08 August 2011
ನಿನ್ನ ಕಣ್ಣ ಕಾಲ್ಡೀಪ......
ಮುಂಜಾವಿನ ಹಣೆಗೆ ನೇಸರ ಒತ್ತಿದ ನವಿರು ಮುತ್ತು
ಹಾಗೆಯೆ ಜಾರಿ...
ಮೋಡದಂಚಲಿ ತೂರಿ,
ಮಳೆಹನಿಯಾಗಿ ಕೆಳಬಿತ್ತು/
ಕನಸ ಕೊಳವ ಕಲಕಿದ ಭಾವಗಳ
ಬೆರಳುಗಳಿಗೆಲ್ಲ ನಿರೀಕ್ಷೆಯ ಪಸೆ....
ಗಾಢವಾಗಿ ಅಂಟಿಕೊಂಡಿದೆ//
ಕನಸುಗಳೆ ಚಲ್ಲಿದ ಹಾದಿಯಲ್ಲಿ ನಿನ್ನ ಕಣ್ಣ ಕಾಲ್ಡೀಪ
ನನಸಿನ ನಡೆಯ ತುಂಬಾ ನಿನ್ನ ಮೈಗಂಧದ ಧೂಪ....
ಇಷ್ಟೆ ಬೇಕಿರೋದು ನನಗೆ ಈ ಬಾಳಲ್ಲಿ,
ಎಲ್ಲೋ ಕೇಳಿದ್ದ ಮರೆಯಲಾಗದ ಮಾಧುರ್ಯದ ಕೊನೆ
ಆಸೆಯಿಂದ ಚೀಪುತ್ತ ನಿಂತ ಮಗುವಿನ ಕೈಯಲ್ಲುಳಿದ ಮಿಠಾಯಿಯ ಮೊನೆ...
ಈ ಬಾಳಲ್ಲಿ ನಿನ್ನ ನೆನಪು/
ಎದೆಯ ಕನವರಿಕೆಗಳಿಗೆಲ್ಲ ಮಾತಿನ ಚೌಕಟ್ಟು ಹಾಕಿ
ನಿನ್ನ ಮುಂದೆ ಚಾಚುವ ಇರಾದೆಯಿದೆ....
ಹೌದು,ನನ್ನೊಳಗೂ ಒಲವಿನ ಸವಿ ಬಾಧೆಯಿದೆ!,
ಹೇಳಿಕೊಳ್ಳಲಾಗದ ವಿಚಿತ್ರ ಸಂಕಟ ಎದೆಯಲ್ಲಿ
ನಿನ್ನ ನೆನಪೊಂದೆ ಸಾಂತ್ವಾನ...
ನಿರಂತರ ನೋವಿನ ಬೇನೆಯಲ್ಲೂ ನನ್ನ ತುಟಿಗಳಿಗೆ
ನಿನ್ನ ಹೆಸರಿನದೆ ಕನವರಿಕೆ...ನಿನ್ನ ಹೊರತು ನನಗಿನ್ಯಾರಿದ್ದಾರೆ ಹೇಳು?//
ಮೌನದ ಅಲೆಗಳ ಮೇಲೆ ತೇಲುವ
ಕಾಗದದ ಡೋಣಿ ನನ್ನ ಮನಸು...
ನೆಲೆಯಿಲ್ಲ,ಗುರಿಯ ಕಲ್ಪನೆಯಿಲ್ಲ
ನಿನ್ನೆದೆಯ ಬಂದರಿನಲ್ಲಿ ಹಾಕಲ ಲಂಗರು?,
ಕನಸಿನಲ್ಲೂ ಮನಸು ಗೀಚುವ ಅಕ್ಷರಗಳು ಕೂಡಿದರೆ ಮೂಡೋದು ನಿನ್ನದೆ ಹೆಸರು
ನನ್ನೆದೆಯ ಬರಡಿಗೂ ನಿನ್ನ ನೆನಪಿನ ಪರಿ ಹಬ್ಬಿಸಿದೆ ಮಾಸಲಾರದ ಹಸಿರು....
ಮಳೆ ನಿಂತ ನಂತರ ಬಿಡಿ ಬಿಡಿಯಾಗಿ ನೆಲ ಮುಟ್ಟುವ
ಕೊನೆಯ ಹನಿಯ ದಾಹ ನನ್ನೆದೆಯಲ್ಲಿ ನಿನ್ನ ನಿರೀಕ್ಷೆಯನ್ನ ಬಿತ್ತುತ್ತಿದೆ//
Subscribe to:
Post Comments (Atom)
No comments:
Post a Comment