ಕನ್ನಡಿಯನ್ನೆ ಇಟ್ಟುಕೊಳ್ಳದ ನನಗೆ ಅದರ ಕೊರತೆಯೆಂದೂ ಕಾಡಿಲ್ಲ...
ಮನಸೊಳಗೆ ಅಚ್ಚೊತ್ತಿರುವ ನಿನ್ನ ಚಿತ್ರದಲ್ಲಿ,
ಫಳಫಳಿಸುವ ಕಣ್ಣುಗಳಿರುವಾಗ ಅದೇ ಸಾಕಲ್ಲ ನನ್ನ ಪ್ರತಿಬಿಂಬಿಸಲು/
ಧೂಳು ಮುಚ್ಚಿದ್ದ ನನ್ನ ಮನೆ ಕಿಡಕಿಯ ಗಾಜಿನ ಮೇಲೆ ಕಿರುಬೆರಳಲ್ಲಿ...
ನೀ ಬರೆದಿದ್ದ ನಿನ್ನದೆ ಹೆಸರು ಇನ್ನೂ ಅಳಿಸಿಹೋಗದಂತೆ ಕಾಪಿಟ್ಟು ಕೊಂಡಿದ್ಧೇನೆ,
ಅದರ ಸನಿಹದಲ್ಲೆ ನಿನ್ನ ಹೆಸರಿಗೆ ನಾನೊತ್ತಿದ್ದ ಮುತ್ತಿನ ಕುರುಹಾಗಿ...
ನನ್ನ ತುಟಿಗುರುತುಗಳೊಂದಿಗೆ ಸಾಕ್ಷಿ ಹಾಗೆ ಇನ್ನೂ ಉಳಿದಿರುವುದೆ ವಿಸ್ಮಯ//
ಅಕಸ್ಮಾತ್ ನೀ ಮರಳಿ ಬಂದರೆ ಮನೆ ಬಾಗಿಲು ಮುಚ್ಚಿರಬಾರದು....
ಎಂದು ನನ್ನ ಮನೆಗೆ ನಾನು ಬಾಗಿಲನ್ನೆ ಇಡಿಸಿಲ್ಲ,
ನಿನ್ನ ಬೆರಳುಗಳ ಹೊರತು ನನ್ನ ಹೃದಯದ...
ವೀಣೆಯ ತಂತಿಯನ್ನ ಇನ್ಯಾರೂ ಮಿಡಿಸಿಲ್ಲ/
ಮರೆತ ಮಾತುಗಳನ್ನೆಲ್ಲ ಒಂದೊಂದಾಗಿ ಅಕ್ಷರಗಳಲ್ಲಿ ಪೋಣಿಸಿ....
ನಿನ್ನ ನೆನಪಿನಲ್ಲಿ ಕಣ್ಣುಗಳುದುರಿಸಿದ ಹನಿಗಳ ಮುತ್ತುಗಳನ್ನೂ ಅದರೊಂದಿಗೆ ಸೇರಿಸಿ,
ನಾ ಕಟ್ಟಿರುವ ಅಂದದ ಮಾಲೆ...
ಇನ್ನೂ ಅಂದವಾಗಿ ಕಂಗೊಳಿಸೀತು ನಿನ್ನ ಮೇಲೆ//
ಕತ್ತಲಲ್ಲಿ ಬೆಳಕಿನ ತಲಾಶು ಮಾಡುವ....
ಹುಂಬ ಪ್ರಯತ್ನಕ್ಕೆ ಆಶಾಕಿರಣ ಮುಂದೊಮ್ಮೆ ಸಿಕ್ಕರೆ,
ನೀನನ್ನ ನಕ್ಕು ತಬ್ಬಿ ಹರಿಸಬಹುದಾದ ಅಕ್ಕರೆ/
ಶೇಷಪ್ಪ ಅಯ್ಯರನ ಕಾಲದಲ್ಲಿ
'ಯಾವುದೆ ಉದ್ದೇಶವಿಲ್ಲದೆ,ಅಮಿಷಗಳಿಲ್ಲದೆ,ನಿಷ್ಕಾರಣವಾಗಿ ಚಿಗುರೊಡೆಯುವುದೆ ನಿಜವಾದ ಒಲವು ;
ಒಂದುವೇಳೆ ಉದ್ದೇಶ ಸಾಧನೆಗೆ ಅಮಿಶದೊಂದಿಗೆ ಖಾಸಾ ಕಾರಣವಿದ್ದು ಹುಟ್ಟಿದ್ದರೆ ಅದು ಒಲವಲ್ಲ ಕೇವಲ ಭ್ರಮೆ',
ಎಂದು ಶೇಕ್ಸ್ ಪಿಯರ್ ಹೇಳಿದ್ದ ಮಾತು...
ಅಕ್ಷರಶಃ ಈ ಕಾಲಕ್ಕೂ ನಿಜ,
ಉದಾಹಾರಣೆಗೆ ನನ್ನನ್ನೆ ತೆಗೆದುಕೊ//
ಏನಾದರು ಕೇಳಿದರೆ ಕೊಡುವ ಭಗವಂತನೊಬ್ಬ....
ಈ ಜಗತ್ತಿಗೆ ಬೇಕಾಗಿದ್ದ,
ನಿತ್ಯ ನಿನ್ನ ಸೇರುವ ನನ್ನ ಪ್ರಾರ್ಥನೆಗೆ ತಥಾಸ್ತು ಎನ್ನಲಾದರೂ...
ಅಂತವನೊಬ್ಬ ಖಂಡಿತವಾಗಿ ಈ ಭೂಮಿಯಲ್ಲಿರಬೇಕಿತ್ತು/
ಗೊತ್ತಿಲ್ಲ ನಿನ್ನ ಸಾಂಗತ್ಯ ನನಗ್ಯಾಕೆ ಇಷ್ಟ?
ನೀ ಜೊತೆಗಿಲ್ಲದ ನೋವು ಸಹಿಸೋಕೆ ಅದೇಕೆ ಬಲು ಕಷ್ಟ?,
ಬಹುಷಃ ಇದೆ ಏನೊ ಒಲವು//
ಗಂಡಸರ ಎಲ್ಲಾ ಬುದ್ದಿಯೂ ಸೊಂಟದ ಕೆಳಗೆ...
ಎರಡು ತೊಡೆಗಳ ನಡುವೆ ಇದೆ ಎಂದು ನಂಬಿದೆ ಈ ಜಗತ್ತು,
ನಾನೂ ಆ ಸಾಲಿನ ಒಬ್ಬ ಸದಸ್ಯ ಎಂದು ನೀನಂದುಕೊಂಡಿದ್ದರೆ...
ಕ್ಷಮಿಸು ನಿನ್ನ ಎಣಿಕೆ ತಪ್ಪು/
ನಿನ್ನ ಬಾಳಲ್ಲಿ ನೀ ಭೇಟಿಯಾಗಿ...
ಮನಸಲ್ಲೂ ಒಂಚೂರು ಜಾಗ ಕೊಟ್ಟ ಮೊದಲನೆ ವ್ಯಕ್ತಿ ನಾನಾಗಿಲ್ಲದಿರಬಹುದು,
ಅನ್ನುವ ವಿವೇಕ ನನಗಿದೆ....
ಆದರೆ ಕಡೆಯವನಂತೂ ಖಂಡಿತ ನಾನಾಗಿಯೆ ತೀರುತ್ತೇನೆ ಎಂಬ ತೀರದ ವಿಶ್ವಾಸ ನನ್ನದು//
"ಸೂಳೆಮಕ್ಕಳಿಗೆ ಸಿಗೋದು ಕುದುರೆತಟ್ಟು...
ಕುದುರೆತಟ್ಟಿರೋದೆ ಸೂಳೆಮಕ್ಕಳಿಗಾಗಿ" ಎಂಬ ಗಾದೆಯ ಮೇಲೆ ನನಗೆ ಅಚಲ ವಿಶ್ವಾಸವಿದೆ,
ಒಳ್ಳೆಯದಕ್ಕೆ ಯಾವಾಗಲೂ ಒಳ್ಳೆಯದೆ ಜೋಡಿ...
ಕೆಟ್ಟದಕ್ಕೆ ಕೆಟ್ಟದು ಎಂಬ ಅರ್ಥ ಈ ಗಾದೆಯದ್ದು....
ಇದಕ್ಕೆ ನಾವಿಬ್ಬರು ಪರಸ್ಪರ ಭೇಟಿಯಾಗಿರೋದೆ ಸಾಕ್ಷಿ/
ಹುಚ್ಚನೆನ್ನಲಿ...ಮರುಳನೆಂದಾದರೂ ಕರೆಯಲಿ....
ಕೃಷ್ಣಪಕ್ಷದ ಕೊನೆಯ ದಿನದಲ್ಲೂ,
ಪೂರ್ಣಚಂದ್ರನ ನಿರೀಕ್ಷಿಸುವ ನನ್ನ ಕಾತರಕ್ಕೆ...
ಯಾರು ಎಲ್ಲಿ ಬಡಿದು ಕೊಂಡಾದರೂ ನಗಲಿ...ನೀ ಬರುವ ತನಕ,
ನಿನ್ನ ಕಾಯೋದೆ ನನ್ನ ಕಾಯಕ//
ನೀ ಶಶಿಯಾದರೆ ನಾನಾಗುವೆ ನಿನ್ನ ಹಿಂಬಾಲಿಸುವ ರಾತ್ರಿ,
ಅಮಾವಾಸ್ಯೆಯ ಕಾಳಿರುಳಲ್ಲೂ ನಿನಗಾಗಿ ಪ್ರಾಣ ಒತ್ತೆ ಇಟ್ಟಾದರೂ ನಾ....
ಬೆಳದಿಂಗಳ ತರೋದು ಖಾತ್ರಿ/
ಮುಕ್ತ ಮನಸ್ಸಿನ ಸುಪ್ತ ಕೋರಿಕೆಗಳನ್ನೆಲ್ಲ ಈಡೇರಿಸಲು...
ಬರುವ ನಿನ್ನ ಆಗಮನದ ಕಾತರದ ನಿರೀಕ್ಷೆಯಲ್ಲಿ,
ನನ್ನ ಮನಸೆಲ್ಲ ಪ್ರಪ್ಫುಲ್ಲಿತವಾಗಿದೆ//
ಸೂಕ್ತ ತಾವಿನ ಹುಡುಕಾಟದಲ್ಲಿರುವ ನನ್ನ ಒಲವಿಗೆ....
ಸಿಕ್ಕ ಮೊದಲ ಹಾಗು ಕೊನೆಯ ನಿಲುದಾಣ ನಿನ್ನೆದೆ,
ಸೂಕ್ಷ್ಮ ಮನಸಿನ ನವಿರು ಭಾವಗಳಿಗೆ ಬಣ್ಣ ಹಚ್ಚಿ ಸಿಂಗರಿಸುವ ಉಮೇದಿದೆ ನನಗೆ...
ಆದರೆ ನೀ ಮುಂದೊಮ್ಮೆ ಮರಳಿ ಬರುವುದಾದರೆ ಮಾತ್ರ/
ಎದೆಯ ಗುಡಿಸಿಲ ಬಾಗಿಲಲಿ ಬಿಟ್ಟ,
ರಂಗೋಲಿಯ ಪ್ರತಿಯೊಂದು ರೇಖೆಗಳಿಗೂ...
ನಿನ್ನ ಹೆಜ್ಜೆ ತಾಕಿ ತಣಿಯುವ ಕಾತರವಿದೆ//
07 January 2011
Subscribe to:
Post Comments (Atom)
1 comment:
I just got a chance to visit this blog.....supper..tumba chennagi barediddeera
Post a Comment