ಅಗೋಚರ ಚಹರೆ ನಿನ್ನದು,
ಅಪೂರ್ಣ ಕನಸ ಹೊಸೆಯೋ ಕರ್ಮ ನನ್ನದು/
ಅರವಳಿಕೆಯೇ ನೀಡದೆ ಎದೆಯ ಬಗೆಯೋ ಶಸ್ತ್ರಕ್ರಿಯೆ,
ಈ ಒಲವೆನ್ನುವ ಒಗರು ಭಾವ//
ನಿನ್ನರಮನೆಯ ಬೀದಿಯಲಿ,
ಒಲವ ಯಾಚಿಸಿ ಅಲೆವಾಗ/
ನನ್ನ ಹಣೆಯಿಂದ ಸುರಿದ ಸ್ವೇದ ಬಿಂದು,
ನೋಡು ಹದವಾಗಿ ಚಿಗುರಿ...ಪ್ರತಿ ಹನಿಯೂ ಸುಂದರ ಸುಮಗಳಾಗಿವೆ//
ಕೇವಲ ನಿರೀಕ್ಷೆಯ ನೇಣಿಗೆ ಏರಿಸಿ,
ಕ್ಷಣ ಕ್ಷಣವೂ ಒಲವ ಮುಳ್ಳಿನ ಮೊನೆಯಿಂದ ಚುಚ್ಚಿ ಇಂಚಿಂಚಾಗಿ ನನ್ನನು ಕೊಲ್ಲುವ ಜೀವವೇ/
ನನ್ನೆದೆಯ ಬೇಗೆ ನಿನ್ನ ಮನೆಯ ಬೆಚ್ಚಗಾಗಿಸೋದಾದರೆ,
ನಗು ಚಿಮ್ಮಿಸುತಲೇ ತುಟಿಯಂಚಿನಲಿ ಸುಟ್ಟು ಬೂದಿಯಾಗಲು ನಾನು ತಯಾರು//