09 August 2011

ಕೈಯಲ್ಲಿ ಹಬೆಯಾಡುವ ಚಹದ ಬಟ್ಟಲು ಹಿಡಿದು....


ಶೋಕಕ್ಕೆ ಸಿಲುಕಿ
ಒಲವಲ್ಲಿ ಶಾಪಕ್ಕೆ ನಿಲುಕಿ....
ಹಿಂದೆಯೆಲ್ಲ ಅಹಲ್ಯೆಯಂತೆ ಕಲ್ಲಾಗುತ್ತಿದ್ದರಂತೆ,
ನಾನೂ ಅಹಲ್ಯೆಯ ಮಗನೆ!
ನಿನ್ನ ತಿರಸ್ಕಾರ-ಮೊದಲಿಕೆಯ ಶಾಪಕ್ಕೆ ಸಿಕ್ಕವ ನಾನೇಕೆ ಕಲ್ಲಾಗಲಿಲ್ಲ?!,
ಕಣ್ಣೀರು ತರಬೇಡ ಸಿಕ್ಕಾಗ
ಬಾಳ ತಿರುವೊಂದರಲ್ಲಿ...
ಕಣ್ಣೀರ ಕಡಲ ತೀರದಲ್ಲೇ ಜೋಪಡಿ ಕಟ್ಟಿ ಕೊಂಡ ನನಗೆ,
ನಿನ್ನ ಹನಿ ಕಣ್ಣೀರು ಕಾಣೋದು ಕಷ್ಟದ ಸಂಗತಿ//


ಹೆಸರಿಗಷ್ಟೆ ಅಂಟಿಕೊಂಡಿರುವ ಹರ್ಷ
ನನ್ನ ಬಾಳಲ್ಲಿ ಹನಿಯೂ ಉಳಿದಿಲ್ಲ....
ನೀ ಬಳುವಳಿ ಇತ್ತ ಸೂತಕದ ಶೋಕ
ನೋಡು,
ಇನ್ನೂ ಮನಸಿಂದ ಕಳೆದಿಲ್ಲ/
ಎದೆ ಕುದಿಯೆಲ್ಲ ಕಣ್ಣೀರಾಗಿ ಉಕ್ಕಿ
ಭಾವದ ಬಿಸಿ ಆವಿ ನಿಟ್ಟುಸಿರಾಗಿ....
ಆಗಾಗ ಹೊರಬಂದು ಕಾಡುತ್ತದೆ,
ನಿನ್ನ ಕಡೆಯಬಾರಿ ಕಂಡಿದ್ದ ಜಾಗಕ್ಕೆ ಹೋದಾಗಲೆಲ್ಲ....
ಅರಿವಿಲ್ಲದೆ ನನ್ನ ಹಿಡಿತ ಮೀರಿ ಕಣ್ಣೀರು ನೆಲ ಮುಟ್ಟುತ್ತದೆ
ಅವ್ಯಕ್ತ ಭಾವಗಳ ಕಂಪನ ಮೆಲ್ಲನೆ
ಎದೆ ತಲೆಬಾಗಿಲ ಕದ ತಟ್ಟುತ್ತದೆ//


ಕೊಂಚ ಮಳೆ
ರಾತ್ರಿಯ ಮೋಡ ಮಂದಾರಕೆ....
ನೆನೆದು ಪುಳಕಿತಳಾದ ಒದ್ದೆ ಇಳೆ,
ಇದನ್ನೆ ನೋಡುತ್ತಾ ಹಾಗೆ ತನ್ಮಯನಾಗಿ
ಕೈಯಲ್ಲಿ ಹಬೆಯಾಡುವ ಚಹದ ಬಟ್ಟಲು ಹಿಡಿದು....
ನಿನ್ನ ಗುಂಗಿನಲ್ಲಿ ಹಾಗೆ ಕಳೆದು ಹೋಗುವುದು ನನ್ನ ನಿತ್ಯದ ಮೂರ್ತ ಕನಸು!/
ಮತ್ತೆ ನಸುಕಿನಲ್ಲಿ ನಿನ್ನ ನೆನಪ ಕಚಗುಳಿ
ಏಕಾಂಗಿ ನಾನಲ್ಲ ಪ್ರತಿ ಕ್ಷಣದ ಜೊತೆಯಾಗಿ ನಿನ್ನ ನೆನಪಿದೆಯಲ್ಲ....
ಗಾಳಿಯೂ ಆದಲಾರದಂತೆ ಭದ್ರವಾಗಿ ಮನದ ಬಾಗಿಲನ್ನ ಮುಚ್ಚಿದ್ದರೂ,
ಅದು ಹೇಗೊ ಎದೆಯಾಳದ ಭಾವಗಳು
ಬಿಕ್ಕಳಿಸಿದ ಸದ್ದು ಹೊರಗೆ ಹರಿಧು ಹೋಗಿದೆ//

No comments: