10 March 2009

ಕನವರಿಕೆ...

ಪಡುವಣದ ಹಣೆಯಲ್ಲಿ ಸಿಂಧೂರ,
ಇಂದೇಕೋ ಬಲು ಗಾಢ/
ಏನೋ ರಹಸ್ಯ ಇರಲೇ ಬೇಕು,
ಭೂಮಿ-ಬಾನಿನ ನಡುವೆ//



ನೇಸರ ಇಳೆಯ ಸಂಬಂಧದ ನಡುವೆ,
ಮೋಹವಿದೆ.....ಅದೇನೋ ದಾಹವಿದೆ/
ಇದನೆಲ್ಲ ಪ್ರತಿನಿತ್ಯ ಕಾಣುವ ನಿನಗೆ,
ನಿಜ ಹೇಳು....ಎಂದೂ ಏನೊಂದೂ ಅನ್ನಿಸದೇ!//



ಅಲೆಮಾರಿ ಮನಸಿಗೆ,
ಇರುಳಲ್ಲಿ ತಂಗಲು ದೊರೆತೆ ಇಲ್ಲ ತಾವು/
ಆದರೂ ದೂರದ ನಿರೀಕ್ಷೆ...ದುರ್ಬಲ ಭರವಸೆ,
ಸಿಕ್ಕೀತೆ ನಿನ್ನೆದೆಯಲ್ಲಿ ಚೂರು ಜಾಗ...ಪ್ರೀತಿ ಅರೆಪಾವು//



ಕನಸೊಳಗಿನ ಕನವರಿಕೆ,
ಮನಸೊಳಗೆ ಮೂಡಿದ ಹಿತವಾದ ತುರಿಕೆ/
ಬರಿಯ ಮಾತಿನಲ್ಲೇ ವಿವರಿಸಲಾಗದ,
ನಿನ್ನೆಡೆಗಿನ ಒಲವು ನನಗೆ//

No comments: