30 August 2011

ವಾಸ್ತು ದೋಷ-ಇದ್ಯಾತರ ಮರಾ ಮೋಸ!


(ಆ"ರೋಗ"ವೆ ಭಾಗ್ಯ!)



ಅದ್ಯಾಕೊ ಪರಪ್ಪನ ಅಗ್ರಹಾರದಲ್ಲಿ ಇತ್ತೀಚೆಗಷ್ಟೆ ಕರುನಾಡಿನ ಬಡ ತೆರಿಗೆದಾರರ ತೆರಿಗೆಯ ಹಣ ಖರ್ಚು ಮಾಡಿ ರಾಜ್ಯ ಸರಕಾರ ಕಟ್ಟಿಸಿರೊ ಕಲ್ಲಿನ ಮಜಭೂತು ಅತಿಥಿಗೃಹದ ವಾಸ್ತುವಿನಲ್ಲೆ ಏನೊ ಭಾರಿ ದೋಷವಿದ್ದಂತಿದೆ.ಅಷ್ಟೆಲ್ಲ ಖರ್ಚುಮಾಡಿ ಕಟ್ಟಿಸುವ ಮುನ್ನ ಯಾರಾದರೂ 'ವಾಸ್ತುಶಾಸ್ತ್ರ ಪಂಡಿತ'ರಲ್ಲೊಮ್ಮೆ ಕಣಿ ಕೇಳಿಯಾದರೂ ಸರಕಾರ ಮುಂದಡಿಯಿಡಬಾರದಿತ್ತ?

ಹೌದು ಈ 'ವಾಸ್ತುಶಾಸ್ತ್ರ' ತಳಿಯ ವಿಶೇಷ ಪಂಡಿತರು ಅದೆಲ್ಲಿ ಸಿಗುತ್ತಾರೆ ಎಂಬ ಗೊಂದಲವೇನಾದರೂ 'ಸದಾನಂದ'ದಿಂದ ಆಳುವ ಮಂದಿಗೆ ಇದ್ದಿದ್ದೆ ಹೌದಾಗಿದ್ದಲ್ಲಿ ಮಗುವನ್ನ ಕೇಳಿದ್ದರೂ "ದಿನ ಬೆಳಗಾದರೆ ಎಲ್ಲಾ ಟೀವಿಯಲ್ಲೂ ವಕ್ಕರಿಸಿಕೊಂಡು ಊಳಿಡುತ್ತಾ,ಬೆಳಗ್ಯೆ ಶಾಲೆಗೆ ಹೋಗೊ ಮುಂಚೆ ಚೂರು ನಮ್ಮ ಪೋಗೊ-ಕಾರ್ಟೂನ್ ನೆಟ್'ವರ್ಕ್ ನೋಡೋ ಸುಖಕ್ಕೂ ಅಮ್ಮಂದಿರಿಂದ ಕಲ್ಲು ಹಾಕಿಸುತ್ತಾರೆ ನೋಡಿ ಅವೇ ಪ್ರಾಣಿಗಳು" ಅಂತ ಕರುನಾಡಿನ ಯಾವಮೂಲೆಯ ಎಳೆ ಬೊಮ್ಮಟೆ ಬೇಕಾದರೂ ಬೀದಿಗೊಬ್ಬರಂತಿರುವ ಅಂತಹ ಪಂಡಿತೋತ್ತಮರನ್ನು ರೆಡ್'ಹ್ಯಾಂಡಾಗಿ ಹಿಡಿದುಕೊಡುತ್ತಿತ್ತು!

ಅದಕ್ಕೂ ಪುರುಸೊತ್ತಿಲ್ಲದಿದ್ದರೆ ಕನಿಷ್ಠ ಪಕ್ಷ ತಳಿಪರಂಬದ ರಾಜರಾಜೇಶ್ವರನೊಂದಿಗೆ -ಧರ್ಮಸ್ಥಳದ ಮಂಜಣ್ಣನ ಜಂಟಿ ಭಕ್ತಾಗ್ರೇಣಿಯಾಗಿರುವ ಹಾಗು ನಮ್ಮ ಸುದೈವದಿಂದ ವಿಪರೀತ ದೈವಭೀರುಗಳೂ ಆಗಿರುವ (ಇದು ರೇಣುಕಾಚಾರ್ಯ ಬೀರುವ "ಬೀರು" ಖಂಡಿತ ಅಲ್ಲ ಮತ್ತೆ!),ವಾಸ್ತು ಪ್ರಕಾಂಡ ಪಂಡಿತರ ಪುಕಾರುಗಳನ್ನ ಕಟ್ಟಿಕೊಂಡೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ 'ಅನುಗ್ರಹ'ಕ್ಕೆ ಅಪ್ಪಿತಪ್ಪಿಯೂ ಕಾಲಿಡದೆಯೆ ಮೂರೂ ಚಿಲ್ಲರೆ ವರ್ಷ ಯಶಸ್ವಿಯಾಗಿ ರಾಜ್ಯ'ಭಾರ' ಮಾಡಿದ ಮಾಜಿ ಮುಖ್ಯಮಂತ್ರಿ ಬೂಸಿಯರವರನ್ನೆ ಒಂದು ಮಾತು ಕೇಳಿದ್ದರೂ ಸಾಕಿತ್ತು,ಅವರೆ ಒಬ್ಬರನ್ನ ಬೇಕಿದ್ದರೆ ಸಂತೋಷದಿಂದ ತಗಲು ಹಾಕುತ್ತಿದ್ದರು.

ಆ ಅತಿಥಿಗೃಹದ ಅಧಿಕೃತ ನಿರ್ಮಾಣದ ಸ್ಕೆಚ್ ಈಗಿನ ಸರಕಾರದಲ್ಲಿಯೂ ಮಂತ್ರಿಯಾಗಿರೊ ಯಡ್ಡಿಯ ಖಾಸಾ ಶಿಷ್ಯ 'ಸರ್ವರ್ ಸೋಮ' ಆಗಿನ್ನೂ "ಚಕ್ರ ಬ್ರಾಂಡಿನ" ಸರಕಾರದಲ್ಲಿ ಬಂಧೀಖಾನೆ ಸಚಿವರಾಗಿದ್ದಾಗ ಹಾಕಿದ್ದೆ ಇರಬಹುದು (ಆಗ ಆದ ಅ'ವ್ಯವಹಾರ'ದ ತನಿಖೆಯೆಲ್ಲಾದರೂ ಲೋಕಾಯುಕ್ತರು ಮಾಡಿದ್ದೇ ಆಗಿದ್ದರೆ ಅವರೂ ದೂಸರ ಮಾತಿಲ್ಲದೆ ಅಲ್ಲಿಗೇ ತಮ್ಮ ನಿವಾಸವನ್ನ ಶಿಫ್ಟ್ ಮಾಡಿಕೊಳ್ಳಬೇಕಾಗ್ತಿತ್ತು ಅನ್ನೋದೆಲ್ಲ ಬೇರೆ ಮಾತು ಬಿಡಿ!) ಆದರೆ ಆಗ ಆದ ತಪ್ಪಿಗೆ ಈಗಲಾದರೂ ಅದಕ್ಕೊಂದು "ವಾಸ್ತುಹೋಮ" ನಡೆಸಿ ಸರಕಾರ ಪಶ್ಚಾತಾಪದ ಶಾಂತಿ ಮಾಡಿಸದಿದ್ದರೆ ಹೇಗೆ?

ಈಗ ಆದರಿಂದಾಗುತ್ತಿರುವ ಅನಾಹುತ ಒಂದಾ-ಎರಡಾ? ಅಲ್ಲಿನ ವಾಸ ಪಕ್ಕ ಆಗೋದೆ ತಡ ಅಲ್ಲಿ ತನಕ ನಳನಳಿಸುತ್ತಿರೊ ನಮ್ಮ ಎಲ್ಲಾ ನಾಯಕಮಣಿಗಳ ಆರೋಗ್ಯಕ್ಕೆ ಅನಿರೀಕ್ಷಿತ ಗ್ರಹಣ ಹಿಡಿದು ಏನಾದರೊಂದು ಕಾಯಲೆ-ಕಸಾಲೆ ಯಾವ ಪೂರ್ವಸೂಚನೆಯನ್ನೂ ಕೊಡದೆ ಅರ್ಜೆಂಟಾಗಿ ಅವರಿಗೆ ಆಟಕಾಯಿಸಿಕೊಂಡು ಬಿಡುತ್ತದೆ.ಉದಹಾರಣೆಗೆ ಶಾಸಕ ಸಂಪಂಗಿಯನ್ನೆ ತಗೊಳ್ಳಿ ಅದೇನೋ ತಿನ್ನಬಾರದ್ದನ್ನ ಅವರು ತಿಂದರು ಅಂತ ಅವರ ಹಿತದೃಷ್ಟಿಯಿಂದಲೆ ಅವಸರದಲ್ಲಿ ಆತ ತಿಂದದ್ದ ಕ(ಕಾ)ಸವನ್ನೆಲ್ಲಾ ಕಕ್ಕಿಸಲು ಲೋಕಾಯುಕ್ತ ಪೊಲೀಸರು ಅವರನ್ನು "ಸೂಕ್ತ ಚಿಕಿತ್ಸೆ"(?)ಗಾಗಿ ಅಲ್ಲಿಗೆ ಸೇರಿಸುವ ಸೂಚನೆ ಸಿಕ್ಕಿದ್ದೇ ತಡ ಅವರು ತುರ್ತು ಹಾರ್ಟ್ ಪೇಷೆಂಟ್ ಆಗಿಬಿಟ್ಟರು! ಏಕಾಂತದಲ್ಲಿ ಧ್ಯಾನ ಹೇಳಿಕೊಟ್ಟದ್ದನ್ನೆ ತಪ್ಪು ಅಂತ ಕ್ಯಾತೆ ತೆಗೆದು ನಿತ್ಯಾನಂದಸ್ವಾಮಿಗಳನ್ನೂ (ಸದ್ಯ ಹಲ್ಲುಬಿಡುವುದರಲ್ಲಿ ನಮ್ಮ ಮಾನ್ಯಮುಖ್ಯಮಂತ್ರಿಗಳಿಗಿರುವ ಏಕೈಕ ಪ್ರತಿಸ್ಪರ್ಧಿ ಅಂದರೆ ಅವರೊಬ್ಬರೆ!) ಅಲ್ಲಿಗೇ ವಿಹಾರಕ್ಕೆ ಕಳಿಸಲು ಪೊಲೀಸರು ಪ್ಲಾನ್ ಮಾಡುತ್ತಿದ್ದಾಗಲೆ ಅದ್ಯಾವ್ಯಾವುದೊ ಹೆಸರಿಲ್ಲದ ರೋಗಗಳೆಲ್ಲ ಪೂಜ್ಯರನ್ನ ಅಂಟಿಕೊಂಡು ಕಾಡಿಸಿದವು!

ಇನ್ನು ಕಾಲಿಗೆ ಚಕ್ರಕಟ್ಟಿಕೊಂಡಂತೆ ಸದಾ ಹೆಲಿಕ್ಯಾಪ್ಟರ್'ನಲ್ಲೆ 'ಶೋಭಾ'ಯಮಾನರಾಗಿರುತ್ತಿದ್ದ ಮಾಜಿ ಮುಖ್ಯಮಂತ್ರಿಗಳಿಗಂತೂ ಭೀಕರ 'ಎಡ್ಸ್' ಅಮರಿಕೊಂಡಿತು! ಅವರ ಆಜ್ಞಾನು'ನಾಯಿ' ಕಟ್ಟಾ ನಾಯ್ದುಗಾರಿಗಳಿಗಂತೂ ಒಂದು ದಿನ ಬೆವರು ಬಂದು ಎದೆಶೂಲೆ-ಬಿದ್ದು ಮುರಿದ ಸೊಂಟದ ಮೂಳೆ-ಇದೀಗ ಯಾರೂ ಕಂಡು ಕೇಳರಿಯದ 'ಬೇಧಿಗಾಗಿ ಆಪರೇಶನ್' (ಒಂದೇ ಒಂದ್ ಸಲ ಆಪರೇಷನ್ ಕ'ಮಲ'ವನ್ನ ನೆನಪಿಸಿಕೊಳ್ಳಿ ಪ್ಲೀಸ್!) ಹೀಗೆ ತರೇವಾರಿ ಸಮಸ್ಯೆಗಳು ಬಿಟ್ಟೂ ಬಿಡದಂತೆ ಕಾಡತೊಡಗಿದವು,ಬೂಸಿಯಾರ ಒಂದು ಕಾಲದ ಅವರ 'ಆಪ್ತಮಿತ್ರ' ಹೆಚ್ ಡಿ ಕೆ (ಗೊಂದಲಬೇಡ! ಕಡೇ ಎರಡು ಅಕ್ಷರಗಳು ಅದಲು ಬದಲಾಗಿಲ್ಲ,ಅವಿರಬೇಕಾದಲ್ಲೇ ಇವೆ!) ಗೆ ಲೋಕಾಯುಕ್ತರ ಹವಾಮಾನ ವರದಿಯಯಲ್ಲಿ 'ಪರಪ್ಪನ ಅಗ್ರಹಾರದಲ್ಲಿ ಮೋಡ ಕವಿದ ವಾತಾವರಣ' ಎಂಬ ಸುಳಿವು ಸಿಕ್ಕಿದ್ದೆ ತಡ ದರಿದ್ರ ಹೃದ್ರೋಗ ಒಂದು ಸಣ್ಣ ಹೇಳಿಕೆಯೂ ಇಲ್ಲದೆ ಬಂದು ಅವರನ್ನ ಬಿಡಲಾರದಂತೆ ಅಂಟಿಕೊಂಡಿದೆ.ಜೊತೆಗೆ ಜ್ವರದ ತಾಪವೂ ಇದೆಯಂತೆ ಪಾಪ!...ಇಷ್ಟೆಲ್ಲಾ ಸಾಲದು ಅಂತ ಅವರ 'ಅಧಿಕೃತ' ಮನೆಯೊಡತಿ ಅನಿತಕ್ಕನಿಗೂ ಅದೇನೂ ಹೊಸತಾಗಿ ಬೆನ್ನುನೋವು-ಜ್ವರ ಬೇರೆ ಪತಿಯೊಂದಿಗೆ ಅಂಟುಜಾಡ್ಯವಾಗಿ ಅವರ ಪಾಲಿಗೂ ಬಂದಿದೆಯಂತೆ.

ಇದ್ಯಾವ ಶನಿಪೀಡೆ ಸ್ವಾಮಿ? ನಮ್ಮ ನಾಡಿನ ಭೂತ-ವರ್ತಮಾನ-ಭವಿಷ್ಯದ ನಾಯಕರೆಲ್ಲ ಹೀಗೆ ಅಲ್ಲಿಗೆ ಹೋಗಿ "ಸಿಕ್'ಲೀವ್" ಪಡೆಯುವ ಹಾಗಾದರೆ ಈ ಬರಗೆಟ್ಟು ಹೋಗಿರುವ (ಯಾರಿಂದ 'ಬರಗೆಟ್ಟು' ಹೋದದ್ದು ಅನ್ನೋ ಪ್ರಶ್ನೆ ಕೇಳುವ ಪಾಪಕ್ಕೆ ಯಾರೊಬ್ಬರೂ ಇಳಿಯಬಾರದು) ನತದೃಷ್ಟ ನಾಡಿಗೆ ಇನ್ನು ಮುಂದೆ ಯಾರು ಗತಿ ? ಈಗ್ಗೆ ವರ್ಷದ ಹಿಂದೆ ವಿಧಾನಸಭೆಯ ಅಧಿವೇಶನದಲ್ಲಿ ವಿಪರೀತ ಈ ಬಗ್ಗೆ ದೂರದೃಷ್ಟಿ ಹೊಂದಿದ್ದ ನಮ್ಮ ಮುತ್ಸದ್ಧಿ-ದಾರ್ಶನಿಕ ಮುಖ್ಯಮಂತ್ರಿ ಬೂಸಿಯ ಪ್ರೀತಿಯಿಂದಲೆ "ನೀವೆಲ್ಲರೂ ಸ'ಗಣಿ' ತಿಂದ 'ಲೋಕಾಯುಕ್ತರ ವರದಿ' ಬರಲಿ ತಡೀರಿ! ನಿಮಗೆಲ್ಲರಿಗೂ ಅಲ್ಲಿ ವಿಶೇಷ ವ್ಯವಸ್ಥೆ ಮಾಡಿಸುತ್ತೇನೆ" ಅಂತ ವಿರೋಧಪಕ್ಷದವರಿಗೆ ಅಂದು - "ನೀವು ಮಾಡೊ ಆ ವ್ಯವಸ್ಥೆಯ 'ಸುಖ'ವನ್ನ ನಿಮಗೇನೆ ಸಿಗೋವಂತೆ ಮಾಡುತ್ತೇವೆ" ಅಂತ ವಿರೋಧಪಕ್ಷದವರಿಂದಲೂ ಅನ್ನಿಸಿಕೊಂಡು 'ವಿಧಾನಸೌಧ'ದಲ್ಲಿ ಒಂದು 'ಪುಟ್ಟ ಪ್ರೇಮ ಕಲಹ'ವನ್ನೆ ಆಡಿದ್ದು ಒಮ್ಮೆ ಕಂಡದ್ದನ್ನು ಎಂದೆಂದಿಗೂ ಮರೆಯದಿರುವ ಕೆಟ್ಟ ಖಾಯಿಲೆಯಿರುವ ಕನ್ನಡಿಗರಿಗೆ ಇನ್ನೂ ನೆನಪಿದೆ!...ಆದರೆ ಅವರ ಅನೇಕ ಬೂಸಿ ಆಶ್ವಾಸನೆಗಳಂತೆ ಇದೂ ಇನ್ನೊಂದು ಬೂಸಿಯೇ ಆಗಿಹೋಗಿ ಆದ ಪ್ರಮಾದಕ್ಕಾಗಿ ಖುದ್ದು ಅವರೆ ಈಗ ಆದ ಪರಿತಪಿಸುವಂತಾಗಿದೆ.

ಸದ್ಯ ಅಧಿಕಾರದಲ್ಲಿರುವ 'ಸದಾ' ಹಸನ್ಮುಖಿ ಮುಖ್ಯಮಂತ್ರಿಗಳಾದರೂ ಇನ್ನೇನು ಅಲ್ಲಿಗೆ ಸಾಲಾಗಿ ಹೋಗಲಿರುವ ತಮ್ಮ ಸಂಪುಟದ ಬಹುತೇಕ ಸಹುದ್ಯೋಗಿಗಳ ಕೂಡಲೆ ಕೆಟ್ಟು ಕೆರಹಿಡಿಯಬಹುದಾದ ಆರೋಗ್ಯದ ಹಿತದೃಷ್ಟಿಯಿಂದಾದರೂ ಒಂದು 'ವಾಸ್ತು ಶಾಂತಿ ಹೋಮವನ್ನ' ಇದೇ ಚೌತಿಯ ಸಂಭ್ರಮದೊಂದಿಗೆ ತಮ್ಮ "ಅನುಗ್ರಹ"ದೊಂದಿಗೆ "ಅಗ್ರಹಾರ'ದಲ್ಲಿಯೂ ಮಾಡಿಮುಗಿಸಿ ತಮ್ಮೆಲ್ಲ ಈವರೆಗಿನ ಪುಣ್ಯದ 'ಫಲ'ಗಳನ್ನ ಇನ್ನಷ್ಟು ಹೆಚ್ಚಿಸಿಕೊಳ್ಳಲಿ ಎಂಬ ಆಶಯ ಬಡ ಕನ್ನಡಿಗರದ್ದು...!

No comments: