ಎದೆ ಪೆಟ್ಟಿಗೆ ಎಲ್ಲಾ ನಿನ್ನ ನೆನಪಿನ ಕಾಣಿಕೆಯಿಂದ ಸಮೃದ್ಧ
ಬಾಚಿಕೊಳ್ಳಲಾ...ಆಸೆ ಬುರುಕನಂತೆ ದೋಚಿಕೊಳ್ಳಲ?...
ಈಗಷ್ಟೇ ಎಡೆಬಿಡದೆ ಸುರಿದು ನೆಲದೆದೆಯ ಆರ್ದ್ರವಾಗಿಸಿದ,
ಮಳೆಯ ಕೆಲವು ಒಲವ ಹನಿ ನನ್ನೆದೆಯಂಚನೂ ಹಾಗೆ ಸೋಕಿ
ನಿನ್ನ ನೆನನಪುಗಳನ್ನೆಲ್ಲ ಒದ್ದೆಯಾಗಿಸಿ ಹೋಗಿದೆ/
ಒಳ ನುಸುಳಿದ ಚಳಿಗೆ ನವಿರಾಗಿ ಕಂಪಿಸಿದ
ಮನಸಿನ ಒಳಮನೆಯಲ್ಲಿ ಬೆಚ್ಚಗೆ ನೀ ಹುದುಗಿದ್ದೆ....
ಕನಸುಗಳೊಂದಿಗೆ ಬಿಸಿ ಹೆಚ್ಚಿಸುವ ನೆನಪುಗಳೊಂದಿಗೆ,
ಖಾಲಿ ರಸ್ತೆಯ ಇನ್ನೊಂದು ತುದಿಗೆ ನೆಟ್ಟ
ನನ್ನ ನೋಟ ನಿನ್ನನೆ ಏಕೆ ಹುಡುಕಬೇಕು?
ನಿನ್ನ ನೆನಪುಗಳನ್ನೆ ಮನದ ಬೆರಳು ಏಕೆ ತಡುಕಬೇಕು?//
ನಾದ ಮರೆತ ವೀಣೆ
ಸ್ವರ ಮರೆತ ಕೊಳಲೂನು ನಾನೆ....
ಯಾವ ಸೂಚನೆಯನ್ನೂ ಕೊಡದೆ ಧುತ್ತನೆ,
ಪ್ರತ್ಯಕ್ಷವಾದರೆ ನೀ ಹೀಗೆ...ಮನಸಿಗನ್ನಿಸೋದು ಹಾಗೇನೆ/
ಭಾವದ ಬಯಲಲ್ಲಿ ಅನಾಥ ಭಿಕಾರಿ ಮಗು ಮನಸು...
ನೀನಿಲ್ಲದೆ
ನಿನ್ನ ಕಿರುಬೆರಳ ಆಸರೆ ಸಿಕ್ಕದೆ ....
ಚಿಗುರೀತು ಹೇಗೆ ಕನಸು//
ಮನಸಿನ ಪೆಟ್ಟಿಗೆಯಲ್ಲಿ ಹಳೆಯ ಬಟ್ಟೆಗಳಡಿ
ನಿನ್ನದೊಂದು ನೆನಪಿನ ಅಂಗಿ ನಿನ್ನೆದೆಯ ಅದೇ ವಾಸನೆ ಹೊತ್ತಿದ್ದು...
ಮತ್ತೆ ಸಿಕ್ಕ ಹಾಗೆ ನಿನ್ನ ನೆನಪಾದಾಗಲೆಲ್ಲ ಸಂತಸ ನನಗೆ/
ಕಿವಿ ಮೆಲೊಂಧು ರಾಗದ ಋಣ
ತುಟಿ ಮೇಲೆ ಮತ್ತದರದೆ ಅನುರಣನ....
ನಿರಂತರ ಹರಿವ ಧಾರೆಯಾಗಿರುವಾಗ,
ನೆನಪಿನ ನಾವೆಯಲ್ಲಿ ಕೈಕೈ ಹಿಡಿದು ಸುಮ್ಮನೆ ಏನನ್ನೂ ಮಾತನಾಡದೆ
ನೀ ಜೊತೆಗೆ ಕೂತಿರುವಾಗ.... ನಾ ಹೇಗೆ ಒಂಟಿ?//
ಕೆನ್ನೆ ಮೇಲಿನ ಗುಳಿಯೊಳಗೆ ಮೂಡಿದ ಮಾಸಲಾರದ ಮಚ್ಚೆ
ನಿನ್ನ ನೆನಪು ಸೇರಿ ಇನ್ನಷ್ಟು ಕೆಂಪಾಗಿದೆ...
ಮತ್ತೆ ಮಳೆ ನೆನೆದ ಮನಸ ಹಾದಿಯ ಇಬ್ಬದಿ,
ನಿರೀಕ್ಷೆಯ ಗರಿಕೆ ಚಿಗುರಿ ನಿನ್ನ ಪಾದಾಘಾತದ ಸವಿ ಕ್ಷಣಕ್ಕಾಗಿ ಕಾತರಿಸುತಿದೆ/
ನೆಲಕೂ-ನಭಕೂ ನಡುವೆ ಒಲವು ಚಿಗುರೊಡೆದ ಈ ಹೊತ್ತು
ಎಷ್ಟೆಲ್ಲಾ ಎದೆಗೂಡಲಿ ಬೆಚ್ಚನೆ ಪ್ರೀತಿಯ ಅಗ್ಗಿಷ್ಟಕೆ ಹೊತ್ತಿಸಿದೆ,
ನಿನಗೇನು ಗೊತ್ತು?//
08 August 2011
Subscribe to:
Post Comments (Atom)
No comments:
Post a Comment