06 January 2011

ಬೂಟಾಟಿಕೆ ಬಿಡಿ..

ಕೆಲಸವಿಲ್ಲದ ಆಚಾರಿ ಮಗುವಿನ ಮುಕುಳಿ ಕೆತ್ತಿದಂತೆ ಮಾಡಬೇಕಾದ ತುರ್ತು ಕೆಲಸಗಳತ್ತ ಜಾಣ ಕುರುಡರಾಗಿ ಕೆಲಸಕ್ಕೆಬಾರದ ಉತ್ಸವ,ಅಡ್ಡ ಪಲ್ಲಕ್ಕಿ ಉತ್ಸವಗಳಲ್ಲಿ ಮಗ್ನರಾಗಿರುವ ಹಿಂದೂ ಧಾರ್ಮಿಕ ಮಠಗಳ ಗುರುಗಳು,ಹಿಂದೂ ಮೂಲಭೂತವಾದಿ ಸಂಘಟನೆಗಳ ಚುಕ್ಕಾಣಿ ಹಿಡಿದವರು,ಹಿಂದೂವಾದವನ್ನೆ ಬೆಣ್ಣೆ-ಬ್ರೆಡ್ ಮಾಡಿಕೊಂಡಿರುವ ರಾಜಕೀಯ ನೇತಾರರೂ ಗಮನಿಸಲೆ ಬೇಕಾದ ಸಂಗತಿಯೊಂದು ಇಲ್ಲಿದೆ.


ಮೇಲ್ನೋಟಕ್ಕೆ ಬೂಟಾಟಿಕೆಯಂತೆ ಗೋಚರವಾಗುವ ಈ ಮೂರೂ ವರ್ಗದ ಮಂದಿಯ ಕಾಳಜಿಯ ಪ್ರಾಮಾಣಿಕತೆಯನ್ನು ಒರೆಗೆ ಹಚ್ಚಲು ಇದೀಗ ಸಕಾಲ.ದಿ ೩೧ ದಶಂಬರ ೨೦೧೦ ರ 'ಡೆಖ್ಖನ್ ಹೆರಾಲ್ಡ್' ಸಂಚಿಕೆಯ ಪುಟ ಸಂಖ್ಯೆ ೭ ರಲ್ಲಿ "Nayar-Hurley like marriages not valid india: DELHI HC" ಎಂಬ ಶಿರೋನಾಮೆಯಲ್ಲಿ ಪ್ರಕಟವಾಗಿದ್ದ ಸುದ್ದಿಯಂತೆ ಭಾರತೀಯ ಸಂವಿಧಾನ ಬದ್ದವಾದ 'ಹಿಂದೂ ವಿವಾಹ ಸಂಹಿತೆ'ಯಲ್ಲಿ ಹುಟ್ಟು ಹಿಂದೂ ಧರ್ಮೀಯನೊಬ್ಬ/ಳು ಒಂದುವೇಳೆ ಅನ್ಯ ಧರ್ಮದಲ್ಲಿ ಜನಿಸಿದವರನ್ನು ವಿವಾಹವಾದರೆ ಅದನ್ನು ಈ ನೆಲದ ಕಾನೂನು ಒಪ್ಪಿಕೊಳ್ಳದು,ಕಾನೂನಿನ ದೃಷ್ಟಿಯಲ್ಲಿ ಅದು ಅನೈತಿಕ! (ಇಲ್ಲಿ ಒಂದು ಒಂದೇ ಒಂದು ಸಮಾಧಾನದ ಸಂಗತಿಯೆಂದರೆ ವಿವಾಹ ನೋಂದಣಿಯಾದರೆ ಪರವಾಗಿಲ್ಲವಂತೆ,ಆದರೆ ಅದು ಯಾವುದಾದರೂ ಒಂದು ಧರ್ಮದ ಆಧಾರಕ್ಕೆ ಒಳಪಟ್ಟಿರುತ್ತದೆ!) ಹಾಗು ಅಂತಹ ಅಕ್ರಮ ವಿವಾಹಗಳಿಗೆ ಕಾನೂನಿನ ಪ್ರಕಾರ ಸಮ್ಮತಿಯೇ ಇಲ್ಲದಿರುವುದರಿಂದ ವಿಚ್ಚೇದನದ ಪ್ರಶ್ನೆಯೆ ಉಧ್ಭವಿಸುವುದಿಲ್ಲ?! ತಮಾಷೆಯೆಂದರೆ ಹಿಂದೂಗಳ ಹೊರತು ಇನ್ಯಾವುದೆ ಮತೀಯರಿಗೂ ನಮ್ಮ ನೆಲದಲ್ಲಿ ಈ ನಿರ್ಬಂಧವಿಲ್ಲ.ಹೀಗಾಗಿ ನಮ್ಮ ನ್ಯಾಯಾಲಯಗಳೂ ಕೂಡ ಇದಕ್ಕೆ ಬದ್ಧ.

ಅಂದರೆ,ಒಂದೊಮ್ಮೆ ಪ್ರೀತಿಸಿ ಒಂದು ಜೋಡಿ ಪರಸ್ಪರರ ಧರ್ಮಕ್ಕೆ ಮತಾಂತರಗೊಳ್ಳದೆ ಸ್ವ-ಇಚ್ಛೆಯಿಂದ ವಿವಾಹವಾಗಿ ಸುಖವಾಗಿರೋದು ಅಥವಾ ಮುಂದೊಮ್ಮೆ ಸಂಬಂಧದಲ್ಲಿ ವಿರಸ ತೋರಿ ಬಂದಲ್ಲಿ ವಿವಾಹ ವಿಚ್ಚೇದನ ಬಯಸೋದು ಇವೆರಡೂ ಕಾನೂನು ಬಾಹಿರ ಕೃತ್ಯಗಳು! ಇನ್ನಾದರೂ ಸಮುದಾಯವನ್ನು ಸಾಬರ-ಕ್ರಿಸ್ತುವರ ವಿರುದ್ದ ವಿನಾಕಾರಣ ಛೂಬಿಡುವ ಪ್ರವೃತ್ತಿ ತ್ಯಜಿಸಿ :ಈಗಿನಂತೆ ಕೂಗುಮಾರಿಗಳಾಗಿಯೆ ಇರುವ ಬದಲು so called ಹಿಂದೂ ಧಾರ್ಮಿಕ ಮುಖಂಡರು-ಮಠಾಧೀಶರು ಈ ಕಾನೂನು ಸೂಕ್ಷ್ಮವನ್ನು ಪರಿಹರಿಸುವ ಅಸಲು ಪ್ರಾಮಾಣಿಕತೆ ಒಳಗೊಂಡ ಕಾಳಜಿ ತೋರುತ್ತಾರೆಯೆ? ಸಮುದಾಯದ ಸಮನ್ವಯತೆಗಳಿಗೆ ಆದ್ಯತೆ ಕೊಡುತ್ತಾರೆಯೆ? ಇಲ್ಲ ಎಂದಿನಂತೆ ಬೊಜ್ಜು ತುಂಬಿದ ಡೊಳ್ಳು ಹೊಟ್ಟೆ ಬಿಟ್ಟುಕೊಂಡು ಬಫೂನ್ಗಳಂತೆ ಪಳಯುಳಿಕೆಗಳಾಗಿಯೆ ಉಳಿಯುತ್ತಾರೊ? ಎಲ್ಲ ಅವರವರಿಗೆ ಬಿಟ್ಟದ್ದು.

No comments: