೂ ಕೂಡ, ಆದರೆ ನೀನು ನನ್ನ ಪದಕಗಳನ್ನು ಕೂಡುವುದರಲ್ಲಿ ತೃಪ್ತನಾಗಬಾರದು. ಸವಾಲಿರುವುದು ಮುಂದೆ ನಿನ್ನ ಪರಿಶ್ರಮಕ್ಕೆ ತಕ್ಕ ಪ್ರಶಸ್ತಿಗಳನ್ನು ನೀನೆ ಗಳಿಸುವುದರಲ್ಲಿ.
ಕೊನೆಯದಾಗಿ ಎಲ್ಲವನ್ನೂ,ಎಲ್ಲರನ್ನೂ ಪ್ರೀತಿಸುವ ಶಕ್ತಿ. ಇನ್ನೊಬ್ಬರ ಸಂತಸದಲ್ಲೂ ನಲಿವ ಎದೆಗಾರಿಕೆ ಹಾಗು ಬಾಳಲು ನಮ್ಮೆಲ್ಲರಿಗೂ ಸಾಕಷ್ಟು ಅವಕಾಶವಿದೆ ಎಂಬ ವಿವೇಕ ನಿನ್ನಲ್ಲಿದ್ದರೆ ಬಾಳು ಅರ್ಥಪೂರ್ಣ.
ಸಿದ್ಧಾರ್ಥ, ಈ ಚಿಂತನೆಗಳು ನಿನಗಾಗಿ ಹಾಗು ನಿನ್ನ ತಲೆಮಾರಿನ ನಮ್ಮ ಸುಂದರ ದೇಶದ ಲಕ್ಷಾಂತರ ಮಕ್ಕಳಿಗಾಗಿ. ಇದನ್ನು ಓದಿದ ಮೇಲೆ ನೀವು ಆಯ್ದುಕೊಂಡ ಕ್ಷೇತ್ರದಲ್ಲಿ ಭಯವಿಲ್ಲದೆ ಮುನ್ನುಗ್ಗಿ ದೇಶದ ಬಹುಜನರ, ಮಾನವತೆಯ ಹಿತಕ್ಕಾಗಿ ಸ್ಫೂರ್ತಿ ಸಿಗುವುದೆಂದು ಭಾವಿಸುತ್ತೇನೆ. ಹಾಗೆ ನಿಮಗೆ ಬರುವ ಪ್ರಶಸ್ತಿಗಳೆ ನಿಜವಾದ ಪ್ರಶಸ್ತಿಗಳು ಹಾಗು ಸಾರ್ಥಕ ಬದುಕಿಗೆ ಅವೆ ನಿಜವಾದ ಮನ್ನಣೆಗಳು ಎಂಬುದನ್ನೂ ಮರೆಯದಿರಿ.
ನನ್ನ ನಲುಮೆಯ ಪ್ರೀತಿಯೊಂದಿಗೆ
ನಿನ್ನ ಒಲುಮೆಯ
ದಾದ
11 November 2008
ನೋವಿನ ಅಲೆ...
ಮನಸ ಸರೋವರಕ್ಕೂ
ಮಾನಸ ಸರೋವರಕ್ಕೂ ವ್ಯತ್ಯಾಸವೇನಿಲ್ಲ/
ತುಂಬಿ ಬಂದಾಗ ಎರಡೂ
ಧಾರೆ ಧಾರೆಯಾಗಿ ಧುಮ್ಮಿಕ್ಕಿ ಹರಿಯುತ್ತವೆ//
10 November 2008
ನಿರಾಕರಣೆ ಹೀಗೆ ಇರಲಿ..
ಮಾತು ಮಾತಿಗೂ ಮುನಿಸಿ ಕೊ(ಲ್ಲು)ಳ್ಳುವ ಗೆಳತಿ,
ಇರಲಿ ನನ್ನ ಮೇಲೆ ಚೂರೇ ಚೂರು ಕರುಣೆ/
ಪ್ರೀತಿಗಲ್ಲದಿದ್ದರೂ ದ್ವೇಷಕ್ಕಾದರೂ ಮುನಿಸಿಕೊಳ್ಳುತಿರು ಹೀಗೆ,
ಹಾಗಾದರೂ ಮರೆಯಾಗಲಿ ನಿನ್ನ ನಿರಾಕರಣೆಯ ನೋವು ಬವಣೆ//
09 November 2008
ಆತ್ಮದ ಗೆಳೆಯ....
ಹುಂ,ಇಲ್ಲಿಯವರೆಗಿನ ನನ್ನೆಲ್ಲ ದಿನಗಳೂ ಕಳೆದದ್ದು ಕೇವಲ ನಂಬಿಕೆಯ ಆಧಾರದ ಮೇಲೆ.ಬಾಲ್ಯದಲ್ಲಿ ಚೆನ್ನಾಗಿ ಓದಿ ಮುಂದೆ ಗೆಲ್ಲುತ್ತೇನೆ ಎಂಬ ನಂಬಿಕೆ. ಹಾಸ್ಟೆಲ್ಲಿನಲ್ಲಿ ಅನಿವಾರ್ಯವಾಗಿ ಕೊಳೆಯುವಾಗ ಮುಂದಾದರೂ ಸುಖದ ಕನಸು ಸಾಕಾರವಾಗುತ್ತದೆ ಎಂಬ ನಂಬಿಕೆ. ತೀರ ಒಂಟಿತನ ಕಾಡಿದಾಗ ಯಾರಾದರೂ ಹೃದಯಕ್ಕೆ ಹತ್ತಿರವಾದ ಗೆಳೆಯರು ಸಿಕ್ಕಾರು ಎಂಬ ನಂಬಿಕೆ. ನಿನ್ನನ್ನು ಕಣ್ತುಂಬಿ ಕೊಂಡಾಗ ಎಂದಾದರೊಮ್ಮೆ ನಿನ್ನ ಸಾಂಗತ್ಯ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ. ಹೀಗೆ ನಂಬಿಕೆಯ ನೆಲೆಯಲ್ಲಿಯೇ ಒಂಬತ್ತು ಸಾವಿರ ದಿನಗಳ ಬಾಳ್ವೆ ಕಳೆದೆ ಹೋಗಿದೆ. ಉಳಿದೆಲ್ಲ ನಂಬಿಕೆ ನಿಜವಾದರೂ ನಿನ್ನ ಮನ ಗೆಲ್ಲುವ ನಂಬಿಕೆ ಸುಳ್ಳಾಯ್ತು. ಆದರೂ ನಂಬುವ ಚಟ ಬಿಡಲಾಗುತ್ತಿಲ್ಲ. ಹೀಗಾಗಿ ನನ್ನ ಸಹಿಯಲ್ಲಿ ನೀನು ಸ್ಥಿರವಾಗಿ ಉಳಿದೆ. ಹೌದು! ನನ್ನ ಹಸ್ತಾಕ್ಷರಗಳ ಅಧಿಕೃತ ರೂಪ ನೀನೆ. ಕಡೆಗೂ ನಿನ್ನನ್ನು ಕೇವಲ ಸಹಿಯಲ್ಲದರೂ ಉಳಿಸಿ ಕೊಂಡ ತೃಪ್ತಿ ನನ್ನದು.
ಹಾಲು ಹಲ್ಲುದುರುವ ಎಳೇ ವಯಸ್ಸಿನಲ್ಲಿ ಅಮ್ಮ ನನ್ನೊಳಗೆ ಬಿತ್ತಿದ್ದ ಒಂದು ನಂಬಿಕೆ ಇಂದು ಬೆಳೆದು ಹೆಮ್ಮರವಾಗಿದೆ. ಮಣ್ಣು ಸಗಣಿ ಉಂಡೆ ಕಟ್ಟಿ ಬಿದ್ದ ಹಲ್ಲನ್ನು ಅದರಲ್ಲಡಗಿಸಿ ಮನೆಯ ಮಾಡ ಮೇಲೆಸೆದು ಬೀಳ್ಕೊಟ್ಟರೆ ಚಿನ್ನದ ಹಲ್ಲು ಮತ್ತೆ ಚಿಗುರುತ್ತಂತೆ!. ಹೀಗಾಗಿ ಎಲ್ಲ ಸವಿ ನೆನಪುಗಳ ಸಿಹಿ ಸಂಭ್ರಮವನ್ನು ಹಾಗೆ ಉಂಡೆಕಟ್ಟಿ ನೆನಪಿನ ಮನೆ ಮಾಳಿಗೆಯ ಮೇಲೆಸೆಯುತ್ತೇನೆ. ಮುಂದಾದರೂ ಹೊಸದಾದ ಚಿನ್ನದ ಬಾಳ್ವೆ ಎದುರಾದೀತು ಎಂಬ ಆಶಯವನ್ನು ಮೊಳಕೆಯಾಗಿಸುತ್ತಾ ಕಾಯುತ್ತಲೇ ಇದ್ದೇನೆ. ಮುಂದೊಮ್ಮೆ ಸಿಗ ಬಹುದಾದ ಬಂಗಾರದ ಬಾಳ್ವೆಗೆ.ಬಾಳ ಬುತ್ತಿ ಹಂಚಿಕೊಳ್ಳಲು ನೀನು ನನಗೆ ಸಿಗದಿದ್ದರೇನು? ಜೀವದ ಗೆಳೆಯ ರುದ್ರಪ್ರಸಾದನ ಜೊತೆ ಸಿಕ್ಕಿದೆ, ನನ್ನ ಒಳ ಬೇಗುದಿಗೆ ಅರ್ಥ ಹುಡುಕುತ್ತಾನವನು. ವಯಸ್ಸಿನಲ್ಲಿ ನನ್ನಿಂದ ಕಿರಿಯ ಸಾಂತ್ವಾನದ ಹೆಗಲಾಗುವುದರಲ್ಲಿ ನನ್ನಿಂದಲೂ ಹಿರಿಯ. ನನ್ನೆಲ್ಲ ರಹಸ್ಯಗಳನ್ನೂ ಬಲ್ಲವ, ನನ್ನದೆಲ್ಲವೂ ಆತ ತಿಳಿಯಲಿ ಎಂದು ನಾನು ಹಾರೈಸುವ ಏಕೈಕ ಜೀವ. ನಿನ್ನ ಹಾಗು ನನ್ನ ನಡುವಿನ ಸಂವೇದನೆಯ ಖಚಿತ ಸುಳಿವು ಇರುವ ಒಂದೇ ಒಂದು ಜೀವ ಅದು. ನೀನು ಸಿಗದ ಕೊರತೆ ಅಷ್ಟಾಗಿ ಕಾಡದೆ ಇರಲು ಅವನೇ ಅವನೊಬ್ಬನೆ ಕಾರಣ. ಅವನಿಗಾಗಿ ಏನನ್ನೇ ಮಾಡಲು ನಾನು ತಯಾರು. ಉಸಿರನ್ನೇ ಕೊಡಬೇಕಾಗಿ ಬಂದರೂ ಮರುಕ್ಷಣ ಯೋಚಿಸುವ ಪ್ರಶ್ನೆಯೇ ಇಲ್ಲ, ಅಷ್ಟು ಗಾಢವಾದ ನಂಬಿಕೆ ಅವನ ಮೇಲೆ ನನಗೆ.
ಸದ್ಯ ಪೂನದಲ್ಲಿದ್ದಾನೆ. ಬೆಂಗಳೂರಿನ ಯು,ವಿ,ಸಿ,ಇ ಯಲ್ಲಿ ಬಿಇ ಮುಗಿಸಿ 'ಐಬಿಎಂ'ನಲ್ಲಿ ಮೂರು ವರ್ಷ ಸಾಫ್ಟ್'ವೇರ್ ತಂತ್ರಜ್ಞ ಆಗಿದ್ದ, ಕಳೆದ ತಿಂಗಳಷ್ಟೇ ಕಂಪನಿ ಬದಲಿಸಿದ್ದಾನೆ. ಕೊಡಗಿನ ಶಿರಂಗಾಲದ ಅವನೆಲ್ಲಿ? ತೀರ್ಥಹಳ್ಳಿಯ ನಾನೆಲ್ಲಿ? ಯಾರೂ ಇಲ್ಲದೆ ಒಂಟಿ ಜೀವವಾಗಿದ್ದ ನನಗೆ ಭರವಸೆಯ ಬೆಳಕಾಗಿ ಗೋಚರಿಸಿದ್ದಾನವ. ಈ ವಿಷಯದಲ್ಲಿ ನಾನು ಅದೃಷ್ಟವಂತ. ಇದೊಂದು ಸಂಗತಿಯಲ್ಲಾದರೂ ನನ್ನ ಮನೋ ಕಾಮನೆ ಕೈಗೂಡಿದ್ದಕ್ಕಾಗಿ ನಾನೆಂದೂ ನಂಬದ ಆ ನನ್ನ ದೇವರಿಗೆ ಜನ್ಮಜನ್ಮಾಂತರದ ಸಾಷ್ಟಾಂಗ ನಮನ ಸಲ್ಲಿಸುತ್ತೇನೆ.
ನನಗೆ ಹಿಡಿಸಿದ ಕೆಲವು ನಿಜಗಳು......
ದೆಹಲಿಯಲ್ಲಿ ಫ್ಲೈ ಓವರ್ ಗಳನ್ನು ಕಟ್ಟುವುದು ತಪ್ಪಲ್ಲ,ನಮ್ಮ ಹಳ್ಳಿಗಳಿಗೆ ಸಂಪರ್ಕ ರಸ್ತೆಗಳನ್ನು ನಾಡಿನುದ್ದಕ್ಕೂ ನಾವು ನಿರ್ಮಿಸದಿರುವುದು ತಪ್ಪು.ನಮ್ಮ ರಾಜಧಾನಿ ಬಣ್ಣ ಬಣ್ಣದ ಬೆಳಗು ಸೂಸುವ ಕಾರಂಜಿಗಳನ್ನು ಹೊಂದಿರುವುದು ಎಂದೂ ತಪ್ಪಲ್ಲ,ಏನೇ ಆದರೂ ದೆಹಲಿ ಸುಂದರವಾಗಿರಲೇ ಬೇಕು.ಆದರೂ ನಾವು ನಮ್ಮ ಎಲ್ಲ ಹಳ್ಳಿಗಳಿಗೂ ಕುಡಿಯುವ ನೀರಿನ ವ್ಯವಸ್ಧೆ ಮಾಡದಿರುವುದು ಅನ್ಯಾಯ.ಮುಂಬಯಿಯಲ್ಲಿ ಆಧುನಿಕ ಖಾಸಗಿ ಆಸ್ಪತ್ರೆ ಇರುವುದಾಗಲಿ ಇಲ್ಲವೇ ಏಮ್ಸ್ ದೆಹಲಿಯಲ್ಲಿರುವುದಾಗಲಿ ತಪ್ಪೇನೂ ಅಲ್ಲ,ಆದರೆ ಹಳ್ಳಿಯ ಬಡವನ ಆಗತಾನೆ ಜನಿಸಿದ ಮಗುವಿಗೆ ಸಂಭಾವ್ಯ ಕುರುಡು ತಪ್ಪಿಸಲು ಎರಡೇ ಎರಡು ಹನಿ ಔಷಧಿ ವ್ಯವಸ್ಥೆ ಮಾಡದಿರುವುದು ಪರಮ ಘಾತುಕತನ.ಇದ್ದಕ್ಕೆ ಕೇವಲ ಮುತುವರ್ಜಿ ಸಾಕೆ ಸಾಕು,ಹಣದ ಅಗತ್ಯ ತೀರಾ ಕಡಿಮೆ ಆದರೂ ಪಂಚತಾರಾ ಆಸ್ಪತ್ರೆಗಳನ್ನು ಕೋಟ್ಯಾಂತರ ಖರ್ಚು ಮಾಡಿ ಮಹಾನಗರಗಳಲ್ಲಿ ಕಟ್ಟಲು ಮುಂದಾಗುತ್ತೇವೆ.ಹೀಗೆ ಆಗುತ್ತಿರುವುದಾದರೂ ಏಕೆ? ಏಕೆಂದರೆ ನೀತಿ ನಿರೂಪಿಸುವ ಅಧಿಕಾರ ನಮ್ಮ ಗಣ್ಯರ ಕೈಯಲ್ಲಿ ಇದ್ದು ಮತ್ತು ಸ್ವಾಭಾವಿಕವಾಗಿಯೋ ಇಲ್ಲವೇ ಅವರ ಅರಿವಿಗೆ ಬಾರದೆ ನಿರೂಪಿಸುವ ಕಾನೂನುಗಳೆಲ್ಲ ಅವರಿಗೆ ಹಾಗು ನಮ್ಮಂತವರಿಗೆ ಅನುಕೂಲವಾಗುವಂತೆಯೇ ಇರುತ್ತದೆ.ಹೀಗಾಗಿ ನಾಚಿಕೆಯೇ ಇಲ್ಲದೆ ಎಲ್ಲರಿಗೂ ಸೇರಿದ ಸಂಪತ್ತುಗಳನ್ನು ನಾವಷ್ಟೇ ಅನುಭವಿಸುತ್ತಿದ್ದೇವೆ.ದುರಂತವೆಂದರೆ ಇದರ ಅರಿವೇ ನಮಗಿಲ್ಲ!
-ವರ್ಗೀಸ್ ಕುರಿಯನ್ (ಅಮೂಲ್ ಯಶಸ್ಸಿನ ರೂವಾರಿ)
01 November 2008
ಹೇಳಲು ಇದೆ ಕಾರಣ..
ಈ ನಿನ್ನ ಅಸಮ್ಮತಿಯ ಸೂಚನೆ,ಯಾವುದೇ ಕಾರಣದಿಂದಲೂ ಪ್ರತಿಕ್ರಿಯಿಸದ ನಿನ್ನ ಅಸಡ್ಡೆಯಿಂದಲೇ ಸ್ಪಷ್ಟವಾಗಿದೆ.ಆದರೂ ನಿನ್ನೊಂದಿಗೆ ಮನಬಿಚ್ಚಿ ಹರಟುವ ವಾಂಛೆ.ಎಂದೆಂದೂ ಮುಗಿಯಲಾರದ ರಾತ್ರಿಗಳಲ್ಲಿ ಮನಸ್ಸಿಗೆ ತೀರಾ ಹತ್ತಿರವಾದ ಜೀವದೊಂದಿಗೆ ಎದೆಯಾಳದ ನವಿರು ನೋವನ್ನು ನಿರ್ಭಾವುಕವಾಗಿ ತೆರೆದಿಡುವ ರೀತಿಯಷ್ಟೇ ಇದು.ಇದನ್ನು ಕೇಳಲು ನೀನೊಂದು ಕಿವಿಯಾದರಷ್ಟೇ ಸಾಕು.ಹೌದು ...ಪ್ರೇಮದ ನಗುವನ್ನು ನಿನ್ನಿಂದ ನಿರೀಕ್ಷಿಸಿ ಸೋತಿದ್ದೇನೆ.ಹೀಗಾಗಿ ಇನ್ಯಾವುದೇ ಪ್ರತಿಕ್ರಿಯೆಯ ನಿರೀಕ್ಷೆ ಖಂಡಿತ ಇಲ್ಲ.ಕಡೇಪಕ್ಷ ನಿನ್ನ ಕೆಲಸದ ಏಕತಾನತೆಯಾದರೂ ಕಳೆದೀತು ಕೇಳು.