31 August 2011

ಕಲಿಯುಗ ದುಶ್ಯಾಸನನ ಕಥೆಯೂ...ಕರುನಾಡ ಕಾಂಗ್ರೆಸ್ಸಿಗರೂ...




"ಬಿಚ್ತೀನಿ!...ಬಿಚ್ತೀನಿ!! ಎಲ್ರುದ್ದೂ ಬಿಚ್ತೀನಿ!!!" ಎಂದು ದುಶ್ಯಾಸನನ ಕೊನೆ ಪಳಯುಳಿಕೆಯಂತೆ ನಿತ್ಯ ಸುದ್ಧಿ ಮಾಧ್ಯಮಗಳ ಮುಂದೆ ಬಿಕ್ಕಳಿಸಿ-ಬಿಕ್ಕಳಿಸಿ ಆರ್ಭಟಿಸುವ ಮಾಜಿ ಮುಖ್ಯಮಂತ್ರಿಗಳೂ, ಹಾಲಿ 007 ಬ್ರಾಂಡ್'ನ ಪತ್ತೇದಾರಿ ಪುರುಷೋತ್ತಮರೂ ಆಗಿರುವ ನಮ್ಮ "ನಾಡಿನ ಕಣ್ಮಣಿ", ನಡು ('ನಡು' ಇಲ್ಲಿ 'ಅಂಗ' ಸೂಚಕ ಮಾತ್ರ ಅನ್ನೋದು ನಿಮ್ಮ ಗಮನಕ್ಕೆ!) ವಯಸ್ಸಿನ 'ನವ'ಯುವಕ ಹೆಚ್ ಡಿ ಕುಮಾರಣ್ಣನ ಹಳೆ ಚಾಳಿಯಾದ "ದಾಖಲೆ ಧಾಳಿ" ಈಗಾಗಲೆ ಕೆಟ್ಟು ಕೆರ ಹಿಡಿದ ಕಳೆಯಲ್ಲಿ ಕಂಗೊಳಿಸುತ್ತಿರೊ ಕರುನಾಡಿನ ಬರಗೆಟ್ಟ ಬಡಪಾಯಿ ಕಾಂಗ್ರೆಸ್ ನಾಯಕರ ಕಡೆಗೆ ಹೊಸತಾಗಿ ತಿರುಗಿದೆ!

ಹಾಲಿ 'ಹೃದ್ರೋಗಿ"ಯೂ ಆಗಿರುವ ಅವರು ಈಗಾಗಲೆ ರಾಜ್ಯಾಡಳಿತದ ಚುಕ್ಕಾಣಿ ಹಿಡಿದಿರುವ ಭಾಜಪದ ಮೇಲೆ ಒಂದು ಸುತ್ತಿನ ಸಮರ ನಡೆಸಿ ದಣಿದು,ಆಮೇಲೆ ಕೊಂಚ ಬದಲಾವಣೆಗಾಗಿ ಥೇಟ್ "ಶರ್ಲಾಕ್ಸ್ ಹೋಮ್ಸ್'ನ" ಪಡಿಯಚ್ಚಿನಂತೆ ಮಾಜಿ ಲೋಕಾಯುಕ್ತರ "ರಾತ್ರಿ ರಹಸ್ಯ"ಗಳ ರಸವತ್ತಾದ 'ಗಣಿ' ತೋಡಲು ಸೊಂಟಕಟ್ಟಿ ನಿಂತರು! ಆದರೆ ಅವರಿಗಿರುವ ಮಾರಣಾಂತಿಕ "ಹೃದ್ರೋಗ" ಅವರನ್ನು ಆ ಪವಿತ್ರಕಾರ್ಯದಲ್ಲಿ ಯಶಸ್ವಿಯಾಗದಂತೆ ತಡೆದು,ಆ ಮೂಲಕ ಅವರು ಬಯಲಿಗೆಳೆದು ಹೊರಹಾಕಲಿದ್ದ "ಹೆಗ್ಡೇರ ಹುಡುಗಾಟ"ಗಳನ್ನು ಕಂಡು ತಮ್ಮ ಜ್ಞಾನದಾಹವನ್ನು ತಣಿಸಿಕೊಳ್ಳಲು ಕಾಗೆಗಳಂತೆ ಕಾದಿದ್ದ,ಈ ನಾಡಿನ ಉದ್ದಗಲಕ್ಕೂ ಹರಡಿ ಹಂಚಿ ಹೋಗಿರುವ ಅವರ ಅಪಾರ ಅಭಿಮಾನಿಗಳ ಕಲಿಕೆಯ ಆಸಕ್ತಿ ಹೆಚ್ಚಿಸಲು ಅವರಿಂದ ಕಡೆಗೂ ಆಗಲೇಯಿಲ್ಲ.


ಆದರೂ ಇಂತ ಚಿಲ್ಲರೆ ಸಂಗತಿಗಳಿಗೆ ಚೂರೂ ತಲೆ ಕೆಡಿಸಿಕೊಳ್ಳದೆ ಕುಗ್ಗದೆ-ಜಗ್ಗದೆ,ಎದುರಾದ ಎಲ್ಲಾ ಅಡ್ಡಿ ಆತಂಕಗಳಿಗೆ ಅಂಜದೆ-ಅಳುಕದೆ-ಬೋಳಿಸಿದರೂ ಮಾಸಿ ಹೋಗದ ಹೀನ ಸುಳಿಯಂತಹ ತಮ್ಮ ಹುಟ್ಟು ಪತ್ತೇದಾರಿ ಚಟವನ್ನ ಸುಲಭದಲ್ಲಿ ಬಿಡಲೂ ಆಗದೆ :ಈಗ ಅವರು ತಮ್ಮ ಚಿಕಿತ್ಸಕ ದೃಷ್ಟಿಯನ್ನ ಕಾಂಗ್ರೆಸ್ ಕಳ್ಳರ ಮೇಲೆ ಇಡ ಹೊರಟಿದ್ದಾರೆ!

ಇಡಲು ಬೇರೆ ಯಾರದೂ ಸಿಗದಿದ್ದರೆ (ಆರಂಭದಲ್ಲೆ ಅಶ್ಲೀಲತೆ ಕಲ್ಪಿಸಿ ಕೊಳ್ಳಬೇಡಿ ಸ್ವಾಮಿ ಸ್ವಲ್ಪ ತಾಳಿ!) ತನ್ನ ಸ್ವಂತ ತಲೆಯ ಮೇಲೆ ಕೈ ಇಟ್ಟುಕೊಳ್ಳಲು ತವಕಿಸುವ ಭಸ್ಮಾಸುರನ ಆಧುನಿಕ ಅಪರಾವತಾರವಾಗಿರುವ ಅವರಿಗೆ ಈ ನೂತನ ಮಾರ್ಗಸೂಚಿಯನ್ನು ಹಾಕಿಕೊಟ್ಟ ಪುಣ್ಯಾತ್ಮರ ಜಾಣ್ಮೆಯನ್ನ ಮೆಚ್ಚಲೆಬೇಕು,ಇಲ್ಲದಿದ್ದರೆ "ಜಿಹಾದಿ ಆತ್ಮಹತ್ಯಾ ಬಾಂಬರ್"ನಂತೆ ಸ್ವಂತ ತಮ್ಮ ವಿರುದ್ಧವೆ ಅವರು ಪತ್ತೇದಾರಿ ನಡೆಸಿ ಅಮೂಲ್ಯ ದಾಖಲೆಗಳನ್ನ ನಾಡಿನ ಜನತೆಯ ಮುಂದಿಡುವ ಸಕಲ ಸಾಧ್ಯತೆಗಳೂ ಇದ್ದವು! ಅನ್ನೋದನ್ನ ಯಾರೂ ಮರೆಯುವ ಹಾಗಿಲ್ಲ. ಹೀಗಾಗಿ ಈಗ ಅಧಿಕಾರವಿಲ್ಲದೆ ಬರಗೆಟ್ಟು ಹೋಗಿರುವ ಕಾಂಗ್ರೆಸ್ ಕಂದಮ್ಮಗಳ ಕಡೆಗೆ ಅವರ 'ಸಾತ್ವಿಕ' ಆಕ್ರೋಶ ಹೊರಹೊಮ್ಮಿದೆ!

ಇಷ್ಟೆಲ್ಲಾ ಸಿಐಡಿ ಕೆಲಸ ಮಾಡುವ ಭರದಲ್ಲಿ ಅವರ ಪಂಚೆಯೆ ಅಲ್ಲಲಿ-ಆಗಾಗ ಉದುರಿ ಬೀಳುತ್ತಿರೋದು ಪಾಪ ಅವರ ಘನ ಗಮನಕ್ಕೆ ಬಂದೇ ಇಲ್ಲ,ಬಹುಷಃ ಅವರೆ ಅದನ್ನ ಎಲ್ಲಾದರೂ 'ಅನಧಿಕೃತ'ವಾಗಿ ಕಳಚಿಟ್ಟವರು 'ದಾಖಲೆ'ಗಳೊಂದಿಗೆ ಅರ್ಜೆಂಟಾಗಿ ಎದ್ದು ಬರುವಾಗ ಅಲ್ಲೆ ಎಲ್ಲೊ ಮರೆತು ಬಂದಿರುವ ಸಾಧ್ಯತೆಗಳನ್ನೂ ಸುಲಭವಾಗಿ ತಳ್ಳಿಹಾಕುವಂತಿಲ್ಲ! ಆದರೂ ಇನ್ಯಾರದ್ದೋ ಹರಿದ ಪಟಾಪಟಿ ಚಡ್ಡಿಗೆ ತೇಪೆ ಹಾಕಲು ಹಪಾಹಪಿಸುವ ಮುನ್ನ ಅವರೂ ಸಣ್ಣದಾದರೂ ಒಂದು ಚೊಣ್ಣ ತೊಟ್ಟುಕೊಂಡಿದ್ದರೆ ಚನ್ನಾಗಿತ್ತು! ಮುದ್ದೆ ಮುಖದ ದೊಡ್ಡಗೌಡರಾದರೂ ಅವರದ್ದೆ ಒಂದು ಹಳೆ ಪಂಚೆಯನ್ನ ಮನೆಯಿಂದ ಹೊರಬೀಳುವ ಮುನ್ನ ತಮ್ಮ 'ಕುಮಾರ'ನಿಗೆ ಉಡಿಸಿ ಕಳಿಸಬಾರದ?!

No comments: