17 January 2011

" "

ಮಾಸಿದ ತುಟಿಗಳೂ ತುಸು ಅರಳುತ್ತವೆ...
ಬಾಡಿದ ಕಂಗಳೂ ಕ್ಷಣಕಾಲ ಮಿನುಗಿ ಹೊಳೆಯುತ್ತವೆ,
ನಿನ್ನೊಂದಿಗೆ ಕಳೆದ ದಿನಗಳು ಸ್ಮೃತಿಯಿಂದೀಚೆ ಬಂದಾಗ/
ಜಟಿಲವಾಗಿದ್ದ ಜೀವನದ ದಿನಗಳೆಲ್ಲ ಉಲ್ಲಾಸಮಯವಾಗಿಸಲು ನೀ ನನ್ನೆಡೆಗೆ ಬರಬೇಕಾಯ್ತು...
ಅರ್ಥ ಕಾಣದೆ ಅರ್ಧದಲ್ಲೆ ನಿಂತಿದ್ದ ನಾಳಿನ ಹುಡುಕಾಟ ಮತ್ತೆ ಚಾಲನೆಗೊಳ್ಳಲು
ನೀ ನನ್ನ ಕೈ ಹಿಡಿಯಬೇಕಾಯ್ತು//


ಆಂತರ್ಯದ ಒರತೆಗೆ ಹರಿಯಲೊಂದು ತೊರೆ...
ಮನದ ಭಾವದಲೆಗಳಿಗೆ ಬಂದಾಗೆಲ್ಲ ನೆರೆ,
ಈಜಿ ದಡ ಮುಟ್ಟಲು ನನಗೆ ಬೇಕಿದ್ದುದ್ದು ನಿನ್ನೆದೆಯ ದಂಡೆ/
ರೆಪ್ಪೆ ಮುಚ್ಚಿದ್ದರೂ ನಿನ್ನದೇ ಹುಡುಕಾಟ...
ತೆರೆದ ರೆಪ್ಪೆಯೊಳಗಿನ ದೃಷ್ಟಿಗೂ,
ನಿನ್ನ ಕಾಣುವ ಕಾತರದ ಮಿಡುಕಾಟ//


ನೋವಿರದ ಎದೆಯಿಂದ ಚೂರು ಒಲವ ಸೆಲೆ...
ಕಣ್ರೆಪ್ಪೆಯಲ್ಲಿ ಕಾದಿರುಸುವ ಭರವಸೆ ಹೊತ್ತ ಪ್ರೀತಿಸುವ ಮನದಲ್ಲಿ ತುಸು ನೆಲೆ,
ಇವಿಷ್ಟೇ ಬೇಕಾಗಿದ್ದದ್ದು ನನಗೆ...
ಆದರೆ ಅದು ನಿನ್ನಲ್ಲಿ ಅನ್ನುವ ಪೂರ್ವ ಷರತ್ತಿನ್ನೊಂದಿಗೆ...!/
ಪ್ರಮಾದವಾದ ನಿವೇದನೆಗೆ ನಿರಾಕರಣೆಯ ಕಹಿಯ ನಿರೀಕ್ಷೆ ಇದ್ದಿರಲಿಲ್ಲ...
ಒಪ್ಪಿಕೊಳ್ಳಲಾಗದಿದ್ದರೆ ಕೊನೆಪಕ್ಷ ನೀನು ಸುಮ್ಮನಾದರೂ ಇರಬಹುದಿತ್ತು,
ಏನೊಂದನ್ನೂ ಅನ್ನದೆ//


ಮದರಂಗಿಯಲ್ಲಿ ಅದ್ದಿ ತೆಗೆದ ಮುಂಜಾವಿನ ಸೂರ್ಯ....
ಕಡುಗಪ್ಪು ಕಾಡಿಗೆಯಲ್ಲೆ ಚುಕ್ಕಿಯಂತಾದ ನಸುನಗುವ ಚಂದ್ರ,
ಇರುಳ ಬರದಲ್ಲೂ ಮಿನುಮಿನುಗೊ ತಾರೆಗಳ ಹಿಂಡು...
ಇವೆಲ್ಲ ನನಗೆ ನಿಜಕ್ಕೂ ಸುಂದರವೆನಿಸೋಕೆ ನೀ ನನ್ನ ಜೊತೆಗಿರಬೇಕು/
ಒಂಟಿ ಬಾಳಲ್ಲಿ ಕಟ್ಟುಪಾಡುಗಳಿರೋಲ್ಲ ಅಂತಾರೆ....
ಆದರೆ ನನ್ನ ಸಂದಿಗ್ಧವೆ ಬೇರೆ,
ಬಾಳ ಇರುಳಲ್ಲಿ ಶಶಿಯಾಗಿ ನೀನೊಮ್ಮೆ ಬಂದ ಮೇಲೆ ರೆಪ್ಪೆ ಮುಚ್ಚಿಕೊಂಡೆ ನಾನು....
ಕಾಣಲಾಗದಂತೆ ಇನ್ನೊಂದು ಮಿನುಗು ತಾರೆ//


ಬಿಟ್ಟು ಬಾಳಲಾಗದ ಅನಿವಾರ್ಯತೆ...
ಜೊತೆಯಿರದೆ ಬಾಳಲೆ ಬೇಕಾದ ಕಟುವಾಸ್ತವ,
ನನಗೆ ಹುಟ್ಟಿನಿಂದ ಬಂದ ವಿಧಿಯ ಬಳುವಳಿ/
ನನ್ನ ಕಣ್ಣ ಹೊಳಪಲ್ಲಿ ನಿನ್ನ ಬಿಂಬ ಇರುವ ತನಕ...
ನನ್ನ ಉಸಿರ ತುಂಬಿ ನಿನ್ನ ಹೆಸರು ಬರುವ ತನಕ,
ನಾನು ಈ ದರಿದ್ರ ಪ್ರಪಂಚದ ಅತ್ಯಂತ ಸಿರಿವಂತ//


ನಿನ್ನ ನೆನಪುಗಳ ಹೊಳಪಲ್ಲಿ ಹಚ್ಚಗೆ...
ನೀ ಕೊಡಮಾಡಿದ್ದ ಸಂತಸದ ದಿನಗಳ ಮರುಕಳಿಕೆಯಲ್ಲಿ ಬೆಚ್ಚಗೆ,
ಕೊನೆಯವರೆಗೂ ಹೀಗೆ ಇರುತೀನಿ....ನಿನ್ನದೆ ಕನಸಲ್ಲಿ ಬಾಳ ಕಳೆಯುತೀನಿ/
ನಿನ್ನ ಸುಖ ಸಂಭ್ರಮದ ಮುಂದೆ ಉಳಿದದ್ದೆಲ್ಲ ಗೌಣ...
ಇದು ನನಗೂ ನನ್ನ ಸುಖ ಸಂತಸಕ್ಕೂ ಸೇರಿ ಅನ್ವಯಿಸುವ ಮಾತು...!//

ಇಲ್ಲದಿದ್ದರೂ ನಿನ್ನ ಕಣ್ಣಲಿ ನನಗೆ ಆ ಅರ್ಹತೆ...
ರಾಧೆಯೆಂದಾದರೂ ಕರಿ,
ಸೀತೆಯೆಂದಾದರೂ ಸರಿ...
ರಾಮನಾಗಲೂ ತಯಾರು ನಾ ...
ಕೃಷ್ಣನೂ ಆದೇನು ನಿನಗಾಗಿ/
ಯಾವ ರೂಪದಲ್ಲಿ ನೀ ಬಂದರೂ ಸರಿಯೇ...
ಯಾವ ನಾಮದಲಿ ಕರೆದರೂ ಸರಿಯೆ...
ನಿನ್ನ ಕರೆಯ ಹಿಂದಿನ ಒಲವ ಹೊರತು ಇನ್ನೇನನ್ನೂ ನಾನರಿಯೆ//


ನಿನ್ನ ನೆನಪು ಕಾಡುವಾಗ,
ನನ್ನೆದೆಯ ಶ್ರುತಿಗೆ ಬಾನೂ ತನ್ನ ದನಿ ಬೆರೆಸುವಾಗ...
ಮಳೆಯಲ್ಲಿ ತೋಯಲು ನಾನಿಷ್ಟಪಡುತ್ತೇನೆ ;
ಸುರಿ ಮಳೆಯಲ್ಲಿ ನೆನೆವ ನನ್ನ ಕಣ್ಣೀರು ಇನ್ಯಾರಿಗೂ ಕಾಣಬಾರದದಲ್ಲ?!/
ನನ್ನ ದುಃಖ ಕೇವಲ ನನ್ನದು...
ಗಿರಿಯ ನೆತ್ತಿಯ ಸೋಕಿದ ಮೋಡಕ್ಕೆ ಹನಿಯಾಗಿ ಅದೆ ಗಿರಿಯ ಪಾದ ತಾಕುವ ತವಕ,
ಬಹುಷಃ ನಿನ್ನ ಮುಂದೆ ನಾನೂರುತ್ತಿರುವ ಮಂಡಿಗೆ
;ಯಾಚಿಸುತ್ತಿರುವ ಒಲವ ಭಿಕ್ಷೆಗೆ ಅದೊಂದು ಮಾತ್ರ ಹತ್ತಿರದ ಹೋಲಿಕೆ//


ಮತ್ತೊಮ್ಮೆ ಏನೊಂದನ್ನೂ ಆಶಿಸಲಾರೆ...
ಒಂದೆಮ್ಮೆ ನೀ ನನಗೆ ಸಿಗಬಹುದಿತ್ತು,
ನಾ ನಿನ್ನೊಳಗೆ ಸೇರಿ ಹೋಗಬಹುದಿತ್ತು/
ಕನಸಲಾದರೂ ಸರಿ
;ಕೆಲಮಟ್ಟಿಗಾದರೂ ನಾವಿಬ್ಬರೂ ಒಬ್ಬರೊಬ್ಬರ ನನಸಾಗಬಹುದಿತ್ತು...!//


ಸಿಗದ ಸಂಭ್ರಮದ ಹಿಂದೆ ಭ್ರಾಂತ...
ಕಾಯುತ್ತಲೇ ಇರುವ ಹಣೆ ಬರಹ ನನ್ನದು,
ಸಿಗಲಾರದ ನಿನ್ನ ಒಲವಿಗೆ ಕಾತರಿಸುತ/
ಜೀವನ ಪೂರ್ತಿ ಒಂಟಿತನದ ಸೂತಕ ಸೋಕಿರುವಾಗ...
ಯಾವ ಜಾತಕ ತಾನೇ ಏನು ಮಾಡೀತು?
ಸಂತಸ ಮರಳಿ ಬಾಳಲಿ ಹೇಗೆ ಮೂಡೀತು?//

ಕವಿಯಾದ ಕರ್ಮಕ್ಕೆ ಸಂಭ್ರಮಿಸಲೊ..
ಏನೂ ಯೋಗ್ಯತೆಯಿಲ್ಲದ ನನ್ನಂತವನನ್ನೇ ಕವಿಯಾಗಿಸಿದ/
ನಿನ್ನ ನಡುವಳಿಕೆಗೆ ಬೇಸರಿಸಿ ಪರಿತಪಿಸಲೊ....
ಗೊತ್ತಾಗುತ್ತಿಲ್ಲ!//

No comments: