ಸವಾಲುಗಳಿರಲಿ ನನ್ನ ಬಾಳಲಿ,
ಆದರೆ ಬಾಳ್ವೆಯೆ ಒಂದು ಸವಾಲಾಗದಿರಲಿ/
ನಿನ್ನೆಡೆಗಿನ ಸೆಳೆತವೂ ಕೂಡ,
ಸೆಳೆತವಾಗಿಯೇ ಉಳಿಯದಿರಲಿ.....ಕೊನೆವರೆಗೂ//
ಇರುಳ ನಿದಿರೆಯಲಿ ಮಳೆ ಸುರಿದ ಕನಸುಗಳ,
ಮನದ ಬೊಗಸೆಯಲೆ ಹಿಡಿದು ಕುಡಿಯಲ?/
ಕನಿಷ್ಠ...ಅದರಲ್ಲಾದರೂ ಕಾಣುವ ಒಲವು ತುಂಬಿದ ನಿನ್ನ,
ಕೈ ಹಿಡಿದು ಮತ್ತದೇ ಮಳೆಯಲಿ ತೋಯ್ಯುತ....ಉನ್ಮತ್ತನಾಗಿ ಕುಣಿಯಲ?//
ಕಣ್ಣ ರೆಪ್ಪೆಯ ಕಪಾಟಿನ ಒಳಗೆ,
ನೀ ಬಚ್ಚಿಟ್ಟಿರುವ ಕೋಮಲ ಕನಸುಗಳ....
ಒಂದನ್ನೂ ಬಿಡದೆ ನಾ ದೋಚಲ?/
ಬೆಲೆಕಟ್ಟಲಾಗದ ಅವನ್ನೇ ಮಾಲೆಗಳಾಗಿ ಪೋಣಿಸಿ,
ನಿನಗೇ ಅದನ್ನು ತೊಡಿಸಿ ಸಂಭ್ರಮಿಸಲ?//
No comments:
Post a Comment