01 November 2008

ಹೇಳಲು ಇದೆ ಕಾರಣ..

ಗೊತ್ತುಗುರಿಯಿಲ್ಲದೆ ಮೂವತ್ತೇ ರೂಪಾಯಿಗೆ ಸಿಗೋ ಪಾಸ್ ಜೇಬಿಗಿಳಿಸಿ ಸಿಕ್ಕಸಿಕ್ಕ ಬಿ ಎಂ ಟಿ ಸಿ ಬಸ್ಸನ್ನೇರಿ ಹೊರಗೆ ಜಡಿಮಳೆ ಚೆಚ್ಚುತ್ತಿರುವಾಗ ಕಾರಣವೆ ಇಲ್ಲದೆ ತಿರುಗಾಡೋ ಹೊಸ ಹವ್ಯಾಸವೊಂದು ಇತ್ತೀಚಿಗೆ ಅಂಟಿಕೊಂಡಿದೆ.ಬೆಂಗಳೂರಿನ ಮಳೆಗೆ ಊರ ಮಳೆಯ ಆರ್ದ್ರತೆ ಇಲ್ಲದಿದ್ದರೂ ಮಳೆ ಮಳೆಯೇತಾನೆ? ಎಂಬ ಹುಸಿ ಸಮಾಧಾನ.ಇಂತಹದ್ದೇ ಒಂದು ಮಳೆಯಲ್ಲೇ ತಾನೆ ನೀನು ಮೊದಲ ಬಾರಿಗೇನನ್ನ ಕಣ್ಣಿಗೆ ಬಿದ್ದದ್ದು? ಮಳೆಯ ಬಗ್ಗೆ ವಿಪರೀತ ಮೋಹಿತನಾಗಿಗಿದ್ದ ನನ್ನ ಇನ್ನಷ್ಟು ಮೋಹದ ಗುಂಗಲ್ಲಿ ತೇಲಿಸಿದ್ದು?


ನಿನ್ನ ಅಸಮ್ಮತಿಯ ಸೂಚನೆ,ಯಾವುದೇ ಕಾರಣದಿಂದಲೂ ಪ್ರತಿಕ್ರಿಯಿಸದ ನಿನ್ನ ಅಸಡ್ಡೆಯಿಂದಲೇ ಸ್ಪಷ್ಟವಾಗಿದೆ.ಆದರೂ ನಿನ್ನೊಂದಿಗೆ ಮನಬಿಚ್ಚಿ ಹರಟುವ ವಾಂಛೆ.ಎಂದೆಂದೂ ಮುಗಿಯಲಾರದ ರಾತ್ರಿಗಳಲ್ಲಿ ಮನಸ್ಸಿಗೆ ತೀರಾ ಹತ್ತಿರವಾದ ಜೀವದೊಂದಿಗೆ ಎದೆಯಾಳದ ನವಿರು ನೋವನ್ನು ನಿರ್ಭಾವುಕವಾಗಿ ತೆರೆದಿಡುವ ರೀತಿಯಷ್ಟೇ ಇದು.ಇದನ್ನು ಕೇಳಲು ನೀನೊಂದು ಕಿವಿಯಾದರಷ್ಟೇ ಸಾಕು.ಹೌದು ...ಪ್ರೇಮದ ನಗುವನ್ನು ನಿನ್ನಿಂದ ನಿರೀಕ್ಷಿಸಿ ಸೋತಿದ್ದೇನೆ.ಹೀಗಾಗಿ ಇನ್ಯಾವುದೇ ಪ್ರತಿಕ್ರಿಯೆಯ ನಿರೀಕ್ಷೆ ಖಂಡಿತ ಇಲ್ಲ.ಕಡೇಪಕ್ಷ ನಿನ್ನ ಕೆಲಸದ ಏಕತಾನತೆಯಾದರೂ ಕಳೆದೀತು ಕೇಳು.

1 comment:

tb said...

Nice blog. Liked the way u hav written about ur childhood.. reminded me of my childhood days. Keep posting