09 January 2011

ಹೇಳಲಾರೆ..ಸುಮ್ಮನೂ ಇರಲಾರೆ...

ಅದೆಷ್ಟೇ ಬಯಸಿದರೂ ನನ್ನ ಮನಸು ಕನಸಿನಲ್ಲೂ ನಿನ್ನ ದ್ವೇಷಿಸಲಾರದು...
ನೀನಿಲ್ಲದ ನನಸಿನಲ್ಲಿ ಒಂಟಿಯಾಗಿದ್ದರೂ ಸರಿ,
ಇನ್ಯಾರೊಂದಿಗೂ ಸೇರಿ ಮೈಲಿಗೆಯಾಗಲಾರದು/
ಸಾಲದು ನಿನ್ನ ಉಪೇಕ್ಷೆ...ಇನ್ನಷ್ಟು ನಿಂದಿಸು ನನ್ನ....ತೀರಲಿ ಎಲ್ಲ ಸುಪ್ತ ಅಪೇಕ್ಷೆ...
ನಿರಾಸೆಗೊಳಿಸು...ಇನ್ನಷ್ಟು ನನ್ನ ಕಾಯಿಸು...ನೋಯಿಸು,
ಮನದಣಿಯೆ ದೂಷಿಸು...ಇದೆ ನನ್ನೊಳಗೆ ಇನ್ನಷ್ಟು ನೋವುಣ್ಣುವ ನಿರೀಕ್ಷೆ//


ಕಲ್ಲೆದೆಯನ್ನೂ ಕರಗಿಸುವಂತಹ ಕವಿತೆಯ ಗೀಚಬೇಕು...
ನಿನ್ನೆಡೆಗಿನ ನನ್ನ ಒಲವ ಆಳ ಕಂಡು ಸ್ವತಹ ನಿನ್ನ ಹೃದಯವೆ ನಾಚಬೇಕು,
ಅದೇ ಅವಕಾಶ ಬಳಸಿಕೊಂಡು ನಿನ್ನ ಪ್ರೀತಿ ಖಜಾನೆಯನೆಲ್ಲ ನಾ ದೋಚಬೇಕು/
ಹೂಂ.
ಎಷ್ಟೊಂದಿವೆ ಕನಸುಗಳು...
ನೀ ಮರಳಿ ಬರಬೇಕಷ್ಟೆ//


ಸುಕ್ಕುಗಟ್ಟಿದ ಹಿಡಿಯಷ್ಟು ಕನಸುಗಳಿಗೆ ಕಡೆಯ ಉಸಿರು ಮಣಿಯುವ ಮುನ್ನ...
ಬಂದು ಒಂದೇ ಒಂದು ಬಾರಿ ಕೈ ತಾಕಿಸು,
ಒಲವು ಉಳಿದಾದರೂ ಉಳಿಯಲಿ ದಯವಿಟ್ಟು ನಿನ್ನ ಬಿಸಿಯುಸಿರನೊಮ್ಮೆ ನನ್ನೆದೆಗೆ ಸೋಕಿಸು/
ಮತ್ತದೇ ಮತ್ತಿನ ಮಾತು...
ನಿನ್ನ ನೆನಪಿನ ಆಳದಲ್ಲಿ ಕರಗಿ ಹೋಗಿರುವಾಗ ನಾನು,
ಹಾಗೆಯೆ ಸ್ಥಿರವಾಗಿ ನಿಂತು ಹೋಗಬಾರದೆ ಈ ಹೊತ್ತು......?!//


ಸುಮ್ಮನೆ ಸುಳ್ಳು ಹೇಳಿದರೇನು ಸುಖ?
ಹೌದು ನಾ ನಿನ್ನ ಮನಸಾರೆ ದ್ವೇಷಿಸುತ್ತೇನೆ...
ಆದರೆ ಇದರ ಹಿಂದಿನ ಸತ್ಯ ಗೊತ್ತ?,
ಅದಕ್ಕೂ ನೂರುಪಟ್ಟು ಹೆಚ್ಚು...
ಜೀವ ಬಿಟ್ಟು ಕೇವಲ ನಿನ್ನನ್ನಷ್ಟೆ ಪ್ರೀತಿಸುತ್ತೇನೆ//


ಸಂಕಟ ಬಚ್ಚಿಟ್ಟು ತುಟಿಯಂಚಲಿ...
ಮುಗುಳ್ನಗುವ ಚಿಮ್ಮಿಸುವ ಕಲೆಯೀಗ ಕರಗತವಾಗಿದೆ,
ಕೃತಕ ಆನಂದದ ಮುಖವಾಡದ ಮುಂದೆ...
ಅಸಲಿ ದುಃಖದ ಬತ್ತಲು ಮುಚ್ಚಿ ಹೋಗಿ...
ಸೋಗಿಗೆ ಶರಣಾಗತವಾಗಿದೆ/
ಸಿಕ್ಕ ಸಿಕ್ಕಲ್ಲೆಲ್ಲ ಅಲೆದಾಡುವ ಹುಚ್ಚುಮನಕ್ಕೆ...
ಕಡೆಗೆ ನೆಲೆಸಲು ಮನಸಾಗೋದು ಕೇವಲ ನಿನ್ನ ಕನಸಲ್ಲಿ,
ಸ್ವಪ್ನವನ್ನೆಲ್ಲ ವಾಸ್ತವದ ರಂಗಿನಲ್ಲಿ...
ಮಿಂಚಿಸುವ ಆಸೆ ಮೂಡುವುದು ನಿನ್ನ ನನಸಲ್ಲಿ//


ಧೂಳು ಮುಚ್ಚಿದ್ದ ನನ್ನ ಮನೆ ಕಿಡಕಿಯ ಗಾಜಿನ ಮೇಲೆ...
ಕಿರುಬೆರಳಲ್ಲಿ ನೀ ಬರೆದಿದ್ದ ನಿನ್ನದೆ ಹೆಸರು,
ಇನ್ನೂ ಅಳಿಸಿಹೋಗದಂತೆ ಕಾಪಿಟ್ಟು ಕೊಂಡಿದ್ಧೇನೆ/
ಅದರ ಸನಿಹದಲ್ಲೆ ನಿನ್ನ ಹೆಸರಿಗೆ ನಾನೊತ್ತಿದ್ದ....
ಮುತ್ತಿನ ಕುರುಹಾಗಿ ನನ್ನ ತುಟಿಗುರುತುಗಳೊಂದಿಗೆ,
ಸಾಕ್ಷಿ ಹಾಗೆ ಇನ್ನೂ ಉಳಿದಿರುವುದೆ ವಿಸ್ಮಯ//

No comments: