06 September 2010

ಪಿಸುದನಿಯಾಗುತೀನಿ.....

ನಿನ್ನ ಮತ್ತೆ ಪಡೆವ ಗುಪ್ತ ಕಾಮನೆ ಮನಸೊಳಗೆ ಇಲ್ಲ ಎಂದು ಹೇಗೆ ಹೇಳಲಿ?,
ನೀನು ನನ್ನ ನಸೀಬಿನಲ್ಲಿಲ್ಲ ಅನ್ನೋದು ಬೇರೆ ಮಾತು/
ನಾಲ್ಕೇ ಆದರೂ ನಿನ್ನ ಜೊತೆ ನಡೆದ ಹೆಜ್ಜೆಗಳ ಅನುರಣನ ಮರೆಯುವುದು ಕಷ್ಟ ನನಗೆ,
ಮೋಡಗಟ್ಟಿದ ಬಾಳಿನ ಕೊಡೆಯ ತುಂಬ...ಹರಿದ ಕನಸುಗಳ ನೂರಾರು ತೂತು//


ಮೊದಲ ಮಳೆ ಮೋಡದಲಿ ಸೇರಿ ನಿನ್ನೆದೆಯಲಿ ಹನಿಯಾಗುತೀನಿ,
ಮೆಲ್ಲಗೆ ಮನಸಲಿ ಬೆರೆತು ನಿನ್ನೊಳಗಿನ ಪಿಸುದನಿಯಾಗುತೀನಿ/
ಏನೊಂದೂ ಹೇಳದೆ ಎದೆ ಬಡಿತದ ಪ್ರತಿ ಮಿಡಿತವಾಗುತೀನಿ,
ಅನುಮತಿಯನೆ ಕೇಳದೆ ನಿನ್ನಲಿ ನೆಲೆಸಿ ಆವರಿಸುತೀನಿ//

No comments: