08 September 2010

ಇದು ಅದಲ್ಲ....

ಇದು ಅದಲ್ಲ....








ಸುತ್ತಲೂ ಬೆಟ್ಟಗಳಿಂದ ಆವೃತ್ತವಾಗಿದ್ದು ಸ್ವತಹ ತಾನೇ ನಡುವಿನ ಗುಡ್ಡ ಸಮುಚ್ಚಯದ ಮೇಲೆ ಹರಡಿ ಕೊಂಡಿರುವ ತೀರ್ಥಹಳ್ಳಿ ಪಟ್ಟಣದ ಚಿತ್ರಕ್ಕೆ ಕಟ್ಟು ಹಾಕಿಸಿದಂತಹ ನೋಟ ಕಾಣಬೇಕೆಂದಿದ್ದರೆ ಸುತ್ತಮುತ್ತಲಿನ ಯಾವುದಾದರೂ ಗುಡ್ಡ ಹತ್ತಿನಿಂತರಾಯಿತು.ಅಮಾಯಕ ಮಗುವಿಗೆ ಬೆಳ್ಳಿಯ ಉಡಿದಾರ ಕಟ್ಟಿದಂತೆ ಕಾಣುವ ತುಂಗೆಯ ಮಂದ ಹರಿವು,ಅದರ ನಡುವಿನ ಕಮಾನು ಸೇತುವೆ,ಇನ್ನೂ ಕಣ್ಣು ಕಿರಿದುಗೊಳಿಸಿ ನೋಡಿದರೆ ಹೊಳೆವ ಹೊಳೆ ಮಧ್ಯದ ರಾಮಮಂಟಪವೂ ನಿಮ್ಮ ಕಣ್ಣಿಗೆ ಬಿದ್ದೀತು.ಭಾರತದ ಎಲ್ಲ ಊರುಗಳ ಜನ್ಮಕ್ಕೆ ಪೌರಾಣಿಕ ಕಥೆಯೊಂದು ಲಂಗೋಟಿಯಂತೆ ಅಂಟಿಕೊಂಡಿರುವ ಹಾಗೆಯೆ ನಮ್ಮೂರಿಗೂ ಒಂದು ಸ್ಥಳಪುರಾಣ ತಗಲಿ ಹಾಕಿಕೊಂಡಿದೆ.ತಂದೆ ಜಮದಗ್ನಿಯ ಆಜ್ಞೆಯಂತೆ ಹೆತ್ತಬ್ಬೆ ರೇಣುಕೆಯ ಕುತ್ತಿಗೆಯನ್ನ ತನ್ನ ಪರಶುವಿನಿಂದ ಕಡಿದ ರಾಮ,ಅನಂತರ ಸಂತುಷ್ಟ ತಂದೆಯಿಂದ ವರದ ರೂಪದಲ್ಲಿ ತಾನೇ ಕಡಿದಿದ್ದ ತಾಯನ್ನೂ-ಕೋಪದ ಉರಿಗಣ್ಣಲ್ಲಿ ತಂದೆ ಸುಟ್ಟಿದ್ದ ಅಣ್ಣಂದಿರನ್ನೂ ಮರಳಿ ಪಡೆದನಂತೆ.ಆದರೆ ಕೊಡಲಿಗೆ ಅಂಟಿದ್ದ ರಕ್ತದೊಂದಿಗೆ ತಲೆಗೆ ಮಾತೃ ಹತ್ಯಾದೋಷವೂ ಅಂಟಿತ್ತಲ್ಲ? ಅದನ್ನು ಕಳೆದು ಕೊಳ್ಳಲು ಪುಣ್ಯಕ್ಷೇತ್ರ ಯಾತ್ರೆಗೆ ಹೊರಟನಂತೆ.ನೀರು ಕಂಡಲ್ಲೆಲ್ಲ ಅದೆಷ್ಟೇ ತಿಕ್ಕೀ ತಿಕ್ಕೀ ತೊಳೆದರೂ ಕೊಡಲಿಯ ಅಂಚಿಗೆ ಮೆತ್ತಿದ್ದ ಇನ್ನೊಂಚೂರು ನೆತ್ತರು ಹೋಗಲೇ ಇಲ್ಲವಂತೆ.ದಾರಿಯಲ್ಲಿ ದಣಿದವ ತುಂಗೆಯ ಕಲ್ಲುಸಾರದ ಮೇಲಿನ ಬಂಡೆಯೊಂದರ ಮೇಲೆ ಮೈ ಚಾಚಿ ಮಲಗಿದನಂತೆ.ಆಗ ಅವನ ಹಿಡಿತ ಮೀರಿ ಪರಶು ಬಂಡೆಗಳ ಮೇಲೆ ಉರುಳಿ ಬಿದ್ದು ಗಟ್ಟಿ ಬಂಡೆ ಬಿರುಕು ಬಿಟ್ಟಿತು! ( ದಯವಿಟ್ಟು ನೀವಿದನ್ನು ನಂಬಲೇ ಬೇಕು?!).ಹೀಗೆ ಅಲ್ಲಿ ಉಂಟಾದ ಹೊಂಡದೊಳಗೆ ಹರಿವ ತುಂಗೆ ಮಡುಗಟ್ಟಿ ನಿಂತಳಂತೆ.ರಾಮ ತನ್ನ ಕೊಡಲಿ ಮೇಲೆತ್ತಿ ನೋಡುತ್ತಾನೆ,ಎನ್ ಆಶ್ಚರ್ಯ! ತುಂಗೆಯ ನೀರು ಸೋಕಿ ಕೊಡಲಿ ಮೇಲೆ ಉಳಿದಿದ್ದ ರಕ್ತದ ಕಲೆ ಮಂಗಮಾಯ!!! ಇದರಿಂದ ಚಕಿತನಾದ ಪರಶುರಾಮ ಆ ಸ್ಥಳಕ್ಕೆ ತಾನೇ'ಪರಶುರಾಮ ಕೊಂಡ'ಎಂದು ಹೆಸರಿಟ್ಟನಂತೆ.ಸಾಲದ್ದಕ್ಕೆ ನದಿ ದಡದಲ್ಲೊಂದು ಶ್ರೀರಾಮೇಶ್ವರ ಲಿಂಗ ಪ್ರತಿಷ್ಠಾಪಿಸಿ ಆರಾಧಿಸಿದನಂತೆ.ಇಂದಿಗೂ ರಾಮೇಶ್ವರ ದೇವಸ್ಥಾನ ಇಲ್ಲಿದ್ದು ಪ್ರತಿ ವರ್ಷ ಜಾತ್ರೆಯ ದಿನ ಇಲ್ಲಿನ ತುಂಗಾಸ್ನಾನ,ಅದರಲ್ಲೂ ರಾಮ ಕೊಂಡದಲ್ಲಿ ಮುಳುಗು ಹಾಕಲು ರಾಮೇಶ್ವರನ ಭಕ್ತಕೋಟಿ ಮುಗಿಬೀಳುತ್ತದೆ.






ಮಳೆಯ ಭೀಕರ ಹೊಡೆತದೊಂದಿಗೆ ತುಂಗೆಯ ರುದ್ರ ನರ್ತನವನ್ನು ಬಾಲ್ಯದುದ್ದಕ್ಕೂ ಕಂಡಿದ್ದೆ.೧೯೮೨ರ ಶ್ರಾವಣ ಮಾಸದಲ್ಲಿ ನಾನು ಹುಟ್ಟಿದ್ದ ಹೊತ್ತಿನಲ್ಲಿ ವಿಪರೀತ ಮಳೆಯಿಂದ ಪ್ರವಾಹ ಉಕ್ಕೇರಿ ತೀರ್ಥಹಳ್ಳಿ ತತ್ತರಿಸಿ ಹೋಗಿತ್ತಂತೆ.ಹತ್ತಿರದ ಭೀಕರ ಪ್ರವಾಹದ ದಾಖಲೆ ಆ ಊರಲ್ಲಿ ಅದೇನೆ.ಹೊಳೆ ಮಧ್ಯದ ರಾಮಮಂಟಪದ ಮೇಲೆ ಎರಡಾಳು ನೀರು ನಿಂತದ್ದು ಆ ವರ್ಷವೆ ಅಂತೆ.ಅಂದು ನಿಂತಿದ್ದ ನೀರಿನ ಗುರುತನ್ನು ಗುರುತಿಟ್ಟಿಸಿರೋದನ್ನ ಅಲ್ಲಿನ ಪುತ್ತಿಗೆ ಮಠದ ಗೋಡೆಯ ಮೇಲೆ ನೋಡಬಹುದು.ಬದುಕಿರುವ ಯಾವುದನ್ನೂ ಗಂಗೆ ಮುಳುಗಿಸಲಾರಳು ಎಂಬುದು ಪ್ರಸಿದ್ಧ ನಂಬಿಕೆ,ಆದರೆ ತುಂಗೆಗೆ ಅಂತಹ ಯಾವುದೇ ಮಡಿವಂತಿಕೆ ಇದ್ದಂತಿಲ್ಲ.ನಾ ಹುಟ್ಟಿದ ಸಮಯದಷ್ಟಲ್ಲದಿದ್ದರೂ ಅನಂತರವೂ ಮಳೆಗಾಲದಲ್ಲಿ ಅತಿ ಹೆಚ್ಚಿದ್ದ ಪ್ರವಾಹಗಳನ್ನು ಕಂಡಿದ್ದೆ.ತನ್ನ ನಿಲುಕಿಗೆ ಸಿಕ್ಕಿದ್ದನ್ನೆಲ್ಲ ದೋಚುವ ದುರಾಸೆಯ ಹೆಣ್ಣಂತೆ ಮೈತುಂಬಿಕೊಂಡು ಕೆಂಪಗೆ ಹರಿಯುತ್ತಾ ಸಿಕ್ಕ ಸಿಕ್ಕವರನ್ನೆಲ್ಲ ತನ್ನ ಒಡಲೊಳಗೆ ಸೆಳೆದು ಆಕೆ ಹರಿಯುವುದನ್ನು ಬೆರಗುಗಣ್ಣುಗಳಿಂದ ದಿಟ್ಟಿಸಿದ್ದೇನೆ.ಮಳೆಯಿರದ ಉಳಿದ ಕಾಲದಲ್ಲೂ ಆಕೆ ಸಾಚ ಏನಲ್ಲ! ಆಕೆಯ ದುರಹಂಕಾರದ ಸೊಕ್ಕಿನ ಸುಳಿಗಳಿಗೆ ಸಿಕ್ಕಿಸಿ,ಅವಳೆದೆಯ ಮೇಲೆ ಈಜಲು ಹೋದವರನ್ನ ಶಾಶ್ವತವಾಗಿ ಅಪ್ಪಿ ಕೊಳ್ಳುವುದರಲ್ಲಿ ನಿಸ್ಸೀಮೆ ಆಕೆ.ಅದಕ್ಕೆ ಇತ್ತೀಚಿನ ಪ್ರಸಿದ್ಧ ಉದಾಹಾರಣೆಯೆಂದರೆ ಉದಯೊನ್ಮುಖ ಗಾಯಕ ಜಿ ವಿ ಅತ್ರಿಯವರ ಕೌಟುಂಬಿಕ ದುರ್ಮರಣ.




ನಮ್ಮ ಮನೆಯ ಹಿತ್ತಲಿನಿಂದ ದಿಟ್ಟಿಸಿದರೆ ಮಂಟಪದ ಟೊಪ್ಪಿ ತೊಟ್ಟ ಆನಂದಗಿರಿಯೂ ಅದಕ್ಕೆ ಸರತೊಡಿಸಿದಂತೆ ಕಾಣುತ್ತಿದ್ದ ತುಂಗಾಕಾಲೇಜೂ ಕಾಣುತ್ತಿತ್ತು.ಅದರ ಬಲ ಮಗ್ಗುಲಿನಲ್ಲಿ ತುಸುವೆ ದೂರ ಗೊಂಬೆಗಳಂತೆ ಕಾಣುತ್ತಿದ್ದ ಒಂದು ಪುಟ್ಟ ಹಳ್ಳಿಯೂ ಕಾಣಬಹುದಿತ್ತು,ಬಹುಷಃ ಅದು ಇಂದಾವರ ಇರಬೇಕು.ಆಗಿನ್ನೂ ನಾನು ಎರಡನೆ ತರಗತಿಯಲ್ಲಿದ್ದೆ.ಕನ್ನಡ ಪುಸ್ತಕದ ಮೊದಲನೆ ಪಾಠವೇ 'ನಮ್ಮೂರು'ಎಂದಿತ್ತು.ಅದರ ಸಕಲ ವಿವರಗಳೂ ಚಿತ್ರ ಬಿಡಿಸಿದಂತೆ ಇಂದಾವರದಲ್ಲಿ ಕಾಣುತ್ತಿತ್ತು! ಸಿಕ್ಕ ಸಿಕ್ಕದ್ದನೆಲ್ಲ ಓದಿ ಬಾಯಿಪಾಠ ಮಾಡಿಕೊಳ್ಳುವ ವಿಶಿಷ್ಟವೂ-ವಿಪರೀತವೂ ಆದ ಚಟ ನನಗಿದ್ದ ದಿನಗಳವು.ನಿತ್ಯ ಚಡ್ಡಿ ಜಾರಿಸಿ ನಿಂತು ಮನೆ ಹಿಂದಿನ ಚರಂಡಿಯಲ್ಲಿ ಮೈ ನೀರನ್ನು ಧಾರೆ ಧಾರೆಯಾಗಿ ಜಲಪಾತದಂತೆ ಹೊರತಳ್ಳುತ್ತ ಕಣ್ಣಿಗೆ ಬೀಳುತ್ತಿದ್ದ 'ಆ ನಮ್ಮೂರಿನ' ಮಿನಿಯೇಚರನ್ನು ಕಣ್ತುಂಬಿಕೊಳ್ಳುತ್ತಾ ರಾಗವಾಗಿ 'ನಮ್ಮೂರು'ಪಾಠವನ್ನ ದೊಡ್ಡ ದನಿಯಲ್ಲಿ ಅರಚುತ್ತ ದೊಡ್ಡವರಿಂದ ಉಗಿಸಿಕೊಳ್ಳುತ್ತಿದ್ದೆ.




ನಾನು ಶಾಶ್ವತವಾಗಿ ಊರು ಬಿಟ್ಟೆ ಹನ್ನೆರಡು ವರ್ಷಗಳಾಗುತ್ತ ಬಂತು.ಪುಟ್ಟಹುಡುಗನಾಗಿ ಆಗ ನಾನು ಕಂಡಿದ್ದ ಊರಿಗೂ-ಈಗಿನ ತೀರ್ಥಹಳ್ಳಿಗೂ ವಿಪರೀತ ವ್ಯತ್ಯಾಸವಿದೆ.ಕಮಾನು ಬಸ್ ನಿಲ್ದಾಣವಿದ್ದ,ಸೋಮವಾರದ ಸಂತೆಗೆ ವಿಪರೀತ ಜನಸೇರುತ್ತಿದ್ದ,ಗಾಂಧೀ ಚೌಕದಲ್ಲಿ ಮೂರು ಮಾರ್ಕಿನ ಬೀಡಿ ವ್ಯಾನಿನ ಮೇಲೆ ದಿಲೀಪ ಮಾಡುತ್ತಿದ್ದ ಮಾದಕ ನೃತ್ಯವನ್ನು ಬಾಯಿ ಬಾಯಿ ಬಿಟ್ಟುಕೊಂಡು ನೋಡುತ್ತಿದ್ದ,ಸಿನೆಮ ಬಿಡುವ ಸಮಯದಲ್ಲಿ ಪ್ರವಾಹದಂತೆ ಟಾಕೀಸಿನಿಂದ ಜನ ಹೊರ ಬರುತ್ತಿದ್ದ,ಆ ತೀರ್ಥಹಳ್ಳಿ ಅದೆಲ್ಲೋ ಕಳೆದೆ ಹೋಗಿದೆ.ತೇಜಸ್ವಿ ಕಥೆಗಳ ಮುಡಿಗೆರೆಯಂತೆ ಆಗ ಊರಿನ ಏಕೈಕ ಬಹುಮಹಡಿ ಕಟ್ಟಡವಾಗಿದ್ದ 'ಅಲಂಕಾರ್ ಪ್ಲಾಜ'ದ ಟರೆಸಿನ ಮೇಲೆ ನಿಂತು ಕೆಳಹಣಕಿದರೆ ಟೆಲಿಫೋನ್,ಕೇಬಲ್,ಕರೆಂಟಿನ ವಯರುಗಳ ಕಿಷ್ಕಿಂದೆಯಲ್ಲಿ ಬಲವಾಗಿ ಬಿಗಿಸಿಕೊಂಡು ನರಳುತ್ತಿದ್ದ ಪ್ರಾಣಿಯಂತೆ ಇಡೀ ಊರು ಕಾಣುತ್ತಿತ್ತು.ತೇಜಸ್ವಿಯವರೇ ಹೇಳುತ್ತಿದ್ದಂತೆ ಕಟ್ಟಿಂಗ್ ಪ್ಲೇಯರ್ ಒಂದು ಕೈಯಲ್ಲಿ-ವಯರುಗಳ ಕಂತೆ ಇನ್ನೊಂದು ತೋಳಲ್ಲಿ ತೂಗುಹಾಕಿಕೊಂಡು; ಅಣ್ಣಾತೆಗಳಂತೆ ಕಾಣುತ್ತಿದ್ದ,ನೆಲ ನೋಡದೆ ಆಕಾಶದ ಉದ್ದಗಲಕ್ಕೂ ಹರಡಿರುತ್ತಿದ್ದ ತಮ್ಮ ವಯರುಗಳ ಯೋಗಕ್ಷೇಮದ ಕುರಿತೆ ಚಿಂತಿತರಾಗಿ ಅವನ್ನೆ ದಿಟ್ಟಿಸುತ್ತ ಸಾಗುವ ಮೇಲಿನ ಮೂರೂ ವರ್ಗಗಳ ಮೆಂಟಲ್ ಗಳಂತಹ ಮೆಕ್ಯಾನಿಕ್ ಗಳನ್ನ ಅಡಿಗಡಿಗೂ ಊರ ತುಂಬಾ ಕಾಣಬಹುದಾಗಿತ್ತು.




ಬಸ್ಟ್ಯಾಂಡ್ ಮಯೂರ ಹೋಟೆಲಿನ ಮಸಾಲೆ ದೋಸೆ,ಮಸೀದಿ ರಸ್ತೆಯ ಅಂಚಿನಲ್ಲಿ ಸಂಜೆ ಕೆಪ್ಪ ಶೆಣೈಯ ರುಚಿ ರುಚಿಯಾಗಿರುತ್ತಿದ್ದ ಬೋಂಡ,ಗಾಯತ್ರಿಭವನದ ನೊರೆನೊರೆ ಕಾಫಿ,ವಸಂತ ವಿಹಾರದ ಬನ್ಸ್-ಕಡಲೆ ಗಸಿ ಇವೆಲ್ಲ ಇಂದು ಹಾಗೆಯೆ ಉಳಿದುಕೊಂಡಿಲ್ಲ.ನಾಲ್ಕಾಣೆಗೆ ಸಿಗುತ್ತಿದ್ದ ನೀರ್ ಐಸು,ಎಂಟಾಣೆಗೆ ಸಿಗುತ್ತಿದ್ದ ಹಾಲ್ ಐಸುಗಳ ಅಭಿಮಾನಿಗಳು ಇಲ್ಲಿನ ಆಟದ ಮೈದಾನಗಳಿಂದ ಮರೆಯಾಗಿ ಕುಲ್ಫಿ-ಕೋನ್ ಐಸುಗಳ ಹೊಸ ತಲೆಮಾರು ಕಾಣಿಸಿಕೊಳ್ಳುತಿವೆ.ಸ್ವಾತಂತ್ರ್ಯದಿನ ಹಾಗು ಗಣರಾಜ್ಯೋತ್ಸವಗಳಂದು ಊರಲ್ಲಿನ ಮೂರು ಟಾಕೀಸುಗಳಲ್ಲಿ ಅಸಂಬದ್ಧವಾಗಿ ತೋರಿಸುತ್ತಿದ್ದ ತಲೆಬುಡವಿಲ್ಲದ ಮೂರೇಮೂರು ರೀಲನ್ನು ನೋಡಲುಕಾತರಿಸಿ ಓಡುತ್ತಿದ್ದ ಶಾಲಾಮಕ್ಕಳ ಜಾಗ ಆ ಎರಡು ದಿನಗಳೂ ಕೇವಲ ಶಾಸ್ತ್ರಕ್ಕೆ ಶಾಲೆಗೆ ಹೋಗಿ ಮರಳಿ ಮನೆ ಸೇರಿ ವಿಡಿಯೋಗೇಂ ಆಡಲು ಹಂಬಲಿಸುವ ಮಕ್ಕಳು ಭರ್ತಿಮಾಡುತ್ತಿದ್ದಾರೆ.ಮೂರು ದಿನಗಳ ಜಾತ್ರೆಯಲ್ಲೂ ಮೊದಲಿನ ರಂಗಿಲ್ಲ,ಈಗ ಬೀಡಿವ್ಯಾನ್ ಮೇಲೆ ದಿಲೀಪ ಹೆಣ್ಣುವೇಷಧರಿಸಿ ಕುಣಿಯುವುದಿಲ್ಲ,ಕವಿತಾ ಹೋಟೆಲಿನ ಗೋಡೆಯ ಮೇಲೆ ಯಾರೂ ನಸೀಮ ಬೀಡಿ ಸೇದುತ್ತ ಸುರುಳಿ ಸುರುಳಿ ಹೊಗೆ ಬಿಡುವ ಫೋಸ್ ಕೊಡುವ ತೆಳುಮೀಸೆಯ ರಾಜ್ ಕುಮಾರ್,ಕಮಲ ಹಾಸನ್,ಜಿತೇಂದ್ರ,ರಜನಿಕಾಂತ್ ರ ಜಾಹಿರಾತನ್ನು ಚಿತ್ರಿಸುವುದಿಲ್ಲ,ಮೊಬೈಲ್ ಸಿಗ್ನಲ್ ಗಳ ನಡುವೆ ಸಂಬಂಧಗಳು ಸದಿಲಾಗುತ್ತಿವೆ,'ನೇರ-ದಿಟ್ಟ-ನಿರಂತರ' ಹಾಗು 'ಉತ್ತಮ ಸಮಾಜಕ್ಕಾಗಿ'ನಾಯಿ ಉಚ್ಚೆ ಹೊಯ್ದರೂ ಸುದ್ದಿ ಮಾಡುವವರ ನಡುವೆ ಇಲ್ಲಿನವರ ಏಕೈಕ ಟೈಮ್ ಪಾಸ್ ಆಗಿದ್ದ ಗಾಸಿಪ್ ಪ್ರಸರಣೆಗೆ ಕೊಕ್ಕೆಬಿದ್ದಿದೆ,ಒಬ್ಬರಿಗೊಬ್ಬರು ಪರಿಚಿತರೆ ಆಗಿರುತ್ತಿದ್ದ ಸಣ್ಣ ಊರಲ್ಲಿ ಆಧುನಿಕತೆಯ ಹವೆ ವಿಪರೀತ ಬೀಸಿ ಎಲ್ಲರೂ ಪರಸ್ಪರ ಅಪರಿಚಿತರಾಗುತ್ತಿದ್ದರೆ .ಒಟ್ಟಿನಲ್ಲಿ ಚಂದದ ಊರೊಂದು ನಿಧಾನವಾಗಿ ಸಾಯುತ್ತಿದೆ.

No comments: