22 September 2010

ಕ್ಷುದ್ರನಾಗಿಯೆ ಉಳಿದು ಹೋದೆ....

ಹೇಳೋದು ಬಹಳಷ್ಟಿತ್ತು/
ತೋರಿಸೋದು ಇನ್ನೂ ಇಷ್ಟು ಬಾಕಿಯಿತ್ತು//


ಬತ್ತಲೆ ಕಾಲ್ಗಳಲ್ಲಿ ಬರುತ್ತಿದ್ದ ನಿನ್ನ...
ಭಾವಗಳ ಮೆತ್ತೆಯ ಹಾಸಿ ನಡೆಸಬೇಕಿತ್ತು,
ಕತ್ತಲೆ ಕಾಲವೆ ತುಂಬಿದ್ದ ನನ್ನ ಬಾಳಲಿ
ನಿನ್ನ ಕಣ್ ಬೆಳಕ ಕಂದೀಲು ಹಿಡಿದು ತಡವರಿಸದೆ ನಡೆಯಬೇಕಿತ್ತು//



ಬಾನ ಅಂಚಿಗೆ ಒರಗಿಸಿಟ್ಟ ನಿಚ್ಚಣಿಕೆಯಲಿ ಮೋಡದ ತುದಿಗೆ ನಿಚ್ಚಳ ಬೆಳಕಲಿ ನಿನ್ನ ಏರಿಸಬೇಕಿತ್ತು,
ಕ್ಷುದ್ರ ಪ್ರಪಂಚದ ಸಣ್ಣತನವನ್ನೆಲ್ಲ ಅಲ್ಲಿಂದಲೆ ನಿನಗೆ ಬೊಟ್ಟು ಮಾಡಿ ತೋರಿಸಬೇಕಿತ್ತು...
ಕಡೆಗಾದರೂ ಅಲ್ಲಿಂದ ಬಚಾವಾಗಿ ಬಂದ ಸಂತಸ ನಿನ್ನಲ್ಲಿ ಮೂಡಿಸಿ ನಿನ್ನ ಖುಷಿಯ ಎಲ್ಲೆ ಮೀರಿಸಬೇಕಿತ್ತು/
ಧನವಿಲ್ಲದ ನನ್ನಂತವರೆಲ್ಲ ಕೇವಲ ದನಕ್ಕೆ ಸಮಾನೆಂದು ಕಟಕಿಯಾಡುವ ಕುಹಕಿಗಳಿಗೆಲ್ಲ
'ನೋಡಿ ನನ್ನ ಸಂಪತ್ತು!' ಎಂದು ನಿನ್ನನೆ ತೋರಿಸಿ ಅವರೆಲ್ಲ ಕುರುಬುವುದನ್ನು ಕಂಡು ಗಹಗಹಿಸಬೇಕಿತ್ತು//



ಕಾವ್ಯಕಥೆಗಳಲ್ಲಿ ಮಾತ್ರ ಕೇಳಿ ಗೊತ್ತಿರುವ ಆ ಸುರಲೋಕವನ್ನೂ ನಿನ್ನ ಕಾಲಡಿ ತರಬೇಕಿತ್ತು,
ಅವರ ಅಮೃತದ ಮತ್ತು...ಅಲ್ಲಿನ ಅತ್ತರಿನ ಗತ್ತು ನಿನ್ನ ಮುಂದೆ ಸಾಟಿಯೇ? ಎಂಬ ಸವಾಲನ್ನು ಕಣ್ಣಲೆ ಮಿಂಚಿಸಿ....
ಅಲ್ಲಿದ್ದವರನ್ನೆಲ್ಲ ನಾಚಿಸ ಬೇಕಿತ್ತು/
ನಿನ್ನ ಮುಂದೆ ಅಲ್ಲಿರುವ ಸುರಸುಂದರ ಸುಂದರಿಯರೆಲ್ಲ ಎಷ್ಟು ಕುರೂಪಿಗಳು ಎಂಬ ವಾಸ್ತವದ ದೀಪ ಹಚ್ಚಬೇಕಿತ್ತು,
ದೇವರನ್ನೇ ನಂಬದ ನನ್ನ ಮನದಗೂಡಿನಲ್ಲಿ ತೂಗು ಹಾಕಿದ್ದ ನಿನ್ನ ಬಿಂಬವ ಅಲ್ಲಿನವರಿಗೆಲ್ಲ ತೋರಬೇಕಿತ್ತು...
ನೀನೆ ನನ್ನ ದೈವ ಎಂದು ಸಾರಿ ಸಾರಿ ಹೇಳಬೇಕಿತ್ತು//


ನಾವಾಗಲೆ ಬಿಟ್ಟು ಬಂದಿದ್ದ ನೆಲದ ಸಣ್ಣತನಗಳ ಧೂಳಲ್ಲಿ...
ಕೊಳೆಯಾಗಿದ್ದ ಮಿಥ್ಯೆಯ ಅಂಗಿ ಕಳಚಬೇಕಿತ್ತು,
ನನ್ನೆಲ್ಲ ಅಹಂನ ಆವರಣ ಕಳಚಿ....
ನಿನ್ನೆದುರು ಸಂಪೂರ್ಣ ಬೆತ್ತಲಾಗಬೇಕಿತ್ತು/
ನಿನ್ನ ಕಾಂತಿಯ ಮುಂದೆ ತಾವೆಷ್ಟು ಮಂಕು ಎಂಬುದನ್ನು...
ತಾರೆ ಚುಕ್ಕಿಗಳಿಗೆ ಮನವರಿಕೆ ಮಾಡಿಸಬೇಕಿತ್ತು
ಸ್ವಚ್ಛಂದ ಹಾರುವ ಸುಖವೇನು? ಎನ್ನುವುದ ಬಾನ ವಿಶಾಲತೆಗೆ ಮನಸೋತ....
ನಿನ್ನ ಕನವರಿಕೆಯಾಗಿಸಬೇಕಿತ್ತು/
ಬಲಿಯನ್ನು ಬಲಿ ಹಾಕಿದ ವಾಮನನಂತೆ ಮೂಜಗವನ್ನೂ...
ಖಾಲಿ ಕಾಲಲ್ಲೆ ಅಳೆದು ಆಳಬೇಕಿತ್ತು,
ನೀನಿತ್ತಿರುತ್ತಿದ್ದ ಒಲವಿಗೆ ಖಂಡಿತ ಆ ಬಲವಿರುತ್ತಿತ್ತು//



ಆದರೆ ನೀನೂ ಅಪ್ಪ ಅಮ್ಮ ಗೆಳೆಯ ಗೆಳತಿಯರು ನಿನ್ನೂರು ನಿನ್ನ ಕನಸುಗಳ...
ಸೀಮಿತ ಜಾತ್ರೆಯಲ್ಲಿ ಕಳೆದುಹೋದೆ,
ನಿನ್ನ ನಿರೀಕ್ಷೆಯಲ್ಲೆ ಅದಾಗಲೆ ಬಾನನೌಕೆ ಏರಿ ಕುಳಿತಿದ್ದ ನಾನೊ.....
ಇತ್ತ ಇಲ್ಲೂ ಉಳಿಯದೆ ಅತ್ತ ಅಲ್ಲೂ ಸಲ್ಲದೆ ತ್ರಿಶಂಕುವಾಗಿ ಕುಗ್ಗಿ ಇಳಿದು ಹೋದೆ/
ಕಮರಿದ ಕಂಗಳಲ್ಲಿ ಹತಾಶೆಯ ಎಣ್ಣೆ ತೀರಿದ ಹಣತೆಯಾಗಿ...
ಉಸಿರಾಡುತ್ತಿದ್ದರೂ ನಡೆದಾಡುವ ಹೆಣವಾಗಿ,
ಕಡೆಗೂ ನಾನು ಈ ನೆಲದ ಕ್ಷುದ್ರನಾಗಿಯೆ ಉಳಿದು ಹೋದೆ//


ಹೇಳೋದು ಬಹಳಷ್ಟಿತ್ತು/
ತೋರಿಸೋದು ಇನ್ನೂ ಇಷ್ಟು ಬಾಕಿಯಿತ್ತು//

No comments: