03 January 2011

ಒಂದಷ್ಟು ಕನವರಿಕೆಗಳು...

ಮೌನ ಕರೆಯೊಂದರ ಸುಪ್ತ ನಿರೀಕ್ಷೆ...
ಒಂದು ಚೂರಾದರೂ ಒಲವು ನಿನ್ನಿಂದ ಸಿಕ್ಕೀತು ಎಂಬ ಅದಮ್ಯ ಅಪೇಕ್ಷೆ,
ನನ್ನಲ್ಲಿ ಇನ್ನೂ ಚೈತನ್ಯ ಉಳಿಸಿದೆ/
ಹಳೆಯ ಹಾಡಿನಂತೆ...
ಹುಟ್ಟೂರಲ್ಲಿ ಹಿಂದೆಂದೋ ಎಡವಿ ನಡೆದ ಹಾದಿಯ ಮರೆಯಲಾಗದ ಜಾಡಿನಂತೆ,
ಯವ್ವನ ಉಕ್ಕುತ್ತಿರುವ ಆರಂಭದ ದಿನಗಳಲ್ಲಿ ಹುಚ್ಚು ಹುಚ್ಚು ಅಲೆದ ಬೀದಿಯಂತೆ...
ನಿನ್ನ ನೆನಪಿನ ಊರಲ್ಲಿ ನಡೆವಾಗ ನಾನು ಸಂತೃಪ್ತ//


ಜುಳುಜುಳು ನಾದಗೈಯುವ ತುಂಗೆಯ ದಡದಲ್ಲಿ ಬೆಳದಿಂಗಳ ರಾತ್ರಿಯಲ್ಲಿ.....
ಕೂತು ಹರಿವ ನೀರಲಿ ಇಳಿಬಿಟ್ಟಿದ್ದ ಒದ್ದೆ ಕಾಲ್ಬೆರಳಲಿ....
ದಡದ ಮರಳ ಮೇಲೆ ನಾ ಬರೆದ ನಿನ್ನ ಹೆಸರಿಗೆ ನಿನ್ನದೆ ಪರಿಮಳವಿತ್ತು...
ಜೊತೆಗೆ ನನ್ನೆದೆಯ ತುಂಬಾ ನಿನ್ನದೆ ನಿರೀಕ್ಷೆಯ ತಳಮಳವಿತ್ತು,
ಕನಸಲೂ ಬೆವರಿದ ಭಾವಗಳು...
ಬಿಸಿಯುಸಿರು ಬಿಡುತ್ತ ಬೆದರುತ್ತಲೆ,
ನೆನ್ನೆಗಳ ಕಿವಿಗಳಲ್ಲಿ ಉಸುರಿದ್ದು ಕೇವಲ ನಿನ್ನ ಹೆಸರು/
ಮುಚ್ಚಿಡಲಾಗದೆ ಬಟಾಬಯಲಾಗುವ ಗುಟ್ಟು....
ಮೈಲಿಗೆಯಾಗಿಸದ ನೋವಿಲ್ಲದ ಮುಟ್ಟು:ನೀನು...
ವಿಚಿತ್ರವೆನಿಸಿದರೂ ಮುಂದಿನ ಹೋಲಿಕೆ,
ಕೀವಾದಾಗ ಹೊಸದೆ ಸುಖದ ನೋವುಕ್ಕಿಸುವ ಕಜ್ಜಿಯ ಮಾಲಿಕೆ....
ಇವೆಲ್ಲವನ್ನೂ ನಿವಾಳಿಸಿ ಎಸಿಯಬೇಕು...
ಎದೆಗೆ ತಿವಿದು ನೀ ನುಂಟುಮಾಡಿದ ಯಾತನೆಯ ಮುಂದು//

ಹೊಸ ವರ್ಷವಂತೆ...
ಅದೇನೂ ಸಂಭ್ರಮವಂತೆ...
ನನಗಂತೂ ಅರ್ಥವೆ ಆಗಲಿಲ್ಲ...
ನನ್ನೆಲ್ಲ ಸುಖ ಸಂಚಿತ ಖಾತೆ ನಿನ್ನೆದೆಯಲ್ಲಿ ತೆರೆದು,
ಆಸೆಗಳನ್ನೆಲ್ಲ ಅಲ್ಲೆ ದೀರ್ಘಾವಧಿ ಮುದ್ದಾಂ ಇಟ್ಟಿರುವಾಗ ನನಗೆಲ್ಲಿಯ ಹುಸಿ ಸಂಭ್ರಮ?/
ನನ್ನೆಲ್ಲ ನಿರೀಕ್ಷೆಗಳ ಗಜಗಾಮಿನಿ ಜಾಡು ಮರೆಯದೆ...
ನಿನ್ನೆದೆಯತ್ತಲೆ ಮೌನವಾಗಿ ಸದ್ದಿರದ ಹೆಜ್ಜೆಯಿಡುತ್ತ ಸಾಗುವಾಗ,,,
ಇನ್ನುಳಿದವರೆಡೆ ಆಕರ್ಷಿತನಾಗುವ ಅಡ್ಡ ಹಾದಿಯತ್ತ,
ನುಗ್ಗೀತಾದರೂ ಹೇಗೆ ನನ್ನ ಮನಸು?//

ನಿನ್ನದೆ ಕನಸಿನ ಅರೆ ಮಂಪರಲ್ಲಿ ನೆನ್ನಿನಿರುಳು ನಾ ಮಲಗಿದ್ದಾಗ...
ಸ್ವಪ್ನದ ಭಾವಗಳಿಗೆ ಸ್ಪಂದಿಸುತ್ತಾ ಮಗ್ಗುಲಾಗಿ ಕೈ ಚಾಚಿ...
ನಿನ್ನ ತಬ್ಬಿ ಹಿಡಿದು ನಿನ್ನಧರಗಳಿಗೆ ಗಾಢವಾಗಿ ಮುತ್ತಿಟ್ಟೆ,
ಆದರೆ ನಿನ್ನ ಪ್ರತಿಸ್ಪಂದನೆ ಇಲ್ಲದೆ ಗೊಂದಲವಾಗಿ ನಿದ್ದೆ ಬಿಟ್ಟೆದ್ದು ಕಣ್ತೆರೆದಾಗ...
ಅದು ಕೇವಲ ದಿಂಬು ಎಂಬ ಭೀಕರ ವಾಸ್ತವ ಅಣಗಿಸುತ್ತಿತ್ತು/
ಬಾಳಲ್ಲಿ ಮತ್ತೆ ನೀ ನನಗೆ ಸಿಗಲೆ ಬೇಕ?
ಹಿಂದಿನಂತೆ ಪುನಃ ಪುನಃ ನಾವು ಸಂಧಿಸಲೆ ಬೇಕ?
ಮಾತನಾಡಲೆ ಬೇಕ?
ಆಡದ ನುಡಿಗಳಿಗೂ ಅರ್ಥಪೂರ್ಣ ಚೌಕಟ್ಟು ಹಾಕುವ...
ಈ ಆಪ್ತ ಮೌನವೇ ಸಾಕ?//

ಅಚಲ ಅದಮ್ಯ ನಿರೀಕ್ಷೆಯೊಂದೆ...
ಇಲ್ಲಿಯವರೆಗೆ ನನ್ನನು ಜೀವಂತವಾಗಿಟ್ಟಿರುವುದು,
ನಿನ್ನ ಹೆಜ್ಜೆಗಳ ಸಪ್ಪಳದ ಸಲುವಾಗಿಯೆ....
ನಾ ಹಗಲಿರುಳೂ ನನ್ನ ಮನೆ ಬಾಗಿಲ ತೆರೆದಿಟ್ಟಿರುವುದು/
ಮುಗಿದೀತಾದರೂ ಹೇಗೆ ಬಾಳ ಕಾದಂಬರಿ...
ಇನ್ನೂ ಅಂತಿಮ ಅಧ್ಯಾಯ ಬರೆದಿಲ್ಲ....
ಬರವಣಿಗೆ ಅರ್ಧಕ್ಕೆ ನಿಂತಿದೆ ನೀ ಮರಳಿ ಬರುವೆಯೂ,
ಇಲ್ಲವೋ ಇನ್ನೂ ಖಚಿತವಿಲ್ಲ//

No comments: