ಕದಡಿದ ಮನದ ಕೊಳದಲ್ಲಿ ಒಲವಿನ ಅಲೆಗಳು ಏಳುತ್ತಿಲ್ಲ...
ಇನ್ನೊಂದು ಹುಸಿ ಕಲ್ಲನೆಸೆದು ಹೊಸ ಅಲೆಗಳ ಗುಚ್ಛವನೆಬ್ಬಿಸಲು,
ನನ್ನ ಮನಸೂ ಕೇಳುತ್ತಿಲ್ಲ/
ಹಗಲಿಗೂ ಇರುಳಿಗೂ ಎಡೆಬಿಡದ ಜೂಟಾಟ...
ಕಾಲದ ಅರಿವಿಲ್ಲದ ನನಗೆ ಕತ್ತಲೆಗೂ ಬೆಳಕಿಗೂ ವ್ಯತ್ಯಾಸ ಅರಿವಾಗದಿರೋದು,
ಮಾತ್ರ ದುರಂತ//
ನೀನಿಷ್ಟು ಸ್ವಾರ್ಥಿಯಾಗಿರಲಿಲ್ಲ...
ನನಗೆ ಗೊತ್ತಿರುವ ನಿನ್ನ ನಿಲುವುಗಳು ಇಷ್ಟೊಂದು ಸಂಕುಚಿತವಾಗಿರಲೂ ಇಲ್ಲ,
ಅದೆಷ್ಟು ಬದಲಾಗಿ ಬಿಟ್ಟೆ...!
ಸಣ್ಣದೊಂದು ಸುಳಿವನ್ನೂ ಕೊಡದೆ?/
ನಿಲ್ಲದೆ ಮನದ ದಡಕ್ಕೆ ಒಂದರ ಹಿಂದೊಂದು ಅಪ್ಪಳಿಸುವ....
ಭಾವದಲೆಗಳು ಮರಳುವಾಗ,
ಎದೆಯಲ್ಲಿ ಉಳಿಸಿ ಹೋಗಿದ್ದು ಕೇವಲ ನಿನ್ನ ನೆನಪಿನ ಪಸೆಯನ್ನ/
ನನ್ನೆಲ್ಲ ಮನಸಿನ ಮಾತುಗಳಿಗೆ ಅಂಟಿದೆ...
ವೇದನೆಯ ಬೇನೆ,
ನಿನಗೂ ಗೊತ್ತು ಇದಕ್ಕೆಲ್ಲ ಕಾರಣ ನೀನೆ//
ಸಾಗಿ ಬಂದ ಹಾದಿಯಲ್ಲಿ ಹರಡಿ ಚಲ್ಲಿದ್ದ ಹೂವುಗಳೆ...
ಮುಳ್ಳುಗಳಾಗಿ ಬದಲಾದ ವಿಸ್ಮಯ ವಾಸ್ತವವನ್ನು ಅರಗಿಸಿಕೊಳ್ಳಲಾಗದಷ್ಟು ನೊಂದಿದ್ದೇನೆ...
ಬೆಂಕಿಯ ಸುಳಿವಿರದಿದ್ದರೂ,
ನೋವಿನುರಿಯಲ್ಲಿ ಬೆಂದಿದ್ದೇನೆ//
ಎಡವಿ ಬಿದ್ದರೂ ಸರಿ...
ತಡವಿ ಮುಳ್ಳ ಅಂಚನು,
ನೆತ್ತರಲಿ ತೊಯ್ದರೂ ಸರಿ/
ಇದು ಆಯ್ಕೆ ಅಲ್ಲ ಅನಿವಾರ್ಯತೆ...
ನಿನ್ನ ತಿರಸ್ಕಾರದ ಸಂಗಡ,
ಬಾಳಲೆ ಬೇಕಾದ ಭೀಕರ ಕಥೆ//
ಬೇಡದಿದ್ದರೂ ಬಾಳಲೇಬೇಕು...
ನೋವ ನದಿಯಲಿ ತಳ್ಳಿಬಿಟ್ಟ ಮೇಲೆ,
ಒಂದೋ ಮುಳುಗಿ ಸಾಯಬೇಕು..
ಇಲ್ಲವೆ ಈಜಿ ದಡ ಮುಟ್ಟಬೇಕು/
ಕನಸುಗಳೆಲ್ಲ ಕಮರಿದ ಕಾರಿರುಳ ಬಾಳ ದಾರಿಯಲ್ಲಿ...
ಇನ್ನುಮುಂದೆ ಅನಿವಾರ್ಯ ಒಂಟಿ ಪಯಣ,
ನಿನ್ನೊಲವಿನ ಊರುಗೋಲಿಲ್ಲ...
ನಿನ್ನ ನಗುವಿನ ಮಿಣುಕು ಬೆಳಕಿಲ್ಲ//
ಅದೇನೆ ಇರಲಿ ನನ್ನ ಸಂಕಟ...
ನಿನ್ನ ಮುಂದಿನ ಸಂಭ್ರಮಗಳಿಗೆ ಸಂತಸಗಳೆಲ್ಲ ಸಾಲುಗಟ್ಟಿ ಸಹಿ ಹಾಕಲಿ,
ನಿನ್ನ ನೋವುಗಳೇನಾದರೂ ಚೂರುಪಾರು ಉಳಿದಿದ್ದಲ್ಲಿ...
ಅವೂ ಕೂಡ ದಿಕ್ಕು ಬದಲಿಸಿ ಕೇವಲ ನನ್ನನ್ನೇ ತಾಕಲಿ/
ನಿನ್ನ ನಲಿವಿಗಾಗಿ ಬೇಕಿದ್ದರೆ ನಾ ನೂರು ನೋವುಣ್ಣುವೇನು....
ಸಾವಿರ ಕಿರುಕುಳಗಳನ್ನೂ ಹಲ್ಲು ಕಚ್ಚಿ ಸಹಿಸಿಯೇನು,
ಇನ್ನು ನಿನ್ನ ಅಗಲಿಕೆಯೇನು ಮಹಾ?//
ಹಾಗೆ ನೋಡಿದರೆ ಕಳೆದ ವರ್ಷವೆ ನೀ ನನ್ನ ಕೊಂದಿದ್ದೆ...
ನೆನ್ನೆ ಹೊಡೆದದ್ದು,
ಉಸಿರಿಲ್ಲದಿದ್ದರೂ ಜೀವಂತ ಕಾಣುತ್ತಿದ್ದ ಹೆಣಕ್ಕೆ ಕೊನೆಯ ಕಾಡತೂಸನ್ನಷ್ಟೇ/
ಮುಗಿಸಿ ಬಿಟ್ಟಾಗ ನಿನ್ನೆಲ್ಲ ಮಾತು...
ಉಳಿದಿದ್ದು ಕೇವಲ ನನ್ನ ಕಣ್ಣಂಚಿನ ಹನಿ,
ಎದೆ ಹೊರಡಿಸಿದ ನಿಟ್ಟುಸಿರ ದನಿ//
ನೀನೆ ಎಲ್ಲ ಹೇಳಿಯಾದ ಮೇಲೆ ಹೇಳಲು ಇನ್ನೇನು ತಾನೆ ಉಳಿದಿದೆ?
ಸಂಕಟ ಬಚ್ಚಿಟ್ಟು ತುಟಿಯಂಚಲಿ ಮುಗುಳ್ನಗುವ ಚಿಮ್ಮಿಸುವ ಕಲೆಯೀಗ ಕರಗತವಾಗಿದೆ/
ಕೃತಕ ಆನಂದದ ಮುಖವಾಡದ ಮುಂದೆ,
ಅಸಲಿ ದುಃಖದ ಬತ್ತಲು ಮುಚ್ಚಿ ಹೋಗಿ...
ಸೋಗಿಗೆ ಶರಣಾಗತವಾಗಿದೆ//
12 January 2011
Subscribe to:
Post Comments (Atom)
1 comment:
Wordings tumba chennagi ive....anubhavisida novannella ishtu chennagi bareyabahudu anta gottiralilla....gr8
Post a Comment